stat Counter



Friday, June 5, 2020

ಮುರಳೀಧರ ಉಪಾಧ್ಯ ಹಿರಿಯಡಕ- ರಾಜಾರಾಮ ಹೆಗಡೆ ಅವರ " ಲೌಕಿಕ ಅಲೌಕಿಕ " -- ವಿಭಿನ್ನ ಸಂಸ್ಕೃತಿಗಳ ಮುಖಾಮುಖಿ

ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ| ರಾಜಾರಾಮ್ ಹೆಗಡೆ ಯವರ್ ’ಲೌಕಿಕ-ಅಲೌಕಿಕದಲ್ಲಿ ಆರು ಸಂಪ್ರಬಂಧಗಳಿವೆ. ಭಾರತೀಯ ಇತಿಹಾಸದಲ್ಲಿ ಪ್ರಭುತ್ವ ರಚನೆ ಮತ್ತು ಮತ ಸಮ್ಪ್ರದಾಯಗಳು’ ಎಂಬುದು ಈ ಗ್ರಂಥದ ಉಪಶೀರ್ಷಿಕೆ. ಪ್ರಾಚೀನ ಹಾಗೂ ಮಧ್ಯಕಾಲೀನ ರಾಜ್ಯಗಳಲ್ಲಿ ವಿಭಿನ್ನ ಮತ ಸಂಪ್ರದಾಯಗಳು ಹಾಗೂ ಅವುಗಳ ತಾತ್ವಿಕತೆಗಳು ಲೌಕಿಕವಾಗಿ ಪ್ರಭುತ್ವ ನಿರ್ಮಾಣದಲ್ಲಿ ಹೇಗೆ ಭಾಗವಹಿಸಿದ್ದವೆನ್ನುವುದನ್ನು  ಪರಿಶೀಲಿಸುವುದು ಈ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ನಡೆದ ಸಾಂಸ್ಕೃತಿಕ ಪ್ರಕ್ರಿಯೆಗಳ ಚರ್ಚೆಗೆ ಲೇಖಕರು ಒತ್ತು ನೀಡಿದ್ದಾರೆ.

’ ಅಧಿಕಾರ ರಚನೆಯ ಅಲೌಕಿಕ-ವಿನ್ಯಾಸಗಳು’ ಎಂಬ ಸಂಪ್ರಬಂಧ ಈ ಗ್ರಂಥದ ಇತರ ಲೇಖನಗಳಿಗೆ ಒಂದು ಪ್ರಸ್ತಾವನೆಯಂತಿದೆ. ಈ ಸಂಪ್ರಬಂಧದಲ್ಲಿ ಲೇಖಕರು ಧರ್ಮ-ಸಂಪ್ರದಾಯ, ಅಶೋಕನ  ಧರ್ಮ (ಧಮ್ಮ) ಹಾಗೂ ಅದರ ರಾಜನೈತಿಕ ಅಂಶಗಳು, ಬ್ರಾಹ್ಮಣ-ಶ್ರಮಣ, ರಾಜ್ಯ ಮತ್ತು ಪೂಜಾ ಸಂಸ್ಕೃತಿ, ರಾಜತ್ವದಲ್ಲಿ ದೇವತೆಗಳು, ಮಠಗಳ ಬೆಳವಣಿಗೆ ನಾಶ, ಅಕ್ಬರನ  ಪ್ರಯೋಗಗಳು, ರಾಜಧರ್ಮ ಮತ್ತು ದೇವರು ಈ ವಿಷಯಗಳಾನ್ನು ಚರ್ಚಿಸಿದ್ದಾರೆ.
ವಿರಕ್ತರು ಮತ್ತು ರಾಜಪ್ರಭುತ್ವದ ಸಂಬಂಧವನ್ನು ಡಾ| ರಾಜಾರಾಮ ಹೆಗಡೆ ಹೀಗೆ ವಿವರಿಸುತ್ತಾರೆ-"ವಿರಕ್ತರಿಗೆ ಲೌಕಿಕ ಆಸರೆ ತೀರಾ ಮೂಲಭೂತವಾದ ಆವಶ್ಯಕತೆಯಾಗಿದೆ. ಅದರಲ್ಲೂ ಒಂದು ಸಂಸ್ಥೆಯನ್ನೇ ಬೆಳೆಸಬಯಸಿದ ಸಂಪ್ರದಾಯಗಳಿಗೆ ಪ್ರಭುತ್ವದ ಆಶ್ರಯ ಅನಿವಾರ್ಯ. ವಿರಕ್ತರು ವೈಯಕ್ತಿಕವಾಗಿ ಈ ಪ್ರಪಂಚದಿಂದ ಹೊರಗೆ ಇರಬಯಸುತ್ತಾರಾದರೂ ಈ ಪ್ರಪಂಚದ ವ್ಯವಸ್ಥೆ ಮುಂದುವರಿದುಕೊಂಡು ಹೋಗುವುದೂ ಅವರ ಒಂದು ಭೌತಿಕ ಆವಶ್ಯಕತೆಯೇ    ಆಗಿರುತ್ತದೆ.

ಈ ಮೂಲಕ ಅವರೂ ಒಂದು ಪ್ರಭುತ್ವದ ಪ್ರಭಾವದಲ್ಲಿ ಲೌಕಿಕವಾಗಿ ಸಿಲುಕುತ್ತಾರೆ. ವಿರಕ್ತರಿಗೆ ಲೌಕಿಕ ಹೀಗೆ ಅನಿವಾರ್ಯವಾದರೆ ಈ ಲೌಕಿಕ ವ್ಯವಸ್ಥೆಯ ವಿಭಿನ್ನ ರೂಪಗಳನ್ನು ಇದ್ದ ಹಾಗೇ ಸಮರ್ಥಿಸುವ ಬ್ರಾಹ್ಮಣರಿಗೂ ವಿರಕ್ತರ ಮಾದರಿಗಳು ಹಾಗೂ ಆಚರಣೇಗಳು ಅನಿವಾರ್ಯವಾಗುತ್ತವೆ. ಏಕೆಂದರೆ ಈ ವ್ಯವಸ್ಥೆಯೊಳಗೆ ತಮ್ಮನ್ನು ಪವಿತ್ರಮರೆಂದು ಪ್ರತಿಪಾದಿಸುವ ಬ್ರಾಹ್ಮಣರಿಗೆ ವಿರಕ್ತರ ಅಲೌಕಿಕ ಆಚರಣೆಗಳನ್ನು ಒಳಗೊಳ್ಳುವುದು ಒಂದು ಲೌಕಿಕ ಅಗತ್ಯವೇ ಆಗಿತ್ತು...ಈ ಮಠ ವ್ಯವಸ್ಥೆಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವುದು ’ವಿರಕ್ತ’ ಆಚಾರ್ಯನೊಬ್ಬನಲ್ಲಿ ರಾಜ  ಪ್ರಭುತ್ವದಲ್ಲಿ. ’ವಿರಕ್ತನ’ ಪಾತ್ರವು ಹೀಗೆ  ಮತ್ತೊಂದು ಪ್ರಭುವಾಗಿ  ಬದಲಾಗುತ್ತದೆ." ;ಶಾತವಾಹನರ ಕಾಲದ ಬೌದ್ಧರು ಎಂಬ ಸಂಪ್ರಬಂಧದಲ್ಲಿ ರಾಜಾರಾಮ ಹೆಗಡೆ ಶಾತವಾಹನರ ಕಾಲದ ಆಂಧ್ರದಲ್ಲಿ ಮಹಾಯಾನ ಸೂತ್ರಗಳು ರೂಪುಗೊಂಡದ್ದನ್ನು ವಿವರಿಸಿದ್ದಾರೆ.’ಬಲಿ’ ಪುರಾಣದ ಸಾಂಸ್ಕೃತಿಕ ಸಂದರ್ಭಗಳು’ ಎಂಬ ಸಂಪ್ರಬಂಧದಲ್ಲಿ ಲೇಖಕರು "ಬಲಿಗೆ ಸಂಬಂಧಿಸಿದ ಪುರಾಣಕತೆಗಳು  ಮಧ್ಯಕಾಲೀನ ಭಾರತದ ಪ್ರಭುತ್ವ ನಿರ್ಮಾಣದ ಇತಿಹಾಸದ ವಿಭಿನ್ನ ಮಗ್ಗುಲುಗಳನ್ನು ತೆರೆದಿಡುತ್ತವೆ... ಆ ಕಥೆಯು ಒಂದೆಡೆ ವೈದಿಕ-ಅವೈದಿಕ ದ್ವಂದ್ವಗಳನ್ನು ಪ್ರಭುತ್ವದೊಳಗಡೆ ಪರಿಹರಿಸುವುದಲ್ಲದೆ ವರ್ಣ ಕಲ್ಪನೆಯ ರಾಜ್ಯದ ಬ್ರಾಹ್ಮಣ ಕ್ಷತ್ರಿಯ ಅಧಿಕಾರ ಬಿಂದುಗಳಿಗೆ ಸಮಾನ ಮಾನ್ಯತೆ ನೀಡುತ್ತದೆ" ಎಂದು ವಿಶ್ಲೇಷಿಸಿದ್ದಾರೆ. ’ವಡ್ಡಾರಾಧನೆ, ಲೌಕಿಕ ಅಧಿಕಾರ ರಚನೆ ಮತ್ತು ಮಧ್ಯಕಾಲೀನ ಜೈನಮತ’ ಎಂಬ ಲೇಖನ, ಜೈನಮತದಲ್ಲಿ ಮಧ್ಯಕಾಲ ದಲ್ಲಿ ಆಗುತಿದ್ದ ಮಾರ್ಪಾಟುಗಳಿಗೆ ವಡ್ಡಾರಾಧನೆ ಹೇಗೆ ಕನ್ನಡಿ ಹಿಡಿಯುತ್ತದೆ ಎಂಬುದನ್ನು ಚರ್ಚಿಸುತ್ತದೆ.
ದೇವಾಲಯ ಸಂಸ್ಕೃತಿ ಮತ್ತು ಮಧ್ಯಕಾಲೀನ ಶೈವಸಂಪ್ರದಾಯ’ ಎಂಬ ಸಂಪ್ರಬಂಧದಲ್ಲಿ ಕ್ಷೇತ್ರಕಾರ್ಯದ ಫಲಶ್ರುತಿ ಹಾಗೂ ಒಳನೋಟುಗಳಿವೆ. ಶಿಕಾರಿಪುರದ ಬಳ್ಳಿಗಾವೆಯ ಸುತ್ತಮುತ್ತ  ಸುಮಾರು ೩೦೦-೪೦೦ ಕಿ.ಮೀ ಪರಿಧಿಯೊಳಗೆ ೧೦ ರಿಂದ ೧೩ನೆಯ ಶತಮಾನಗಳ ಅವಧಿಯಲ್ಲಿ ಶೈವ ಸಂಪ್ರದಾಯವು ಪ್ರತಿಷ್ಠಿತರ ಒಂದು ಭಾಗವಾಗಿ     ಬೆಳೆದು  ನಿಂತ ಬಗೆಯನ್ನು ಪರಾಮರ್ಶಿಸುವುದು ಈ ಲೇಖನದ ಉದ್ದೇಶ.ಇದರಲ್ಲಿ ರಾಜಾರಾಮ ಹೆಗಡೆಯವರು ಶಿವಾಲಯ ಸಂಸ್ಕೃತಿಗೆ ಸಿಕ್ಕಿದ ರಾಜಕೀಯ ಪೋಷಣೆ ಹಾಗೂ ಅಬ್ಬಲೂರಿನ ಘಟನೆಯನ್ನು   ಚರ್ಚಿಸಿದ್ದಾರೆ. ಕ್ರಿ.ಶ. ೧೧೫೦ರಲ್ಲಿ ಅಬ್ಬಲೂರಿನ ಜಿನಾಲಯವೊಂದನ್ನು ವೀರ ಸೋಮನಾಥ ದೇವಾಲಯವೆಂದು ಬದಲಾಯಿಸಿದ ಘಟನೆ ಏಕಾಂತ ರಾಮಯ್ಯನ ಪವಾಡವೆಂದು ಪ್ರಚಾರ ಪಡೆಯಿತು. ಇದರ ಹಿನ್ನೆಲೆಯಲ್ಲಿ ಲೇಖಕರು ಶಿವಾಲಯ ಸಂಸ್ಕೃತಿಯ ರಾಜಕೀಯ ಪಾಬಲ್ಯವನ್ನು ಗುರುತಿಸುತ್ತಾರೆ. ’ ರಂಗನಾಥ-ತಿಮ್ಮಪ್ಪ’ ಎಂಬ ಲೇಖನದಲ್ಲಿ ಸೋಲಿಗರ ಕುಸುಮಾಲೆಯನ್ನು ಪ್ರೀತಿಸುವ ಬೆಳಿಗಿರಿ ರಂಗನ ಪುರಾಣದ ಸ್ವಾರಸ್ಯಪೂರ್ಣ ಅಂಶಗಳತ್ತ ಲೇಖಕರು ನಮ್ಮ ಗಮನ ಸೆಳೆಯುತ್ತಾರೆ. ವಿಭಿನ್ನ ಸಂಸ್ಕೃತಿಗಳು ಮುಖಾಮುಖಿಯಾಗಿರುವ ಕರ್ನಾಟಕದ ಪೂಜಾ ಸಂಸ್ಕೃತಿಗಳ ಇತಿಹಾಸದಲ್ಲಿ ಡಾ| ರಾಜಾರಾಮ್ ಹೆಗಡೆಯವರ ವಿಶೇಷ ಆಸಕ್ತಿ. ಇವರು ವಿಕೇಂದ್ರೀಕರಣ, ಭಿನ್ನಮತ, ಅನೇಕಾರ್ಥ, ವೈವಿಧ್ಯಗಳಲ್ಲಿ ನಂಬಿಕೆ ಇರುವ ಇತಿಹಾಸಕಾರ. ಜೈನರಂಥ ಮತೀಯ ಧಾರ್ಮಿಕ ಅಲ್ಪಸಂಖ್ಯಾಕರನ್ನು ಅಲಿಖಿತ ಸಂಪ್ರದಾಯದ ಸೋಲಿಗರ  ಹಾಡುಗಳನ್ನು ಏಕಾಂತ ರಾಮಯ್ಯನ ಪವಾಡದ ಜನಪ್ರಿಯ ಕಥೆಯನ್ನು  ಇವರು ಅಲಕ್ಷಿಸುವುದಿಲ್ಲ. ನಿಶ್ಷಿತಪಥವಿಲ್ಲದೆ, ಭಿನ್ನಗತಿಗಳಲ್ಲಿ ಚಲಿಸುವ ಇತಿಹಾಸದ ವೈರುಧ್ಯಗಳತ್ತ,  ಅಲಕ್ಷಿತ ಅಂಶಗಳತ್ತ ಬೆಳಕು ಚೆಲ್ಲುವ ;ಲೌಕಿಕ-ಅಲೌಕಿಕ; ಒಂದು ಸಂವಾದ ಯೋಗ್ಯ ಗ್ರಂಥ.

No comments:

Post a Comment