stat Counter



Sunday, October 21, 2018

ರೋಹಿತ್ ಸುಭಾಷ್ ಅವತಿ -- ಕೆಲವು ಕವಿತೆಗಳು


June 26


ಜಿಜ್ಞಾಸೆ
ಇತ್ತು ನನ್ನಲ್ಲಿ,
ಆ ಬಯಲ ನುಂಗುವಾಸೆ
ಕೇಳಿದೆ-ತುಸು ನೀರ, 
ಸಿಗಲಿಲ್ಲ
ಹುಡುಕಲು ಹೊರಟೆ—ಅಮೃತವೇ ಇತ್ತು
ಧುಮುಕಿದೆ ಅದರೊಳಗೆ, 
ಮುಳುಗಿ ಸತ್ತೆ
ಇನ್ನೂ ಇದೆ, ಬಯಲಲ್ಲಿ ಬಯಲಾಗುವಾಸೆ.
ಮತ್ತೆ ಬರುವೆ ಅದಕಾಗಿ.
* * *
ಕಾಕು
ಬಿಸಿಲ ದೃಷ್ಟಿ ನೆಟ್ಟಿದೆ ಆ
ದಿಟ್ಟ ಹೆಂಗಸ ಮೆಟ್ಟಿಗೆ
ನಡೆಯುತ್ತಿದ್ದಾಳೆ ಘಿರಣಿ ಮುಂದಿನ
ಹಾದಿಯಲಿ,
ಮಲಗಿರುವ ಬೀದಿನಾಯಿಗಳ ದಾಟಿ 
ಹರಿದ ಚುಕ್ಕೆ ಸೀರೆಯ 
ಸೆರಗಿಂದ ತಲೆಮುಚ್ಚಿ
ಧಾವಿಸುತ್ತಿದ್ದಾಳೆ-
ಎನೋ ಯೋಚಿಸುತ್ತಾ...
ನನಗನ್ನ ಉಣಿಸಿದ ಆ ಕೈಗಳೀಗ
ಬೆವತಿವೆ-
ಬಿಸಿಲ ತಾಪದಿಂದ 
ಅಲ್ಲ,
ಬದುಕಿನ ಬಿಸಿಲಿಂದ.
* * *
ಕನಸಿನಲ್ಲಿ
ನೀ 
ಹರಿದ ನರಗಳ ಸಿಕ್ಕಾ ಕಂಡು
ಗುಮಾಣಿಸಿದೆ ಬೂದಿಯಾದೀ ಸುಟ್ಟ ಕಂಣ್ಗಳನು
ಪಂಕಾಗಾಳಿಗೆ ಮೈಗೊಟ್ಟು ಬಿದ್ದೆ ನಾ ನಿದ್ದೆಗೆ
ಕಡುಹುಡುಗಿ ಇದ್ದೆ ನೀ ಅಲ್ಲೂ....
—ನೆತ್ತರ ನೆನಪಿಸಲು.
* * *
—ಅವಳಿಗಾಗಿ
ಆ ಹೆಣ್ಣುಜೀವದ ಹಸಿವಿಗೆ—
ಹೊರಚಿಮ್ಮಿದೀ ನನ್ನ ಬಿಸಿನೆತ್ತರ ಆರುವ ಮೊದಲೇ
ಅದರೊಡಲೊಳಿಂದ ಹುಟ್ಟಿತೊಂದು ನಗುಮೊಗದ ನೆತ್ತರುಂಡೆ.
ಆ ಹಾಲುಮೈಯ ಕೆನೆನೆಕ್ಕಿದವ ‘ ನಸೀಬವಾನ ’
—ಎಂದು ಬಡಬಡಿಸುವೀ ಹುಚ್ಚನ ಪಾಲಿಗೆ
ಕಳ್ಳೀಹಾಲು ದಕ್ಕಿತೆಂದು ಕುಡಿದರೆ,
ಜಲ್ದಿ ಅಪ್ಪಿಕೊಳ್ಳಲೊಲ್ಲದೇಕೀ ಸಾವು ?
* * *
— ರೋಹಿತ್ ಸುಭಾಷ್ ಅವಟಿ.
( ಇತ್ತೀಚಿಗೆ ಬರೆದವುಗಳು )

1 comment:

  1. ಅದೆಷ್ಟು ವರ್ಷಗಳಾದುವು! ಕಾವ್ಯದ ಸಾಧ್ಯತೆಗಳು ಅಮಿತವಾದುವು. ಕವಿಯು ತನ್ನ ಕಾವ್ಯದಲ್ಲಿ ತನ್ನ ಬಗ್ಗೆ ತಾನೇ ಸುಳ್ಳು ಕೂಡ ಹೇಳಬಹುದು. ಅಷ್ಟರ‌ ಮಟ್ಟಿಗೆ ಸ್ವಾತಂತ್ರ್ಯ ಕವಿಗೆ, ತನ್ನ ಕಾವ್ಯದಲ್ಲಿ. ಅದು ಕಾವ್ಯಸೌಂದರ್ಯದ ಒಂದು ಭಾಗ. ನಾನು ನನ್ನ ಬಗ್ಗೆಯೆ ಹೇಳುತ್ತಿದ್ದೇನೆ. ಈ ಕವಿತೆಗಳನ್ನು ಬಹಳ ವರ್ಷಗಳ ಹಿಂದೆ ಬರೆದವನು ನಾನೇ, ರೋಹಿತ್ ಸುಭಾಷ್ ಅವಟಿ. ನಾನೂ ಮೇಲಿನ ಈ ಕವಿತೆಗಳಲ್ಲಿ ನನ್ನ ಬಗ್ಗೆ ಸುಳ್ಳು ಹೇಳಿಕೊಂಡಿದ್ದೇನೆ. ಕಾವ್ಯದ ಸಾಧ್ಯತೆಗಳು ಅಮಿತ.

    ReplyDelete