stat Counter



Wednesday, June 3, 2020

ಶಿವಕುಮಾರ್ - ರಾಧಾಕೃಷ್ಣ ಕಲ್ಚಾರ್ ಅವರ " ಪರಕಾಯ ಪ್ರವೇಶ "

ಮಾನಸಿಕವಾಗಿ ದುಗುಡಗೊಂಡಿರುವ ಈ ದಿನಗಳಲ್ಲಿ ಒಂದಷ್ಟು ಸಮಾಧಾನ ನೀಡಿದ್ದು ಶ್ರೀ ರಾಧಾಕೃಷ್ಣ ಕಲ್ಚಾರರ 'ಪರಕಾಯ ಪ್ರವೇಶ ' ಎಂಬ ಪುಸ್ತಕ.
ಸಾಮಾನ್ಯವಾಗಿ ಪರಕಾಯ ಪ್ರವೇಶ ಎಂದಾಗ ಒಬ್ಬ ಲೇಖಕನೋ ಅಥವಾ ನಟನೋ ಒಂದು ಪಾತ್ರದೊಳಗೆ ಲೀನವಾಗಿ ತಾನೇ ಆ ಪಾತ್ರವಾಗಿ ಬಿಡುವುದು ಎಂದಾಗುತ್ತದೆ. ಅಂದರೆ ಪಾತ್ರಕ್ಕೆ ಪರಕಾಯ ಪ್ರವೇಶ. ರಾಮಾಯಣ ಮತ್ತು ಮಹಾಭಾರತಗಳ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಅನೇಕ ಪುಸ್ತಕಗಳು ಬಂದಿವೆ. 'ಯುಗಾಂತ' ಮತ್ತು 'ಪರ್ವ'ಗಳಂತಹ ಕೃತಿಗಳಲ್ಲಿ ಪ್ರಮುಖ ಪಾತ್ರಗಳ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಹಾಭಾರತದ ಕಥೆಯನ್ನು ನಿರೂಪಿಸಲಾಗಿದೆ. ಆದರೆ , ಈ ಪುಸ್ತಕದಲ್ಲಿ ರಾಮಾಯಣ ಮತ್ತು ಮಹಾಭಾರತಗಳಲ್ಲಿ ನಮಗೆ ಕಂಡೂ ಕಾಣದ , ಓದಿಯೂ ನೆನಪಿನಲ್ಲಿ ಉಳಿಯದ , ಹೆಸರೇ ಇಲ್ಲದ ಅಥವಾ ವಾಲ್ಮೀಕಿ - ವ್ಯಾಸರು ಮಹತ್ವಕೊಡದ ಕೆಲವು ಪಾತ್ರಧಾರಿಗಳು ಲೇಖಕರೊಳಗೆ ಪ್ರವೇಶಮಾಡಿ , ಯಾರೊಂದಿಗೂ ಹೇಳಲಾಗದ ತಮ್ಮ ಅನುಭವಗಳನ್ನು ಬರೆದು ನಿರಾಳರಾಗಿ ನಿರ್ಗಮಿಸಿದ್ದಾರೆ.
ಸರಳ ಭಾಷೆ ಮತ್ತು ಆಕರ್ಷಕ ನಿರೂಪಣೆ ಈ ಪುಸ್ತಕದ ವಿಶೇಷ. ಈ ಪುಸ್ತಕವು ನಿಮ್ಮಿಂದ ಪೂರ್ತಿಯಾಗಿ ಓದಿಸಿಕೊಂಡ ನಂತರವೇ ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ, ಅಷ್ಟು ಸೊಗಸಾಗಿದೆ. ಓದುತ್ತಾ ಓದುತ್ತಾ ಆ ಪಾತ್ರಗಳೂ ನಮ್ಮೊಳಗೂ ಪ್ರವೇಶ ಮಾಡಿದವೇನೋ ಅನ್ನೋವಷ್ಟು ತನ್ಮಯತೆ ಉಂಟಾಗುತ್ತದೆ. ಈ ಪುಸ್ತಕವನ್ನು ಬರೆದ ಲೇಖಕರಾದ ಶ್ರೀ ರಾಧಾಕೃಷ್ಣ ಕಲ್ಚಾರ್ @Radhakrishna Kalchar Vitla ರವರಿಗೂ, ಓದಲು ಸಲಹೆಯ ಜತೆ ಪುಸ್ತಕವನ್ನು ನೀಡಿದ ಹಿರಿಯರಾದ ಡಾ.ಪ್ರಸನ್ನ
ಇವರಿಗೂ ವಂದನೆಗಳು.

No comments:

Post a Comment