Deactivate ' ಎಂಬ ಕ್ರೌರ್ಯ!
ಈ ಮೂರುವರ್ಷಗಳಿಂದ, ಅದರಲ್ಲೂ ಮೊಗಹೊತ್ತಿಗೆಯನ್ನು (ಫೇಸ್ಬುಕ್) ಹೆಚ್ಚು ಬಳಸತೊಡಗಿದ ಮೇಲೆ ಒಂದು ವಿಷಯ ನನ್ನ ತಲೆಯನ್ನು ಕೊರೆಯುತ್ತಿದೆ. ಈ ಮೊಗಹೊತ್ತಿಗೆಯಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುವ (ಕಲೆ, ಸಂಗೀತ, ಕವನ, ಕಸೂತಿ, ಹೊಸ ಬಗೆಯ ಉಡುಪುಗಳು, ಮಾತು ಇತ್ಯಾದಿ ಇತ್ಯಾದಿ) ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು ಏಕೆ? ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ `deactivate ' ಮಾಡಿಕೊಳ್ಳುವುದು. ಈ ಪದವೇ ಎಷ್ಟು ಕ್ರೂರವಾಗಿದೆ ನೋಡಿ! ಚಟುವಟಿಕೆಯಿಂದಿದ್ದ ಹೆಣ್ಣುಮಕ್ಕಳು ಇಲ್ಲಿ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವುದು! ಮೊಗಹೊತ್ತಿಗೆಯ ಆಚೆಗೂ ಇದೆಲ್ಲವನ್ನು ಅವರು ಮಾಡುತ್ತಿರಬಹುದು. ಆದರೆ ತಮ್ಮ ಕಲೆಯನ್ನು ವಿಶಾಲ ನೆಲೆಯಲ್ಲಿ ಪ್ರಕಟಿಸಿ, ಬರುವ ಸಣ್ಣ ಪುಟ್ಟ ಪ್ರೋತ್ಸಾಹದ ನುಡಿಗಳಿಂದ ಬದುಕನ್ನು ಆತ್ಮವಿಶ್ವಾಸದಿಂದ ನಡೆಸುವುದಕ್ಕೆ ಸಾಧನವಾಗಿದ್ದ ಮೊಗಹೊತ್ತಿಗೆಯೇ ಅವರನ್ನು ಇಲ್ಲಿಂದ ಆಚೆಗಟ್ಟುತ್ತಿರುವುದು ನನ್ನನ್ನು ಚಿಂತಾಕ್ರಾಂತಳನ್ನಾಗಿಸುತ್ತದೆ. ಗಂಡಸೊಬ್ಬ ಇಲ್ಲಿಂದ ಹೋದರೆ ಅದು ಪುಸ್ತಕ ಬರೆಯುವುದಕ್ಕೋ, ಪ್ರವಾಸ ಹೋಗುವುದಕ್ಕೋ ಅಥವಾ ಮನೆಯಲ್ಲಿ ಯಾರಿಗೋ ತೊಂದರೆಯಾಗಿದೆ ಎನ್ನುವ ಕಾರಣಕ್ಕೋ ಇರುತ್ತದೆ. ಆದರೆ ಹೆಣ್ಣೊಬ್ಬಳು ಇಲ್ಲಿಂದ ಕಣ್ಮರೆಯಾದರೆ ಕಾರಣಗಳು ಅಷ್ಟು ಸುಲಭದ್ದಾಗಿರುವುದಿಲ್ಲ. ಬರೆಯುವ ಹುಡುಗಿ ಸ್ವಲ್ಪ ನಿರ್ಭಿಡೆಯವಳಾಗಿದ್ದರೆ ಅವಳ ಮೇಲೆ ಗುಂಪು ದಾಳಿ ನಡೆಸುತ್ತಾರೆ. ಅಶ್ಲೀಲವಾಗಿ ಬರೆದು ಖುಷಿ ಪಡುತ್ತಾರೆ. ಅವಳ ಹೆಸರನ್ನು ಯಾರಿಗೋ ಕಟ್ಟಿ ಮಾನವನ್ನು `ಹರಾಜು' (?) ಮಾಡಿ ಬರೆಯದಂತೆ ಮಾಡಿಬಿಡುತ್ತೇವೆ ಎಂದು ಮಾನಗೇಡಿಗಳು ಭ್ರಮಿಸುತ್ತಾರೆ. ಇದೆಲ್ಲವನ್ನು ಮಾಡುವವರು ಯಾರೂ ಅವಿದ್ಯಾವಂತರಲ್ಲ. ಆ ಹೆಣ್ಣುಮಗಳು ತಮ್ಮ ಗುಂಪಿನವಳೋ ಅಲ್ಲವೋ ಎನ್ನುವುದರ ಮೇಲೆ ಈ ದ್ವೇಷಾಸೂಯೆಗಳೆಲ್ಲ ನಿರ್ಧಾರವಾಗುತ್ತದೆ. ತಾವು ಹೇಳಿದ ವಿಚಾರಗಳನ್ನು ಒಪ್ಪುವುದಿಲ್ಲ ಎನ್ನುವ ಪುರುಷಾಹಂಕಾರ ಮೆರೆಯತೊಡಗುತ್ತದೆ.
ಒಮ್ಮೆ ಕಾಲೇಜಿನ ಸಹೋದ್ಯೋಗಿಯೊಬ್ಬಳನ್ನು, `ಯಾಕಮ್ಮ ಫೇಸ್ ಬುಕ್ ನಲ್ಲಿ ಬರೆಯುವುದನ್ನು ನಿಲ್ಲಿಸಿದೆ?' ಎಂದು ಕೇಳಿದೆ. ಅವಳು ಹೇಳಿದ ಉತ್ತರ ಕೇಳಿ ದಂಗಾದೆ. ವಯೋ ಸಹಜವಾಗಿ ಯಾವುದೋ ಆಧುನಿಕ ಉಡುಪು ತೊಟ್ಟು, ಕರಿಮಣಿ ಸರ ಅದಕ್ಕೆ ಹೊಂದುವುದಿಲ್ಲವೆಂದು ತೆಗೆದು ಪರ್ಸ್ ನಲ್ಲಿ ಇಟ್ಟು ಫೋಟೋ ತೆಗೆಸಿಕೊಂಡಿದ್ದಳಂತೆ. ಅದನ್ನು ಫೇಸ್ಬುಕ್ ನಲ್ಲಿ ನೋಡಿದ ಅತ್ತೆ, ಎಲ್ಲಿಂದಲೋ ಫೋನ್ ಮಾಡಿ ಬಾಯಿಗೆ ಬಂದ ಹಾಗೆ ಬೈದರಂತೆ. ನಿನ್ನ ತವರು ಮನೆಯಲ್ಲಿ ಹೀಗಿರಬಹುದು. ನಮ್ಮ ಮನೆಯಲ್ಲಿ ಇದೆಲ್ಲ ನಡೆಯುವುದಿಲ್ಲ ಎಂದರಂತೆ. ನನಗೆ ಮೈಯೆಲ್ಲಾ ಉರಿದುಹೋಯಿತು. `ಮೇಡಂ, ನೀವು ಕರಿಮಣಿ ಸರ ಹಾಕಿಕೊಂಡಿರುತ್ತೀರಲ್ಲ, ಅದಕ್ಕೆ ಇದನ್ನು ಹೇಳಲು ಸಂಕೋಚವಾಯಿತು' ಎಂದಳು. `ಅಯ್ಯೋ, ನನಗೆ ಅಲಂಕಾರ ಇಷ್ಟ ಎಂದು ಹಾಕಿಕೊಳ್ಳುತ್ತೇನೆ ಅಷ್ಟೇ, ನನ್ನನ್ನು ಮನೆಗೆ ಬಂದು ನೋಡು, ಬೇಡವಾದಾಗ ಎಲ್ಲವನ್ನು ತೆಗೆದಿಟ್ಟು ಆರಾಮಾಗಿರುತ್ತೇನೆ' ಎಂದೆ. ಅವಳು ಬಹಳ ಒಳ್ಳೆಯ ಹುಡುಗಿ, ಅತ್ತೆ ಹೀಗೆಲ್ಲ ಗಮನಿಸುತ್ತಾರೆ ಎಂದು ತಿಳಿದ ತಕ್ಷಣ ಮೊಗಹೊತ್ತಿಗೆಯಿಂದ ಕಣ್ಮರೆಯಾಗಿದ್ದಳು. ಹೆಣ್ಣನ್ನು ಸೆರೆಹಿಡಿದು ಬಂಧಿಸುವುದಕ್ಕೆ ಇವೆಲ್ಲ ವಿಷಯಗಳೇ ಎಂದು ಅಚ್ಚರಿಯಾಗುತ್ತದೆ. ಇನ್ನೊಬ್ಬಳು ಸಹೋದ್ಯೋಗಿ ಚಂದವಾಗಿ ಹಾಡುತ್ತಿದ್ದಳು. ಆಗಾಗ್ಗೆ ತಾನು ಹಾಡಿದ ಹಾಡನ್ನು ಅಪ್ಲೋಡ್ ಮಾಡುತ್ತಿದ್ದಳು. `ಈ ವಯಸ್ಸಿನಲ್ಲಿ ನಿನ್ನ ಅವತಾರ ಏನಮ್ಮ?' ಎಂದು ಮಗ ಬೈದು ನಿಲ್ಲಿಸಿದನಂತೆ. ಹೀಗೆ ಗಂಡ ಬೈದ, ಮಗ ಬೈದ, ಗೆಳೆಯ ಬೈದ, ಅತ್ತೆ ಬೈದರು, ಮಾವ ಬೈದರು ಎಂದೆಲ್ಲ ಸಹಜವಾಗಿ ವ್ಯಕ್ತವಾಗುವ ಚೈತನ್ಯವನ್ನು ಕಟ್ಟಿ ಹಿಡಿಯುವ ವ್ಯಕ್ತಿಗಳ ಬಗ್ಗೆ ಯೋಚಿಸುವಾಗ ಇನ್ನಷ್ಟು ಹಿಂದಕ್ಕೆ ಹೋಗುತ್ತಿರುವ ಸಮಾಜದ ಬಗ್ಗೆ ತೀವ್ರ ಆತಂಕವಾಗುತ್ತದೆ.
`ಕರಿ'ಮಣಿಯನ್ನು ಶ್ರೇಷ್ಠ ಎಂದು ವಾದಿಸುವವರೇ `ಕಪ್ಪು ಬಣ್ಣ' ವನ್ನು ಹೀಗಳೆಯುತ್ತಾರೆ. ನಾನು ಮೊದಲಿನಿಂದಲೂ `ಐ ಲೈನರ್' ನಲ್ಲಿ ಚಂದದ ಕುಂಕುಮದ ವಿನ್ಯಾಸಗಳನ್ನು ಬರೆದುಕೊಳ್ಳುತ್ತಿದ್ದೆ. ಆಗೆಲ್ಲ ಅನೇಕ ಗೆಳತಿಯರು ಕಪ್ಪು ಕುಂಕುಮವನ್ನು ಇಟ್ಟುಕೊಳ್ಳುವ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಸ್ವಲ್ಪ ದಿನಗಳಲ್ಲಿ ಅವರು ನನ್ನನ್ನು ಅನುಸರಿಸಿದರು ಎಂದು ಬೇರೆ ಹೇಳಬೇಕಿಲ್ಲ. ಅಮ್ಮ ಕಪ್ಪು ಬಣ್ಣವನ್ನು ತುಂಬಾ ಪ್ರೀತಿಸುತ್ತಿದ್ದಳು. ಅಂಗಡಿಗೆ ಕರೆದುಕೊಂಡು ಹೋದಾಗೆಲ್ಲ ಕಪ್ಪು ಬಣ್ಣದ ಸೀರೆಯನ್ನು ನೋಡಿ ನಿಟ್ಟುಸಿರುಬಿಡುತ್ತಿದ್ದಳು. `ತಗೊಳ್ಳಮ್ಮ' ಎಂದರೆ `ಗಂಡನಿಗೆ ಶ್ರೇಯಸ್ಸಲ್ಲ ಅಂತ ನೆರೆಯವರುಆಡಿಕೊಳ್ಳುತ್ತಾರೆ ಕಣೆ' ಎನ್ನುತ್ತಿದ್ದಳು. ಅಂತೂ ಅಮ್ಮ ಊರು ಬಿಟ್ಟ ಮೇಲೆ ಕಪ್ಪು ಬಣ್ಣದ ಮೈಸೂರ್ ಸಿಲ್ಕ್ ಸೀರೆಯೊಂದನ್ನು ಬೈದು ಅಕ್ಕಂದಿರು ಅಂಗಡಿಗೆ ಹೋಗಿ ತಂದುಕೊಟ್ಟರು. ಅದನ್ನು ತಂದ ಮೇಲೆ ಉಟ್ಟು, ಅಣ್ಣನಿಗೆ ಏನಾದರೂ ಆದರೆ ಎಂದು ಅದೆಷ್ಟು ಹೆದರಿದ್ದಳೆಂದರೆ ಆರು ತಿಂಗಳು ಅವಳ ಬೀರುವಿನಲ್ಲಿ ಸೀರೆ ಹಾಗೇ ಕೂತಿತ್ತು. ಕೊನೆಗೆ ಮಕ್ಕಳು ಕೊಟ್ಟ ಧೈರ್ಯದ ಮೇಲೆ ಎಪ್ಪತ್ತನೆಯ ವಯಸ್ಸಿನಲ್ಲಿ ಉಟ್ಟು ಸಂಭ್ರಮಿಸಿದಳು! ಅಣ್ಣ ಅದಾದ ಮೇಲೂ ಎಷ್ಟೋ ವರ್ಷಗಳ ಕಾಲ ಆರೋಗ್ಯವಾಗಿದ್ದರು ಎಂದು ಹೇಳಬೇಕಿಲ್ಲ!
ಮೊಗಹೊತ್ತಿಗೆಯಲ್ಲಿ ಇಂಥ ಮನಸ್ಸುಗಳೇ ಹೆಣ್ಣನ್ನು, ಅವಳ ವಿಚಾರಗಳನ್ನು ಬಂಧಿಸಲು ಯತ್ನಿಸುತ್ತಿವೆ. ನನ್ನನ್ನೂ ಸೇರಿ ಈ ಅನುಭವಕ್ಕೆ ಪಕ್ಕಾಗದವರು ಯಾರಾದರೂ ಇಲ್ಲಿ ಇದ್ದಾರೆಯೇ? `ಒಂದು ಕೆಟ್ಟ ಚಿತ್ರದ ಬಗ್ಗೆ ಅಭಿಪ್ರಾಯವನ್ನು ಹೇಳಿದ್ದಕ್ಕೆ ಅದೆಷ್ಟು ಜನ ನನ್ನ ಮೇಲೆ ಮುಗಿಬಿದ್ದಿದ್ದರು! ಎಷ್ಟೋ ಮನೆಗಳೇ ಈ ಮೊಗಹೊತ್ತಿಗೆಯಿಂದ ಹಾಳಾಗಿವೆಯಂತೆ! ನೆಂಟರಿಷ್ಟರು ಹಾಕಿಕೊಳ್ಳುವ ಮನೆ, ಕಾರುಗಳ ಚಿತ್ರವನ್ನು ನೋಡಿಕೊಂಡು ಉರಿದು ಬೀಳುತ್ತಾರಂತೆ. ನೀನು ಯಾರಿಗೆ ಕಾಮೆಂಟ್ ಹಾಕಿದೆ, ಯಾರಿಗೆ ಹಾಕಬಾರದಿತ್ತು, ಯಾರ ಜೊತೆಯಿರುವ ಫೋಟೋ ಹಾಕಿದೆ ಇತ್ಯಾದಿಗಳೆಲ್ಲ ಪ್ರತಿ ಮನೆಗಳಲ್ಲೂ ಗಂಟಾನುಗಟ್ಟಲೆ ಚರ್ಚಿತವಾಗಿ ಅನೇಕರು ಬೇಸತ್ತು ಓಡಿ ಹೋಗಿದ್ದಾರಂತೆ. ಒಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಸದಾ ನಿಯಂತ್ರಿಸಲು ನೂರಾರು ತಂತ್ರಗಳು! ಯಾರೋ ಚಂದದ ಚಿತ್ರ ಹಾಕಿ ನಕ್ಕರೆ ಆ ಕ್ಷಣದ ಸಂತೋಷದ ಅಭಿವ್ಯಕ್ತಿ ಎಂದು ಕೊಳ್ಳುವುದನ್ನು ಬಿಟ್ಟು ಹಿನ್ನೆಲೆಯನ್ನು ಹುಡುಕುತ್ತ, ಇದು ಯಾರನ್ನೋ ಉರಿಸಲು ಹಾಕಿದ್ದು ಎಂದೆಲ್ಲ ವಿಶ್ಲೇಷಣೆಗಳು ನಡೆಯುತ್ತವಂತೆ! ಕೆಲವರಂತೂ ಯಾರೋ ಒಬ್ಬರನ್ನು ತಮ್ಮ ಶತ್ರುವಾಗಿಸಿಕೊಂಡು ಅವರನ್ನು ಆಡಿಕೊಂಡು ಪೋಸ್ಟ್ ಹಾಕುವುದರಲ್ಲಿಯೇ ಜೀವನ ಕಳೆಯುತ್ತಿರುತ್ತಾರೆ.
ಇತ್ತೀಚಿಗೆ ಮೊಗಹೊತ್ತಿಗೆಯಲ್ಲಿ ಹೆಣ್ಣುಮಕ್ಕಳ ಮೇಲೆ ಗುಂಪು ದಾಳಿ ನಡೆಸುವುದು ಹೆಚ್ಚುತ್ತಿದೆ. `soft target ' ಎನ್ನುವುದನ್ನು ಸರಾಗವಾಗಿ ಕಂಡುಕೊಂಡಿದ್ದಾರೆ. ಯಾರನ್ನಾದರೂ ಹೀಗಿರಬೇಕು ಎಂದು ನಿಯಂತ್ರಿಸುವ ಹಕ್ಕನ್ನು ಯಾರು ಯಾರಿಗೆ ಕೊಟ್ಟಿದ್ದಾರೋ ತಿಳಿಯದು. ನಮ್ಮದು ತಪ್ಪು ವಿಚಾರಗಳಾಗಿದ್ದರೆ ವಾದ-ಸಂವಾದಗಳನ್ನು ಮಾಡಲಿ. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಹಿಡಿದು ಓಡಿಸುವ ಪ್ರಯತ್ನ ಮಾಡುವ ಪಾಳೆಗಾರಿಕೆ ಒಪ್ಪತಕ್ಕದೇ ಅಲ್ಲ. ಯಾವ ಗುಂಪಿನ ವಿಚಾರಗಳು ನಮ್ಮನ್ನು ನಿಯಂತ್ರಿಸಬಾರದು. ಬದುಕನ್ನು ವಿಶಾಲ, ಮಾನವೀಯ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಇವು ಸಹಕಾರಿಯೂ ಅಲ್ಲ. ಇಲ್ಲಿ ಯಾರೂ ಅಸ್ಪೃಶ್ಯರಲ್ಲ. ಎಲ್ಲರೊಂದಿಗೆ ಬೆರೆತು, ಮಾತಾಡುತ್ತಲೇ ನಮ್ಮ ವಿಚಾರವನ್ನು ಗಟ್ಟಿಯಾಗಿ ಹೇಳುವ ಶಕ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವಮಾನಿತರಾಗಿಯೋ, ಹೆದರಿಯೋ, ಬೇಸರದಿಂದಲೋ ಇಲ್ಲಿಂದ ಹೋಗಬೇಕಾಗುತ್ತದೆ. ಮೊಗಹೊತ್ತಿಗೆ ಸಮಾಜದ ಪ್ರತಿರೂಪ ಅಷ್ಟೇ. ಬದುಕನ್ನು ಅಲ್ಲಿ ಎದುರಿಸುವಾಗ ಇಲ್ಲಿಯೂ ಇದ್ದೇ ಎದುರಿಸಬೇಕು ಅನ್ನುವ ಛಲ ನಮ್ಮ ಹೆಣ್ಣುಮಕ್ಕಳಿಗೆ ಇರಬೇಕು ಎನ್ನುವುದೇ ನನ್ನ ಆಸೆ.
No comments:
Post a Comment