stat Counter



Tuesday, June 16, 2020

ಮುರಳೀಧರ ಉಪಾಧ್ಯ ಹಿರಿಯಡಕ - ಸರೋಜಾ ಆಚಾರ್ಯರ " ಅಲ್ಲಿದೆ ನಮ್ಮನೆ " { ಕಥಾ ಸಂಕಲನ - 2002 } ಮಧ್ಯಮ ವರ್ಗದ ಹಾಡು-ಪಾಡು

 ಸರೋಜ  ಆರ್. ಆಚಾರ್ಯರ ಮೊದಲ್ ಕಥಾಸಂಕಲನ ’ ವ್ಯವಸ್ಥೆ’ ಸಹೃದಯರ ಮೆಚ್ಚುಗೆ ಗಳಿಸಿದೆ. ಇದೀಗ ಪ್ರಕಟ್ವಾಗಿರುವ ಅವರ ಎರಡನೆಯ ಕಥಾಸಂಕಲನದಲ್ಲಿ ಒಂಬತ್ತು ಕತೆಗಳಿವೆ. "ಹಾಗೆ ನಾನು ಕಂಡು ಕೇಳಿ ತಿಳಿದ ಅನುಭವಗಳೇ ನನ್ನ ಕಥಾವಸ್ತುಗಳು. ನಿತ್ಯಜೀವನದಲ್ಲಿ ನೆರೆಹೊರೆಯಲ್ಲಿ, ಸಮಾರಂಭಗಳಲ್ಲಿ ಕಾರ್ಯಾಲಯಗಳಲ್ಲಿ ಎದುರಾಗುವ ನಮ್ಮ ನಿಮ್ಮಂತಹ ವ್ಯಕ್ತಿಗಳೇ ನನ್ನ ಕಥಾ ಪಾತ್ರಗಳು. ನನ್ನ ಕತೆಗಳಲ್ಲಿ  ಬರುವ ಈ ವ್ಯಕ್ತಿಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಹಿಂದೆಲ್ಲೋ ಭೇಟಿಯಾಗಿರುವಂತೆ ನಿಮಗೆ ಅನಿಸಿದರೆ ಅಲ್ಲಿಗೆ ನನ್ನ ಈ ಬರಹ ಸಾರ್ಥಕವಾದಂತೆ" ಎನ್ನುತ್ತಾರೆ ಲೇಖಕಿ.
ಮಹಾನಗರಗಳಲ್ಲಿ ಮಧ್ಯಮ ವರ್ಗದವರ ಜೀವನದ ಕಷ್ಟ-ಸುಖಗಳು ಸರೋಜಾ ಆಚಾರ್ಯರ ಕೆಲವು ಕತೆಗಳ ವಸ್ತು. ’ಆವರಣ’ ಕತೆಯ ಸುಮತಿ-ರವೀಂದ್ರ ದಂಪತಿಗಳು ಮನೆಸೈಟ್ ಕೊಳ್ಳಲಿಕ್ಕಾಗಿ ಲೆಕ್ಕಾಚಾರದಿಂದ ಜೀವನ ಸಾಗಿಸುತ್ತಾರೆ. ’ ವರ್ತುಲ’ ಕತೆಯಲ್ಲಿರುವ ವೈದೃಶ್ಯದ ತಂತ್ರ ಯಶಸ್ವಿಯಾಗಿದೆ. ಆನಂದನ ಪತ್ನಿ ವಸಂತಿ ನಿರುದ್ಯೋಗಿ. ಸ್ಕೂಟರು, ಮನೆಸೈಟು ಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ಜಯರಾಂನ ಪತ್ನಿ ಸರಳಾ ಒಳ್ಳೆಯ ಉದ್ಯೋಗದಲ್ಲಿದ್ದರು ಅವನು ಮಾನಸಿಕವಾಗಿ ಅಸುಖಿಯಾಗಿದ್ದಾನೆ. ಮಹಿಳೆ ಉದ್ಯೋಗದಲ್ಲಿರುವುದನ್ನು
ಲೇಖಕಿ ವಿರೋಧಿಸುವುದಿಲ್ಲ. ಮಧ್ಯಮ ವರ್ಗದ  ಬದುಕಿನ ಆತ್ಮೀಯ ಸಮೀಪ ಚಿತ್ರವೊಂದನ್ನು ಈ ಕತೆಯಲ್ಲಿ ನೀಡಿದ್ದಾರೆ. ಕೌಟುಂಬಿಕ ಸಂಬಂಧಗಳನ್ನು ಕುರಿತಾ ಕೆಲವು ಒಳ್ಳೆಯ ಕತೆಗಳು ಸರೋಜಾ ಆಚಾರ್ಯರ ವ್ಯವಸ್ಥೆ ಸಂಕಲನದಲ್ಲಿದ್ದುವು.

ಈ ಸಂಕಲನದ ’ ಸಂಜೆ ಮೂಡಿದ ಬೆಳಕು’ ತಲೆಮಾರುಗಳ ಅಂತರ ಕೌಟುಂಬಿಕ ಸಂಬಂಧಗಳನ್ನು ಕಲಾತ್ಮಕವಾಗಿ ಚಿತ್ರಿಸುತ್ತದೆ. ರಾಜಮ್ಮ ಹಾಗೂ ಅವರ್ ಮೈದುನ ಗೋಪಿಯ ನಡುವೆ ಅಕಾರಣ ದ್ವೇಷವಿದೆ.  ತಮ್ಮ ಮಕ್ಕಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಇವರು ಕತೆಯ ಕೊನೆಯಲ್ಲಿ ಪರಸ್ಪರ ಹೊಂದಿಕೊಂಡು ಬದುಕಲು ಕಲಿಯುತ್ತಾರೆ. ಈ ಸುದ್ದಿ ಹೊಸತಲ್ಲ; ಕತೆ ಅವಿಭಕ್ತ ಕುಟುಂಬದ ಇತಿಹಾಸ ದಲ್ಲಿರುವ ನಿಗೂಢ, ದಾರುಣ ಸಂಗತಿಗಳನ್ನು ಹದಿಹರೆಯದ ಹುಡುಗಿಯೊಬ್ಬಳು ಗಮನಿಸುತ್ತಾಳೆ.  ಗರ್ಭಿಣೆ ವಿಧವೆಯೊಬ್ಬಳನ್ನು ಮನೆಯಿಂದ ಹೊರ ಹಾಕಿದ ಈ ಕುಟುಂಬ ಈಗ ಶಾಪ ಗ್ರಸ್ತವಾಗಿದೆ.


’ ಸಹ ಪ್ರಯಾಣಿಕರು’ ಅನಿರೀಕ್ಷಿತ ಮುಕ್ತಾಯ ತಂತ್ರದ ಒಂದು ಒಳ್ಳೆಯ ಕತೆ. ಬದುಕಿನ ಆಕಸ್ಮಿಕಗಳನ್ನು ಈ ಕತೆ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಹಾಸಿಗೆ ಇದ್ದಷ್ಟು ಲ್ಕಾಲು ಚಾಚಲು, ಹೊಸ ತಲೆಮಾರಿನ ಎಳೆಯರೊಂದಿಗೆ ಹೊಂದಿಕೊಳ್ಳಲು ಹೆಣಗಾಡುವ ಮಹಿಳೆಯರ ಹಾಡು-ಪಾಡು ಚಿತ್ರಿಸುವ ’ಅಲ್ಲಿದೆ ನಮ್ಮನೆ’ ಒಂದು ವಾಚನಯೋಗ್ಯ ಸಂಕಲನ.

ಮುರಳೀಧರ ಉಪಾಧ್ಯ ಹಿರಿಯಡಕ
 ಅಲ್ಲಿದೆ ನಮ್ಮನೆ (ಕಥಾಸಂಕಲನ)
ಲೇ: ಸರೋಜ ಆರ್. ಆಚಾರ್ಯ
ಪ್ರ: ಸುಮಂತ ಪ್ರಕಾಶನ, ೧೧೮೩,
ಉಪ್ಪಿನಕೋಟೆ, ಬ್ರಹ್ಮಾವರ-೫೭೬೧೨೫.
ಮೊ.ಮುದ್ರಣ:೨೦೦೨ ಬೆಲೆ:ರೂ೬೦.



No comments:

Post a Comment