ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೆನಡಾದಲ್ಲಿ ಯಕ್ಷಮಿತ್ರ ಟೋರೋಂಟೋ ಮೇಳ ಸಂಯೋಜಿಸಿದ್ದ ಯಕ್ಷಗಾನ ಮತ್ತು ತಾಳಮದ್ದಲೆ ಸರಣಿಯ ಸಮಾರೋಪ ಕೆನಡಾ ದೇಶದ ರಾಜಧಾನಿ ಒಟ್ಟಾವಾದಲ್ಲಿ ಜೂನ್ ೧೧ ರಂದು ನೆಡೆಯಿತು. ವಿದೇಶದ ಮೊಟ್ಟ ಮೊದಲ ಕನ್ನಡ ಮೂಲದ ಕೇಂದ್ರ ಸಂಸತ್ ಸದಸ್ಯರಾಗಿ ಚುನಾಯಿಸಲ್ಪಟ್ಟಿರುವ ಶ್ರೀ ಚಂದ್ರ ಆರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನದ ವಿದ್ವಾಂಸರು ಖ್ಯಾತ ಅರ್ಥಧಾರಿಗಳೂ ಅದ ಶ್ರೀ ಪ್ರಭಾಕರ ಜೋಶಿಯವರು ಸುಮಾರು ಎರಡು ವಾರ ಯಕ್ಷಮಿತ್ರದೊಡನೆ ಪ್ರವಾಸಮಾಡಿ, ಟೋರೋಂಟೋ ಮತ್ತು ಒಟ್ಟಾವ ನಗರಗಳಲ್ಲಿ ಸ್ಥಳೀಯ ಯಕ್ಷಗಾನ ಅಭಿಮಾನಿಗಳೊಂದಿಗೆ ಸೇರಿ ತಾಳಮದ್ದಲೆ ನಡೆಸಿಕೊಟ್ಟು ಕೆನಡಾಕ್ಕೆ ವೃತ್ತಿಪರ ಅರ್ಥಗಾರಿಕೆಯನ್ನು ಪರಿಚಯಿಸಿ ಇತಿಹಾಸ ನಿರ್ಮಿಸಿದರು. ಈ ಸರಣಿಯ ಸಮಾರೋಪಕ್ಕೆಂದು ಒಟ್ಟಾವ ಕನ್ನಡ ಸಂಘ ಮತ್ತು ಕೆನಡಾದ ಯಕ್ಷಮಿತ್ರ ಟೊರೋಂಟೋ ಮೇಳ ಜಂಟಿಯಾಗಿ ಜೂನ್ ೧೧ ರಂದು ರಾವಣ ವಧೆ ತಾಳಮದ್ದಲೆ ಮತ್ತು ವಾಲಿ ವಧೆ ಯಕ್ಷಗಾನ ಆಟ ಹಮ್ಮಿಕೊಂಡಿದ್ದವು. ರಾವಣ ವಧೆ ತಾಳಮದ್ದಲೆಯಲ್ಲಿ ಜೋಶಿಯವರು ರಾವಣನಾಗಿ ಅರ್ಥಹೇಳಿ ಜನರು ಆಶ್ಚರ್ಯ ಪಡುವಂತೆ ದುರಂತ ನಾಯಕನೂ ಭಕ್ತನೂ ಆಗಿ ರಾವಣನನ್ನು ಚಿತ್ರಿಸಿದರು. ಅರ್ಥಕ್ಕೆ ತಲೆದೂಗಿದ ಪ್ರೇಕ್ಷಕವೃಂದ ತಾಳಮದ್ದಲೆಯನ್ನು ಉತ್ತರ ಅಮೆರಿಕಾಕ್ಕೆ ತಂದಿದ್ದಕ್ಕಾಗಿ ಜೋಶಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿತು. ಒಟ್ಟಾವಾ ಕನ್ನಡ ಕೂಟದ ಶ್ರೀ ರಾಜೇಂದ್ರ ಹೆಗಡೆ, ಗಿರೀಶ್, ಪ್ರೊ ರಾಮ ಆಚಾರ ಹಿರಿಯಡ್ಕ ಮತ್ತಿತರರು ಜೋಶಿಯವರನ್ನು ಅಭಿನಂದಿಸಿರು. ಕನ್ನಡಿಗ ಎಂಪಿ ಶ್ರೀ ಚಂದ್ರ ಆರ್ಯ ಅವರು, ಕನ್ನಡ ಕಲೆ ಯಕ್ಷಗಾನವನ್ನು ಕೆನಡಾದಲ್ಲಿ ಹೆಚ್ಚು ಪರಿಚಯಿಸಬೇಕು, ಮೇಳದ ಮತ್ತು ಜೋಶಿಯವರ ಪ್ರಯತ್ನ ಮುಂದುವರೆಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಸರಣಿಯ ಸಮಾರೋಪದ ಕುರಿತು ಮಾತಾಡುತ್ತಾ ಜೋಶಿಯವರು ಸರಣಿಯನ್ನು ಸಂಯೋಜಿಸಿದ ಯಕ್ಷಮಿತ್ರವನ್ನೂ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ಕನ್ನಡ ಕೂಟವನ್ನು ಶ್ಲಾಘಿಸಿ ತಾಳಮದ್ದಳೆಯಲ್ಲಿ ಸಹಕರಿಸಿದ ಕಲಾವಿದರು ಮತ್ತು ಸಂಯೋಜಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ವಿದೇಶದಲ್ಲಿ ಮೊಟ್ಟಮೊದಲ ಸಂಪೂರ್ಣ ಯಕ್ಷಗಾನ ಮೇಳವನ್ನು ಸ್ಥಾಪಿಸುವುದು ದೊಡ್ಡ ಕೆಲಸ ಎಂದು ಶುಭಕೋರಿದರು. ನೂರಾರು ವರ್ಷಗಳಿಂದ ಯಕ್ಷಗಾನ ಕಲೆಯಲ್ಲಿ ಏನು ಬೆಳೆದಿದೆಯೋ ಅದರ ಫಲವಾಗಿ ಕಲಾವಿದರಾದ ನನ್ನಂತವರಿಗೆ ಅವಕಾಶ ಮತ್ತು ಗೌರವ ಸಲ್ಲುತ್ತಿದೆ. ಕಲಾವಿದರ ಕಾಲು ಹಿರಿಯ ಕಲಾವಿದರ ಭುಜದ ಮೇಲೆ ಇರುವುದರಿಂದ ನಾವು ಮೇಲೆ ಕಾಣುವುದು. ಅನೇಕ ಗ್ರಂಥಗಳಿಗೆ ಮತ್ತು ಕಲಾವಿದರಿಗೆ ನಾನು ಋಣಿ ಎಂದರು.
ಸುಮಾರು ಜೂನ್ ೩ರರಿಂದ ಶುರುವಾದ ಶ್ರೀ ಜೋಶಿಯವರ ಕೆನಡಾ ತಿರುಗಾಟ ಟೋರೋಂಟೋದ ತಾಳಮದ್ದಲೆ ಭೀಷ್ಮ ಪರ್ವ ದೊ೦ದಿಗೆ ಆರಂಭವಾಯಿತು. ಬಹುಶಃ ಇದು ಕೆನಡಾದಲ್ಲಿ ಸಂಪೂರ್ಣ ಹಿಮ್ಮೇಳದೊಡನೆ ನೆಡೆದ ಮತ್ತು ವೃತ್ತಿಪರ ಅರ್ಥಧಾರಿಗಳು ಭಾಗವಹಿಸಿದ ಮೊಟ್ಟಮೊದಲ ತಾಳಮದ್ದಲೆ. ವಿಶೇಷ ಎಂದರೆ ತಾಳಮದ್ದಲೆ ಮತ್ತು ಯಕ್ಷಗಾನವನ್ನು ನೆಡೆಸಿಕೊಟ್ಟಿದ್ದು ಉತ್ತರ ಅಮೇರಿಕಾದ್ದೇ ಆದ ಯಕ್ಷಮಿತ್ರ ಟೋರೋಂಟೋ ಮೇಳ. ಯಕ್ಷಮಿತ್ರ ಟೋರೋಂಟೋ ಮೇಳ ೨೦೦೯ರಲ್ಲಿ ಕೆನಡಾದಲ್ಲಿ ಸ್ಥಾಪಿತವಾದ ಭಾರತದ ಹೊರಗಿರುವ ಏಕೈಕ ಹಿಮ್ಮೇಳ, ಮುಮ್ಮೇಳ, ವೇಷೋಪಕರಣ ಇತ್ಯಾದಿಗಳಿಂದ ಸುಸಜ್ಜಿತವಾದ ವಿದೇಶಿ ಯಕ್ಷಗಾನ ಮೇಳವಾಗಿದ್ದು, ಶ್ರೀ ಜೋಶಿಯವರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಿತ್ತು. ಯಕ್ಷಗಾನದ ಶ್ರೇಷ್ಠ ಕವಿಯಾದ ದೇವಿದಾಸನ ಕೃಷ್ಣಸಂಧಾನ ಮತ್ತು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ಭೀಷ್ಮಪರ್ವದ ಆಯ್ದ ಪದ್ಯಗಳನ್ನು ಸಂಯೋಜಿಸಿ ಭೀಷ್ಮಭಕ್ತಿ ತಾಳಮದ್ದಲೆ ನೆಡೆಯಿತು. ಭೀಷ್ಮನಾಗಿ ಶ್ರೀ ಪ್ರಭಾಕರ ಜೋಶಿ ಯವರು ಭಕ್ತಶ್ರೇಷ್ಠ ಭೀಷ್ಮನ ಪ್ರಾತ್ರವನ್ನು ಚಿತ್ರಿಸಿದರು. ಯಕ್ಷಮಿತ್ರದ ಕಲಾವಿದರುಗಳಾದ ವಿನಾಯಕ ಹೆಗಡೆ ಮತ್ತು ರಾಘವೇಂದ್ರ ಕಟ್ಟಿನಕೆರೆ ಭಾಗವತಿಕೆ ಮಾಡಿ, ಶ್ರೀಧರ ಮಧ್ಯಸ್ಥ ಮದ್ದಲೆ ನುಡಿಸಿ ಹಿಮ್ಮೇಳ ನೆಡೆಸಿಕೊಟ್ಟರು. ನವೀನ ಹೆಗಡೆ ಕೌರವನಾಗಿ, ಕವಿರಾಜ ಉಡುಪ ಕೃಷ್ಣನಾಗಿ, ನಾಗಭೂಷಣ ಮಧ್ಯಸ್ಥ ಅರ್ಜುನನಾಗಿ, ಕೃಷ್ಣಪ್ರಸಾದ್ ಬಾಳಿಕೆ ಕರ್ಣನಾಗಿ ಪ್ರೇಕ್ಷಕರು ಮೆಚ್ಚುವಂತೆ ಅರ್ಥ ಹೇಳಿದರು. ನಂತರ ಯಕ್ಷಗಾನ ವಾಲಿ ವಧೆ ಪ್ರಸ್ತುತ ಪಡಿಸಲಾಯಿತು. ವಾಲಿವಧೆಯಲ್ಲಿ ನವೀನ ಹೆಗಡೆ ವಾಲಿ, ಶ್ರೀಕಾಂತ ಹೆಗಡೆ ಸುಗ್ರೀವ, ಬಿಂದು ಉಡುಪ ತಾರೆ, ಶ್ರೀ ಹರ್ಷ ಹೆಗಡೆ ರಾಮ, ಕೃಷ್ಣಪ್ರಸಾದ್ ಬಾಳಿಕೆ ಲಕ್ಷ್ಮಣ, ಮಧುಸೂಧನ ಭಟ್ ಬ್ರಾಹ್ಮಣ, ಕವಿರಾಜ ಉಡುಪ ಹನೂಮಂತ ಮತ್ತು ಕುಮಾರ ವಿಶಾಲ್ ಭಟ್ ಅಂಗದನ ವೇಷ ಮಾಡಿದರು. ಮೇಳದ ಯಜಮಾನರಾದ ಶ್ರೀ ಪರಮೇಶ್ವರ ಭಟ್ ದೊಡ್ಡಮಾಣಿ ಮತ್ತು ಟೋರೋಂಟೋ ಕನ್ನಡ ಸಂಘದ ಅಧ್ಯಕ್ಷ್ಯೆ ಶ್ರೀಮತೀ ಉಷಾ ಜಯರಾಮ ಮತ್ತು ಪದಾಧಿಕಾರಿಗಳು ಭಾರತದಿಂದ ಬಂದು ಕೆನಾಡಾಕ್ಕೆ ಕನ್ನಡ ತಾಳಮದ್ದಲೆ ಪರಿಚಯಿಸಿದ ಶ್ರೀ ಪ್ರಭಾಕರ ಜೋಶಿಯವರನ್ನು ಸನ್ಮಾನಿಸಿ ಪತ್ರನಿಡಿ ಗೌರವಿಸಿದರು.
ಇದಲ್ಲದೆ ಈ ಸರಣಿಯ ಅಂಗವಾಗಿ ಶೃ೦ಗೇರಿ ವಿದ್ಯಾಭಾರತಿ ಪ್ರತಿಷ್ಠಾನ ಗೀತೆಯ ಬೆಳಕು ಎಂಬ ಜೋಶಿಯವರ ಕನ್ನಡ-ಇಂಗ್ಲಿಷ್ ಉಪನ್ಯಾಸ ಏರ್ಪಡಿಸಿತ್ತು. ಕೆನಡಾದಲ್ಲಿ ನಾಟ್ ನಾಟ್ ಎಂಬ ಕನ್ನಡ ಚಲನಚಿತ್ರ ಹೊರತರುತ್ತಿರುವ ನಿರ್ದೇಶಕರುಗಳಾದ ಶ್ರೀಮತೀ ಬೃಂದಾ ಮತ್ತು ಶ್ರೀ ಮುರಳಿ ಇವರು ಜೋಶಿಯವರ ಭಾರತಿಯ ದರ್ಶನಗಳ ಪರಿಚಯ ಎಂಬ ಕಾರ್ಯಾಗಾರ ಒಂದನ್ನು ಯಕ್ಷಮಿತ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದರು. ಇದಲ್ಲದೆ ಕನ್ನಡ ಯಕ್ಷಗಾನದ ಹಿರಿಯ ತಜ್ಞರೆಂದೇ ಗುರುತಿಲ್ಪಡುವ, ಯಕ್ಷಗಾನ ಪದಕೋಶವನ್ನು ಬರೆದಿರುವ ಪ್ರಭಾಕರ ಜೋಶಿಯವರು ಯಕ್ಷಗಾನ ಮೌಲ್ಯವರ್ಧನ ಶಿಬಿರ ನೆಡೆಸಿಕೊಟ್ಟು ಯಕ್ಷಗಾನದ ಗುಣಮಟ್ಟ ಹೆಚ್ಚಿಸುವುದು ಹೇಗೆ, ಔಚಿತ್ಯ, ಅರ್ಥ, ಇತ್ಯಾದಿಗಳ ಬಗ್ಗೆ ವಿವರಿಸಿದರು. ಒಟ್ಟಾರೆ ಕಾರ್ಯಕ್ರಮಗಳಿಗೆ ೩೦೦ಕ್ಕೂ ಹೆಚ್ಚು ಜನಸೇರಿ ಯಶಸ್ವಿಯಾಯಿತು. ಇವೆಲ್ಲದರ ಚಿತ್ರೀಕರಣ ಸದ್ಯದಲ್ಲೇ ಅಂತರ್ಜಾಲದಲ್ಲಿ ಲಭ್ಯವಾಗಲಿದ್ದು ಆಸಕ್ತರು ನೋಡಬಹುದಾಗಿದೆ.
ತಾಳಮದ್ದಲೆಯನ್ನು ಕೆನಡಾದಲ್ಲಿ ನೆಡೆಸಿದ್ದಲ್ಲದೆ, ಕೆಲವು ತಿಂಗಳ ಹಿಂದೆ ಅಮೆರಿಕಾದಲ್ಲಿ ಹಲವಾರುಕಡೆ ಕಾರ್ಯಕ್ರಮ ನೀಡಿ ಜೋಶಿಯವರು ಕನ್ನಡದ ಕಲೆಗೊಂದು ಸ್ಥಾನ ಒದಗಿಸಿ ಕಲೆ ಬೆಳೆಯುವಲ್ಲಿ ಅಪಾರ ಪರಿಶ್ರಮ ಪಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಸರಣಿಯ ಅಂಗವಾಗಿ ಅಮೇರಿಕಾದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಆಹ್ವಾನಿತರಾಗಿ ಯಕ್ಷಗಾನದ ಬಗ್ಗೆ ಉಪಾನ್ಯಾಸ ಮತ್ತು ಪ್ರಾತ್ಯಕ್ಷಿಕೆಯೂ ನೆಡೆದಿತ್ತು. ಸೌತ್ ಎಷಿಯನ್ ಅಧ್ಯಯನ ವಿಭಾಗದ ಪ್ರೊ ರಾಬರ್ಟ ಗೋಲ್ದ್ಮನ್ ಜೋಶಿಯವರ ಆ ಉಪನ್ಯಾಸ ಏರ್ಪಡಿಸಿದ್ದರು. ಎಪ್ಪತ್ತರ ದಶಕದಲ್ಲಿ ಕನ್ನಡ ಯಕ್ಷಗಾನದ ಬಗ್ಗೆ ಪ್ರಥಮವಾಗಿ ಪಿಎಚ್ ಡಿ ಮಾಡಿದ್ದ ಮಾರ್ತಾ ಅಷ್ಟನ್ ಮತ್ತು ಉತ್ತರ ಅಮೇರಿಕಾದ ಇನ್ನಿತರ ಯಕ್ಷಗಾನ ಆಸಕ್ತರು ಹಾಜರಿದ್ದರು. ಇದಲ್ಲದೆ ಜೋಶಿಯವರು ಉತ್ತರ ಅಮೇರಿಕಾದ ಸ್ಥಳೀಯ ಕಲಾವಿದರ ಜೊತೆ ತಾಳಮದ್ದಲೆ ನೆಡೆಸುವ ಸಲುವಾಗಿ ಒಡನಾಡಿ ತಾಳಮದ್ದಲೆಯ ಸೂಕ್ಷ್ಮಗಳು, ಔಚಿತ್ಯದ ಬಗ್ಗೆ ಮಾರ್ಗದರ್ಶನ ನೀಡಿ ಕನ್ನಡ ಯಕ್ಷಗಾನ ಮತ್ತು ತಾಳಮದ್ದಲೆ ಕೆನಡಾ ಮತ್ತು ಅಮೇರಿಕಾದಲ್ಲಿ ನೆಲೆಗೊಳ್ಳಲು ಮತ್ತು ಬೆಳೆಯಲು ಹೊಸ ಚೈತನ್ಯ ಮೂಡಿಸಿದ್ದಾರೆಂದರೆ ಅತಿಶಯೋಕ್ತಿ ಆಗಲಾರದು.
No comments:
Post a Comment