stat Counter



Showing posts with label kannada women writers. Show all posts
Showing posts with label kannada women writers. Show all posts

Saturday, June 20, 2020

ಮುರಳೀಧರ ಉಪಾಧ್ಯ ಹಿರಿಯಡಕ - ಗೀತಾ ನಾಗಭೂಷಣ ಅವರ " ಬದುಕು " { 2001 } ಅಸಾಧಾರಣ ಪ್ರಾದೇಶಿಕ ಕಾದಂಬರಿ

’ಬದುಕು’  ಒಂದು ಪ್ರಾದೇಶಿಕ  ಕಾದಂಬರಿಯಾಗಿ  ಮೊದಲ ಓದಿನಲ್ಲೇ ಸಹೃದಯರನ್ನು ಆಕರ್ಷಿಸುತ್ತದೆ. ಗುಲ್ಬರ್ಗಾದ ಸಮೀಪದ ಶಿವಳ್ಳಿಯ ಭೌಗೋಳಿಕ ವಿವರಗಳು ಈ ಕಾದಂಬರಿಯಲ್ಲಿವೆ. ಶಿವಳ್ಳಿ ಯ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ವಿವರಗಳನ್ನು ಗ್ರಹಿಸಿ, ಭಾಷೆಯಲ್ಲಿ ಪ್ರತಿ  ಸೃಷ್ಟಿಸಲು ಲೇಖಕಿ ಗೀತಾ ನಾಗಭೂಷಣ  ಪ್ರಯತ್ನಿಸಿದ್ದಾರೆ.

ಶಿವಳ್ಳಿಯ ಮಲ್ಲಪ್ಪ ಜಮಾದಾರನ ಕುಟುಂಬದ ಎರಡು ತಲೆಮಾರಿನ ಕತೆ ಈ ಕಾದಂಬರಿಯ     ಮುಖ್ಯ ಕವಲು.     ಹನ್ನೆರಡನೆಯ ಶತಮಾನದ ಕಲ್ಯಾಣದ ಅಂತರ್ ಜಾತೀಯ ವಿವಾಹದ ಸಮಸ್ಯೆ ಇಪ್ಪತ್ತನೆಯ ಶತಮಾನದ ಶಿವಳ್ಳಿಯಲ್ಲೂ ಮುಖ್ಯವಾಗುತ್ತದೆ. ಮಲ್ಲಪ್ಪನ ಮಗಳು ಕಾಶಮ್ಮ ಲಿಂಗರಾಜನನ್ನು ಪ್ರೀತಿಸುತ್ತಾಳೆ. ಜಾತಿ-ಭೇದದಿಂದಾಗಿ ಇವರ  ವಿವಾಹ ಪೂರ್ವ ಪ್ರಣಯ ಭಗ್ನವಾಗುತ್ತದೆ. ಲಿಂಗ ರಾಜ್-ನೀಲಮ್ಮನನ್ನು ಕಾಶಮ್ಮ-ಮಾರ್ತಾಂಡನನ್ನು ಮದುವೆಯಾಗ ಬೇಕಾಗುತ್ತದೆ ಕೆಲವು ವರ್ಷಗಳ ಅನಂತರ ಲಿಂಗರಾಜ ಕಾಶಮ್ಮ ನನ್ನು ಕರೆತಂದು ತನ್ನ ಉಪಪತ್ನಿಯಾಗಿ ಇರಿಸಿಕೊಳ್ಳುತ್ತಾನೆ. ತನ್ನ ಹೆಂಡತಿಯ  ದಾಂಪತ್ಯ ದ್ರೋಹದಿಂದ ಕಂಗಾಲಾದ ಮಾರ್ತಾಂಡ ಸನ್ಯಾಸಿಯಾಗುತ್ತಾನೆ. ತನ್ನ ಸಾವು ಸಮೀಪಿಸುತ್ತಿದೆ ಅನ್ನಿದಾಗ ಕೊನೆಯ ಬಾರಿ ಕಾಶಮ್ಮನನ್ನು ಭೇಟಿಯಾಗುತ್ತಾನೆ. ಈ ಕಾದಂಬರಿಯಲ್ಲಿ ಮಾರ್ತಾಂಡನ ಪಾತ್ರ ಬೆಳೆಯುವುದಿಲ್ಲ. ಹಾದರದಂತೆ ಕುಡಿತವೂ ಅಂಗ. ಸೇಂದಿ ಅಂಗಡಿಯಲ್ಲಿ ನಡೆದ ಜಗಳವೊಂದರಲ್ಲಿ ಮಲ್ಲಪ್ಪನ ಮಗ ಕಲ್ಯಾಣೆ ಮುಕಡಪ್ಪನಿಗೆ ಹೊಡೆಯುತ್ತಾನೆ. ಬಿದ್ದ ಮುಕಡಪ್ಪ ತಲೆಗೆ ಕಲ್ಲು ತಾಗಿ ಸಾಯುತ್ತಾನೆ. ಕೊಲೆ ಆರೋಪ ಹೊತ್ತ ಕಲ್ಯಾಣೆ ಹದಿನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸುತ್ತಾನೆ. ಕಲ್ಯಾಣೆ ಯ ಹೆಂಡತಿ ಬೆಳ್ಳಿ ಊರಿನ ಗೌಡನ ಉಪ ಪತ್ನಿಯಾಗಲು ಒಪ್ಪದೆ ಸ್ವಾಭಿಮಾನಿಯಾಗಿ, ಗಂಡನ ನಿರೀಕ್ಷೆಯಲ್ಲಿ ಬದುಕುತಾಳೆ.
ಜೋಗತಿಯರ ಬದುಕಿನ ದಾರುಣ ಕತೆ ಈ ಕಾದಂಬರಿಯ ಇನ್ನೊಂದು ಕವಲು. ಮನೆಯವರ  ಒತ್ತಾಯದಿಂದ ಜೋಗತಿಯಾದ ಭರಮ್ಯಾನ ಮಗಳು ನೀಲವ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. "ದೊಡ್ಡ ದೊಡ್ದ ಮ್ಯಾಲಿನ ಜಾತಿ ಹೆಂಗಸರು ಯಾರಲೆ    ಜೋಗಣೇರಾಗಿ ಹಿಂಗ್   ಮೈ ಮಾರ್ಕೊಳ್ಳಾ ದಂಧಾಕ್ಕೆ ನಿಂತಿದ್ದು ಎಲ್ಲೆಲೆ  ಕೇಳಿದ್ದೇಯ ನೀನು?" ಎಂದು ನಿಂಬೆವ್ವ ಪ್ರಶ್ನಿಸುತ್ತಾಳೆ. ಜೋಗಿತಿಯಾಗಿದ್ದ ತುಳಜಾ ಹಾದರದ ಬದುಕನ್ನು ಬಿಟ್ಟು ಹುಸೇನನನ್ನು ಮದುವೆಯಾಗಿ ಊರುಬಿಟ್ಟು ಹೋಗುತ್ತಾಳೆ. ಚುಂಚೂರು ಆರೋಪ ನಿರಾಕರಿಸಿ ಪ್ರತಿಭಟಿಸುತ್ತಾಳೆ.
ಉಪ ಪತ್ನಿ ವ್ಯವಸ್ಥೆಯನ್ನು ಈ ಕಾದಂಬರಿ ಮೆಲುದನಿಯಲ್ಲಿ ವಿರೋಧಿಸುತ್ತದೆ. ಈರವ್ವ, ಮಲ್ಲಪ್ಪ ಜಮಾದಾರನ ಉಪಪತ್ನಿಯಾಗಿದ್ದಾಳೆ. ಬೆಳ್ಳಿ, ಗೌಡನೊಬ್ಬನ ಉಪಪತ್ನಿಯಾಗಲು ಒಪ್ಪುವುದಿಲ್ಲ. ತುಳಜಾಳ ಪ್ರತಿಭಟನೆ ಯಲ್ಲಿ ಬೆಳ್ಳಿಯ ಸ್ವಾಭಿಮಾನದಲ್ಲಿ ಕಾದಂಬರಿ ಕಾರ್ತಿಯ  ವಿಷಾದಪೂರ್ಣ ಆಶಾವಾದ ಕಾಣಿಸುತ್ತದೆ. ಕಲ್ಲವ್ವ, ತನ್ನ ಗಂಡನ ಮೃಗೀಯ ಲೈಂಗಿಕ ಲಾಲಸೆಗೆ ಬಲಿಯಾಗುತ್ತಾಳೆ. ಫತರೂನ ಪಾತ್ರ ಚಿತ್ರಣದಲ್ಲಿ ಶಿವಳ್ಳಿಯಲ್ಲಿನ ಹಿಂದೂ ಮುಸ್ಲಿಂ ಸಹ ಬಾಳ್ವೆಯನ್ನು ಕಾಣುತ್ತೇವೆ. ಶಿಥಿಲ ಬಂಧದ ಈ ಕಾದಂಬರಿ ದೇಸಿ ಕಥನ ಪರಂಪರೆಗೆ ಸೇರುತ್ತದೆ. ದಟ್ಟವಾದ ಅನುಭವ

ಮಂಡನೆಯಲ್ಲಿ ಆಸಕ್ತರಾದ ಲೇಖಕಿ ಗೀತಾ ನಾಗಭೂಷಣ ಆಖ್ಯಾನಗಳಷ್ಟೇ ಉಪಾಖ್ಯಾನಗಳಿಗೂ ಮಹತ್ವ ನೀಡಿದ್ದಾರೆ. ಸರ್ವ ಸಾಕ್ಷಿತ್ವದ ನಿರೂಪಣಿ ಇರುವ ಈ ಕಾದಂಬರಿಯಲ್ಲಿ ಉರ್ದು, ಹಿಂದೀ ಶಬ್ದಗಳು ಹಾಸುಹೊಕ್ಕಾಗಿರುವ ಗುಲ್ಬರ್ಗಾ ಕನ್ನಡವನ್ನು ಲೇಖಕಿ ಸಮರ್ಥವಾಗಿ ಬಳಸಿದ್ದಾರೆ. ಸುದೀರ್ಘವಾದ ಈ ಕಾದಂಬರಿಯ ಮೊದಲ್ ನೂರು ಪುಟ ಓದಿದ ಮೇಲೆ ’ ಗುಲ್ಬರ್ಗ ಕನ್ನಡ ಅರ್ಥವಾಗುತ್ತದೆಯೇ?" ಎಂಬ ಪ್ರಶ್ನೆಗೆ ನೀವು ’ಹೊಯಿಂದು’ (ಹೌದು)ಎನ್ನುತ್ತೀರಿ ಜನಪ್ರಿಯ ಹಾಗೂ  ಸೌಂದರ್ಯಾತ್ಮಕ ಅಂಶಗಳಲ್ಲಿ ಲೇಖಕಿ ರಾಜಿ ಮಾಡಿಕೊಂಡಿದ್ದಾರೆ. ಸಂಭಾಷಣಿ ಹಾಗೂ ಲೈಂಗಿಕ ವರ್ಣನೆಗಳನ್ನು ಅವಲೋಕಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

 ’ಬದುಕು’ ಮಾನವೀಯ ಅನುಭವದ ವ್ಯಾಪ್ತಿಯನ್ನು ವಿಸ್ತರಿಸುವ, ವೈವಿಧ್ಯಪೂರ್ಣ ಜೀವನಾನುಭವವನ್ನು ಜೀವಂತಿಕೆಯಿಂದ ಚಿತ್ರಿಸುವ ಅಸಾಧಾರಣ ಕಾದಂಬರಿ. ಈ ಬಹುಕೇಂದ್ರಿತ ಕಾದಂಬರಿ ಪುರುಷ ಪ್ರಧಾನ ಸಮಾಜದ ಜೋಗತಿ ಹಾಗೂ ಉಪಪತ್ನಿ ವ್ಯವಸ್ಥೆಯಿಂದ ಬಿಡುಗಡೆ ಪಡೆಯಲು ಹೆಣಗಾಡುತ್ತಿರುವ ಗುಲ್ಬರ್ಗಾದ ಗ್ರಾಮೀಣ ಮಹಿಳೆಯರ ಬದುಕಿನ ಆತ್ಮೀಯ ಚಿತ್ರಣವನ್ನು ನೀಡುತ್ತದೆ.

ಮುರಳೀಧರ ಉಪಾಧ್ಯ ಹಿರಿಯಡಕ,
ಬದುಕು(ಕಾದಂಬರಿ)
ಲೇ: ಗೀತಾ ನಾಗಭೂಷಣ
ಪ್ರ: ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮುದ್ರಣ:೨೦೦೧ ಬೆಲೆ ರೂ.೧೯೦ ಪುಟಗಳು-೪೮೯.

Tuesday, June 16, 2020

ಮುರಳೀಧರ ಉಪಾಧ್ಯ ಹಿರಿಯಡಕ - ಸರೋಜಾ ಆಚಾರ್ಯರ " ಅಲ್ಲಿದೆ ನಮ್ಮನೆ " { ಕಥಾ ಸಂಕಲನ - 2002 } ಮಧ್ಯಮ ವರ್ಗದ ಹಾಡು-ಪಾಡು

 ಸರೋಜ  ಆರ್. ಆಚಾರ್ಯರ ಮೊದಲ್ ಕಥಾಸಂಕಲನ ’ ವ್ಯವಸ್ಥೆ’ ಸಹೃದಯರ ಮೆಚ್ಚುಗೆ ಗಳಿಸಿದೆ. ಇದೀಗ ಪ್ರಕಟ್ವಾಗಿರುವ ಅವರ ಎರಡನೆಯ ಕಥಾಸಂಕಲನದಲ್ಲಿ ಒಂಬತ್ತು ಕತೆಗಳಿವೆ. "ಹಾಗೆ ನಾನು ಕಂಡು ಕೇಳಿ ತಿಳಿದ ಅನುಭವಗಳೇ ನನ್ನ ಕಥಾವಸ್ತುಗಳು. ನಿತ್ಯಜೀವನದಲ್ಲಿ ನೆರೆಹೊರೆಯಲ್ಲಿ, ಸಮಾರಂಭಗಳಲ್ಲಿ ಕಾರ್ಯಾಲಯಗಳಲ್ಲಿ ಎದುರಾಗುವ ನಮ್ಮ ನಿಮ್ಮಂತಹ ವ್ಯಕ್ತಿಗಳೇ ನನ್ನ ಕಥಾ ಪಾತ್ರಗಳು. ನನ್ನ ಕತೆಗಳಲ್ಲಿ  ಬರುವ ಈ ವ್ಯಕ್ತಿಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಹಿಂದೆಲ್ಲೋ ಭೇಟಿಯಾಗಿರುವಂತೆ ನಿಮಗೆ ಅನಿಸಿದರೆ ಅಲ್ಲಿಗೆ ನನ್ನ ಈ ಬರಹ ಸಾರ್ಥಕವಾದಂತೆ" ಎನ್ನುತ್ತಾರೆ ಲೇಖಕಿ.
ಮಹಾನಗರಗಳಲ್ಲಿ ಮಧ್ಯಮ ವರ್ಗದವರ ಜೀವನದ ಕಷ್ಟ-ಸುಖಗಳು ಸರೋಜಾ ಆಚಾರ್ಯರ ಕೆಲವು ಕತೆಗಳ ವಸ್ತು. ’ಆವರಣ’ ಕತೆಯ ಸುಮತಿ-ರವೀಂದ್ರ ದಂಪತಿಗಳು ಮನೆಸೈಟ್ ಕೊಳ್ಳಲಿಕ್ಕಾಗಿ ಲೆಕ್ಕಾಚಾರದಿಂದ ಜೀವನ ಸಾಗಿಸುತ್ತಾರೆ. ’ ವರ್ತುಲ’ ಕತೆಯಲ್ಲಿರುವ ವೈದೃಶ್ಯದ ತಂತ್ರ ಯಶಸ್ವಿಯಾಗಿದೆ. ಆನಂದನ ಪತ್ನಿ ವಸಂತಿ ನಿರುದ್ಯೋಗಿ. ಸ್ಕೂಟರು, ಮನೆಸೈಟು ಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ಜಯರಾಂನ ಪತ್ನಿ ಸರಳಾ ಒಳ್ಳೆಯ ಉದ್ಯೋಗದಲ್ಲಿದ್ದರು ಅವನು ಮಾನಸಿಕವಾಗಿ ಅಸುಖಿಯಾಗಿದ್ದಾನೆ. ಮಹಿಳೆ ಉದ್ಯೋಗದಲ್ಲಿರುವುದನ್ನು
ಲೇಖಕಿ ವಿರೋಧಿಸುವುದಿಲ್ಲ. ಮಧ್ಯಮ ವರ್ಗದ  ಬದುಕಿನ ಆತ್ಮೀಯ ಸಮೀಪ ಚಿತ್ರವೊಂದನ್ನು ಈ ಕತೆಯಲ್ಲಿ ನೀಡಿದ್ದಾರೆ. ಕೌಟುಂಬಿಕ ಸಂಬಂಧಗಳನ್ನು ಕುರಿತಾ ಕೆಲವು ಒಳ್ಳೆಯ ಕತೆಗಳು ಸರೋಜಾ ಆಚಾರ್ಯರ ವ್ಯವಸ್ಥೆ ಸಂಕಲನದಲ್ಲಿದ್ದುವು.

ಈ ಸಂಕಲನದ ’ ಸಂಜೆ ಮೂಡಿದ ಬೆಳಕು’ ತಲೆಮಾರುಗಳ ಅಂತರ ಕೌಟುಂಬಿಕ ಸಂಬಂಧಗಳನ್ನು ಕಲಾತ್ಮಕವಾಗಿ ಚಿತ್ರಿಸುತ್ತದೆ. ರಾಜಮ್ಮ ಹಾಗೂ ಅವರ್ ಮೈದುನ ಗೋಪಿಯ ನಡುವೆ ಅಕಾರಣ ದ್ವೇಷವಿದೆ.  ತಮ್ಮ ಮಕ್ಕಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಇವರು ಕತೆಯ ಕೊನೆಯಲ್ಲಿ ಪರಸ್ಪರ ಹೊಂದಿಕೊಂಡು ಬದುಕಲು ಕಲಿಯುತ್ತಾರೆ. ಈ ಸುದ್ದಿ ಹೊಸತಲ್ಲ; ಕತೆ ಅವಿಭಕ್ತ ಕುಟುಂಬದ ಇತಿಹಾಸ ದಲ್ಲಿರುವ ನಿಗೂಢ, ದಾರುಣ ಸಂಗತಿಗಳನ್ನು ಹದಿಹರೆಯದ ಹುಡುಗಿಯೊಬ್ಬಳು ಗಮನಿಸುತ್ತಾಳೆ.  ಗರ್ಭಿಣೆ ವಿಧವೆಯೊಬ್ಬಳನ್ನು ಮನೆಯಿಂದ ಹೊರ ಹಾಕಿದ ಈ ಕುಟುಂಬ ಈಗ ಶಾಪ ಗ್ರಸ್ತವಾಗಿದೆ.


’ ಸಹ ಪ್ರಯಾಣಿಕರು’ ಅನಿರೀಕ್ಷಿತ ಮುಕ್ತಾಯ ತಂತ್ರದ ಒಂದು ಒಳ್ಳೆಯ ಕತೆ. ಬದುಕಿನ ಆಕಸ್ಮಿಕಗಳನ್ನು ಈ ಕತೆ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಹಾಸಿಗೆ ಇದ್ದಷ್ಟು ಲ್ಕಾಲು ಚಾಚಲು, ಹೊಸ ತಲೆಮಾರಿನ ಎಳೆಯರೊಂದಿಗೆ ಹೊಂದಿಕೊಳ್ಳಲು ಹೆಣಗಾಡುವ ಮಹಿಳೆಯರ ಹಾಡು-ಪಾಡು ಚಿತ್ರಿಸುವ ’ಅಲ್ಲಿದೆ ನಮ್ಮನೆ’ ಒಂದು ವಾಚನಯೋಗ್ಯ ಸಂಕಲನ.

ಮುರಳೀಧರ ಉಪಾಧ್ಯ ಹಿರಿಯಡಕ
 ಅಲ್ಲಿದೆ ನಮ್ಮನೆ (ಕಥಾಸಂಕಲನ)
ಲೇ: ಸರೋಜ ಆರ್. ಆಚಾರ್ಯ
ಪ್ರ: ಸುಮಂತ ಪ್ರಕಾಶನ, ೧೧೮೩,
ಉಪ್ಪಿನಕೋಟೆ, ಬ್ರಹ್ಮಾವರ-೫೭೬೧೨೫.
ಮೊ.ಮುದ್ರಣ:೨೦೦೨ ಬೆಲೆ:ರೂ೬೦.



Tuesday, January 8, 2013

ವೈದೇಹಿ - [AUDIO }-" ಮಹಿಳೆಯರ ರಕ್ಷಣೆಗೆ ಸಂಕಲ್ಪ ಶಕ್ತಿ ಬೇಕು "

Vocaroo Voice Messageclik here to listen Kannada Writer  VAIDEHI { AUDIO }. Vaidehi,s comments about Delhi Gang Rape incident , recorded at Udupi on  6-1-2013.  ಕನ್ನಡ ಲೇಖಕಿ ವೈದೇಹಿ ಅವರು 6-1-2013 ರಂದು ಉಡುಪಿಯ ರಂಗಭೂಮಿಯ ಸಮಾರಂಭದಲ್ಲಿ ದೆಹಲಿ ಯುವತಿ ಅತ್ಯಾಚಾರ ಪ್ರಕರಣವನ್ನು  ಕುರಿತು ಮಾತನಾಡುತ್ತ ....

Monday, December 17, 2012

ಕೆ.ತಾರಾ ಭಟ್ { ಕನ್ನಡ ಲೇಖಕಿ } -AUDIO

Vocaroo Voice Message -clik here to listen K.TARA BHAT { AUDIO }K. Tara Bhat Kannada Writer, recollects her childhood memories , talks about  gendre discrimination in Karnataka.Interview by  Namratha for Spandana T. V. Udupi .    ಅವ್ಯಕ್ತ , ಲೋಟಸ್ ಪಾಂಡ್ ಕಾದಂಬರಿಗಳ ಲೇಖಕಿ ಕೆ. ತಾರಾ ಭಟ್ ಕೋಟೆಶ್ವರದ ತನ್ನ ಬಾಲ್ಯದ ಅನುಭವಗಳನ್ನು ಕುರಿತು ,  ಲಿಂಗಾಧಾರಿತ ಅಸಮಾನತೆಯ ಕುರಿತು ಈ ಸಂದರ್ಶನಲ್ಲಿ ವಿವರಿಸಿದ್ದಾರೆ .ಅವದಿ- -45 ನಿಮಿಷಗಳು . ಕೆ .ತಾರಾ ಭಟ್ ಕನ್ನಡದ ಅಲಕ್ಷಿತ ಲೇಖಕಿಯರಲ್ಲಿ ಒಬ್ಬರು.- ಮುರಳೀಧರ ಉಪಾಧ್ಯ