ಪತ್ರಿಕಾ ಹೇಳಿಕೆ:
ಆಗಸ್ಟ್ ಮೊದಲ ವಾರದಲ್ಲಿ ಉಡುಪಿಯಲ್ಲಿ ಆದದ್ದು ಬೂದಿ ಮಳೆ
ಆಗಸ್ಟ್ ಮೊದಲ ವಾರದಲ್ಲಿ ಉಡುಪಿಯಲ್ಲಿ ಆದದ್ದು ಬೂದಿ ಮಳೆ
- - - - - - - - - - - -
ಆಗಸ್ಟ್ 3-4ರಂದು ಉಡುಪಿ ಪರಿಸರದಲ್ಲಿ ಆದ ಮಳೆಯಲ್ಲಿ ಉದುರಿದ ಬಿಳಿಯ ವಸ್ತು ಬೂದಿ ಎಂಬುದನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ತಪಾಸಣೆ ನಡೆಸಿದ ಸುರತ್ಕಲ್ಲಿನ ಎನ್ ಐ ಟಿ ಕೆ ರಾಸಾಯನಿಕ ಎಂಜಿನಿಯರಿಂಗ್ ವಿಭಾಗ ನಿಡಿದ ವಿಶ್ಲೇಷಣಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಮನೋವೈದ್ಯ ಡಾ| ಪಿ. ವಿ. ಭಂಡಾರಿ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಮಾಜೀ ಪತ್ರಕರ್ತ ರಾಜಾರಾಂ ತಲ್ಲೂರು ಅವರು, ಮಾಹಿತಿ ಹಕ್ಕು ಕಾನೂನಿನಡಿ ಅರ್ಜಿ ಸಲ್ಲಿಸಿ ಪಡೆದುಕೊಂಡ ಎನ್ ಐ ಟಿ ಕೆ ವಿಶ್ಲೇಷಣಾ ವರದಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.
ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹ ಮಾಡಿದ ಮಾದರಿಯಲ್ಲಿ ಅದರ ತೂಕದ 71.43 ಶೇಕಡಾ ಬೂದಿ, 12.51 ಶೇಕಡಾ ಫಿಕ್ಸೆಡ್ ಕಾರ್ಬನ್, 10.92 ಶೇಕಡಾ ವಲಟೈಲ್ ರಾಸಾಯನಿಕಗಳು ಮತ್ತು 5.09 ಶೇಕಡಾ ತೇವಾಂಶ ಇತ್ತು ಎಂದು ವರದಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಡಾ| ಪಿ. ವಿ ಭಂಡಾರಿ ಅವರು ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ಅಪಘಾತಗಳನ್ನು ಕಣ್ಣಾರೆ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪರಿಸರ ನಾಶ ಚಟುವಟಿಕೆಗಳ ಕುರಿತು ಎಚ್ಚೆತ್ತುಕೊಳ್ಳಬೇಕು. ಉಡುಪಿಯಲ್ಲಿ ಬೂದಿ ಪ್ರಕರಣದ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು. ಈ ಪ್ರಕರಣ ಸುತ್ತಮುತ್ತಲಿನ ಕೈಗಾರಿಕೆಗಳು ನಮ್ಮ ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಬಗ್ಗೆ ಎಲ್ಲ ಚಿಹ್ನೆಗಳನ್ನು ತೋರಿಸುತ್ತಿದೆ ಎಂದರು.
ಒಬ್ಬ ವೈದ್ಯರಾಗಿ ಇಲ್ಲಿನ ಮನುಷ್ಯರ ಆರೋಗ್ಯ, ಸಸ್ಯ-ಪ್ರಾಣಿಗಳ ಮೇಲೆ ಆಗುವ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದವರು ಹೇಳಿದರು.
ಎಂಡೋಸಲ್ಫಾನ್ ಸಮಸ್ಯೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಾವು ಕಂಡಿದ್ದೇವೆ. ಸರ್ಕಾರ ಅವರಿಗೆ ಪ್ಯಾಕೇಜ್ ಕೊಟ್ಟು ಕೈತೊಳೆದುಕೊಂಡಿದೆ. ಇಂತಹ ಪ್ಯಾಕೇಜ್ ನಿರ್ವಹಿಸಲು ಸರ್ಕಾರದ ಬಳಿ ದುಡ್ಡೂ ಇರುವುದಿಲ್ಲ. ಹಾರು ಬೂದಿಯ ವಿಷಯದಲ್ಲೂ ಇಂತಹದೇ ಸನ್ನಿವೇಶ ಪುನರಾವರ್ತನೆ ಆಗದಿರಲಿ. ಜನಸಾಮಾನ್ಯರಿಗೆ ಬದುಕುವ ಹಕ್ಕು ಬೇಕೇ ಹೊರತು ಬದುಕಲಾಗದ ಅಭಿವ್ರದ್ಧಿ ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ಈಗಲೂ ಮಾತಾಡದಿದ್ದರೆ ಅಪಚಾರ
ಮೈ ಮೇಲೆ ಬೂದಿ ಉದುರಿರುವಾಗಲೂ ಉಡುಪಿಯ ಜನ ಮಾತನಾಡದಿದ್ದರೆ, ನಮ್ಮ ನಾಗರಿಕ ಜವಾಬ್ದಾರಿಗಳಿಗೆ ನಾವೇ ಅಪಚಾರ ಮಾಡಿದಂತಾಗುತ್ತದೆ ಎಂದ ರಾಜಾರಾಂ ತಲ್ಲೂರು ಅವರು ಈ ವಿಚಾರದಲ್ಲಿ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳು ತುರ್ತಾಗಿ ಕ್ರಮ ಕೈಗೊಂಡು ನಾಗರಿಕರಿಗೆ ರಕ್ಷಣೆಯ ಅಭಯ ನೀಡದಿದ್ದರೆ, ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದು ಅನಿವಾರ್ಯ ಆಗಬಹುದು ಎಂದು ಎಚ್ಚರಿಸಿದ್ದಾರೆ.
ನಾವು ಇಂತಹವರೇ ಈ ಕ್ರತ್ಯಕ್ಕೆ ಕಾರಣ ಎಂದು ಬೊಟ್ಟು ಮಾಡುವುದಿಲ್ಲ; ಆದರೆ ಅದು ಯಾರಿಂದ ಆಯಿತು ಎಂಬುದನ್ನು ಪತ್ತೆ ಹಚ್ಚಿ ಸಾರ್ವಜನಿಕರ ಗಮನಕ್ಕೆ ತರುವುದು ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ರಾಜಾರಾಂ ತಲ್ಲೂರು ನೆನಪಿಸಿದರು.
ಪರಿಸರ ಮಂಡಳಿ/ಜಿಲ್ಲಾಡಳಿತಕ್ಕೆ ಏಳು ಪ್ರಶ್ನೆಗಳು
ಪತ್ರಿಕಾಗೋಷ್ಟಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ಏಳು ಪ್ರಶ್ನೆಗಳ ಪ್ರಶ್ನಾವಳಿಯೊಂದನ್ನು ಕೇಳಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಬೇಕೆಂದು ಅಧಿಕಾರಿಗಳನ್ನು ಡಾ| ಪಿ ವಿ ಭಂಡಾರಿ ಮತ್ತು ರಾಜಾರಾಂ ತಲ್ಲೂರು ಒತ್ತಾಯಿಸಿದ್ದಾರೆ.
1. ಎನ್ ಐ ಟಿ ಕೆ ತಪಾಸಣಾ ವರದಿಯಲ್ಲಿ ಬಿದ್ದಿರುವುದು ಬೂದಿ ಎಂದು ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಈವತ್ತಿನ ತನಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಏನೇನು ಕ್ರಮಗಳನ್ನು ಕೈಗೊಂಡಿದೆ?
2. ಪರಿಸರ ಮಾಲಿನ್ಯ ಮಂಡಳಿಯನ್ನು ಉಲ್ಲೇಖಿಸಿ ಮಾಧ್ಯಮಗಳ ಒಂದು ವರ್ಗ ಬಿದ್ದದ್ದು ಬೂದಿ ಅಲ್ಲ ಮರಳು (ಸಿಲಿಕಾ) ಎಂದು ಸಾರ್ವಜನಿಕರ ಹಾದಿ ತಪ್ಪಿಸಿದೆ. ಇದನ್ನು ಯಾರು, ಯಾವ ಉದ್ದೇಶಕ್ಕಾಗಿ ಮಾಡಿದರು ಎಂಬ ಬಗ್ಗೆ ಜಿಲ್ಲಾಡಳಿತ ಮತ್ತು ಮಾಧ್ಯಮಗಳ ಆಡಳಿತ ಮಂಡಳಿ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಅಲ್ಲವೆ?
3. ಉಡುಪಿ ಜಿಲ್ಲಾಡಳಿತಕ್ಕೆ ಈ ಎನ್ ಐ ಟಿ ಕೆ ತಪಾಸಣಾ ವರದಿ ತಲುಪಿದೆಯೆ? ತಲುಪಿದ್ದರೆ, ಈ ನಿಟ್ಟಿನಲ್ಲಿ ಅವರು ಈವತ್ತಿನ ತನಕ ಏನು ಕ್ರಮ ಕೈಗೊಂಡಿದ್ದಾರೆ?
4. ಮಾಹಿತಿ ಹಕ್ಕಿನಡಿ ಕೇಳಿದಾಗ, ಇಂತಹ ಮಳೆ ಆದರೆ ಅದನ್ನು ತಪಾಸಣೆ ನಡೆಸಲು, ಮಾದರಿ ಸಂಗ್ರಹಿಸಲು ತಮ್ಮಲ್ಲಿ ಯಾವುದೇ ಸ್ಟಾಂಡರ್ಡ್ ಪ್ರೊಸೀಜರ್ ಇಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಲಿಖಿತವಾಗಿ ಹೇಳಿದೆ. ಉಡುಪಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲೇ ದೊಡ್ಡ ಉಷ್ಣವಿದ್ಯುತ್ ಸ್ಥಾವರದಂತಹಾ ಕಾರ್ಖಾನೆಗಳು ಇರುವಾಗ ಈ ರೀತಿಯ ಮುನ್ನೆಚ್ಚರಿಕೆಗಳೊಂದಿಗೆ ಸನ್ನದ್ಧ ಆಗಿರುವುದು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತದ ಕರ್ತವ್ಯ ಅಲ್ಲವೇ?
5. ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ಹರಡುವ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮದ ಅಲರ್ಜಿ ತೊಂದರೆಗಳು, ಶ್ವಾಸಕೋಶದ ಅಲರ್ಜಿಯಂತಹ ತೊಂದರೆಗಳ ಬಗ್ಗೆ ಸಮಗ್ರ ಅಧ್ಯಯನ ಆಗಿದೆಯೆ? ಆಗಿರದಿದ್ದರೆ ಅದು ನಡೆಯಬೇಕು ಮತ್ತು ಈ ಸಮೀಕ್ಷಾ ವರದಿ ಸಾರ್ವಜನಿಕರಿಗೆ ಸಿಗಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದೇವೆ.
6. ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ನಿಗಾ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಕಾರ್ಖಾನೆಯವರು ಇಲಾಖೆಗೆ ಸಲ್ಲಿಸುವ ಅಂಕಿ-ಅಂಶ, ರೀಡಿಂಗ್ ಗಳು ವಾಸ್ತವದಷ್ಟೇ ಇವೆಯೇ ಎಂಬುದನ್ನು ಪರಿಸರ ಮಾಲಿನ್ಯ ಮಂಡಳಿ ಯಾವಾಗ ಅಡ್ಡ ಪರಿಶೀಲನೆ ನಡೆಸಿದೆ? ಈ ಬಗ್ಗೆ ತಪಾಸಣೆ ನಡೆದಿದೆಯೆ? ಎಂಬುದನ್ನು ಪರಿಸರ ಮಂಡಳಿ ಸಾರ್ವಜನಿಕರಿಗೆ ತಿಳಿಸಬೇಕು. ಯಾಕೆಂದರೆ ಮಂಡಳಿ ಕೊಟ್ಟಿರುವ ಪರವಾನಿಗೆಯಲ್ಲಿ ಈ ರೀತಿಯ ತಪಾಸಣೆಗಳನ್ನು ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.
7. ಪರಿಸರ ಮಾಲಿನ್ಯ ಮಂಡಳಿ ಯುಪಿಸಿಎಲ್ ಗೆ ನೀಡಿರುವ ಪರವಾನಿಗೆ ಪತ್ರದಲ್ಲಿ ಹಾಕಿರುವ ಷರತ್ತುಗಳಲ್ಲಿ (ಜನರಲ್ ಕಂಡೀಷನ್ಸ್ ಎಚ್ 5) ಅಕಸ್ಮಾತ್ ಆಗಿ ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಕಲುಷಿತ ವಸ್ತುಗಳು ವಾತಾವರಣಕ್ಕೆ ಬಿಡುಗಡೆ ಆದರೆ, ಕಾರ್ಖಾನೆ ಆ ಬಗ್ಗೆ ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಗೆ ತುರ್ತು ಮಾಹಿತಿ ನಿಡಬೇಕು ಎಂದಿದೆ. ಅಂತಹ ಮಾಹಿತಿ ಮಂಡಳಿಗೆ ಕಾರ್ಖಾನೆಯಿಂದ ಬಂದಿದೆಯೆ?
No comments:
Post a Comment