stat Counter



Saturday, June 4, 2016

ರಾಮಚಂದ್ರ ಪೈ - ಎಲೆ ಎಲೆಯ ಎದೆಯ ದನಿ

ಎಲೆಎಲೆಯ ಎದೆಯ ದನಿ
----------------------------------------
ಯಾವ ಜನ್ಮದ ಋಣವೊ ನಮ್ಮೆಲ್ಲರನು ಮತ್ತೆ
ಏಕಸೂತ್ರದೆ ಇಲ್ಲಿ ಬಂಧಿಸಿಹುದು
ಬೇಡಿಕೊಳ್ಳದೆ ನಾವು ಕಳೆದ ವಸಂತದಲ್ಲಿ
ಒಂದೆ ವೃಕ್ಷದ ಮೇಲೆ ಪಲ್ಲವಿಸಿದೆವು         

ಮೊದಲು ಮುಂಜಾವದಲಿ ಬರಿ ಮೂಕ ಮರ್ಮರವು
ಮೆಲುದನಿಯ ಪಿಸುಗು ರವಿಯುದಿಸುವನಕ
ಮಂದಮಾರುತ ಬೀಸಿ, ಅಲುಗಲುಗಿ ತಲೆದೂಗಿ
ನಮ್ಮಿರವ ಸಾರಿದೆವೆಮಗೆ ಮೌನ ಕನಕ    

ಹಿಮದ ಚಾದರ ಹೊದ್ದು ಮುಸುಕೆಳೆದು ಮಲಗಿದೆವು
ಚಳಿಯ ಚುಮುಚುಮು ಮಸುಕು ನಸುಕಿನಲ್ಲಿ 
ಮಳೆಯ ಹನಿಯಲಿ ಮಿಂದು ಹಳೆ ನೆನಪಿನಲಿ ನೆಂದು
ಹಸಿರೆ ಉಸಿರಾಗಿ ನಳನಳಿಸಿತಿಲ್ಲಿ           

ನೆಲದೊಡಲಿನಿಂದೆಮಗೆ ಅನ್ನ ನೀರನು ಉಣಿಸಿ
ಸಾಕಿ ಸಲಹಿದಳಾಕೆ ತಾಯಿಬೇರು
ಬಿರುಬಿಸಿಲ ಬೇಗೆಯಲಿ ನೆಳಲ ತಂಪನು ಸುರಿಸಿ
ಜೀವಕಳೆ ಮರಳಿಸಿದವರು ಯಾರು?     

ಕಾಲ ಮಾಗಿದ ಬಳಿಕ ತೆರಳದೇ ವಿಧಿಯಿಲ್ಲ
ಜಗದ ನಿಯಮವ ಮೀರಿ ನಡೆವುದೆಂತು?
ಅಗಲಿಕೆಯ ನೋವು ಎದೆಯೊಳಗೆ ತುಂಬಿರಲು
ಮನವು ಮರೆಯುವುದೆ ಕರುಳು ನಂಟು?

ಒಂದೆ ಕುಡಿಯಲಿ ಜನಿಸಿ ಬಾಳಿದೆವು ಜೊತೆಯಾಗಿ
ಈ ಎಲ್ಲ ಆರು ಋತುಮಾನಗಳಲಿ
ಮರುಜನುಮವ ತಳೆದು ಒಂದೆಡೆಯೇ ಚಿಗುರೋಣ
ಬರಲಿರುವ ಹೊಸ ಸಂವತ್ಸರದಲಿ !

👉🏻ರಾಮಚಂದ್ರ ಪೈ
Thanks to Parichaya Whatsap Group

No comments:

Post a Comment