stat Counter



Tuesday, September 18, 2018

ಎಮ್. ಆರ್. ಕಮಲ - ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ

ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ!-ಎಂ. ಆರ್. ಕಮಲ
ಪುಟ್ಟು ಚಿಕ್ಕವನಿದ್ದಾಗ ಜಗತ್ತಿನ `ಸುಕುಮಾರ' `ಸುಕುಮಾರಿ'ಯರ ಕತೆಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದ. ಅದರಲ್ಲಿ `ವಡ್ಡಾರಾಧನೆ' ಯ `ಸುಕುಮಾರಸ್ವಾಮಿ'ಯ ಕಥೆ ಮತ್ತು `ರಾಜಕುಮಾರಿ ಮತ್ತು ಬಟಾಣಿ' ಎಂಬ ವಿದೇಶದ ಕತೆ ಬಹು ಮುಖ್ಯವಾದವು. ನಮ್ಮ ಜನಪದರು ಸಹ ಈ ವಿದೇಶಿ ಕಥೆಯಂತಹ ಅನೇಕ ಕತೆಗಳನ್ನು ಹೆಣೆದಿದ್ದಾರೆ. ರಾಜಕುಮಾರನೊಬ್ಬ ನಿಜವಾದ ರಾಜಕುಮಾರಿಯನ್ನು ಹುಡುಕಿಕೊಂಡು , ದೇಶ ವಿದೇಶ ಸುತ್ತಿ ಕೊನೆಗೆ ಯಾರನ್ನು ಒಪ್ಪದೇ ಮನೆ ಸೇರುತ್ತಾನೆ. ತಂದೆ-ತಾಯಿಗಳು ಬೇಸತ್ತು ಹೋಗಿರುವಾಗ ಒಂದು ರಾತ್ರಿ ಭಯಂಕರವಾದ ಮಳೆ ಆರಂಭವಾಗುತ್ತದೆ. ಬಿರುಗಾಳಿ ಬೇರೆ! ಅವೇಳೆಯಲ್ಲಿ ಯಾರೋ ಬಾಗಿಲು ತಟ್ಟಿದ ಶಬ್ದ! ತಂದೆ ಹೋಗಿ ನೋಡಿದರೆ ನಿಜವಾದ ರಾಜಕುಮಾರಿ ಬಾಗಿಲಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿದ್ದಾಳೆ. ಅವಳನ್ನು ಒಳಗೆ ಕರೆದು, ಉಡುಪು ಬದಲಿಸಲು ಹೇಳಿದ ರಾಜಕುಮಾರನ ತಾಯಿ ಅವಳು ನಿಜವಾದ ರಾಜಕುಮಾರಿಯೋ ಅಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಒಂದು ಉಪಾಯ ಮಾಡುತ್ತಾಳೆ. ಮೆತ್ತನೆಯ ಹಾಸಿಗೆಯ ಮೇಲೆ ಮತ್ತೆ ಇಪ್ಪತ್ತು ಮೆತ್ತನೆಯ ಹಾಸಿಗೆಗಳನ್ನು ಹಾಸಿ, ಕೆಳಗಿದ್ದ ಹಾಸಿಗೆಯ ಕೆಳಗೆ ಒಂದು ಬಟಾಣಿ ಇಡುತ್ತಾಳೆ. ರಾಜಕುಮಾರಿ ಹೂವಿನ ಏಣಿಯನ್ನೇರಿ ಹಾಸಿಗೆಯಲ್ಲಿ ಮಲಗುತ್ತಾಳೆ. ಬೆಳಗ್ಗೆ ಬಂದು ತಾಯಿ ನೋಡಿದರೆ ಕಣ್ಣುಗಳೆಲ್ಲ ಕೆಂಪಾಗಿ, ತಲೆ ಕೆದರಿಕೊಂಡು ನಿದ್ದೆಯನ್ನೇ ಮಾಡದೆ ಇಡೀ ರಾತ್ರಿಯನ್ನು ರಾಜಕುಮಾರಿ ಕಳೆದಿದ್ದಾಳೆ. ರಾಜಕುಮಾರನ ತಾಯಿ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಾಸಿಗೆಯಲ್ಲಿ ಏನೋ ಒತ್ತುತ್ತಿದ್ದರಿಂದ ನಿದ್ದೆ ಬರಲಿಲ್ಲವೆಂದು ತಿಳಿಸುತ್ತಾಳೆ! ಆಗ ಗಂಡ-ಹೆಂಡತಿ ಇವಳು ನಿಜವಾದ ರಾಜಕುಮಾರಿ ಎಂದು ನಿರ್ಧರಿಸಿ ಮಗನನ್ನು ಮದುವೆಗೆ ಒಪ್ಪಿಸುತ್ತಾರೆ. ನಿಮಗೆಲ್ಲ ಈ ಕಥೆ ಹೇಳುವುದಕ್ಕೆ ದೊಡ್ಡ ಕಾರಣವಿದೆ.
ನಿನ್ನೆ ರಾತ್ರಿ ಕಣ್ಣೆಳೆಯಿತು ಎಂದು ಮಂಚದ ಮೇಲೆ ಹೊದಿಕೆಯನ್ನು ಹೊದ್ದುಕೊಳ್ಳದೆ, ದಿಂಬನ್ನು ಇಟ್ಟುಕೊಳ್ಳದೆ ಮಲಗಿಬಿಟ್ಟಿದ್ದೆ. ಪಾಪ ರಮೇಶ್, ಸಿನಿಮಾದಲ್ಲಿ ಹೆಂಡತಿಯರನ್ನು ನೋಡಿಕೊಳ್ಳುವಂತೆ ಒಂದು ಹೊದಿಕೆಯನ್ನು ಹೊದ್ದಿಸಿದ್ದಾರೆ, ದಿಂಬನ್ನು ಇಟ್ಟಿದ್ದಾರೆ. ಹತ್ತಾರು ದಿನದಿಂದ ನನ್ನ ದಿಂಬು ಹತ್ತಿಯನ್ನೆಲ್ಲ ಉದುರಿಸಿಕೊಂಡು, ನೆಪಕ್ಕೆ ಮಾತ್ರ ದಿಂಬಿನಂತೆ ಕಾಣುತ್ತಿದೆ ಎಂದು ಗಂಡನಿಗೆ ಒಮ್ಮೆ ಹೇಳಿದ್ದೆ. ಇಷ್ಟೆಲ್ಲಾ ದುರವಸ್ಥೆಯಲ್ಲಿರುವ, ದಿಂಬಿನಂತೆಯೂ ಕಾಣದ ಇದರ ಬಗ್ಗೆ ನನಗೆ ಕೊನೆಯಿರದ ವ್ಯಾಮೋಹ. ನನ್ನ ಮೂವತ್ತೈದು ವರ್ಷದ ಹೊದಿಕೆಯದು ಇನ್ನೊಂದು ಕತೆ. ಅದು ಅಲ್ಲಲ್ಲಿ ಎಳೆ ಬಿಟ್ಟು, ಕಂಡಿಗಳಾಗಿ, ಫ್ಯಾನ್ ಗಾಳಿ ಜೋರಾಗಿ ಬೀಸುವಾಗ ಒಂದು ಕಂಡಿಯಲ್ಲಿ ಮೂಗನ್ನಿಟ್ಟುಕೊಂಡು, ಗಾಳಿ ಹೀರುತ್ತಲೇ ಬೆಚ್ಚಗೆ ಮಲಗುವ ಸೌಭಾಗ್ಯ ಈ ಹೊದಿಕೆಯಿಂದ ಮಾತ್ರ ಸಿಗುವುದು. ಜೊತೆಗೆ ಒಗೆದು, ಒಗೆದು ಅದೆಷ್ಟು ಮೆತ್ತಗಾಗಿದೆ ಎಂದರೆ ಮೈಮೇಲಿರುವುದೂ ಗೊತ್ತಾಗುವುದಿಲ್ಲ. ಮಕ್ಕಳು ನನ್ನ ಹೊದಿಕೆ, ದಿಂಬುಗಳನ್ನು ನೋಡಲಾರದೆ ಹೊಸದನ್ನು ತಂದುಕೊಟ್ಟರು. ಪುಟ್ಟುವಂತೂ ಫ್ರಾನ್ಸ್ ನಿಂದ ಮೆತ್ತಗೆ ಇರುವ ಹೊದಿಕೆಗಳನ್ನು ನನಗೆ, ಗಂಗಮ್ಮನಿಗೆ ಒಂದು ದೊಡ್ಡ ಸೂಟ್ ಕೇಸ್ ನಲ್ಲಿ ಹಾಕಿಕೊಂಡು ತಂದ. ನಾನು ಒಂದು ದಿನವೂ ಹೊದ್ದುಕೊಳ್ಳಲಿಲ್ಲ. ರಾತ್ರಿ ನನ್ನ ಕಾಲ ಬಳಿ ನಿದ್ರಿಸುವ ಕಾಳ ಅದರ ಮೇಲೆ ಸುಖವಾಗಿ ಗೊರಕೆ ಹೊಡೆಯುತ್ತಿರುತ್ತಾನೆ. ನಿನ್ನೆ ನಾನು ನಿದ್ರಿಸಿದ ಮೇಲೆ ನನ್ನ ಗಂಡ ಅನುಕಂಪಗೊಂಡು ನನ್ನ ದಿಂಬಿಗೆ ಒಂದಿಷ್ಟು ಹತ್ತಿಯನ್ನು ತುರುಕಿ, ಅದಕ್ಕೊಂದು ಆಕಾರ ಕೊಟ್ಟು, ಮೆತ್ತಗೆ ಮಾಡಿ ತಲೆಗಿಟ್ಟಿದ್ದಾನೆ. ಒಳ್ಳೆಯದೊಂದು ಹೊದಿಕೆಯನ್ನು ಬೇರೆ ಹೊದಿಸಿದ್ದರಲ್ಲ! ಮಲಗಿ ಸ್ವಲ್ಪ ಹೊತ್ತಿಗೆ ನನಗೆ ಎಚ್ಚರಾಗಿ ಹೋಯಿತು. ಏನು ಮಾಡಿದರೂ ನಿದ್ದ ಬರುತ್ತಿಲ್ಲ. ಒಂದು, ಎರಡು ಎಣಿಸಿ ನೋಡಿದೆ. ಪಕ್ಕದಲ್ಲಿದ್ದ ಕಾಳನನ್ನು ಮಾತಾಡಿಸಿದೆ. ತಲೆ ಕಿತ್ತುಕೊಂಡೆ, ಕಣ್ಣುಗಳು ಕೆಂಪಗಾದವು. ಬೆಳಗ್ಗೆ ನಾಲ್ಕು ಗಂಟೆಯಾಗುವುದನ್ನೇ ಕಾಯುತ್ತ ಲೈಟ್ ಹಾಕಿದೆ. ನನ್ನ ಗಂಡ ಎದ್ದು ನೋಡುತ್ತಾನೆ. `ರಾಜಕುಮಾರಿ ಮತ್ತು ಬಟಾಣಿ' ಕಥೆಯ ರಾಜಕುಮಾರಿಯಂತಾಗಿ ಒದ್ದಾಡುತ್ತಿದ್ದೇನೆ. `ಪುಟ್ಟು ಊರಲ್ಲಿ ಇಲ್ಲ, ಇಷ್ಟು ಬೇಗ ಎದ್ದು ಏನು ಮಾಡಬೇಕು?ಮಲಕ್ಕೋ, ಮುಖ ನೋಡ್ಕೋ ಹೇಗಾಗಿದೆ?' ಎಂದು ಬೈದು, ತನ್ನ ನಿದ್ದೆಯನ್ನು ಕೆಡಿಸಿದ್ದಕ್ಕೆ ಗೊಣಗಿದ. ನಾನು ಕಣ್ಣು ಬಿಟ್ಟು ನೋಡಿ ಹೌಹಾರಿದೆ!
ದಿಂಬನ್ನು ಯಾರೋ ಸರಿಮಾಡಿದ್ದಾರೆ! ಯಾವುದೋ ಹೊದಿಕೆಯನ್ನು ಹೊದಿಸಿಬಿಟ್ಟಿದ್ದಾರೆ. ಹತ್ತಿಯೆಲ್ಲ ಮೂಲೆ ಸೇರಿ, ಒಂದು ಕಡೆ ಕಲ್ಲಿನಂತಾಗಿದ್ದ, ಒಂದು ಕಡೆ ಹತ್ತಿಯೇ ಇಲ್ಲದೆ ಟೊಳ್ಳಾಗಿದ್ದ ನನ್ನ ದಿಂಬಿನ ಸ್ವರೂಪ ಬದಲಾಗಿ ಹೋಗಿದೆ. ಜೊತೆಗೆ ಯಾವುದೋ ಮೆತ್ತೆಯನ್ನು ಬೇರೆ ಹೊದ್ದಿಸಿ ನನಗೆ ನಿದ್ರೆ ಬಾರದಂತಾಗಿದೆ ಎಂದು ಹೊಳೆಯಿತು. `ಯಾರು ನನ್ನ ದಿಂಬು ಮುಟ್ಟಿದ್ದು?' ಕಿರುಚಿದೆ. ಅವಳು ಯಾವಳೋ ರಾಜಕುಮಾರಿಗೆ ಬಟಾಣಿ ಒತ್ತಿ ನಿದ್ದೆ ಬಂದಿಲ್ಲ, ನನಗೆ ಈ ಕಲ್ಲಿನ ದಿಂಬು ಒತ್ತದೆ ನಿದ್ದೆ ಬಂದಿಲ್ಲ! ನನ್ನ ಈ ವಿಚಿತ್ರ ವರ್ತನೆ ನನ್ನ ಗಂಡನಿಗೆ ಆಘಾತ ಉಂಟು ಮಾಡಿರಬೇಕು. ನಾನು ಚಿಕ್ಕವಳಿದ್ದಾಗ ನನ್ನ ತಂದೆ ಕೊಬ್ಬರಿ ಸುಲಿಸಿ, ಒಳ್ಳೆ ರೇಟ್ ಬರಲಿ, ಆಮೇಲೆ ಮಾರೋಣ ಎಂದು ಮೂಟೆಗಳಲ್ಲಿ ಅದನ್ನು ತುಂಬಿ ನಡುಮನೆಯಲ್ಲಿ ಸಾಲಾಗಿ ಇಟ್ಟಿರುತ್ತಿದ್ದರು. ಆಗ ಮನೆಯಲ್ಲಿ ಮಂಚ ಇರಲಿಲ್ಲ. ನನಗೆ ಈ ಕೊಬ್ಬರಿ ಮೂಟೆಗಳು ಮಂಚದಂತೆ ಕಂಡು ಖುಷಿಯಾಗಿ ರಾತ್ರಿ ಅವುಗಳ ಮೇಲೆ ಕೂತು ಓದಿಕೊಳ್ಳುತ್ತಿದ್ದೆ. ಹಾಗೆ ನಿದ್ದೆ ಮಾಡಿಬಿಡುತ್ತಿದ್ದೆ. ಈ ಕಲ್ಲಿನಂಥ ಕೊಬ್ಬರಿ ಗಿಟುಕಿನ ಮೇಲೆ ನಿದ್ದೆ ಮಾಡುತ್ತೆ ಪಾಪ ಅಂತ ಅಮ್ಮ ಯಾವುದೋ ಹೊತ್ತಿನಲ್ಲಿ ಎಳೆದು ಹಾಸಿಗೆಗೆ ಹಾಕಿರುತ್ತಿದ್ದಳು. ಆ ಹಾಸಿಗೆಗಳೇನೂ ಹಂಸ ತೂಲಿಕಾ ತಲ್ಪಗಳಾಗಿರಲಿಲ್ಲ. ಅಲ್ಲಲ್ಲಿ ಹತ್ತಿ ಗಂಟು ಕಟ್ಟಿಕೊಂಡು ಹೋಗಿರುತ್ತಿತ್ತು. ದಿಂಬುಗಳಿಗೂ ಕಲ್ಲುಗಳಿಗೂ ಅಂತಹ ವ್ಯತ್ಯಾಸ ಕೂಡ ಇರುತ್ತಿರಲಿಲ್ಲ!
ವರ್ಷಕ್ಕೊಮ್ಮೆ ಸಾಬಣ್ಣ ತನ್ನ ಉಪಕರಣಗಳನ್ನು ದೊಡ್ಡ ಚೀಲಕ್ಕೆ ತುಂಬಿಕೊಂಡು ಹಾಸಿಗೆ ಮಾಡಿಕೊಡಲು ಬರುತ್ತಿದ್ದ. ಆ ದಿನ ಅಂಗಳಕ್ಕೆ ಅಥವಾ ಜಗುಲಿಗೆ ಮನೆಯಲ್ಲಿದ್ದ ಹತ್ತಾರು ಹಾಸಿಗೆಗಳು ವರ್ಗಾವಣೆಯಾಗುತ್ತಿದ್ದವು. ಮೊದಲು ಹಾಸಿಗೆಯ ಹೊಲಿಗೆಗಳನ್ನು ಬಿಚ್ಚುವುದು, ನಂತರ ಒಳಗಿದ್ದ ಹತ್ತಿಯನ್ನೆಲ್ಲ ಮಂದಳಿಗೆ ಚಾಪೆ ಮೇಲೆ ಹಾಕುವುದು. ಸಾಬಣ್ಣ . ತಂಬೂರಿ ತರಹ ಎಂಥದ್ದೋ ಒಂದು ಉಪಕರಣ ತರುತ್ತಿದ್ದ. ಅದಕ್ಕೆ ಒಂದೋ, ಎರಡೂ ದಪ್ಪ ತಂತಿಗಳು. ಆ ತಂತಿಯಲ್ಲಿ ಮೀಟಿಕೊಂಡು ಹತ್ತಿಯನ್ನು ಮೃದು ಮಾಡುತ್ತಿದ್ದ. ಆ ಸಮಯದಲ್ಲಿ ಅಂಗಳದ ತುಂಬಾ ಹಾರುತ್ತಿದ್ದ ಹತ್ತಿಯನ್ನು ಹಿಡಿಯಲು ನಾವು ಖುಷಿಯಿಂದ ಓಡುತ್ತಿದ್ದೆವು. ಅವು ಗಿಡದ ಮೇಲೆ, ಹೆಂಚಿನ ಮೇಲೆಲ್ಲಾ ಕೂತಿರುತ್ತಿದ್ದವು. ಹೊಸ ಹಾಸಿಗೆಯ ಕವರ್ ಬೇಕೆಂದರೆ ಮೊದಲೇ ಹೊಲಿದು ತಂದಿದ್ದ (ಒಂದು ಭಾಗವನ್ನು ಬಿಟ್ಟು) ಪಟಾ ಪಟಿ ಡಿಸೈನ್ ಬಟ್ಟೆಗೆ ಈ ಹತ್ತಿಯನ್ನು ತುಂಬಿ, ಹತ್ತಿ ಹಾಸಿಗೆಯಲ್ಲಿ ಜಾರದಂತೆ ಮಧ್ಯೆ ಮಧ್ಯೆ ಒಂದೊಂದು ಟಾಕ್ ಹಾಕಿ ಹೊಲಿದುಕೊಡುತ್ತಿದ್ದ. ಆಮೇಲೆ ಸರಿಯಾಗಿ ಕೂರುವಂತೆ ಯಾವುದೋ ಬಡಿಗೆಯಿಂದ ಬಡಿಯುವುದು ಇತ್ಯಾದಿ. ಅವತ್ತು ಸಾಬಣ್ಣನಿಗೆ ಊಟ, ತಿಂಡಿಯೆಲ್ಲ ನಮ್ಮ ಮನೆಯಲ್ಲೇ. ಅವನ ಕಥೆಯನ್ನು ಕೇಳಿಕೊಂಡು ಸುತ್ತ ನಾಲ್ಕಾರು ಜನ ಕುಳಿತಿರುತ್ತಿದ್ದರು. ನಾವು ಮಕ್ಕಳು ಹತ್ತಿಯನ್ನು ಅಂಗಳದ ತುಂಬಾ ಹಾರಿಸಿಕೊಂಡು, ಅಮ್ಮನ ಹತ್ತಿರ ಬೈಸಿಕೊಂಡು ಓಡಾಡುವುದು. ಆದರೆ ಹಾಸಿಗೆಯ ಮೇಲೆ ನಾವು ಕುಣಿಯುತ್ತಿದ್ದ ಪರಿಗೆ ಬಹುಬೇಗನೆ ಹಾಸಿಗೆಗಳು ಕಲ್ಲಾಗಿ, ಟೊಳ್ಳಾಗಿ ಹೋಗುತ್ತಿದ್ದವು. ಈ ರೀತಿ ಬಾಲ್ಯವನ್ನು ಕಳೆದ ನನಗೆ ಒಳ್ಳೆಯ ಹೊದಿಕೆ, ದಿಂಬುಗಳು ಶತ್ರುಗಳಂತೆ ಕಂಡಿದ್ದು ಅಚ್ಚರಿಯೇನಲ್ಲ. ಬೆಳಗ್ಗೆ ಬಂದ ಸಿಟ್ಟಿಗೆ ದಿಂಬಿನ ಮೂಲೆಯಲ್ಲಿನ ಹೊಲಿಗೆಯನ್ನು ಕಿತ್ತು, ಒಂದಿಷ್ಟು ಹತ್ತಿಯನ್ನು ತೆಗೆದೆಸೆದೆ. ನನ್ನ ಗಂಡ ಇಂಥ ವಿಚಿತ್ರ ಹೆಂಗಸನ್ನು ಬೇರೆಲ್ಲೂ ಕಂಡಿಲ್ಲ ಎನ್ನುವಂತೆ ನೋಡಿದ. ಈ ಮೆತ್ತನೆಯ ದಿಂಬಿನ ಮೇಲೆ ಮಲಗಿ, ಕತ್ತು ಬೇರೆ ಉಳುಕಿ, ಬರೆಯಲು ಒದ್ದಾಡುತ್ತಿದ್ದೇನೆ! ನನಗೆ ಹೊದಿಕೆ ಹೊದಿಸಿ, ದಿಂಬು ಸರಿ ಮಾಡಿಕೊಟ್ಟಿದ್ದಕ್ಕೆ ಇವತ್ತು ಇಡೀ ದಿನ ಬೈಗುಳವನ್ನು ಬೇರೆ ಕೇಳಬೇಕು!
`ಪುಷ್ಪಕ ವಿಮಾನ' ಮೂಕಿ ಚಿತ್ರದಲ್ಲಿ ಹೋಟೆಲ್ ನಲ್ಲಿ ನಿದ್ದೆ ಬಾರದೆ, ತಾನಿದ್ದ ಮನೆಗೆ ಮರಳಿ ಬಂದು, ಪಕ್ಕದ ಟೆಂಟಿನ ಚಲನಚಿತಗಳ ವಿಚಿತ್ರ ಸದ್ದುಗಳನ್ನು ರೆಕಾರ್ಡ್ ಮಾಡಿಕೊಂಡು, ಹೋಟೆಲ್ ಗೆ ಮರಳಿ, ಅವುಗಳನ್ನು ಹಾಕಿಕೊಂಡು ಕೇಳುತ್ತ ಮಲಗುತ್ತಾನಲ್ಲ ಹಾಗಾಗಿದೆ ನನ್ನ ಸ್ಥಿತಿ. ಮೀನಿನ ಪೇಟೆಯಲ್ಲಿರುವವರಿಗೆ ಮೀನಿನ ವಾಸನೆಯಿಲ್ಲದೆ ಬದುಕಲು ಸಾಧ್ಯವಾಗದಂತೆ. ಇದ್ದಕ್ಕಿದ್ದಂತೆ ನೀವ್ಯಾರು ದಯವಿಟ್ಟು ನಮ್ಮ ಮನೆಗೆ ಬರಬೇಡಿ. ನಾನು ಹಾಕಿಕೊಳ್ಳುವ ಕಿತ್ತುಹೋದ ಬಟ್ಟೆಗಳು, ಅವತಾರಗಳನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿದ್ದ ನನ್ನ ರೂಪ ಅಳಿದುಹೋಗಬಹುದು!.

No comments:

Post a Comment