stat Counter



Monday, June 6, 2016

ಎಮ್. ಗೋಪಾಲಕೃಷ್ಣ ಅಡಿಗ- ಯಶೋರೂಪಿ ಮಾಸ್ತಿಯವರಿಗೆ ನಮನ

ಯಶೋರೂಪಿ ಮಾಸ್ತಿಯವರಿಗೆ ನಮನ
----------------------------------
ಕನ್ನಡದ ತೋಟದಲ್ಲಿತ್ತು, ತಲೆಯೆತ್ತಿ ನಿಂತಿತ್ತು
ಈ ಮಧುರ ಮಾಕಂದ, ಕೊಂಬೆ ಕೊಂಬೆಗಳಲ್ಲು
ಗೆಲ್ಲುಗೆಲ್ಲುಗಳಲ್ಲು ಹಣ್ಣುಗಳ ಗೊಂಚಲು;
ಸುತ್ತಲು ಅತಿ ಸಾಂದ್ರ ನೆಳಲು ಪಥಶ್ರಾಂತ
ಸಾಹಿತಿ ಜನಕ್ಕೆ; ಗ್ರಂಥಗ್ರಂಥಗಳ ಪುಟಪುಟದಲ್ಲಿ
ಪಡಿಮೂಡಿ ನಿಂತಿದೆ ಈಗಲೂ ಇಲ್ಲಿ
ಸರಳ, ಸುಂದರ, ಸಂತೋಷಪ್ರದವಾದ ಮಾಮರದ
ಪ್ರತಿಬಿಂಬ. ಜನ್ಮಶತಾಬ್ದಿ, ಸಹಸ್ರಾಬ್ದಿ, ಕಳೆದರೂ ಇಲ್ಲೆ
ನಿಲ್ಲುವಿರಿ - ಕನ್ನಡದ ಉಪವನದ ಹೆಗ್ಗಳಿಕೆ ಅಗ್ಗಳಿಕೆಯಾಗಿ
ನಿರಂತರವಾಗಿ, ನಿಃಸಂದೇಹ!
ಎಂಥೆಂಥ ಎಷ್ಟೆಷ್ಟು ಹಣ್ಣುಗಳು! ಓ ಎಂಥ ನಿಹಿ,
ಎಂಥ ಕಂಪು, ಎಂಥಾ ತಂಪು ಮನಸ್ಸಿಗೆ!
ಸಣ್ಣ ಕಥೆಗಳ ಸರಣಿ, ಕವನ ಕವನಗಳ ಸರಮಾಲೆ,
ಕಾದಂಬರಿಗಳ ಸುಗ್ರಾಸ, ನಾಟಕಗಳ ಸುವಿಶಾಲ ನೋಟ;
ವಿಮರ್ಶೆಗಳು, ಪ್ರಬಂಧಗಳಂತು ಬೇಕಾದಷ್ಟು!
ಅಧಿಕಾರದಲ್ಲಿದ್ದಾಗ, ಲೆಕ್ಕಣಿಕೆ ಹಿಡಿದಾಗ,
ಮಾನವತ್ವದ ಆಳ ವಿಸ್ತಾರಗಳ ಶೋಧ,
ಅತ್ಯುತ್ತಮದ ಅನುಸಂಧಾನ, ಅದರ ಬೋಧ!
ಕಣ್ಗೆಕಾಣುವ ಒಡಲು ಈಗಿಲ್ಲ ನಿಜ, ನಮ್ಮ
ನಿಮ್ಮ ಮಾಸ್ತಿಗೆ ಈಗ ಜ್ವಲಂತ ಕೀರ್ತಿ ಶರೀರ.
ಯಾವಾಗಲೂ ನೀವು ಕನ್ನಡದ ಆಸ್ತಿಯೇ. ಈ ಇಲ್ಲೆ
ಹುಟ್ಟಿ ಬರುವುದು ನಿಮ್ಮ ಸಾಹಿತ್ಯ ಸಂತಾನ.
ನಿಮ್ಮಾತ್ಮದ ಅಪತ್ಯವಾದಂಥ ಕವಿಜನ
ನಿಮಗೆ, ಕನ್ನಡದಮರ ಚೇತನರೆ, ಹಿರಿಯರೇ,
ಇದೋ ನಮ್ಮ ದೀರ್ಘದಂಡ ನಮಸ್ಕಾರ,
ನಮನ, ನಮನ - ಜನ್ಮ ಶತಾಬ್ದಿ ನಮನ.
-- ಗೋಪಾಲಕೃಷ್ಣ ಅಡಿಗ
Gopalakrishna adiga's poem  - Masti Venkatesha Aiyyangar
{ from Sudheendra Buddya's Face Book }

No comments:

Post a Comment