stat Counter



Thursday, June 11, 2020

ಮುರಳೀಧರ ಉಪಾಧ್ಯ ಹಿರಿಯಡಕ - ಸುಶೀಲಾ ಕೊಪ್ಪರ ಅವರ ಆತ್ಮಕತೆ- " ಕಣ್ಣು ಮುಚ್ಚಿ ನೋಡೊದಾಗ " { 2002 } ಉತ್ತರ ಕರ್ನಾಟಕದ ಮಹಿಳೆಯರ ಅವಸ್ಥೆ

ಅಂಚೆ ಇಲಾಖೆಯಲ್ಲಿದ್ದ ಶ್ರೀ ಮಧ್ವರಾಯರ ಮಗಳು ಸುಶೀಲಾ. ಜನನ- ೧೯೨೪ರಲ್ಲಿ ಖ್ಯಾತ ಕಾದಂಬರಿಕಾರ ವಿ.ಎಂ.ಇನಾಂದಾರ್ ಇವರ ಹಿರಿಯಣ್ಣ. ಬಾಗಲ್ ಕೋಟೆ ವಿಜಾಪುರಗಳಲ್ಲಿ ವಿದ್ಯಾಭ್ಯಾಸ. ಹದಿಮೂರನೆಯ ವಯಸ್ಸಿನಲ್ಲಿ  ಮದುವೆ./ ವಿಜಾಪುರದ ಜನಸಂಖ್ಯೆ ಎಷ್ಟು? ಎಂಬುದು ಇವರಿಗೆ ವಧುಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ. ಪತಿ ಅನಂತರರಾವ್ ಕೊಪ್ಪರರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ. ೧೯೫೭ರಲ್ಲಿ ಪತಿ ನಿಧನರಾದಾಗ ಸುಶೀಲಾರ ಬದುಕಿನಲ್ಲಿ ಕಾರ್ಮೋಡ. ಮೂವರು ಮಗಳಂದಿರ ಶಿಕ್ಷಣದ, ಮದುವೆಯ ಜವಾಬ್ದಾರಿ.೧೯೫೮ರಿಂದ ೧೯೬೪ರ ವರೆಗೆ ’ಸಂಯುಕ್ತ ಕರ್ನಾಟಕದಲ್ಲಿ ಗ್ರಂಥಪಾಲಕಿ. ಮುಂದೆ’ ಪ್ರಜಾವಾಣಿಯಲ್ಲಿ ಉದ್ಯೋಗ.
ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸುಶೀಲಾ ಕೊಪ್ಪರ ತನ್ನ ಬಾಲ್ಯ, ವಿದ್ಯಾಭ್ಯಾಸ, ದಾಂಪತ್ಯ ಹಾಗೂ ಸಾರ್ವಜನಿಕ ಜೀವನದ ನೆನಪುಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ. ಇಪ್ಪತ್ತೆನೆಯ ಶತಮಾನದ ಆರಂಭದಲ್ಲಿ ಮಡಿವಂತಿಕೆಯ ಚಿಪ್ಪಿನೊಳಗಿದ್ದ ಬ್ರಾಹ್ಮಣ ಮಹಿಳೆಯರು ನಿಧಾನವಾಗಿ ಪರಿವರ್ತನೆಯ ಹಾದಿ ಹಿಡಿದುದನ್ನು ಲೇಖಕಿ ಚೆನ್ನಾಗಿ ವಿವರಿಸಿದ್ದಾರೆ. ’ ಬಾಲ್ಯದಲ್ಲಿ ನಾ ಕಂಡ ಮರೆಯಲಾರದ ವಿಧವೆಯರು’ ಎಂಬುದು ಸಮಾಜಶಾಸ್ತ್ರದ ವಿದ್ಯಾರ್ಥಿಗಳು ಗಮನಿಸಬೇಕಾದ ಅಧ್ಯಾಯ. ವಿಧವೆಯೊಬ್ಬಳ ಅಗಮ್ಯ ಗಮನ ಸಂಬಂಧದ ಹೃದಯ ವಿದ್ರಾವಕ್ ಕತೆ ಈ ಅಧ್ಯಾಯದಲ್ಲಿದೆ. ’ಶಿಕ್ಷಣ ಪಡೆದು ಶಿಕ್ಷಕಿಯರಾಗಿದ್ದ ದಲಿತ ಮಹಿಳೆಯರು ಮಡಿವಂತ ಕುಟುಂಬದ ಬ್ರಾಹ್ಮಣ ಮಹಿಳೆಯರಿಗಿಂತ ಉತ್ತಮ ಸ್ಥಿತಿ ಯಲ್ಲಿದ್ದುದನ್ನು ಲೇಖಕಿ ಗುರುತಿಸಿದ್ದಾರೆ.
ತನ್ನ ಮದುವೆಯ ಖರ್ಚು-ವೆಚ್ಚವನ್ನು ಲೇಖಕಿ ಹೀಗೆ ವಿವರಿಸಿದ್ದಾರೆ-"೧೯೩೮ರ ಜೂನ್ ತಿಂಗಳ್ ಹದಿನೈದನೆಯ ದಿನಾಂಕ ಹುಬ್ಬಳ್ಳಿಯಲ್ಲಿ ’ಸಿಂಪಲ್; ಮದುವೆ ನಡೆಯಿತು. ಅಂದಿನ ಕಾಲದ  ’ಸಿಂಪಲ್" ಎಂದರೆ ಮೂರೇ ದಿನದ ಮದುವೆ! ಹದಿ ಮೂರು ರೂಪಾಯಿಗೆ ಕ್ವಿಂಟಾಲ್   ಗೋಧಿ, ಒಂದು ರೂಪಾಯಿಗೆ ಹದಿನೈದು ಇಪ್ಪತ್ತು ಸೇರು ಜೋಳ, ಮೂವತ್ತೈದು ರೂಪಾಯಿಗೆ ಒಂದುತೊಲ ಚಿನ್ನ ಸಿಕ್ಕುತ್ತಿತ್ತು. ಹದಿನೆಂಟು ರೂಪಾಯಿಗೆ ತೊಲಕೊಳ್ಳುತ್ತಿದ್ದ ಜನ ಬಂಗಾರದ ಬೆಲೆ ಜಾಸ್ತಿ ಎನ್ನುತ್ತಿದ್ದರು. ೧೯೩೮ರಲ್ಲಿಯ ಕರ್ನಾಟಕದಲ್ಲಿದ್ದ   ಬೆಲೆಗಳಿವು."
ತನ್ನ ಅಣ್ಣ ಕಾದಂಬರಿಕಾರ ಇನಾಂದಾರರ ವ್ಯಕ್ತಿತ್ವದ ಬಗ್ಗೆ ಲೇಖಕಿ ಯಾಕೆ ಮೌನ ವಹಿಸಿದ್ದಾರೆ? ಸುಶೀಳಾ ಕೊಪ್ಪರ ಅವರ ’ಕಣ್ತುಂಬಿ ನೋಡಿದಾಗ’ ಉತ್ತರ ಕರ್ನಾಟಕದ  ಮಹಿಳೆಯರ ಸಾಮಾಜಿಕ ಗತಿ-ಬಿಂಬದ ಕುರಿತು ಕಣ್ತೆರೆಸುವ ಸತ್ಯ ಸಂಗತಿಗಳನ್ನು ದಾಖಲಿಸುವ ಒಳ್ಳೆಯ ಆತ್ಮಕತೆ. ಇಂಥ ನೂರಾರು ಮಹಿಳೆಯರ ಆತ್ಮಕತೆಗಳು ಪ್ರಕಟವಾಗಬೇಕು. ಇದು ಸ್ತ್ರೀವಾದಿ ಚಳವಳಿಗೆ ನೀರೆರೆದು ಪೋಷಿಸುವ ರಚನಾತ್ಮಕ ಕೆಲಸವೂ ಹೌದು.
ಮುರಳೀಧರ ಉಪಾಧ್ಯ  ಹಿರಿಯಡಕ
ಕಣ್ಣುಮುಚ್ಚಿ ನೋಡಿದಾಗ
(ಆತ್ಮಕತೆ)
ಲೇ:ಸುಶೀಲಾ ಕೊಪ್ಪರ
ಪ್ರ:ಇಳಾ ಪ್ರಕಾಶಾನ,
ಬೆಂಗಳೂರು-೫೬೦೦೨೬
ಮೊದಲ ಮುದ್ರಣ:೨೦೦೨
ಬೆಲೆ:ರೂ೧೦೦

No comments:

Post a Comment