ಮಗುವಿನ ಗುರು
ತಂದೆ-ತಾಯಿ, ಶಿಕ್ಷಕರು ಕಲಿಸುವ ಮೊದಲು ಹಸುಗೂಸಿಗೆ ಗುರು ಯಾರು? ಈ ಪ್ರಶ್ನೆ ನನ್ನನ್ನು ಕಾಡುತ್ತಿರುತ್ತದೆ. ತೊಟ್ಟಿಲಿನ ಹಸುಳೆ ತನ್ನಷ್ಟಕ್ಕೆ ತಾನು ನಿಷ್ಕಾರಣ ನಗುತ್ತದೆ. ಅಳುವಿಗಾದರು ಕಾರಣಗಳನ್ನು ಹುಡುಕಬಹುದೇನೋ? ಹೊಟ್ಟೆ ಹಸಿವಾಯಿತೋ, ಅಮ್ಮನ ಅಪ್ಪುಗೆಯ ಬಿಗಿ ಭದ್ರತೆ ತಪ್ಪಿತೋ, ಹಾಕಿದ ಬಟ್ಟೆ ಬಿಗಿಯಾಯಿತೋ, ಸೊಳ್ಳೆ ಕಚ್ಚಿತೋ ಹೀಗೆ... ಆದರೆ ನಗುವಿಗೆ? ಸುಮ್ಮನೆ ಅದನ್ನು ಮರುಳು ನಗೆ ಎಂದು ಬಿಡುತ್ತೇವೆ. ನಾವು ಆ ಕೂಸಿನ ನಗೆಗೆ ಮರುಳಾಗಿಬಿಡುತ್ತೇವೆ. ಹಾಗೆ ಮಾತು ಕಲಿತು ತಪ್ಪು ಒಪ್ಪು ಎಂದು ತಲೆಕೆಡಿಸಿಕೊಳ್ಳದೆ ನುಡಿವ ನುಡಿಗಳಿಗೂ ಮರುಳಾಗುತ್ತೇವೆ.
ಪುತಿನ ಅವರ `ಮಗುವಿನ ಗುರು' ಎನ್ನುವ ಕವಿತೆಯೊಂದಿದೆ. ಎಷ್ಟು ಜನರಿಗೆ ಅದರ ನೆನಪಿದೆಯೋ ತಿಳಿಯದು. ಕಾರ್ಮೋಡದ ಅಂಚಿನಿಂದ ಚಂದ್ರನ ಬೆಳದಿಂಗಳು ಸುರಿದಂತೆ ಚಿಂತೆ ಸಂತೆಯಲ್ಲಿ ನಿಂತಿದ್ದ ಕವಿಗೆ `ಆಂಡಾಲಿ'ಯ ನಗು ಹೊಳೆದು ಹರ್ಷ ಮೂಡುತ್ತದೆ. ಜಾಜಿಯ ಮೊಗ್ಗಿಗೆ ಮುತ್ತಿಡುವ ಕಿರಣದ ಚೆಲುವಿನ ಹೊಸ ನಗೆ ಅದು, ಕಪಟ, ಮೋಸ, ನೆವ ಇಲ್ಲದ ಸೊಗಸಿನ ನಗೆ! ಚಂದಿರನ ನಗೆಯನ್ನು ಇದಕ್ಕೆ ಹೋಲಿಸಬಹುದೇ? ಅದಕ್ಕೆ ಈ ಬಗೆಯ ಚುರುಕತನವಿದೆಯೇ? ಮೋಡದ ಮಿಂಚಿಗೆ ಹೋಲಿಸಬಹುದೇ? ಮಿಂಚಿನಂತೆ ಎದೆಯಲ್ಲಿ ತುಮುಲವನ್ನೇನೂ ಎಬ್ಬಿಸುವುದಿಲ್ಲ. ಕೊನೆಗೆ ಕವಿ ಬೆರಗುಗೊಂಡು ಮಗುವನ್ನೇ ಕೇಳುತ್ತಾರೆ. `ಮುದ್ದು ಆಂಡಾಲಿ, ಈ ನಗೆಯೆಲ್ಲಿತ್ತೇ? ಮನಸ್ಸನ್ನು ಸೆರೆ ಹಿಡಿವ ಬಲೆಯಂಥ ನಗೆ ದೇವಲೋಕದಿಂದ ಇಳಿಯುವಾಗ ಕದ್ದು ಬಿಟ್ಟೆಯ?' ಇದೆಂಥ ಸೋಜಿಗ ಎಂದು ಮಗುವಿನ ಕಣ್ಣುಗಳನ್ನೇ ನೋಡುತ್ತಾ ಮತ್ತೊಮ್ಮೆ `ಆಂಡಾಲೀ, ನಗೆಯೆಲ್ಲಿತ್ತೇ?' ಎಂದು ಕೇಳುತ್ತಾರೆ. ಹೀಗೆ ಕೇಳಿದಂತೆಲ್ಲ ಮಗುವಿನ ನಗೆ ಉಕ್ಕುತ್ತಲೇ ಹೋಗುತ್ತದೆ. ಕಣ್ಣುಗಳು ಕುತೂಹಲದಿಂದ ಹೊಳೆದು ಒಳಗಿನ ಆತ್ಮವನ್ನೇ ನೋಡುವ ರೀತಿಯಲ್ಲಿ ಒಳಮೊಗವಾಗುತ್ತದೆ.
`ಎನ್ನ ಆಂಡಾಲೀ ನಗೆಯೆಲ್ಲಿತ್ತೇ?' ಮತ್ತೆ ಪ್ರಶ್ನಿಸುತ್ತಾರೆ. ಥಟ್ಟನೆ ಮಗು, `ನನ್ನ ಕಿರುನಗೆ ಕಣ್ಣಲ್ಲಿತ್ತು, ಅಲ್ಲಿಂದ ಬಾಯಿಯೊಳಗೆ ಉಕ್ಕಿ ಬಂತು' ಎಂದುಬಿಡುತ್ತದೆ. ಕವಿಗೆ ಒಗಟು ಒಡೆದು, ಉತ್ತರ ಸಿಕ್ಕಿ, ಹರುಷದ ತೆರೆಯೆದ್ದು, ಮುತ್ತಿನ ಮಾತಿಗೆ ಸೋತು, ಮನದಲ್ಲಿ ಅಚ್ಚರಿಗೊಳ್ಳುತ್ತಾರೆ.
`ಎನ್ನ ಆಂಡಾಲೀ ನಗೆಯೆಲ್ಲಿತ್ತೇ?' ಮತ್ತೆ ಪ್ರಶ್ನಿಸುತ್ತಾರೆ. ಥಟ್ಟನೆ ಮಗು, `ನನ್ನ ಕಿರುನಗೆ ಕಣ್ಣಲ್ಲಿತ್ತು, ಅಲ್ಲಿಂದ ಬಾಯಿಯೊಳಗೆ ಉಕ್ಕಿ ಬಂತು' ಎಂದುಬಿಡುತ್ತದೆ. ಕವಿಗೆ ಒಗಟು ಒಡೆದು, ಉತ್ತರ ಸಿಕ್ಕಿ, ಹರುಷದ ತೆರೆಯೆದ್ದು, ಮುತ್ತಿನ ಮಾತಿಗೆ ಸೋತು, ಮನದಲ್ಲಿ ಅಚ್ಚರಿಗೊಳ್ಳುತ್ತಾರೆ.
ಈ ಕವಿತೆ ಅನೇಕ ಭಾವಗಳನ್ನು ನನ್ನಲ್ಲಿ ಹುಟ್ಟಿಸಿತು. ಪಂಚೇಂದ್ರಿಯಗಳಲ್ಲಿ ಸ್ಪರ್ಶಕ್ಕೆ, ಗಂಧಕ್ಕೆ, ರುಚಿಗೆ, ಶಬ್ದಕ್ಕೆ ದಕ್ಕದ ನಗೆ ನೋಟಕ್ಕೆ ದಕ್ಕಿತೆ? ನೋಟ ಎನ್ನುವುದನ್ನು ಹೊರಗಿನ ಪ್ರಪಂಚವನ್ನು ನೋಡುವ `ದೃಷ್ಟಿ' ಎಂಬ ಅರ್ಥದಲ್ಲಿ ಬಳಸುತ್ತಿದ್ದೇನೆ ಈ ಕವಿತೆಯನ್ನು ನಾನು ನನ್ನ ರೀತಿಯಲ್ಲಿಯೇ ಅರ್ಥಮಾಡಿಕೊಳ್ಳುತ್ತ ಹೋದೆ. ಮಗುವಿನ ನೋಟಕ್ಕೆ ಕಪಟವಿಲ್ಲ, ಮೋಸವಿಲ್ಲ, ತಲೆಯಲ್ಲಿ ತುರುಕಿದ ನೂರು ವಿಷಯಗಳ ನಿಯಂತ್ರಣವಿಲ್ಲ. ಹಾಗಾಗಿ ಪ್ರತಿಯೊಂದನ್ನು ಅತ್ಯಂತ ಸರಳವಾಗಿ, ಸಹಜವಾಗಿ ನೋಡುವುದಕ್ಕೆ ಅದಕ್ಕೆ ಸಾಧ್ಯ. ತಾನೇ ಮಾಡಿಕೊಂಡ ಮಲದಲ್ಲಿ ಆಟವಾಡುವ ಮಗುವಿಗೆ ಕೊಳೆ, ಕಶ್ಮಲದ ಅರಿವೇ ಇಲ್ಲ. ಮನೆ, ಶಿಕ್ಷಣ, ಪರಿಸರ, ಗೆಳೆಯರು ಇತ್ಯಾದಿಗಳಿಂದ ಕಲಿಯುವ ತಿಳಿಯುವ ವಿಚಾರಗಳು ಮನುಷ್ಯನ ಮಗುತನವನ್ನು ಉಳಿಸದೆ ಕಸಿಯುತ್ತ ಹೋಗುವುದನ್ನು ಹೆಜ್ಜೆ ಹೆಜ್ಜೆಯಲ್ಲೂ ಕಾಣುತ್ತಿರುತ್ತೇವೆ. ಮಗುತನದೊಂದಿಗೆ ನಗುವು ಸಹ! ಮುಗ್ಧ ನಗೆಯನ್ನು `ಪೆದ್ದು ನಗೆ' ಎಂದು ಅಪ ವ್ಯಾಖ್ಯಾನ ಮಾಡಿದ್ದೇವಲ್ಲ. `ಸುಮ್ಮ ಸುಮ್ಮನೆ ನಗಬೇಡ, ಹುಚ್ಚ ಎಂದುಕೊಳ್ಳುತ್ತಾರೆ. ಪೆದ್ದು ಪೆದ್ದಾಗಿ ಆಡಬೇಡ' ಎಂದೆಲ್ಲ ವಿಪರೀತ ಹುಬ್ಬುಗಂಟಿಕ್ಕಿಕೊಳ್ಳುವುದನ್ನು ಮನೆ ಮತ್ತು ಶಾಲೆ ಕಲಿಸಿಕೊಡುತ್ತಿದೆಯೇ ಎಂದು ಹಲವಾರು ಬಾರಿ ಅಚ್ಚರಿಗೊಂಡಿದ್ದೇನೆ. ಕಲಿಯುವುದು ಎಂದರೆ `ಮಗುತನ'ವನ್ನು ಕಳೆದುಕೊಳ್ಳುವುದು ಎಂದಾಗಿ ಬಿಟ್ಟಿದೆ.
ಆಂಡಾಲಿ ಜಗತ್ತನ್ನು ಮಲಿನತೆಯಿಲ್ಲದ ಕಣ್ಣುಗಳಲ್ಲಿ ನೋಡುತ್ತಾಳೆ. ಅಲ್ಲಿಯ ಪ್ರತಿ ವಿಷಯವು ಅವಳಿಗೆ ಅಚ್ಚರಿ, ಖುಷಿಯ ಅನುಭವವವನ್ನು ಕೊಟ್ಟು ನಗೆ ಉಕ್ಕಿಸುತ್ತಿದೆ. ನಾವೇ ಸೃಷ್ಟಿಸಿರುವ ಅಸಮಾನತೆ, ಅಸಹನೆ, ಅನ್ಯಾಯಗಳನ್ನೂ ಮಗು ಕಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ ನಿಜ. ಆದರೆ ಒಳಗೊಂದು ಮಗುತನ ಉಳಿಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಿದ್ದೇವೆಯೇ? ಅದನ್ನು ಹೃದಯದಲ್ಲಿ ಉಳಿಸಲು ನೋಡಿದ್ದೇವೆಯೇ ಎಂದರೆ ಅದು ಇಲ್ಲ. ನಮ್ಮೂರಿನ ಶಾಲೆಯಲ್ಲಿ ಒಬ್ಬ ಶಿಕ್ಷಕರು ಇದ್ದರು. ಸಿರಿವಂತಿಕೆ ಅಷ್ಟಾಗಿ ಇಲ್ಲದಿದ್ದರೂ ಆತ್ಮಾಭಿಮಾನವಿದ್ದ ಮಕ್ಕಳು ನಾವು. ವಾರಕ್ಕೆ ಒಂದೇ ದಿನ ಸಂತೆಯಲ್ಲಿ ಎಲ್ಲ ತರಕಾರಿಗಳನ್ನು ಕೊಂಡುಕೊಳ್ಳಬೇಕಿತ್ತು. ಎಷ್ಟೋ ಬಾರಿ ತರಕಾರಿಗಳು ಸಿಗದೇ ಹಿತ್ತಲಿನ ಪರಂಗಿ ಗಿಡದಿಂದ ಕಾಯಿ ಕಿತ್ತು ಅಮ್ಮ ಗೊಜ್ಜು ಮಾಡುತ್ತಿದ್ದರು. ಒಂದೆರಡು ಬಾರಿ ಆ ಶಿಕ್ಷಕರು ನಮ್ಮ ಮನೆಯಲ್ಲಿ ಊಟ ಮಾಡಿದ್ದರು. `ಪರಂಗಿ ಕಾಯಿ ಗೊಜ್ಜು' ತಿನ್ನುವ ನಮ್ಮನ್ನು ತರಗತಿಯಲ್ಲಿ ಎಲ್ಲರೆದುರಿಗೆ ಹಂಗಿಸಲು, `ಏನೇ ಪರಂಗಿಕಾಯಿ ಗೊಜ್ಜು ತಿಂದು ಬಂದೆಯಾ?' ಅಂತ ವಿಚಿತ್ರವಾಗಿ ಮಾತಾಡಿಸುತ್ತಿದ್ದರು. ಇದರಿಂದ ನನ್ನ ಅಕ್ಕ ಘಾಸಿಗೊಂಡಿದ್ದಳು. ಫ್ರಾಕ್ ಹಾಕಿಕೊಳ್ಳುತ್ತಿದ್ದ ನನ್ನ ಕಾಲಿಗೆ ದೊಣ್ಣೆಯಿಂದ ಬಡಿಯುತ್ತಿದ್ದರು. ನನ್ನ ಅಕ್ಕ ಒಬ್ಬಳಿಗೆ ನಾಟಕದಲ್ಲಿ ರಾಮನ ತಾಯಿ `ಕೌಸಲ್ಯೆ'ಯ ಪಾತ್ರ ಕೊಟ್ಟು `ನೀನು ಇದರಲ್ಲಿ ವಿಧವೆಯಾಗುತ್ತೀಯ, ಕುಂಕುಮವನ್ನು ಅಳಿಸಬೇಕು ' ಎಂದು ಪದೇ ಪದೇ ಹೇಳಿ, ಅವಳು ಕೆರಳಿ ನಾಟಕದಲ್ಲಿ ಪಾತ್ರವನ್ನೇ ಮಾಡುವುದಿಲ್ಲ ಎಂದು ಬಿಟ್ಟಿದ್ದಳು. ಮನೆಯಲ್ಲಿ ನನ್ನನ್ನು `ಜಾಣೆ' ಎಂದು ಕರೆಯುತ್ತಾರೆ ಎಂದು ತಿಳಿದ ಮೇಲೆ ತರಗತಿಯಲ್ಲಿ ` ಜಾಣೆ ಎಂದರೆ ಕೋಣೆ, (ಎಮ್ಮೆ ಕೋಣ ಎನ್ನುತ್ತಾರಲ್ಲ) ಕೋಣೆ ಎಂದರೆ ಕೋಣೆ ಮೂಲೆ, ಅಲ್ಲಿರಬೇಕಾದವಳು' ಎಂದು ಆತ್ಮವಿಶ್ವಾಸವನ್ನು ಕುಗ್ಗಿಸಲು ಯತ್ನಿಸಿದ್ದರು. ಬಹುಶಃ ಅವರ ನೋಟವೇ ಹಾಗಿತ್ತೇನೋ. ಇದು ನೆನಪಿಗೆ ಬಂದ ತಕ್ಷಣ `ನೋಟ' ಬದುಕಲ್ಲಿ ಎಷ್ಟು ಮುಖ್ಯ ಎಂದು ಹೊಳೆಯಿತು.
ನಗು ಸಹಜವಾಗಿ ಚಿಮ್ಮುವ ಅನುಭವಗಳೇ ಇಲ್ಲವೋ, ನಾವೇ ತುಟಿ ಹೊಲಿದು ಅತಿ ಗಾಂಭೀರ್ಯ ನಟಿಸುತ್ತಿದ್ದೇವೋ ಅರ್ಥವಾಗದ ಗೋಜಲಿನಲ್ಲಿ ಸಿಕ್ಕಿಕೊಂಡಿದ್ದೇವೆ. ಯಾರನ್ನಾದರೂ ಕಂಡ ತಕ್ಷಣ ಮುಖವರಳಿಸಲು ಹಿಂಜರಿಯುತ್ತೇವೆ. ಕಾಲೇಜಿನಲ್ಲಿ ಕೆಲಸ ಮಾಡುವಾಗ ಒಂದು ಸಹಜ ಉಲ್ಲಾಸದ ನಗು ಇಡೀ ವಾತಾವರಣವನ್ನೇ ಖುಷಿಯಲ್ಲಿಡುತ್ತಿತ್ತು. ಮಾಸದ ನನ್ನ ನಗುವಿಗೆ ಯಾರಾದರೂ ಕಾರಣ ಕೇಳಿದರೆ ನನ್ನ ವಿದ್ಯಾರ್ಥಿಗಳೆಂಬ ಮಕ್ಕಳು ಎಂದು ಬಿಡುತ್ತೇನೆ. ಮಕ್ಕಳ ಕಪಟವರಿಯದ ನಗು ನಮ್ಮನ್ನು ಅಷ್ಟು ಸುಲಭವಾಗಿ ಕಲುಷಿತಗೊಳ್ಳುವುದಕ್ಕೆ ಬಿಡುವುದಿಲ್ಲ. ನೆವವಿಲ್ಲದ ನಗೆಗೆ ಪ್ರತಿ ನಗೆ ನೀಡುತ್ತಾ ಮಕ್ಕಳಾಗಿ ಹೋಗುವ ಶಿಕ್ಷಕ ವೃತ್ತಿ ಕೊಡುವ ಆತ್ಮ ತೃಪ್ತಿಯನ್ನು ಮತ್ತಾವ ವೃತ್ತಿ ನೀಡುತ್ತದೋ ತಿಳಿಯದು. ಮಕ್ಕಳ ನಗುವನ್ನು ಆಲಿಸುವ, ನೋಡುವ ಶಿಕ್ಷಕರಲ್ಲಿ ಮಗುವಿನ ಕಣ್ಣು ಇರದಿದ್ದರೆ ನನಗಾದ ಕೆಲವು ಕಹಿ ಅನುಭವಗಳು ಹಲವರಿಗಾಗಿರುತ್ತದೆ.
ಈ `ಶಿಕ್ಷಕರ ದಿನ'ದಂದು ಯಾರಾದರೂ `ನೀವು ಕವಿ, ನೃತ್ಯಗಾತಿ, ಶಿಕ್ಷಕಿ, ಗೃಹಿಣಿ ಇತ್ಯಾದಿಗಳಲ್ಲಿ ಯಾರೆಂದು ಗುರುತಿಸಿಕೊಳ್ಳುತ್ತೀರಾ?' ಎಂದರೆ `ಶಿಕ್ಷಕಿ' ಎಂದೇ ಅನ್ನು
No comments:
Post a Comment