stat Counter



Friday, October 15, 2010

ಪುಸ್ತಕದ ತೇರು

ಪುಸ್ತಕದ ತೇರು


ಹಿರಿಯ ವಿಮರ್ಶಕ ಹಿರಿಯಡಕ
ಮುರಳೀಧರ ಉಪಾಧ್ಯರಿಗೆ ಅರವತ್ತು
ಅವರ ಬದುಕೆಂಬ ಕಾದಂಬರಿಯನ್ನು
ವಿಮರ್ಶಿಸಲು ಇದು ಸರಿಯಾದ ಹೊತ್ತು.
ಆದರೂ ನನಗಿಲ್ಲ ವಿಮರ್ಶಕನನ್ನು ವಿಮರ್ಶಿಸಿ
ಸೇಡು ತೀರಿಸಿಕೊಳ್ಳುವ ಬಯಕೆ !
ನನ್ನ ಮಾತುಗಳು ವಿಮರ್ಶೆ , ಟೀಕೆ,
ಟಿಪ್ಪಣಿಗಳಲ್ಲ, ಹೃದಯಾಂತರಾಳದ ಅನಿಸಿಕೆ.
ಉಪಾಧ್ಯರೆಂದರೆ ಉಡುಪಿಯ ರಥಬೀದಿಯಲ್ಲಿ
ದಿನವೂ ಸಂಜೆ ಕಾಣ ಸಿಗುವ ಪುಸ್ತಕದ ತೇರು !
ಚಿನ್ನದ ರಥ, ಬೆಳ್ಳಿಯ ರಥಗಳನ್ನು ಬಿಟ್ಟು
ಈ ಗ್ರಂಥರಥವನ್ನು ಹುಡುಕಿಕೊಂಡು
ಬರುತ್ತಾರೆ ನನ್ನಂಥವರು.
ನಮ್ಮ ಪಾಲಿಗೆ ಉಡುಪಿ ಎಂದರೆ
ಕಡಗೋಲು ಕೃಷ್ಣ ಅಷ್ಟೇ ಅಲ್ಲ,
ಉಪಾಧ್ಯರು ಮತ್ತವರ ರಥಬೀದಿ ಗೆಳೆಯರು.
ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ
ಉಪಾಧ್ಯರ ಪುಸ್ತಕದ ತೇರಿನ ಎತ್ತರ
ರಥದ ಮೇಲೀಗ ವಿರಾಜಿಸುತ್ತಿದೆ
ಇನಾಂದಾರ್ ಪ್ರಶಸ್ತಿಯ ಗೋಪುರ
ಆದರೂ ಈತ ಎಂದಿನಂತೆ ನಿರ್ಲಿಪ್ತ
ಹೊತ್ತಗೆಗಳ ನಡುವೆ ಹೊತ್ತು ಕಳೆಯುತ್ತ
ತಾವು ಓದಿ ಮೆಚ್ಚಿದ್ದನ್ನು ಹಲವರೊಂದಿಗೆ ಹಂಚಿಕೊಳ್ಳುತ್ತ
ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆಯುತ್ತ
ಯಾರೋ ಹೆತ್ತ ಕವಿತೆ, ಕಥೆ, ಕಾದಂಬರಿ, ನಾಟಕ,
ಪ್ರಬಂಧಗಳೆಂಬ ವಿವಿಧ ಹೆಸರಿನ ಕೂಸುಗಳಿಗೆ
ಆಸ್ಥೆಯಿಂದ ವಿಮಶರ್ೆಯ ಕುಲಾವಿ ಹೊಲಿಯುತ್ತ
ಕುಲಾವಿಯಲ್ಲಿ ಕೂಸಿನ ಚೆಲುವು ನೋಡಿ ನಲಿಯುತ್ತ
ಕಳೆದಿದ್ದಾರೆ ಅರವತ್ತು ಸಂವತ್ಸರ.
ನಿಜವಾಗಿಯೂ ಇವರದ್ದು ಸಾರ್ಥಕ ಬದುಕು
ಗುಣಕ್ಕೆ ಏಕೆ ಮತ್ಸರ?
ಬಾಳ ಸಂಗಾತಿಯಾಗಿ ಶಾರದೆಯ ಕೈಹಿಡಿವವರು
ಶಾರದೆಯನ್ನು ಸದಾ ಕೈಯಲ್ಲಿ ಹಿಡಿವವರು
ಶಾರದೆಯ ಸಹವಾಸದಲ್ಲಿ ತನ್ನ ಪಾಡಿಗೆ ತಾನು
ಸಖೀಗೀತ ಗುನುಗುತ್ತ ಮಾಗಿದ ಧೀಮ೦ತ
(ಈಚೆಗೆ ಶೇರು ವ್ಯವಹಾರ ಮಾಡಿ
ಆಗಿದ್ದಾಗಂತೆ ದಿಢೀರ್ ಶ್ರೀಮಂತ!
ಕೇಳಿಬರುತ್ತಿದೆ ಪುಕಾರು
ಹೆಂಡತಿಗೆ ಕೊಡಿಸಿದ್ದಾರಂತೆ ಹೊಸ ಕಾರು.
ತಮ್ಮ ಹೆಂಡತಿಗೇ ಕೊಡಿಸಿದ್ದಾರೆ ಬಿಡಿ
ಅದಕ್ಕೇಕೆ ಕೊಂಕು? ತಕರಾರು?)
ಮಕ್ಕಳು ಅಲಕಾ, ಮಾನಸಿಯರಿಗೆ ಅಕ್ಕರೆಯ ತಂದೆ
ಮೊಮ್ಮಕ್ಕಳ ಪಾಲಿಗೆ ಪ್ರೀತಿಯ ತಾತ.
-2-
ಉಪಾಧ್ಯರು ಒಳ್ಳೆಯ ವಿಮರ್ಶಕರು
ವಿಮರ್ಶಕರಾದರು ಕೂಡಾ ಒಳ್ಳೆಯವರು!
ನಮ್ಮಲ್ಲಿ ಬಹಳಷ್ಟು ಸಾಹಿತಿಗಳ ಪಾಲಿಗೆ
ವಿಲನ್ ಎಂದರೆ ವಿಮರ್ಶಕರಲ್ಲದೆ ಮತ್ಯಾರು?
ಅವರ ಕರದಲ್ಲಿ ಇರುತ್ತದೆ ಕವಿಸಂಹಾರಕ್ಕೆ
ಬೇಕಾದ ವಿವಿಧ ಹತ್ಯಾರು!
ಕತ್ತಿ, ಚೂರಿ, ಈಟೆ, ಕೊಡಲಿ, ಗುದ್ದಲಿ
ಆದರೆ ನಮ್ಮ ಉಪಾಧ್ಯರ ಕೈಯಲ್ಲಿ
ಇರುವುದು ಆಯುಧವಲ್ಲ ಮುರಳಿ !
ಹೃದಯವಂತ ವಿಮರ್ಶಕರು ಈ ಮುರಳೀಧರ
ಯುವಕರ ಬಗ್ಗೆ, ಹೊಸಬರ ಬಗ್ಗೆ
ಇವರಿಗೆ ವಿಶೇಷ ಆದರ.
ತುಂಬಿರಬಹುದು ಉಪಾಧ್ಯರಿಗೆ
ಅರವತ್ತು ಸಂವತ್ಸರ. ಆದರೇನು?
ಉಪಾಧ್ಯರು ನಿವೃತ್ತರಾದರೂ
ನಿವೃತ್ತರಾಗುವುದಿಲ್ಲ ಮುರಳೀಧರ.
ಕೇಳಿಬರುತ್ತಲೆ ಇರಲಿ ನಿರಂತರ
ಸಖೀಗೀತದಿಂದ ಪುಸ್ತಕ ಪ್ರೀತಿಯ ಇಂಚರ.
ಶಾರದಾ ಪ್ರಿಯ ಮುರಳೀಧರ
ನಿಮಗೆ ಅಭಿನಂದನೆ, ನಮಸ್ಕಾರ!
- ಎಚ್ . ಡುಂಡಿರಾಜ್
೧೭ ಮಾರ್ಚ್ 2010
.

No comments:

Post a Comment