stat Counter



Friday, October 22, 2010

B. V. KARANTHA

ಬಿ .ವಿ. ಕಾರಂತ

(ನಿರ್ದೇಶಕನ ಸಾಧನೆಗಳ ಸಮೂಹಶೋಧ)

- ಮುರಳೀಧರ ಉಪಾಧ್ಯ ಹಿರಿಯಡಕ



ನಿಜದ ಮಾತೆಂದರೆ
ಸಂಗೀತ ಮುಗಿದರೂ ಆ ಗುಂಗು ಹೋಗಿಲ್ಲ
ದಾರಿಯುದ್ದಕೆ ನಾನು ನಡೆದಾಡುವಾಗಲೂ
ಆ ಹಾಡೆ ಕಿವಿಯೊಳಗೆ ಗುಣುಗುಣಿಸಿದಂತಿದೆ
ಅವನ ಆ ಸ್ವರದ ಸಂಯೋಜನೆ
ಆ ಹಾಡುಗಾರಿಕೆಯ ನುಡಿಯ ನುಣುಪು
ಅದಕ್ಕೊಪ್ಪವಾಗಿ ದನಿಗೂಡುವ ವೀಣೆ
ಅದರ ಆ ತಂತಿ ಮಿಡಿತ
ಏಳು ಸ್ತರಗಳದೊಂದು ಏರಿಳಿತದಂದ
ನಡುವೆ ಆ ತಾರಕ
ಆ ವಿರಾಮದ ಮಂದ್ರ
ಗೀತ ಸಂಚಾರದಲಿ ಲೀಲೆಯಿಂದೆಂಬಂತೆ
ಅವನು ತೋರಿದ ಹಿಡಿತ
ಆ ನಡೆಯ ಸೊಗಸು
ಮತ್ತೆ ಮರುಕಳಿಸುವ ಆ ರಾಗಗಳ ಆವೃತ್ತಿ
ಎಲ್ಲವೂ ಚಂದ !

                                                                                                  -ಶೂದ್ರಕ
                                        [ಬನ್ನಂಜೆ ಗೋವಿಂದಾಚಾರ್ಯರ 'ಆವೆಯ ಮಣ್ಣಿನ ಆಟದ ಬಂಡಿ' (1996)ಯಿಂದ]



ಬಿ.ವಿ. ಕಾರಂತರ (ಬಾಬುಕೋಡಿ ವೆಂಕಟರಮಣ ಕಾರಂತ) ಜೀವನ ಪರಿಚಯ ಮತ್ತು ಕೃತಿಸಮೀಕ್ಷೆ ಈ ಗ್ರಂಥದ ಉದ್ದೇಶ. ಇದು ಅಭಿನಂದನ ಗ್ರಂಥವಲ್ಲ. ರಂಗಕೃತಿ ವಿಮರ್ಶೆ ಸಮೂಹಶೋಧವಾಗಿ ಬೆಳೆಸುವ ಪ್ರಯತ್ನ ಇಲ್ಲಿದೆ.

ಬಾಬುಕೋಡಿಯ ಬೋಯಣ್ಣ

ಬಿ.ವಿ. ಕಾರಂತರ ಕುಟುಂಬದ ಹಿರಿಯರು ಒಂದೆರಡು ತಲೆಮಾರುಗಳ ಹಿಂದೆ ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನಿಂದ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆಗೆ ವಲಸೆ ಬಂದಿದ್ದರು. ಈ ಬ್ರಾಹ್ಮಣ ಕುಟುಂಬದ ಕುಲದೇವರು ಸಾಲಿಗ್ರಾಮದ ನರಸಿಂಹ. ಕುಂದಾಪುರ ಕನ್ನಡದ ಒಂದು ಪ್ರಭೇದ ಇವರ ಮನೆಮಾತು. (ವೈದೇಹಿ ತನ್ನ 'ಯಾತ್ರೆ' ಕತೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿರುವ ಕೋಟ ಬ್ರಾಹ್ಮಣರ ಕನ್ನಡವನ್ನು ಪ್ರಯೋಗಿಸಿದ್ದಾರೆ.) ತೋಟದ ಮನೆಯ ಒಡೆಯರೊಬ್ಬರ ಒಕ್ಕಲಾಗಿದ್ದ ಬಾಬುಕೋಡಿ ನಾರಣಪ್ಪಯ್ಯ ಅಡಿಕೆ ತೋಟದವರ ಲೆಕ್ಕ-ಪತ್ರ ಬರೆಯುತ್ತ, ಮನೆಪಾಠ ಹೇಳುತ್ತ ಬದುಕುತ್ತಿದ್ದರು.

ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗ ವೆಂಕಟರಮಣ (ಬಿ.ವಿ. ಕಾರಂತ) ಹುಟ್ಟಿದ್ದು 1928ರ ಅಕ್ಟೋಬರ್ ಏಳರಂದು. (ಅಧಿಕೃತ ದಾಖಲೆಗಳಲ್ಲಿ ನಮೂದಾಗಿರುವ ಜನ್ಮದಿನ 19-9-1929). ತಾಯಿ ಲಕ್ಷ್ಮಮ್ಮ ತನ್ನ ಚೊಚ್ಚಿಲ ಮಗ ವೆಂಕಟರಮಣನನ್ನ ಕೊಂಡಾಟದಿಂದ 'ಬೋಯಣ್ಣ' ಎಂದು ಕರೆಯುತ್ತಿದ್ದರು. ನಾರಣಪ್ಪಯ್ಯ ದಂಪತಿಗಳಿಗೆ - ನಾಲ್ಕು ಗಂಡು, ಎರಡು ಹೆಣ್ಣು - ಒಟ್ಟು ಆರು ಮಕ್ಕಳು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು, ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ, ವಾದ್ಯಗಳ ಧ್ವನಿ ವಿನ್ಯಾಸ ಇವುಗಳಿಂದ ಬೋಯಣ್ಣನ ಭಾವಕೋಶ ಸಮೃದ್ಧವಾಯಿತು.

ಕುಕ್ಕಾಜೆ ಪ್ರಾಥಮಿಕ ಶಾಲೆಯ ನಾಟಕಗಳಲ್ಲಿ ಬೋಯಣ್ಣನಿಗೆ 'ಪಾರ್ಟು ಸಿಕ್ಕಿದವು. ಅಧ್ಯಾಪಕ ಕಳವಾರು ರಾಮರಾಯರು ನಿರ್ದೇಶಿಸಿದ 'ಸುಕ್ರುಂಡೆ ಐತಾಳರು - ಕುಂಬಳಕಾಯಿ ಭಾಗವತರು' ನಾಟಕದಲ್ಲಿ ಮೂರನೇ ಕ್ಲಾಸಿನ ಬೋಯಣ್ಣನದು ಪುರೋಹಿತನ ಐತಾಳನ ಪಾತ್ರ. ಪುರೋಹಿತ ಭಾಗವತನಾಗಬಯಸಿ ಸಂಗೀತವನ್ನು ಮಂತ್ರದ ಧಾಟಿಯಲ್ಲಿ ಹೇಳುವುದು, ಈ ನಾಟಕದ ವಸ್ತು (ಕಾರಂತರು ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಈ ನಾಟಕಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸಿ, ಪ್ರದರ್ಶಿಸಿದರು. ಐದನೆಯ ಕ್ಲಾಸಿನಲ್ಲಿದ್ದಾಗ ಅಧ್ಯಾಪಕ ಪಿ.ಕೆ. ನಾರಾಯಣರು ನಿರ್ದೇಶಿಸಿದ 'ನನ್ನ ಗೋಪಾಲ'ದಲ್ಲಿ 'ಬೋಯಣ್ಣ' ಗೋಪಾಲನಾದ. ಬೋಯಣ್ಣನ ಹಾಡು ಕೇಳಿ ಮೆಚ್ಚಿದ ಊರಿನ ಪಟೇಲರು ಎರಡು ಊಪಾಯಿ ಬಹುಮಾನ ಕೊಟ್ಟು ಪ್ರೋತ್ಸಾಹಿಸಿದರು.

ಪುತ್ತೂರಿನಿಂದ ಓಡಿಹೋದದ್ದು

ಎಂಟನೇ ಕ್ಲಾಸು ಮುಗಿಸಿದ ಬೋಯಣ್ಣ ಪುತ್ತೂರಿನ ಕುಕ್ರಬೈಲು ಕೃಷ್ಣಭಟ್ಟರ ಮನೆಯಲ್ಲಿ ಮನೆಪಾಠ ಹೇಳುವ ಮಾಸ್ಟ್ರಾದ. ಮಹಾಬಲ ಭಟ್ಟರ 'ತ್ಯಾಗರಾಜ ಸಂಗೀತಶಾಲೆ'ಯಲ್ಲಿ ಸಂಗೀತಾಭ್ಯಾಸ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿಕೆ, ಆಗಾಗ ಶಿವರಾಮ ಕಾರಂತರ 'ಬಾಲವನ'ಕ್ಕೆ ಭೇಟಿ - ಹೀಗೆ ಬೋಯಣ್ಣ ಪುತ್ತೂರಿನಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದ. ಗುಬ್ಬಿ ಕಂಪನಿಯ 'ಕೃಷ್ಣಲೀಲಾ' ನಾಟಕ ನೋಡಲು ಪಾಣೆಮಂಗಳೂರಿನಿಂದ ಮಂಗಳೂರಿಗೆ ಹೋದದ್ದು, ಸೈಕಲಿನಿಂದ ಬಿದ್ದು ಹಲವು ದಿನ ನರಳಿದ್ದು ಬೋಯಣ್ಣನಿಗೆ ಈಗಲೂ ನೆನಪಿದೆ. ಕಾರಂತರ 'ಬಾಲಪ್ರಪಂಚ' 'ಸಿರಿಗನ್ನಡ ಅರ್ಥಕೋಶ' - ಇಂಥ ಪುಸ್ತಕಗಳನ್ನು ತಗೊಳ್ಳಲಿಕ್ಕಾಗಿ ಬೋಯಣ್ಣ ಧನಿಗಳ ಮನೆಯಲ್ಲಿ ಕದಿಯತೊಡಗಿದ. ಕದ್ದು ಸಿಕ್ಕಿಬಿದ್ದಾಗ ಕೃಷ್ಣಭಟ್ಟರು ಬುದ್ಧಿವಾದ ಹೇಳಿದರು. ಹದಿಹರಯದ ಬೋಯಣ್ಣ ಪುತ್ತೂರು ಬಿಟ್ಟು ಘಟ್ಟ ಹತ್ತಲು ನಿರ್ಧರಿಸಿದ. 'ಊರುಡು ನಂಜಾಂಡ ಪಾರ್ದ್ ಬದ್ಕೊಡು' (ಊರಲ್ಲಿ ನಂಜಾದರೆ ಓಡಿಹೋಗಿ ಬದುಕಬೇಕು - ತುಳು ಗಾದೆ). ಬೋಯಣ್ಣ ಊರು ಬಿಟ್ಟು ಓಡಿಹೋದದ್ದು 17-11-1944ರಂದು (ತನ್ನ ಮಗ ಶನಿವಾರ ಊರುಬಿಟ್ಟು ಹೋದದ್ದರಿಂದ ಊರೂರು ಅಲೆಯುವಂತಾಯಿತು ಎಂದು ತಾಯಿ ಲಕ್ಷ್ಮಮ್ಮ ಕೊರಗುತ್ತಿದ್ದರಂತೆ). 'ನನ್ನ ಮಗ ಕಾಣೆಯಾಗಿದ್ದಾನೆ. ದಯವಿಟ್ಟು ಎಲ್ಲಿದ್ದಾನೆಂದು ಪತ್ತೆಮಾಡಿಸಿ' ಎಂದು ಬಿ.ವಿ. ಕಾರಂತರ ತಂದೆ ಕೇಂದ್ರ ಸರಕಾರದ ಗೃಹಮಂತ್ರಗಳಿಗೆ ಬರೆದ ಪತ್ರಕ್ಕೆ ಸರಿಯಾದ ಮಾಹಿತಿ ನೀಡುವ ಉತ್ತರ ಬಂತು. ಊರು ಬಿಟ್ಟು ಓಡಿಹೋಗಿ ಸುಮಾರು 25 ವರ್ಷಗಳ ಅನಂತರ ಬಿ.ವಿ. ಕಾರಂತರು ತನ್ನ ತಾಯಿ-ತಂದೆಯನ್ನು ಭೇಟಿಯಾದರು. ಈ ಭೇಟಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ 'ಏವಂ ಇಂದ್ರಜಿತು' ಪ್ರದರ್ಶನದ ದಿನ ನಡೆಯಿತು.

ಗುಬ್ಬಿ ಕಂಪೆನಿಯಲ್ಲಿ

ಪುತೂರಿನಿಂದ ಮೈಸೂರಿಗೆ ಓಡಿಬಂದ ಬಿ.ವಿ. ಕಾರಂತ ’ಕತ್ತೆ ಯಾವುದು ಕುದುರೆ ಯಾವುದ” ಎಂದು ತಿಳಿಯದ ಮುಗ್ಧ (ನೋಡಿ 1-1). ಮಹಾರಾಜರನ್ನು ಭೇಟಿಯಾಗಿ ಅವರ ಆಶ್ರಯದಲ್ಲಿ ಸಂಗೀತ ಕಲಿಯಬೇಕೆಂದು ಕನಸು ಕಾಣುತ್ತಿದ್ದ ಕಾರಂತರಿಗೆ ಗುಬ್ಬಿ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಮೊದಲು ಬಾಲಕೃಷ್ಣ, ಮಾರ್ಕಂಡೇಯ ಇತ್ಯಾದಿ ಪಾತ್ರಗಳಲ್ಲಿ ಮಿಂಚಿದ ಈ ಚಂದದ ಯುವಕ ಮುಂದೆ ಖಾಯಂ ಆಗಿ ಸ್ತ್ರೀ ಪಾತ್ರ ಮಾಡಬೇಕಾಯಿತು. ಗುಬ್ಬಿ ಕಂಪೆನಿಯ ಮಾಲಿಕ ಗುಬ್ಬಿವೀರಣ್ಣ (1890-1972); ಕಂಪೆನಿಯ ನಾಟಕಕಾರ ನಿರ್ದೇಶಕರಾದ ಬಿ. ಪುಟ್ಟಸ್ವಾಮಯ್ಯ ಕಾರಂತರಿಗೆ ತುಂಬ ಉತ್ತೇಜನ ನೀಡಿದರು. ಕಂಪೆನಿಯ ಪೂಜೆಯ ಭಟ್ಟರಾಗಿದ್ದ ಕಾರಂತ, ನಾಟಕಗಳ ಹಸ್ತಪ್ರತಿಯ ಪ್ರತಿ ತಯಾರಿಸುವ ಕೆಲಸವನ್ನೂ ಮಾಡುತ್ತಿದ್ದರು; ಗಾಂಧೀಜಿಯ 'ಹರಿಜನ' ಪತ್ರಿಕೆಯಿಂದ ಪ್ರೇರಣೆ ಪಡೆದು ಹಿಂದೀ ಕಲಿಯತೊಡಗಿದರು. ಗುಬ್ಬಿಕಂಪೆನಿಯಲ್ಲಿ ಬೆಳ್ಳಾವೆ ನರಹರಿ ಶಾಸ್ತ್ರಿ, ಹುಣಸೂರು ಕೃ಼ ಷ್ಣಮೂರ್ತಿ, ಕು.ರಾ. ಸೀತಾರಾಮ ಶಾಸ್ತ್ರಿ, ಜಿ.ವಿ. ಅಯ್ಯರ್, ಬಾಲಕೃಷ್ಣ ಮತ್ತಿತರರ ಒಡನಾಟದಲ್ಲಿ ಅವರು ಬೆಳೆದರು. ಗುಬ್ಬಿ ಚನ್ನಬಸವೇಶ್ವರ ನಾಟಕ ಸಂಘದಲ್ಲಿ ಆರು ವರ್ಷವಿದ್ದ ಕಾರಂತರು ಮುಂದೆ ಬೆಂಗಳೂರು ಸೇರಿದರು.

ಬಿ.ವಿ. ಕಾರಂತರ ಇಂಗ್ಲಿಷ್ ಜ್ಞಾನ ಚೆನ್ನಾಗಿರಲಿಲ್ಲ. ಅವರು ಖಾಸಗಿಯಾಗಿ ಹಿಂದೀ ಮಾಧ್ಯಮದಲ್ಲಿ ಮೆಟ್ರಿಕ್, ಇಂಟರ್ಮೀಡಿಯೆಟ್, ಬಿ.ಎ. ಮಾಡಿದರು. ಪರೀಕ್ಷೆ ಬರೆಯಲು ಆಗಾಗ ಕಾಶಿಗೆ ಹೋಗಿ ಬರುತ್ತಿದ್ದ ಅವರಿಗೆ ಗುಬ್ಬಿವೀರಣ್ಣ ಮತ್ತು ಅವರ ಕುಟುಂಬದವರು ಆರ್ಥಿಕ ಸಹಾಯ ನೀಡಿದರು. (ಬಿ.ವಿ. ಕಾರಂತರ ದುರ್ಬಲ ಇಂಗ್ಲಿಷ್ ಬಗ್ಗೆ ಪ್ರಸಿದ್ಧ ತುಂಟಾಟವೊಂದು ಹೀಗಿದೆ - ದೆಹಲಿಯಲ್ಲಿ ಒಮ್ಮೆ ಬಿ.ವಿ. ಕಾರಂತರನ್ನು ಶಿವರಾಮ ಕಾರಂತರೆಂದು ತಪ್ಪು ತಿಳಿದ ಒಬ್ಬರು ಇಂಗ್ಲಿಷಿನಲ್ಲಿ ಮಾತನಾಡಿಸಿದರು. ನಾನು ಶಿವರಾಮ ಕಾರಂತ ಅಲ್ಲ; ಬಿ.ವಿ. ಕಾರಂತ ಎಂದು ಇಂಗ್ಲಿಷ್ ನಲ್ಲಿ ವಿವರಿಸಲು ಬಿ.ವಿ. ಕಾರಂತರಿಗೆ ಸಾಕೋಸಾಕಾಯಿತಂತೆ). ಬೆಂಗಳೂರಿನಲ್ಲಿ ಒಂದು ಮಾರವಾಡಿ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಜಿ.ವಿ. ಅಯ್ಯರ್ ಮತ್ತು ಬಾಲಕೃಷ್ಣರ ಪ್ರೋತ್ಸಾಹ ಸಿಕ್ಕಿತು.

ಕಾಶಿಯಲ್ಲಿ ಕಾರಂತ

1956-58ರಲ್ಲಿ ಬಿ.ವಿ. ಕಾರಂತರು ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಹಿಂದೀ ಎಂ.ಎ. ಅಧ್ಯಯನ ಮಾಡಿದರು. ಎಂ.ಎ.ಯ ಪ್ರಬಂಧಕ್ಕಾಗಿ ಅವರು ಆಯ್ಕೆಮಾಡಿದ ವಿಷಯ - 'ಲಯತತ್ವ ಮತ್ತು ಹಿಂದೀ ಕಾವ್ಯ'. ಪಂಡಿತ ಓಂಕಾರನಾಥ ಠಾಕೂರರ ಶಿಷ್ಯನಾಗಿ ಅವರು ಹಿಂದೂಸ್ಥಾನಿ ಸಂಗೀತ ಕಲಿತರು. ಕಾಶಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ಸೇರಿದ್ದ ಕಾರಂತರು ಮುಂದೆ ಅದರಿಂದ ದೂರವಾದರು. ಯುವಕ ಕಾರಂತರು ಬೆಂಗಳೂರಿನ ತರುಣಿಯೊಬ್ಬರಿಗೆ ಪ್ರೇಮಪತ್ರ ಬರೆದರು - ’ನಿನ್ನ ಮೇಲೆ ನನಗೆ ಮನಸ್ಸಾಗಿದೆ (ಮೇರಾ ಮನ್ ತುಜ್ ಸೆ ಲಗಾ ಹುವಾ ಹೈ” ’ನನ್ನ ಮನಸ್ಸು ಬೇರೊಬ್ಬನನ್ನು ಬಯಸುತ್ತಿದೆ (ಮೇರಾ ಮನ್ ಕಹೀ ಔರ್ ಲಗ್ ಚುಕಾ ಹೈ)’ ಎಂದು ಅವಳಿಂದ ಉತ್ತರ ಬಂದಾಗ ಪ್ರಕರಣ ಮುಕ್ತಾಯವಾಯಿತು !

1958ರಲ್ಲಿ ಬಿ.ವಿ. ಕಾರಂತ-ಪ್ರೇಮಾ ದಂಪತಿಗಳಾದರು. ಮೈಸೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈ ಮದುವೆ ನಡೆಯಿತು. ಶಿಕ್ಷಕಿಯಾಗಿದ್ದ ಪ್ರೇಮಾ ಮದುವೆಯಾದ ಮೇಲೆ ಕೆಲಸ ಕಳೆದುಕೊಂಡರು. ನವದಂಪತಿಗಳು ಆರ್ಥಿಕ ದು:ಸ್ಥಿತಿಯಿಂದ ಕಂಗಾಲಾದರು. ಗಂಗೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಬಿ.ವಿ. ಕಾರಂತರ ನಿರ್ಧಾರ ಅದೃಷ್ಟವಶದಿಂದ ಬದಲಾಯಿತು. ಸಂಶೋಧನೆ (ಪಿ.ಎಚ್‍ಡಿ.)ಗಾಗಿ ಕಾರಂತರು 'ರಂಗಭೂಮಿ ಮತ್ತು ಹಿಂದೀ ನಾಟಕ’) ಎಂಬ ವಿಷಯ ಆರಿಸಿಕೊಂಡರು. ಪ್ರೊ ಹಜಾರಿ ಪ್ರಸಾದ್ ದ್ವಿವೇದಿ ಮಾರ್ಗದರ್ಶಕರಾಗಿದ್ದರು. ಸಂಶೋಧನೆಯ ಕ್ಷೇತ್ರಕಾರ್ಯಕ್ಕಾಗಿ ಕಾರಂತರು ಕೆಲವು ತಿಂಗಳು ಕಲ್ಕತ್ತಾದಲ್ಲಿದ್ದರು.

ರಾಷ್ಟ್ರೀಯ ನಾಟಕಶಾಲೆಯಲ್ಲಿ

ಬಿ.ವಿ. ಕಾರಂತರು ತನ್ನ ಮೂವತ್ತರೆಡನೆಯ ವಯಸ್ಸಿನಲ್ಲಿ (1960ರಲ್ಲಿ) ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಸೇರಿದರು. ಶ್ರೀರಂಗ­­೩ ಮತ್ತು ಕಲ್ಕತ್ತಾದ ಡಾ. ಪ್ರೇಮಲತಾ ಶರ್ಮ ಅವರ ಸಹಾಯದಿಂದ ಅವರು ಎನ್.ಎಸ್.ಡಿ. ಸೇರುವುದು ಸಾಧ್ಯವಾಯಿತು. ಕಾರಂತರು ಎನ್.ಎಸ್.ಡಿ. ವಿದ್ಯಾರ್ಥಿಯಾಗಿದ್ದಾಗ (1960-62) ಅನುಕ್ರಮವಾಗಿ ನಾತುಸೇನ್, ನೇಮಿಚಂದ್ರ ಜೈನ್ ಮತ್ತು ಅಲ್ಕಾಜಿ ಎನ್.ಎಸ್.ಡಿ.ಯ ನಿರ್ದೇಶಕರಾಗಿದ್ದರು. ಪ್ರೇಮಾ ಕಾರಂತರಿಗೆ ದೆಹಲಿಯ ಅರವಿಂದ ಆಶ್ರಮಶಾಲೆಯಲ್ಲಿ ಕೆಲಸ ಸಿಕ್ಕಿತು. ಭಾಸನ 'ಸ್ವಪ್ನವಾಸವದತ್ತ', ಗಿರೀಶ ಕಾರ್ನಾಡರ 'ತುಘಲಕ್' ನಾಟಕಗಳನ್ನು ಹಿಂದೀಗೆ ಭಾಷಾಂತರಿಸಿದ, ಅಚ್ಚ ಹಿಂದೀ ಮಾತನಾಡುವ ಬಿ.ವಿ.ಕಾರಂತರು ಪ್ರೊ
ಅಲ್ಕಾಜಿಯವರ ಗಮನಸೆಳೆದರು. ಬಿ.ವಿ. ಕಾರಂತರ ಮೊದಲ ನಾಟಕಗಳಲ್ಲಿ ಅಲ್ಕಾಜಿಯವರ ಸ್ಪಷ್ಟ ಪ್ರಭಾವವಿತ್ತು.

ಎನ್.ಎಸ್.ಡಿ. ಪದವೀಧರ ಬಿ.ವಿ. ಕಾರಂತರು ದೆಹಲಿಯ ಪಟೇಲ್ ಸ್ಕೂಲ್‍ನಲ್ಲಿ 'ಡ್ರಾಮಾ ಮಾಸ್ಟರ್ ಆದರು (1963). 'ಪಂಜರಶಾಲೆ' 'ನನ್ನ ಗೋಪಾಲ' 'ಇಸ್ಪೀಟ ರಾಜ' ಇವು ಪಟೇಲ್ ಸ್ಕೂಲ್‍ನಲ್ಲಿ ಅವರು ನಿರ್ದೇಶಿಸಿದ ನಾಟಕಗಳು. ಅವರು ದೆಹಲಿಯಲ್ಲಿ ತನ್ನ ಮಿತ್ರರೊಡನೆ ಆರಂಭಿಸಿದ ಸಂಘಟನೆ - 'ಕನ್ನಡ ಭಾರತಿ'. 'ತುಘಲಕ್' 'ರಂಗಭಾರತ' 'ದಾರಿ ಯಾವುದಯ್ಯ ವೈಕುಂಠಕೆ' - ಇವು ಅವರು ದೆಹಲಿಯಲ್ಲಿ ನಿರ್ದೇಶಿಸಿದ ಮುಖ್ಯ ನಾಟಕಗಳು. 1978ರಲ್ಲಿ ಕಾರಂತರು ಜರ್ಮನಿ, ಹಂಗೇರಿ, ಯುಗೊಸ್ಲಾವಿಯಾ, ಬಲ್ಗೇರಿಯಾಗಳ ಪ್ರವಾಸ ಮಾಡಿ ಅಲ್ಲಿನ ರಂಗಭೂಮಿಗಳ ಸ್ಥಿತಿಯನ್ನು ಅಧ್ಯಯನಮಾಡಿದರು (ನೋಡಿ 4-1).

ಬೆಂಗಳೂರಿನಲ್ಲಿ ಹೊಸ ಪ್ರಯೋಗಗಳು

ಬಿ.ವಿ. ಕಾರಂತರು 1971ರ ದಶಕದಲ್ಲಿ ಬೆಂಗಳೂರಿಗೆ ಬಂದಾಗ ಹವ್ಯಾಸಿ ರಂಗಭೂಮಿ ಜನಾಕರ್ಷಣೆಯನ್ನು ಕಳಕೊಂಡಿತ್ತು. ಚಿಂತನಪ್ರಧಾನವಾಗಿದ್ದ ಹವ್ಯಾಸಿ ರಂಗಭೂಮಿಯಲ್ಲಿ ಕಂಪೆನಿ ನಾಟಕಗಳ ದೃಶ್ಯವೈಭವ, ರಂಗಸಂಗೀತ, ನೃತ್ಯಗಳು ನಾಪತ್ತೆಯಾಗಿದ್ದವು. ಕಪಿಲನ ದೇಹ ಮತ್ತು ದೇವದತ್ತನ ತಲೆಯನ್ನು ಬೆಸೆದ 'ಹಯವದನ'ದ ಪದ್ಮಿನಿಯಂತೆ ಬಿ.ವಿ. ಕಾರಂತರು ಕಂಪೆನಿ ಮತ್ತು ಹವ್ಯಾಸಿ ರಂಗಭೂಮಿಗಳ ಉತ್ತಮಾಂಶಗಳನ್ನು ಒಗ್ಗೂಡಿಸಿದರು; ಮಾನುಷೀ ಸಿದ್ಧಿಯನ್ನು ಪಡೆದರು.

ಬಾದಲ್ ಸರ್ಕಾರವರ 'ಏವಂ ಇಂದ್ರಜಿತ್', ಗಿರೀಶ್ ಕಾರ್ನಾಡರ 'ಹಯವದನ', ಲಂಕೇಶರ 'ಸಂಕ್ರಾಂತಿ', 'ಈಡಿಪಸ್' (ಮೂಲ - ಸೊಫೊಕ್ಲಿಸ್), ಚಂದ್ರಶೇಖರ ಕಂಬಾರರ 'ಜೋಕುಮಾರಸ್ವಾಮಿ', ಜಿ.ಬಿ. ಜೋಶಿ ಅವರ 'ಸತ್ತವರ ನೆರಳು' ಇವು ನಿರ್ದೇಶಕ ಕಾರಂತರ ಸೃಜನಶೀಲತೆಯನ್ನು ಮೆರೆಸಿದವು. 'ಹಯವದನ' 'ಸತ್ತವರ ನೆರಳು'ಗಳ ಕುರಿತು ತೀವ್ರ ಟೀಕೆ, ಭಿನ್ನಾಭಿಪ್ರಾಯಗಳಿದ್ದುವು. 'ಸತ್ತವರ ನೆರಳು' ಇನ್ನೂರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿತು (ನೋಡಿ 2-3, 2-4, 2-5).

ಶ್ರೀರಂಗರ 'ಸ್ವರ್ಗಕ್ಕೆ ಮೂರೇ ಬಾಗಿಲು', 'ಕತ್ತಲೆ-ಬೆಳಕು' ಮತ್ತಿತರ ಶ್ರೀರಂಗರ ನಾಟಕಗಳನ್ನೂ ಕಾರಂತರು ನಿರ್ದೇಶಿಸಿದರು. ಕಾರಂತರ ಪ್ರತಿಭೆಯನ್ನು ಗುರುತಿಸಿದ ಶ್ರೀರಂಗರು ನಿರ್ದೇಶಕನ ಸ್ವಾತಂತ್ರ್ಯಕ್ಕೆ ಮೌನಸಮ್ಮತಿ ನೀಡಿದರು. ಹೆಗ್ಗೋಡಿನಲ್ಲಿ ನಿರ್ದೇಶಿಸಿದ 'ಪಂಜರಶಾಲೆ', ಉಡುಪಿಯಲ್ಲಿ ನಿರ್ದೇಶಿಸಿದ 'ಹೆಡ್ಡಾಯಣ'ಗಳಲ್ಲಿ ಮಕ್ಕಳ ನಾಟಕರಂಗದಲ್ಲಿ ಮಾಡಬಹುದಾದ ಪವಾಡಗಳನ್ನು ಅವರು ತೋರಿಸಿಕೊಟ್ಟರು. ಕಾರಂತರು ಬೆಂಗಳೂರಿನಲ್ಲಿ ಮಾಡಿದ ರಂಗಪ್ರಯೋಗಗಳ ಸೋಲು-ಗೆಲುವಿನ ಸಮೀಕ್ಷೆ ಈ ಗ್ರಂಥದಲ್ಲಿರುವ ಡಾ
ವಿಜಯಾ ಅವರ ಲೇಖನದಲ್ಲಿದೆ (ನೋಡಿ 1-10).

ಎನ್.ಎಸ್.ಡಿ. ನಿರ್ದೇಶಕ

ಬಿ.ವಿ. ಕಾರಂತರು 1977-1981ರ ಅವಧಿಯಲ್ಲಿ ಎನ್.ಎಸ್.ಡಿ.ಯ (ದೆಹಲಿಯ ರಾಷ್ಟ್ರೀಯ ನಾಟಕಶಾಲೆ) ನಿರ್ದೇಶಕರಾಗಿದ್ದರು. ’ಬರ್ನಮ್‍ವನ’ 'ಷಹಜಹಾನ್' 'ಮುದ್ರಾರಾಕ್ಷಸ' 'ಭಗವದಜ್ಜುಕೀಯ' 'ಛೋಟೀ ಸೈಯದ್' 'ಅಂಧೇರ್ ನಗರಿ ಚೌಪಟ್ ರಾಜಾ' - ಇವು ಅವರು ಎನ್.ಎಸ್.ಡಿ.ಯಲ್ಲಿದ್ದಾಗ ನಿರ್ದೇಶಿಸಿದ ನಾಟಕಗಳು. ಇವುಗಳಲ್ಲಿ ಎರಡು ಸಂಸ್ಕೃತ ನಾಟಕಗಳು ಎಂಬುದನ್ನು ಗಮನಿಸಬೇಕು. ’ಬರ್ನಮ್‍ವನ’ ದಲ್ಲಿ ಶೇಕ್ಸ್‌ಪಿಯರ್‌ನನ್ನು ಪಶ್ಚಿಮದಿಂದ ಪೂರ್ವದ ರಂಗಭೂಮಿಗೆ ತರುವ ಸೃಜನಶೀಲ ಲಂಘನವಿತ್ತು. ಇದರಲ್ಲಿ ಕಾರಂತರು ಯಕ್ಷಗಾನದ ಚಲನೆಯನ್ನು ಇಂಡೋನೇಶ್ಯಾ ಕ್ಯಾಂಬೋಡಿಯಾಗಳ ವಸ್ತ್ರವಿನ್ಯಾಸವನ್ನೂ ಬಳಸಿದರು.

ಅಲ್ಕಾಜಿಯವರು ಎನ್.ಎಸ್.ಡಿ.ಯನ್ನು ಪಾಶ್ಚಾತ್ಯ ರಂಗಭೂಮಿಯ ಶಿಸ್ತಿನಿಂದ ಬೆಳೆಸಿದ್ದರು. ಕಾರಂತರು ರಾಷ್ಟ್ರೀಯ ನಾಟಕಶಾಲೆಯ ಭಾರತೀಕರಣವನ್ನೂ, ವಿಕೇಂದ್ರೀಕರಣವನ್ನೂ ಆರಂಭಿಸಿದರು. ಭಾರತೀಯ ರಂಗಭೂಮಿ ಬಹುರೂಪಿ ಎಂಬ ಅಂಶಕ್ಕೆ ಅವರು ಒತ್ತು ನೀಡಿದರು. ಅಲ್ಕಾಜಿಯವರ ಆಡಳಿತ ನೈಪುಣ್ಯ, ಶಿಸ್ತುಗಳಿಲ್ಲದ ಕಾರಂತರು ಎನ್.ಎಸ್.ಡಿ. ನಿರ್ದೇಶಕರಾಗಿ ಸೋತದ್ದು ಆಶ್ಚರ್ಯವೇನಲ್ಲ. [ಗೋಪಾಲಕೃಷ್ಣ ಅಡಿಗರಿಗೆ ಅಲ್ಕಾಜಿಯವರ 'ತುಘಲಕ್' ಪರಿಣಿತವಾದ ಡ್ರಿಲ್, ಬಿ.ವಿ. ಕಾರಂತರ 'ತುಘಲಕ್' ನಿಜವಾದ ನಾಟಕ ಅನ್ನಿಸಿತಂತೆ ! (ನೋಡಿ 1-6]

ಭೋಪಾಲದ ಅಗ್ನಿದಿವ್ಯ

ಭೋಪಾಲದ 'ಭಾರತಭವನ' ಐ.ಎ.ಎಸ್. ಅಧಿಕಾರಿ, ಕವಿ ಅಶೋಕ ವಾಜಪೇಯಿಯವರ ಕನಸು. ಬಿ.ವಿ. ಕಾರಂತರು 1982ರಿಂದ 1986ರ ವರೆಗೆ ಭೋಪಾಲದ ರಂಗಮಂಡಲದ ಲ್ಲಿದ್ದರು. 'ಘಾಸಿರಾಮ್ ಕೊತ್ವಾಲ್' 'ಜರಾಸಂಧ' ’ಚತುಬಾರ್ನಿ’, 'ಮಾಲವಿಕಾಗ್ನಿಮಿತ್ರ' 'ಸ್ಕಂದಗುಪ್ತ' ಇವು ಈ ಅವಧಿಯಲ್ಲಿ ಅವರು ನಿರ್ದೇಶಿಸಿದ ನಾಟಕಗಳು. ಇದೇ ಅವಧಿಯಲ್ಲಿ ಅವರು ಆಸ್ಟ್ರೇಲಿಯಾಕ್ಕೆ ಹೋಗಿ 'ಹಯವದನ' ನಿರ್ದೇಶಿಸಿದರು.

'ಮಾಲವಿಕಾಗ್ನಿಮಿತ್ರ'ವನ್ನು ಮಾರ್ಗದಿಂದ ದೇಸಿಯತ್ತ ತರುವ ಪ್ರಯತ್ನದಲ್ಲಿ ಕಾರಂತರು ಯಶಸ್ವಿಯಾದರು. ಸಂಸ್ಕೃತ 'ಮಾಲವಿಕಾಗ್ನಿಮಿತ್ರ'ವನ್ನು ಹಿಂದೀಯ ಪ್ರಾದೇಶಿಕ ಉಪಭಾಷೆಯಾದ ಬುಂದೇಲಿಯಲ್ಲಿ ಪ್ರಯೋಗಿಸುವುದು ಸೀಮೋಲ್ಲಂಘನದ ಐತಿಹಾಸಿಕ ನಿರ್ಧಾರವಾಗಿತ್ತು.

'ತೊಂಡುಮೇವರಿಗೆ ಹಾದಿ ಕೇಳದಿರು ಹತ್ತು ದುರ್ಗವನ್ನು' ಎಂಬಂತೆ, ನಾಟಕಲೀನರಾಗಿದ್ದ ಕಾರಂತರು 'ಸ್ವಾಧೀನ ಕುಶಲಿ'ಯಾಗಿರುವುದು ಸಾಧ್ಯವಾಗಲಿಲ್ಲ. ಯಾಕೆಂದರೆ ಸುತ್ತ-ಮುತ್ತ 'ಹೊಟ್ಟೆಕಿಚ್ಚಿಗೆ ಜಗದ ಭಟ್ಟಿ ಕೆಡಿಸಬ್ಯಾಡ್ರೀ' ಎಂಬ ಕವಿವಾಣಿ ಅರ್ಥವಾಗದ ಸಣ್ಣತನದ ಹಲವರಿದ್ದರು. ವಿಭಾ ಪ್ರಕರಣದಲ್ಲಿ ಕೊಲೆ ಪ್ರಯತ್ನದ ಆರೋಪ ಹೊತ್ತ ಕಾರಂತರು ವಿಚಾರಣೆಯ ಅವಧಿಯಲ್ಲಿ ಐದು ತಿಂಗಳು ಜೈಲಿನಲ್ಲಿರಬೇಕಾಯಿತು. ಈ ಅಗ್ನಿದಿವ್ಯದಲ್ಲಿ ಕಾರಂತರು ಗೆದ್ದರು. (ವಿಭಾ ಪ್ರಕರಣ - 1-5ರ ಟಿಪ್ಪಣಿ ನೋಡಿ). "ಒಂದು ವರ್ಷ ನನಗೆ ಹಾಡಲಿಕ್ಕಾಗಲಿಲ್ಲ. ಯೋಚಿಸಲಿಕ್ಕೂ ಆಗಲಿಲ್ಲ. ನನ್ನ ಮೇಲೆ ಆಕಾಶವೇ ಕಳಚಿಬಿದ್ದಂತಾಗಿತ್ತು" ಎನ್ನುತ್ತಾರೆ ಕಾರಂತರು. ಶೂದ್ರಕನ 'ಮೃಚ್ಛಕಟಿಕ'ದ ಚಾರುದತ್ತನಂತೆ ಕಾರಂತರು ತನ್ನ ಆರೋಪಗಳಿಂದ ಮುಕ್ತರಾದರು.

ಮೈಸೂರಿನ 'ರಂಗಾಯಣ'ದಲ್ಲಿ

ಮೈಸೂರಿನಲ್ಲಿ ಕರ್ನಾಟಕ ಸರಕಾರ ಆರಂಭಿಸಿದ ರೆಪರ್ಟರಿ 'ನಾಟಕ ಕರ್ನಾಟಕ ರಂಗಾಯಣ' 1986ರಲ್ಲಿ 'ರಂಗಾಯಣ'ದ ನಿರ್ದೇಶಕರಾದ ಕಾರಂತರು 1995ರಲ್ಲಿ ರಾಜಕೀಯ ಕಾರಣದಿಂದ ರಾಜೀನಾಮೆ ನೀಡಿದರು. 'ಗೋವಿನ ಹಾಡು' 'ಮೂಕನ ಮಕ್ಕಳು' ಮತ್ತು 'ಚಂದ್ರಹಾಸ' ಇವು ರಂಗಾಯಣದಲ್ಲಿ ಕಾರಂತರು ನಿರ್ದೇಶಿಸಿದ ನಾಟಕಗಳು.

'ರಂಗಾಯಣ'ದ ಸಾಧನೆಗಳನ್ನು 'ಲಂಕೇಶ್ ಪತ್ರಿಕೆ' ಹೀಗೆ ಗುರುತಿಸಿತು - ಈ ಐದೂವರೆ ವರ್ಷದಲ್ಲಿ ಕಾರಂತರು ಸಾಕಷ್ಟು ಸುದ್ದಿ ಮಾಡಿದ್ದಾರೆ. ಕಲಾಮಂದಿರದ ಆವರಣದಲ್ಲಿ ಕಲಾತ್ಮಕ ಜೀವ ತುಂಬಿದ್ದಾರೆ. 'ಭೂಮಿಗೀತ' 'ವನರಂಗ'ಗಳಲ್ಲಿ ಕತ್ತಲು-ಬೆಳಕಿನ ಮಾಯಾಜಾಲವನ್ನೇ ಸೃಷ್ಟಿಸಿ 'ಹಿಪ್ಪೋಲಿಟಸ್' ಪ್ರಯೋಗದ ಮೂಲಕ ಗ್ರೀಕ್ ರಂಗಭೂಮಿಯನ್ನೇ ಇಲ್ಲಿನ ರಂಗಾಸಕ್ತರಿಗೆ ಪರಿಚಯಿಸಿದ್ದಾರೆ. ರಂಗಭೂಮಿಯ ಶ್ರೇಷ್ಠತೆ ಕುರಿತಂತೆ ಅನೇಕ ಬಗೆಯ ಸಾಂಸ್ಕೃತಿಕ ವಾಗ್ವಾದಗಳಿಗೆ ವೇದಿಕೆ ನಿರ್ಮಿಸಿ ಅಂತಾರಾಷ್ಟ್ರೀಯ ಖ್ಯಾತಿಯ ವೆಸಿಲೊಗಯಿಸ್, ಪ್ರಿಟ್ಸ್‌ಬೆನೆವಿಟ್ಸ, ಫಿಲಿಪ್, , ಅಲೆಕ್ಸಾಂಡ್ರಾ, ಜಾನ್ ಮಾರ್ಟಿನ್ ಮುಂತಾದವರನ್ನೆಲ್ಲಾ ಆಹ್ವಾನಿಸಿ ತಮ್ಮ ಖ್ಯಾತಿ ಪ್ರಭಾವಗಳನ್ನೆಲ್ಲ ಮಾಡಿಕೊಂಡಿದ್ದಾರೆ. ದೇವನೂರರ 'ಕುಸುಮಬಾಲೆ'ಯನ್ನು ರಂಗಕ್ಕೆ ತಂದ ಸಿ. ಬಸವಲಿಂಗಯ್ಯನವರಂಥ ಸಮರ್ಥ ನಿರ್ದೇಶಕನ ಪ್ರತಿಭೆ ಅರಳಲು ನೆರವಾಗಿದ್ದಾರೆ. 'ಗೋವಿನ ಹಾಡು', 'ಕಿಂದರಿ ಜೋಗಿ', 'ತಿರುಕನ ಕನಸು' ಮುಂತಾದ ಮಕ್ಕಳ ನಾಟಕಗಳು, 'ಚೆರ್ರಿ ತೋಟ', 'ರೋಡು', 'ಮಗ್ಗದವರು', 'ತಲೆದಂಡ', 'ಪ್ರತಿಶೋಧ', 'ಕತ್ತಲೆ ಬೆಳಕು', 'ಶ್ರೀಕೃಷ್ಣ ಸಂಧಾನ', 'ಜಗದೇಕವೀರನ ಕತೆ', 'ಚಂದ್ರಹಾಸ', 'ಅಲೆಗಳಲ್ಲಿ ರಾಜಹಂಸ', 'ಬೇಳೆಕಾಳಿನ ಪ್ರಸಂಗ', 'ಮೂಕನ ಮಕ್ಕಳು', ’ಶೇಕ್ಸ್‌ಪಿಯರ್‌ನಿಗೆ ನಮಸ್ಕಾರ' ಮುಂತಾದ ಪ್ರಯೋಗಗಳು....... ಇವುಗಳಲ್ಲಿ ಎಲ್ಲವೂ ಯಶಸ್ವಿ ಪ್ರಯೋಗಗಳಲ್ಲವಾದರೂ ಕಲಾವಿದರ ತರಬೇತಿಗಾಗಿ ನಿಯೋಜನೆಗೊಂಡವಾದ್ದರಿಂದ ವಿಮರ್ಶೆಯಲ್ಲಿ ರಿಯಾಯ್ತಿ ಬಯಸುತ್ತವೆ5.

ಗ್ರೀಕ್ ನಾಟಕಕಾರ ಯುರಿಪಿಡಿಸ್‍ನ 'ಹಿಪೋಲಿಟಸ್'ನ ಕನ್ನಡ ಭಾಷಾಂತರವನ್ನು (ನಿರ್ದೇಶನ - ವೆಸಿಲಿಯೊಸ್ ಕಲಿಟ್ಸಿಸ್, ಸಂಗೀತ - ಬಿ.ವಿ. ಕಾರಂತ, ಫಲಿಪ್ ಕೊವ್ವಾಂಟಿಸ್) 'ರಂಗಾಯಣ'ದವರು ನ್ಯೂಯಾರ್ಕ್‍ನಲ್ಲಿ ಪ್ರದರ್ಶಿಸಿದರು. 1980ರ ದಶಕದಲ್ಲಿ ಕಾರಂತರು ನಿರ್ದೇಶಿಸಿದ ಇತರ ನಾಟಕಗಳು - 'ತದ್ರೂಪಿ' (ಪ್ರಸನ್ನ), 'ದಿಡ್ಡಿಬಾಗಿಲು' ('ರಶೊಮನ್'), 'ಹಿಟ್ಟಿನ ಹುಂಜ' (ಗಿರೀಶ್ ಕಾರ್ನಾಡ್), 'ಮಿಸ್ ಸದಾರಮೆ' ಮತ್ತು 'ಕಿಂಗ್ ಲಿಯರ್'.

2

ನಾಟಕ ನಾಟಕಕಾರನ ಸೃಷ್ಟಿ - ರಂಗ ನಿರ್ಮಿತಿ ನಿರ್ದೇಶಕನ ಸೃಷ್ಟಿ. ಸಾಹಿತ್ಯ ಕೃತಿಯನ್ನು ಅವಲಂಬಿಸದೆಯೂ ನಿರ್ದೇಶಕ ರಂಗಕೃತಿಯನ್ನು ಸೃಷ್ಟಿಸಬಲ್ಲ, ನಾಟಕ ಚಿರಂಜೀವಿ. ಆದರೆ ರಂಗಕೃತಿ 'ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸಾ' ಎಂಬಂತೆ ಕಾಲಬದ್ಧ, ತಾತ್ಕಾಲೀನ, ನಾಟಕಕಾರನ ಆಶಯಕ್ಕಿಂತ ನಿರ್ದೇಶಕನ ಆಶಯ ಭಿನ್ನವಾಗಿರಬಹುದು. 'ಗೋಕುಲ ನಿರ್ಗಮನ'ದ ಒಂದನೇ ಪ್ರಯೋಗಕ್ಕೂ, ಅದೇ ಕಲಾವಿದರ , ಆ ನಾಟಕದ ನೂರನೇ ಪ್ರಯೋಗಕ್ಕೂ ಸೂಕ್ಷ್ಮ ವ್ಯತ್ಯಾಸಗಳಿರಬಹುದು. ನಾಟಕದಂತೆ ರಂಗಕೃತಿ ನಮ್ಮ ಮುಂದೆ ಇರುವುದಿಲ್ಲ. ಇದು ರಂಗಕೃತಿ ವಿಮರ್ಶೆಯ ಮುಖ್ಯ ಸಮಸ್ಯೆ. 'ಬರ್ನಮ್ ವನ'ವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನ 'ಮುದ್ದಣ ಮಂಟಪ'ದಂಥ ಆದರ್ಶ ಬಯಲು ರಂಗಮಂಟಪದಲ್ಲಿ ನೋಡುವುದಕ್ಕೂ, ಅದರ ವಿಡಿಯೋ ಕ್ಯಾಸೆಟ್ ನೋಡುವುದಕ್ಕೂ ತುಂಬ ವ್ಯತ್ಯಾಸವಿದೆ.ನಿರ್ದೇಶಕ ತನ್ನ ರಂಗಕೃತಿಯಲ್ಲಿ ನಾಟಕಕಾರನ ಕೃತಿ, ನಟರು, ಸಂಗೀತ ನಿರ್ದೇಶಕ, ಬೆಳಕಿನ ತಜ್ಞ, ವಸ್ತ್ರ ವಿನ್ಯಾಸ ತಜ್ಞರ ಮತ್ತು ತನ್ನ ಪ್ರತಿಭೆಯನ್ನು ಸಂಯೋಜಿಸಿ ಕಲಾನುಭವವನ್ನು ನೀಡುವುದರಲ್ಲಿ, ಪ್ರಬಂಧ ಧ್ವನಿಯನ್ನು ಮೂಡಿಸುವುದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾನೆ ಎನ್ನುವುದರ ಅವಲೋಕನ ರಂಗಕೃತಿ ವಿಮರ್ಶೆಯಲ್ಲಿ ಮುಖ್ಯ.

ರಂಗಕೃತಿ ವಿಮರ್ಶೆ ಕನ್ನಡದಲ್ಲಿ ಬೆಳೆದಿಲ್ಲ ಎಂಬ ಅಭಿಪ್ರಾಯವನ್ನು ಈ ಗ್ರಂಥದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ. ಪ್ರಸನ್ನ ಹೇಳುವಂತೆ, ನಾಟಕದ ನಿರ್ದೇಶಕನನ್ನ ಇವತ್ತಿಗೂ ಕೂಡ ಕನ್ನಡ ಸಾಹಿತ್ಯವೇ ಇರಲಿ ಹಿಂದೀ ಸಾಹಿತ್ಯವೇ ಇರಲಿ, ಯಾವುದೇ ಸಾಹಿತ್ಯವಿರಲಿ, ಎರಡನೆಯ ದರ್ಜೆಯ ಪ್ರಜೆಯಾಗಿ ನೋಡ್ತಾರೆಯೇ ಹೊರತು, ನಿರ್ದೇಶಕರ ಕೃತಿಯನ್ನು ವಿಮರ್ಶಿಸುವ ಕೆಲಸವನ್ನು ಇನ್ನೂ ಮಾಡಿಲ್ಲ (1-7). ಈ ಅಭಿಪ್ರಾಯವನ್ನು ಕೆ. ವಿ. ಸುಬ್ಬಣ್ಣನವರೂ ಒಪ್ಪುತ್ತಾರೆ - ನಮ್ಮಲ್ಲಿ ಶಾಬ್ದಿಕ ಭಾಷೆ ಸಾಹಿತ್ಯದ ಸಂಸ್ಕೃತಿಗಳು ಬೆಳೆದಿಲ್ಲ. ಇದರಿಂದ ಪ್ರಬುದ್ಧ ಸಾಹಿತ್ಯ ವಿಮರ್ಶಕರು ಕೂಡ ರಂಗ ವಿಮರ್ಶೆಯಲ್ಲಿ ತೊಡಗಿದಾಗ ಬಾಲಿಶವಾಗುವುದುಂಟು. ಕೆಲವರಂತೂ ಸಾಹಿತ್ಯದ ಪರಿಷ್ಕಾರದ ಪಠನವೇ ರಂಗಭೂಮಿಯ ಕೇಂದ್ರಬಿಂದು ಎಂದು ಭಾವಿಸಿಕೊಳ್ಳುತ್ತಾರೆ ಮತ್ತು ಇವರಿಗೆ ಬರವಣಿಗೆ ರೂಢಿಯಾಗಿ ಭಾಷೆಯ ಮೇಲೆ ಪ್ರಭುತ್ವ ಸಿದ್ಧಿಸಿರುವುದರಿಂದ ಇವರ ಬಾಲಿಶ ವಿಮರ್ಶೆಯೂ ತಾತ್ಕಾಲಿಕವಾಗಿ ಮನ್ನಣೆಗೊಂಡುಬಿಡುತ್ತದೆ (1-6). ಸಾಹಿತ್ಯ ವಿಮರ್ಶೆ ಬೆಳೆಯುವಂತೆ ರಂಗಭೂಮಿ ವಿಮರ್ಶೆ ಬೆಳೆಯಲಾರದು ಎನ್ನುವ ಬಿ.ವಿ. ಕಾರಂತರು ಅದಕ್ಕೆ ನೀಡುವ ಕಾರಣಗಳು ಹೀಗಿವೆ - ವರ್ತಮಾನದ ಈ ತುರ್ತೇ ರಂಗಭೂಮಿಯ ಅನನ್ಯತೆ ಮತ್ತು ಮಿತಿ. ಇದೆ ಸ್ಥಾನಸಾಪೇಕ್ಷ ಮತ್ತು ಸ್ಥಳಸಾಪೇಕ್ಷವಾದದ್ದು. ಅದಕ್ಕೋಸ್ಕರವೇ ಸಾಹಿತ್ಯ ವಿಮರ್ಶೆ ಬೆಳೆಯೋ ಹಾಗೆ ರಂಗಭೂಮಿ ವಿಮರ್ಶೆ ಬೆಳೆಸೋಕೆ ಸಾಧ್ಯ ಇಲ್ಲ. Film Appreciation Course ಮಾಡೋ ಹಾಗೆ Theatre Appreciation Course ಮಾಡೋಕ್ಕಾಗಲ್ಲ. ಇಲ್ಲಿ Appreciationಗೆ ಯಾವ ಸೂತ್ರವೂ ಇಲ್ಲ. ಅನುಭವ ಮಾತ್ರ ನಿಜ. ಪ್ರೇಕ್ಷಕರಿಗೆ common sense ಇರೋದು ಬಹಳ ಮುಖ್ಯ. ಒಂದು ರಂಗಪ್ರದರ್ಶನ ಇನ್ನೊಂದು ರಂಗಪ್ರದರ್ಶನಕ್ಕಿಂತ ಭಿನ್ನ. ಒಂದೇ ನಾಟಕದ ಎರಡನೇ ಪ್ರದರ್ಶನವೇ ಹೊಸ ಪ್ರಯೋಗವಾಗಿರುತ್ತದೆ. ಹಾಗಾಗಿ ಯಾವ common sense ನಟರು, ಯಾವ ನಿರ್ದಿಷ್ಟ ಪ್ರೇಕ್ಷಕರಿಗೆ, ಯಾವ ನಿರ್ದಿಷ್ಟ ಕಾಲ ಮತ್ತು ದೇಶಗಳಲ್ಲಿ ಎದುರಾದರು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ವಿಮರ್ಶೆ ಮಾಡೋದಿಕ್ಕೆ ಆಗೋದಿಲ್ಲ. ರಂಗಭೂಮಿಯ ಮಾಧ್ಯಮವೇ ಒಂದು ರೀತಿಯ democratic process. ಇದರಲ್ಲೇ ವಿಮರ್ಶೆ ಒಳಗೊಂಡಿರುತ್ತೆ (3-2).

ಕೆ.ವಿ. ಸುಬ್ಬಣ್ಣನವರ 'ನಾಟಕ - ಹಾಗೆಂದರೇನು?'6 (ಕೆ.ವಿ. ಸುಬ್ಬಣ್ಣನವರ ಆಯ್ದ ಬರಹಗಳು - ಸಂ. ಟಿ.ಪಿ. ಅಶೋಕ, 1992) ಮತ್ತು ಗಿರಡ್ಡಿ ಗೋವಿಂದರಾಜರ 'ರಂಗಕೃತಿ ವಿಮರ್ಶೆ' (ನಾಟಕ ಸಾಹಿತ್ಯ ಮತ್ತು ರಂಗಭೂಮಿ - ಗಿರಡ್ಡಿ, 1989) ಕನ್ನಡದಲ್ಲಿ ರಂಗಕೃತಿ ವಿಮರ್ಶೆಯನ್ನು ಕುರಿತ ಮುಖ್ಯ ಲೇಖನಗಳು. ಆದರೆ ನಾಟಕದಲ್ಲಿನ (ರಂಗಕೃತಿ) ಅನೇಕ ಸಾಹಿತ್ಯೇತರ ಅಂಶಗಳ ವಿಷಯದಲ್ಲಿ, ಶುದ್ಧ ತಾಂತ್ರಿಕ ತೊಂದರೆಯಿಂದಾಗಿ ವಿಮರ್ಶೆ ತಪು ಮಾಡುವದೇ ಹೆಚ್ಚು ಎನ್ನುವ ಎ.ಬಿ. ವಾಕ್ಲೀ ರಂಗಕೃತಿ ವಿಮರ್ಶೆಯ ಸಮಸ್ಯೆಗಳನ್ನು ಚರ್ಚಿಸಿದ್ದಾನೆ.7

ಟಿಪ್ಪಣಿಗಳು

1. ಬಿ.ವಿ. ಕಾರಂತರ ತಮ್ಮಂದಿರು - 1. ಶ್ರೀ ಶ್ಯಾಮ 2. ಶ್ರೀ ಬಾಲಕೃಷ್ಣ ಕಾರಂತ - ಮುಂಬೈಯಲ್ಲಿ ಇಂಜಿನಿಯರ್ ಆಗಿದ್ದಾರೆ. 3. ಶ್ರೀ ಕೃಷ್ಣ ಕಾರಂತ - ಉಡುಪಿಯಲ್ಲಿದ್ದಾರೆ. ತಂಗಿಯರು - 1. ಶ್ರೀಮತಿ ಮಹಾಲಕ್ಷ್ಮಿ ಸೇತುರಾಮ ತಂಜಾವೂರಿನಲ್ಲಿದ್ದಾರೆ. 2. ಶ್ರೀಮತಿ ಸರೋಜಿನಿ ಗೋಪಾಲಕೃಷ್ಣ ಮಯ್ಯ, ಕಾಸರಗೋಡು ತಾಲೂಕಿನ ಕುರ್ಚಿ ಪಳ್ಳದಲ್ಲಿದ್ದಾರೆ.

2. ಲಂಕೇಶ್ ಬರೆದಿರುವಂತೆ, ಎಲ್ಲ ದ.ಕ.ಗಳಂತೆ ಇವರಿಗೂ ಇಂಗ್ಲಿಷೆಂದರೆ ಪಂಚಪ್ರಾಣ; ಆದರೆ ಇಂಗ್ಲಿಷ್ ಬರುವುದಿಲ್ಲ. ಅವರು ತಾವು ಮದುವೆಯಾಗಲಿದ್ದ ಹುಡುಗಿಯಿಂದ ಬಂದ ಕಾಗದಲ್ಲಿ ’I am inclined towards you' ಎಂಬ ಇಂಗ್ಲಿಷ್ ವಾಕ್ಯ ಕಂಡಾಗ 'inclined' ಎಂಬ ಮಾತು ಅರ್ಥವಾಗದೆ ಅದೊಂದು ಬೈಗುಳವಿರಬೇಕೆಂದು ಹೆದರಿಕೊಂಡು, ಸ್ನೇಹಿತರಿಂದ ಅದರರ್ಥ ತಿಳಿದುಕೊಂಡು ಸಮಾಧಾನದ ನಿಟ್ಟಿಸಿರುಗರೆದರಂತೆ. ಇದನ್ನು ಕಾರಂತ ದಂಪತಿಗಳಿಬ್ಬರೂ ಹೇಳಿಕೊಂಡು ನಗುತ್ತಾರೆ. (ಪಿ.ಲಂಕೇಶ - 'ಕಂಡದ್ದು ಕಂಡ ಹಾಗೆ - 'ಬಿ.ವಿ. ಕಾರಂತ ಮತ್ತು ನಾನು').

3. ಶ್ರೀರಂಗರು ತನ್ನ ಆತ್ಮಕತೆಯಲ್ಲಿ, ಅದರಂತೆ ನಾನು ರೇಡಿಯೋದಲ್ಲಿದ್ದಾಗ ನನ್ನ ಗೆಳೆಯರೊಬ್ಬರು 'ಒಬ್ಬ ಒಳ್ಳೆಯ ಹುಡುಗ ಡ್ರಾಮಾ ಸ್ಕೂಲಿಗೆ ಹೋಗ್ಬೇಕಂತಾನ. ಕೇಂದ್ರದ ಸ್ಕಾಲರ್‌ಶಿಪ್‍ಗೆ ಅರ್ಜಿ ಹಾಕ್ಯಾನ. ನಿಮ್ಮ ಸಹಾಯ ಬೇಕು' ಅಂದರು. ಆ ವರ್ಷ ನಾನು ಆಯ್ಕೆ ಸಮಿತಿಯ ಸದಸ್ಯನಿರಲಿಲ್ಲ. 'ನಿಮ್ಮ ಪರಮ ಮಿತ್ರರಾದ ಮಾಮಾವರೇರಕದ ಸದಸ್ಯ ಇದ್ದಾರ ಈ ಸಲ. ಅವರಿಗೊಂದು ಚೀಟಿ ಕೊಡ್ರಿ' ಅಂದರು. 'ಅದಿರಲಿ, ನಿಮ್ಮ ಒಳ್ಳೆಯ ಹುಡುಗ ಯಾರು?' ಎಂದೆ. 'ಹುಡುಗ'ನ ಪರಿಚಯ ಮಾಡಿಕೊಟ್ಟರು. ನಾನು ಚೀಟಿ ಕೊಟ್ಟೆ. ಆ ಹುಡುಗನಿಗೆ ಪ್ರವೇಶ ದೊರೆಯಿತು. ಈಗ ಅವನು 'ಹುಡುಗ'ನಾಗಿ ಉಳಿದಿಲ್ಲ. ತನ್ನ ಯೋಗ್ಯತೆಯಿಂದ ಒಂದು ವಿಶಿಷ್ಟ ಹೆಸರನ್ನು ಗಳಿಸಿಕೊಂಡಿದ್ದಾರೆ. ಇಂದು ಯಾರಿಗೆ ಅವನ ಹೆಸರು ಗೊತ್ತಿಲ್ಲ? ಆದರೂ ಹೇಳುವೆ. ಆ ಹುಡುಗನ ಹೆಸರು ಬಿ.ವಿ. ಕಾರಂತ (ಶ್ರೀರಂಗ - ಸಾಹಿತಿಯ ಆತ್ಮಜಿಜ್ಞಾಸೆ, ಅಕ್ಷರ ಪ್ರಕಾಶನ, ಸಾಗರ, 1994).

4. 'ರಂಗಾಯಣ'ದ ಇತರ ಶಿಕ್ಷಕರು - ಎಸ್. ರಘುನಂದನ (ಪ್ರಶಿಕ್ಷಕ - ಅಭಿನಯ), ಜಯತೀರ್ಥ ಜೋಶಿ (ಉಪನಿರ್ದೇಶಕರು- ಕಲೆ), ಅಂಜು ಸಿಂಗ್ (ಪ್ರಶಿಕ್ಷಕ - ಸಮರಕಲೆ), ಸಂತೋಷಕುಮಾರ್, ಶ್ರೀನಿವಾಸ ಭಟ್ಟ (ಶಿಕ್ಷಕ - ಸಂಗೀತ), ನ. ಬಸವಲಿಂಗಯ್ಯ.

5. ಆರ್. ಸ್ವಾಮಿ ಆನಂದ - ಲಂಕೇಶ ಪತ್ರಿಕೆ, ಆಗಸ್ಟ್ 24, 1994.

6. ಕೆ.ವಿ. ಸುಬ್ಬಣ್ಣನವರ ಲೇಖನದ ಸಾರಾಂಶ ಹೀಗಿದೆ - 1. ಇವತ್ತು ನಾಟಕ ಎನ್ನುವುದಕ್ಕೆ ಎರಡು ಅರ್ಥಗಳಿವೆ - ಸಾಹಿತ್ಯ ಕೃತಿ ಮತ್ತು ರಂಗನಿರ್ಮಿತಿ. ಒಂದರ ಮಾಧ್ಯಮ ಭಾಷೆ, ಇನ್ನೊಂದರಲ್ಲಿ ಅಭಿನಯ; ಒಂದು ದೇಶಸ್ಥ, ಇನ್ನೊಂದು ಕಾಲಸ್ಥ - ಹೀಗಾಗಿ ಇವು ಬೇರೆ ಬೇರೆ. ಇವುಗಳ ವಿಮರ್ಶೆ ಬೇರೆ ಬೇರೆಯಾಗಿಯೇ ನಡೆಯಬೇಕು. ರಂರಂಗನಿರ್ಮಿತಿಯಲ್ಲಿ ಒಂದೊಂದು ಪ್ರಯೋಗವೂ ಒಂದೊಂದು ಸ್ವತಂತ್ರ ಕೃತಿ; ವಿಮರ್ಶೆ ಕೂಡ ಒಂದೊಂದು ಪ್ರಯೋಗವನ್ನೇ ಲಕ್ಷಿಸಬೇಕಾಗುತ್ತದೆ. 2. ಸಾಹಿತ್ಯ ನಾಟಕ ರಂಗಯೋಗ್ಯವಾಗಿರಬೇಕು ಅಥವಾ ರಂಗನಿರ್ಮಿತಿ ಸಾಹಿತ್ಯ ಕೃತಿಯನ್ನು ಅವಲಂಬಿಸಿರಬೇಕು ಎಂಬ ನಿಯತವೇನೂ ಇಲ್ಲ. ಈ ಪರಸ್ಪರ ಒದಗುವಂಥ ಯೋಗ್ಯತೆ ಆಯಾ ಕೃತಿಗಳ ಕಲಾತ್ಮಕತೆಗೆ ಸಂಬಂಧಿಸಿಲ್ಲವಾದ್ದರಿಂದ ವಿಮರ್ಶೆಯಲ್ಲಿ ಅದು ಅಪ್ರಸ್ತುತ. 3. ಒಂದು ಸಾಹಿತ್ಯ ಕೃತಿಯನ್ನು ರಂಗನಿರ್ಮಿತಿಗೆ ಆಧಾರವಾಗಿ ಎತ್ತಿಕೊಂಡರೆ ಅದನ್ನು ಒಂದು ಪರಿಕರ ದ್ರವ್ಯವಾಗಿ ಕೊಳ್ಳುವುದಷ್ಟೇ. ಹಾಗೆ ಬಳಸಿಕೊಂಡಾಗ ಅದು ಮೂಲದ ಕಲಾಕೃತಿಯಾಗಿ, ಅದೇ ಘಟಕವಾಗಿ ಉಳಿಯುವುದಿಲ್ಲ. ಮೂಲಘಟಕ ಛಿದ್ರಗೊಂಡು ಬೇರೆ ಮಾಧ್ಯಮದಲ್ಲಿ ಪುನಸ್ಸಂಘಟಿತವಾಗಿ ಬೇರೆ ಕಲಾಕೃತಿಯೇ ಆಗುತ್ತದೆ. ಸಾಹಿತ್ಯ ಕೃತಿ ಕೂಡ ರಂಗತಂತ್ರಗಳನ್ನು ಬಳಸಿಕೊಂಡರೂ ಅದು ತಂತ್ರ ಮಾತ್ರವಾಗಿರುತ್ತದಲ್ಲದೆ, ತನ್ನ ಸಾರ್ಥ್ಯಕ್ಕೆ ಆ ಮಾಧ್ಯಮವನ್ನು ಹಾರೈಸುವಂಥ ಅಪೂರ್ಣ ಕೃತಿಯಾಗಿರುವುದಿಲ್ಲ. (ಕೆ.ವಿ. ಸುಬ್ಬಣ್ಣನವರ ಆಯ್ದ ಲೇಖನಗಳು' (ಸಂ.) - ಟಿ.ಪಿ. ಅಶೋಕ, 1992, ಪುಟ-88).

7. ವಾಕ್ಲೀ ಹೇಳುತ್ತಾನೆ - ಪ್ರೇಕ್ಷಕರಿಗೆ ಸರಿಯಾದ ಕಾರಣಗಳಿಗಾಗಿಯೇ ಖುಷಿಕೊಡುವ ಒಳ್ಳೆಯ ನಾಟಕಗಳು ಎಷ್ಟೋ ಸಲ ವಿಮರ್ಶಕನಿಗೆ ತೊಂದರೆ ಕೊಡುತ್ತದೆ. ಅವುಗಳ ಬಗೆಗೆ ಬರೆಯುವುದು ಕಷ್ಟ. ತನ್ನ ಪ್ರಭೇದಕ್ಕೆ ಯಾವ ಹೊಸದನ್ನೂ ಸೇರಿಸದ ಒಂದು ನಾಟಕ ತನ್ನಷ್ಟಕ್ಕೆ ತಾನು ಕುತೂಹಲಕಾರಿಯಾಗಿರಬಹುದು; ಆದರೆ ವಿಮರ್ಶೆಯನ್ನು ಗೊಂದಲಗೆಡಿಸುತ್ತದೆ...... ಇನ್ನೂ ಸ್ವಲ್ಪ ಮುಂದುವರಿದು ತಾಂತ್ರಿಕ ವಿವರಗಳಲ್ಲಿ ಪ್ರವೇಶಿಸುವುದಾದರೆ ಮೆಲೊಡ್ರಾಮ, ಪ್ರಹಸನಗಳಂಥ ಕೆಲವು ನಾಟಕ ಪ್ರಕಾರಗಳು ರಂಗದ ಮೇಲಿನಕ್ಕಿಂತ ಅಚ್ಚಿನಲ್ಲಿ (ವಿಮರ್ಶೆಯಲ್ಲಿ) ಹೆಚ್ಚು ಕೆಟ್ಟದಾಗಿ ಕಾಣಿಸುತ್ತವೆ. ಮೊಲೊಡ್ರಾಮವನ್ನು ವರ್ಣಿಸುವಾಗ ವಿಮರ್ಶಕ ಸಾಮಾನ್ಯವಾಗಿ ವ್ಯಂಗ್ಯದ ಆಮಿಷಕ್ಕೆ ಒಳಗಾಗುವುದೇ ಹೆಚ್ಚು. ಪ್ರಹಸನದ ಕಥಾವಸ್ತುವನ್ನು ರೂಪಿಸುವುದಂತೂ ಕಷ್ಟದ ಕೆಲಸ. ಇದೇ ಕಾರಣಕ್ಕಾಗಿಯೇ 'ವೈಚಾರಿಕ ನಾಟಕ' ಅಚ್ಚಿನಲ್ಲಿ ಹೆಚ್ಚು ಪ್ರಶಂಸೆ ಪಡೆದುಕೊಳ್ಳುವ ಸಂಭವ ಹೆಚ್ಚು. ವಿಚಾರಗಳ ಅಭಿವ್ಯಕ್ತಿಗೆ ಮುದ್ರಣ ಹೆಚ್ಚು ಒಳ್ಳೆಯ ಮಾಧ್ಯಮವಾಗಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ, ವಿಮರ್ಶೆ ಸಾಹಿತ್ಯದ ಒಂದು ಪ್ರಕಾರವಾಗಿರುವುದರಿಂದ ನಾಟಕದಲ್ಲಿಯ ಸಾಹಿತ್ಯಕ ಅಂಶಗಳಿಗೆ ನ್ಯಾಯಸಲ್ಲಿಸಬಹುದು. ಆದರೆ ನಾಟಕದಲ್ಲಿಯ ಅನೇಕ ಸಾಹಿತ್ಯೇತರ ಅಂಶಗಳ ವಿಷಯದಲ್ಲಿ, ಶುದ್ಧ ತಾಂತ್ರಿಕ ತೊಂದರೆಯಿಂದಾಗಿ, ವಿಮರ್ಶೆ ತಪ್ಪುಮಾಡುವುದೇ ಹೆಚ್ಚು. ಇದು ಒಂದು ಕಲೆಯ ಪರಿಣಾಮಗಳಿಗೆ ವರ್ಗಾಯಿಸುವದರಲ್ಲಿರುವ ತೊಂದರೆ. ಭಾಷಾಂತರ - ಗಿರಡ್ಡಿ ಗೋವಿಂದರಾಜ. (Walkley, A.B. Victorian Dramatic Criticism 1971. ನೋಡಿ - ಗಿರಡ್ಡಿ ಗೋವಿಂದರಾಜ - 'ನಾಟಕ ಸಾಹಿತ್ಯ ಮತ್ತು ರಂಗಭೂಮಿ' 1989, ಹೆಗ್ಗೋಡು)



ಬಿ. ವಿ. ಕಾರಂತ

ಸಂ. ಮುರಳೀಧರ ಉಪಾಧ್ಯ ಹಿರಿಯಡಕ (mupadhyahiri.blogspot.com)

ಪ್ರ. ಕರ್ನಾಟಕ ಸಂಘ, ಪುತ್ತೂರು

No comments:

Post a Comment