stat Counter



Tuesday, June 28, 2016

ಅರವಿಂದ ಕರ್ಕಿಕೋಡಿ - ಗೆಳೆಯ ರವಿಶಂಕರ್ ಒಡ್ಡಂಬೆಟ್ಟು ಇನ್ನಿಲ್ಲ

ಅಯ್ಯೋ ನನ್ನ ಪ್ರೀತಿಯ ಗೆಳೆಯ ರವಿಶಂಕರ್ ಒಡ್ಡಂಬೆಟ್ಟು ಹೊರಟು ಹೋದನಂತೆ.. ಈಗಷ್ಟೇ ' ಕವಿತೆ ಗ್ರೂಪ್ ನಲ್ಲಿನ ಮಹೇಶಮೂರ್ತಿ ಅವರು ಕಳುಹಿಸಿದ ಒಡ್ಡಂಬೆಟ್ಟು ಕವನಗಳನ್ನೆಲ್ಲ ಮುಂಜಾನೆ ಎದ್ದು ಖುಷಿಯಿಂದ ಒಂದಾದಮೇಲೊಂದರಂತೆ ಸರದಿಯಂತೆ ಓದುತ್ತಹೋದ ನನ್ನ ಎದೆಗೆ ಭರ್ಚಿಯಂತೆ ತಿವಿದದ್ದು ರವಿಶಂಕರ್ ಕೈ ತಪ್ಪಿ ಹೋದಚೆಂಬ ಸುದ್ದಿ..ಈಗಷ್ಟೇ ನನ್ನ ಎಂದಿನ ಚಾಳಿಯಂತೆ  ಸೂರ್ಯನ ಬಗ್ಗೆ ಕವನ ಬರೆದು ನಿಮ್ಮೆಲ್ಲರ ಜೊತೆ ಅವನ ಮೊಬೈಲಿಗೂ ಕಳುಹಿಸಿದ್ದೆ..ಆದರೆ ಸುದ್ದಿ ತಿಳಿದು ಮಂಗಳೂರಿನಲ್ಲಿದ್ದ ಸೋದರಿ ಡಾ.ಸೀತಾಲಕ್ಷ್ಮೀ ಕರ್ಕಿಕೋಡಿಗೆ ಫೋನ್ ಮಾಡಿ ವಿಚಾರಿಸಿದೆ. ' ಹೌದು ಅಣ್ಣ, ರವಿಶಂಕರ್ ಹನಿಗವನ ಮತ್ತೆ ಸಿಗಲ್ಲ ಅಂದಳು ನೋವಿನ ದನಿಯಲ್ಲಿ..ರಾತ್ರಿಯೇ ಕೊನೆಯುಸಿರೆಳೆದರಂತೆ.' 
ಮತ್ತೆ ಹತ್ತು ವರ್ಷಗಳ ಹಿಂದೆ ಹೋದರೆ , ಸೀತಾಲಕ್ಷ್ಮಿಯ ಮನೆಯಲ್ಲಿಯೇ ಆತನ ಪರಿಚಯ, ಆಕೆಯ ತಂದೆ, ಹಿರಿಯ ಸಾಹಿತಿ ವಿ.ಗ.ನಾಯಕರ ಬಳಿ ತನ್ನ ಕೃತಿಯೊಂದರ ಹನಿಗವನಗಳನ್ನು ತಿದ್ದಿಸಿಕೊಳ್ಳಲು ಬಂದಿದ್ದ. ರಾತ್ರಿಯಿಡೀ ಕುಳಿತು ಸಾಹಿತ್ಯದ ಕುರಿತಂತೆ ನಾವೆಲ್ಲ ಹರಟಿದ್ದೆವು. ಅಂದಿನ ಪರಿಚಯ ಇಂದಿನವರೆಗೂ ನದಿಯಂತೆ ಹರಿದಿತ್ತು..ನಾನು ಹೊನ್ನಾವರದಲ್ಲಿ ನಮ್ಮ
 ' ಹಣತೆ' ಸಂಘಟನೆಯಿಂದ ಹಮ್ಮಿಕೊಂಡ ಜಿ. ಆರ್. ಪಾಂಡೇಶ್ವರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ನನ್ನ ಆಮಂತ್ರಣಕ್ಕೆ ಬೆಲೆಕೊಟ್ಟು ಸ್ವತಃ ಕಾರ್ ಡ್ರೈವ್ ಮಾಡ್ಕೊಂಡು ಬಂದು ಹೋಗಿದ್ದ. ಬರುವಾಗ ವಿ.ಗ.ನಾ.ಮತ್ತು ಸೀತಾಳನ್ನೂ ಕರ್ಕೊಂಡು ಬಂದಿದ್ದ. ಮತ್ತೆ ಯಾವತ್ತೋ ನಮ್ಮ ಮನೆಗೂ ಬಂದು ಹೋಗಿದ್ದ. ಆತನ ಒಂದೊಂದು ಕವನವೂ ಶ್ರೇಷ್ಠವೇ..ಕೆಲವೊಮ್ಮೆ ಆತನ ಹನಿಗವನ ಭರಪೂರು ಹಾಸ್ಯದ ಹೊನಲು ಚೆಲ್ಲಿದರೂ ಅಲ್ಲಿಯೂ ಬಳಸಿದ ಒಂದೊಂದು ರೂಪಕ ಗಂಭೀರವೂ ಗಂಭೀರ ವಿಡಂಬನೆಯ ಒರೆಗಲ್ಲಿಗೆ ಉಜ್ಜಿಕೊಳ್ಳುತ್ತಿತ್ತು. 
ಒಡ್ಡಂಬೆಟ್ಟುವಿನ 'ಮಳೆಬಿಸಿಲು' ಹನಿಗವನ ಸಂಕಲನ ಆತನ ಎರಡನೇ ಕೃತಿ..ಅದು ನಾನು ಹಚ್ಚಿಕೊಂಡ, ನೆಚ್ಚಿಕೊಂಡ ಕೃತಿ..ಆ ಅಭಿಮಾಬಕ್ಕಾಗಿ ನಾನು ಕೆಲವಾರು ವರ್ಷಗಳ ಹಿಂದೆ ' ಸಮಾಜಮುಖಿ' ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣಕ್ಕೆ
 'ಮಖೆಬಿಸಿಲು' ಅಂತ ಹೆಸರಿಟ್ಟುಕೊಂಡಿದ್ದೆ. 
ಆ ಅಂಕಣದಲ್ಲಿ ಒಮ್ಮೆ ರವಿಶಂಕರ್ ಮತ್ತು ಆತನ ಹನಿಗವನಗಳನ್ನು ಪ್ರಸ್ತಾಪ ಮಾಡಬೇಕೆಂದುಕೊಂಡರೂ ಅವಕಾಶ ಕೂಡಿ ಬಂದಿರಲಿಲ್ಲ. ಕೊನೆಗೆ ಆತನ ಮೂರನೇ ಕೃತಿ ಬಿಡುಗಡೆ ಮಾಡುವಾಗ ರವಿಶಂಕರ್ ಒಡ್ಡಂಬೆಟ್ಟು ಮತ್ತು ಆತನ ಹನಿಗವನಗಳ ಬಗ್ಗೆಯೇ ಒಂದು ಅಂಕಣ ಬರೆದು ಸಮಾಧಾನಪಟ್ಟುಕೊಂಡಿದ್ದೆ.. 
ಅನಂತರ ಗದಗನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ದಕ್ಷಿಣ ಕನ್ನಡದ ರವಿಶಂಕರ್ ಮತ್ತು ಉತ್ತರ ಕನ್ನಡದ ಪ್ರತಿಭಾವಂತ ಕವಿ ರಾಮಮೂರ್ತಿ ನಾಯಕ ಅವರನ್ನು ಕವಿಗೋಷ್ಠಿಗೆ ಸೇರಿಸಿದ್ದೆ. ಆಗಷ್ಡೇ ರಾಮಮೂರ್ತಿಯ ' ಅಂಬರ ಗುಬ್ಬಿ' ಕವನ ಸಂಕಲನ ಬಂದಿತ್ತು. ಆ ಸಂಕಲನವನ್ನೂ ಒಮ್ಮೆ ನೀವೆಲ್ಲ ಓದಲೇಬೇಕು.  ಆಗ ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ಅಂದಿನ ಕಸಾಪ ರಾಜ್ಯಾಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರ ಬಳಿ ಜಗಳವಾಡಿ ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋದ ಸಂದರ್ಭದಲ್ಲೂ ಇವರಿಬ್ಬರ ಹೆಸರನ್ನು ಸೇರಿಸಿದ್ದೆ. ನಲ್ಲೂರು ಸರ್ ನನ್ನ ಮಾತಿಗೆ ಆ ಕಾಲದಲ್ಲೇ ಪ್ರೀತಿ ತೋರಿಸಿದ್ದರು. ಆ ಹಠಕ್ಕೆ ಕಾರಣ ಅವರಿಬ್ಬರೊಳಗೆ ಇದ್ದ ಕಾವ್ಯಶಕ್ತಿ. ಯಾಕೆ ಇಲ್ಲಿ ಅದನ್ನು ನೆನಪಿಸಿಕೊಂಡೆ ಅಂದರೆ ಇಬ್ಬರು ಪ್ರತಿಭಾವಂತರಿಗೆ ಅವಕಾಶ ಕೊಡಿಸಿದ್ದೇನೆ ಅನ್ನುವ ಸಂಭ್ರಮ ನನ್ನಲ್ಲಿತ್ತು.
ಹನಿಗವನದ 'ರವಿ' ಮುಳುಗಿದ್ದಾನೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಆತನಿಗೆ ಈಗ ೪೨ ವಯಸ್ಸು. ಇತ್ತೀಚೆಗಷ್ಟೇ ಹೊಸಮನೆ ಕಟ್ಟಿಕೊಂಡಿದ್ದಾನೆ. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನಾಧ್ತಕ್ಷರಾಗುವ ಗೌರವವನ್ನೂ ಪಡೆದಿದ್ದ. ನಾನು ಜಿಲ್ಲಾ ಕಸಾಪ ಅಧ್ಯಕ್ಷನಾಗಿ ಆಯ್ಕೆ ಆದಾಗ ಟಿವಿಯಲ್ಲಿ ಸುದ್ದಿ ನೋಡಿ ಸಡಗರಪಟ್ಟು ಫೋನ್ ಮಾಡಿದ್ದ. 'ನೀನು ನಮ್ಮ ಜಿಲ್ಲೆಯ ಹೊಸ ಕವಿಗಳಿಗೆ ಒಂದು ಉಪನ್ಯಾಸ ಕೊಡಬೇಕು, ಕರೆಸುತ್ತೇನೆ.' ಅಂದಿದ್ದೆ. ' ಖಂಡಿತ ಬರ್ತೇನೆ' ಅಂತ ಹೇಳಿದ್ದ.
ರವಿ ಇಂದು ತನ್ನ ಎಲ್ಲ ಹನಿಗವನಗಳನ್ನೂ ನಮ್ಮ ಬಳಿ ಇಟ್ಟು ಹೊರಟಿದ್ದಾನೆ.
ಈ ನೆಲದ ನಂಬಿಕೆಯಂತೆ ಆತನ ಆತ್ಮಕ್ಕೆ ಶಾಂತಿ ಕೋರುತ್ತೇನೆ.
{ ಸಾಹಿತ್ಯ ಲಹರಿ whatsap  ಗುಂಪಿನಿಂದ }

No comments:

Post a Comment