stat Counter



Sunday, October 21, 2018

ರಹಮತ್ ತರೀಕೆರೆ --- ರಾಜೀವ ತಾರಾನಾಥರೊಡನೆ ಒಂದು ದಿನ

ರಾಜೀವ ತಾರಾನಾಥರೊಡನೆ ಒಂದು ದಿನ
ಸೂಫಿಗಳ ಮೇಲೆ ಅಧ್ಯಯನ ಮಾಡಿದ್ದ ನಾನು, ಪ್ರಸಿದ್ಧ ಸರೋದ್‍ವಾದಕರಾದ ಪಂಡಿತ್ ರಾಜೀವ ತಾರಾನಾಥರನ್ನು ಭೇಟಿ ಮಾಡುವುದಕ್ಕೆ ಹಲವು ದಿನಗಳಿಂದ ಹಂಬಲಿಸಿದ್ದೆ. ಕಾರಣ, ಸೂಫಿಸಂ ಭಾಗವೇ ಆಗಿರುವ ಸಂಗೀತ, ಧರ್ಮಾತೀತ ಪ್ರಜ್ಞೆ ಹಾಗೂ ವೈಚಾರಿಕತೆಗಳು ಸಂಗಮಿಸಿದ ಪರಂಪರೆಯೊಂದರ ಕುಡಿ ಅವರು. ಈಗಿನ ಭಾರತದ ಸನ್ನಿವೇಶದಲ್ಲಿ ಅವರು ಈ ಪರಂಪರೆಯ ಕೊನೆಯ ಕೊಂಡಿಗಳಲ್ಲಿ ಒಂದೆಂದು ತೋರುವರು. ಈ ವಿಶಿಷ್ಟ ಪರಂಪರೆಯು ಎರಡು ಭೂಮಿಕೆಗಳಲ್ಲಿ ಬೇರು ತಳೆದಿದೆ. ಮೊದಲನೆಯ ಭೂಮಿಕೆ- ತಂದೆ ಪಂಡಿತ ತಾರಾನಾಥರದು. ತಾರಾನಾಥರು ನಿಷ್ಠುರ ವೈಚಾರಿಕರೂ ವೈದ್ಯರೂ ಸಂಗೀತ ಗುರುವೂ ಮಾನವತಾವಾದಿಯೂ ಯೋಗಿಯೂ ರಾಜಕೀಯ ಚಳುವಳಿಗಾರರೂ ಆಗಿದ್ದವರು; ರಾಯಚೂರಿನಲ್ಲಿ ಹಮದರ್ದ್ ಮದರಸಾ ಎಂಬ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು. ಹೈದರಾಬಾದ್ ನಿಜಾಮನ ನಿರಂಕುಶ ಪ್ರಭುತ್ವದ ಬಂಡೆದ್ದು, ಆತನನ್ನು ಜನರಲ್ ಡಯರ್‍ಗೆ ಹೋಲಿಸಿ ಲೇಖನ ಬರೆದು ಗಡಿಪಾರು ಮಾಡಲ್ಪಟ್ಟ ಬಳಿಕ, ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ತುಂಗಭದ್ರಾ ಎಂಬ ಜಾಗದಲ್ಲಿ ‘ಪ್ರೇಮಾಯತನ’ ಆಶ್ರಮ ಕಟ್ಟಿಕೊಂಡು ನೆಲೆನಿಂತವರು; ಈ ‘ಪ್ರೇಮಾಯತನ’ವು ಗಾಂಧಿಯವರ ಸಬರಮತಿಯ ಹಾಗೆ ಭಾರತದಲ್ಲೇ ವಿಶಿಷ್ಟ ಆಶ್ರಮ. ತಾರಾನಾಥರು ಸೂಫಿಗಳ ಇಷ್ಕ್ (ಪ್ರೇಮ) ಪರಿಕಲ್ಪನೆಯನ್ನು ನೆನಪಿಸುವಂತೆ ‘ಪ್ರೇಮ’ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು; ಮಂಗಯ್ಯ ಎಂಬ ಯೋಗಿಯ ಶಿಷ್ಯರಾಗಿದ್ದ ಅವರು, ಪ್ರಸಿದ್ಧ ಯೋಗಿನಿ ಅದೋನಿ ಲಕ್ಷ್ಮಮ್ಮನವರ ಸಹವರ್ತಿಯಾಗಿದ್ದವರು. ಎರಡನೇ ಭೂಮಿಕೆಯು, ಸೂಫಿತತ್ವದ ಭಾಗವಾಗಿರುವ ಸಂಗೀತಲೋಕಕ್ಕೆ ಸೇರಿದ ಬಾಬಾ ಅಲ್ಲಾವುದ್ದೀನ್, ಅವರ ಮಕ್ಕಳೂ ಶಿಷ್ಯರೂ ಆದ ಅಲಿಅಕ್ಬರ್‍ಖಾನ್ ಹಾಗೂ ಅನ್ನಪೂರ್ಣಾದೇವಿ, ಗುರುಪುತ್ರಿಯನ್ನೇ ಲಗ್ನವಾದ ಪಂಡಿತ್ ರವಿಶಂಕರ್ ಮುಂತಾದ ಗುರುಗಳಲ್ಲಿದೆ. ಧರ್ಮ ಜಾತಿ ಭಾಷೆ ಪ್ರದೇಶಗಳ ಎಲ್ಲೆದಾಟಿ ಸಂಗೀತವನ್ನೇ ಒಂದು ಧರ್ಮದಂತೆ ಬಾಳಿದ ಈ ಗುರು ಗರಡಿಯಲ್ಲಿ ಪಳಗಿದ ರಾಜೀವ್, ಈ ಪರಂಪರೆಯ ಅತ್ಯುತ್ತಮ ಗುಣಗಳನ್ನು ಬಾಳುತ್ತಿರುವರು.
ರಾಜೀವರ ಮುಂಗೋಪ (ಮೈಕ್ ತೊಂದರೆ ಕೊಟ್ಟದ್ದಕ್ಕಾಗಿ ಭಾಷಣ ನಿಲ್ಲಿಸಿ ಸಭ್ಯಾತ್ಯಾಗ ಮಾಡುವುದು ಇತ್ಯಾದಿ) ಹಾಗೂ ನಿಷ್ಠುರ ನುಡಿಯ ಬಗ್ಗೆ ದಂತಕತೆಗಳನ್ನು ಕೇಳಿದ್ದ ನಾನು, ನೇರವಾಗಿ ಕಾಣಲು ಹಿಂಜರಿದುಕೊಂಡಿದ್ದೆ. ಅವರ ಶಿಷ್ಯರಾದ ಶೈಲಜಾ ವೇಣುಗೋಪಾಲ್ ಹಾಗೂ ಸರ್ವಮಂಗಳಾ ಮುಂತಾದವರ ಮೂಲಕ ಭೇಟಿಗೆ ಯತ್ನಿಸುತ್ತಲೂ ಇದ್ದೆ. ಹೀಗಿರುತ್ತ ಒಂದು ಸಂಜೆ, ಸ್ವತಃ ಅವರಿಂದಲೇ ಅನಿರೀಕ್ಷಿತ ಕರೆ ಬಂತು. ನನಗದು ಉತ್ಕಂಠಿತ ಗಳಿಗೆ. ಸೂಫಿಗಳ ಮೇಲೆ ನನ್ನ ಪುಸ್ತಕವನ್ನು ಹಿಂದೆ ಓದಿದ್ದ ಅವರು ಆಗಷ್ಟೆ ‘ಧರ್ಮಪರೀಕ್ಷೆ’ ಪುಸ್ತಕ ಓದಿದ್ದರು. ‘ಬಹಳ ಚೆನ್ನಾಗಿದೆ. ಸಂತೋಷವಾಗಿದೆ. ಮನೆಗೆ ಬನ್ನಿ. ಮುಂದಿನ ತಿಂಗಳು ಅಮೇರಿಕಾಕ್ಕೆ ಹೋಗ್ತೀನಿ. ಅಷ್ಟರೊಳಗೇ ಬರಬೇಕು’ ಎಂದರು. ‘ಬರಲುಗೊಂಡ ಗಿಡಕೆ ತೊರೆ ಬಂದು ಹೊಯ್ದ’ಂತಾಯಿತು. ಕೂಡಲೇ ಹೊರಟು, ಗೆಳೆಯರಾದ ವಿ.ಎಸ್.ಶ್ರೀಧರ್ ಅವರ ಜತೆ ಹೋಗಿ ಒಂದು ಹಗಲು ಮತ್ತು ರಾತ್ರಿ ಅವರ ಜತೆ ಕಳೆದೆ. ಅವರು ಲಹರಿಯಲ್ಲಿ ಹರಿಸುವ ವಾಗ್ವಿಲಾಸ ಕೇಳಲು, ಹಲವು ವಿಷಯಗಳನ್ನು ಚರ್ಚಿಸಲು, ಬೆಳಗುಜಾವ ಅವರು ಮಾಡುವ ಸರೋದ್ ರಿಯಾಜ್ ಆಲಿಸಲು ಸಾಧ್ಯವಾಯಿತು. ನನ್ನ ಬಾಳುವೆಯಲ್ಲಿ ಅದೊಂದು ಅಪೂರ್ವ ದಿನ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಮನೆಗೆ ಹೋದಾಗ ಗುಹೆಮುಂದೆ ವಿಶ್ರಮಿಸಿಕೊಳ್ಳುತ್ತಿರುವ ಹುಲಿಯಂತೆ ಆಜಾನುಬಾಹು ರಾಜೀವ್ ಹಾಲಿನಲ್ಲಿ ಪತ್ರಿಕೆ ಓದುತ್ತ ಕುಳಿತಿದ್ದರು. ತುಸು ದೂರದಲ್ಲಿ ಅವರ ಬಲಿಷ್ಠ ನಾಯಿಯೂ ಪವಡಿಸಿತ್ತು. ನಮ್ಮನ್ನು ಅಕ್ಕರೆಯಿಂದ ಬರಮಾಡಿಕೊಂಡ ಅವರು ಅಡುಗೆ ಕೋಣೆಯತ್ತ ಕತ್ತುಹೊರಳಿಸಿ ಅಡಿಗೆಯಮ್ಮನಿಗೆ “ನೋಡಮ್ಮಾ ಮಂದಿ ಬಂದಿದ್ದಾರೆ. ಮೊದಲು ಟೀಕೊಡು’’ ಎಂದರು. ಎದುರು ಗೋಡೆಯ ಮೇಲೆ ಪಂಡಿತ ತಾರಾನಾಥರ ಫೋಟೊ ಇತ್ತು. ಚಹಾಪಾನ ಮಾಡುತ್ತ, ತಾರಾನಾಥರ ಬಗೆಗಿನ ನೆನಪುಗಳನ್ನು ಮೆಲ್ಲಗೆ ಕೆದಕಿದೆ. 70 ವರ್ಷಗಳಷ್ಟು ಹಿಂದಕ್ಕೆ ಜಾರಿ ನಿಧಾನವಾಗಿ ತಮ್ಮನ್ನು ಬಿಚ್ಚಿಕೊಂಡು ರಾಜೀವ್ ಮಾತಾಡತೊಡಗಿದರು.
“ಸಂಗೀತ ನಮ್ಮ ಮನೆಯೊಳಗೆ ಮೊದಲಿಂದಲೂ ಇತ್ತು. ನಾನು ಮೂರು ವರ್ಷಿದ್ದಾಗ ಶುರು ಮಾಡಿದೆ. ಐದು ವರ್ಷ ಆದಾಗ ನಮ್ಮಪ್ಪ ಬಾಖೈದಾ ತಬಲಾಕ್ಕೆ ಹಾಕಿಬಿಟ್ರು. ಗ್ರಾಮೊಫೋನ್ ಹಚ್ಚೋದು ಹೇಳ್ಕೊಟ್ಟಿದ್ರು. ರಾಜೀವ ಪುಟ್ಟಾ ಇಂಥದ್ದು ಹಾಡ್ಕೊ ಅಂತ ಅಬ್ದುಲ್ ಕರೀಂಖಾನರ ರೆಕಾರ್ಡ್ ಕೊಡ್ತಿದ್ರು. ತಾರಾನಾಥರು ಸ್ಫುರದ್ರೂಪಿಗಳು. ಧ್ವನಿ ಬಹಳ ಚಂದ. ಆಕರ್ಷಣೀಯ ರೀತಿಯಲ್ಲಿ ಮಾತಾಡತಿದ್ದರು. ಲೆಕ್ಚರ್ ಮಾಡೋಕೆ ಮುಂಚೆ ಟೇಬಲ್ ಮ್ಯಾಲೆ ಕೂತು ಮೂರು ನಿಮಿಷ ಹಾಡಿಬಿಡ್ತಿದ್ದರು. ಇದು ಅವರ ಶೈಲಿ. ನೋಡೋಕೆ ಹಿಟ್ಲರ್ ಅಣ್ಣತಮ್ಮಂದಿರ ಹಾಗಿದ್ದರು. ಆದರೆ ಬ್ಯಾರೇನೆ ಒಳಗಿಂದ. ಮುಖ್ಯ ಏನಂದ್ರೆ ಹಿಂದೂ-ಮುಸ್ಲಿಂ ಭೇದ ಇಲ್ಲ. ನಾವೆಲ್ಲ ಮನುಷ್ಯರು ಅನ್ನೋ ಭಾವನೆಯಲ್ಲಿ ಇರತಾಇದ್ರು. ತಬಲಾ ಹುಸೇನ್, ಜಾನ್‍ರತ್ನಂ, ಪದ್ಮನಾಭಭಟ್ಟ ಅವರನೆಲ್ಲ ಬೆಳೆಸಿದವರು; ಆರ್ಯುವೇದದಲ್ಲಿ ದೊಡ್ಡ ಹೆಸರು ಮಾಡಿದವರು.’’
ಪಂಡಿತ್ ತಾರಾನಾಥರಿಗೆ ಮದುವೆಯಾಗಿದ್ದು 40 ವರ್ಷ ಆದಮ್ಯಾಲೆ. ‘ಪ್ರೇಮಾಯತನ’ ಅಂತ ಆಶ್ರಮ ಕಟ್ಟಿದ್ದರು. ಅದನ್ನು ಈ ಸಂಪ್ರದಾಯವಾದಿ ಬ್ರಾಹ್ಮಣರೆಲ್ಲ ‘ಪ್ರೇಮಯಾತನೆ’ ಅಂತ ಲೇವಡಿ ಮಾಡ್ತಿದ್ದರು. ಅದು ಆಸ್ಪತ್ರೆ. ಅಲ್ಲಿ ಹುಚ್ಚು ಹಿಡಿದವರು, ಕುಷ್ಠ ಬಂದಿರೋರು, ಸಮಾಜಬಾಹಿರರಾದವರು, ಮದುವೆಯಿಲ್ಲದೆ ಬಸುರಾದವರು ಇರತಾ ಇದ್ರು. ಒಂದು ಪ್ರಸಂಗ ನೆನಪಿಸಿಕೊಂಡರೆ ಇನ್ನೂ ಮೈಯೆಲ್ಲ ಝುಂ ಅಂತದೆ. ನನಗೆ ಐದು ವರ್ಷ ಇರಬಹುದು. ನಮ್ಮಪ್ಪನ ಜತೀಗೆ ತಳಗೆ ಮಲಕೋತಿದ್ದೆ ವರಾಂಡದೊಳಗ. ಅಲ್ಲಿ ಒಂದು ಕಂದೀಲು ಇರತಿತ್ತು. ಅದರಾಚೆ ಕತ್ತಲು. ಆ ಕತ್ತಲೊಳಗ ‘ಓಓಓ’ ಅಂತ ಒಬ್ಬ ಕಿರುಚತಿದ್ದ. ಅವನನ್ನ ಇಬ್ಬರು ಹಿಡಕೊಂಡು ಬಂದ್ರು-ಅಂಥಾ ಹುಚ್ಚ ಅಂವ. ಆಗ ನಮ್ಮಪ್ಪ ನಮ್ಮನೆಲ್ಲ ಎಬ್ಬಿಸಿಬಿಟ್ರು. ‘ಏ! ಕೂಗಬ್ಯಾಡ ಬಾರೋ ಇಲ್ಲಿ, ಮಲ್ಕೊ’ ಅಂತ ಅವನನ್ನ ಕರದು ತಮ್ಮ ಬ್ಲಾಂಕೆಟ್‍ನೊಳಗ ಮಲಗಿಸಿಕೊಂಡು ಬಿಟ್ರು. ಹುಚ್ಚರಿಗೆ ನಿದ್ದಿ ಬರೋದಿಲ್ಲ, ಚಡಪಡಸ್ತಿರ್ತಾರ. ಅವರಿಗಿ ಸ್ವಲ್ಪ ನಿದ್ದಿ ಬಂತಂದ್ರೆ ಗುಣ ಆಗತಾಇದೆ ಅಂತ ಅರ್ಥ. ಅವನಿಗೆ ನಿದ್ದೆ ಹತ್ತಿಬಿಡ್ತು.’’
ಸಮಾಜಬಾಹಿರರಾದವರಿಗೆ ಆಶ್ರಯ ಕೊಟ್ಟಿದ್ದರ ಬಗ್ಗೆ ವಿವರಿಸಲು ಕೇಳಿದೆ. ಅದಕ್ಕವರು ಹೇಳಿದರು: “ಒಮ್ಮೆ ಅವರು ಬರ್ತಾ ಇರಬೇಕಾದರೆ ಒಬ್ಬ ಹೆಣಮಗಳು ಬಂದು ಕಾಲಿಗೆ ಬಿದ್ಲಂತೆ. ಆಗಿನ್ನೂ ಅವರಿಗೆ ಮದುವೆ ಆಗಿದ್ದಿಲ್ಲ. ಆಕೆ ‘ನಾನು ಗರ್ಭಿಣಿ, ನನ್ನ ಬಸರು ತಗಸ್ರೀ ನಿಮ್ಮ ಆಸ್ಪತ್ರೆಯೊಳಗ’ ಅಂದಳು. ಪಂಡಿತರು ‘ಯಾಕಮ್ಮ? ನೀ ತಾಯಾಕ್ತಿದೀಯ’ ಅಂದರು. ಆಗ ಅವಳು ‘ನಾನು ವಿಧವೆ. ವಿಧವೆಯಾದವಳ ಮಕ್ಕಳಿಗೆ ಯಾರ ದಿಕ್ಕು?’ ಅಂದಳು. ‘ಅಷ್ಟೇ ಏನು? ಪಂಡಿತ ತಾರಾನಾಥನ ಮಗು ಅಂತ ನನ್ನ ಹೆಸರು ಹೇಳು. ಬಸರು ತಗಿಯಲ್ಲ. ಹೆರಿಗೆ ಮಾಡಸ್ತೀನಿ. ಬಂದದ್ದು ಬರಲಿ. ಹೆದರಬ್ಯಾಡ. ಮಗೂನ ಹ್ಯಾಗ ಮುಂದ ಬೆಳಸಬೇಕು ನಾನು ಹೇಳ್ತೀನಿ. ನಿನಗ ಮಗು ಬ್ಯಾಡ ಅಂದರ ನನಗ ಕೊಟ್ಬಿಡು. ಕೊಲ್ಲಬ್ಯಾಡ’ ಅಂದರು. ಎಂಥ ದೊಡ್ಡಮಾತರಿ ಇವೆಲ್ಲ? ಪಬ್ಲಿಕ್ಕಿನೊಳಗ ಹೀಂಗ ಹೇಳಬೇಕಾದರೆ ಎಷ್ಟು ಧೈರ್ಯ ಇರಬೇಕು? ನೀವು ನಾವು ಹೇಳ್ತೀವೇನು? ಉಚ್ಚೀ ಹೊಯ್ಕೋತೀವಿ ಉಚ್ಚೀ. ಭಾಳದೊಡ್ಡ ಮನುಷ್ಯಾ. ಸೂರ್ಯನಿಗೆ ದಿಲ್‍ದಾರ್ ಅಂತ ಯಾರೊ ಕರದಾರ. ಅಂತಹ ದಿಲ್‍ದಾರ್ ನಮಪ್ಪ.’’
ರಾಜೀವ್ ಕೂರುವ ಕುರ್ಚಿಯ ಮೇಲ್ಭಾಗದಲ್ಲಿ ಸರಿಯಾಗಿ ತಲೆಯಮೇಲೆ ಬರುವಂತೆ, ಅವರ ಗುರು ಉಸ್ತಾದ್ ಅಲಿ ಅಕ್ಬರ್‍ಖಾನರ ಫೋಟೊ ಇತ್ತು. ಸಿಗರೇಟ್ ಸೇದುತ್ತ ತೀಕ್ಷ್ಣನೋಟದಿಂದ ಎತ್ತಲೋ ಗಮನಿಸುತ್ತಿರುವ ಭಂಗಿಯ ಫೋಟೊ ಅದು. ಕುತ್ತಿಗೆ ಹೊರಳಿಸಿ ಫೋಟೊ ಕಡೆ ನೋಡುತ್ತ ರಾಜೀವ್ ಅಭಿಮಾನದಿಂದ ನುಡಿದರು: “ಪಂಡಿತ ತಾರಾನಾಥ್ ವಾಸ್ ಮೈ ಬಯಲಾಜಿಕಲ್ ಫಾದರ್; ಇವರು ಈ ಅಲಿ ಅಕ್ಬರ್ ಖಾನ್ ಕೂಡ ನಮ್ಮಪ್ಪ. ಅವರಿಂದಲೇ ಎಲ್ಲ. ನನ್ನ ಪ್ರತಿ ಕಣಕಣವೂ ಅವರೇ. ಅವರಿಲ್ಲದಿದ್ದರೆ ನಾನಿಲ್ಲ. ಅವರಿಂದ ಎಲ್ಲಾ ಪಡಕೊಂಡು ಇವತ್ತು ಅವರ ಸಂಗೀತಕ್ಕ ಮಾಯಿಂದಗಿ ಮಾಡ್ತಿದೇನೆ. ಈ ದುನಿಯಾದೊಳಗ ಅವರಿಲ್ಲ. ಆದರ ಅವರ ಸಂಗೀತ ಅದ. ನನ್ನ ಗುರುಗಳಲ್ಲಿ ಹಿಂದು ಮುಸಲ್ಮಾನ್ ಅಂತ ಭೇದ ಇಲ್ಲವೇ ಇರಲಿಲ್ಲ. ನನ್ನಲ್ಲೂ ಇಲ್ಲ. ಇದು ಈಗ ನಮ್ಮ ಕರಾವಳಿಯಲ್ಲಿ ಇರೋದಕ್ಕೆ ತದ್ವಿರುದ್ಧ. ಅಲ್ಲಿ ಇಬ್ಬರು ಕೂತು ಮಾತಾಡೋ ಹಂಗಿಲ್ಲ. ಆ ರೀತಿಯೊಳಗ ಪಂಡಿತ ತಾರಾನಾಥರಿಗೂ ಉಸ್ತಾದ್ ಅಲಿ ಅಕ್ಬರ್‍ಖಾನರಿಗೂ ವ್ಯತ್ಯಾಸವಿಲ್ಲ. ತಾರಾನಾಥರು ನಮ್ಮ ಗುರುಗಳನ್ನ ಪ್ರೀತಿಯಿಂದ ಖಾನ್‍ಸಾಬ್ ಅಂತ ಸಂಬೋಧನೆ ಮಾಡ್ತಿದ್ದರು.’’
ಮಾತುಕತೆಯಲ್ಲಿ ರಾಜೀವರು ಅಲಿ ಅಕ್ಬರ್‍ಖಾನರ ಸಿಟ್ಟು, ಸಹಾನುಭೂತಿ, ಪ್ರೀತಿಯ ಅನೇಕ ಘಟನೆಗಳನ್ನು ಹೇಳಿದರು. ಒಮ್ಮೆ ಖಾನ್‍ಸಾಹೇಬರು ಒಂದೇ ದಿನದಲ್ಲಿ ಮೂರು ಕಛೇರಿ ಕೊಟ್ಟರಂತೆ. ಅವರ ಪಕ್ಕ ಕೂತು ತಂಬೂರಿ ನುಡಿಸುತ್ತಿದ್ದ ರಾಜೀವ್, ಕೊನೇ ಕಛೇರಿಯ ಹೊತ್ತಿಗೆ ಅವರ ಹೆಗಲಮೇಲೆ ತಲೆಯಿಟ್ಟು ಮಲಗಿಬಿಟ್ಟಿದ್ದರಂತೆ. ಆಗ ಖಾನ್‍ಸಾಹೇಬರ ಸಿಲ್ಕ್‍ಜುಬ್ಬದ ಮೇಲೆ ಅಂಗೈ ಅಗಲದಷ್ಟು ಜೊಲ್ಲು ಸುರಿದಿತ್ತಂತೆ. ಈ ಘಟನೆಯನ್ನು ರಾಜೀವ್ ಗುರುಕಾರುಣ್ಯದ ಆತ್ಯಂತಿಕ ರೂಪಕವೆಂಬಂತೆ ಭಾವಿಸಿ ನೆನೆದರು. ಮರಣದ ಕಾಲಕ್ಕೆ ತಮ್ಮನ್ನು ಮಗನೆಂದು ಕರೆದ ಗುರುವಿನ ಬಗ್ಗೆ ಹೇಳುತ್ತ ಭಾವುಕರಾದರು: “ನನ್ನ ತಲೆಗೂದಲಲ್ಲಿ ಕೆಲವು ಇನ್ನೂ ಕಪ್ಪಾಗಿವೆ. ಅಂದ್ರೆ ಯೌವನ ಉಳಿದುಕೊಂಡಿದೆ ಎಂದರ್ಥ. ಇದಕ್ಕೆ ಕಾರಣ ನನ್ನ ಗುರುಗಳು ಬೈದು ಕಲಿಸಿದ ವಿನಯ.’’
ರಾಜೀವ್ ತಾಯಿ ತಮಿಳುನಾಡಿನ ಬೆಸ್ತ ಕುಟುಂಬದವರು; ತಂದೆ ದಕ್ಷಿಣ ಕನ್ನಡದಿಂದ ವಲಸೆ ಹೋದ ಸಾರಸ್ವತ ಬ್ರಾಹ್ಮಣರು; ಗುರುಗಳು ಮುಸ್ಲಿಮರು; ಹುಟ್ಟಿದ್ದು ಬೆಳೆದಿದ್ದು ಕಲಿತಿದ್ದು ಕೆಲಸ ಮಾಡಿದ್ದು ಹೈದರಾಬಾದ್, ಬೆಂಗಳೂರು, ಕ್ಯಾಲಿಫೋರ್ನಿಯಾ, ಮುಂಬೈ, ಪುಣೆ, ಧಾರವಾಡ, ಮೈಸೂರು, ಕಲ್ಕತ್ತ ಮುಂತಾದ ಶಹರುಗಳಲ್ಲಿ. ಇಂತಹ ಕಾಸ್ಮೊಪಾಲಿಟನ್ ಹಿನ್ನೆಲೆಯುಳ್ಳ ಕಾರಣದಿಂದಲೂ ರಾಜೀವ್ ಅವರಿಗೆ ಧರ್ಮ ಮತ್ತು ಜಾತಿ ಭೇದಗಳ ಮೇಲೆ ತಿರಸ್ಕಾರ ಬೆಳೆದಿರಬಹುದು. ಅವರು ಹೇಳಿದರು: “ಇದು ಸೂಫಿ ಅಂತೀರೊ ಏನಂತೀರೊ ಗೊತ್ತಿಲ್ಲ, ಇದೊಂದು ಧೋರಣೆ. ಒಂದು ದಾರಿ. ಅದರಲ್ಲಿ ನಮ್ಮಪ್ಪ ಅದಾರ. ಖಾನ್‍ಸಾಹೇಬರು ಅದಾರ. ಪೆರಿಯಾರ್ ಅದಾರ. ಪೆರಿಯಾರರ ದ್ರಾವಿಡ ಮೂಮೆಂಟ್ ಜೊತೆಗೆ ನಾನು ಸ್ವಲ್ಪ ಸೇರ್ಕೊಂಡೆ. ಈ ಸನಾತನವಾದ ರೆಜೆಕ್ಟ್ ಮಾಡಿದೆ. ಇದರಿಂದ ಎಷ್ಟು ಹಾನಿ ಆಯಿತು? ಆರ್ಯರಿಗೆ ಇಂಡಿಯಾ ಗೊತ್ತಿತ್ತೇನ್ರಿ? ಕೆಳಗೆ ಬರೋದು. ಬರ್ತಾ ಬರ್ತಾ ಹೊಡದು ದಾಸರಾಗಿ ಮಾಡೋದು. ನಾವು ನೀವು ಕೋತಿಗಳು; ಕಿಷ್ಕಿಂಧೆಯವರು. ಹನುಮನುದಿಸಿದ ನಾಡು ನಮ್ಮದು. ಆ ಸಂದರ್ಭದಲ್ಲಿ ನಾನು ದ್ರಾವಿಡ ಅಂತ ಸ್ಪಷ್ಟವಾಗಿ ಹೇಳದೋರು ಪೆರಿಯಾರ್ರು.’’
ಭಾರತದ ಸಮಾಜದಲ್ಲಿ ಬೆಳೆಯುತ್ತಿರುವ ಸಾಮಾಜಿಕ ಅಸಹನೆಯ ಬಗ್ಗೆ ರಾಜೀವ್ ಮಾತಾಡ್ತಾ ಹೇಳಿದರು: “ಜಗಳೂರು ಇಮಾಂ ಅಂತಿದ್ದರು. ಕೇಳಿದಿರಾ? ನಾಲ್ವಡಿ ಕೃಷ್ಣರಾಜ ಒಡೆಯರ್ ಮಿನಿಸ್ಟ್ರಿಯೊಳಗೆ ಎಜುಕೇಶನ್ ಮಿನಿಸ್ಟರ್ ಆಗಿದ್ದೋರು. ಕನ್ನಡವನ್ನು ದಕ್ಷವಾದ ರೀತೀಲಿ ಉಪಯೋಗಿಸೋರು. ಆತನ ಬಗ್ಗೆ ಯಾರೂ ಮಾತಾಡೋದೆ ಇಲ್ಲ. ಮೈಸೂರು ಕಟ್ಟದೋರು ಯಾರು ಅಂದರೆ ವಿಶ್ವೇಶ್ವರಯ್ಯ ಅಂತೀವಿ. ಮಿರ್ಜಾ ಇಸ್ಮಾಯಿಲ್ ಅಂತ ಒಬ್ಬ ಇದ್ದ. ಇವತ್ತು ಮಂಡ್ಯಾ ಕೊಟ್ಟೋನು ಅವನು. ಬೆಂಗಳೂರು ಮೈಸೂರನ್ನ ಸುಂದರವಾಗಿಸಿದೋನು ಅವನು; ಶಹಜಹಾನ್ ಇದ್ದಂಗ. ಜೈಪುರ್ ಹೈದರಾಬಾದ್ ಎಲ್ಲಿ ಹೋದ್ರೆ ಅದನ್ನ ಬೆಳಗಿಸಿಬಿಡೋನು. ನಾವೆಲ್ಲ ಸೆಕ್ಯುಲರ್. ಅವನ ಮಾತೇ ಎತ್ತೋದಿಲ್ಲ. ಅಮೆರಿಕನ್ ಸಿಟಿಜನ್ ನಾನು. ಈ ದೇಶಕ್ಕೂ ಅಮೆರಿಕಕ್ಕೂ ಇರೋ ಫರಕು ನೋಡ್ರಿ. ಇಲ್ಲಿ ಒಬ್ಬ ಮುಸ್ಲಿಂ ಬೇಕು ಪ್ರೆಸಿಡೆಂಟ್ ಆಗೋಕೆ. ಅಧಿಕಾರ ಇಲ್ಲ. ಆದರೆ ಇವತ್ತು ಅಮೆರಿಕ ತನ್ನ ಫ್ಯಾಕ್ಟುವಲ್ ಪವರ್ ಒಬ್ಬ ಕರಿಯನಿಗೆ ಕೊಟ್ಟದ. ವಿಚ್ ಇಸ್ ಹಾನೆಸ್ಟ್ ಅಫರ್ಮಿಟಿವ್ ಆಕ್ಟ್’’
ರಾಜೀವ್ ರಾಮಾನುಜನ್ ತೇಜಸ್ವಿ ಲಂಕೇಶ್ ಕಾರ್ನಾಡ್ ಮುಂತಾದ ನವ್ಯ ಲೇಖಕರಿಗೆ, ಜಾತಿಪದ್ಧತಿ ಬಗ್ಗೆಯಿದ್ದ ತಿರಸ್ಕಾರದ ಜತೆಯಲ್ಲೇ, ಯೂರೋಪಿಯನ್ ಸಮಾಜಗಳಲ್ಲಿರುವ ಉದಾರತೆ ಬಗ್ಗೆ ಆದರವಿತ್ತು. ಸಾಹಿತ್ಯ ಸಂಗೀತಗಳಲ್ಲಿದ್ದ ಗತಿಯೂ ತಂದೆಯಿಂದ ಬಂದ ವೈಚಾರಿಕತೆಯೂ ರಾಜೀವ್ ಅವರಿಗೆ ಸೀಮೋಲ್ಲಂಘನ ಶಕ್ತಿಯನ್ನು ಒದಗಿಸಿದಂತೆ ತೋರಿತು. ಅವರು ಮಾತಾಡುತ್ತ ತಮಿಳುನಾಡಿನಲ್ಲಿ ತಿರುಚ್ಚಿಯಲ್ಲಿ ಅಧ್ಯಾಪಕರಾಗಿದ್ದಾಗ ಬೈಕ್ ಅಪಘಾತದಲ್ಲಿ ಕಾಲುಮುರಿದುಕೊಂಡ ಪ್ರಸಂಗ ನೆನಪಿಸಿಕೊಂಡರು:
“ಮೋಟರ್ ಸೈಕಲ್ ಅಪಘಾತದಲ್ಲಿ ಕಾಲು ಮುರಿದಾಗ, ಹಾಸಿಗೆಯೊಳಗೆ ಎಲ್ಲಾ. ನನ್ನ ಶಿಷ್ಯರು ನನ್ನ ಕುಂಡೀ ತೊಳದರು. ಉಚ್ಚೀ ಬಳದರು. ಅವರ್ಯಾರೂ ನನ್ನ ಜಾತಿಯವರಲ್ಲ. ಒಮ್ಮೆ ಪ್ರೊ. ಇಸ್ಮಾಯಿಲ್ ಅಂತ ಪಿನ್ಸಿಪಾಲರೂ ಕಾಲೇಜಿನ ಸೆಕ್ರೆಟರಿ ಜಮಾಲುದ್ದೀನ್ ಸಾಹೇಬರೂ ನನ್ನ ನೋಡೋಕೆ ಬಂದರು. ಅವರನ್ನು ನೋಡಿ ‘ಯಾವ್ಯಾಗ ಎಷ್ಟೆಷ್ಟು ಸಾಲರಿ ಕಟ್ ಮಾಡ್ತೀರಿ ಹೇಳಿಬಿಡ್ರಿ’ ಅಂದೆ. ‘ಕಾಲು ಸರಿಯಿದ್ರೆ ಸ್ಯಾಲರಿ ಕಟ್ ಮಾಡತಿದ್ವಿ. ಆದರೆ ನಿಮ್ಮ ಕಾಲು ಕಟ್‍ಆಗಿದೆ. ನಿಮಗೆ ಒಬ್ಬ ಸರ್ವೆಂಟ್ ಇಡಬೇಕು. ಅದಕ್ಕೆ ಬಂದಿದೀವಿ’’ ಅಂದರು.
ರಾಜೀವ್ ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿ. ಹಲವಾರು ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಪ್ರಾಧಾಪಕರಾಗಿದ್ದವರು; ಕನ್ನಡದಲ್ಲಿ ವಿಮರ್ಶೆಯ ಲೇಖನಗಳನ್ನು ಬರೆದವರು. ಅವರೊಮ್ಮೆ ಬೆಂಗಳೂರಿನಲ್ಲಿ ಪಾಶ್ಚಾತ್ಯ ವಿಮರ್ಶೆಯ ಬಗ್ಗೆ ಮಾಡಿದ ಅದ್ಭುತ ಉಪನ್ಯಾಸಗಳ ಬಗ್ಗೆ ಶ್ರೀಧರ್ ನನ್ನಲ್ಲಿ ಹೇಳಿದ್ದರು. ನಾನು ಮನೋಹರ ಗ್ರಂಥಮಾಲಾದ ‘ಮನ್ವಂತರ’ ಸಂಚಿಕೆಯಲ್ಲಿ ರಾಜೀವ್ ಬರೆದಿದ್ದ ವಿಮರ್ಶೆಯ ಲೇಖನವೊಂದನ್ನು ಓದಿದ್ದೆ. ಅದರ ನೆನಪಿನಲ್ಲಿ ‘ಯಾಕೆ ಸಾಹಿತ್ಯ ವಿಮರ್ಶೆ ಬರೆಯೋದನ್ನ ನಿಲ್ಲಿಸಿದಿರಿ?’ ಎಂದು ಕೇಳಿದೆ:
“ಈಗ ಅವೆಲ್ಲ ಮರತಬಿಡ್ರಿ. ಅದರಾಗೆ ಏನಿಲ್ಲ. ಮದುವೆ ಆಗಬಾರದಿತ್ತು. ಆಗಿಬಿಟ್ಟೆ. ಈ ಸಾಹಿತ್ಯಕ್ಕೆ ಬರಬಾರದಿತ್ತು. ಅಕಸ್ಮಾತ್ ಬಂದುಬಿಟ್ಟೆ. ನಾನೂ ಅನಂತಮೂರ್ತಿಯವರೂ ಸಮಕಾಲೀನರು. ಇಂಗ್ಲೀಶ್ ಸಾಹಿತ್ಯ ಓದಿ ಬೆಳದೋರು. ನಾನು ಬೆಂಗಳೂರಲ್ಲಿ ಓದಿದೆ, ಅವರು ಮೈಸೂರಲ್ಲಿ ಓದಿದ್ರು. ಇಬ್ಬರಿಗೂ ಒಂದೇ ದಿವಸ ಕೆಲಸಾ ಸಿಕ್ತು. ಐದಾರು ತಿಂಗಳು ಒಟ್ಟಿಗೆ ಕೆಲಸ ಮಾಡ್ತಿದ್ದಿವಿ. ಆದರೆ ನಾವು ಒಟ್ಟು ಕಳ್ಳರು. ಅಲ್ಲಿ ಇಲ್ಲಿ ಓದಿದ್ದು ತಿರುಗಾಮುರುಗಾ ಬರದು ನಮ್ಮ ಸೈನ್ ಹಾಕಿಬಿಡ್ತೀವಿ. ನವ್ಯದವರಲ್ಲಿ ಕದ್ದಿದ್ದೇ ಹೆಚ್ಚು. ಅವರು ಎಲ್ಲೆಲ್ಲಿ ಕದ್ದಾರೆ ಅಂತ ನನಗ್ಗೊತ್ತು. ಏನು ಸಿಕ್ಕರೂ ಲೋಹಿಯಾ ಹೆಸರು ಹಚ್ಚಿಬಿಡೋದು. ಸಂಕೀರ್ಣತೆ ಸಂಕೀರ್ಣತೆ ಅನ್ನೋರು. ಒದೀಬೇಕ್ರೀ. ಈ ಸಂಕೀರ್ಣತೆ ಮೈಸೂರಿನ ಕಾಫಿಹೌಸಲ್ಲಿ ಹುಟ್ಟಿದ್ದು. ನಾನು ಹೆಚ್ಚು ಸಾಹಿತ್ಯ ಓದಿಲ್ಲ. ನನ್ನ ದಾವೇ ಏನೂಂದ್ರೆ ಅನಂತಮೂರ್ತಿನೂ ಹೆಚ್ಚು ಓದಿಲ್ಲ. ನೀವು ಸಾಹಿತ್ಯದ ಪ್ರಶ್ನೆಗಳನ್ನ ಕುರ್ತಕೋಟಿಯಂತಹವರ ಹತ್ರ ಕೇಳಬೇಕು. ಕನ್ನಡ ಸಾಹಿತ್ಯದ ಇಡೀ ಮ್ಯಾಪ್ ತಿಳಕೊಂಡೋರು ಅವರು. ನನ್ನದೊಂದು ಲೇಖನ ಮನೋಹರ ಗ್ರಂಥಮಾಲಾದ ಸಂಪುಟದಲ್ಲಿ ಇನ್ನೂ ಹಸಿಯಾಗಿ ಇದೆ- ಕನ್ನಡ ಸಾಹಿತಿಗಳ ಕುರಿತು. ಕೆಲವರು ನನ್ನ ಆತ್ಮಕತೆ ಬರೀರಿ ಅಂತ ಗಂಟುಬಿದ್ದಾರ. ಮೊನ್ನೆ ಪ್ರಕಾಶಕರೊಬ್ಬರು ಬಂದಿದ್ರು. ನಿಮ್ಮ ವಿಮರ್ಶೆ ಬರೆಹಗಳನ್ನೆಲ್ಲ ಒಟ್ಟು ಹಾಕಿದೀವಿ, ಪ್ರಕಟಮಾಡ್ತೀವಿ ಅಂದರು. ನೀವು ಅದನ್ನ ತರೋ ಆವಶ್ಯಕತೆ ಇಲ್ಲ ಅಂತಂದೆ. ಏನೋ ಒಂದೆರಡು ನೋಟ ಸಿಗಬಹುದು. ಆ ಕಾಲದಲ್ಲಿ ರಾಜೀವ್ ಹೇಳಿದ್ರೆ ಉಂಟು ಇಲ್ಲದಿದ್ರೆ ಇಲ್ಲ ಅಂತ ಭಾಳ ಜಂಬಾ ಇತ್ತು ನನಗೆ. ಆ ಆರ್.ಕೆ. ನಾರಾಯಣ- ನಾನು ಅವರನ್ನ ಇಂಗಿನ ನಾರಾಯಣ ಅಂತಿದ್ದೆ- ಬರೆದ ಒಂದು ಬೇಜವಾಬ್ದಾರಿ ಕಾದಂಬರಿ ಓದಿ ನಾನೊಂದು ಬೇಜವಾಬ್ದಾರಿ ಲೇಖನ ಬರೆದಿದ್ದೆ. ಅದನ್ನು ಹರಡಿ ವಿಸ್ತಾರಮಾಡಿ ಜಾನೆಟ್ ಗ್ಯಾನೆಲ್ ಅನ್ನೋಳು ಪಿಎಚ್.ಡಿ., ಪಡೆದಳು. ಈಗ ಅವೆಲ್ಲ ಬುಲ್‍ಶಿಟ್ ಅನಸ್ತದ.’’
‘ಯಾಕೆ ನಿಮ್ಮ ಸಾಹಿತ್ಯ ವಿಮರ್ಶೆಯನ್ನ ಡಿಸ್‍ಓನ್ ಮಾಡ್ತೀರಿ’ ಎಂದೆ. ‘ಸಂಗೀತ ಡಿಸ್‍ಓನ್ ಮಾಡೋದಿಲ್ಲ. ಆದರೆ ಈ ವಿಮರ್ಶೆ ಡಿಸ್‍ಓನ್ ಮಾಡ್ತೇನೆ. ನೋಡ್ರಿ, ನನಗೆ 80 ವರ್ಷ ಆತು. ನನ್ನ ಮುಂದೆ ಸಾಕಷ್ಟು ಟೈಮಿಲ್ಲ. ನಿಮ್ಮಂಥವರು ಬರದದ್ದು ಓದ್ತೀನಿ. ಅದರೊಳಗಿನ ಕನ್ನಡಕ್ಕಾಗಿ ಅಲ್ಲ, ಅಲ್ಲಿರುವ ಸೂಫಿ ನಜರಿಯಾತಿಗೆ. ಈ ಕನ್ನಡದ ಸಾಹಿತ್ಯದಿಂದ ನಾನು ಕಲೀಬೇಕಾಗಿಲ್ಲ. ಸಾಹಿತ್ಯ ಲೋಕದಲ್ಲಿ ನಾನು ಬಹಳ ಕಾಲ ಇರಲಿಲ್ಲ. ಅಷ್ಟುಹೊತ್ತಿಗೆ ಖಾನ್‍ಸಾಹೇಬರ ಹತ್ತಿರ ಸಂಗೀತ ಕಲೀಲಿಕ್ಕೆ ಬಾಂಬೇಕ್ಕೆ ಹೋದೆ. ಬಾಂಬೆ ಹೋಗಿ ಇದ್ದಮ್ಯಾಲೆ ‘ಮೈ ಕಲ್ಕತ್ತಾ ಜಾರಹಾ ಹೂಂ, ತುಂ ಭೀ ಆಜಾವ್’ ಅಂತ ಸುಲಭವಾಗಿ ಹೇಳಿ ಕಾಡಿಗೆ ಹೋದಹಾಗೆ ಹೊರಟುಹೋಗಿ ಬಿಟ್ರು. ಮತ್ತೆ ಕಲ್ಕತ್ತಾಕ್ಕೆ ಹೋದೆ’’ ಎಂದರು.
ರಾಜೀವರ ಆತ್ಮಕಥೆಯ ಭಾಗಗಳು, ಸುಮಂಗಲಾ ಅವರು ಮಾಡಿರುವ ಸುದೀರ್ಘ ಸಂದರ್ಶನದಲ್ಲಿ (`ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥ') ಇದೆ. ಶೈಲಜ –ಟಿ.ಎಸ್. ವೇಣುಗೋಪಾಲ್ ಅವರು ಸಂಪಾದಿಸಿರುವ ‘ವಾದಿ-ಸಂವಾದಿ’ ಎಂಬ ರಾಜೀವ್ ಸಂಗೀತ ಕುರಿತ ಅಪರೂಪದ ಸಂಚಿಕೆಯಲ್ಲೂ ಇದೆ. ಆದರೆ ರಾಜೀವ್ ಬದುಕಿನ ಪಯಾಣದ ಪ್ರಚಂಡ ಪ್ರಯೋಗಗಳನ್ನು ಮತ್ತು ಅನುಭವಗಳನ್ನು ಇನ್ನೂ ಹೊರತೆಗೆಯುವುದು ಸಾಧ್ಯವಿದೆ ಎಂದು ನನಗೆ ಅನಿಸುತ್ತಿತ್ತು. ಹೀಗಾಗಿ “ನೀವು ನಿಮ್ಮ ವಿಮರ್ಶೆಯ ಬರೆಹಗಳನ್ನ ಪ್ರಕಟಿಸಿದೇ ಇದ್ರೂ ಪರವಾಯಿಲ್ಲ. ಆದರೆ ಆತ್ಮಕತೆ ಬರೀರಿ. ಯಾಕಂದರೆ ನೀವು ಸೂಫಿಗಳ ಪ್ರೇಮದ ಕಲ್ಪನೆಯಲ್ಲಿ ಬಂದವರು. ನಿಮ್ಮ ಜೀವನ ಚರಿತ್ರೆ ನಿಮ್ಮೊಬ್ಬರದು ಮಾತ್ರ ಅಲ್ಲ. ಅದರಲ್ಲಿ ವೈಚಾರಿಕತೆ, ಹಿಂದೂಸ್ತಾನಿ ಸಂಗೀತ, ಅದರೊಳಗಿನ ಧರ್ಮಾತೀತತೆಯ ಪರಂಪರೆಯ ಚಿತ್ರವೇ ಇದೆ’ ಎಂದು ಕೇಳಿಕೊಂಡೆ. ‘ಆಗಲಿ ಬರೀತೀನಿ. ಆದರೆ ಆತ್ಮಕತೆ ಅಂತ ಇರಬೇಕಾಗಿಲ್ಲ. ಮಾತುಕತೆ ಅಂತಿರಬಹುದು’ ಎಂದು ಒಪ್ಪಿದರು.
ರಾಜೀವ್ ಬಹುಧಾರ್ಮಿಕ ಬಹುಸಾಂಸ್ಕøತಿಕ ಮಾತ್ರವಲ್ಲ, ಬಹುಭಾಷಿಕ ಪರಂಪರೆಯಲ್ಲಿ ಬೆಳೆದುಬಂದವರು. ಅಪ್ಪನ ಕಡೆಯಿಂದ ಸಂಸ್ಕøತ ಮತ್ತು ಕೊಂಕಣಿ, ತಾಯಕಡೆಯಿಂದ ತಮಿಳು ಅವರಿಗೆ ಬಂದಿವೆ. ಬಾಲ್ಯವನ್ನು ತುಂಗಭದ್ರಾದಲ್ಲಿ ಕಳೆದ ಕಾರಣ, ತೆಲುಗು ಮತ್ತು ಕನ್ನಡಗಳು ಇವೆ. ಅಲಿ ಅಕ್ಬರ್‍ಖಾನ್ ಅವರ ಸಂಗದಲ್ಲಿದ್ದರಿಂದ ಉರ್ದುವಿದೆ. ಕಲ್ಕತ್ತೆಯಲ್ಲಿದ್ದುದರಿಂದ ಬಂಗಾಳಿಯಲ್ಲಿ ಗತಿಯಿದೆ. ಅಭ್ಯಾಸ ಮಾಡಿದ್ದು ಮತ್ತು ಕಲಿಸಿದ್ದು ಇಂಗ್ಲೀಶ್ ಸಾಹಿತ್ಯ. ಅಭಿವ್ಯಕ್ತಿಯ ಭಾಷೆ ಕನ್ನಡ. ಅದರಲ್ಲೂ ಅವರ ಕನ್ನಡಕ್ಕೆ ವಿಶಿಷ್ಟವಾದ ಸಂಕರ ಚಹರೆಯಿದೆ. ಅವರ ಮಾತುಕತೆಯಲ್ಲಿ ಸಹ ‘ಬಾರಿಸಾಣಿಕೆ’ ‘ಇಂಬು’ ಇತ್ಯಾದಿ ಅಚ್ಚಗನ್ನಡ ಶಬ್ದಗಳು ಸಹಜವಾಗಿ ಬರುತ್ತಿದ್ದವು. ಸರೋದ್ ಕುರಿತು ಹೇಳುವಾಗ ‘ನುಡಿಸು’ ಎಂಬ ಕ್ರಿಯಾಪದಕ್ಕೆ ಬದಲಾಗಿ ಚರ್ಮವಾದ್ಯಗಳಿಗೆ ಸಂಬಂಧಪಟ್ಟ ‘ಬಾರಿಸು’ ಎಂಬ ಶಬ್ದವನ್ನೇ ಬಳಸುತ್ತಿದ್ದರು. ಅವರ ಪ್ರಕಾರ ಸಂಸ್ಕøತ ದ್ರಾವಿಡ ಭಾಷೆಗಳ ಜತೆ ಅಷ್ಟು ಹೊಂದಾಣಿಕೆ ಆಗುವುದಿಲ್ಲ. ಬಂಗಾಳಿಗೆ ಚೆನ್ನಾಗಿ ಒಗ್ಗಿಕೊಳ್ಳುತ್ತೆ. ಇದನ್ನು ಅರಿಯದೆ ಕನ್ನಡದವರು ಅನಗತ್ಯವಾಗಿ ಸಂಸ್ಕøತ ಬಳಸಿದರು ಎನ್ನುತ್ತ ಕನ್ನಡದ ಕೆಲವು ನವೋದಯ ಲೇಖಕರಿಗಿದ್ದ ಸಂಸ್ಕøತ ವ್ಯಾಮೋಹವನ್ನು ಗೇಲಿ ಮಾಡಿದರು. ಬಂಗಾಳದಲ್ಲಿ ಮಕ್ಕಳ ಕೀರ್ತಿ ಹೆಚ್ಚಲಿ ಅಂತ ಮುಂಗೈಗೆ ಅತ್ತರ್ ಹಚ್ಚುವ ಪದ್ಧತಿಯಿದೆಯಂತೆ. ಒಮ್ಮೆ ಹಾಗೆ ಹಚ್ಚುವಾಗ ಮೂರುವರ್ಷದ ಮಗುವೊಂದು ಅದನ್ನು ಆಘ್ರಾಣಿಸುತ್ತ ‘ಕಿಂ ಮೊಧುರ ಸುಗಂಧೊ?’ ಹೇಳಿದ್ದನ್ನು ನೆನಪಿಸಿಕೊಂಡರು.
ರಾಜೀವ್ ಕನ್ನಡದಲ್ಲಿ ಉರ್ದು ಶಬ್ದಗಳು ಹದವಾಗಿ ಸೇರುವ ಪರಿ ಅಪೂರ್ವ. ಮಾತುಗಳಲ್ಲಿ ಸಹ ‘ದುನಿಯಾದೊಳಗೆ’ ‘ದುನಿಯಾನೇ ಮಾಡ್ತೀ' ಎಂಬ ನುಡಿಗಟ್ಟುಗಳು ಸಹಜವಾಗಿ ಬರುತ್ತಿದ್ದವು. ಅವರ ಪ್ರಕಾರ ಭಾಷೆಯ ವಿಷಯದಲ್ಲಿ ಕನ್ನಡಿಗರು ಉದಾರಿಗಳು. “ನನಗ ತಿಳಿದ್ಹಂಗ ಯಾವ ಭಾಷೆಯೂ ಆ ಭಾಷೆಯಾಡದ ಒಬ್ಬನಿಗೆ ಆ ಭಾಷೆಯ ಕಿರೀಟ ಕೊಡಲ್ಲ. ಆದರೆ ಕನ್ನಡಕ್ಕೆ ಮಾತ್ರ ಆ ಔದಾರ್ಯ ಅದ. ನಾ ಕನ್ನಡದವ್ಞ ಅಲ್ಲಾ. ಬೇಂದ್ರೆ ಗಿರೀಶ್ ಕನ್ನಡದವರಲ್ಲ. ಕನ್ನಡಿಗರ ಒಂದು ದೊಡ್ಡತನ ಅಲ್ಲಿದೆ.
ಮಾತಿನ ನಡುವೆ ರಾಜೀವರಿಗೆ ಮಗನ ಫೋನು ಬಂದಿತು. ಮಾತು ಮುಗಿಸಿದ ಬಳಿಕ “ಅಮೇರಿಕದಲ್ಲಿರ್ತಾನ. ಯಾವುದಾದರೂ ಒಂದು ಹುಡುಗಿ ಮುದುವೆಯಾಗು ಅಥವಾ ಕೂಡಕೊ. ಪುರುಷನಿಗೆ ಒಂದು ಹೆಣ್ಣಿನ ಅನುಭವ ಆಗಬೇಕು ಅಂತೀನಿ. ಇಲ್ಲಿಲ್ಲ ನೀನೇ ನೋಡು ಅಂತಾನ. ಒಳ್ಳೆಯವನು. ಅಂದರೆ ಏನೂ ಇಲ್ಲ. ತಾಯಿ ಮನೀಗ್ ಹೋಗ್ತಾನ. ತೊವ್ವೆ ಅನ್ನ ತಿಂತಾನ. ಮೋಟಾರ್ ಸೈಕಲ್ ರೇಸಿಂಗ್ ನೋಡ್ಕೊಂಡು ನಿದ್ದಿ ಮಾಡ್ತಾನ’ ಎಂದು ಕಪಾಟಿನ ಮೇಲಿದ್ದ ಮಗನ ಫೋಟೊ ದಿಟ್ಟಿಸುತ್ತ ಕೊಂಚಹೊತ್ತು ಮೌನವಾದರು. ಅವರೊಳಗೆ ಯಾವ ಭಾವತುಮುಲ ಹೊಯ್ದಾಡುತ್ತಿದ್ದವೊ ತಿಳಿಯದಾದೆ.
ರಾಜೀವರ ಜತೆ ಮಾತುಕತೆಯಲ್ಲಿ ‘ಗೊತ್ತಿಲ್ಲ’ ಎಂಬ ಶಬ್ದ ಬಹಳ ಸಲ ಬರುತ್ತದೆ. ಉಚ್ಚಸ್ವರದಲ್ಲಿ ಲಹರಿಯಲ್ಲಿ ನಿಧಾನವಾಗಿ ಕೇಳುಗರ ಕಣ್ಣಲ್ಲಿ ಕಣ್ಣುನೆಡದೆ ಎತ್ತಲೊ ಧ್ಯಾಸದಲ್ಲಿ ಹುಬ್ಬುಗಂಟಿಕ್ಕಿ ಗೌಡಿಕೆಯ ಗತ್ತಿನಲ್ಲಿ ಮಾತಾಡುತ್ತಾರೆ. ಅವರ ನುಡಿಯಲ್ಲಿ ಧಾರವಾಡ ಕನ್ನಡದ ಎಳೆಗಳು ಸೇರಿಕೊಂಡಿರುತ್ತವೆ. ಸನ್ನಿವೇಶವನ್ನು ನಾಟಕೀಯವಾಗಿ ಕಣ್ಣಿಗೆ ಕಟ್ಟುವಂತೆ ಹೇಳುವ ಕಲೆಯುಳ್ಳ ಅವರು, ನೆನಪಿಗೆ ಬಂದ ಅನುಭವ ವಿಚಾರಗಳಿಗೆ ಜೋಡಣೆ ಕೊಡುತ್ತ ಮಾತಾಡುವುದರಿಂದ ಮಾತುಕತೆ ಗೊಂಚಲಿನಂತಾಗುತ್ತದೆ. ಆದರೂ ಯಾವ ಸಂಗತಿ ಹೇಳುವುದಕ್ಕೆ ಆರಂಭಿಸಿದ್ದರೊ ಅಲ್ಲಿಗೆ ಮಾತು ಮರಳಿ ಬರುತ್ತದೆ. ಇದು ರಾಗವನ್ನು ನುಡಿಸುವಾಗ, ಬೇರೆಬೇರೆ ಆಲಾಪಗಳಲ್ಲಿ ಹರಿದಾಡಿದರೂ ಮೂಲಕ್ಕೆ ಮರಳುವ ಸಂಗೀತದ ಗುಣವಿದ್ದೀತು. ಕೆಲವು ಶಬ್ದಗಳಿಗೆ ಒತ್ತುಕೊಟ್ಟು ಜೋರಾದ ದನಿಯಲ್ಲಿ ಮಾತಾಡುವ ರಾಜೀವ್, ತಮಗೆ ಇಷ್ಟವಿಲ್ಲದ ವಿಷಯ ಬಂದಾಗ ತೀಕ್ಷ್ಣವಾದ ವ್ಯಂಗ್ಯ ವಿಡಂಬನೆಗಳನ್ನು ಬಳಸುತ್ತಾರೆ. ಇದನ್ನು ನೋಡುವಾಗ ಅವರು ಕೈಲಾಸಂ ತರಹ ನಾಟಕ ಬರೆಯಬಹುದಿತ್ತು ಅನಿಸುತ್ತದೆ. ಅವರ ಮಾತುಕತೆಯಲ್ಲಿ ಅವರು ಕೋಳಿಫಾರಂ ಇಟ್ಟ ಕತೆ, ಹೆಂಡತಿ ಚೆನ್ನಾಗಿ ಪುಳಿಯೋಗರೆ ಮಾಡಲಿಲ್ಲವೆಂದು ಆಕೆಗೆ ಅಟ್ಟಿಸಿಕೊಂಡು ಹೋದ ಸಹೋದ್ಯೋಗಿಯನ್ನು ಝಂಕಿಸಿದ ಕತೆ, ಬಸವನಗುಡಿಯಲ್ಲಿ ಒಮ್ಮೆ ಸಂಗೀತ ಕಾರ್ಯಕ್ರಮ ಮುಗಿದಾಗ ಸಂಘಟಕರು ಹಳೇ ವೃತ್ತಪತ್ರಿಕೆಯ ಚೂರಿನಲ್ಲಿಟ್ಟು ಮಸಾಲೆವಡೆ ಕೊಟ್ಟ ಪ್ರಸಂಗ, ಹಠಮಾಡಿಕೊಂಡು ನಿಂತ ದಸರೆಯ ಆನೆಯನ್ನು ಒಬ್ಬ ರಸಿಕ ಅದರ ಕಿವಿಯಲ್ಲಿ ಏನೋ ಹೇಳಿದಾಗ ಅದು ಓಡಿಹೋಗಿದ್ದು–ಮುಂತಾದ ಸ್ವಾರಸ್ಯಕರ ಪ್ರಸಂಗಗಳನ್ನು ಬಂದುಹೋದವು.
ಬಹುಶಃ ಕಾರಂತರ ಬಳಿಕ ಜೀವನದಲ್ಲಿ ಇಷ್ಟೊಂದು ಪ್ರಯೋಗ ಮಾಡಿದವರು ರಾಜೀವ್ ಅವರೇ ಇರಬೇಕು. ಅವರ ಜೀವನ ಒಂದರ್ಥದಲ್ಲಿ ‘ಭುಜಂಗಯ್ಯನ ದಶಾವತಾರಗಳು’. ಕೇಂಬ್ರಿಜ್ ಪರೀಕ್ಷೆಯ ಮೂಲಕ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಆರಂಭಿಸಿದ ಅವರು, ಪುಣೆಯ ಫಿಲ್ಮ್ ಇನ್ಸ್‍ಸ್ಟಿಟ್ಯೂಟ್, ಹೈದರಾಬಾದಿನ ಇಂಗ್ಲೀಶ್ ಮತ್ತು ವಿದೇಶಿ ಭಾಷೆಗಳ ಸಂಸ್ಥೆಯಂತಹ ಆಧುನಿಕ ಉನ್ನತಶಿಕ್ಷಣ ವಿದ್ಯಾಸಂಸ್ಥೆಗಳಲ್ಲಿ ಕಲಿಸಿದರು. ಜೀವಕ್ಕೆ ಬೇಡವೆನಿಸಿದಾಗ ಅವನ್ನೆಲ್ಲ ತ್ಯಜಿಸಿ ಸಾಂಪ್ರದಾಯಿಕ ಗುರುಕುಲ ಪದ್ಧತಿಯ ಪ್ರಕಾರ, ಅಲಿ ಅಕ್ಬರ್‍ಖಾನರ ಮನೆಯಲ್ಲಿದ್ದು ಸಂಗೀತ ಕಲಿತವರು. ಹೀಗಾಗಿ ಅವರಲ್ಲಿ ಪಾಶ್ಚಾತ್ಯ-ಪೌರ್ವಾತ್ಯಗಳ ವಿಶಿಷ್ಟ ಸಂಕರವೂ ಅವರಲ್ಲಿದೆ. ತಾರಾನಾಥರ ಬಗ್ಗೆ ಅವರು ಬರೆದಿರುವ ‘ಪವಾಡ -ಪ್ರಭಾವ’ ಎಂಬ ಅವರ ಪುಟ್ಟ ಬರೆಹವಿದೆ. ಪರಂಪರೆಯ ಹೆಸರಲ್ಲಿ ಜಡಸಂಪ್ರದಾಯಕ್ಕೆ ಜಾರುವ ಭಾರತೀಯ ಮನೋಭಾವವನ್ನು ಪಾಶ್ಚಿಮಾತ್ಯ ವೈಚಾರಿಕತೆಯಿಂದ ವಿಮರ್ಶೆ ಮಾಡುವ ಈ ಬರೆಹವು ಕಟುವಾದ ನಿಷ್ಠುರವಾದ ಚಿಂತನೆಯಿಂದ ಕೂಡಿದೆ. ‘ಮನ್ವಂತರ’ದಲ್ಲಿ ಬರೆದ ಲೇಖನ ಕೂಡ, ಪಾಶ್ಚಾತ್ಯ ಚಿಂತನೆಯು ಭಾರತದ ಲೇಖಕರಲ್ಲಿ ಅವರು ಪರಂಪರೆಯನ್ನು ಕಂಡುಕೊಂಡು ಅದರೊಳಗೆ ಆಳವಾಗಿ ಬೇರುಬಿಡಲಾಗದಂತೆ ತಡೆಹಿಡಿದಿರುವುದನ್ನು ಕಾಣಿಸುತ್ತದೆ. ರಾಜೀವ್ ಒಬ್ಬ ಆಳವಾದ ಸಂಕೀರ್ಣವಾದ ಸಂಗತಿಗಳನ್ನು ಚರ್ಚಿಸಬಲ್ಲ ಚಿಂತಕ ಕೂಡ.
ರಾಜೀವ್ ರಾತ್ರಿ ನಮಗೊಂದು ಭರ್ಜರಿ ಪಾರ್ಟಿ ಕೊಟ್ಟರು. ದುಂಡನೆಯ ತೆಳ್ಳನೆಯ ಗಾಜಿನ ಬಟ್ಟಲಲ್ಲಿ ಸ್ಕಾಚ್ ವಿಸ್ಕಿಯನ್ನು ಹಾಕಿಕೊಂಡು ಮುಕ್ಕಳಿಸುವಂತೆ ಒಮ್ಮೆ ಅದನ್ನು ಒಳಗೇ ಕುಲಕಿಸಿ ಬಾಯ ಸಮಸ್ತ ಗೋಡೆಗಳಿಗೂ ಢಿಕ್ಕಿಹೊಡೆಸಿ, ಹಲ್ಲುಗಳ ಸಂದಿಸಂದಿಗೂ ಒಳಿಸಿ, ತಾಲವ್ಯಕ್ಕೆ ಎರಚಿ, ಬಳಿಕ ಕಿರುನಾಲಗೆಯನ್ನು ದಾಟಿಸಿ ಗಂಟಲಿಗೆ ಇಳಿಸುತ್ತಿದ್ದರು. ಅವರ ಜತೆ ಗುಂಡುಹಾಕುತ್ತ ಮಾತುಕತೆ ಮಾಡುವುದು ಎಂದರೆ, ಮಲೆನಾಡಿನ ಮುಂಗಾರು ಮಳೆಗೆ ಮೈಯೊಡ್ಡಿದಂತೆ. ಬೇಡವಾದವರನ್ನು ಝಂಕಿಸಲು ಅವರ ಶಬ್ದಕೋಶದಲ್ಲಿ ಸಾಕಷ್ಟು ಬೈಗುಳಗಳು ಗುಡುಗುತ್ತವೆ; ಸಂಗೀತ ಸಾಹಿತ್ಯ ಕುರಿತ ಅಪರೂಪದ ಒಳನೋಟಗಳು ಮಿಂಚಿ ಮಾಯವಾಗುತ್ತವೆ; ಕಾರ್ಮುಗಿಲೊಂದು ನೀರುಸುರಿಸಿ ಹೋದಂತೆ ಆಪ್ತವಾದ ನೆನಪುಗಳು ಹಾಯುತ್ತವೆ. ತನಗೆ ಕಲಿಸಿದ ಗುರುಗಳ ಹಾಗೂ ಬೆಚ್ಚನೆಯ ಪ್ರೀತಿಕೊಟ್ಟ ಗೆಳೆಯರ-ಶಿಷ್ಯರ ಚಿತ್ರಗಳು ಮಿಂಚುಗಳಂತೆ ಬೆಳಕು ಚಿಮುಕಿಸುತ್ತವೆ. ಹಾಸ್ಯ ಮತ್ತು ವ್ಯಂಗ್ಯದ ಬಿರುಗಾಳಿ ಬೀಸುತ್ತದೆ. ಈ ನಡುವೆ ಅವರ ನಾಯಿ ಬೊಗಳಿತು-ತನ್ನೊಡೆಯನ ಸಮಯವನ್ನೆಲ್ಲ ನಾವೇ ಕಬಳಿಸುತ್ತಿರುವ ಅಸೂಯೆಯಲ್ಲಿ. ಆಗ ರಾಜೀವ್ “ಏ ಕುತ್ತಾ ಹಮಾರ ಹೈ. ಲೇಕಿನ್ ಹಮಾರೇ ಘರಾಂಣೇಕ ನಹಿ’ ಎಂದು ತಮಾಶೆ ಮಾಡಿದರು. ರಾಜೀವ್ ಹೊರನೋಟಕ್ಕೆ ಬಿರುಸಾದ ಕಾಂಡವುಳ ಮರದಂತೆ. ಆದರೆ ಅದರ ತುಂಬ ತಾಯ್ತನದ ಪ್ರೀತಿ ತುಂಬಿದ ಮೆತ್ತನೆಯ ಹಂಪಲುಗಳಿವೆ. ನಮ್ಮ ಜತೆ ಮಾತಾಡುವಾಗ ನಡುವೆ ಅನೇಕ ಫೋನ್ ಕರೆಗಳು ಬರುತ್ತಿದ್ದವು. ಅವನ್ನು ‘ಹಲೋ ರಾಜೀವ್ ತಾರಾನಾಥ್ ಹಿಯರ್’ ಎಂದು ಕಿರಿಕಿರಿ ಭಾವವಿಲ್ಲದೆ ಸ್ವೀಕರಿಸುತ್ತಿದ್ದರು. ಫೋನಲ್ಲಿ ಸಿಕ್ಕ ಕೆಲವರನ್ನು ಮನೆಗೆ ಆಹ್ವಾನಿಸುತ್ತಿದ್ದರು. ರಾಜೀವ್ ಅತಿಥಿಗಳನ್ನು ಊಟೋಪಚಾರದಲ್ಲಿ ಕೊಂದುಬಿಡುತ್ತಾರೆ. ಅವರ ಮನೆಯೊಂದು ಗುರುಕುಲವಲ್ಲ ಮಾತ್ರವಲ್ಲ, ಅನ್ನಛತ್ರ; ‘ಪ್ರೇಮಾಯತನ’. ಅವರಿಗೆ ಊಟ ಉಪಚಾರಗಳು ಮನುಷ್ಯಪ್ರೀತಿಯನ್ನು ಪ್ರಕಟಿಸುವ ಅವಕಾಶಗಳಂತೆ ತೋರಿತು. ಅವರ ಸ್ಮøತಿಸಂಚಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಊಟದ ಪ್ರಸಂಗಗಳ ದೊಡ್ಡ ದಾಸ್ತಾನೇ ಇದ್ದಂತಿತ್ತು. ಅದರಲ್ಲೂ ತಿರುಚ್ಚಿಯಲ್ಲಿ ಸವಿದ ರುಚಿಕಟ್ಟಾದ ಬಿರಿಯಾನಿಯ ಬಗ್ಗೆ ಬಹಳ ಹೇಳಿದರು.
ನನಗೂ ಶ್ರೀಧರ್ ಅವರಿಗೂ ಬೆಳಗಿನ ಜಾವ ಅವರು ಮಾಡುವ ರಿಯಾಜ್‍ನಲ್ಲಿ ಭಾಗವಹಿಸುವ ಆಸೆಯಿತ್ತು. ಬೆಳಿಗ್ಗೆ ಐದು ಗಂಟೆಗೇ ತಂತಿ ಮೀಟುವ ದನಿ ಬಂತು. ನಾವಿಬ್ಬರೂ ತಟ್ಟನೆದ್ದು ಮುಖಕ್ಕೆ ನೀರು ಬಡಿದುಕೊಂಡು ಹೋಗಿ ಕುಳಿತೆವು. ಚಹದ ಸರಬರಾಯಿ ಆಯಿತು. ತಬಲ ಕಲಿಯಲು ಬಂದ ಎಳೆಯ ಶಿಷ್ಯರು ಬಂದು ಕಾಲಿಗೆ ನಮಸ್ಕರಿಸಿ ಕೂತರು. ರಾಜೀವರ ದೊಡ್ಡದೇಹಕ್ಕೆ ಪ್ರಮಾಣದ ಔಚಿತ್ಯವಿಲ್ಲದಂತೆ ಚಿಕ್ಕದಾಗಿ ತೋರುವ ಕಾಲನ್ನು ನೀಡಿ ನುಡಿಸತೊಡಗಿದರು. ಸರೋದದಲ್ಲಿ ಕೈಬೆರಳುಗಳದ್ದೇ ಕರಾಮತ್ತು. ಬಿಗಿದ ಮೊಗದಲ್ಲಿ ಹುಬ್ಬುಗಳು ಕೊಂಕಾಗಿ, ಅವುಗಳ ನಡುವೆ ನಿರಿಗೆಗಳೆದ್ದು, ಸೊಡ್ಡು ಬಿಗಿಯಾಗಿ ತುಟಿ ಮುಂಚಾಚಿಕೊಳ್ಳುತ್ತದೆ. ರಾಜೀವ್ ನುಡಿಸುತ್ತ ತಮ್ಮೊಳಗೆ ಮುಳುಗಿಹೋಗುತ್ತಾರೆ. ಪ್ರತಿಕ್ರಿಯೆಗಾಗಿ ಕೇಳುಗರ ಮುಖ ನೋಡುವುದಿಲ್ಲ. ಆದರೆ ಆಗಾಗ್ಗೆ ಮುಖವೆತ್ತಿ ತಮ್ಮ ಎಳೆಯ ತಬಲಾ ಸಾಥಿಗಳ ಮುಖ ನೋಡುತ್ತಾರೆ. ಆಗ ಅವರ ತುಟಿಗಳಲ್ಲಿ ಹುಟ್ಟಿದ ಸಣ್ಣಗಿನ ಮುಗುಳುನಗೆ, ತಾಯಿ ಗುಟುಕು ಕೊಡುವಾಗ ಬಾಯಿಚಾಚುವ ಹಕ್ಕಿಮರಿಗಳಂತೆ ನೋಡುತ್ತ ಮುಖಚಾಚಿ ಕಾಯುತ್ತ ಕುಳಿತ ಶಿಷ್ಯರಿಗೆ ದಾಟುತ್ತಿತ್ತು. ಅವರು ಅದನ್ನು ಎದೆಹಾಲನ್ನು ಹೀರಿದ ಮಕ್ಕಳಭಾವದಲ್ಲಿ ಸ್ವೀಕರಿಸಿ ತಮ್ಮತಮ್ಮಲ್ಲೇ ಹಂಚಿಕೊಂಡು ಸಂತೃಪ್ತವಾಗಿ, ಮತ್ತೆ ಗುರುವಿನತ್ತ ಮರಳಿಸುತ್ತಿದ್ದರು. ಈ ಮಂದಸ್ಮಿತದ ಸುಳಿದಾಟವು ಸರೋದಿನ ತಂತಿ ಮತ್ತು ತಬಲಗಳ ಚರ್ಮದಿಂದ ಹುಟ್ಟುತ್ತಿದ್ದ ನಾದದ ಜತೆಗೆ ಸೇರಿ ಜುಗಲ್‍ಬಂದಿ ಮಾಡುವಂತಿತ್ತು. ರಾಜೀವ್ ನುಡಿಸಿದ ಮೊದಲನೇ ಕೃತಿ ನನ್ನೊಳಗೆ ಇಳಿಯಲಿಲ್ಲ. ಎರಡನೆಯದು ಮಾತ್ರ ಅಲೆಯಲೆಯಾಗಿ ಒಳಗನ್ನು ಬಂದು ತುಂಬಿಕೊಳ್ಳತೊಡಗಿತು. ಅದನ್ನು ತುಂಬಿಕೊಂಡು ತನ್ಮಯವಾಗಿರುವಾಗ ಸರೋದಿನ ತಾರು ಫಟ್ಟನೆ ತುಂಡಾಯಿತು. ಚಿಮ್ಮಟದಂತಹ ಕಟಿಂಗ್ ಪ್ಲೇಯರ್ ಎತ್ತಿಕೊಂಡು ಮೆಕ್ಯಾನಿಕನಂತೆ ತಂತಿಕಟ್ಟಿ ಬಿಗಿಮಾಡಿದರು. ಮತ್ತೆ ನಾದ ಉಕ್ಕತೊಡಗಿತು. ಅದು ಉತ್ತುಂಗಕ್ಕೆ ಏರುವಾಗ ಮತ್ತೊಮ್ಮೆ ತಂತಿ ಕೈಕೊಟ್ಟಿತು.
ರಾಜೀವ್ ರಿಯಾಜ್ ನಿಲ್ಲಿಸಿ ಎತ್ತಲೊ ನೋಡುತ್ತ ಹೀಗೆಂದರು: “ಮೇರಿ ತಬಿಯತ್ ಜರಾ ಢೀಲಿ ಹೈ. ಉಮರ್ ಕಾ ತಕಾಜಾ ಹೈ. ಥೋಡಾ ಸ ಪರ್ಹೇಜ್ ಕರನಾ ಪಡ್ತಾ ಹೈ. ಮೇರಿಪಾಸ್ ಜೊ ಭಿ ತಾಖತ್ ಬಚೀಹೈ, ಓ ಸಬ್ ಸರೋದ್ ಪರ್ ಲಗಾತಾ ಹ್ಞೂ’’ (ನನ್ನ ಆರೋಗ್ಯ ತುಸು ಶಿಥಿಲವಾಗಿದೆ. ವಯಸ್ಸಿನ ಕಾರಣ ಕೊಂಚ ಪಥ್ಯ ಮಾಡಬೇಕಾಗುತ್ತೆ. ನನ್ನೊಳಗೆ ಏನು ಕಸುವು ಉಳಿದಿದೆಯೊ ಅದನ್ನೆಲ್ಲ ಈ ಸರೋದಿನ ಮೇಲೆ ಹಾಕುತ್ತಿದ್ದೇನೆ.) ಎರಡು ಸಲ ಹೃದಯಕ್ಕೆ ಆಘಾತವಾಗಿದೆ. ಮೂರನೆಯದಕ್ಕೆ ಕಾಯುತ್ತಿರುವೆ. ಈ ಕೈಗೆ ಯಾವಾಗ ಪಾರಸಿ ಹೊಡೆಯುತ್ತದೆಯೊ ಅಲ್ಲೀತನಕ ಬಾರಿಸ್ತೇನೆ’’ ಹಠಾತ್ತನೆ ಅವರೊಳಗೆ ನುಸುಳಿದ ಈ ಮೃತ್ಯುಚಿಂತನೆ ಮತ್ತು ಉಳಿದ ಕಾಲವನ್ನು ತೀವ್ರವಾಗಿ ಬದುಕುವ ಹವಣಿಕೆ ಕಂಡು ಬೆರಗೂ ದಿಗಿಲೂ ಆಯಿತು.
ರಾಜೀವ್ ಮಾತುಕತೆಯ ನಡುನಡುವೆ, ನನ್ನ ಮನೆಮಾತೆಂದೊ ಏನೊ, ಭರಪೂರ ಉರ್ದು ಬಳಸುತ್ತಿದ್ದರು. ಅದು ಸರೋದ್ ವಾದನದಷ್ಟೇ ಮಧುರವಾಗಿತ್ತು. ನನಗೆ ಅವರೊಟ್ಟಿಗೆ ಉರ್ದುವಿನಲ್ಲಿ ಚರ್ಚೆ ಬೆಳೆಸಲು ಆಸೆ. ಆದರೆ ಚರ್ಚೆ ಮುಂದುವರೆಸುವಷ್ಟು ಶಬ್ದಸಂಪತ್ತಿನ ಕುವ್ವತ್ತಿಲ್ಲ. ನಾನು ‘ಬಹುತ್ ಹಸರತ್ ಥೀ ಆಪ್ ಕೆ ದೀದಾರ್ ಕಿ’ (ನಿಮ್ಮ ದರ್ಶನದ ಬಯಕೆ ಬಹುದಿನದಿಂದ ಇತ್ತು) ಎಂದೆ. ಅವರಿಗೆ ನನ್ನ ಮಾತಲ್ಲಿ ಆಡಂಬರ ಕಂಡಿರಬೇಕು. “ಇತನೆ ಊಂಚೆ ಖಯಾಲ್ ಮತ್ ರಖೋ. ದೀದಾರ್! ಎ ಲಬ್ಸ್ ಕಂಹಾ ಲಗಾನ? ಇತನೀ ಬಡೀ ಅಲ್ಫಾಸ್ ಏ ನಾಚೀಸ್ ಬಂದೆಪರ್ ಇಸ್ತೆಮಾಲ್ ನ ಕರೊ’ (ಇಷ್ಟೊಂದು ದೊಡ್ಡ ನಿರೀಕ್ಷೆ ಇರಿಸಿಕೊಳ್ಳಬೇಡಿ. ದರ್ಶನ! ಈ ಶಬ್ದವನ್ನು ಎಲ್ಲಿ ಬಳಸಬೇಕು? ಇಷ್ಟೊಂದು ಭಾರವಾದ ಶಬ್ದಗಳನ್ನು ಈ ಸಾಮಾನ್ಯ ವ್ಯಕ್ತಿಯ ಮೇಲೆ ಬಳಸಬೇಡಿ) ಎಂದರು.
ಸಾಹಿತ್ಯ ಚಿಂತಕ ಕುರ್ತಕೋಟಿಯವರು ತಮ್ಮೊಂದು ಲೇಖನದಲ್ಲಿ ರಾಜೀವ್ ಅವರನ್ನು `ಅವಧೂತ' ಎಂದಿರುವುದುಂಟು. ಅದು ನಿಜ. ರಾಜೀವ್ ಅವರ ಹಾಗೆ ಆರ್ಥಿಕ ಭದ್ರತೆಯುಳ್ಳ ದೊಡ್ಡದೊಡ್ಡ ಹುದ್ದೆಗಳನ್ನು ತ್ಯಜಿಸಿ ತಮ್ಮ ಆತ್ಮಕ್ಕೆ ಹತ್ತಿರವಾದ ಸಂಗೀತವನ್ನು ಕಲಿಯಲು ಹೋಗಿದ್ದನ್ನು ಗಮನಿಸಿದರೆ, ಒಬ್ಬ ಯೋಗಿಯೆಂದೇ ಅನಿಸುತ್ತದೆ. ಸಾಧನೆ ಎಂಬ ಶಬ್ದ ಸಂಗೀತ ಮತ್ತು ಯೋಗ ಎರಡರೂ ಕಡೆ ಸಮಾನ ಅರ್ಥದಲ್ಲೇ ಬಳಕೆಯಾಗುತ್ತದೆ. ಈ ಎರಡೂ ಕ್ಷೇತ್ರದಲ್ಲಿ ಸಾಧಕನಾಗುವುದು ಹಾಗೆ ಬೇರೆಬೇರೆಯಲ್ಲ. ಹೀಗಾಗಿಯೇ ಅವರೊಬ್ಬ ಸೂಫಿ ಅಥವಾ ಯೋಗಿಯ ಗುಣವುಳ್ಳ ಕಲಾವಿದ. ಸಾಹಿತ್ಯದ ವಿಷಯದಲ್ಲಿ ಬಿಗಿಯಾದ ತಾರ್ಕಿಕತೆಯಲ್ಲಿ ಚರ್ಚಿಸುವ ಅವರು ಸಂಗೀತದ ವಿಷಯ ಬಂದೊಡನೆ ಆಳವಾದ ದಾರ್ಶನಿಕತೆಗೆ ಸರಿದುಬಿಡುತ್ತಾರೆ. ಅವರಿಗೆ ಸಂಗೀತವು ಕೇವಲ ಕಲಾಮಾಧ್ಯಮವಲ್ಲ. ಏಕಕಾಲದಲ್ಲಿ ಅದು ತಮ್ಮನ್ನು ತಾವು ಕಂಡುಕೊಳ್ಳುವ ಕನ್ನಡಿ; ತಮ್ಮ ಗುರುಪರಂಪರೆಯನ್ನು ಮುಂದಕ್ಕೆ ಒಯ್ಯುವ ಹೊಣೆಗಾರಿಕೆ; ಹಾಗೆಯೇ ಭಾರತದ ಬಹುರೂಪಿ ಸಂಸ್ಕøತಿಯನ್ನು ಹುಡುಕುವ ಮಾಧ್ಯಮ. ಹೀಗಾಗಿಯೇ ರಾಜೀವ್, ಸದ್ಯದ ಭಾರತೀಯ ಸಮಾಜದಲ್ಲಿ ತುಂಬ ನಲುಗುತ್ತಿರುವಂತೆ ತೋರುವ ಭಾರತದ ಬಹುರೂಪಿ ಸಂಸ್ಕøತಿಯ ದೊಡ್ಡ ಪ್ರತೀಕವಾಗಿ ಕಾಣುವುದು. ಅವರ ‘ಸಂಗೀತ ಮತ್ತು ನಾನು’ ಎಂಬ ಲೇಖನದಲ್ಲಿ ಈ ಮಾತುಗಳಿವೆ:
“ನನ್ನ ದೇವರನ್ನು ನಾನೇ ಹುಡಕಿಕೊಳ್ಳಬೇಕಿತ್ತು ಮತ್ತು ಆ ಸಂಗೀತ ದೇವತೆಯಿಂದ ನನ್ನೊಳಗನ್ನು ತುಂಬಿಕೊಳ್ಳಬೇಕಿತ್ತು. ಆ ಭಾವನೆಯಿಂದ ನನ್ನ ದೇಶ-ಕಾಲವನ್ನು ಸೃಷ್ಟಿಸಿಕೊಳ್ಳಬೇಕಿತ್ತು. ಆ ಸಮಯದಲ್ಲಿ ನನ್ನೊಳಗೆ ಅಲಿಅಕ್ಬರ್ ಅವರು ಪ್ರವಹಿಸಿದರು. ಅವರ ಸಂಗೀತವು ನನಗೆ ಎಲ್ಲವನ್ನೂ ಅಥವಾ ಈ ಉಪಖಂಡ ನನಗೇನಾಗಿದೆಯೊ ಅದರ ಪ್ರತಿಯೊಂದನ್ನು ಗ್ರಹಿಸುವ, ಸ್ವೀಕರಿಸುವ ಮತ್ತು ರೂಪಿಸುವ ಪ್ರಗತಿಪರವಾದ ವೈವಿಧ್ಯಮಯ ವಿಧಾನಗಳನ್ನು ನೀಡಿತ್ತು. ರಸಾಸ್ವಾದದ ಕತ್ತಲೆಯ ಅನಿರ್ವಚನೀಯ ವಿಷಾದದ ಒಂಟಿತನದ ಪ್ರಶಾಂತತೆಯ ಪ್ರತ್ಯಕ್ಷತೆಯನ್ನು ಸೃಷ್ಟಿಸಲು ಒಬ್ಬ ಅಲಿ ಅಕ್ಬರ್ ಖಾನ್ ಬೇಕು ಎಂದಷ್ಟೆ ಹೇಳಬಲ್ಲೆ. ನನ್ನ ಗುರುವಿನಿಂದ ನಾನು ಪಡೆದುಕೊಂಡ ಅನುಗ್ರಹದಲ್ಲಿ ಈ ನೆಲದ ಒಂದು ಕಲ್ಲುಹರಳಿನಿಂದ ಹಿಡಿದು ಭಾರತೀಯ ಸಿನಿಮಾವರೆಗೆ ಎಲ್ಲದಕ್ಕೆ ಸಂಬಂಧಿಸಿದ ಒಂದು ಮಾಧ್ಯಮವನ್ನು ಹೊಂದಿರುವೆ. ನನ್ನ ಕಲೆಯಲ್ಲಿ ನನ್ನ ನಾಡು ನನಗೆ ಪಾರದರ್ಶಕವಾಗಿ ನನ್ನ ಸ್ಥಳ, ನನ್ನ ನಿರ್ದಿಷ್ಟ ಸ್ಥಳ ಮತ್ತು ಕಾಲ ಆಗಿದೆ. ನನಗೆ ದೇಶೀ ಆಗಿರುವುದರಲ್ಲಿ ಹರ್ಷವಿದೆ.’’
ಇದೇ ಹೊತ್ತಲ್ಲಿ ನಾನು ಸೂಫಿ ಸಂಗೀತದಲ್ಲಿರುವ ಮೆಹಫಿಲೆ ಸಮಾ, ಮೆಹಫಿಲೆ ಕಲಾಂಗಳ ಬಗ್ಗೆ ಪ್ರಸ್ತಾಪಿಸಿದೆ. ಆಶ್ಚ್ಚರ್ಯವಾಯಿತು! ಅಷ್ಟು ದೊಡ್ಡ ಸಂಗೀತಗಾರರಾದ ಅವರಿಗೆ ಈತನಕ ಸಮಾ ಕಾರ್ಯಕ್ರಮವನ್ನು ನೋಡಲು ಸಾಧ್ಯವಾಗಿಲ್ಲ. ‘ಮಹೆಫಿಲ್ ಸಮಾ ಮೇ ಶರೀಕ್ ಹೋನಾ ಚಾಹೂಂಗಾ. ಹಾಲ್ ಹೀ ಮೇ ಸುನಾ ಹ್ಞೂ ಕೆ ಗುಲಬರ್ಗಾಮೇ ಏಕ್ ಪೀರ್‍ಸಾಹೆಬ್ ಹ್ಞೈ. ತೊ ಉನ್ಸೇ ಭಿ ಮಿಲ್ನಾ ಚಾಹತಾ ಹ್ಞೂಂ’’ ಎಂದು ನಮ್ರವಾಗಿ ಉತ್ತರಿಸಿದರು. ತಮ್ಮ ತಂದೆಯ ಬಗ್ಗೆ ‘ಅಗರ್ ಇಸ್ ನಜರಿಯೇಸೇ ಆಪ್ ದೇಖನಾ ಚಾಹತೇ ಹ್ಞೈ ತೊ, ಹಮಾರೆ ವಾಲಿದ್‍ಸಾಬ್ ಏಕ್ ಸೂಫಿಯಾನಾ ಥೆ’ (ಈ ನಿಟ್ಟಿನಿಂದ ನೋಡುವುದಾದರೆ ನಮ್ಮಪ್ಪ ಒಬ್ಬ ಸೂಫಿಯಾಗಿದ್ದರು) ಎಂದರು. ನಾನು ಅಜ್ಮೀರಿನ ಮೆಹಫಿಲೆ ಸಮಾ ಬಗ್ಗೆ ಬಣ್ಣಿಸಿದಾಗ ‘ನನಗೆ ಒಮ್ಮೆ ಕರಕೊಂಡು ಹೋಗ್ತೀರಾ?’ ಎಂದು ಮಗುವಿನಂತೆ ಕೇಳಿದರು. ಮೈಸೂರಿನಲ್ಲಿ ತಾರಾನಾಥ್ ಫೌಂಡೇಶನ್ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತ ‘ನೀವೆಲ್ಲ ಬರ್ರಿ. ಸೂಫಿ ಟ್ರೆಡಿಶನ್ ಮ್ಯಾಲೆ ಸಿರೀಸ್ ಲೆಕ್ಚರ್ಸ್ ಮಾಡೋ ಇರಾದೆ ಅದ. ಫಯಾಜ್ ಖಾನ್, ಅಂವ ಆಕ್ಸಿಡೆಂಟ್ ಆಗಿ ಸತ್ತುಬದುಕಿದಂವ, ಕಟ್ಟಿಗೆ ಹಿಡಕೊಂಡು ಬರ್ತಾನ. ಕೆಳಕ್ಕ ಕೂಡ್ಲಿಕ್ಕೆ ಆಗೋದಿಲ್ಲ. ಕುರ್ಚಿಮ್ಯಾಲ ಕೂತು ಫಸ್ಟ್‍ಕ್ಲಾಸ್ ಹಾಡ್ತಾನ. ನಾನೂ ಬಾರಸ್ತೀನಿ. ಪ್ರಬೀರ್ ಭಟ್ಟಾಚಾರ್ಯ ಬಾರಸ್ತಾನ. ಬೆಂಗಾಲಿ. ಎಂಥಾ ಒಳ್ಳೇ ಸಿತಾರ ಪ್ಲೇಯರ್! ಸಣ್ಣವಯಸ್ಸು. ನಮ್ಮ ಬೆಂಗಳೂರಿನ ಕನ್ನಡಮ್ಮನ ಮಕ್ಕಳು ಎಷ್ಟರಮಟ್ಟಿಗೆ ಹಾಳಾಗಿದ್ದಾರೆ ಅಂತಂದ್ರೆ, ಆರು ವರ್ಷದಿಂದ ಅಲ್ಲಿ ಅದಾನ ಅಂವ. ಒಮ್ಮೇನೂ ಹಾಡಸಿಲ್ಲ’’ ಎಂದರು.
ನಾನು ಅವರಿಂದ ಬಿದಾಯಿ ತೆಗೆದುಕೊಳ್ಳುವುದಕ್ಕಾಗಿ ಅವರ ಮುಂಗೈಯನ್ನು ಸೂಫಿ ಪದ್ಧತಿಯಂತೆ ಚುಂಬಿಸಿದೆ. ನನ್ನ ಕೈಮೇಲೆ ತಮ್ಮ ಇನ್ನೊಂದು ಕೈಯನ್ನು ಇಟ್ಟು ‘ಅರರೆ!’ ಎನ್ನುತ್ತ ಆರ್ದ್ರ ಭಾವದಿಂದ ಅದುಮುತ್ತ “ಮತ್ತ ಮತ್ತ ಬರತಿರಬೇಕು’’ ಎಂದರು.
Comments

LikeShow more reactions
Reply3d

Bandlahalli 
Manage

No comments:

Post a Comment