*ಅರವಿಂದ ಚೊಕ್ಕಾಡಿ
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ,ಹೋಮಿ ಜಹಾಂಗೀರ್ ಬಾಭಾ ಮುಂತಾದ ವಿಜ್ಞಾನಿಗಳು ಕಲೆಗಳನ್ನು ಹವ್ಯಾಸವಾಗಿ ಹೊಂದಿದ್ದರು.ಏಕೆಂದರೆ ನಮ್ಮೆಲ್ಲ ಒತ್ತಡಗಳ ನಡುವೆ ಕಲೆಗಳು ನಿರಾಳತೆಯನ್ನು ಒದಗಿಸುವುದಷ್ಟೆ ಅಲ್ಲದೆ ಬದುಕನ್ನು ಸಮೃದ್ಧಗೊಳಿಸುತ್ತವೆ.ಅರ್ಥಪೂರ್ಣಗೊಳಿಸುತ್ತವೆ.ಮಾರ್ದವತೆಯನ್ನು ತರುತ್ತವೆ.ಆಲೋಚನೆಯನ್ನು ಸಂವೇದನಾಶೀಲಗೊಳಿಸುತ್ತವೆ.ಕಲೆಯನ್ನು ಆಳವಾಗಿ ಅನುಭವಿಸುವವರು ಕ್ರೂರಿಗಳಾಗಿ ಕ್ರೌರ್ಯವನ್ನು ಮೆರೆಯಲು ಸಾಧ್ಯವಿಲ್ಲ.
ಪ್ರಸ್ತುತ ಬದುಕಿನಲ್ಲಿ ಬುದ್ಧಿವಂತರಿಗೆ ಕೊತೆ ಇಲ್ಲ.ಲಾಭ-ನಷ್ಟಗಳ ಪಕ್ಕಾ ಲೆಕ್ಕಾಚಾರ ಹಾಕಬಲ್ಲವರಿಗೆ ಕೊರತೆ ಇಲ್ಲ.ಉಪಯುಕ್ತತೆಯನ್ನೆ ಕೇಂದ್ರೀಕರಿಸಿದ ಶಿಕ್ಷಣವು ಆ ಕೆಲಸವನ್ನು ಮಾಡುತ್ತಿದೆ.ವ್ಯಾವಹಾರಿಕ ಬದುಕು ಕೂಡ ಅದನ್ನೆ ರೂಢಿಸುತ್ತಿದೆ.ಇಂತಹ ಸನ್ನಿವೇಶದಲ್ಲಿ ಉಪಯುಕ್ತತೆಯ ಲೆಕ್ಕಾಚಾರಗಳನ್ನು ಮೀರಿದ ಮನುಷ್ಯ ಸಂವೇದನೆಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಶಿಕ್ಷಣಕ್ಕೆ ಕಲೆಯನ್ನು ಹೆಚ್ಚು ಹೆಚ್ಚು ಸಂಯೋಜಿಸಬೇಕಾದ ಅಗತ್ಯವಿದೆ.ಅಂತಹ ಅನುಭವವೊಂದು ಹೀಗಿದೆ:
*************
ರಂಗಾಯಣ ತಂಡದಲ್ಲಿ ಕಲಾವಿದರಾಗಿರುವ ನಿತಿನ್ ಡಿ.ಆರ್.ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ವಿದ್ಯಾರ್ಥಿ.ಕಳೆದ ವಾರ ಅದೇ ಶಾಲೆಯಲ್ಲಿ ರಂಗಾಯಣದ ತಂಡದಿಂದ ' ಗಾಂಧಿ ' ನಾಟಕ ಪ್ರದರ್ಶಿತವಾಯಿತು.ಕರಾವಳಿಯ ಜಿಲ್ಲೆಗಳಲ್ಲಿ ರಂಗಭೂಮಿ ನಾಟಕಗಳು ಬಹಳ ವಿರಳ.ಅಂತಾದ್ದರಲ್ಲಿ ಇದು ಪ್ರೌಢಶಾಲೆಯಲ್ಲಿ ಪ್ರದರ್ಶಿತವಾದ ನಾಟಕ.ಆದರೆ ರಂಗಭೂಮಿ ನಾಟಕಗಳಿಗೆ ಬೇರೆ ಯಾವ ನಾಟಕಗಳಿಗೂ ಇಲ್ಲದ ಒಂದು ಗುಣವಿದೆ.ಅದು ಮನುಷ್ಯನ ಮನೋವಲಯದ ಮೇಲೆ ಪ್ರಭಾವವನ್ನು ಬೀರುತ್ತದೆ.ಎಲ್ಲ ಪ್ರದೇಶಕ್ಕೂ ಸಾಮಾನ್ಯ ಎನಿಸುವ ಸಿನಿಮಾಗಳು,ಕರಾವಳಿ ಜಿಲ್ಲೆಗಳಲ್ಲಿ ಪ್ರಧಾನವಾದ ಯಕ್ಷಗಾನ ಬಯಲಾಟಗಳೆಲ್ಲ ಆರ್ಭಟ ಪ್ರಧಾನವಾದದ್ದು.ಬಹಿರ್ಮುಖತೆಯೇ ಅವುಗಳ ಗುಣ.ಆದರೆ ರಂಗಭೂಮಿ ಮೌನದಲ್ಲೆ ಮಾತನ್ನು ಸೃಷ್ಟಿಸುತ್ತದೆ.ಅಂತರ್ಮುಖಿಯಾಗಿ ಚಲಿಸಿ ಮನುಷ್ಯನ ಮನೋಪ್ರಪಂಚಕ್ಕೆ ಪ್ರವೇಶಿಸುತ್ತದೆ.ಧ್ವನಿ ಮತ್ತು ವರ್ಣಗಳು ಅದರಲ್ಲಿ ವಿಶೇಷವಾದ ಸಂಚಲನಾ ಕಾರಕಗಳು.ಅದು ಪ್ರೌಢಶಾಲೆಯ ಮಕ್ಕಳ ಮೇಲೂ ಪರಿಣಾಮವನ್ನು ಬೀರಿ ಪರಿವರ್ತನೆಯನ್ನು ತರಬಲ್ಲುದು ಎಂಬುದಕ್ಕೆ ನಾಟಕದ ನಂತರ ಒಬ್ಬ ವಿದ್ಯಾರ್ಥಿ " ನನಗೆ ಗಾಂಧಿ ಇಷ್ಟವಿರಲಿಲ್ಲ.ಆದರೆ ಈ ನಾಟಕವನ್ನು ನೋಡಿದ ಮೇಲೆ ಗಾಂಧಿ ಇಷ್ಟವಾದರು.ಜಾತಿವಾದವನ್ನು ಯಾವ ರೀತಿಯಲ್ಲೂ ಮಾಡಬಾರದೆಂಬುದನ್ನು ಈ ನಾಟಕದಿಂದ ಕಲಿತೆ"ಎಂದದ್ದು ಸಾಕ್ಷಿಯಾಯಿತು.ಕಲಾವಿದರು ತಮ್ಮ ಅನುಭವವನ್ನು ಹೇಳುತ್ತಾ ಕಾಲೇಜೊಂದರಲ್ಲಿ ನಾಟಕದ ಪ್ರದರ್ಶನದ ನಂತರ ಒಬ್ಬ ವಿದ್ಯಾರ್ಥಿ," ನಾನು ಗಾಂಧಿಯನ್ನು ದ್ವೇಷಿಸುತ್ತಿದ್ದೆ.ಏಕೆಂದರೆ ನಾನು ಗಾಂಧಿಯನ್ನು ತಿಳಿದುಕೊಂಡಿರಲಿಲ್ಲ.ಈಗ ಗಾಂಧಿ ನನ್ನ ಪೂರ್ವೀಕರೆಂದು ಹೆಮ್ಮೆಯಿಂದ ಹೇಳುತ್ತೇನೆ.ಗಾಂಧಿಯನ್ನು ತಿಳಿದುಕೊಳ್ಳುತ್ತೇನೆ" ಎಂದಿದ್ದನೆಂದು ನೆನಪು ಮಾಡಿಕೊಂಡರು.

ಕಲೆಯ ಯಶಸ್ಸು ಕಡಿಮೆ ಮಾತನಾಡುವುದರಲ್ಲಿಯೂ ಇದೆ ಎಂಬುದನ್ನು ಕ್ಷಣ ಕಾಲ ನಾಟಕದಲ್ಲಿ ಬಂದು ಹೋಗುವ ಅಂಬೇಡ್ಕರ್ ಪಾತ್ರ ಚೆನ್ನಾಗಿ ಮನವರಿಕೆ ಮಾಡಿ ಕೊಟ್ಟಿತು."ಬಾಪೂ,ಗೋಖಲೆಯವರು ನಿಮ್ಮನ್ನು ಒಂದು ವರ್ಷ ದೇಶ ಸಂಚಾರ ಮಾಡಲು ಹೇಳಿದ್ದರು.ನಾನು ಹೇಳುತ್ತಿದ್ದೇನೆ.ಇನ್ನೊಂದು ವರ್ಷ ದೇಶ ಸಂಚಾರವನ್ನು ನೀವು ಮಾಡಬೇಕು.ಗೋಖಲೆಯವರು ನಿಮಗೆ ಆಗ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಬಾರದು,ಸಾರ್ವಜನಿಕ ಹೇಳಿಕೆಗಳನ್ನು ಕೊಡಬಾರದು ಎಂದು ಹೇಳಿದ್ದರು.ನಾನು ಹೇಳುತ್ತಿದ್ದೇನೆ.ಅಸ್ಪೃಷ್ಯತೆಯ ಬಗ್ಗೆ ನೀವು ಈ ಪರ್ಯಟನೆಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ಕೊಡಬೇಕು"ಎಂದು ಪಾತ್ರ ಹೊರಟು ಹೋಗುತ್ತದೆ.ಅದಕ್ಕೆ ಗಾಂಧಿಯ ಪಾತ್ರ " ಸರಿ ಬಾಬಾ ಸಾಹೇಬ್" ಎನ್ನುವುದರ ಹೊರತಾಗಿ ಬೇರೇನೂ ಉತ್ತರಿಸುವುದಿಲ್ಲ.ನಂತರ ಪರ್ಯಟನೆ.ಈ ದೃಶ್ಯ ಸರಿ ಎನಿಸಿದ ಮೇಲೆ ಒಂದು ಕ್ಷಣವೂ ಸುಮ್ಮನಿರದ ಗಾಂಧಿಯ ವ್ಯಕ್ತಿತ್ವವನ್ನು ಚೆನ್ನಾಗಿ ನಿರೂಪಿಸುತ್ತದೆ.
ಗಾಂಧಿ ಎಂದರೆ ಈಗ ಮನಃಪಟಲದಲ್ಲಿ ಬರುವುದು ಉಪ್ಪಿನ ಸತ್ಯಾಗ್ರಹದ ನಂತರದ ಗಾಂಧಿಯ ವ್ಯಕ್ತಿತ್ವ.ಆದರೆ ಗಾಂಧಿ ಕೂಡ ನಮ್ಮಂತೆಯೇ ಮನುಷ್ಯರಾಗಿದ್ದರೆಂಬುದನ್ನು ನಾಟಕವು ಮನಮುಟ್ಟುವಂತೆ ಹೇಳಿತು.ತಾಯಿಗೆ ಸುಳ್ಳು ಹೇಳುವ ಮಗು ಮೋಹನದಾಸ,ತಪ್ಪಿಗೆ ತಂದೆಯಿಂದ ಶಿಕ್ಷೆ ಕೇಳುವ ಮೋಹನ ದಾಸ ವ್ಯಕ್ತಿತ್ವ ವಿಕಾಸದ ಪ್ರಾಥಮಿಕ ಲಕ್ಷಣಗಳನ್ನು ಚೆನ್ನಾಗಿ ನಿರೂಪಿಸಿತು.ಅದರ ಜೊತೆಗೆ ಗಾಂಧಿಯ ಇಡೀ ಜೀವನದಲ್ಲಿ ಕಾಣಿಸುವ, ತಾನು ಮಾಡಿದ್ದು ಸರಿಯಾಗಲಿಲ್ಲವೊ ಏನೊ ಎನ್ನುವ ಆತ್ಮಾವಲೋಕನದ ಗುಣವನ್ನು ಬಾಲ್ಯದಲ್ಲೆ ಮೋಹನದಾಸ ಹೇಗೆ ಹೊಂದಿದ್ದ ಎಂಬುದನ್ನು ಸೊಗಸಾಗಿ ನಿರೂಪಣೆ ಮಾಡಿತು.
ಹಾಸ್ಯದ ಮುಖಾಂತರವೇ ವಿಕಾಸವನ್ನು ಹೇಳುವುದು ಇಂಗ್ಲೆಂಡಿನಲ್ಲಿದ್ದ ಗಾಂಧಿಯ ಎಡವಟ್ಟುಗಳು.ಇಂಗ್ಲಿಷರಂತೆ ಕಾಣಿಸಿಕೊಳ್ಳುವುದಕ್ಕಾಗಿ ಟೈ ಧರಿಸುವಾಗ ಮಾಡುವ ಎಡವಟ್ಟು,ಡ್ಯಾನ್ಸ್ ಕ್ಲಾಸಿಗೆ ಸೇರಿ ಯುವತಿಯನ್ನು ಹಿಡಿದುಕೊಳ್ಳಲಾಗದೆ ಯುವತಿ ಬಿದ್ದು ಗಾಂಧಿಗೆ ಬೈಯ್ಯುವುದು,ಡ್ಯಾನ್ಸ್ ಕಲಿಯುವ ಮೊದಲು ಸಂಗೀತ ಕಲಿಯಬೇಕೆಂದು ಗಿಟಾರ್ ನುಡಿಸುವುದನ್ನು ಅಭ್ಯಾಸ ಮಾಡುತ್ತಾ ಮಾಡುತ್ತಾ "ಅರೆ,ನಾನ್ಯಾಕೆ ಬ್ರಿಟಿಷರಂತೆ ಕಾಣಲು ಇದನ್ನೆಲ್ಲ ಮಾಡುತ್ತಿದ್ದೇನೆ.ನಾನು ನಾನಾಗಬಲ್ಲೆನೆ ಹೊರತು ಇನ್ನೊಬ್ಬನಾಗಲಾರೆ" ಎಂಬ ಅರಿವನ್ನು ಗಾಂಧಿ ತಂದುಕೊಳ್ಳುವುದು-ಇವೆಲ್ಲ " ನಾವೂ ಇಂತಹ ಎಡವಟ್ಟುಗಳನ್ನು ಮಾಡಿದ್ದೇವಲ್ಲ"ಎಂದು ಪ್ರೇಕ್ಷಕರಿಗೆ ಅನಿಸಿ ಗಾಂಧಿಯನ್ನು ನಮ್ಮೊಳಗೊಬ್ಬನಂತೆ ಮಾಡಲು ಸಫಲವಾಗುತ್ತದೆ.ಅದೇ ಸಮಯಕ್ಕೆ ಗಾಂಧಿಗೂ ನಮಗೂ ಇರುವ ವ್ಯತ್ಯಾಸವನ್ನೂ ಅರ್ಥ ಮಾಡಿಸುತ್ತದೆ.ಅದೇನೆಂದರೆ ಗಾಂಧಿ ತನ್ನ ಪ್ರತಿಯೊಂದು ಎಡವಟ್ಟಿನಿಂದಲೂ ಕಲಿಯುತ್ತಾ ಹೋದರು.ನಾವು ಎಡವಟ್ಟಿನಿಂದ ಕಲಿಯುವುದಿಲ್ಲ.ಈ ಅಂತರವನ್ನು ಹೇಗೆ ತುಂಬಿಕೊಳ್ಳಬೇಕೆಂಬುದನ್ನು ನಾಟಕವು ಪ್ರೇಕ್ಷಕರಿಗೆ ಬಿಟ್ಟು ಬಿಡುತ್ತದೆ.
ಅರಿವು ಹುಟ್ಟಿಸುವ ಕ್ರಮ ಹೇಗಿರುತ್ತದೆ ಎಂಬುದು ಶೈಕ್ಷಣಿಕ ಪ್ರಕ್ರಿಯೆಯ ಮಹತ್ವದ ಅಂಶ.ಅದನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿವಾಹವನ್ನು ನಿಷೇಧಿಸುವ ಕಾನೂನು ಜಾರಿಯಾದಾಗ ಗಾಂಧಿ ಮತ್ತು ಕಸ್ತೂರ್ಬಾ ನಡುವೆ ನಡೆಯುವ ಈ ಸಂವಾದವು ತಿಳಿಸಿಕೊಡುತ್ತದೆ:
ಗಾಂಧಿ:ಹತ್ತಿರ ಬರಬೇಡ.
ಕಸ್ತೂರ್ಬಾ:ಏಕೆ?
ಗಾಂಧಿ:ಹತ್ತಿರ ಬರಲು ನೀನು ಯಾರು?
ಕಸ್ತೂರ್ಬಾ:ನಾನು ನಿಮ್ಮ ಹೆಂಡತಿ
ಗಾಂಧಿ:ಅಲ್ಲ.
ಕಸ್ತೂರ್ಬಾ:ಮತ್ತೆ ಅಲ್ಲಿ ಮಲಗಿರುವ ಮಕ್ಕಳ ತಾಯಿ ಯಾರು?
ಗಾಂಧಿ:ನೀನು
ಕಸ್ತೂರ್ಬಾ:ಅವರ ತಂದೆ ಯಾರು?
ಗಾಂಧಿ:ನಾನು
ಕಸ್ತೂರ್ಬಾ:ಮತ್ತೆ,ಹಾಗಾದರೆ ನಾನು ನೀವಿಟ್ಟುಕೊಂಡ ಹೆಣ್ಣೇನು?
ಗಾಂಧಿ:ಹೌದು
ಕಸ್ತೂರ್ಬಾ:ಯಾರು ಹೇಳಿದ್ದು?
ಗಾಂಧಿ:ಕಾನೂನು
ಕಸ್ತೂರ್ಬಾ:ಕಾನೂನು ಮಾಡಿದವರು ಹೊಟ್ಟೆಗೆ ಏನು ತಿನ್ನುತ್ತಾರೆ?
ಗಾಂಧಿ:ಮಾಂಸ
ಕಸ್ತೂರ್ಬಾ:ಇದನ್ನು ನಾನು ಒಪ್ಪುವುದಿಲ್ಲ
ಗಾಂಧಿ:ಒಪ್ಪದೆ ಏನು ಮಾಡುತ್ತಿ?
ಕಸ್ತೂರ್ಬಾ:ಸತ್ಯಾಗ್ರಹ

ಹೀಗೆ ಅರಿವನ್ನು ಹುಟ್ಟಿಸುವುದೆಂದರೆ ವಿಚಾರದ ಉಪದೇಶವಲ್ಲ;ವಿಚಾರವನ್ನು ತಿಳಿದುಕೊಂಡು ಕ್ರಿಯಾಶೀಲರಾಗಬೇಕಾದವರು ತಮ್ಮೊಳಗೇ ವಿಚಾರವನ್ನು ಕಂಡುಕೊಳ್ಳುವಂತೆ ಮಾಡುವುದು ಎಂಬುದನ್ನು ನಾಟಕವು ಪರಿಣಾಮಕಾರಿಯಾಗಿ ನಿರೂಪಿಸಿತು.
ಬಾಲಕ ಮೋಹನದಾಸ ತಾನು ನೋಡಿದ ಸತ್ಯ ಹರಿಶ್ಚಂದ್ರ ನಾಟಕವನ್ನು ತಾಯಿಗೆ ವಿವರಿಸುವಾಗ ಹರಿಶ್ಚಂದ್ರ ನಾಟಕದ ದೃಶ್ಯ ಮರುಸೃಷ್ಟಿಯಾಗುತ್ತದೆ.ಅದರಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ಪದ್ಯನಾಟಕವಾಗಿ ಬಳಸಿಕೊಳ್ಳಲಾಗಿದೆ.ಗುಜರಾತ್ ನ ಗಾಂಧಿಯೂ ಕನ್ನಡದ ಸಂಸ್ಕೃತಿಯೂ ಅನ್ಯಾದೃಶ್ಯದ ರೂಪದಲ್ಲಿ ಸಮನ್ವಯಗೊಳ್ಳುವ ಈ ಪರಿ ಅತ್ಯಂತ ಚೇತೋಹಾರಿಯಾಗಿತ್ತು.
ಪ್ರಾರಂಭಕ್ಕೆ ಬರುವ ಈ ನಾಟಕವನ್ನು ನೋಡಿದರೆ,ಬೊಳುವಾರು ಮಹಮ್ಮದ್ ಕುಂಞಿ ಅವರ ' ಪಾಪೂ ಗಾಂಧಿ ಗಾಂಧಿ ಬಾಪೂ ಆದ ಕಥೆ' ಕೃತಿಯನ್ನು ಪ್ರಧಾನವಾಗಿ ಆಧರಿಸಿದ ಈ ನಾಟಕದಲ್ಲಿ ಕೊನೆಗೊಂದು ದೃಶ್ಯ ಅಗತ್ಯವಿತ್ತು ಎನಿಸುತ್ತದೆ.ಗುಂಡಿಗೆ ಬಲಿಯಾದ ಗಾಂಧಿ ಇದ್ದಲ್ಲಿಗೆ ಮಹಾಬತ್ ಖಾನ್ ಬಂದು ಎಲ್ಲವೂ ಅಪರಿಪೂರ್ಣವೇ.ಈಗ ಪರಿಪೂರ್ಣನಾಗಿರುವೆ.ಪರಿಪೂರ್ಣವಾದದ್ದು ಭೂಮಿಯ ಮೇಲೆ ಇರುವುದಿಲ್ಲ.ನೀನಿನ್ನು ಹೊರಡು"ಎನ್ನುವ ದೃಶ್ಯ ಬೇಕಿತ್ತು ಎನಿಸುತ್ತದೆ.ನಾಟಕದಲ್ಲಿ ಅದಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ರೈಲಿನಲ್ಲಿ ಹೋಗುವ ದೃಶ್ಯ ಅಟೆನ್ ಬರೋ ಅವರ ' ಗಾಂಧಿ ' ಸಿನಿಮಾದಲ್ಲಿ ಬೆನ್ ಕಿಂಗ್ಸ್ಲೇ ಕೊಟ್ಟ ಅಭಿನಯದಂತೆಯೇ ಇದೆ.ಧನಾತ್ಮಕವಾಗಿಯೂ ಈ ಅಂಶವನ್ನು ಸ್ವೀಕರಿಸಬಹುದು.ಋಣಾತ್ಮಕವಾಗಿಯೂ ಸ್ವೀಕರಿಸಬಹುದು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಎಲ್ಲ ನಾಯಕರೂ ಧ್ವಜಾರೋಹಣದಲ್ಲಿ ನಿರತರಾಗಿದ್ದರೆ ಗಾಂಧಿ ಕೋಲ್ಕತ್ತಾದ ಸಮೀಪ ಒಂಟಿಯಾಗಿ ಕಸ ಗುಡಿಸುತ್ತಿರುವ ದೃಶ್ಯ ಪರಿಣಾಮಕಾರಿ ವಿಡಂಬನೆಯಾಗಿ ಬಂದಿದೆ." ದೇಶವಿಭಜನೆ ಬೇಡವೆಂದೆ.ಬ್ರಿಟಿಷರು ಹೋಗಲಿ.ಆಮೇಲೆ ನಾವೆಲ್ಲ ಕುಳಿತುಕೊಂಡು ಮಾತನಾಡೋಣವೆಂದೆ.ಆದರೆ ನಮ್ಮ ನಾಯಕರಿಗೆ ಸ್ವತಂತ್ರ ದೇಶವನ್ನು ಆಳುವ ಅವಸರ"ಎಂಬ ಗಾಂಧಿಯ ಮಾತುಗಳು ಒಬ್ಬ ಮಹಾನಾಯಕ ಕಡೆಗೂ ಒಂಟಿಯೇ ಆಗುವುದನ್ನು ಸೂಚಿಸುತ್ತದೆ.
ದೃಶ್ಯಗಳಿಗೆ ಕೊಟ್ಟ ಸಂಗೀತ ಆಯಾ ದೃಶ್ಯವನ್ನು ಪ್ರೇಕ್ಷಕರಿಗೆ ತಲುಪಿಸುವುದರಲ್ಲಿ ಯಶಸ್ವಿಯಾಗುತ್ತವೆ.ಅದರಲ್ಲಿ ಬಹಳ ಅದ್ಭುತವೆನಿಸುವುದು ಗಾಂಧಿ ಹತ್ಯೆಯಾದಾಗ ರೋದನವಾಗಿ ಏರುಧ್ವನಿಯಲ್ಲಿ ಬರುವ ' ರಘುಪತಿ ರಾಘವ ರಾಜಾರಾಮ್ ' ಗೀತೆ.
ಬೆಳಕಿನ ಪರಿಣಾಮ ಉದ್ದಕ್ಕೂ ಚೆನ್ನಾಗಿದೆ.ಆದರೆ ಬಹಳ ಗಮನ ಸೆಳೆಯುವುದು ಮೂರು ದೃಶ್ಯಗಳಲ್ಲಿ ಬರುವ ವರ್ಣಗಳು.ಹರಿಶ್ಚಂದ್ರ ನಾಟಕದ ದೃಶ್ಯ,ರಸ್ಕಿನ್ನನ ಅನ್ ಟು ದಿಸ್ ಲಾಸ್ಟ್ ನ ದ್ರಾಕ್ಷಿ ತೊಟದ ಕೂಲಿಕಾರರ ದೃಶ್ಯ,ಗಾಂಧಿ ಹತ್ಯೆಯ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ದೃಶ್ಯಗಳಲ್ಲಿ ಬಳಕೆಯಾದ ಬೆಳಕಿನ ವರ್ಷಗಳು ಅಚ್ಚಳಿಯದಂತೆ ಉಳಿಯುವಂತಹವು.
ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಅನೇಕ ಕಲಿಕೆಗಳನ್ನುಂಟುಮಾಡುವ ಈ ನಾಟಕವನ್ನು ಗಾಂಧೀಜಿಯವರ ೧೫೦ ನೆಯ ವರ್ಷಾಚರಣೆಯೊಂದಿಗೆ ನಿರಂತರವಾಗಿ ಎಲ್ಲ ಶಾಲೆ-ಕಾಲೇಜುಗಳಲ್ಲಿಯೂ ಆಡಿಸಿದರೆ ಬಹಳ ಉಪಯುಕ್ತವಾದೀತು.ನಾಟಕದ ಕೊನೆಯಲ್ಲಿ ಬಿಳಿ ಬಟ್ಟೆಯನ್ನು ಏರು ಮುಖವಾಗಿ ಬಿಡಿಸುತ್ತಾ ಹೋಗುವ ದೃಶ್ಯ ಈ ದೇಶಕ್ಕೆ ಗಾಂಧಿಯ ಅವಶ್ಯಕತೆಯನ್ನು ಹೇಳುವ ಆಶಯವಾಗುತ್ತದೆ.ಆ ಆಶಯದೊಂದಿಗೆ ಪ್ರತೀ ಶಾಲೆಯಲ್ಲೂ ಈ ನಾಟಕವನ್ನು ಆಡಿಸುವ ಆಶಯವೂ ಸೇರಿಕೊಳ್ಳುತ್ತದೆ.
*************
ಹೀಗೆ ಒಂದು ನಾಟಕದ ಪ್ರದರ್ಶನವಾದ ಕೂಡಲೆ ಅದರ ಉದ್ದೇಶ ಈಡೇರಿದಂತಾಗುವುದಿಲ್ಲ.ನಿಜವಾಗಿಯೂ ಅದರ ಉದ್ದೇಶ ಈಡೇರಬೇಕಾದರೆ ಕಲೆಯ ಪ್ರದರ್ಶನವಾದ ನಂತರ ಅದರ ಬಗ್ಗೆ ಮಕ್ಕಳಿಗೆ ವಿವರಿಸಬೇಕು.ಒಂದು ನಾಟಕವನ್ನು ಯಾವ ದೃಷ್ಟಿಕೋನದಲ್ಲಿ ನೋಡಬೇಕು,ಹೇಗೆ ಗ್ರಹಿಸಬೇಕು,ಸಂಗೀತವನ್ನು ಹೇಗೆ ಅನುಭವಿಸಬೇಕು ಎಂಬುದನ್ನೆಲ್ಲ ತಿಳಿಸಿಕೊಡುವ ಕೆಲಸ ಆಗಬೇಕು.ಹೀಗೆ ತಿಳಿಸಿದಾಗ ಮಕ್ಕಳಿಗೆ ಕಲೆಯ ಆಸಕ್ತಿ ಬೆಳೆಯುತ್ತದೆ.ತಾವೂ ಮಾಡಬೇಕೆನಿಸುತ್ತದೆ.ಮಾಡಲು ಸಾಧ್ಯವಾಗದವರು ನೋಡುವ ಮತ್ತು ಕೇಳುವ ಹವ್ಯಾಸವನ್ನು ಬೆಳೆಯಿಸಿಕೊಳ್ಳುತ್ತಾರೆ.ಈ ಹವ್ಯಾಸವನ್ನು ಬೆಳೆಯಿಸಿದಾಗ ಕಲೆಯ ಉದ್ದೇಶ ಸಾರ್ಥಕವಾಗುತ್ತದೆ.
ಇದನ್ನು ಸಾಧಿಸಬೇಕಾದರೆ ಅಧ್ಯಾಪಕರಿಗೆ ವಿವಿಧ ಕಲೆಗಳ ಪರಿಚಯವಿರಬೇಕು.ಕಲೆಗಳ ಆಸಕ್ತಿ ಇರಬೇಕು.ಅಧ್ಯಾಪಕರನ್ನು ಆರಿಸುವಾಗ ಈ ಅಂಶವೂ ಪರಿಗಣನೆಯಲ್ಲಿರಬೇಕು.

No comments:
Post a Comment