Kan-06-2010
ಕರಾವಳಿಯ ಕನ್ನಡ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು
ಮಾರ್ಗದರ್ಶಕರಿಗೆ ಮಾರ್ಗದರ್ಶನ
ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಈ ಹೊತ್ತು ಬಳಲಿರುವ ಕ್ಷೇತ್ರ ಎಂದರೆ 'ಸಂಶೋಧನೆ' ಎಂದು ದಿ. ಡಿ. ಆರ್. ನಾಗರಾಜ ತನ್ನ 'ಕನ್ನಡ ಸಂಶೋಧನೆಯ ದು:ಸ್ಥಿತಿ' ಎಂಬ ಲೇಖನದಲ್ಲಿ ಬರೆದಿದ್ದಾರೆ. (ಅವರ 'ಸಂಸ್ಕೃತಿ ಕಥನ' ಲೇಖನದಲ್ಲಿರುವ ಈ ಲೇಖನದ ಪ್ರಥಮ ಮುದ್ರಣದ ಮಾಹಿತಿಯನ್ನು ಗ್ರಂಥದ ಸಂಪಾದಕರು ನೀಡಿಲ್ಲ.) ಡಿ. ಆರ್. ನಾಗರಾಜರು ಈ ಲೇಖನದಲ್ಲಿ ಬರೆದಿರುವಂತೆ, 'ಈಗ ನಿಜವಾದ ಸಮಸ್ಯೆ ಎಂದರೆ, ಸಂಶೋಧನಾಕಾಂಕ್ಷಿಗಳನ್ನು ತರಬೇತುಗೊಳಿಸುವ ಜೊತೆಗೆ ಅವರ ಮಾರ್ಗದರ್ಶಕರಿಗೂ ತರಬೇತಿ ನೀಡಬೇಕಾದ ಅಗತ್ಯ....... ಸಂಶೋಧನೆಯ ಬಗೆಗೆ ದೀರ್ಘಕಾಲೀನ ತರಬೇತಿ ಶಿಬಿರಗಳು, ವಿಶೇಷ ಅಧ್ಯಯನದ ಕೋರ್ಸುಗಳು, ಆಸಕ್ತ ಮಾರ್ಗದರ್ಶಕರಿಗೆ ವಿಶೇಷ ತರಬೇತಿ ನೀಡುವ ಕ್ರಮಗಳನ್ನು ವಿಶ್ವವಿದ್ಯಾನಿಲಯಗಳು ರೂಪಿಸಬೇಕಾಗಿದೆ. ಇದು ತಕ್ಷಣದ ತುರ್ತು'. ಡಿ. ಆರ್. ರವರ ಈ ಮಾತಿನ ಹಿನ್ನೆಲೆಯಿಂದ ನೋಡಿದಾಗ, ಉಡುಪಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿರುವ, 'ಕರಾವಳಿ ಸಂಸ್ಕೃತಿ ಶೋಧನೆಯ ಸಾಧ್ಯತೆಗಳು' ಎಂಬ ವಿಚಾರಕಿರಣದ ಮಹತ್ವ ಅರಿವಾಗುತ್ತದೆ.
ಕರಾವಳಿ ಭಾಗದಲ್ಲಿ ಮಧ್ವಾಚಾರ್ಯರು, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಗಣಪತಿ ರಾವ್ ಐಗಳ್, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಡಾ. ಗುರುರಾಜ ಭಟ್, ಎಂ. ಮುಕುಂದ ಪ್ರಭು, ವೆಂಕಟರಾಜ ಪುಣಿಂಚಿತ್ತಾಯ, ಪಾ. ವೆಂ. ಆಚಾರ್ಯ, ಡಾ. ಕೆ.ಪಿ. ಉಪಾಧ್ಯಾಯ, ಡಾ. ಡಿ. ಎನ್. ಶಂಕರಮೂರ್ತಿ , ಡಾ. ವಿವೇಕ ರೈ ಮತ್ತಿತರ ಹಲವಾರು ಹಿರಿಯರು ಸಂಶೋಧನಾ ಕ್ಷೇತ್ರವನ್ನು ಬೆಳೆಸಿದ್ದಾರೆ. 'ಮಹಾಭಾರತ ತಾತ್ಪರ್ಯ ನಿರ್ಣಯ' ಎಂಬ ಮಹತ್ವದ ಸಂಶೋಧನಾಗ್ರಂಥ ಬರೆದಿರುವ ಮಧ್ವಾಚಾರ್ಯರು ಗ್ರಂಥ ಸಂಪಾದಕ, ಸಂಶೋಧಕ ಎದುರಿಸಬೇಕಾದ ಸಮಸ್ಯೆಗಳನ್ನು ಹೀಗೆ ವಿವರಿಸಿದ್ದಾರೆ: 1) ಇಲ್ಲದ ಭಾಗಗಳನ್ನು ಸೇರಿಸಿರುವುದು. 2) ಇದ್ದದ್ದನ್ನು ತೆಗೆದುಹಾಕುವುದು. 3) ಗ್ರಂಥದ ಅನುಪೂರ್ವಿ ಯನ್ನು ಬದಲಿಸುವುದು. 4) ಪ್ರತಿಕಾರರ ಪ್ರಮಾದದಿಂದ ಘಟಿಸುವ ತಪ್ಪುಗಳು - ಹೀಗೆ ನಾಲ್ಕು ಬಗೆಯ ಪಾಠದೋಷಗಳನ್ನು ಗಮನಿಸಿ ಹತ್ತಾರು ಬಗೆಯ ಹಸ್ತಪ್ರತಿಗಳನ್ನು ಪರಿಶೀಲಿಸಿ ಶುದ್ಧಪಾಠವನ್ನು ನಿರ್ಣಯಿಸಬೇಕು. (1920ರಲ್ಲಿ ಎಂ. ಎಸ್. ಪುಟ್ಟಣ್ಣನವರು 'ಹೇಮಂತ' (ಹ್ಯಾಮ್ಲೆಟ್) ನಾಟಕವನ್ನು ಇತ್ತೀಚಿಗೆ ಸಂಪಾದಿಸಿರುವ ತಪ್ಪುಗಳ ಕುರಿತು ಜೂನ್ 2010ರ 'ದೇಶಕಾಲ' ತ್ರೈಮಾಸಿಕದಲ್ಲಿ ರಾಮಚಂದ್ರದೇವ ಅವರು ಬರೆದಿರುವ ಟಿಪ್ಪಣಿ ಗಮನಿಸಿರಿ).
ಗೋವಿಂದ ಪೈಗಳು 1949ರಲ್ಲಿ ಬರೆದ 'ಪ್ರಾಕ್ತನ ವಿಮರ್ಶನದ ಮುಂದಣ ಹೆಜ್ಜೆ' ಲೇಖನದಲ್ಲಿ 'ಆಂಗ್ಲರ ಕೈಯಲ್ಲಿ ಪರತಂತ್ರವಾಗಿದ್ದ ಭಾರತ'ದ ಕುರಿತು 'ಅವರು ಬರೆದ ಇತಿಹಾಸವನ್ನು ಇನ್ನು ನಿರ್ದಯವಾಗಿ ಅಗಸಹೊಯ್ಲು ಯೊಯ್ದು ಒಗೆದಲ್ಲದೆ ಅದರ ಮೈಲಿಗೆ ಹೋಗುವಂತಿಲ್ಲ. ಮಡಿಯಾಗುವಂತಿಲ್ಲ' ಎಂದರು.
ಹಸ್ತಪ್ರತಿಗಳು
'ಕನ್ನಡ ಕಾವ್ಯಕ್ಕೆ ಉಡುಪಿಯ ಮಠಾಧಿಪತಿಗಳ ಕೊಡುಗೆ', 'ಕನ್ನಡ ಕಾವ್ಯಕ್ಕೆ ಕಾರ್ಕಳದ ಜೈನ ಕವಿಗಳ ಕೊಡುಗೆ' - ಸಂಶೋಧನೆಗೆ ಯೋಗ್ಯ ವಿಷಯಗಳು. ಕನ್ನಡದ ಮೊದಲ ಸಾಂಗತ್ಯ ಕಾವ್ಯ 'ಕಾಮನ ಕತೆ' ಬರೆದ ಕಲ್ಯಾಣಕೀರ್ತಿಯ ಕೃತಿ ಸಂಶೋಧನೆಗೆ ಯೋಗ್ಯವಾಗಿದೆ. ಐತಿಹಾಸಿಕ ಘಟನೆಯನ್ನು ವಸ್ತುವಾಗಿ ಆಯ್ಕೆ ಮಾಡಿರುವ ಚದುರ ಚಂದ್ರಮ (1646)ನ 'ಗೊಮ್ಮಟೇಶ್ವರ ಚರಿತ' ಅಧ್ಯಯನಕ್ಕೆ ಯೋಗ್ಯವಾಗಿದೆ. ಚಂದ್ರಮನ, 620 ಕಂದಪದ್ಯಗಳಿರುವ 'ಗಣಿತ ವಿಲಾಸ'ವನ್ನು ಗಣಿತಶಾಸ್ತ್ರ ಮತ್ತು ಕನ್ನಡ ವಿದ್ವಾಂಸರು ಜಂಟಿಯಾಗಿ ಶೋಧಿಸಬೇಕಾಗಿದೆ. ಯುದ್ಧವಿರೋಧಿ ಕಾವ್ಯ ಎಂಬ ನೆಲೆಯಿಂದ ರತ್ನಾಕರವರ್ಣಿಯ 'ಭರತೇಶ ವೈಭವ'ದ ಮರುಓದು ಸಾಧ್ಯ.
ಕನ್ನಡದ ಆದ್ಯರು
ಕೊಳಂಬೆ ಪುಟ್ಟಣ್ಣ ಗೌಡರು ಆಂಡಯ್ಯನ ಮಾರ್ಗದಲ್ಲಿ ಮುನ್ನಡೆದವರು. ಅವರ 'ಕಾಲೂರ ಚೆಲುವ' ವಿಶೇಷ ಅಧ್ಯಯನಕ್ಕೆ ಯೋಗ್ಯವಾಗಿದೆ. ಗೋವಿಂದ ಪೈಗಳ 'ಗೊಲ್ಗೊಥಾ' ಕಾವ್ಯ ಕುತೂಹಲವಿರುವ ಸಂಶೋಧಕರನ್ನು ಕಾಯುತ್ತಿದೆ. ಗೊಲ್ಗೊಥಾದ ವಸ್ತುವಿನಲ್ಲಿ ಪೈಗಳು ಮಾಡಿಕೊಂಡಿರುವ ಸೂಕ್ತ ಬದಲಾವಣೆಗಳನ್ನು ಗಮನಿಸಿಬೇಕು. ಹಟ್ಟಿಯಂಗಡಿ ನಾರಾಯಣರಾಯರ (1863-1921) ಆಂಗ್ಲ ಕವಿತಾವಳಿಯನ್ನು ಎಂ. ಎನ್. ವಿ. ಪಂಡಿತಾರಾಧ್ಯರು ಮೂಲ ಇಂಗ್ಲಿಷ್ ಕವನಗಳೊಂದಿಗೆ 1865ರಲ್ಲಿ ಸಂಪಾದಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯಕ್ಕೆ ಹಟ್ಟಿಯಂಗಡಿಯವರು ನೀಡಿದ ಕೊಡುಗೆಯ ಐತಿಹಾಸಿಕ ಮಹತ್ವವನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಇತ್ತೀಚಿನ 'ದೇಶ-ಕಾಲ'ದಲ್ಲಿ ಪ್ರೊ. ಪ್ರಭಾಕರ ಆಚಾರ್ಯರು ರಾಮಾಶ್ವಮೇಧವನ್ನು ಕುರಿತು ಬರೆದಿರುವ ಲೇಖನ ಮುದ್ದಣನ ಕೃತಿಗಳನ್ನು ಕುರಿತ ಮರು ಓದಿಗೆ ನಾಂದಿ ಹಾಡಿದೆ. ಗಂಗಾಧರ ಚಿತ್ತಾಲ ಹಾಗೂ ಕವಿ, ಭಾಷಾಶಾಸ್ತ್ರಜ್ಞ ಕೆ. ವಿ. ತಿರುಮಲೇಶರ ಕಾವ್ಯದ ತಲಸ್ಪರ್ಶಿ ಅಧ್ಯಯನ ಸಂಶೋಧನ ಗ್ರಂಥಗಳ ವಸ್ತುವಾಗಬೇಕು. 'ಕವಿ ಅಡಿಗರ ರಾಜಕೀಯ ನಿಲುವುಗಳು' ಅಧ್ಯಯನಕ್ಕೆ ಒಳ್ಳೆಯ ವಿಷಯ.
'ಮಂದಾರ ರಾಮಾಯಣ' ತುಳು ಮಹಾಕಾವ್ಯದ ಕವಿ ಮಂದಾರ ಕೇಶವ ಭಟ್ಟರು ತಮ್ಮ ಕಾವ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕನ್ನಡ-ತುಳು ಮಂದಾರ ರಾಮಾಯಣಗಳ ತೌಲನಿಕ ಅಧ್ಯಯನದೊಂದಿಗೆ ಕಾವ್ಯ ಭಾಷಾಂತರದ ಸಮಸ್ಯೆಗಳ ಚರ್ಚೆ ಯನ್ನು ಮುಂದುವರಿಸಬೇಕಾಗಿದೆ. ತುಳು ಪಾಡ್ದನಗಳ ಕನ್ನಡ ಬಾಷಾಂತರಗಳು ಲಭ್ಯವಿರುವುದರಿಂದ, ಅವುಗಳನ್ನು ಕುರಿತ ಕನ್ನಡ ಜಾನಪದ ಸಂಶೋಧಕರ ಸಮೂಹ ಶೋಧ ಮುಂದುವರಿಯುತ್ತಿದೆ.
ಅರುಣಾಬ್ಜನ ತುಳು ಮಹಾಭಾರತ ಹಾಗೂ ಕುಮಾರವ್ಯಾಸ ಭಾರತಗಳ ತೌಲನಿಕ ಅಧ್ಯಯನ ಆಗಬೇಕಾಗಿದೆ.
ಸಾಹಿತ್ಯ ಸಂಶೋಧನೆ
ಗುಲ್ವಾಡಿ ವೆಂಕಟರಾಯರ 'ಇಂದಿರಾಬಾಯಿ' ಕಾದಂಬರಿಯ ಇಂಗ್ಲಿಷ್ ಭಾಷಾಂತರವು ಸಂಶೋಧನೆಗೆ ಯೋಗ್ಯವಾಗಿದೆ. ಕಡೆಂಗೋಡ್ಲು ಶಂಕರ ಭಟ್ಟರ 'ಈ ಪೀಳಿಗೆ' ಕನ್ನಡ ವಿಮರ್ಶೆ ಅಲಕ್ಷಿಸಿರುವ ಒಂದು ಮಹತ್ವದ ರಾಜಕೀಯ ಕಾದಂಬರಿ. ಬೋಳಾರ ಬಾಬೂರಾಯರ 'ವಾಗ್ದೇವಿ', ಬೆಳ್ಳೆ ರಾಮಚಂದ್ರ ರಾಯರ ಕಾದಂಬರಿಗಳು ಸಂಶೋಧನೆಗೆ ಯೋಗ್ಯವಾಗಿವೆ. ಜಿ. ರಾಜಶೇಖರ ಅವರ 'ಕಾರಂತರ ಕಾದಂಬರಿಗಳಲ್ಲಿ ದಕ್ಷಿಣ ಕನ್ನಡತನ' ಲೇಖನ ಅದೇ ಶೀರ್ಷಿಕೆಯ ಸಂಶೋಧನ ಗ್ರಂಥವೊಂದರ ಪೀಠಿಕೆಯಂತಿದೆ. 'ಕಾರಂತರ ಕಾದಂಬರಿಗಳಲ್ಲಿ ಕಾಣಿಸುವ 20ನೆಯ ಶತಮಾನದ 'ಕರಾವಳಿ ಕರ್ನಾಟಕದ ಸಮಾಜ', 'ಕಾರಂತರ ರಾಜಕೀಯ ಕಾದಂಬರಿಗಳು', 'ಕಾರಂತರ ಕಾದಂಬರಿಗಳಲ್ಲಿ ದಾಂಪತ್ಯ' - ಪ್ರತ್ಯೇಕ ಅಧ್ಯಯನದ ವಿಷಯಗಳಾಗಬಹುದು. ವ್ಯಾಸರಾಯ ಬಲ್ಲಾಳರ ಕಾದಂಬರಿಗಳಲ್ಲಿ ಕಾಣಿಸುವ ಸಾಮಾಜಿಕ ಪರಿವರ್ತನೆ, ಬಲ್ಲಾಳರ ಕಾದಂಬರಿಗಳಲ್ಲಿ 'ಗಾಂಧೀವಾದ', 'ಬಲ್ಲಾಳರ ಕಾದಂಬರಿಗಳ ಸ್ತ್ರೀ ಪಾತ್ರಗಳು' ಗಂಭೀರ ಅಧ್ಯಯನಕ್ಕೆ ಅರ್ಹವಾಗಿವೆ. ದಕ್ಷಿಣ ಕನ್ನಡದ ಸಾಮಾಜಿಕ ಪರಿವರ್ತನೆಯ ಕುರಿತು ಸಮಾಜಶಾಸ್ತ್ರಜ್ಞ ಪ್ರೊ. ಶ್ರೀಪತಿ ತಂತ್ರಿಯವರ ಒಳನೋಟಗಳ ಬೆಳಕಿನಲ್ಲಿ ಹೊಸ ತಲೆಮಾರಿನ ಸಂಶೋಧಕರು ಮುನ್ನಡೆಯಬಹುದು. ಕೆ. ಟಿ. ಗಟ್ಟಿಯವರ ಕಾದಂಬರಿಗಳನ್ನು ಓದುಗರ ಪ್ರತಿಕ್ರಿಯೆಯ ನೆಲೆಯಲ್ಲಿ ಅಧ್ಯಯನ ಮಾಡಬಹುದು.
ಸಣ್ಣಕತೆಗಾರರಲ್ಲಿ ಬಾಗಲೋಡಿ ದೇವರಾವ್, ಯಶವಂತ ಚಿತ್ತಾಲ, ವೈದೇಹಿ, ಬೊಳುವಾರು ಮಹಮ್ಮದ್ ಕುಂಞಿ, ಪಕೀರ್ ಮಹಮ್ಮದ್ ಕಟ್ಪಾಡಿ, ಎಂ. ವ್ಯಾಸ, ಶಾಂತರಾಮ ಸೋಮಯಾಜಿ, ಜಯಂತ ಕಾಯ್ಕಿಣಿ ಅವರ ಕತೆಗಳು ಅಧ್ಯಯನಕ್ಕೆ ಯೋಗ್ಯವಾಗಿವೆ. ಕುಂದಾಪುರ ಕನ್ನಡ, ಹವ್ಯಕ ಕನ್ನಡದ ಜನಪದ ಕತೆಗಳು ಸಂಶೋಧಕರನ್ನು ನಿರೀಕ್ಷಿಸುತ್ತಿವೆ. ಪಿ.ಬಿ. ಪ್ರಸನ್ನರ ಸಣ್ಣಕತೆಗಳ ಆಧಾರದಿಂದ 'ಉಡುಪಿ ಕನ್ನಡ'ವನ್ನು ಕುರಿತ ಸಂಶೋಧನ ಲೇಖನವನ್ನು ಬರೆಯಬಹುದು.
ಗಿರೀಶ ಕಾರ್ನಾಡರ ನಾಟಕಗಳು ವಿಮರ್ಶಕರಿಗೆ, ಸಂಶೋಧಕರಿಗೆ ಪಂಥಾಹ್ವಾನ ನೀಡುತ್ತಿವೆ. ಉಡುಪಿ ರಾಮಕೃಷ್ಣಾಚಾರ್ಯರ 'ಕರ್ಣಾಟಕ ಅವಂತೀ ಸುಂದರಿ ಪರಿಣಯ' 1907ರಲ್ಲಿ ಪ್ರಕಟವಾಗಿದೆ. ಇಂಥ ಬಳಕೆ ತಪ್ಪಿದ ಕೃತಿಗಳ ಮೇಲೆ ಹೊಸ ತಲೆಮಾರಿನ ಸಂಶೋಧಕರು ಬೆಳಕು ಚೆಲ್ಲಬೇಕಾಗಿದೆ. ಸಂಶೋಧನ ಗ್ರಂಥಗಳ ಮೂಲಕ ಶಿವರಾಮ ಕಾರಂತರ ನಾಟಕಗಳ, ಬಿ. ವಿ. ಕಾರಂತರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆಯ ಮೌಲ್ಯಮಾಪನ ನಡೆಸಬೇಕಾಗಿದೆ.
ಹಿರಿಯ ಸಂಶೋಧಕರ ಕೃತಿಗಳ ಮರುಓದು ಸುಲಭದ ಕೆಸಲವೇನಲ್ಲ. ಮುಳಿಯ ತಿಮ್ಮಪ್ಪಯ್ಯನವರ 'ನಾಡೋಜ ಪಂಪ', ಸೇಡಿಯಾಪು ಕೃಷ್ಣ ಭಟ್ಟರ 'ಛಂದೋಗತಿ' ಇವುಗಳ ಮರು ಓದಿನಿಂದ ಪಂಡಿತ ಪರಂಪರೆಯ ಸಂಶೋಧಕರ ಒಳನೋಟಗಳ ಅರಿವಾಗುತ್ತದೆ. 'ನಾಡೋಜ ಪಂಪ'ದಲ್ಲಿ ಮುಳಿಯ ತಿಮ್ಮಪ್ಪಯ್ಯನವರು ಊಹಿಸಿದ್ದ ಕೆಲವು ಸಂಗತಿಗಳು ನಾಲ್ಕು ದಶಕಗಳ ಅನಂತರ ಜಿನವಲ್ಲಭನ ಶಾಸನ ಸಿಕ್ಕಿದಾಗ ನಿಜವಾದುವು. ಅಡಿಗರು ಬಿ.ಎಂ.ಶ್ರೀ ಅವರನ್ನು ಕುರಿತ ಕವನದಲ್ಲಿ 'ದೊಡ್ಡವರು ನೀವು ನಾವೇನೂ ಕುಬ್ಜರಲ್ಲ' ಎನ್ನುತ್ತಾರೆ. ಹೊಸ ತಲೆಮಾರಿನ ಸಂಶೋಧಕರು ಶ್ರದ್ಧೆ, ಆತ್ಮವಿಶ್ವಾಸಗಳಿಂದ ಮುನ್ನಡೆಯಬೇಕಾಗಿದೆ. ಸುರತ್ಕಲ್ ವೆಂಕಟರಾಮಾಚಾರ್ಯರ ಸಂಶೋಧನ ಲೇಖನಗಳ ಅಧ್ಯಯನ ಬಾಕಿ ಉಳಿದಿದೆ.
ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದಿರುವ ಪುಸ್ತಕಗಳ ಸಂಖ್ಯೆ 400ಕ್ಕಿಂತ ಹೆಚ್ಚು. ಇವುಗಳ ಕುರಿತು ಸಂಶೋಧನ ಗ್ರಂಥ ರಚನೆಯಾಗಿಲ್ಲ. ಕಾರಂತರು ಹಾಗೂ ಜಿ.ಟಿ. ನಾರಾಯಣ ರಾಯರು ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯ ಮೌಲ್ಯಮಾಪನ ಆಗಬೇಕಾಗಿದೆ. ಗೌರೀಶ ಕಾಯ್ಕಿಣಿ ಮತ್ತು ಪಾ. ವೆಂ. ಆಚಾರ್ಯರ ವೈಚಾರಿಕ ಕೃತಿಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ.
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹತ್ತಾರು ತತ್ತ್ವಜ್ಞಾನದ ಗ್ರಂಥ ಲೇಖನಗಳನ್ನು, ಆತ್ಮಕತೆಯನ್ನು ಬರೆದಿದ್ದಾರೆ. ಅವರು ಹಾಗೂ ಕು. ಶಿ. ಹರಿದಾಸ ಭಟ್ಟರ ಗದ್ಯ ಕೃತಿಗಳು ಅಧ್ಯಯನಕ್ಕೆ ಯೋಗ್ಯ ವಿಷಯಗಳು. ಬನ್ನಂಜೆ ಗೋವಿಂದಾಚಾರ್ಯರು ಕಾಳಿದಾಸ, ಭವಭೂತಿ, ಶೂದ್ರಕ ಇವರ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸಂಸ್ಕೃತ ಪಾಂಡಿತ್ಯವಿರುವ ಕನ್ನಡ ಸಂಶೋಧಕರು ಭಾಷಾಂತರ ಸಾಹಿತ್ಯಕ್ಕೆ ಬನ್ನಂಜೆಯವರು ನೀಡಿದ ಕೊಡುಗೆಯ ಅಧ್ಯಯನ ಮಾಡಬಹುದಾಗಿದೆ. ಡಾ. ರಘುಪತಿ ಭಟ್ ಅವರು ಆರಂಭಿಸಿದ ಉಡುಪಿ ಜಿಲ್ಲೆಯ ಸ್ಥಳನಾಮಗಳ ಭಾಷಾಶಾಸ್ತ್ರೀಯ ಅಧ್ಯಯನವನ್ನು ಮುಂದುವರಿಸುವವರು ಕಾಣುತ್ತಿಲ್ಲ. ಜಿ. ರಾಜಶೇಖರ್ ಸಮಕಾಲೀನ ಕರ್ನಾಟಕದ ಒಬ್ಬ ಮುಖ್ಯ ಸಾಹಿತ್ಯ, ರಾಜಕೀಯ ವಿಮರ್ಶಕ. ಅವರ ನೂರಾರು ಲೇಖನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲು ಅವರು ಅನುಮತಿ ನೀಡಿಲ್ಲ. ಅವರ ಕೆಲವು ಲೇಖನಗಳ ಸಂಕಲನವೊಂದು ಇತ್ತೀಚಿಗೆ ಅಕ್ಷರ ಪ್ರಕಾಶನದಿಂದ ಪ್ರಕಟವಾಗಿದೆ. ರಾಜಶೇಖರ ಅವರ ಸಮಗ್ರ ಸಾಹಿತ್ಯ ವಿಮರ್ಶೆ ಲೇಖನಗಳ ಅಧ್ಯಯನ ಕನ್ನಡ ವಿಮರ್ಶೆಗೆ ಮಹತ್ವದ ಕೊಡುಗೆಯಾಗಬಹುದು.
ಮಂಗಳೂರು ವಿಶ್ವವಿದ್ಯಾಲಯದ ಇತ್ತೀಚಿಗಿನ ಸೆಮಿಸ್ಟರ್ ಪದ್ಧತಿಯ ಕನ್ನಡ ಪಠ್ಯ ಪುಸ್ತಕಗಳು ಅವುಗಳನ್ನು ಕುರಿತ ವಿದ್ಯಾರ್ಥಿಗಳ ಪ್ರತಿಕ್ರಿಯೆ ಒಂದು ಸಂಪ್ರಬಂಧದ ವಿಷಯವಾಗಬೇಕು. ಕರಾವಳಿಯ ಲೇಖಕರ ಆತ್ಮಕತೆಗಳ (ಕಾರಂತ, ಸೇಡಿಯಾಪು, ಕು.ಶಿ., ಬಿ.ವಿ. ಕಾರಂತ, ನಾ. ಮೊಗಸಾಲೆ, ಕೂರಾಡಿ ಸೀತಾರಾಮ ಅಡಿಗ) ಅಧ್ಯಯನ ಅನೇಕ ಅಲಕ್ಷಿತ ಸಂಗತಿಗಳ ಮೇಲೆ ಬೆಳಕು ಚೆಲ್ಲಬಹುದು.
ಮರುಓದು
ಬಾಸೆಲ್ ಮಿಶನ್ ಗ್ರಂಥಭಂಡಾರ ಸೂಚಿ, ಗೋವಿಂದ ಪೈ ಗ್ರಂಥಭಂಡಾರ ಸೂಚಿ, ಹಾ. ಮಾ. ನಾ. ಗ್ರಂಥಭಂಡಾರ ಸೂಚಿ, ಸುರತ್ಕಲ್ ವೆಂಕಟರಾಮಾಚಾರ್ಯ ಗ್ರಂಥಭಂಡಾರ ಸೂಚಿ ಇವುಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಪ್ರಕಟಿಸಬೇಕು.
ನಮ್ಮ ಕೆಲವು ಹೊಸ ಸಂಶೋಧಕರ ಸಂಪ್ರಬಂಧಗಳು ತಾವು ಆ ಕ್ಷೇತ್ರದ ಮೊದಲಿಗರು ಎಂಬ ಭ್ರಮೆಯಿಂದ ಹೊರಡುತ್ತವೆ; 'ಹಿಂದಣ ಹೆಜ್ಜೆ'ಗಳನ್ನು ಅಲಕ್ಷಿಸುತ್ತವೆ. ಕ್ಷಿಪ್ರ ಪ್ರಸಾದ ಬಯಸುತ್ತವೆ. ಸಂಶೋಧಕರ ಒಕ್ಕೂಟ ಅಥವಾ ಕನ್ನಡ ವಿಶ್ವವಿದ್ಯಾನಿಲಯದಂಥ ಸಂಸ್ಥೆಗಳು ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಸಂಪ್ರಬಂಧಗಳ ಸಾರಸಂಗ್ರಹಗಳನ್ನು ನಿರಂತರ ಪ್ರಕಟಿಸಬೇಕು.
ನಮ್ಮ ಕೆಲವು ಹೊಸ ಸಂಶೋಧಕರ ಸಂಪ್ರಬಂಧಗಳು ತಾವು ಆ ಕ್ಷೇತ್ರದ ಮೊದಲಿಗರು ಎಂಬ ಭ್ರಮೆಯಿಂದ ಹೊರಡುತ್ತವೆ; 'ಹಿಂದಣ ಹೆಜ್ಜೆ'ಗಳನ್ನು ಅಲಕ್ಷಿಸುತ್ತವೆ. ಕ್ಷಿಪ್ರ ಪ್ರಸಾದ ಬಯಸುತ್ತವೆ. ಸಂಶೋಧಕರ ಒಕ್ಕೂಟ ಅಥವಾ ಕನ್ನಡ ವಿಶ್ವವಿದ್ಯಾನಿಲಯದಂಥ ಸಂಸ್ಥೆಗಳು ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಸಂಪ್ರಬಂಧಗಳ ಸಾರಸಂಗ್ರಹಗಳನ್ನು ನಿರಂತರ ಪ್ರಕಟಿಸಬೇಕು.
ಪಿಎಚ್.ಡಿ. ನೀಡುವ ವಿಶ್ವವಿದ್ಯಾನಿಲಯಗಳು ಸಂಶೋಧನ ಗ್ರಂಥಗಳ ಸಂಕ್ಷಿಪ್ತ ರೂಪವನ್ನು, ಪ್ರಚಾರ ಉಪನ್ಯಾಸ ಮಾಲೆಯ ಕಿರುಹೊತ್ತಗೆಯ ರೂಪದಲ್ಲಾದರೂ ಪ್ರಕಟಿಸುವುದು, ವೆಬ್‍ಸೈಟ್‍ನಲ್ಲಿ ಪ್ರಕಟಿಸುವುದನ್ನು ಕಡ್ಡಾಯ ಮಾಡಬೇಕು.
ಅಡಿಗರ 'ಭೂತ' ಕವನದ ಸಾಲುಗಳನ್ನು ನೆನಪಿಸಿಕೊಳ್ಳುತ್ತ ಈ ಟಿಪ್ಪಣಿಗಳನ್ನು ಮುಗಿಸುತ್ತಿದ್ದೇನೆ.
'ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗರೆಮಿರಿವ ಚಿನ್ನದದಿರು
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು'
(ಉಡುಪಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೇ 1, 2, 2010ರಂದು ಏರ್ಪಡಿಸಿದ 'ಕರಾವಳಿ ಸಂಸ್ಕೃತಿ ಸಂಶೋಧನೆಯ ಆದ್ಯತೆಗಳು' ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ).
(ತುಳುವ, ಎಪ್ರಿಲ್-ಜೂನ್/2010, ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
MURALEEDHARA UPADHYA HIRIADKA - Reseach Topics -COASTAL KARNATAKA KANNADA LITERATURE
MURALEEDHARA UPADHYA HIRIADKA - Reseach Topics -COASTAL KARNATAKA KANNADA LITERATURE
No comments:
Post a Comment