stat CounterTuesday, March 29, 2011

baNabhattana kaadambari[kannada] bannanje govindacharya

ಬಾಣಭಟ್ಟನ ಕಾದಂಬರಿ 
                             (ಭಾಷಾಂತರ - ಬನ್ನಂಜೆ ಗೋವಿಂದಾಚಾರ್ಯ,
                                                           ಈಶಾವಾಸ್ಯ ಪ್ರಕಾಶನ.)
                         
                                   
          ಏಳನೆಯ ಶತಮಾನದಲ್ಲಿ ಹರ್ಷವರ್ಧನನ ಆಸ್ಥಾನದಲ್ಲಿದ್ದ ಬಾಣ ತನ್ನ 'ಕಾದಂಬರಿ'ಗೆ ವಸ್ತುವನ್ನು ಗುಣಾಢ್ಯನು ಪ್ರಾಕೃತದ ಉಪಭಾಷೆಯಾದ ಪೈಶಾಚಿಯಲ್ಲಿ ಬರೆದ 'ಬೃಹತ್ಕಥೆ'ಯಿಂದ ಆಯ್ದುಕೊಂಡಿದ್ದಾನೆ. ರಾಮಾಯಣ, ಮಹಾಭಾರತಗಳಂತೆ 'ಬೃಹತ್ಕಥೆ'ಯನ್ನೂ ಬಾಣ 'ಮೇರುಕೃತಿ' ಎಂದು ಗೌರವಿಸುತ್ತಾನೆ. 'ಬೃಹತ್ಕಥೆ' ಪ್ರಾಚೀನ ಭಾರತದಲ್ಲಿ ಧರ್ಮದ ಚೌಕಟ್ಟಿನಿಂದ ಕತೆಯನ್ನು ಸ್ವತಂತ್ರಗೊಳಿಸಿದೆ. ಮೊದಲ ಗ್ರಂಥ ಎಂಬ ಮನ್ನಣೆ ಗಳಿಸಿದೆ. ಈಶಾನ, ವೇಣೀಭಾರತ, ವಾಯುವಿಕಾರ ಮೊದಲಾದ ಜಾನಪದ, ಆಶುಕವಿಗಳ ಗೆಳೆಯನಾಗಿದ್ದ ಬಾಣ ತನ್ನ 'ಕಾದಂಬರಿ'ಯಲ್ಲಿ ಗುಣಾಢ್ಯನ ಕತೆಯಲ್ಲಿರುವ ಶಾಪ, ಪವಾಡಗಳು, ಕನಸುಗಾರಿಕೆ, ಅದ್ಭುತ ಮೊದಲಾದ ಜಾನಪದ ಅಂಶಗಳನ್ನು, ಕಥನ ತಂತ್ರವನ್ನು ಉಳಿಸಿಕೊಂಡಿದ್ದಾನೆ. ಪುಂಡರೀಕ ತನ್ನ ವೈಶಂಪಾಯನ ಮತ್ತು ಗಿಳಿಯ ಜನ್ಮ ಮುಗಿಸುವವರೆಗೆ, ಚಂದ್ರಾಪೀಡ ತನ್ನ ಶೂದ್ರಕ ಜನ್ಮ ಮುಗಿಸುವವರೆಗೆ ಮಹಾಶ್ವೇತೆ, ಕಾದಂಬರಿಯರು ಚಿರಕನ್ನಿಕೆಯರಾಗಿಯೇ ಇರುತ್ತಾರೆ. ಪುಂಡರೀಕನ ಹೆಣ ಚಂದ್ರಲೋಕದಲ್ಲಿ, ಚಂದ್ರಾಪೀಡನ ಹೆಣ ಭೂಲೋಕದಲ್ಲಿ ಆತ್ಮಗಳನ್ನು ಕಾಯುತ್ತಿರುತ್ತವೆ!
          'ಬೃಹತ್ಕಥೆ'ಯ ಸುಮನರಾಜನ ಕಥೆಯ ಪಾತ್ರಗಳ ಹೆಸರುಗಳನ್ನು ಬಾಣ ಜಾಣತನದಿಂದ ಬದಲಾಯಿಸಿದ್ದಾನೆ. ಹಂಸ-ಗೌರಿ ಇವರ ಮಗಳು ಮಹಾಶ್ವೇತೆ. ಅವಳನ್ನು ಪ್ರೀತಿಸುವವ ಪುಂಡರೀಕ. ಎಲ್ಲವೂ ಬಿಳಿ ಹೆಸರುಗಳು. ಬಾಣನ ಸ್ವಂತಿಕೆ ಇರುವುದು ಅವನ ರೂಪಕಗಳು ಮತ್ತು ವೈವಿಧ್ಯಪೂರ್ಣ ವರ್ಣನೆಗಳಲ್ಲಿ. ಪ್ರಶಾಂತವಾದ ಹಾರೀತನ ಆಶ್ರಮ ವಿಚಿತ್ರವಾದ ಚಂಡಿಕಾಲಯ, ಕಪ್ಪು ಚೆಲುವೆ ಚಂಡಾಲಕನ್ಯೆ - ಬಿಳಿ ಚೆಲುವೆ ಮಹಾಶ್ವೇತೆ, ಮೈವೆತ್ತು ಬಂದ ಮುನಿಗಳ ಧ್ಯಾನ ಸಂಪತ್ತಿನಂತಿರುವ ತಪಸ್ವಿನಿ ಮಹಾಶ್ವೇತೆ - ಚಂದ್ರಾಪೀಡನನ್ನು ಕೆರಳಿಸುವ ಕಾದಂಬರಿಯ ಲಾವಣ್ಯ. ಗಂಡು-ಹೆಣ್ಣುಗಳ ವಿರಹ - ಮಾನಸಸುರತ ಎಲ್ಲವನ್ನೂ ಬಾಣ ಹೃದ್ಯವಾಗಿ ವಣರ್ಿಸುತ್ತಾನೆ. ಅವನು 'ವಶ್ಯವಾಣೀ - ಚಕ್ರವತರ್ಿ'. ಮಕ್ಕಳ ವಿವಾಹ ನಿರ್ಣಯವನ್ನು ಪ್ರಶ್ನಿಸುವ ಹಕ್ಕು ತಂದೆ - ತಾಯಿಗಳಿಗೆ ಇಲ್ಲ ಎಂದು ಬಾಣ ಹೇಳುತ್ತಾನೆ. ಸಹಗಮನವನ್ನು 'ಇದು ದಡ್ಡರು ಬರೆದ ಧರ್ಮ ಶಾಸ್ತ್ರ' ಎಂದು ಗೇಲಿ ಮಾಡುತ್ತಾನೆ.
          'ಪ್ರೀತಿ ಕೂಟ'ದಲ್ಲಿ ಹುಟ್ಟಿದ ಬಾಣ, 'ಕಾದಂಬರಿಯಲ್ಲಿ ಗೆಳೆಯರ ಸ್ನೇಹ, ಗಂಡು-ಹೆಣ್ಣಿನ ಆಕರ್ಷಣೆಯಂಥ ಚಿರಂತನ ವಿಷಯಗಳ ಬಗ್ಗೆ ಬರೆದಿದ್ದಾನೆ. 'ಕಾಮನ ಶಾಸನವನ್ನು ಮೀರುವುದು ಯಾರಿಗೂ ಸಾಧ್ಯವಿಲ್ಲ', 'ಕವಿ ಬುದ್ಧಿಯ ಚಾಪಲ ನೂರು ಕನಸುಗಳನ್ನು ಕಾಣುತ್ತದೆ', 'ಬೇಕು ಬೇಡಗಳನ್ನು ದಾಟಿ ನಿದ್ರ್ವಂದ್ವವಾದ ಬಾಳನ್ನು ಬಾಳುವುದು ಬಲು ಕಷ್ಟ.' ಈ ಮಾತುಗಳ ಹಿಂದೆ 'ಮಹಾಭುಜಂಗ' ಬಾಣವನ್ನು ಕಾಣುತ್ತೇವೆ. ಕೋಶ ಓದುವುದು ಜತೆಯಲ್ಲೆ ದೇಶ ನೋಡಬೇಕೆಂದು ಹದಿಹರೆಯದಲ್ಲಿ ಊರು ಬಿಟ್ಟು, ಹಲವರ ಒಡನಾಟದಲ್ಲಿ ಬೆಳೆದ ಬಾಣ 'ಹರ್ಷ ಚರಿತ'ದಲ್ಲಿರುವ ತನ್ನ ಆತ್ಮಕತೆಯಲ್ಲಿ ಹೇಳುತ್ತಾನೆ - ಈ ಎಲ್ಲ ಮಂದಿಯ ಪರಿಚಯಕ್ಕೆ ಕಾರಣವಾದ ಈ ಧರ್ಮಭ್ರಷ್ಟ ಅಲೆಮಾರಿತನದಿಂದ ತನ್ನ ಬಾಳು ಸಮೃದ್ಧವಾಗಿದೆ. ಅನುಭವ ಮಾಗಿದೆ. ನಾನು ಕೆಳಕ್ಕಿಳಿದು ಸಂಸ್ಕೃತ ಸಾಹಿತ್ಯವನ್ನು ಎತ್ತರಕ್ಕೇರಿಸಿದ್ದೇನೆ. ಈ ಮಾತು ಅಹಂಕಾರದ್ದಲ್ಲ, ಸರಿಯಾದ ಸ್ವವಿಮಶರ್ೆ ಎಂದು 'ಕಾದಂಬರಿ' ಓದಿದಾಗ ಸ್ಪಷ್ಟವಾಗುತ್ತದೆ. ಬಾಣ 'ಕಾದಂಬರಿ'ಯನ್ನು ಪೂರ್ಣಗೊಳಿಸದೆ ತೀರಿಕೊಂಡಾಗ ಅವನ ಮಗ ಭೂಷಣ ಅದನ್ನು ಮುಂದುವರಿಸಿದ. ಬಾಣ ಬರೆದ ಕಥಾಭಾಗದ - ಕಾದಂಬರಿಯ ಪ್ರಣಯಸಂದೇಶದ ಕೊನೆಯ ಸಾಲಿನಲ್ಲಿ ಸಾವಿನ ಪ್ರಸ್ತಾಪವಿದೆ.
          ದೀರ್ಘ ಸಮಾಸದ ಪದಪುಂಜಗಳ ಬಾಣನ ಶೈಲಿಯನ್ನು ಪಾಶ್ಚಾತ್ಯ ವಿಮರ್ಶಕರು ಕ್ಲಿಷ್ಟ ಎಂದು ಟೀಕಿಸಿದ್ದುಂಟು. ಬನ್ನಂಜೆಯವರು 'ಕಾದಂಬರಿ'ಯ ದ್ವಿತೀಯ ಮುದ್ರಣಕ್ಕೆ ಬರೆದಿರುವ 'ಬಾಣನ ಬದುಕು ಬರೆಹ'ವನ್ನು ಕುರಿತ ಲೇಖನದಲ್ಲಿ ಈ ಆರೋಪವನ್ನು ಅಲ್ಲಗಳೆಯುತ್ತಾರೆ. ಈ ವಿಷಯವನ್ನು ಅವರು ವಿವರವಾಗಿ ಉದಾಹರಣೆ ಸಹಿತ ಚಚರ್ಿಸಬೇಕಿತ್ತು. ಬನ್ನಂಜೆಯವರ ಭಾಷಾಂತರ ಮೂಲಕೃತಿಗೆ ನಿಷ್ಠವಾಗಿರುವ ಸ್ವತಂತ್ರ ಕೃತಿ. ಬಾಣನದು ಹೊಸದನ್ನು ಕಾಣುವ ಪ್ರತಿಭೆ; ಬನ್ನಂಜೆಯವರದು ಹೊಸದಾಗಿ ನಿರೂಪಿಸುವ ಪ್ರತಿಭೆ. 'ಬಾಣನ ಕಾದಂಬರಿ ಭಾರಿ ಜರದ ಶಾಲಿಯುಟ್ಟ ನೀರೆ. ಬನ್ನಂಜೆಯವರು ಅಪ್ಸರೆಗೆ ನೈಲಾನ್ ಸೀರೆ ಉಡಿಸಿದ್ದಾರೆ' ಎಂಬ ದ. ರಾ. ಬೇಂದ್ರೆಯವರ ಮುನ್ನುಡಿಯ ಮಾತಿನಲ್ಲಿ ಬನ್ನಂಜೆಯವರ ಭಾಷಾಂತರ ಒಂದು ಪುನರ್ಸೃಷ್ಟಿ ಎಂಬ ಮೆಚ್ಚಿಗೆ ಇದೆ. ಬೇಂದ್ರೆಯವರ ಕನ್ನಡ 'ಮೇಘದೂತ'ದಂತೆ, ಬನ್ನಂಜೆಯವರ 'ಕಾದಂಬರಿ' ಭಾಷಾಂತರ ಕೂಡ ಕನ್ನಡ ಸಾಹಿತ್ಯಕ್ಕೆ ಮುಖ್ಯ ಕೊಡುಗೆ.
          ಬಾಣ ಬರೆದ ಕೊನೆಯ ಸಾಲುಗಳನ್ನು - ಕಾದಂಬರಿಯ ಪ್ರಣಯ ಸಂದೇಶವನ್ನು - ಬನ್ನಂಜೆಯವರು ಹೀಗೆ ಭಾಷಾಂತರಿಸಿದ್ದಾರೆ - ನಿನ್ನ ಪ್ರೀತಿಯ ಹಿರಿಮೆಯನ್ನು ನಾನು ಬಲ್ಲೆ, ಶಿರೀಥದಂಥ ಮೃದುಹೃದಯದ ಹೆಮ್ಮಕ್ಕಳಿಗೆ ಎಲ್ಲಿಂದ ಬರಬೇಕು ಇಂಥ ಗಡಸುಗಾರಿಕೆ! ಅದರಲ್ಲು ಇನ್ನೂ ಬಾಲ್ಯವನ್ನು ದಾಟದ ಹುಡುಗಿಯರ ಮಾತೇನು? ತಾವೆ ಸಂದೇಶ ಕಳಿಸುವವರು, ತಾವಾಗಿಯೇ ಪ್ರಿಯನೆಡೆಗೆ ತೆರಳುವವರು. ಯಾರಾದರೂ ಇದ್ದರೆ ಅವರ ಕೆಚ್ಚು ಮೆಚ್ಚುವಂಥದ್ದು. ನಾನಂತು ಮುದ್ದು ಹುಡುಗಿ. ಸಂದೇಶ ಕಳಿಸುವುದೆಂದರೆ ಬಲು ನಾಚಿಕೆ! ಸಂದೇಶ ಕಳಿಸುವುದಾದರೂ ಏನೆಂದು? 'ನೀನು ನನಗೆ ಅತಿ ಪ್ರಿಯ' ಎಂದರೆ ಪುನರುಕ್ತಿಯಾದೀತು. 'ನಿನಗೆ ನಾನು ಪ್ರಿಯಳೆ, ಅಲ್ಲವೆ?' ಎನ್ನುವುದು ಜಡ ಪ್ರಶ್ನೆಯಾದೀತು. 'ನಿನ್ನಲ್ಲಿ ನನಗೆ ಭಾರೀ ಪ್ರೇಮ' ಎಂದರೆ ಸೂಳೆಯರ ಮಾತಾಯಿತು'. 'ನಿನ್ನನ್ನು ಬಿಟ್ಟು ಬದುಕಲಾರೆ' ಎಂದರೆ ಅನುಭವಕ್ಕೆ ವಿರೋಧ. 'ಕಾಮದೇವ ನನ್ನನ್ನು ಕಾಡುತ್ತಿದ್ದಾನೆ' ಎನ್ನುವುದು ನನ್ನ ಸ್ವಂತದ ದೋಷವಾಯಿತು. 'ಕಾಮದೇವ ನನ್ನನ್ನು ನಿನಗೆ ಒಪ್ಪಿಸಿದ್ದಾರೆ' ಎನ್ನುವುದು ಅಭಿಸರಣದ ಒಂದು ಉಪಾಯವಾದೀತು. 'ನಿನ್ನನ್ನು ನಾನು ಬಗೆಯಲ್ಲಿ ಹೊತ್ತಿರುವೆ' ಎಂದರೆ ಬೆಲೆವೆಣ್ಣೆನ ದಿಟ್ಟತನವಾದೀತು. 'ನೀನು ಅವಶ್ಯ ನನ್ನೆಡೆಗೆ ಬರಬೇಕು' ಎಂದರೆ ಸೌಭಾಗ್ಯದ ಹೆಮ್ಮೆ ಎನಿಸೀತು. 'ನಾನೆ ನಿನ್ನೆಡೆಗೆ ಬರುವೆ' ಎನ್ನುವುದು ಹೆಣ್ತನದ ಚಾಪಲ. 'ಈ ಸೇವಕಿ ನಿನ್ನಲ್ಲೆ ಅನುರಕ್ತಳಾಗಿದ್ದಾಳೆ' ಎನ್ನುವುದು ಭಕ್ತಿಯನ್ನು ಪ್ರದಶರ್ಿಸುವ ಸಣ್ಣತನ. 'ನಿರಾಕರಣೆಯ ಭಯದಿಂದ ಸಂದೇಶವನ್ನೆ ಕಳಿಸಲಾರೆ' ಎನ್ನುವುದು ದಿಟ್ಟತನದ ಮಾತು. 'ನಿನ್ನನ್ನುಳಿದು ನನಗೆ ಬದುಕೆ ಭಯವಾಗಿದೆ' ಎನ್ನುವುದು ಅತಿಪ್ರಣಯವಾದೀತು. 'ನನ್ನ ಸಾವಿ ನಿನಗೆ ನನ್ನ ಪ್ರೀತಿಯ ಮಹತಿಯನ್ನು ತೋರಿಸೀತು' ಎನ್ನುವುದು ಅರ್ಥವಿಲ್ಲದ ಉದ್ಗಾರ......'
          ಕಾದಂಬರಿ ಶಬ್ದಕ್ಕೆ ಹೆಂಡ ಎಂಬ ಅರ್ಥ ಇದೆ. ಪುರುಷಾರ್ಥಗಳಲ್ಲಿ ಒಂದಾದ ಕಾಮವನ್ನು ಚಿತ್ರಿಸುವ 'ಬಾಣನ ಕಾದಂಬರಿ', ಒಂದು ಅದ್ಭುತ ಕಾದಂಬರಿಯೂ ಹೌದು; ಹೆಂಡವೂ ಹೌದು. 'ಕಾದಂಬರಿ'ಯನ್ನು ಕನ್ನಡಕ್ಕೆ ನೀಡಿದ ಬನ್ನಂಜೆಯವರು, ಇತಿಹಾಸ, ಆತ್ಮಕಥೆ ಮತ್ತು ಸಾಹಿತ್ಯಕೃತಿಯಾಗಿ ಮುಖ್ಯವಾದ ಬಾಣನ 'ಹರ್ಷ ಚರಿತ'ವನ್ನು ಭಾಷಾಂತರಿಸಬೇಕು ಎಂದು ವಿನಂತಿಸುತ್ತೇನೆ.

2 comments: