stat Counter



Monday, January 3, 2011

Igo Kannada Vol.2

ಇಗೋ ಕನ್ನಡ - ೨
-
ಮುರಳೀಧರ ಉಪಾಧ್ಯ ಹಿರಿಯಡಕ

ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ನಿಘಂಟಿ' ಮೊದಲ ಸಂಪುಟದಲ್ಲಿ 'ಇಗೋ' ಶಬ್ದದ ಎದುರು 'ಇದೆಕೊಳ್ ನೋಡು' ಎಂದು ಕೊಂಡಿ ನೀಡಲಾಗಿದೆ. 'ಇದೆಕೊಳ್' ಹುಡುಕಿದಾಗ, ಅದರ ಎದುರು ಮುದ್ದಣನ 'ಅದ್ಭುತ ರಾಮಾಯಣ' ವಾಕ್ಯ ಸಿಕ್ಕಿತು - "ನಿನ್ನೀ ಅದ್ಭುತರೂಪಮಂ ಕಾಣುತೆ ಇದೆಕೊಳ್! ಮುನಿಗಳೆಲ್ಲರುಂ ಬೆದರ್ಕೆಯಿಂದಂ ನಡುಗುವರ್" (ಅದ್ಭುತ-೫೨-೧೯).


ಪ್ರಜಾವಾಣಿಯಲ್ಲಿ ೧೯೯೧ರಿಂದ ಪ್ರಕಟವಾಗುತ್ತಿದ್ದ ಪ್ರೊ| ಜಿ. ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ' ತುಂಬ ಜನಪ್ರಿಯವಾಗಿತ್ತು. ಓದುಗರ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಜಿ.ವಿ. ಅವರು ಕನ್ನಡದ ಹೊಸ ಬಗೆಯ ನಿಘಂಟನ್ನು- ಸಾಮಾಜಿಕ ನಿಘಂಟು - ಬರೆದರು. 'ಇಗೋ ಕನ್ನಡ' ಮೊದಲ ಸಂಪುಟದ, ನಿಘಂಟಿಗೆ ಒಂದು ಪ್ರವೇಶ ಸಿದ್ಧತೆಯಲ್ಲಿ ಅವರು ಬರೆದಿರುವಂತೆ -
" 'ಇಗೋ ಕನ್ನಡ' ನಿಘಂಟಿನಲ್ಲಿ ಆರಿಸಿರುವ ಶಬ್ದಗಳೂ, ಅವುಗಳ ವ್ಯುತ್ಪತ್ತಿ, ಅರ್ಥವಿಸ್ತಾರ, ಶಬ್ದ ಸ್ವರೂಪ, ರೂಢಿ ಪ್ರಯೋಗ ಇವುಗಳೂ ಸಾಮಾನ್ಯ ಜೀವನಕ್ಕೆ ಸಂಬಂಧಪಟ್ಟವು. ಜನರು ಪ್ರಶ್ನೆಗಳನ್ನು ಕಳುಹಿಸಿದಾಗ ಅವನ್ನು ನಾನು ಮೂರು ವಿಧವಾಗಿ ವಿಂಗಡಿಸುತ್ತಿದ್ದೆ -
1. ಆಸಕ್ತ ವಿದ್ವಾಂಸರಿಗೆ ತಲೆದೋರುವ ಪ್ರಶ್ನೆಗಳು
2. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ತೋರುವ ಸಂಶಯಗಳು
3. ಸಾಮಾನ್ಯ ಓದುಗರು ಎದುರಿಸುವ ಪ್ರಶ್ನೆಗಳು
ಇದಲ್ಲದೆ ಶಬ್ದಗಳ ಅರ್ಥವಿಶೇಷ, ಗಾದೆಗಳ ಅರ್ಥ, ಕವಿ ಪ್ರಯೋಗಗಳ ಅಂತರಾರ್ಥ ಇತ್ಯಾದಿಗಳನ್ನು ಕುರಿತು ನಿಘಂಟಿನಲ್ಲಿ ವಿವರಿಸಿದ್ದೇನೆ."

'ಅಂತರಪಿಶಾಚಿ' ಶಬ್ದದ ಕತೆಯನ್ನು ವಿವರಿಸಿದ ಬಳಿಕ ಜಿ.ವಿ. ಅವರು ಸಂಸ್ಕೃತದಲ್ಲಿ " 'ಅಂತರಪಿಶಾಚಿ' ಎಂಬ ಶಬ್ದವೇ ಪ್ರಯೋಗದಲ್ಲಿಲ್ಲ" ಎಂದು ಸ್ಪಷ್ಟಪಡಿಸುತ್ತಾರೆ. "ಜೈನ ಪುರಾಣಗಳಲ್ಲಿ ವ್ಯಂತರ ಶಬ್ದವಿದೆ. ವ್ಯಂತರ ವರ್ಗದಲ್ಲಿ ಕಿನ್ನಿರ, ಕಿಂಪುರಷ, ಮಹೋರಗ, ಗಂಧರ್ವ, ಯಕ್ಷ, ರಾಕ್ಷಸ, ಭೂತ, ಪಿಶಾಚ ಎಂಬ ಎಂಟು ಬಗೆ. ಕೆಲವರು ಸತ್ತ ಮನುಷ್ಯರು ವ್ಯಂತರರಾಗಿ ಹಟ್ಟುತ್ತಾರೆ ಎಂಬುದು ಜೈನರ ನಂಬಿಕೆ. ಹೀಗೆ ವ್ಯಂತರರಾಗಿರುವುದಕ್ಕೂ, ದುರ್ಮರಣ ಹೊಂದಿದವರು ತೊಳಲಾಡುವುದಕ್ಕೂ ಯಾವುದೋ ಸಂಬಂಧ ಬೆಳೆದು 'ಅಂತರಪಿಶಾಚಿ' ಎಂಬ ಮಾತು ಸೃಷ್ಟಿಯಾಗಿರಬೇಕು" ಎನ್ನುತ್ತಾರೆ ಜಿ. ವೆಂಕಟಸುಬ್ಬಯ್ಯ.

ಕೈದಿ, ಅಹವಾಲು, ಫಜೀತಿ (ಅರಬಿ), ಉಸ್ತುವಾರಿ, ಉಸ್ತಾದ್ (ಪಾರಸೀ) ಇಂಥ ಅನ್ಯದೇಶ್ಯ ಶಬ್ದಗಳ ವಿವರಣೆ ಗಮನ ಸೆಳೆಯುತ್ತದೆ. 'ಪೋಡಿ' ಎಂಬ ತುಳು ಶಬ್ದಕ್ಕೆ 'ಒಂದು ಚೂರು, ಸಣ್ಣ ಭಾಗ' ಎಂದು ವಿವರಣೆ ನೀಡಿದ್ದಾರೆ. ಆದರೆ ತುಳುವಿನಲ್ಲಿ ಶಬ್ದಕ್ಕೆ ಬೇರೆ ಅರ್ಥಗಳಿವೆ. ಒಂದು - 'ಪೋಡಿಗೆ' - ಭಯ, ಹೆದರಿಕೆ. ಇನ್ನೊಂದು - ಗೆಣಸು, ಬಾಳೆಕಾಯಿ, ಬಟಾಟೆ ಮೊದಲಾದುವುಗಳನ್ನು ಕಡಲೆ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದು ಮಾಡುವ ಒಂದು ಬಗೆಯ ತಿಂಡಿ.

'ಊರ್ಮಿಳೆಯ ಸ್ನಾನ' ವಿವರಣೆ ಕುತೂಹಲಕಾರಿಯಾಗಿದೆ. ಜನಕರಾಜನ ಮಗಳು, ಲಕ್ಷ್ಮಣನ ಹೆಂಡತಿ ಊರ್ಮಿಳೆ, ಗಂಡ ಕಾಡಿಗೆ ಹೋದದ್ದರಿಂದ ಅಯೋಧ್ಯೆಯಲ್ಲಿ ಒಂಟಿಯಾದಳು. - "ಏನೂ ಕೆಲಸವಿಲ್ಲದವಳು ಮಾಡುವುದಾದರೂ ಏನು? ಅಂಥ ಹೆಣ್ಣು ಸ್ನಾನಕ್ಕೆ ಇಳಿದರೆ, ಸ್ನಾನವನ್ನು ಬೇಗ ಮುಗಿಸಿ ಆಕೆ ಏನು ಮಾಡಬೇಕಾಗಿದೆ? ಅವಳು ನಿಶ್ಚಿಂತೆಯಾಗಿ ಬೇಕಾದಷ್ಟು ಕಾಲವನ್ನು ಸ್ನಾನಗೃಹದಲ್ಲಿ ಕಳೆದಿರಬೇಕೆಂಬುದು ಲೌಕಿಕ ಸ್ತ್ರೀಯರ ನಿರ್ಧಾರವಾಯಿತು. ಇವನ್ನು ರೀತಿ ತಿಳಿದು ಸ್ನಾನಗೃಹದಲ್ಲಿ ತಡಮಾಡಿದವರನ್ನು ಊರ್ಮಿಳೆಯ ಸ್ನಾನ ಮಾಡುತ್ತಿದ್ದಾಳೆ ಎಂದು ಕರೆಯಲು ಪ್ರಾರಂಭ ಮಾಡಿದರು. ಬಹುಮರುಕಕ್ಕೆ ಕಾರಣವಾಗಬೇಕಾಗಿದ್ದ ಊರ್ಮಿಳೆಯ ಬದುಕನ್ನು ಕೆಲವರು ಸ್ತ್ರೀಯರು ಹೀಗೆ ಹಾಸ್ಯಕ್ಕೆ ತಿರುಗಿಸಿದ್ದರು. ಇದು ಹಿಂದಿನ ತಲೆಮಾರುಗಳ ಹೆಂಗಸರು ಮಾತನಾಡುತ್ತಿದ್ದ ರೀತಿ. ಈಗ ಹೀಗೆ ಯಾರೂ ಮಾತನಾಡುವುದಿಲ್ಲ. ಅಷ್ಟೇ ಅಲ್ಲ, ಊರ್ಮಿಳೆಯನ್ನು ಕುರಿತು ವಾಲ್ಮೀಕಿಯಿಂದ ಆದ ಔದಾಸೀನ್ಯವನ್ನು ಇಂದಿನ ಕವಿಗಳು ತಿದ್ದಿ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನ" ಕಾವ್ಯವನ್ನು ನೋಡಿ". ('ಇಗೋ ಕನ್ನಡ' - ಸಂ., ಪುಟ-೨೮)

ಅರಿಸಮಾಸವನ್ನು ವಿವರಿಸುತ್ತ ಜಿ. ವೆಂಕಟಸುಬ್ಬಯ್ಯನವರು ನೀಡುವ ಸಲಹೆ ಅನುಷ್ಠಾನಯೋಗ್ಯವಾಗಿದೆ. - "ಕನ್ನಡ ಭಾಷೆ ಬೆಳೆಯುತ್ತ ಬಂದಂತೆಲ್ಲ ಕನ್ನಡ ಶಬ್ದಗಳ ಜತೆ ಇಂಗ್ಲಿಷ್, ಉರ್ದು ಮುಂತಾದ ಭಾಷೆಯ ಶಬ್ದಗಳೇ ಬಳಕೆಗೆ ಬರುತ್ತವೆ. ಅವು ಹೊಸ ಸಮಾಸಗಳು. ಉದಾಹರಣೆಗೆ ಕಾಫಿತಿಂಡಿ, ಸ್ಕೂಲುಪರೀಕ್ಷೆ, ಬಿಳಿಚಾಕ್‍ಪೀಸ್, ಕಚ್ಚಾಬುಕ್ಕು, ರಸೀತಿಪುಸ್ತಕ, ಮಸೀದಿಕಟ್ಟಡ ಇತ್ಯಾದಿ. ಜನತೆಯಲ್ಲಿ ಅಧಿಕವಾಗಿ ಪ್ರಯೋಗವಾಗುವುದರಿಂದ ಇವುಗಳನ್ನು ಒಪ್ಪಿ ಇವುಗಳಿಗೆ ವ್ಯಾಕರಣದಲ್ಲಿ ಸ್ಥಾನ ಕೊಡಬೇಕು.

ಇದು ಹೇಗೆ ಎಂಬ ಪ್ರಶ್ನೆ ಏಳಬಹುದು. ನನ್ನ ದೃಷ್ಟಿಯಲ್ಲಿ ಅರಿಸಮಾಸ ಸೂತ್ರವನ್ನು ವಿಸ್ತರಿಸಿ ಕನ್ನಡದಲ್ಲಿರುವ ಶಬ್ದದೊಡನೆ ಬೇರೆ ಯಾವುದೇ ಭಾಷೆಯ ಶಬ್ದವು ಸೇರಿ ಆಗುವ ಸಮಾಸವನ್ನು ಅರಿಸಮಾಸವೆಂದೇ ಕರೆಯಬೇಕು. ಕನ್ನಡದ್ದಲ್ಲದ ಬೇರೆ ಬೇರೆ ಭಾಷೆಗಳ ಶಬ್ದಗಳು ಸೇರಿ ಕನ್ನಡದ ಶಬ್ದವಾಗಿ ಬಳಕೆಗೆ ಬಂದರೆ ಅಂಥವುಗಳನ್ನು ಅರಿಸಮಾಸವೆಂದೇ ಕರೆದು ಬಳಿಕ ಸಮಾಸದ ಯಾವ ಪಂಗಡಕ್ಕೆ ಅವು ಸೇರುತ್ತವೆ ಎಂದು ತೀರ್ಮಾನ ಮಾಡಬಹುದು.

ಆದುದರಿಂದ ಬೆಳೆಯುತ್ತಿರುವ ಭಾಷೆಗೆ ಅನೇಕ ಹೊಸ ವಿಷಯಗಳನ್ನು ವಿವರಿಸುವ ಹೊಸ ವ್ಯಾಕರಣ ಅಗತ್ಯವಿದೆ. ಇದು ಸಮಾಸ ಪ್ರಕರಣಕ್ಕೆ ಮಾತ್ರ ಸೇರಿದುದಲ್ಲ. ವ್ಯಾಕರಣದ ಎಲ್ಲ ಪ್ರಕರಣಗಳಿಗೂ ಸಂಬಂಧಿಸಿದಂತೆ ಕೆಲವು ಹೊಸ ಸೂತ್ರಗಳನ್ನು ನಿರ್ಮಾಣ ಮಾಡಬೇಕು." (ಇಗೋ ಕನ್ನಡ-2, ಪುಟ-51).

'ಗೋವಿನ ಹಾಡು' ಕುರಿತು ಬರೆಯುವಾಗ ಜಿ ವೆಂಕಟಸುಬ್ಬಯ್ಯನವರು ನಮ್ಮ ಇಂದಿನ ಪಠ್ಯಪುಸ್ತಕಗಳಲ್ಲಿ ಇಂಥ ಹಾಡುಗಳು ನಾಪತ್ತೆಯಾಗಿರುವುದನ್ನು ಗಮನಿಸುತ್ತಾರೆ - "ಮನಸ್ಸನ್ನು ಪಕ್ವ ಮಾಡುವ ಇಂಥ ಕವನಗಳನ್ನು ಮಕ್ಕಳ ಪುಸ್ತಕಗಳಲ್ಲಿ ಶಾಶ್ವತವಾಗಿ ಮುದ್ರಿಸುತ್ತಿರಬೇಕು. ಹಾಗೆ ಮಾಡಿಬಿಟ್ಟರೆ, ಪಠ್ಯಪುಸ್ತಕ ಸಮಿತಿಯ ಸದಸ್ಯರ ಲೇಖನಗಳಿಗೆ ಸ್ಥಳ ಕಡಿಮೆಯಾಗಿಬಿಡುವುದಲ್ಲವೇ? ನವ್ಯ ಕಾವ್ಯವನ್ನು ಕುರಿತು ಬರೆಯುವಾಗ ಅವರು ಚಳುವಳಿಯಿಂದ ಕನ್ನಡ ಭಾಷೆಯ ಪ್ರಯೋಗಕ್ಕೆ ತುಂಬ ಹೊಸತನ ಬಂದಿತೆಂಬುದು ನಿರ್ವಿವಾದ" ಎನ್ನುತ್ತಾರೆ.

ಇಗೋ ಕನ್ನಡ' ಅಂಕಣದ ಓದುಗರು ಕೆಲವು ಶಬ್ದಗಳಿಗೆ ಇರುವ ಜೀವಂತ ಪ್ರಯೋಗ ಹಾಗೂ ಅರ್ಥಗಳನ್ನು ಬರೆದು ತಿಳಿಸಿದ್ದರು. 'ನಿನ್ನ ಮಂಜಾಳಾಗ' ಎಂಬುದು ಒಂದು ಬೈಗಳ ಪ್ರಯೋಗ - 'ಮನೆ ಜೋಳ ಆಗಲಿ'. ಜೋಳ ಎಂದರೆ ಜೋಳದ ಹೊಲ. ಮನೆ ಹೊಲವಾಗುವುದು ಎಂದರೆ ಮನೆ ಬಿದ್ದು ಸಂಪೂರ್ಣವಾಗಿ ಕಾಣದಂತಾಗುವುದು.

'ಅಲಗುಪ್ತಿ' ಶಬ್ದವನ್ನು ಅರ್ಥೈಸುವಾಗ ಸಂಶೋಧಕನ, ನಿಘಂಟುಕಾರನ ವಿನಯ ಕಾಣಿಸುತ್ತದೆ - " ಶಬ್ದದ ವಿಚಾರವನ್ನು ಕುರಿತ ಪ್ರಶ್ನೆ ನನಗೆ ಆಶ್ಚರ್ಯವನ್ನುಂಟುಮಾಡಿತು. ಎಲ್ಲ ಪಾಠಾಂತರಗಳ ಊಹೆಗಳನ್ನು ಹಿಂದಕ್ಕೆ ತಳ್ಳಿ ಇದನ್ನು ಕನ್ನಡ ನಾಡಿನ ಅನೇಕ ವಿದ್ವನ್ಮಣಿಗಳ ಅಂಜಲಿಗೆ ಹಾಕಿದ್ದೇನೆ."

'ಆಂಗ್ಲೊ ಇಂಡಿಯನ್' 'ಗಿರಿಜಾ ಮೀಸೆ' - ಇಂಥ ಶಬ್ದಗಳ ವಿವರಣೆಯಲ್ಲಿ ಹಾಸ್ಯಪ್ರಿಯ ಜಿ.ವಿ. ಕಾಣಿಸುತ್ತಾರೆ. 1950ರಲ್ಲಿ ಭಾರತ ಸಂವಿಧಾನವನ್ನು ರಚಿಸಿದಾಗ ಆಂಗ್ಲೋ-ಇಂಡಿಯನ್ ಶಬ್ದಕ್ಕೆ ಒಂದು ಸೂಕ್ತ ಅರ್ಥ ನಿರ್ಧಾರವಾಯಿತು. - ಭಾರತದಲ್ಲಿ ವಾಸಿಸುವ ಯುರೋಪಿಯನ್ ಜನಾಂಗದ ತಂದೆಯಿಂದ ಭಾರತದ ಸ್ತ್ರೀಯಲ್ಲಿ ಹುಟ್ಟಿದವನು....... ಆಂಗ್ಲೊ-ಇಂಡಿಯನ್ ಜನಾಂಗಕ್ಕೆ ರಕ್ಷಣೆ ಕೊಡುವ ಬಗ್ಗೆ ಇಂಗ್ಲೆಂಡಿನ ಪಾರ‍್ಲಿಮೆಂಟಿನಲ್ಲಿ ಚರ್ಚಿಲ್ ಹೇಳಿದ ಮಾತು ನೆನಪಿಗೆ ಬರುತ್ತದೆ. "We must provide for them, for they are the result of our mischief." (ಇಗೋ ಕನ್ನಡ-೨ ಪುಟ-೬೧). "ಗಿರಿಜಾ-ಮೀಸೆ - ಇದೊಂದು ಪ್ರೇತ ಶಬ್ದ (ghost word)..... ಗುಜುರು ಮೀಸೆ ಎಂಬ ಶಬ್ದದಲ್ಲಿರುವ ಗುಜುರು ಜನಸಾಮಾನ್ಯರಿಗೆ ತಿಳಿಯದೆ ಇದ್ದುದರಿಂದ, ತಿಳಿದಿರುವ ಗಿರಿಜಾ - ಹತ್ತಿರವಾಗಿರುವುದರಿಂದ ಗುಜುರು ಮೀಸೆ, ಗಿರಿಜಾ ಮೀಸೆ ಆಗಿರಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ." (ಇಗೋ ಕನ್ನಡ-೨ ಪುಟ-೧೩೪).

ಕುಮಾರವ್ಯಾಸನ 'ವೇದಪುರುಷನ ಸುತನ' (ಪೀಠಿಕಾ ಸಂಧಿ, ಪದ್ಯ-೨೩) ಪದ್ಯದ ಸಂಬಂಧಗಳ ಗೋಜಲನ್ನು ಬಿಡಿಸಿ ವಿವರಿಸುವ ಜಿ.ವಿ. ಅವರು "ಆದರೂ ಚಮತ್ಕಾರ ಚಮತ್ಕಾರವೇ ಹೊರತು ಕಾವ್ಯ ಸೌಂದರ್ಯವಲ್ಲ" ಎನ್ನುತ್ತಾರೆ. ಆದರೆ ಇದು ಬರೀ ಚಮತ್ಕಾರ ಪದ್ಯವಲ್ಲ ಎಂದು ನನಗೆ ಅನಿಸುತ್ತದೆ. ಒಂದು ಕುಟುಂಬದಲ್ಲಿ ದೇವತೆಗಳು, ಋಷಿಗಳು, ಮಾನವರು, ರಾಕ್ಷಸರು ಎಲ್ಲರೂ ಇರುವುದನ್ನು ಕುಮಾರವ್ಯಾಸ ಸೂಚಿಸುತ್ತಿದ್ದಾನೆ. ನಾವು ರಾಕ್ಷಸರನ್ನು ಹುಡುಕುತ್ತಿರುತ್ತೇವೆ; ನಮ್ಮ ಕುಟುಂಬದಲ್ಲೆ ಇರುವ, ನಮ್ಮೊಳಗೇ ಇರುವ ರಾಕ್ಷಸರು ನಮ್ಮ ಅರಿವಿಗೆ ಬರುವುದಿಲ್ಲ. ಕುಮಾರವ್ಯಾಸ ಪದ್ಯ, ಧ್ವನಿಪೂರ್ಣವಾದ, ಚಿಂತನೆಗೆ ಪ್ರೇರಣೆ ನೀಡುವ ಪದ್ಯ.

ಬೆಂಗಳೂರಿನಲ್ಲಿ ನಡೆಯಲಿರುವ ೭೭ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಲಿರುವ, 'ಇಗೋ ಕನ್ನಡ' ಪ್ರೊ| ಜಿ. ವೆಂಕಟಸುಬ್ಬಯ್ಯನವರಿಗೆ, 'ಅದ್ಭುತ ರಾಮಾಯಣ' ಸಾಲುಗಳನ್ನು ಪಾಠಾಂತರಿಸುತ್ತ, ಅಭಿವಂದನೆ ಸಲ್ಲಿಸುತ್ತೇನೆ - "ನಿನ್ನೀ ಅದ್ಭುತರೂಪಮಂ ಕಾಣುತೆ ಇದೆಕೊಳ್! ಕನ್ನಡದ ಜಾಣ-ಜಾಣೆಯಲ್ಲೆರುಂ, ಅಭಿಮಾನದಿಂ ಪೊಗಳುವರ್!" 'ಇಗೋ ಕನ್ನಡ' ಸಂಪುಟಗಳು, ಕನ್ನಡ ನಿಘಂಟು ಸಾಹಿತ್ಯಕ್ಕೆ ಜಿ. ವೆಂಕಟಸುಬ್ಬಯ್ಯನವರ ಕೊಡುಗೆಗಳು.


E-mail: mhupadhya@gmail.com
blog: mupadhyahiri.blogspot.com

No comments:

Post a Comment