stat Counter



Wednesday, June 1, 2016

ಗೋವಿಂದ ಪೈ- ಅಂದಿನಿಂದಾಕೆ ನಕ್ಕಿಲ್ಲ , ಅತ್ತಿಲ್ಲ

ಮೂರು ಮಕ್ಕಳ ತಾಯಿ ಮೋಚಿ ತಿಂಗಳಿನೊಳಗೆ 
ಆರೆಂಟರಿಬ್ಬರನು ಗುಡಿಸಲಲಿ ಬಿಟ್ಟು
ಹೆರವರಲಿ ದುಡಿವಾಕೆ ಹೋದಳು ಕೆರೆಯ ಬಳಿಗೆ
ಹಸುಳೆ ಸೊಂಟದಿ ಕೈಯ್ಯ ಹರಕರುವೆ ಕಟ್ಟು

ಮನೆಯ ನೆರೆಮರದ ಪೊಟರೆಯೊಳಗೆ ಹಕ್ಕಿಯ ಹಿಡಿಯ
ಲೇರಿದಾ ಮಕ್ಕಳಿಬ್ಬರನೊಂದು ಹಾವು
ಕಡಿದುದನವಳಿಗಾರೋ ಕಂಡವರರುಹೆ, ತಡೆಯ
ದೋಡಲೇನವರನಸುಗೊಂಡಿಹುದು ಸಾವು!

ಅತ್ತಳತ್ತಳು. ಸಂತವಿಸುವರಲ್ಲದೆ ತರುವೆ
ವೆನುವರಿಲ್ಲೆನಲಾಯ್ತು ಕೆರೆಯ ತಡಿಯಲ್ಲಿ
ಬಿಟ್ಟು ಶಿಶುವನು ನೆನಹು, ಮರೆತುದಿತ್ತಣ ಪರಿವೆ
ಬಂದು ನೋಡಿವಳಲ್ಲಿ  ನೀರ ಮಡಿಲಲ್ಲಿ

ತೇಲ್ವ ಬಾಲಕನೊಡಲ! ಮಾತನೆತ್ತಿಲ್ಲ
ಅಂದಿನಿಂದಾಕೆ ನಕ್ಕಿಲ್ಲ, ಅತ್ತಿಲ್ಲ

No comments:

Post a Comment