ನಮ್ಮದಲ್ಲದ ದನಿಯೊಂದರಲ್ಲಿ ಮಾತನಾಡುವ ಸಂಕಟ
ಎಷ್ಟು ಜನರಿಗೆ ಇಂಥ ಅನುಭವವಾಗಿದೆಯೋ ತಿಳಿಯದು. ಯಾವುದೋ ಸಂದರ್ಭಕ್ಕೆ ಅನುಸಾರವಾಗಿ ನಮ್ಮದಲ್ಲದ ದನಿಯಲ್ಲಿ, ನಮ್ಮದಲ್ಲದ ಮಾತುಗಳನ್ನು ಆಡತೊಡಗುತ್ತೇವೆ. ನೋಡುವವರಿಗೆ ಅದು ಅತ್ಯಂತ ಸಹಜವೇನೋ ಎನ್ನುವಂತಿರುತ್ತದೆ. ಆದರೆ ಸೂಕ್ಷ್ಮ ವ್ಯಕ್ತಿಗೆ ಇಂಥ ಟೊಳ್ಳು ಮಾತುಗಳನ್ನು ಆಡುತ್ತಿದ್ದೇನೆ ಎಂದು ಅನ್ನಿಸಿದ ತಕ್ಷಣ ವಿಚಿತ್ರ ಅವಮಾನ, ಸಂಕಟಗಳು ಶುರುವಾಗುತ್ತವೆ. ಅನಿವಾರ್ಯವಲ್ಲದಿದ್ದರೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಹೋಗಲು, ವೇದಿಕೆಯಲ್ಲಿ ಮಾತನಾಡಲು ನಾನು ಹೆದರುತ್ತೇನೆ. ಆದರೆ ನನ್ನ ಮಾತುಗಳನ್ನು ಕೇಳುವವರಿಗೆ ನನ್ನೊಳಗಿನ ಸಂಕಟ ಅರ್ಥವಾಗುವುದಿಲ್ಲ. ಯಾವುದೇ ಬಗೆಯ ಅಪ್ರಾಮಾಣಿಕತೆ ವಿಚಿತ್ರ ಕಸಿವಿಸಿ ಹುಟ್ಟಿಸಿಬಿಡುತ್ತದೆ.
ಯಾರದ್ದೋ ಸಾವಿನ ಮನೆಗೆ ಹೋಗುತ್ತೇವೆ. ಸುಮ್ಮನೆ ನಿಂತರೆ ಏನು ತಪ್ಪು ತಿಳಿಯುತ್ತಾರೋ ಅನ್ನಿಸತೊಡಗುತ್ತದೆ. `ಏನಾಯ್ತು?' ಎಂದು ಒಂದು ಪ್ರಶ್ನೆಯನ್ನು ಗೊತ್ತಿದ್ದರೂ ಕೇಳುತ್ತೇವೆ. ಯಾರೋ ಏನೋ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಮಾತುಗಳು ತಪ್ಪು, ಯಾವುದು ಸರಿ ಎಂದು ಅರ್ಥವಾಗುವುದಿಲ್ಲ. `ಸದ್ಯ ನರಳದೆ ಸತ್ತರಲ್ಲ', `ವಯಸ್ಸಾಗಿತ್ತು ಪಾಪ, ಆದರೂ ಮನೆಯವರಿಗೆ ದುಃಖ ಇದ್ದೇ ಇರುತ್ತಲ್ಲ' ಹೀಗೆ ಏನೋ ಒಂದು ಮಾತೊಗೆದು ಹಗುರಾಗಲು ನೋಡಿ ಮತ್ತಷ್ಟು ಭಾರವಾಗಿಬಿಡುತ್ತೇವೆ. ಆದಷ್ಟು ಬೇಗ ಅಲ್ಲಿಂದ ಹೊರಟುಬಿಡಬೇಕು ಅನ್ನಿಸಲು ಶುರುವಾಗುತ್ತದೆ. ಸತ್ತಿರುವ ವ್ಯಕ್ತಿ `ಹೆಸರಾಂತ' ಆಗಿದ್ದರೆ ಅಲ್ಲಿಯೇ ಟಿವಿ ಯವರು ಮೈಕ್ ತಂದು ಮುಂದೆ ಹಿಡಿಯುತ್ತಾರೆ. ಹೀಗೆ ಮಾತನಾಡುವವರನ್ನು ಅನೇಕ ಬಾರಿ ದೂರದರ್ಶನದಲ್ಲಿ ನೋಡುವಾಗ ಇವರು ತಮ್ಮ ಅಂತರಂಗದ ಮಾತು ಆಡುತ್ತಿದ್ದಾರೆಯೇ, ಸತ್ತಿರುವವರು ಇವರಿಗೆ ಅಷ್ಟು ಪ್ರಭಾವ ಬೀರಿದ್ದರೆ ಎನ್ನುವ ಅನುಮಾನ ಬರುವಷ್ಟು ಟೊಳ್ಳಾಗಿರುತ್ತದೆ. ಎದೆಯೊಳಗಿಂದ ಬಾರದ ಯಾವ ಮಾತುಗಳನ್ನಾಡುವುದು ಅತ್ಯಂತ ಕಷ್ಟಕರ ಎನ್ನುವುದು ನನ್ನ ಅನುಭವ. ಹೀಗಾಗಿಯೇ ನನ್ನ ಗೆಳೆಯರ ಸಂಖ್ಯೆ ಬಹು ಕಡಿಮೆ. ಯಾರ ಜೊತೆ ಅತ್ಯಂತ ಸಹಜವಾಗಿ ಇರಬಹುದು ಅನ್ನಿಸುವುದೋ ಅವರೊಂದಿಗೆ ಮಾತ್ರ ಇರುವುದಕ್ಕೆ, ಮಾತನಾಡುವುದಕ್ಕೆ ಇಷ್ಟ.
ಈ ಮೊಗಹೊತ್ತಿಗೆಯಲ್ಲಿ ಅನೇಕರು ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಹಾಗೆ ನೀಡಬೇಕಾದರೆ ಒಂದೋ ಆ ಘಟನೆ ನಮ್ಮ ಅನುಭವಕ್ಕೆ ಹತ್ತಿರವಾಗಿರಬೇಕು ಅಥವಾ ಅದನ್ನು ತೀವ್ರವಾಗಿ ಗ್ರಹಿಸುವಷ್ಟು ಸೂಕ್ಷ್ಮ ಸಂವೇದನೆ ಇರಬೇಕು. ಅವರೆಡೂ ಇಲ್ಲದಿದ್ದಾಗಲು ನೀವು ಒತ್ತಾಯದಿಂದ, ಒತ್ತಡದಿಂದ ಪ್ರತಿಕ್ರಿಯಿಸಲು ಆರಂಭಿಸಿದರೆ ಮಾತಿನ ಅರ್ಥಹೀನತೆ ಬಹುಬೇಗ ಅರಿವಿಗೆ ಬಂದು ನಗೆಪಾಟಲಾಗಿಬಿಡುತ್ತೇವೆ. ಎಲ್ಲರು ಒಂದೇ ರೀತಿಯ ಮಾತುಗಳನ್ನು ಆಡುವಾಗ, ಆ ಮಾತುಗಳು ನಿಮ್ಮದಲ್ಲ ಎನ್ನಿಸಿದಾಗ ಕೂಡ ಮಾತನಾಡಿದರೆ ಇಂಥ ಸಂಕಷ್ಟ ಎದುರಾಗುತ್ತದೆ. ಸಹಜತೆ, ಪ್ರಾಮಾಣಿಕತೆಗಳಿಂದ ಮಾತ್ರ ಇದನ್ನು ಮೀರಲು ಸಾಧ್ಯವೇನೋ. ಪ್ರೋತ್ಸಾಹಕ್ಕೆ ಆಡುವ ಮೆಚ್ಚುಗೆಯ ಮಾತುಗಳನ್ನು ನಾನು ಟೊಳ್ಳು ಎಂದು ಸಂಪೂರ್ಣವಾಗಿ ನಿರಾಕರಿಸಲಾರೆ. ಯಾರೋ ವಿದ್ಯಾರ್ಥಿ ಕವಿತೆಯನ್ನು ಬರೆಯಲು ಆರಂಭಿಸಿದರೆ ಅವರು ಮುಂದುವರಿಸಲಿ ಎನ್ನುವ ಕಾರಣಕ್ಕೆ ಶಿಕ್ಷಕ ಮನೋಭಾವದವರಾದವರು ಬೆನ್ನು ತಟ್ಟುತ್ತಾರೆ. ಅಲ್ಲಿರುವ ಉದ್ದೇಶ ದಾರಿ ತಪ್ಪಿಸುವುದಾಗಿರುವುದಿಲ್ಲ, ಅಗಾಧವಾದ ಪ್ರೀತಿ ವ್ಯಕ್ತವಾಗುವ ಬಗೆ ಅದು.
ಗದರುವುದು ಪ್ರೀತಿಯ ಇನ್ನೊಂದು ಬಗೆ. ನಾನು ಎಂ. ಎ. ಓದುವಾಗ ಡಿ. ಆರ್. ನಾಗರಾಜ್ ಬಹಳ ಉತ್ಸಾಹದಿಂದ ಜಗತ್ತಿನ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ಸೂಕ್ಷ್ಮವಾಗಿ ಗ್ರಹಿಸುವ ವಿದ್ಯಾರ್ಥಿಗಳೆಂದರೆ ಅವರಿಗೆ ಪಂಚಪ್ರಾಣ. ಒಮ್ಮೆ ಚೆಕಾಫ್ ನ `ಚೆರ್ರಿ ಆರ್ಚರ್ಡ್' ಪಾಠ ಮಾಡುತ್ತಿದ್ದರು. ಪಠ್ಯ ಪುಸ್ತಕವಿಲ್ಲದೆ ಬರುವ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಅಸಾಧ್ಯ ಸಿಟ್ಟು. ನಾನು ಹಾಗೆ ಒಂದು ದಿನವೂ ಪಠ್ಯ ಪುಸ್ತಕವನ್ನು ಬಿಟ್ಟು ಹೋದವಳಲ್ಲ. ಆ ದಿನ ನನ್ನ ಗೆಳತಿ ಮರೆತು ಬಂದಿದ್ದಳು. ಹೀಗಾಗಿ ಅವಳು ನೋಡಿಕೊಳ್ಳಲಿ ಎಂದು ಉದಾರತೆಯಿಂದ ಅವಳ ಮುಂದೆ ಪುಸ್ತಕವಿಟ್ಟು ಪಾಠ ಕೇಳುತ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದೊಡ್ಡ ದನಿ ಕೇಳಿಸಿತು. `ಕಮಲ, ವಾಟ್ ನಾನ್ಸೆನ್ಸ್? ವೈ ಡಿಡ್ ಯು ನಾಟ್ ಬ್ರಿನ್ಗ್ ದಿ ಟೆಕ್ಸ್ಟ್ ಬುಕ್?' ಎಂದು ಮೇಷ್ಟ್ರು ಕಿರುಚುತ್ತಿದ್ದರು. `ಸರ್, ದಿಸ್ ಈಸ್ ಮೈ ಟೆಕ್ಸ್ಟ್ ಬುಕ್' ಎಂದು ಹೇಳುವಾಗ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಪುಸ್ತಕ ತರದಿದ್ದುದಕ್ಕೆ ಗೆಳತಿಗೆ ಏನು ಹೇಳಲಿಲ್ಲ, ಬೈಯಲಿಲ್ಲ. ನನ್ನ ಮೇಲೆ ಹೀಗೆ ಕಿರುಚಿದ್ದೇಕೆ ಎಂದು ಬೇಸರವಾಗಿತ್ತು. ತರಗತಿ ಮುಗಿದ ಮೇಲೆ ಮೂಲೆಯಲ್ಲಿ ಕಾಯುತ್ತ ನಿಂತಿದ್ದ ಮೇಷ್ಟ್ರು, `ಕಮಲ ಐ ಯಾಮ್ ಸಾರಿ, ರಿಯಲಿ ಸಾರಿ' ಎಂದರು. `ಅವಳನ್ನೇಕೆ ಬೈಯಲಿಲ್ಲ ಸರ್' ಎಂದು ಸಣ್ಣ ಕೋಪದಿಂದ ಕೇಳಿದೆ. ಆಗ ಅವರು ಹೇಳಿದ ಉತ್ತರ ನನಗಿನ್ನೂ ಚೆನ್ನಾಗಿ ನೆನಪಿದೆ. `ವೇಸ್ಟ್ ಆಫ್ ಟೈಮ್! ನಮ್ಮ ಮಾತುಗಳು ಅರ್ಥ ಆಗದವರ ಬಳಿ ಮಾತಾಡುವುದು ಚೀರಾಟ ಅಷ್ಟೇ' .
ಆದರೆ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮಾತುಗಳು ಚೀರಾಟದಂತೆ, ಆಕ್ರಂದನದಂತೆ ಕೇಳತೊಡಗುತ್ತದೆ. ನನ್ನ ವೃತ್ತಿಯ ಕೊನೆಯ ದಿನಗಳಲ್ಲಿ ತರಗತಿಗಳಲ್ಲಿ ಅನೇಕ ಬಾರಿ ನಾನು ಆಡುವ ಮಾತುಗಳು `ಸ್ವಗತ'ದಂತೆ ತೋರಿ, ನಿಲ್ಲಿಸಿಬಿಟ್ಟು ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸುತ್ತಿದ್ದೆ. ಮಾತು ಕೇಳದ, ಮಾತು ಅರ್ಥಮಾಡಿಕೊಳ್ಳದವರ ನಡುವೆ ನಾವು ಆಡುವ ಮಾತುಗಳಿಗೆ ಅರ್ಥವಿದೆಯೇ ಎಂದು ಯೋಚಿಸಿದ್ದೇನೆ. ಅದನ್ನು ಇನ್ನೊಂದು ಬಗೆಯಲ್ಲೂ ಹೇಳಬಹುದು. ಬಹುಶಃ ನಮ್ಮ ಮಾತುಗಳೇ ಅಪ್ರಸ್ತುತ, ವಿಚಿತ್ರ ಎಂದು ಯುವಕರಿಗೆ ಕಾಣುತ್ತಿರಬಹುದು. ಅದೆಲ್ಲವನ್ನು ಅರ್ಥಮಾಡಿಕೊಂಡೂ ಮತ್ತೆ ಮಾತಾಡುತ್ತೇವಲ್ಲ! ಆಗ ವಿಚಿತ್ರ ಅವಮಾನದಿಂದ ಕುದ್ದು ಹೋಗಿಬಿಡುತ್ತೇವೆ. ಎಷ್ಟೋ ಜನರು ತಮ್ಮನ್ನು ಕಡೆಗಣಿಸಿದರೆಂದು ಭಾವಿಸುತ್ತ, ಮತ್ತಷ್ಟು ಜೋರಾಗಿ ತಮ್ಮ ಇರವನ್ನು ಸ್ಥಾಪಿಸಲು, ಹಠ ತೊಟ್ಟು ಮಾತನಾಡಲು ಶುರು ಮಾಡುತ್ತಾರೆ. ಅದು ಟಿವಿ ನಿರೂಪಕರ ಕಿರುಚಾಟದಂತೆ ಕೇಳಿಸುತ್ತದೆ. ಮನೆಯ ಹಿರಿಯರು ಹೇಳುವ ವಿಚಾರಗಳನ್ನು ಮುದುಕರ `ಗೊಣಗಾಟ' ಎಂದು ಕರೆಯುವುದರಲ್ಲಿಯೇ ಅರ್ಥಗಳು ಅಡಗಿವೆ.
ಸೂಕ್ಷ್ಮ ವ್ಯಕ್ತಿಗೆ `ಕೋಡಂಗಿ'ಯಂತೆ ವೇದಿಕೆಯಲ್ಲಿ ಕುಣಿಯುವುದು, ಮಾತನಾಡುವುದು ಕಷ್ಟ. ಅದು ಸಹಜವಾದ ಅವನ ವ್ಯಕ್ತಿತ್ವವೇ ಆಗಿದ್ದರೆ, ವೃತ್ತಿ ಆಗಿದ್ದರೆ ಸರಿ. ಅದೇನು ಅಲ್ಲದೆ ಬರಿಯ ಖ್ಯಾತಿಗಾಗಿ, ಜನಪ್ರೀತಿಗಾಗಿ ನಾವು ಮಾಡುವ ಸರ್ಕಸ್ ಗಳು ಎದೆಯಲ್ಲಿ ಗಾಢ ವಿಷಾದವನ್ನಲ್ಲದೆ ಬೇರೇನನ್ನು ಹುಟ್ಟಿಸಲಾರದು. ನಮಗಾಗದ್ದನ್ನು ಆದಷ್ಟು `ಆಗುವುದಿಲ್ಲ' ಎಂದು ಗಟ್ಟಿ ದನಿಯಲ್ಲಿ ಹೇಳುವುದನ್ನು, ನಿರಾಕರಿಸುವುದನ್ನು ಮಾಡದಿದ್ದರೆ ಜೀವನವೆಲ್ಲ ದಾಕ್ಷಿಣ್ಯದಲ್ಲಿ ಕಳೆದು, ಎದೆಯೊಳಗೊಂದು ತೀವ್ರ ನೋವು ಉಳಿಸಿಕೊಂಡುಬಿಡುತ್ತೇವೆ. `ಅಕ್ಕಿ ಮೇಲಾಸೆ, ನೆಂಟರ ಮೇಲೆ ಪ್ರೀತಿ' ಎಂಬ ದ್ವಂದ್ವದಿಂದ ಹೊರಬರದೆ ಮುಕ್ತಿಯಿಲ್ಲ. ಆದರೆ ಅದಕ್ಕೊಂದು ದಿಟ್ಟತನ ಬೇಕು. ನಿಂದೆಯನ್ನು ಸಹಿಸಿಕೊಳ್ಳುವ ಶಕ್ತಿ ಬೇಕು. .
No comments:
Post a Comment