stat Counter



Saturday, June 20, 2020

ಮುರಳೀಧರ ಉಪಾಧ್ಯ ಹಿರಿಯಡಕ - ಚಂದು ಮೆನೊನ್ ಅವರ " ಇಂದುಲೇಖಾ , ಅನುವಾದ - ಸಿ. ರಾಘವನ್ } ಇಂದುಲೇಖಾ ಇಂಗ್ಲಿಷ್ ಕಲಿತಾಗ

ಭಾರತದ ಹೆಚ್ಚಿನ್ ಭಾಷೆಗಳಲ್ಲಿ ಕಾದಂಬರಿ ಪ್ರಕಾರ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿ ಬೆಳೆಯ ತೊಡಗಿತು. ಮಲಯಾಳದ ಪ್ರಥಮ ಕಾದಂಬರಿಯಾದ ಅಪ್ಪು ನಡುಂಗಾಡಿಯವರ್ ’ಕುಂದಲತ್’ ೧೮೮೭ರಲ್ಲಿ ಪ್ರಕಟವಾಯಿತು. ೧೮೮೯ರಲ್ಲಿ ಪ್ರಕಟವಾದ ಚಂದು ಮೇನೋನ್ ರ ’ಇಂದುಲೇಖಾ’ ಕೇರಳ ಕಾದಂಬರಿ ಪ್ರಕಾರಕ್ಕೆ ದಿಕ್ಸೂಚಿಯಾದ ಪ್ರಧಾನ ಕಾದಂಬರಿ.

ಚಂದು ಮೇನೋನ್ (೧೮೪೭-೧೮೯೯) ನ್ಯಾಯಾಲಯದ ಗುಮಾಸ್ತನಾಗಿ ಉದ್ಯೋಗ ಆರಂಭಿಸಿ ಮುಂದೆ ಮುನ್ಸೀಫ್ ಮತ್ತು ಸಬ್  ಜಡ್ಜ್ ಆಗಿದ್ದರು. ೧೮೮೯ ರಲ್ಲಿ ’ಇಂದುಲೇಖಾ’ ಕಾದಂಬರಿಯನ್ನು ಬರೆದ ಅವರು, ತನ್ನ ಎರಡನೆಯ ಕಾದಂಬರಿ ’ಶಾರದ’ ವನ್ನು ಪೂರ್ತಿಗೊಳಿಸುವ ಮೊದಲು ೧೮೮೯ ರಲ್ಲಿ ನಿಧನ ಹೊಂದಿದರು. ’ಇಂದುಲೇಖಾ ಕಾದಂಬರಿಯ ಇಂಗ್ಲಿಷ್ ಅನುವಾದ ೧೮೯೦ರಲ್ಲಿ ಪ್ರಕಟವಾಯಿತು. ಇಂಗ್ಲಿಷ್ ಭಾಷಾಂತರಕಾರ ಜಾನ್ ವಿಲ್ಲಬಿ ಫ್ರಾನ್ಸಿಸ್ ಡ್ಯೂಮೆರ್ಗ್ ರಿಗೆ  ಬರೆದ   ಪತ್ರದಲ್ಲಿ ಚಂದು ಮೇನೋನ್ ತನ್ನ ಕಾದಂಬರಿ ರಚನೆಯ ಉದ್ದೇಶಗಳನ್ನು ವಿವರಿಸಿದ್ದಾರೆ. ಅವುಗಳಲ್ಲಿ ಎರಡು ಉದ್ದೇಶಗಳು ಐತಿಹಾಸಿಕ ಮಹತ್ವ ಪಡೆದಿವೆ-"ಜನ್ಮ ಸಿದ್ಧವಾದ ಬುದ್ಧಿ  ಸಾಮರ್ಥ್ಯ , ಮೈಮಾಟಗಳಿಗೆ ಹೆಸರು ವಾಸಿಯಾದ ನಮ್ಮ ನಾಯರ್ ಹೆಂಗಸರಿಗೆ ಉತ್ತಮ ಇಂಗ್ಲಿಷ್ ಶಿಕ್ಷಣ ಲಭಿಸಿದ್ದೇ ಆದರೆ ಅವರು  ಸಮಾಜದಲ್ಲಿ ಗಳಿಸಬಹುದಾದ ಸ್ಥಾನ, ಮಾನ, ಪ್ರಭಾವಗಳನ್ನು ನನ್ನ ಮಲಯಾಳ ಸಹೋದದರಿಗೆ ಮನವರಿಕೆ ಮಾಡಿಕೊಡಬೇಕೆಂಬ ಬಯಕೆ. ಕೊನೆಯದಾಗಿ , ನಿರುಪಯೋಗದಿಂದ ಹಾಗೂ ದುರಪಯೋಗದಿಂದ ಹಾಗೂ ದುರಪಯೋಗದಿಂದ ರಭಸವಾಗಿ ನಾಶ ಹೊಂದುತ್ತಿರುವ ಮಲಯಾಳ    ಸಾಹಿತ್ಯದ ಬೆಳವಣೆಗೆಗೆ ಅತ್ಯಲ್ಪವಾದರೂ ನನ್ನ ಸ್ವಂತದ ಕೊಡುಗೆ ನೀಡಬೇಕೆಂಬ ಬಯಕೆ." "ಇಂದುಲೇಖಾ  ಹತ್ತೊಂಬತ್ತನೆಯ ಶತಮಾನದ ಅಂತ್ಯದ ದಕ್ಷಿಣ ಮಲಬಾರಿನ ಮಾತೃ ಪ್ರಧಾನ ಅವಿಭಕ್ತ ಕುಟುಂಬವೊಂದರಲ್ಲಿ ಇಂಗ್ಲಿಷ್ ಶಿಕ್ಷಣದ ಪ್ರಭಾವ ಕಾಣಿಸಿಕೊಂಡದ್ದನ್ನು ಕಲಾತ್ಮಕವಾಗಿ ಚಿತ್ರಿಸುವ ಕಾದಂಬರಿ. ಇಂದುಲೇಖಾ -ಮಾಧವನ್  ಸಂಸ್ಕೃತ್ ಮತ್ತು ಇಂಗ್ಲಿಷ್ ಶಿಕ್ಷಣ ಪಡೆದವರು. ಅವರ  ಮದುವೆಗೆ ಒಪ್ಪಿಗೆ ನೀಡದ ಕುಟುಂಬದ ಯಜಮಾನ  ಪಂಜು ಮೇನೋನ್ ’ ಇಂದುಲೇಖಾ’ ಗಳನ್ನು ಶ್ರೀಮಂತ ಸೂರಿ  ನಂಬೂದಿರಿಪಾಡರಿಗೆ ಅರ್ಪಿಸಲು ನಿರ್ಧರಿಸುತ್ತಾನೆ. ಇಂದುಲೇಖೆಯ ಸ್ವಾಭಿಮಾನ  ಮತ್ತು ಮಾತಿನ ಪೆಟ್ಟುಗಳಿಂದ  ತತ್ತರಿಸುವ ಸೂರಿ ನಂಬೂದಿರಿಪಾಡ್ ’ ಮೃಚ್ಛಕಟಿಕದ  ಶಕಾರನಂಥ  ಹಾಸ್ಯ ಪಾತ್ರವಾಗಿದ್ದಾನೆ. ಇಂದುಲೇಖಾ-ಸೂರಿ ನಂಬೂದಿರಿಪಾಡರನ್ನು ಮದುವೆಯಾದಳೆಂಬ ಸುಳ್ಳು ಸುದ್ದಿಯನ್ನು  ನಂಬಿ ಮಾಧವನ್ ಊರುಬಿಟ್ಟು ಕಲ್ಕತ್ತಕ್ಕೆ ಹೋಗುತ್ತಾನೆ. ಕೊನೆಯಲ್ಲಿ ತನ್ನ ಪ್ರತಿಜ್ಜೆಯನ್ನು ಹಿಂದೆಗೆದುಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಪಂಜು ಮೇನೋನ್ ರು ಇಂದುಲೇಖಾ ಮಾಧವನ್ ರ ಮದುವೆ ಮಾಡಿಸುತ್ತಾರೆ. ಕೇಶವನ್ ನಂಬೂದಿರಿ.
 ಲಕ್ಷ್ಮೀ ಕುಟ್ಟಿ ಅಮ್ಮ, ಕಲ್ಯಾಣಿ ಕುಟ್ಟಿ ಇವರೆಲ್ಲ ಕೇರಳ ಸಮಾಜದ ಸಂಕೀರ್ಣ ಜಾತಿ ಸಂಬಂಧಗಳು ಮತ್ತು ಅವಿಭಕ್ತ ಕುಟುಂಬದ ಕ್ರೌರ್ಯ ದ ನಡುವೆ  ಅಸಹಾಯಕರಾಗಿದ್ದಾರೆ. ಹಾಸ್ಯ, ಸಂಸ್ಕೃತ ನಾಟಕ ಮತ್ತು ತಾಳ ಮದ್ದಲೆಯ ಮಾದರಿಯ್ ಸಂಭಾಷಣೆ  ’ ಇಂದುಲೇಖಾದಲ್ಲಿ ಮುಖ್ಯವಾಗಿ ಗಮನ ಸೆಳೆಯುತ್ತವೆ. ಮಾಧವನ್ ದೇಶಾಂತರ ಹೊರಡುವುದರಿಂದ ಕಾದಂಬರಿಯ್ ಘಟನೆಗಳಿಗೆ ಅಖಿಲಭಾರತ ವ್ಯಾಪ್ತಿ ಪ್ರಾಪ್ತವಾಗಿದೆ. ಇಂಗ್ಲಿಷ್ ಶಿಕ್ಷಣ ಪಡೆದು ದರಿಂದಲೇ ವ್ಯಕ್ತಿ ಪರಿಪೂರ್ಣನಾಗುವುದಿಲ್ಲ ಎಂಬ ಧ್ವನಿಯೂ ಮಾಧವನ್ ನ ಪಾತ್ರ ಚಿತ್ರಣದಲ್ಲಿದೆ.

೧೮೫೭ರಲ್ಲಿ ಇಂಗ್ಲಿಷ್ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯಗಳು ಕಲ್ಕತ್ತಾ, ಮದ್ರಾಸ್ ಮತ್ತು ಮುಂಬೈಗಳಲ್ಲಿ ಆರಂಭಗೊಂಡುವು. . ಇಂದುಲೇಖಾ’ ದ ಮಾಧವನ್ ಮದ್ರಾಸ್ ನಲ್ಲಿ ಇಂಗ್ಲಿಷ್ ಶಿಕ್ಷಣ  ಪಡೆದು, ಸರಕಾರಿ ಅಧಿಕಾರಿಯಾಗುತ್ತಾನೆ. ವಸಾಹತುಶಾಹಿ ಆಡಳಿತದ ಆರಂಭದ ಹಂತದಲ್ಲಿ ಬಂದ ಈ ಕಾದಂಬರಿ ಯಲ್ಲಿ ಇಂಗ್ಲಿಷ್ ಮತ್ತು ’ಧವಳರ ಆಡಳಿತದ ಸ್ವಾಗತ ಮತ್ತು ಆರಾಧನೆ ಕಂಡುಬರುತ್ತದೆ. ಈ ಕಾದಂಬರಿಯ ಮಾಧವನ್ ವಿವರಿಸುವಂತೆ, "ಇಂಗ್ಲಿಷ್ ಸರಕಾರ ಪ್ರಾರಂಭವಾದಂದಿನಿಂದ   ಇಂಡಿಯಾಕ್ಕೆ ವಾಚಾಮಗೋಚರವೆನ್ನ ಬಹುದಾದ ಪ್ರಯೋಜನಗಳು ಉಂಟಾಗಿವೆ. ಅದರ ಪ್ರಯೋಜನಗಳನ್ನು ಇನ್ನಷ್ಟು ವಿಸ್ತರಿಸುವ ಯತ್ನಗಳನ್ನು  ಮಾಡಲು ಕಟ್ಟಿದ ಸಂಸ್ಥೆ-ಕಾಂಗ್ರೆಸ್. ಇಂಗ್ಲಿಷ್ ಜನರಷ್ಟು ಬುದ್ಧಿ
 ಸಾಮರ್ಥ್ಯ ಇರುವ ಇನ್ನೊಂದು ಜನತೆಯನ್ನು ಇನ್ನೆಲ್ಲಾದರೂ ನೋಡಲು  ಸಾಧ್ಯವೇ ? ಸಂಶಯ. ಈ ಬುದ್ಧಿ ಸಾಮರ್ಥ್ಯದ ಲಕ್ಷಣಗಳನ್ನು ಕಾಣುವುದೆಲ್ಲೆ? ಒಂದನೆಯದಾಗಿ ಅವರ್ ನೀತಿ  ಜ್ಜತೆ; ಎರಡನೆಯದಾಗಿ  ಭೇದಭಾವವಿಲ್ಲದ ವಸ್ತು ನಿಷ್ಠ ನೀತಿ; ಮೂರನೆಯದಾಗಿ ದಯೆ; ನಾಲ್ಕನೆಯದು ಶೌರ್ಯ; ಐದನೆ ಯದು ಚುರುಕುತನ; ಆರನೆಯದು ತಾಳ್ಮೆ. ಈ ಆರು ಅಂಶಗಳಿಂದ ಇಂಗ್ಲೀಷರು ಪ್ರಪಂಚದ ಅದೆಷ್ಟೋ ದೇಶಗಳನ್ನು ತಮ್ಮ ಕೈಕೆಳಗಿಟ್ಟು ಕಾಪಾಡಿ ಬರುತ್ತಿದ್ದಾರೆ. ಇಂತಹ ಉತ್ಕೃಷ್ಟ ಮನಸ್ಕರಾದೆ ಮನುಷ್ಯರಿಂದ ಆಡಳಿತ ಮಾಡಲ್ಪಡಲು ಅವಕಾಶ ಬಂದೊದಗಿದ್ದೇ ಇಂಡಿಯಾ ದೇಶಾದ ಮಹಾಭಾಗ್ಯ; ಸಂಶಯವಿಲ್ಲ." ಮಾಧವನ್ ನ್ ಪಾತ್ರ ಚಿತ್ರಿಸಿದ ಚಂದು ಮೇನೋನ್ ಇಂಗ್ಲಿಷ್ ಶಿಕ್ಷಣವನ್ನು ಉತ್ಸಾಹ, ಸಾಮಾಜಿಕ  ಪರಿವರ್ತನೆ ಮತ್ತು ಆಧುನಿಕತೆಯ ಕನಸುಗಳೊಂದಿಗೆ ಸ್ವಾಗತಿಸಿದರು. "ಇಂಗ್ಲಿಷ್  ಶಿಕ್ಷಣ ಅಪಾಯಕಾರಿ ಎಂದಾದರೆ ಆ ಅಪಾಯವನ್ನು ನಾನು ಸ್ವಾಗತಿಸುತ್ತೇನೆ" ಎಂದರು ಚಂದು ಮೇನೋನ್.

ಇಂಗ್ಲಿಷರ ರಾಜಕೀಯವನ್ನು ಕುರಿತ ಗುಮಾನಿಗಳೂ ’ ಇಂದುಲೇಖಾ’ ದಲ್ಲಿ ದಾಖಲಾಗಿವೆ. ’ ನಮ್ಮ ರಾಜರುಗಳನ್ನೆಲ್ಲ ಬರೀ ಹೆಣಗಳಂತೆ ಮಾಡಿಬಿಟ್ಟ’, "ಈ ಧವಳರನ್ನು ನಂಬಲೇಬಾರದು" ಎಂದು ಕೇಶವನ್ ನಂಬೂದಿರಿ ಹೇಳುತ್ತಾನೆ-" ಅವರು ಒಂದೂವರೆ ಲಕ್ಷ ರೂಪಾಯಿಯಷ್ಟು ದೊಡ್ದ ಮೊತ್ತವನ್ನು ಸಂಗ್ರಹಿಸಿದರು. ನೂಲು ಕಂಪೆನಿಯನ್ನು ಅವರ ಊರಿಂದಲೇ ನಿರ್ಮಿಸಿ ಹಡಗದಲ್ಲಿ ಇಲ್ಲಿ ತಂದು ಇಳಿಸಿದರು. ಅವರೆಂಥ ಚತುರರು, ನಾವೆಂಥ ಬೆಪ್ಪರು|" ಕೃತಿಯ ಅಂತ್ಯದಲ್ಲಿ ಬರುವ ನಿರೀಶ್ವರವಾದ ಮತ್ತು ಕಾಂಗ್ರೆಸ್ ಸಂಸ್ಥೆಗಳನ್ನು ಕುರಿತ ಸುದೀರ್ಘ ಚರ್ಚೆಗಳಿಂದ ಕಾದಂಬರಿಯ ಬಂಧ ಶಿಥಿಲವಾಗಿದೆ. ಆದರೆ ಚಂದು ಮೇನೋನ್ ರಿಗೆ ರಾಜಕೀಯ, ಸಾಮಾಜಿಕ್ ಉದ್ದೇಶಗಳಿದ್ದುವು ಎಂಬುದನ್ನು ಮರೆಯಬಾರದು. ಕೇರಳದ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು(೧೮೫೪-೧೯೨೮) ಸಂಸ್ಕೃತ ಶಿಕ್ಷಣದ ಜತೆಯಲ್ಲೆ ಇಂಗ್ಲಿಷ್ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದರು. ನಾರಾಯಣಗುರುಗಳ ಸಮಾಜ ಸುಧಾರಣೆಯ ಆಂದೋಲನಕ್ಕಿಂತ ಮೊದಲೇ ಪ್ರಕಟವಾಗಿರುವ ಚಂದು ಮೇನೋನ್ ರ ಕಾದಂಬರಿಯ ವೈಚಾರಿಕತೆ ಆ ಕಾಲದ ಸಮಾಜದಲ್ಲಿ ಕ್ರಾಂತಿಕಾರಿಯಾಗಿತ್ತು.

ಮಲಯಾಳದ ಸಾಹಿತ್ಯ ಚರಿತ್ರಕಾರ ಪಿ.ಕೆ. ಪರಮೇಶ್ವರನ್ ನಾಯರ್ ’ ಇಂದುಲೇಖಾದ ಮಹತ್ವವನ್ನು ಗುರುತಿಸುತ್ತ, ಆಧುನಿಕ್ ಕೇರಳದದಲ್ಲಿ ಸಾಮಾಜಿಕ ಪರಿವರ್ತನೆಯ ಆದ್ಯ ಪ್ರಚೋದನೆ   ’ ಇಂದುಲೇಖಾ ದಿಂದ ಉಂಟಾದದ್ದೇಂದು ನಿಸ್ಸಂಶಯವಾಗಿ ಹೇಳಬಹುದು. ಅದಕ್ಕೆ ಮೊದಲೇ ಸಮಾಜ ಸುಧಾರಣೆಯನ್ನು ಕುರಿತು ಮಾತನಾಡಿರಬಹುದು; ಬರೆದಿರ ಬಹುದು. ಆದರೆ ಸಾಮಾಜಿಕ ವಿಲಕ್ಷಣ ಪದ್ಧತಿಯ ನಿವಾರಣೆಯ್ ವಿಷಯ ಜನರ ಹೃದಯಕ್ಕೆ ತಾಗಿ ಅವರು ತೀವ್ರವಾಗಿ ಆಲೋಚಿಸುವಂತಾದುದು ’ ಇಂದುಲೇಖ’ ವನ್ನು ಓದಿದ ನಂತರವೇ" ಎಂದಿದ್ದಾರೆ. ಜನಸಾಮಾನ್ಯರ ಭಾಷೆಯ ಬಳಕೆ ಮತ್ತು ಚಿಂತನಶೀಲ ವಾಸ್ತವತಾವಾದಗಳಿಂದಾಗಿ ’ ಇಂದುಲೇಖಾ’ ಮಲಯಾಳ ಕಾದಂಬರಿ ಪ್ರಕಾರಕ್ಕೆ ಮುನ್ನೋಟ ನೀಡಿತು. ಇಂದುಲೇಖಾ’ ಅಂದು ಮಾತ್ರವಲ್ಲ ಇಂದಿಗೂ ಚೆಲುವೆ. ಇಂಗ್ಲಿಷರ ಆಡಳಿತ ಇಂಡಿಯಾದ ಮಹಾಭಾಗ್ಯವೇ ಎಂಬುದು ಚರ್ಚಿಸಬೇಕಾದ ಮಾತು.  ಆದ್ರೆ ’ ಇಂದುಲೇಖಾ’ ಮಲಯಾಳ ಸಾಹಿತ್ಯದ ಮಹಾಭಾಗ್ಯ. ಅನುಭಾವಿ ಭಾಷಾಂತರಕಾರ ಸಿ. ರಾಘುವನ್ ’ಇಂದುಲೇಖಾ’ ವನ್ನು ಚೆನ್ನಾಗಿ ಅನುವಾದಿಸಿದ್ದಾರೆ.
ಕೇರಳ-ಕರ್ನಾಟಕ್ ನೆರೆಹೊರೆಯ್ ರಾಜ್ಯ್ ಗಳು. ಆದರೆ ೧೮೮೯ರಲ್ಲಿ ಪ್ರಕಟವಾದ’ ಇಂದುಲೇಖಾ’ ೧೯೯೫ರಲ್ಲಿ ಒಂದು ಶತಮಾನದ ಅನಂತರ-ಕನ್ನಡಕ್ಕೆ ಭಾಷಾಂತರಗೊಂಡಿದೆ. ಇದು ನಮ್ಮ ಅಂತಾರಾಜ್ಯ ಸಾಂಸ್ಕೃತಿಕ ಸಂಬಂಧಗಳಲ್ಲಿರುವ ಬಿರುಕುಗಳನ್ನೂ ಸರಕಾರಿ ಸಂಸ್ಥೆಗಳ ಎತ್ತಿನ ಗಾಡಿಯ ವೇಗವನ್ನೂ ಒಟ್ಟಿಗೆ ಸೂಚಿಸುತ್ತದೆ.

ಇಂದುಲೇಖಾ
ಲೇ:ಒ. ಚಂದು ಮೆನೊನ್
ಅನುವಾದ-ಸಿ. ರಾಘವನ್
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ,
ಎ-೫ ಗ್ರೀನ್ ಪಾರ್ಕ್,
ಹೊಸದಿಲ್ಲಿ-೧೧೦೦೧೬.


 ಮುರಳೀಧರ ಉಪಾಧ್ಯ, ಹಿರಿಯಡಕ

No comments:

Post a Comment