stat Counter



Saturday, June 20, 2020

ಮುರಳೀಧರ ಉಪಾಧ್ಯ ಹಿರಿಯಡಕ - ಗೀತಾ ನಾಗಭೂಷಣ ಅವರ " ಬದುಕು " { 2001 } ಅಸಾಧಾರಣ ಪ್ರಾದೇಶಿಕ ಕಾದಂಬರಿ

’ಬದುಕು’  ಒಂದು ಪ್ರಾದೇಶಿಕ  ಕಾದಂಬರಿಯಾಗಿ  ಮೊದಲ ಓದಿನಲ್ಲೇ ಸಹೃದಯರನ್ನು ಆಕರ್ಷಿಸುತ್ತದೆ. ಗುಲ್ಬರ್ಗಾದ ಸಮೀಪದ ಶಿವಳ್ಳಿಯ ಭೌಗೋಳಿಕ ವಿವರಗಳು ಈ ಕಾದಂಬರಿಯಲ್ಲಿವೆ. ಶಿವಳ್ಳಿ ಯ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ವಿವರಗಳನ್ನು ಗ್ರಹಿಸಿ, ಭಾಷೆಯಲ್ಲಿ ಪ್ರತಿ  ಸೃಷ್ಟಿಸಲು ಲೇಖಕಿ ಗೀತಾ ನಾಗಭೂಷಣ  ಪ್ರಯತ್ನಿಸಿದ್ದಾರೆ.

ಶಿವಳ್ಳಿಯ ಮಲ್ಲಪ್ಪ ಜಮಾದಾರನ ಕುಟುಂಬದ ಎರಡು ತಲೆಮಾರಿನ ಕತೆ ಈ ಕಾದಂಬರಿಯ     ಮುಖ್ಯ ಕವಲು.     ಹನ್ನೆರಡನೆಯ ಶತಮಾನದ ಕಲ್ಯಾಣದ ಅಂತರ್ ಜಾತೀಯ ವಿವಾಹದ ಸಮಸ್ಯೆ ಇಪ್ಪತ್ತನೆಯ ಶತಮಾನದ ಶಿವಳ್ಳಿಯಲ್ಲೂ ಮುಖ್ಯವಾಗುತ್ತದೆ. ಮಲ್ಲಪ್ಪನ ಮಗಳು ಕಾಶಮ್ಮ ಲಿಂಗರಾಜನನ್ನು ಪ್ರೀತಿಸುತ್ತಾಳೆ. ಜಾತಿ-ಭೇದದಿಂದಾಗಿ ಇವರ  ವಿವಾಹ ಪೂರ್ವ ಪ್ರಣಯ ಭಗ್ನವಾಗುತ್ತದೆ. ಲಿಂಗ ರಾಜ್-ನೀಲಮ್ಮನನ್ನು ಕಾಶಮ್ಮ-ಮಾರ್ತಾಂಡನನ್ನು ಮದುವೆಯಾಗ ಬೇಕಾಗುತ್ತದೆ ಕೆಲವು ವರ್ಷಗಳ ಅನಂತರ ಲಿಂಗರಾಜ ಕಾಶಮ್ಮ ನನ್ನು ಕರೆತಂದು ತನ್ನ ಉಪಪತ್ನಿಯಾಗಿ ಇರಿಸಿಕೊಳ್ಳುತ್ತಾನೆ. ತನ್ನ ಹೆಂಡತಿಯ  ದಾಂಪತ್ಯ ದ್ರೋಹದಿಂದ ಕಂಗಾಲಾದ ಮಾರ್ತಾಂಡ ಸನ್ಯಾಸಿಯಾಗುತ್ತಾನೆ. ತನ್ನ ಸಾವು ಸಮೀಪಿಸುತ್ತಿದೆ ಅನ್ನಿದಾಗ ಕೊನೆಯ ಬಾರಿ ಕಾಶಮ್ಮನನ್ನು ಭೇಟಿಯಾಗುತ್ತಾನೆ. ಈ ಕಾದಂಬರಿಯಲ್ಲಿ ಮಾರ್ತಾಂಡನ ಪಾತ್ರ ಬೆಳೆಯುವುದಿಲ್ಲ. ಹಾದರದಂತೆ ಕುಡಿತವೂ ಅಂಗ. ಸೇಂದಿ ಅಂಗಡಿಯಲ್ಲಿ ನಡೆದ ಜಗಳವೊಂದರಲ್ಲಿ ಮಲ್ಲಪ್ಪನ ಮಗ ಕಲ್ಯಾಣೆ ಮುಕಡಪ್ಪನಿಗೆ ಹೊಡೆಯುತ್ತಾನೆ. ಬಿದ್ದ ಮುಕಡಪ್ಪ ತಲೆಗೆ ಕಲ್ಲು ತಾಗಿ ಸಾಯುತ್ತಾನೆ. ಕೊಲೆ ಆರೋಪ ಹೊತ್ತ ಕಲ್ಯಾಣೆ ಹದಿನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸುತ್ತಾನೆ. ಕಲ್ಯಾಣೆ ಯ ಹೆಂಡತಿ ಬೆಳ್ಳಿ ಊರಿನ ಗೌಡನ ಉಪ ಪತ್ನಿಯಾಗಲು ಒಪ್ಪದೆ ಸ್ವಾಭಿಮಾನಿಯಾಗಿ, ಗಂಡನ ನಿರೀಕ್ಷೆಯಲ್ಲಿ ಬದುಕುತಾಳೆ.
ಜೋಗತಿಯರ ಬದುಕಿನ ದಾರುಣ ಕತೆ ಈ ಕಾದಂಬರಿಯ ಇನ್ನೊಂದು ಕವಲು. ಮನೆಯವರ  ಒತ್ತಾಯದಿಂದ ಜೋಗತಿಯಾದ ಭರಮ್ಯಾನ ಮಗಳು ನೀಲವ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. "ದೊಡ್ಡ ದೊಡ್ದ ಮ್ಯಾಲಿನ ಜಾತಿ ಹೆಂಗಸರು ಯಾರಲೆ    ಜೋಗಣೇರಾಗಿ ಹಿಂಗ್   ಮೈ ಮಾರ್ಕೊಳ್ಳಾ ದಂಧಾಕ್ಕೆ ನಿಂತಿದ್ದು ಎಲ್ಲೆಲೆ  ಕೇಳಿದ್ದೇಯ ನೀನು?" ಎಂದು ನಿಂಬೆವ್ವ ಪ್ರಶ್ನಿಸುತ್ತಾಳೆ. ಜೋಗಿತಿಯಾಗಿದ್ದ ತುಳಜಾ ಹಾದರದ ಬದುಕನ್ನು ಬಿಟ್ಟು ಹುಸೇನನನ್ನು ಮದುವೆಯಾಗಿ ಊರುಬಿಟ್ಟು ಹೋಗುತ್ತಾಳೆ. ಚುಂಚೂರು ಆರೋಪ ನಿರಾಕರಿಸಿ ಪ್ರತಿಭಟಿಸುತ್ತಾಳೆ.
ಉಪ ಪತ್ನಿ ವ್ಯವಸ್ಥೆಯನ್ನು ಈ ಕಾದಂಬರಿ ಮೆಲುದನಿಯಲ್ಲಿ ವಿರೋಧಿಸುತ್ತದೆ. ಈರವ್ವ, ಮಲ್ಲಪ್ಪ ಜಮಾದಾರನ ಉಪಪತ್ನಿಯಾಗಿದ್ದಾಳೆ. ಬೆಳ್ಳಿ, ಗೌಡನೊಬ್ಬನ ಉಪಪತ್ನಿಯಾಗಲು ಒಪ್ಪುವುದಿಲ್ಲ. ತುಳಜಾಳ ಪ್ರತಿಭಟನೆ ಯಲ್ಲಿ ಬೆಳ್ಳಿಯ ಸ್ವಾಭಿಮಾನದಲ್ಲಿ ಕಾದಂಬರಿ ಕಾರ್ತಿಯ  ವಿಷಾದಪೂರ್ಣ ಆಶಾವಾದ ಕಾಣಿಸುತ್ತದೆ. ಕಲ್ಲವ್ವ, ತನ್ನ ಗಂಡನ ಮೃಗೀಯ ಲೈಂಗಿಕ ಲಾಲಸೆಗೆ ಬಲಿಯಾಗುತ್ತಾಳೆ. ಫತರೂನ ಪಾತ್ರ ಚಿತ್ರಣದಲ್ಲಿ ಶಿವಳ್ಳಿಯಲ್ಲಿನ ಹಿಂದೂ ಮುಸ್ಲಿಂ ಸಹ ಬಾಳ್ವೆಯನ್ನು ಕಾಣುತ್ತೇವೆ. ಶಿಥಿಲ ಬಂಧದ ಈ ಕಾದಂಬರಿ ದೇಸಿ ಕಥನ ಪರಂಪರೆಗೆ ಸೇರುತ್ತದೆ. ದಟ್ಟವಾದ ಅನುಭವ

ಮಂಡನೆಯಲ್ಲಿ ಆಸಕ್ತರಾದ ಲೇಖಕಿ ಗೀತಾ ನಾಗಭೂಷಣ ಆಖ್ಯಾನಗಳಷ್ಟೇ ಉಪಾಖ್ಯಾನಗಳಿಗೂ ಮಹತ್ವ ನೀಡಿದ್ದಾರೆ. ಸರ್ವ ಸಾಕ್ಷಿತ್ವದ ನಿರೂಪಣಿ ಇರುವ ಈ ಕಾದಂಬರಿಯಲ್ಲಿ ಉರ್ದು, ಹಿಂದೀ ಶಬ್ದಗಳು ಹಾಸುಹೊಕ್ಕಾಗಿರುವ ಗುಲ್ಬರ್ಗಾ ಕನ್ನಡವನ್ನು ಲೇಖಕಿ ಸಮರ್ಥವಾಗಿ ಬಳಸಿದ್ದಾರೆ. ಸುದೀರ್ಘವಾದ ಈ ಕಾದಂಬರಿಯ ಮೊದಲ್ ನೂರು ಪುಟ ಓದಿದ ಮೇಲೆ ’ ಗುಲ್ಬರ್ಗ ಕನ್ನಡ ಅರ್ಥವಾಗುತ್ತದೆಯೇ?" ಎಂಬ ಪ್ರಶ್ನೆಗೆ ನೀವು ’ಹೊಯಿಂದು’ (ಹೌದು)ಎನ್ನುತ್ತೀರಿ ಜನಪ್ರಿಯ ಹಾಗೂ  ಸೌಂದರ್ಯಾತ್ಮಕ ಅಂಶಗಳಲ್ಲಿ ಲೇಖಕಿ ರಾಜಿ ಮಾಡಿಕೊಂಡಿದ್ದಾರೆ. ಸಂಭಾಷಣಿ ಹಾಗೂ ಲೈಂಗಿಕ ವರ್ಣನೆಗಳನ್ನು ಅವಲೋಕಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

 ’ಬದುಕು’ ಮಾನವೀಯ ಅನುಭವದ ವ್ಯಾಪ್ತಿಯನ್ನು ವಿಸ್ತರಿಸುವ, ವೈವಿಧ್ಯಪೂರ್ಣ ಜೀವನಾನುಭವವನ್ನು ಜೀವಂತಿಕೆಯಿಂದ ಚಿತ್ರಿಸುವ ಅಸಾಧಾರಣ ಕಾದಂಬರಿ. ಈ ಬಹುಕೇಂದ್ರಿತ ಕಾದಂಬರಿ ಪುರುಷ ಪ್ರಧಾನ ಸಮಾಜದ ಜೋಗತಿ ಹಾಗೂ ಉಪಪತ್ನಿ ವ್ಯವಸ್ಥೆಯಿಂದ ಬಿಡುಗಡೆ ಪಡೆಯಲು ಹೆಣಗಾಡುತ್ತಿರುವ ಗುಲ್ಬರ್ಗಾದ ಗ್ರಾಮೀಣ ಮಹಿಳೆಯರ ಬದುಕಿನ ಆತ್ಮೀಯ ಚಿತ್ರಣವನ್ನು ನೀಡುತ್ತದೆ.

ಮುರಳೀಧರ ಉಪಾಧ್ಯ ಹಿರಿಯಡಕ,
ಬದುಕು(ಕಾದಂಬರಿ)
ಲೇ: ಗೀತಾ ನಾಗಭೂಷಣ
ಪ್ರ: ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮುದ್ರಣ:೨೦೦೧ ಬೆಲೆ ರೂ.೧೯೦ ಪುಟಗಳು-೪೮೯.

No comments:

Post a Comment