stat Counter



Saturday, October 23, 2010

B.V. KARANTH'S CONTRIBUTION TO INDIAN THEATRE

ಬಿ. ವಿ. ಕಾರಂತರ ರಂಗನಿರ್ಮಿತಿ

ಮುರಳೀಧರ ಉಪಾಧ್ಯ ಹಿರಿಯಡಕ


ಬಿ.ವಿ. ಕಾರಂತರು ನಿರ್ದೇಶಿಸಿರುವ ಒಟ್ಟು ನಾಟಕಗಳ ಸಂಖ್ಯೆ ಇನ್ನೂರನ್ನು ದಾಟುತ್ತದೆ (ಅನುಬಂಧ -1). ದೆಹಲಿ, ಬೆಂಗಳೂರು, ಭೋಪಾಲ, ಹೆಗ್ಗೋಡು, ಉಡುಪಿ - ಹೀಗೆ ಭಾರತದ ಹತ್ತಾರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅವರು ನಾಟಕಗಳನ್ನು ನಿರ್ದೇಶಿಸಿದ್ದಾರೆ, ನಾಟಕ ಶಿಬಿರಗಳನ್ನು ನಡೆಸಿದ್ದಾರೆ. ಅವರ ಹೆಚ್ಚಿನ ರಂಗಕೃತಿಗಳು ಹಿಂದೀ ಮತ್ತು ಕನ್ನಡದಲ್ಲಿದ್ದುವು. ಮಲೆಯಾಳಂ, ಪಂಜಾಬಿ, ತೆಲುಗುಗಳಲ್ಲೂ ಅವರು ನಾಟಕ ನಿರ್ದೇಶಿಸಿದ್ದಾರೆ. ಅಲ್ಕಾಜಿ, ಹಬೀಬ್ ತನ್ಸೀರ್, ಪಣಿಕ್ಕರ್, ರತನ್ ತಿಯಾಮ್, ಕನ್ಹಯ್ಯಲಾಲ್, ಪ್ರಸನ್ನ - ಇವರು ಗುಣಮಟ್ಟದ ದೃಷ್ಟಿಯಿಂದ ಕಾರಂತರೊಂದಿಗೆ ಹೋಲಿಸಬಹುದಾದ, ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕ ನಿರ್ದೇಶಕರು. ಆದರೆ ರಂಗಕೃತಿಗಳ ಸಮೃದ್ಧಿ ಮತ್ತು ವಸ್ತು-ಭಾಷಾ ವೈವಿಧ್ಯಗಳಲ್ಲಿ ಬಿ.ವಿ. ಕಾರಂತರನ್ನು ಮೀರಿಸುವವರು ಯಾರೂ ಇಲ್ಲ.

ಬಿ.ಎಂ.ಶ್ರೀ, ಸಂಸ, 'ಜಡಭರತ' (ಜೆ.ಬಿ. ಜೋಶಿ), ಪು.ತಿ.ನ., ಮಾಸ್ತಿ, ಕುವೆಂಪು, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಮತ್ತು ಲಂಕೇಶರ ಕನ್ನಡ ನಾಟಕಗಳನ್ನು ಕಾರಂತರು ನಿರ್ದೇಶಿಸಿದ್ದಾರೆ. ಸಂಸ್ಕೃತದ ಕಾಳಿದಾಸ, ಭಾಸ, ಶೂದ್ರಕ, ವಿಶಾಖದತ್ತ, ಮತ್ತು ಬೋಧಾಯನರ ನಾಟಕಗಳು ಅವರ ರಂಗಕೃತಿಗಳಾಗಿವೆ. ಸಂಸ್ಕೃತದಲ್ಲಿ ಭವಭೂತಿಯ, ಕನ್ನಡದ ಕೈಲಾಸಂ ನಾಟಕಗಳನ್ನು ಅವರು ಆಯ್ಕೆ ಮಾಡಿಲ್ಲ. ಇಂಗ್ಲಿಷಿನ ಶೇಕ್ಸ್‌ಪಿಯರ್,ಬರ್ನಾಡ್ ಶಾ, ಗ್ರೀಕ್‍ನ ಈಸ್ಕಿಲಸ್, ಸೊಫೊಕ್ಲಿಸ್, ಇತಾಲಿಯನ್ ಭಾಷೆಯ ಪಿರಾಂಡೆಲ್ಲೊ, ಅಯನೆಸ್ಕೊ, ಫ್ರೆಂಚ್‍ನ ಮೋಲಿಯರ್, ಹಿಂದೀಯ ಜಯಶಂಕರ್ ಪ್ರಸಾದ್, ಭಾರತೇಂದು ಹರಿಶ್ಚಂದ್ರ, ಮೋಹನ್ ರಾಕೇಶ್, ಜಗದೀಶಚಂದ್ರ ಮಾಥುರ್, ಮಣಿಮಧುಕರ್, ರಾಮೇಶ್ವರ್ ಪ್ರೇಮ್, ಸುರೇಂದ್ರ ವರ್ಮ, ಹಬೀಬ್ ತನ್ವೀರ್, ಬಂಗಾಳಿಯ ದ್ವಿಜೇಂದ್ರಲಾಲ್ ರಾಯ್, ಶಂಭುಮಿತ್ರ, ಬಾದಲ್ ಸರ್ಕಾರ್, ಮರಾಠಿಯ ವಿಜಯ ತೆಂಡುಲ್ಕರ್, ಪಂಜಾಬಿಯ ಬಲವಂತ ಗಾರ್ಗಿ - ಇವರೆಲ್ಲರ ಆಯ್ದ ನಾಟಕಗಳನ್ನು ಕಾರಂತರು ನಿರ್ದೇಶಿಸಿದ್ದಾರೆ.

ಕಾರಂತರು ಮೊದಲು ನಾಟಕವನ್ನು ಸ್ಥೂಲವಾಗಿ ಓದಿಕೊಳ್ಳತ್ತಾರೆ. ಅದರ ಬಗ್ಗೆ ಹಲವರಲ್ಲಿ ಮಾತಾಡಿಕೊಳ್ಳುತ್ತಾರೆ. ಆಮೇಲೆ ನಾಟಕದ ಅರ್ಥವಂತಿಗೆಯನ್ನು ಅವರು ಅಂತಿಮವಾಗಿ ಗ್ರಹಿಸುವುದು 'ಸಂಗೀತದ ಸಂಕೇತ'ಗಳಲ್ಲಿ ಎನ್ನುತ್ತಾರೆ ಕೆ.ವಿ. ಸುಬ್ಬಣ್ಣ (1-6). ಕಾರಂತರ, ಮಕ್ಕಳ ನಾಟಕವೊಂದರ ನಿರ್ದೇಶನ ಪ್ರಕ್ರಿಯೆಯ ವಿವರಗಳು ಸುಬ್ಬಣ್ಣನವರ ಇನ್ನೊಂದು ಲೇಖನದಲ್ಲಿವೆ (2-1). ನಾಟಕ ತಾಲೀಮಿನಲ್ಲಿ ಕಾರಂತರು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುತ್ತಾರೆ. ಪ್ರದರ್ಶನದ ದಿನದ ವರೆಗೂ ರಂಗಕೃತಿಯನ್ನು ಪರಿಷ್ಕರಿಸುತ್ತ ಹೋಗುವುದು ಅವರ ಕ್ರಮ. ಕಾರಂತರ ನಿರ್ದೇಶನ ಕ್ರಮ ಮತ್ತು ನಾಟಕಗಳ ಆಯ್ಕೆಯನ್ನು ಕುರಿತ ಕೆಲವು ಸೂಕ್ಷ್ಮ ಸಂಗತಿಗಳತ್ತ ಕೆ.ವಿ. ಸುಬ್ಬಣ್ಣ ಗಮನ ಸೆಳೆಯುತ್ತಾರೆ. ವಾಸ್ತವೇತರ ಮಾರ್ಗದ 'ಸಿದ್ಧ ಶೈಲಿ'ಯ ನಾಟಕಗಳಲ್ಲಿ, ವಿಶಿಷ್ಟ ಪಾತ್ರ ಪ್ರಧಾನ ನಾಟಕಗಳಲ್ಲಿ ಕಾರಂತರಿಗೆ ಆಸಕ್ತಿ ಕಡಿಮೆ (1-6).

ನಿರ್ದೇಶನ ಕಾಲದಲ್ಲಿ ಕಾರಂತರ ಪ್ರತಿಭೆ ಅರಳುವ ಆರೋಹಣಗೊಳ್ಳುವ ಬಗೆಯನ್ನು ಡಾ|ಯು.ಆರ್. ಅನಂತಮೂರ್ತಿಯವರು ಹೀಗೆ ಬಣ್ಣಿಸುತ್ತಾರೆ - ಕಣ್ಣಿನ ಜತೆಗೆ ಕಿವಿ ಕೆಲಸ ಮಾಡಿದಾಗ ನಾಟಕದ ಶಬ್ದಶರೀರ
ಉತ್ಪನ್ನವಾಗುತ್ತದೆ. ಈ ವಿಷಯದಲ್ಲಿ ಕಾರಂತರಿಗಿಂತ 'ಜೀನಿಯಸ್'ನ್ನು ನಾನು ನೋಡಿಲ್ಲ. ಹಾಗೆಯೇ ಒಂದನ್ನು ಇನ್ನೊಂದರ ಜೊತೆ ಸಂಬಂಧಪಡಿಸಿ ನೋಡುವ ಶಕ್ತಿ ಅತ್ಯುತ್ತಮ ಪ್ರತಿಭೆಯ ಲಕ್ಷಣ ಎನ್ನುವುದಾದರೆ ಕಾರಂತರು ತಮ್ಮ ನೆನಪುಗಳನ್ನು ಬಳಸಿಕೊಳ್ಳುವ ಕ್ರಮ ಅದ್ಭುತವಾದುದು. ಅವರು ಮಾಡಿದ್ದು ಪೂರ್ವಭಾವಿಯಾಗಿ ಇದ್ದದ್ದಲ್ಲ. ಅದು ಅಲ್ಲೇ ರಂಗದ ಮೇಲೆಯೇ ಹುಟ್ಟಿಕೊಳ್ಳುವುದು (1-9).

ಬಿ.ವಿ. ಕಾರಂತರು ನಾಟಕದ ವಸ್ತುವಿನ ಮೇಲೆ ತನಗೆ ಹೊಳೆದ ಆರ್ಥವನ್ನು ಹೇರುತ್ತಾರೆ ಎಂಬ ಟೀಕೆ (ಬಿ.ಆರ್. ನಾಗೇಶ್ 1-13)ಯನ್ನು ಒಪ್ಪುವುದು ಕಷ್ಟ. ನಿರ್ದೇಶಕ ನಾಟಕದ ವಸ್ತುವನ್ನು ಗ್ರಹಿಸಿದೆ ಸೋಲುವುದಕ್ಕಿಂತ ತನಗೆ ಹೊಳೆದ ಅರ್ಥವನ್ನು ಹೇರವುದು ಒಳ್ಳೆಯದು. ನಾಟಕಕಾರನ ಆಶಯಕ್ಕಿಂತ, ಆ ನಾಟಕದ ನಿರ್ದೇಶಕನ ಆಶಯ ಬೇರೆಯಾಗಬಾರದು ಎನ್ನುವಾಗ ನಾವು ನಿರ್ದೇಶಕನ ಸೃಜನಶೀಲ ಸ್ವಾತಂತ್ರ್ಯವನ್ನೇ ಪ್ರಶ್ನಿಸಿದಂತಾಗುವುದಿಲ್ಲವೇ? ನಾಟಕಕಾರನ ಆಶಯ ಯಾವುದು ಎಂಬುದರ ಕುರಿತು ಕೂಡ ವಿಮರ್ಶಕರಲ್ಲಿ ಭಿನ್ನಾಭಿಪ್ರಾಯ ಇರುವುದು ಸಾಧ್ಯ.

ನೆನಪಿನಲ್ಲಿ ಉಳಿದ ನಾಟಕಗಳು

'ಹಯವದನ', 'ಸತ್ತವರ ನೆರಳು', 'ಪಂಜರಶಾಲೆ', 'ಸ್ಕಂದಗುಪ್ತ', 'ಬರ್ನಮ್ ವನ� 'ಮಾಲವಿಕಾಗ್ನಿಮಿತ್ರ', ಮತ್ತು 'ಗೋಕುಲ ನಿರ್ಗಮನ' - ಇವು ಬಿ.ವಿ. ಕಾರಂತರ ಮಹತ್ವದ ರಂಗಕೃತಿಗಳೆಂದು ಈ ಗ್ರಂಥದಲ್ಲಿ ಅವರ ನಾಟಕಗಳನ್ನು ಚರ್ಚಿಸಿರುವ ವಿಮರ್ಶಕರು ಪರಿಗಣಿಸಿದ್ದಾರೆ.

ಲಂಕೇಶರು ಬಿ.ವಿ. ಕಾರಂತರ 'ಹಯವದನ'ವನ್ನು ವಿಮರ್ಶಿಸಿ, ತಿರಸ್ಕರಿಸಿದ್ದರು; 'ಕತ್ತೆಗಳಿಗೆ ಮನೋರಂಜನೆ ಕೊಡುವ 'ಗಾರ್ದಭರಂಜನ' ಎಂದಿದ್ದರು. ಕಾವ್ಯದ ಗೇಯತೆಯನ್ನು, ನಾಟಕದ ಸಂಗೀತವನ್ನು ನಿರಾಕರಿಸಿದ್ದ ನವ್ಯಸಾಹಿತ್ಯದ ಅಬ್ಬರದ ದಿನಗಳಲ್ಲಿ ಈ ಟೀಕೆ ಬಂತು ಎಂಬುದನ್ನು ನೆನಪಿಡಬೇಕು. ಕೆ.ವಿ. ಸುಬ್ಬಣ್ಣ ವಿವರಿಸುವಂತೆ, ರಂಜನೆಯಿಂದ ನಾಟಕದ ಗಾಂಭೀರ್ಯಕ್ಕೆ ಭಂಗಬಂದೀತೆಂಬ ಭಯ ಇಂಥ ಟೀಕೆಯ ಹಿನ್ನೆಲೆಯಲ್ಲಿತ್ತು. ಸುರೇಶ ಆವಸ್ಥಿ ಅವರು 'ಹಯವದನ' ಪ್ರಯೋಗದ ಐತಿಹಾಸಿಕ ಮಹತ್ವವನ್ನು ಹೀಗೆ ಗುರುತಿಸಿದ್ದಾರೆ - 1971ರಲ್ಲಿ 'ಹಯವದನ'ದ ಪ್ರಕಟಣೆ, 1973ರಲ್ಲಿ ಅದರ ಕಾರಂತ ನಿರ್ದೇಶನ ಇವು ಸಮಕಾಲೀನ ರಂಗಕರ್ಮದ ಅತ್ಯಂತ ಮಹತ್ವಪೂರ್ಣ ಘಟನೆಗಳು. ಈ ಘಟನೆಗಳು ಭಾರತೀಯ ರಂಗಭೂಮಿಯನ್ನು ಕಲೋನಿಯಲ್ ಮಾರ್ಗದಿಂದ ನಾಟ್ಯಶಾಸ್ತ್ರದ ಪರಂಪರಾಪಥದ ಕಡೆಗೆ ಹೊರಳಿಸಿದುವು. ಇದರೊಂದಿಗೆ ಭಾರತೀಯ ರಂಗಭೂಮಿ ವಸಾಹತುಶಾಹಿ ವೃತ್ತಿಗಳಿಂದ ಮುಕ್ತವಾಗಿ ನಾಟ್ಯಶಾಸ್ತ್ರದ ಯಶಸ್ವೀ ಪರಂಪರೆಯೊಂದಿಗೆ ಕೂಡಿಕೊಳುತ್ತದೆ. (1-8)

'ಸತ್ತವರ ನೆರಳು' ನಾಟಕವನ್ನು ನಿರ್ದೇಶಿಸುವ ಮೊದಲು ಬಿ.ವಿ. ಕಾರಂತರು ಜೆ.ಬಿ. ಜೋಶಿಯವರೊಡನೆ ಚರ್ಚಿಸಿದ್ದರು . 'ಸತ್ತವರ ನೆರಳ'ನ್ನು ಕುರಿತ ವಿಮರ್ಶೆಗಳೆಲ್ಲ ನಿರ್ದೇಶಕನ ರಂಗಕೃತಿಯನ್ನು ಅಲಕ್ಷಿಸಿ ನಾಟಕಕಾರನ ಆಶಯವನ್ನೇ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿಕೊಂಡಿವೆ...... ನಾಟಕವನ್ನು ಬರೆದವನ ಪ್ರೇಕ್ಷಿತಾರ್ಥವನ್ನು ಮುಟ್ಟಿಸುವುದರಲ್ಲಿ ಸೋತಿತೆಂದೇ ಹೇಳಬೇಕು (ಜಿ.ಬಿ. ಜೋಶಿ). ಪ್ರಯೋಗ ಯಶಸ್ವಿಯಾಯಿತು. ಕಾರಂತರು ಗೆದ್ದರು. ಆದರೆ 'ಜಡಭರತ'ರು ಸೋತರು ಎಂದು ನನಗೆ ಬಲವಾಗಿ ಅನ್ನಿಸಿತು (ನ. ರತ್ನ 2-4). ಈ ನಾಟಕದಲ್ಲಿ ಬ್ರಾಹ್ಮಣ್ಯದ ಅವನತಿಯ ಬಗ್ಗೆ ಆಳವಾದ ವಿಷಾದ ಇದೆ ಎಂದು ನಾನು ತಿಳಿದಿದ್ದೇನೆ. ಆದರೆ ಇಡೀ ನಾಟಕ (ಕಾರಂತರ ರಂಗಕೃತಿ) ಬ್ರಾಹ್ಮಣ್ಯದ ಲೇವಡಿಯಾಗಿ ಬಿಟ್ಟಿದೆ (ಡಾ| ಯು.ಆರ್. ಅನಂತಮೂರ್ತಿ 1-9). ಪ್ರಸನ್ನರ ವಿಮರ್ಶೇ ಸಮಕಾಲೀನತೆಯತ್ತ ಹೊರಳುತ್ತದೆ - 'ಸತ್ತವರ ನೆರಳು' ಪ್ರದರ್ಶನದಲ್ಲಿ ಅವರು ಪುರಂದರದಾಸರ ಪದಗಳನ್ನು ಬಳಸಿ ಆಕರ್ಷಕವಾಗಿ ಮಾಡಿದರು ಅಷ್ಟೇ ಹೊರತು ಸಮಕಾಲೀನ ಮಾಡಿದರು ಅಥವಾ ಹತ್ತಿರಕ್ಕೆ ತಂದರು ಅಂತ ನನಗೆ ಅನಿಸಲಿಲ್ಲ (1-7). 'ಸತ್ತವರ ನೆರಳ'ನ್ನು ಕುರಿತು ಬಿ.ವಿ. ಕಾರಂತರು ತನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ, 'ಸತ್ತವರ ನೆರಳ'ಲ್ಲಿ ಹುಸಿ ಧಾರ್ಮಿಕ ಆಷಾಡಭೂತಿಯನ್ನು ಲೇವಡಿ ಮಾಡುವುದೇ ನನ್ನ ಉದ್ದೇಶವಾದ್ದರಿಂದ, 16ನೇ ಶತಮಾನದ ಭಕ್ತಿಪಂಥದ ಪ್ರಸಿದ್ಧರಾದ ಪುರಂದರದಾಸರ ಇಂಥ ಸೋಗುಗಳನ್ನು ಗೇಲಿ ಮಾಡುವ 13-14 ಹಾಡುಗಳನ್ನು ಬಳಸಿದ್ದೇನೆ. ಇವು ಭಕ್ತಿಗೀತೆಗಳಲ್ಲ, ಬದಲಿಗೆ ಏಕಕಾಲದಲ್ಲಿ ವಿಭಿನ್ನ ಸ್ತರಗಳಲ್ಲಿ ಅರ್ಥವನ್ನು ಹೊಳೆಯಿಸುವ ಹಾಡುಗಳು. ಉದಾಹರಣೆಗೆ 'ನಗೆಯು ಬರುತಿದೆ ಎನಗೆ ನಗೆಯು ಬರುತಿದೆ' ಎಂಬ ಪುರಂದರದಾಸರ ಹಾಡು ಸಮಾಜದ ಬೂಟಾಟಿಕೆಗಳಿಗೆ ಬರೆದ ಭಾಷ್ಯದಂತಿದೆ ಎಂದಿದ್ದಾರೆ (1-2). 'ಸತ್ತವರ ನೆರಳ'ನ್ನು ಕುರಿತ ಹೆಚ್ಚಿನ ವಿಮರ್ಶೆಗಳು ನಾಟಕಕಾರ ಜಿ.ಬಿ. ಜೋಶಿಯವರ ಪರವಾಗಿ ವಕಾಲತ್ತು ಮಾಡುವಂತಿವೆ. ನೇಮಿಚಂದ್ರ ಜೈನ್ ಅವರ ಪ್ರಕಾರ 'ಸತ್ತವರ ನೆರಳಿ'ನ ರಂಗಸಂಗೀತ, ರಂಗಭಾಷೆ ನಾಟಕದ ಅರ್ಥಸಾಧ್ಯತೆಯನ್ನು ಹೆಚ್ಚಿಸಿವೆ.

ಭಾರತೀಯ ರಂಗಭೂಮಿಯ ಪರಂಪರೆಯನ್ನು ಪರಿಷ್ಕರಿಸಿ ಸ್ವಯಾರ್ಜಿತವನ್ನಾಗಿ ಮಾಡಿಕೊಳ್ಳುವ ಕಾರಂತರ ಪ್ರಯತ್ನದ ಒಂದು ಅಂಗವಾಗಿ 'ಬರ್ನಮ್‌ವನ'ವನ್ನು ಪರಿಶೀಲಿಸಬೇಕು. ಯಕ್ಷಗಾನದಿಂದಾಗಿ ಶೇಕ್ಸ್‌ಪಿಯರ್ ಮತ್ತಷ್ಟು ಹಿಂದಕ್ಕೆ ಹೋದ. 'ಮ್ಯಾಕ್‍ಬೆತ್'ನ ಸಮಕಾಲೀನ ಅಂಶವನ್ನು ಗುರುತಿಸಲು ಕಾರಂತರಿಗೆ ಸಾಧ್ಯವಾಗಲಿಲ್ಲ' ಎಂದು ಪ್ರಸನ್ನ ಅಭಿಪ್ರಾಯಪಟ್ಟರು (1-7). ಆದರೆ 'ಬರ್ನಮ್‌ವನ'ದಲ್ಲಿ ಯಕ್ಷಗಾನದ ಸಿದ್ಧ ಶೈಲಿ ಇರಲಿಲ್ಲ ಎಂಬ ವಾಸ್ತವಾಂಶದತ್ತ ಸುಬ್ಬಣ್ಣ ನಮ್ಮ ಗಮನ ಸೆಳೆಯುತ್ತಾರೆ. ಕಾರಂತರು ಮ್ಯಾಕ್‍ಬೆತ್'ನ ಆಂತರಿಕ ದುರಂತ ವ್ಯಾಪಾರಗಳಿಗೆ ಅವಧಾರಣೆ ನೀಡಿಲ್ಲ ಎನ್ನುವ ಸುಬ್ಬಣ್ಣ ಅದಕ್ಕೆ ಕಾರಣವೇನೆಂದು ಹುಡುಕುತ್ತಾರೆ....... ವಿಶಿಷ್ಟ ಪಾತ್ರ ಪ್ರಧಾನ ನಾಟಕಗಳಲ್ಲಿ ಕಾರಂತರಿಗೆ ಆಸಕ್ತಿ ಕಡಿಮೆ (1-6). ಸುರೇಶ ಅವಸ್ಥಿ ಅವರು 'ಬರ್ನಮ್‌ವನ'ದಲ್ಲಿ ನಿರ್ವಸಾಹತೀಕರಣದ ಪ್ರಕ್ರಿಯೆಯನ್ನು ಗುರುತಿಸುತ್ತಾರೆ. ಅವರ ಪ್ರಕಾರ 'ಬರ್ನಮ್‌ವನ' ಶೇಕ್ಸ್‌ಪಿಯರ್‌ನ ಕಲೋನಿಯಲ್ ಚಹರೆಯನ್ನು ಬದಲಿಸಿ, ಭಾರತೀಯ ಚಹರೆಯನ್ನು ನೀಡಿದೆ. (1-8)

ತನ್ನ ಕಲ್ಪನೆಯಲ್ಲಿ ಗೇಯನೃತ್ಯಾಭಿನಯರಂಗಕ್ಕೆ ಸೇರಿದ 'ಗೋಕುಲ ನಿರ್ಗಮನ'ವನ್ನು ಕಾರಂತರು ನಾಟಕ ಮಾಧ್ಯಮದಲ್ಲಿ ಪ್ರಯೋಗಿಸಿ ಗೆದ್ದಿದ್ದಾರೆ ಎಂದು ಪು.ತಿ.ನ. ಮೆಚ್ಚಿದರು (1-6). ಪ್ರಸನ್ನರ ಪ್ರಕಾರ ಪು.ತಿ.ನ.ರ 'ಗೋಕುಲ ನಿರ್ಗಮನ' ಕೆಟ್ಟ ನಾಟಕ. ಆದರೆ ಕಾರಂತರು ಅದನ್ನು ಹೇಗೆ ಗ್ರಹಿಸಿದ್ದಾರೆ ಎಂಬುದಕ್ಕಿಂತ, ನಾಟಕವನ್ನು ನೋಡಿದ ಮೇಲೆ ನಮಗೇನು ಅನ್ನಿಸಿತೆಂಬುದು ಮುಖ್ಯ ಎಂದು ಕುರ್ತಕೋಟಿಯವರು ವಾದಿಸುತ್ತಾರೆ. ''ಗೋಕುಲ ನಿರ್ಗಮನ' ಹೊಸ ರಂಗಸಂಪ್ರದಾಯವನ್ನು ಆರಂಭಿಸಿದೆ ಎನ್ನುತ್ತಾರವರು (2-7). ಎ. ಆರ್. ನಾಗಭೂಷಣರವರು ಹೇಳುವಂತೆ, ಕೃಷ್ಣನ ನಿರ್ಗಮನದ ನಂತರ ಗೋಕುಲದ ಜನರು ಕೊಳಲನ್ನು ನುಡಿಸಿದರೆ ಕೇಳಿಬರುವುದು ಅಪಸ್ವರಗಳು ಮಾತ್ರ. ಆಗ ಒಬ್ಬ ದನಗಾಹಿ ಬಂದು ಕೃಷ್ಣ ಬಿಟ್ಟುಹೋಗಿದ್ದ ನವಿಲುಗರಿಯನ್ನು ಮುಡಿಗೆ ಏರಿಸಿದ ಮೇಲೆ ಅವನ ಕೊಳಲಿನಿಂದ ಮಧುರವಾದ ನಾದ ಹರಿಯುತ್ತದೆ. ಮೌನದಲ್ಲಿ ಸಂಭವಿಸುವ ಈ ಮಹತ್ವದ ರಂಗಕ್ರಿಯೆ ನಿರ್ದೇಶಕರ ಸೃಜನಶೀಲತೆಗೆ ಸಾಕ್ಷಿಯಾಗಿದೆ (2-8). 'ಗೋಕುಲ ನಿರ್ಗಮನ'ದ ಅಸದೃಶ ದೃಶ್ಯಗಳತ್ತ (ಕೃಷ್ಣ-ರಾಧೆಯರ ಮಿಲನದ ಸನ್ನಿವೇಶ, ಗೋಪ-ಗೋಪಿಯರ ಸಂಬಂಧದ ಮೂಲಕ ಗೋಕುಲದ ಬದುಕಿನ ವಿಜೃಂಭಣೆಯನ್ನು ಸೂಸುವ ದೃಶ್ಯ) ಅವರು ನಮ್ಮ ಗಮನಸೆಳೆಯುತ್ತಾರೆ. 'ಗೋಕುಲ ನಿರ್ಗಮನ' ಅಪೂರ್ಣ ಕಲಾನುಭವ ನೀಡಿತೆಂದು ಬಿ. ಆರ್. ನಾಗೇಶ್ ವಾದಿಸುತ್ತಾರೆ (2-10). 'ಗೋಕುಲ ನಿರ್ಗಮನ'ದ ಬೆಳಕಿನ ವ್ಯವಸ್ಥೆಯ ಸಾಂಕೇತಿಕ ಚೆಲುವನ್ನು ಮೋಹನ ಸೋನ ವ್ಯಾಖ್ಯಾನಿಸಿದ್ದಾರೆ (2-9ರ ಟಿಪ್ಪಣಿ ನೋಡಿ).
ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ಪ್ರದರ್ಶಿಸುವಾಗ ಬಿ. ವಿ. ಕಾರಂತರು ಹಿಂದೀಯ ಪ್ರಾದೇಶಿಕ ಉಪಭಾಷೆಗಳಲ್ಲೊಂದಾದ ಬುಂದೇಲಿಯಲ್ಲಿ ರಂಗಕೃತಿಯನ್ನು ಸಿದ್ಧಪಡಿಸಿದರು. ಇದರಿಂದಾಗಿ ಕಾಳಿದಾಸನ ನಾಟಕ ಪ್ರಾದೇಶಿಕ, ಸಮಕಾಲೀನ ಬಣ್ಣವನ್ನು ಪಡೆಯಿತು. ಪ್ರಸನ್ನ ವಿವರಿಸಿರುವಂತೆ, ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ಭೋಪಾಲದ ರೆಪರ್ಟರಿಗಾಗಿ ಮಾಡಿಸಿದ್ದು. ಈ ನಾಟಕದಲ್ಲಿ ಅದ್ಭುತವಾದುದೊಂದು ಘಟಿಸಿತು. ತಂತ್ರದ ದೃಷ್ಟಿಯಿಂದ ಸಾಮಾನ್ಯವಾದ ಪ್ರೊಡಕ್ಷನ್ ಅದು. ಆದರೆ ಒಂದೇ ಒಂದು ಪ್ರಮುಖವಾದ ಬದಲಾವಣೆಯನ್ನು ಅವರು ಮಾಡಿಕೊಂಡಿದ್ರು. ಅದೇನಂದ್ರೆ ....... 'ರೊಮಾಂಟಿಸಿಸಮ್'ನ್ನು ಬಹಳ ವಿಜೃಂಭಣೆಯಿಂದ ಬಳಸಿದ 'ಮಾಲವಿಕಾಗ್ನಿಮಿತ್ರ'ವನ್ನು 'ಬುಂದೇಲಿ'ಯಲ್ಲಿ ಆಡಿಸಿಬಿಟ್ಟರು. ಸಾಮಾನ್ಯ ಆಡುಮಾತಿನ ಡಯಲೆಕ್ಟ್ 'ಬುಂದೇಲಿ'. ಯಾವಾಗ ಆ ಡಯಲೆಕ್ಟ್ನಲ್ಲಿ ಕಾಳಿದಾಸನ ಪಾತ್ರಗಳು ಮಾತಾಡಲಿಕ್ಕೆ ಸುರುಮಾಡಿದವೋ ಆಗ ಕಾಳಿದಾಸನ ರೊಮ್ಯಾಂಟಿಸಿಸಮ್‍ನ್ನು ಅಲುಗಾಡಿಸಿದಂತಾಗಿ ಇದ್ದಕ್ಕಿದ್ದ ಹಾಗೆ ವಿಶೇಷವಾದ ಅರ್ಥಗಳು ಆ ಎರಡು ಗಂಟೆಯ ಪ್ರದರ್ಶನದಲ್ಲಿ ಕೇಳುವುದಕ್ಕೆ ಸುರುವಾದುವು. (1-7)

ನಾವು ಇಷ್ಟಪಟ್ಟ ಕಾವ್ಯದ ಸಾಲುಗಳು ನಮ್ಮ ನೆನಪಿನಲ್ಲಿ ಉಳಿಯುವಂತೆ ಒಳ್ಳೆಯ ನಾಟಕಗಳ ಕೆಲವು ದೃಶ್ಯಗಳು ಪ್ರೇಕ್ಷಕರ, ವಿಮರ್ಶಕರ, ನೆನಪಿನಲ್ಲಿ ಉಳಿಯುತ್ತವೆ. ಬಿ.ಆರ್. ನಾಗೇಶ್ ಅವರು ಬಿ.ವಿ. ಕಾರಂತರ ರಂಗಕೃತಿಗಳ ಕೆಲವು ದೃಶ್ಯಗಳನ್ನು ದಾಖಲಿಸಿದ್ದಾರೆ... 'ಹಯವದನ'ದಲ್ಲಿ ಕಾಳಿ ನಿದ್ರೆಯಿಂದ ಎಚ್ಚೆತ್ತ ಬಳಿಕ ಮಾತನಾಡುವ ಕ್ರಮ; ಪದ್ಮಿನಿಯ ಮದುವೆಯ ಚಿತ್ರಣ; 'ಸತ್ತವರ ನೆರಳ'ಲ್ಲಿ ದಾಸರ ಹಾಡುಗಳನ್ನು ನಾಟಕದ ಮೂಲಭೂತ ಆಶಯಕ್ಕೆ ವ್ಯಂಗ್ಯ ವ್ಯಾಖ್ಯೆಯಾಗಿ ಅಳವಡಿಸಿಕೊಂಡದ್ದು; ಅದೇ ನಾಟಕದ ಪ್ರಾರಂಭದಲ್ಲಿ ಬೆಳಕು ಮತ್ತು ನಾದಗಳೊಳಗೆ ಅದ್ಭುತ ಸಮ್ಮಿಲನವನ್ನು ಸೃಷ್ಟಿಸಿದ್ದು; 'ಬರ್ನಮ್‌ವನ'ದಲ್ಲಿ ಮ್ಯಾಕ್‍ಬೆತ್ ವೇಷಭೂಷಣಗಳು ಮತ್ತು'ಬರ್ನಮ್‌ವನ'ದ ಚಿತ್ರಣ; �ಮಹಾನಿರ್ವಾಣ�ದಲ್ಲಿ ಮೊದಲಿಗೆ ಸಾಧಾರಣವಾಗಿ ಕಾಣಿಸಿಕೊಂಡು, ಒಮ್ಮಿಂದೊಮ್ಮೆಗೆ ಪ್ರೇಕ್ಷಕರಿಗೆ ಜುಮ್ಮು ಹುಟ್ಟಿಸಿದ ರಂಗಸಜ್ಜಿಕೆ; ಅಂಧಯುಗದಲ್ಲಿ ಹೊಸಬಗೆಯಾಗಿ ಬಂದ ಚಲನೆ; 'ತುಘಲಕ್' 'ಅಂಧಯುಗ'ಗಳ ವೇಷಭೂಷಣಗಳಲ್ಲಿ ಕಾಣಿಸಿಕೊಂಡ ಅಂಗೀಕಾರ್ಹ ಮತ್ತು ಸುಂದರತೆಗಳ ಸಂಯೋಗ;'ಬರ್ನಮ್‌ವನ'ದಲ್ಲಿ ಬರುವ ಪಾತ್ರಗಳ ಚಲನೆ; 'ಘಾಸಿರಾಮ್ ಕೊತ್ವಾಲ್'ನಲ್ಲಿ ಪುಣೆಯ ಪಂಡಿತರ ಗುಂಪನ್ನೇ ಹಿಮ್ಮೇಳವಾಗಿಯೂ, ಒಳಗಿನ ರಂಗಸಿದ್ಧತೆಗಾಗಿ ಹೊರಗಿನಿಂದ ಬಳಸುವ ಪರದೆಯಾಗಿಯೂ ಉಪಯೋಗಿಸಿದ ಬಗೆ; ಮಕ್ಕಳ ನಾಟಕಗಳಲ್ಲಿ ಕ್ಷಣಾರ್ಧದಲ್ಲಿ ಅದ್ಭುತವಾದ ಹೊಸ ಜಗತ್ತನ್ನು ರಂಗದ ಮೇಲೆ ಸೃಷ್ಟಿಸಿದ ಚಾಕಚಕ್ಯತೆ; 'ಕಿಂದರ ಜೋಗಿ'ಯಲ್ಲಿ ಇಲಿಗಳ ಓಡಾಟ...... ಹೀಗೆ ಹಲವಾರು ಉದಾಹರಣೆಗಳನ್ನು ಕೊಡಬಹುದು. (1-13)

ಮಕ್ಕಳ ನಾಟಕಗಳು

ಕಾರಂತರ, ಮಕ್ಕಳ ನಾಟಕಗಳಲ್ಲಿ ಪವಾಡಸ್ಪರ್ಶವಿದೆ. ಮಕ್ಕಳ ನಾಟಕಗಳ ನಿರ್ದೇಶಕರಾಗಿ ಅವರ ಸಾಧನೆ ಅದ್ವಿತೀಯ. 'ಪಂಜರಶಾಲೆ', 'ಇಸ್ಪೀಟ್ ರಾಜ್ಯ', 'ಬುದ್ದೂರಾಮಚರಿತ', 'ನನ್ನ ಗೋಪಾಲ', 'ಮನೇಲೂ ಚುನಾವಣೆ', 'ಅಳಿಲು ರಾಮಾಯಣ', 'ಕೃತಘ್ನ', 'ರಿಕ್ಕಿ-ಟಿಕ್ಕಿ', 'ನೀಲಿ ಕದುರೆ', 'ಅಬ್ದುಲ್ಲಾ ಗೋಪಾಲ', 'ಛೋಟೀ ಸೈಯದ್ ಬಡೇ ಸೈಯದ್', 'ಕಿಂದರಿ ಜೋಗಿ', 'ಮರಹೋತು ಮರ ಬಂತು ಡುಂ ಡುಂ' - ಇವು ಕಾರಂತರು ನಿರ್ದೇಶಿಸಿದ ಮಕ್ಕಳ ನಾಟಕಗಳು.

ಮಕ್ಕಳ ನಾಟಕ ಸ್ವಯಂಸ್ಫೂರ್ತವಾಗಿರಲು ಸಾಧ್ಯ. ಎಳೆಯರ ನುಡಿ, ನಡೆಗಳಲ್ಲಿ ಸಹಜವಾದ ಕಲಾವಂತಿಕೆಯಿದೆ, ಅವನ್ನು ಪ್ರಚೋದಿಸುವುದೇ ನಾಟಕ ನಿರ್ದೇಶಕನ ಕೆಲಸ. ಅದು ಸುಲಭ.... ನಾಟಕದಲ್ಲಿ ಗ್ರಂಥ ಪಾಠದ ಮಹತ್ವವೇನು? ನಿಜ ನೋಡಿದರೆ ಬಹಳ ಸ್ವಲ್ಪವೇ. ಗ್ರಂಥಪಾಠ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬೇಕಾದೀತು. ಒಂದು ಮಕ್ಕಳ ಕೂಟಕ್ಕೆ ಹೊಂದಿಸಿದ ಪಾಠ ಇನ್ನೊಂದು ಸಂದರ್ಭದಲ್ಲಿ ಅನುವಾಗದೆ ಹೋಗಬಹುದು. ಮಕ್ಕಳ ನಾಟಕ ಸಂಕೀರ್ಣವಾಗಿರಬೇಕು. ಹಾಡು, ಕುಣಿತ, ಮಾತು, ಅಭಿನಯ, ಎಲ್ಲ ಕೂಡಿದ್ದರೇ ಚೆನ್ನು. ಮಕ್ಕಳ ಚೇತನವನ್ನರಳಿಸುವ ಎಲ್ಲ ಪರಿಕರಗಳೂ ಬೇಕು ಎನ್ನುತ್ತಾರೆ ಕಾರಂತರು (1-3). ಹೆಗ್ಗೋಡಿನಲ್ಲಿ ಕಾರಂತರು ನಿರ್ದೇಶಿಸಿದ 'ಪಂಜರಶಾಲೆ' ನಾಟಕವನ್ನು ಕೆ.ವಿ. ಸುಬ್ಬಣ್ಣ ಅದೊಂದು ಹಾಡು, ಕುಣಿತ, ಚಟುವಟಿಕೆಗಳ ದೊಡ್ಡ ಹಬ್ಬವಾಗಿತ್ತು ಎಂದು ವರ್ಣಿಸಿದ್ದಾರೆ. 'ಪಂಜರಶಾಲೆ'ಯನ್ನು ನೋಡಿದ ಹೆಗ್ಗೋಡಿನ ಪ್ರೇಕ್ಷಕರೊಬ್ಬರ ಪ್ರತಿಕ್ರಿಯೆ ಹೀಗಿತ್ತು - 'ಜಾತ್ರೆ ಕಂಡಂಗಿತ್ತು'.
2

ಕಾರಂತರ ರಂಗಸಂಗೀತ

ಬಿ.ವಿ. ಕಾರಂತರ ದೃಷ್ಟಿಯಲ್ಲಿ ರಂಗಸಂಗೀತವೆಂದರೆ ಕೇವಲ ಸಂಗೀತವಲ್ಲ, ಅದೊಂದು ಧ್ವನಿವಿನ್ಯಾಸ. ನಾಟ್ಯಶಾಸ್ತ್ರದ 'ವಾಚಿಕಾ' ಕೇವಲ ಸಂಭಾಷಣೆ ಅಲ್ಲ, ನಾಲಗೆಯ ಸಹಾಯದಿಂದ ಹೊರಡುವ ಎಲ್ಲ ಧ್ವನಿಸಾಧ್ಯತೆಗಳು ಎಂದು ಅವರು ಪುನರ್ವ್ಯಾಖ್ಯಾನಿಸಿದ್ದಾರೆ. ಯಾರಿಗೂ ನುಡಿಸಲು ಸಾಧ್ಯವಾಗುವ ಹೊಸ ವಾದ್ಯಗಳನ್ನು ಅವರು 'ರಂಗಾಯಣ'ದಲ್ಲಿ ಸೃಷ್ಟಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಸಿದ್ಧ ಶೈಲಿಯನ್ನು ಕಾರಂತರು ರಂಗಸಂಗೀತದಲ್ಲಿ ಬಳಸುವುದಿಲ್ಲ. ಸಂಗೀತ ವಿಮರ್ಶಕ ಈಶ್ವರಯ್ಯ ವಿವರಿಸಿರುವಂತೆ, ಸಂಗೀತದ ಚೌಕಟ್ಟಿನಲ್ಲಿ ಬರುವ ಮಾಧುರ್ಯದ ಪರಿಕಲ್ಪನೆ ನಾಟಕದಲ್ಲಿ ಪ್ರಸ್ತುತವಲ್ಲ ಅನ್ನುವುದು ಕಾರಂತರ ಅಭಿಮತ. ರಂಗದಲ್ಲಿ ಹುಟ್ಟಿಕೊಳ್ಳುವ ಎಲ್ಲ ಬಗೆಯ ಧ್ವನಿಯೂ ರಂಗಸಂಗೀತದಲ್ಲಿ ಪ್ರಸ್ತುತ - ಅಪಶ್ರುತಿ ಕೂಡ. ಸಂವಾದಿಗಳಲ್ಲದ ಬಹುಸ್ವರಗಳು ನಾಟಕದಲ್ಲಿ ಸನ್ನಿವೇಶ ನಿರ್ಮಾಣಕ್ಕೆ ನೆರವಾಗುತ್ತವೆ. ರಂಗಸಂಗೀತದಲ್ಲಿ ರಾಗದ, ತಾಳದ ಚೌಕಟ್ಟು ಇರಬೇಕಾಗಿಲ್ಲ. ಅಲ್ಲಿರುವುದು ಧ್ವನಿರೂಪಗಳು ಮತ್ತು ಲಯ ವೈವಿಧ್ಯಗಳು. ರಂಗಸಂಗೀತ ಮಾತಿಗೆ ಹತ್ತಿರವಿರಬೇಕು. ಅಂದರೆ ಅವು ವಾಚಿಕವೇ ಆಗಿರಬೇಕು. ಈ ಚಿಂತನೆಯ ತಳಹದಿಯಲ್ಲಿ ಕಾರಂತರು ಹಲವು ಪ್ರಯೋಗಗಳನ್ನು ಮಾಡಿರುತ್ತಾರೆ (1-14). ದಾಸರ ಕೃತಿಗಳನ್ನು ವಿನಿಕೆಯ ದೃಷ್ಟಿಯಿಂದ ಅಭ್ಯಾಸ ಮಾಡುವವರಿಗೆ ಬಿ.ವಿ. ಕಾರಂತರು 'ಸತ್ತವರ ನೆರಳಿ'ಗಾಗಿ ನಿರ್ದೇಶಿಸಿದ ಪುರಂದರದಾಸರ ಹಾಡುಗಳಲ್ಲಿ ಹೊಸು ಊರುಗೋಲುಗಳೂ, ಸಂಕೇತಗಳೂ, ಕೈಹಿಡಿಗಳೂ, ಸ್ವಾತಂತ್ರ್ಯವೂ ಸಿಗುತ್ತವೆ ಎಂದು ಬಿ.ಜಿ.ಎಲ್. ಸ್ವಾಮಿ ಸೂಚಿಸಿದ್ದಾರೆ. (1-16)

ಕಾರಂತರು ಸಂಗೀತ ಸಂಕೇತಗಳ ಮೂಲಕವೇ ನಾಟಕದ ಅರ್ಥವಂತಿಕೆಯನ್ನು ಗ್ರಹಿಸುತ್ತಾರೆ ಎಂಬ ಸುಬ್ಬಣ್ಣನವರ ಒಳನೋಟಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿಯವರ ಅಭಿಪ್ರಾಯವನ್ನು ಗಮನಿಸಿಬೇಕು - ಆದ್ದರಿಂದ ಗದ್ಯದಲ್ಲಿ ಪದ್ಯದಲ್ಲಿ, ಭಾಷೆಯ ಬಳಕೆಯ ಎಲ್ಲ ಸಾಧ್ಯತೆಗಳಲ್ಲೂ ಕಾರಂತರು ಲೀಲಾಜಾಲವಾಗಿ ವ್ಯವಹರಿಸುತ್ತಾರೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮದಲ್ಲಿ ತನ್ನದೇ ಆದ ಗತಿ-ಶೈಲಿಯಲ್ಲಿ ಕೆಲಸ ಮಾಡಬಲ್ಲರು. ನಾಟಕ, ಕಾವ್ಯ, ಚಳವಳಿ, ಸಿನಮಾ ಯಾವುದೇ ಇರಲಿ ಕಾರಂತರು ಮಾತನಾಡುವುದು ಅದರಲ್ಲಿರುವ ಸಂಗೀತದ ಮೂಲಕ - ಅಂದರೆ ಧ್ವನಿ, ನಾದ, ಸ್ವರ, ಲಯ ವಿನ್ಯಾಸಗಳನ್ನು ತೆರೆದು ತೋರಿಸುತ್ತ ಆವಿರ್ಭಸುತ್ತ. (1-15). ಗುರುರಾಜ ಮಾರ್ಪಳ್ಳಿಯವರು ಕೇಳಿರುವ ಪ್ರಶ್ನೆಗಳನ್ನಿಟ್ಟುಕೊಂಡು ಕಾರಂತರ ರಂಗಸಂಗೀತವನ್ನು ಕುರತು ಚಚೇಯನ್ನು ಮುಂದುವರಿಸಬಹುದು. - ಕಾರಂತರು ಸಂಗೀತದಲ್ಲಿ ಇಷ್ಟೆಲ್ಲ ಸಾಧ್ಯತೆಗಳ ಹುಡುಕಾಟ ಮಾಡಿದರೂ, ಕಾರಂತರಲ್ಲಿ ಎಲ್ಲೊ ಪಾಶ್ಚಾತ್ಯ ಸಂಗೀತದ ಲಿಂಕ್ಸ್‌ನ ಕಸಿ ಭಾರತೀಯ ಸಂಗೀತ ಪದ್ಧತಿಗೆ ಮಾಡಿದಂತೆ ಅನಿಸುತ್ತದೆ. ('ಗೋಕುಲ ನಿರ್ಗಮನ'ದ 'ಬರುತಿಹನೆ ನೋಡೆ' ಎನ್ನುವ ಹಾಡಿನ ಸಂಯೋಜನೆ). ಆದ್ದರಿಂದ ಕಾರಂತರು ಕೇವಲ ಭಾಷೆ, ಬದುಕುಗಳನ್ನು ಮೀರಿ ಹೆಚ್ಚು ಸಾರ್ವತ್ರಿಕವಾದ ಮಾನವೀಯ ಸ್ಪಂದನಗಳಿಗಾಗಿ ಸ್ವರ ಸಂಯೋಜಿಸಿದ್ದಾರೆಯೇ? ಪಾಶ್ಚಾತ್ಯ ಸಂಗೀತದ ಸಂವಹನದಲ್ಲಿ ಭಾರತೀಯ ಸಂಗೀತಕ್ಕಿಂತ ಹೆಚ್ಚು ಸೂಕ್ಷ್ಮತೆಯಿದೆ ಎಂದು ಭಾವಿಸುತ್ತಾರೆಯೇ? ಭಾರತೀಯ ರಂಗಸಂಗೀತ ಕಾಲದೇಶಗಳ ಗಡಿ ಮೀರಿ ತನ್ನದೇ ಸ್ವತಂತ್ರ ನೆಲೆಯಲ್ಲಿ ನಿಲ್ಲಲು ಈ ಕಸಿ ಅನಿವಾರ್ಯವೆಂದುಕೊಂಡಿದ್ದಾರೆಯೇ? (1-15)

3
ಸಿನೆಮಾ ನಿರ್ದೇಶಕ

ಬಿ.ವಿ. ಕಾರಂತರು ನಿರ್ದೇಶಿಸಿದ 'ಚೋಮನ ದುಡಿ' ಸಿನೆಮಾ ರಾಷ್ಟ್ರಪ್ರಶಸ್ತಿ ಪಡೆದ ಸಂದರ್ಭದಲ್ಲಿ ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾಗಿದ್ದ ಖ್ವಾಜಾ ಅಹಮದ್ ಅಬ್ಬಾಸ್ ಅವರು ಬಿ.ವಿ. ಕಾರಂತರಿಗೆ ಬರೆದ ಪತ್ರದ ಒಂದು ಸಾಲು ಹೀಗಿತ್ತು - ಭಾರತದಲ್ಲಿ ಮತ್ತೊಬ್ಬ ಸತ್ಯಜಿತ್ ರಾಯ್ ಹುಟ್ಟಿದ್ದಾನೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು. ಇಂಥ ಪ್ರಶಂಸೆಗಳು ಬಂದರೂ ಕಾರಂತರು ಸಿನೆಮಾ ಮಾಧ್ಯಮಕ್ಕೆ ಮರುಳಾಗಲಿಲ್ಲವೆಂಬುದನ್ನು ಗಮನಿಸಬೇಕು. ಸಿನೆಮಾದಲ್ಲಿ ಮನುಷ್ಯ ಇರುವುದಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ನಾಟಕದಲ್ಲಿ ಮಾತ್ರ ಮನುಷ್ಯ ಹೇಗಿದ್ನೊ ಹಾಗೆ ಜೀವಂತವಾಗಿ ಕಾಣಿಸುತ್ತಾನೆ ಎಂಬ ಅವರ ಅಭಿಪ್ರಾಯ ಇದಕ್ಕೆ ಕಾರಣವಾಗಿರಬಹುದು. 'ವಂಶವೃಕ್ಷ' 'ತಬ್ಬಲಿಯು ನೀನಾದೆ ಮಗನೆ' ಸಿನೆಮಾಗಳನ್ನು ಕಾರಂತರು ಗಿರೀಶ ಕಾರ್ನಾಡ್ ಜತೆಯಲ್ಲಿ ನಿರ್ದೇಶಿಸಿದರು. 'ಬೋರ್ ಬೋರ್ ಚಿಪ್ ಚಿಪ್ ಜಾ' - ಕಾರಂತರು ಮಕ್ಕಳಿಗಾಗಿ ನಿರ್ದೇಶಿಸಿದ ಸಿನೆಮಾ. 'ಶಿವರಾಮ ಕಾರಂತ' ಮತ್ತು 'ದಕ್ಷಿಣ ಕನ್ನಡದ ಭೂತಾರಾಧನೆ' ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಕಾರಂತರು ತನ್ನ ಸಿನೆಮಾಗಳಿಗೆ ಮಾತ್ರವಲ್ಲದೆ ಬೇರೆಯವರ ಹಲವು ಸಿನೆಮಾಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ಮೃಣಾಲ್ ಸೆನ್‍ರ 'ಪರಶುರಾಮ್', 'ಖಾರಿಜ್', 'ಏಕ್ ದಿನ್ ಪ್ರತಿ ದಿನ್', ಎಂ.ಎಸ್. ಸತ್ಯು ಅವರ 'ಕನ್ನೇಶ್ವರ ರಾಮ', ಜಿ.ವಿ. ಅಯ್ಯರ್ ಅವರ 'ಹಂಸಗೀತೆ', 'ಕುದುರೆ ಮೊಟ್ಟೆ', 'ಶಂಕರಾಚಾರ್ಯ', 'ಭಗವದ್ಗೀತೆ', ಗಿರೀಶ್ ಕಾರ್ನಾಡರ 'ಕಾಡು', 'ಆ ಮನಿ', ವಿ.ಆರ್.ಕೆ. ಪ್ರಸಾದ್‍ರ 'ಋಷ್ಯಶೃಂಗ', ಬರಗೂರು ರಾಮಚಂದ್ರಪ್ಪನವರ 'ಬೆಂಕಿ', ಗಿರೀಶ ಕಾಸರವಳ್ಳಿಯವರ 'ಘಟಶ್ರಾದ್ಧ', 'ಮೂರು ದಾರಿಗಳು', 'ಆಕ್ರಮಣ', ಟಿ.ಎಸ್. ರಂಗಾ ಅವರ 'ಗೀಜಗನ ಗೂಡು', 'ಗಿದ್ದ್', ಪ್ರೇಮಾ ಕಾರಂತರ 'ಫಣಿಯಮ್ಮ' 'ನಕ್ಕಳಾ ರಾಜಕುಮಾರಿ' ಮತ್ತು 'ನೀಚ ನಗರ' ಇವು ಕಾರಂತರು ಸಂಗೀತ ನಿರ್ದೇಶನ ಮಾಡಿರುವ ಸಿನೆಮಾಗಳು.

'ಚೋಮನ ದುಡಿ'ಯಲ್ಲಿ ಕಾರಂತರು ಮಿಡಿತೆಗಳ, ಚಿಮ್ಮಂಡೆಗಳ ಕರ್ಕಶ ಶಬ್ದವನ್ನು, ಬಿದಿರಿನ ಹಿಂಡಿನ ತಿಕ್ಕಾಟದ ಶಬ್ಷ, ಡೋಲಿನ ಧ್ವನಿಯನ್ನು ಬಳಸಿದರು. 'ಋಷ್ಯಶೃಂಗ'ದಲ್ಲಿ ಸೂರ್ಯನ ಉರಿಬಿಸಿಲಿನಲ್ಲಿ ಹೆಣಗಳು ಬಿದ್ದಿದ್ದ ದೃಶ್ಯಕ್ಕೆ ತಾನಾಪುರವನ್ನು ಅಪಶೃತಿಯಲ್ಲಿ ನುಡಿಸಿದಾಗ ಹೊಮ್ಮುವ ಮತ್ತು ಸತ್ಯಧ್ವನಿಯನ್ನು ಬಳಸಿದರು. ಋತ್ವಿಕ್ ಘಟಕ್ ಮತ್ತು ಸತ್ಯಜಿತ್ ರೇ ಅವರ ಪ್ರೇರಣೆಯಿಂದ ಕಾರಂತರು ಸಿನೆಮಾ ಸಂಗೀತದಲ್ಲಿ ಸೃಜನಶೀಲ ಪ್ರಯೋಗಗಳನ್ನು ಮಾಡಿದ್ದಾರೆ. 'ಘಟಶ್ರಾದ್ಧ' 'ಋಷ್ಯಶೃಂಗ'ಗಳ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿಗಳನ್ನು, 'ಹಂಸಗೀತೆ' (1977)ಯ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಅವರು ಪಡೆದರು.

4

ನಾಟಕ, ಸಿನೆಮಾಗಳ ನಟನಾಗಿ ಬಿ.ವಿ. ಕಾರಂತರು ಹೆಸರು ಗಳಿಸಲಿಲ್ಲ. ಎಂ.ಎಸ್. ಸತ್ಯು ಅವರ 'ಜೀವದ ಬೊಂಬೆ' ನಾಟಕದಲ್ಲಿ ಪಾತ್ರವಹಿಸಿದಾಗ ಅವರು ಸ್ಕ್ರಿಪ್ಟ್ ಕೈಯಲ್ಲಿ ಹಿಡಿದೇ ಅಭಿನಯಿಸುತ್ತಿದ್ದರಂತೆ ! (1-10). 'ವಂಶವೃಕ್ಷ' ಸಿನೆಮಾದಲ್ಲಿ ಅವರು ಪ್ರೊಫೆಸರ್‌ನ ಪಾತ್ರ ವಹಿಸಿದ್ದರು.

ಕಾರಂತರು ತನ್ನ ಯೌವನದಲ್ಲಿ 'ಗಡ್ಡಧಾರಿ' ಎಂಬ ಕಾವ್ಯನಾದದಲ್ಲಿ 'ಸಾಹಿತ್ಯ ಸ್ಪೀಕಿಂಗ್ ಕಂಪೆನಿ' ಎಂಬ ನಾಟಕವನ್ನು ಬರೆದು ಪ್ರಕಟಿಸಿದ್ದರು. ಭಾಸನ 'ಸ್ವಪ್ನವಾಸವದತ್ತ', ಶೂದ್ರಕನ 'ಮೃಚ್ಛಕಟಿಕ', ಗಿರೀಶ್ ಕಾರ್ನಾಡರ 'ತುಘಲಕ್', 'ಹಯವದನ', 'ಹಿಟ್ಟಿನ ಹುಂಜ', ಶ್ರೀರಂಗರ 'ಕೇಳು ಜನಮೇಜಯ', 'ಕತ್ತಲೆ-ಬೆಳಕು', 'ರಂಗಭಾರತ' ನಾಟಕಗಳನ್ನು ಕಾರಂತರು ಹಿಂದೀಗೆ ಭಾಷಾಂತರಿಸಿದ್ದಾರೆ. 'ಪಂಜರಶಾಲೆ' (ಮೂಲ - ರವೀಂದ್ರನಾಥ ಠಾಕೂರರ ಸಣ್ಣ ಕಥೆ), 'ಹೆಡ್ಡಾಯಣ' (ಮೂಲ - ಕನ್ನಡ ಜನಪದ ಕತೆ) ಮತ್ತು 'ಅಳಿಲು ರಾಮಾಯಣ' - ಇವು ಕಾರಂತರು ಮಕ್ಕಳಿಗಾಗಿ ಕನ್ನಡದಲ್ಲಿ ಬರೆದಿರುವ ನಾಟಕಗಳು.

ವೆಂಕಟರಮಣನ ಸಂಕಟಗಳು

ಹೊರನೋಟಕ್ಕೆ ಅವಸರ, ಗಡಿಬಿಡಿ, ಚಟುವಟಿಕೆ, ಗೊಂದಲ, ಕೂತಲ್ಲಿ ಕೂರಲಾರದ ನಿಂತಲ್ಲಿ ನಿಲ್ಲಲಾರದ ವ್ಯಕ್ತಿತ್ವ. ಅಂತರಂಗದಲ್ಲಿ ಅವರು ಮೃದು, ಕೋಮಲ; ತನ್ನಿಂದ ಯಾರಿಗೂ ನೋವಾಗದಂತೆ ಎಚ್ಚರ. ಪ್ರಕೃತಿ, ಪ್ರಾಣಿಗಳನ್ನು ಕುರಿತು ತುಂಬಾ ಪ್ರೀತಿ. ವ್ಯವಹಾರ ಜ್ಞಾನ ಇಲ್ಲ. 'ಬೆಳ್ಳಗಿದ್ದುದೆಲ್ಲಾ ಹಾಲು' ಎಂದು ನಂಬುವವರು. ಸೃಜನಶೀಲ ವ್ಯಕ್ತಿಯಾಗಿ ಅಹೋರಾತ್ರಿ ದುಡಿಯುವ ತಾಕತ್ತು. ವೈವಿಧ್ಯಪೂರ್ಣ ಪುಸ್ತಕಾಸಕ್ತಿ - ಪ್ರೇಮಾ ಕಾರಂತರು ತನ್ನ ಗಂಡ ಬಿ. ವೆಂಕಟರಮಣ ಕಾರಂತರ ವ್ಯಕ್ತಿತ್ವವನ್ನು ಚಿತ್ರಿಸುವುದು ಹೀಗೆ. ನನಗೆ ಕಾರಂತರು ಕೊಟ್ಟಿರುವಷ್ಟು ಸ್ವಾತಂತ್ರ್ಯ ಯಾವನೇ ಗಂಡ ತನ್ನ ಹೆಂಡತಿಗೆ ಕೊಡಬಲ್ಲ ಎಂದು ಅನ್ನಿಸೋಲ್ಲ ಎನ್ನುತ್ತಾರವರು (1-5). ಜಿ.ವಿ. ಅಯ್ಯರ್ ತನ್ನ ಶಿಷ್ಯ ಕಾರಂತರ ವ್ಯಕ್ತಿತ್ವವನ್ನು ಕುರಿತು, ಮೇಲುನೋಟಕ್ಕೆ ಕಾರಂತ ಭಾವುಕನಾಗೇ ಕಾಣಿಸುತ್ತಾನೆ. ಸರಳ ಸ್ವಭಾವದ ಅವನ ಅಂತರಂಗದಲ್ಲಿರುವುದೆಲ್ಲಾ ಛಲಗಾರನ ಕಪಿಮುಷ್ಟಿಗಳೇ. ಸಾಧನೆ, ತಪಸ್ಸು, ನಡುನಡುವೆ ಸಣ್ಣ ಪುಟ್ಟ ದುಶ್ಚಟಗಳು ...... ತನ್ನ ಬಲಹೀನತೆಯನ್ನು ತುಳಿದೇಳುವ ಆತ್ಮವಿಶ್ವಾಸ, ಇವುಗಳೆ ಕಾರಂತನ ಬಣ್ಣಗಳು-ಬದಲಾವಣೆಗಳು, ರಂಗುರಂಗಿನ ಮಜಲುಗಳು ಎನ್ನುತ್ತಾರೆ. (1-4).

"ಹಣವನ್ನೇದರೂ ಇಟ್ಟುಕೊಂಡಿದ್ದೀರಾ? ಅಥವಾ ಯಥಾಪ್ರಕಾರದ ಕಲಾವಿದರ ಕಣ್ಣೀರ ಕಥೆಯನ್ನು ಸಿದ್ಧಪಡಿಸುತ್ತಿದ್ದೀರಾ?" ಎಂದು 1982ರಲ್ಲಿ ಲಂಕೇಶರು ಕೇಳಿದ ಪ್ರಶ್ನೆಗೆ ಕಾರಂತರ ಉತ್ತರ ಹೀಗಿತ್ತು - ಪೈಸೆ ಹಣವಿಲ್ಲ. ಆದರೆ ನನ್ನ ಹತ್ತಿರ ಪುಸ್ತಕಗಳು, ಸಂಗೀತದ ರಿಕಾರ್ಡುಗಳು, ತಾಳ, ಜಾಗಟೆ, ಡೋಲುಗಳು, ಅನೇಕ ವಾದ್ಯಗಳು, ನಾಟಕ ಸಾಮಗ್ರಿಗಳು ಇವೆ.
'ನಾಟ್ಯಶಾಸ್ತ್ರ'ವನ್ನು ಬರೆದ ಭರತನ ಬದುಕಿನ ಕತೆ ನಮಗೆ ತಿಳಿದಿಲ್ಲ. ಭರತ ಭಾರತದ ಉದ್ದಗಲದಲ್ಲಿ ಅಲೆಮಾರಿಯಾಗಿ ಸಂಚರಿಸಿ ನೂರಾರು ತರದ ರಂಗಕಲೆಗಳನ್ನು ನೋಡಿರಬಹುದು. ಸೂತ್ರಧಾರನಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿರಬಹುದು . ದೇವತೆಗಳು ನಾಟಕ ಪ್ರದರ್ಶಿಸುವಾಗ ರಾಕ್ಷಸರು ಗಲಭೆ ಮಾಡಿದ್ದು ಅವನ ಬದುಕಿನ ಘಟನೆಯೇ ಆಗಿರಬಹುದು. ಬಿ.ವಿ. ಕಾರಂತರ ವ್ಯಕ್ತಿತ್ವವನ್ನು, ಕೊಡುಗೆಗಳನ್ನು ಅವಲೋಕಿಸುವಾಗ ಭರತನ ನೆನಪಾಗುತ್ತದೆ, ಅವನು ವಿವರಿಸುವ 'ಮಾನುಷೀ ಸಿದ್ಧಿ'ಯ ನೆನಪಾಗುತ್ತದೆ.

5
ವೈಚಾರಿಕ ನಿಲುವುಗಳು

ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾರಂತರು ಕೆಲವು ದಿನ ಆರ್.ಎಸ್.ಎಸ್. ಶಾಖೆಗೆ ಹೋಗಿದ್ದರು. ಅನಂತರ ಆಸಕ್ತಿ ಕಳಕೊಂಡರು (1-2). 1983ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಕಾರಂತರು, ಕಾಂಗ್ರೆಸ್ ಪಾರ್ಟಿಯಲ್ಲಿ ನನ್ನನ್ನ ಯಾರೂ ಅಷ್ಟಾಗಿ ಆಕರ್ಷಿಸಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಾರಿಕೆಯಿಂದ, ಜ್ಯೋತಿ ಬಸು ಅವರ control ಮಾಡುವ ಸಾಮರ್ಥ್ಯದಿಂದ ಆಕರ್ಷಿತನಾಗಿದ್ದೇನೆ. ಮೊದಲು ನಂಬೂದಿರಿಪಾಡ್ ಅವರನ್ನು ತುಂಬ ಮೆಚ್ಚಿಕೊಂಡಿದ್ದೆ ಎಂದಿದ್ದಾರೆ. (3-2)

1991ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಬಿ.ವಿ. ಕಾರಂತರು ಸಂಸ್ಕೃತಿಯ ರಾಜಕೀಕರಣದ ಕುರಿತು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ - ಅಡ್ವಾಣಿ, ವಾಜಪೇಯಿ ಬಗ್ಗೆ ಗೌರವ ಇದೆ ನನ್ಗೆ. ಇವ್ರು ಇಬ್ರೂ ಒಳ್ಳೆ ವ್ಯಕ್ತಿಗಳು. ದೆಹಲಿಯಲ್ಲಿ ಎಲ್ಲ ನಾಟಕ ನೋಡ್ಲಿಕ್ಕೆ ಬರ್ತಿದ್ರು. ಅಡ್ವಾಣಿಯವರಂತೂ ಮಕ್ಕಳ ನಾಟಕ ನೋಡ್ಲಿಕ್ಕೆ ಕೂಡ ಬರ್ತಿದ್ರು. ಅಷ್ಟು ಒಳ್ಳೆ ವ್ಯಕ್ತಿ. ರಥಯಾತ್ರೆ ಮಾಡಿದಾಗ ಯಾಕೆ ಮಾಡಿದ್ರು ಅಂತ ಆಶ್ಚರ್ಯ ಆಯ್ತು ನನ್ಗೆ. ಆ ಕೆಟ್ಟ ಬಣ್ಣ, ರಥದಲ್ಲಿ ಕಲರ್ ಸೆನ್ಸೇ ಇರ್ಲಿಲ್ಲ. ಅಡ್ವಾಣಿ ರಥ ಸ್ಟೇಜ್ನಲ್ಲಿ ಮಾಡಿದ ಕಟ್ ಔಟ್ ಥರ ಇತ್ತು. ಅದೊಂದು ವಿಕೃತಿ..... ರಾಮ ಎಲ್ಲೆಲ್ಲ ಹೋಗಿದ್ನೊ, ಅದು ಪವಿತ್ರ ನಮ್ಗೆ. ರಾಮ ಹುಟ್ಟಿದ ಸ್ಥಳ ಅಲ್ಲ. ರಾಮ ಮಾರ್ಗ ಮುಖ್ಯ - ಯಾತ್ರಾ ಸ್ಥಳವಲ್ಲ. ತೀರ್ಥಯಾತ್ರೆ ಮುಖ್ಯ ನಮ್ಗೆ, ರಥಯಾತ್ರೆ ಅಂತ ಅದನ್ನು ತುಂಬ ಕೆಳಮಟ್ಟದಲ್ಲಿ ತೋರಿಸಿಬಿಟ್ರು. ಇತಿಹಾಸ ಮೊದಲ ಬಾರಿ ರಿಪೀಟ್ ಆದಾಗ ಟ್ರಾಜಿಡಿ (ದುರಂತ ನಾಟಕ) ಆಗತ್ತೆ, ಎರಡನೇ ಬಾರಿ ರಿಪೀಟ್ ಆದಾಗ ಕಾಮೆಡಿ ಆಗುತ್ತೆ. ನೋಡಿ, ರಥಯಾತ್ರೆ ಒಂದು ಕಾಮೆಡಿನೇ.... ಭಾರತೀಯ ಜನತೆ ಅಷ್ಟು ಮೂಲಭೂತವಾದಿಗಳಾಗಿಲ್ಲ. ಕ್ರಿಶ್ಚಿಯನ್ನರಿಗೆ ಒಂದೇ ಬೈಬಲ್, ಮುಸ್ಲೀಮರಿಗೆ ಒಂದೇ ಕುರಾನ್. ನಮ್ಗೆ ಹಾಗಲ್ಲ. ಎಷ್ಟೊಂದು ರಾಮಾಯಣಗಳು, ಎಷ್ಟೊಂದು ಪುರಾಣಗಳು ! ನಮ್ಮ ಕೃಷ್ಣ ಎಷ್ಟು ಲೆವೆಲ್‍ಗಳ ದೇವರು ! ತುಂಟ ಕೃಷ್ಣ, ಪ್ರಿಯಕರ ಕೃಷ್ಣ, ದಾರ್ಶನಿಕ ಕೃಷ್ಣ. ಈ ನಮನೀಯತೆ ಬೇರೆ ಯಾವ ಧರ್ಮದಲ್ಲಿದೆ? ಈ ಫೆಕ್ಸಿಬಿಲಿಟಿ (ನಮನೀಯತೆ) ಈ ಫ್ರೀ ಕಲ್ಪನೆ ಇಲ್ದಿದ್ರೆ ನಮ್ಮ ದೇಶದಲ್ಲಿ ಇಷ್ಟು ರಾಮಾಯಣಗಳೇ ಆಗ್ತಾ ಇರ್ಲಿಲ್ಲ....... ನಮ್ಮ ಸಂಸ್ಕೃತಿ ದೇವ್ರಿಗಿಂತ ಹೆಚ್ಚು ಸೃಷ್ಟಿಶೀಲ ಅನ್ನಿಸುತ್ತೆ. ಸೋಮನಾಥಪುರದಲ್ಲಿ ಪೂಜೆಯಿಲ್ಲ. ಆದ್ರೆ ಸಂಸ್ಕೃತಿಯ ದೃಷ್ಟಿಯಿಂದ ಎಲ್ಲ ಮತಧರ್ಮಗಳಿಗೆ ಸೇರಿದವ್ರು ಅಲ್ಲಿಗೆ ಹೋಗ್ತಾರೆ. ಸಂಸ್ಕೃತಿಯನ್ನ ರಾಜಕೀಕರಣ ಮಾಡುವವ್ರು 'ಭಾರತ್ ಭವನ'ದಲ್ಲಿ ತಾರತಮ್ಯ ಶುರುಮಾಡ್ತಾರೆ. ಇದು ಸರಿಯಿಲ್ಲ. ಕಲೆಯಲ್ಲಿ ತಾರತಮ್ಯ ಕೂಡದು. ಆದ್ರಿಂದ್ಲೇ ನಾನು ಸ್ಪರ್ಧೆಗೆ ವಿರೋಧಿ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸ್ಬೇಡಿ ಅನ್ನೋದು ಈ ಕಾರಣಕ್ಕಾಗಿಯೇ. ನೀವು ಭೀಮಸೇನ ಜೋಶಿ ಮತ್ತು ಕುಮಾರ ಗಂಧರ್ವರನ್ನು ಏನು ಕಂಪೇರ್ ಮಾಡ್ತೀರ?9

ಕಾರಂತರ ವೈಚಾರಿಕತೆಯನ್ನು ಅವರ ರಂಗಕೃತಿಗಳಲ್ಲೇ ಹುಡುಕಬೇಕು. ಜಗತ್ತಿನ ವಿವಿಧ ಭಾಷೆಗಳ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ಅವರು ನಿರ್ದೇಶನಕ್ಕೆ ಆಯ್ಕೆ ಮಾಡಿದ್ದಾರೆ. ರಂಗಕೃತಿಗಳ ಆಯ್ಕೆಯಲ್ಲಿ ಅವರು ಕೃತಿಯ ವೈಚಾರಿಕ-ಕಲಾತ್ಮಕ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿದ್ದಾರೆ. ರಾಜಕೀಯ ಪಕ್ಷವೊಂದರ ಸಿದ್ಧಾಂತಕ್ಕೆ ಬದ್ಧವಾಗಿದ್ದ ಬ್ರೆಕ್ಟ್‌ನ ನಾಟಕಗಳನ್ನು ಅವರು ನಿರ್ದೇಶಿಸಿಲ್ಲ. 'ಸಂಕ್ರಾಂತಿ' 'ಸತ್ತವರ ನೆರಳು' ನಾಟಕಗಳನ್ನು ಆಯ್ಕೆಮಾಡುವ ಕಾರಂತರು ಹಿನ್ನೋಟದ ವ್ಯಕ್ತಿಯಲ್ಲ. ರಂಗಭೂಮಿಯಲ್ಲಿರುವ ಪ್ರಜಾಸತ್ತಾತ್ಮಕ ಅಂಶಗಳನ್ನು ಅವರು ಗೌರವಿಸುತ್ತಾರೆ. ರಂಗಸಂಗೀತವನ್ನು ಕುರಿತ ಕಾಣ್ಕೆಯಲ್ಲಿ ಸಂಗೀತವಾಗಲಿ, ನಾಟಕವಾಗಲಿ ಸ್ಥಾವರವಾಗಬಾರದೆಂಬ ನಿಲುವಿದೆ. ಅವರಿಗೆ ವಾಸ್ತವಾದದ ಮಿತಿಗಳ ಅರಿವಿದೆ. ರಂಗಭೂಮಿಯ 'ಲಾಜಿಕ್'ಕ್ಕಿಂತಲೂ ಅವರ 'ಮ್ಯಾಜಿಕ್' ಅವರನ್ನು ವಿಶೇಷವಾಗಿ ಆಕರ್ಷಿಸಿದೆ. ಹಿಂದೀಯ ಪ್ರಾದೇಶಿಕ ಉಪಭಾಷೆಯಾದ ಬುಂದೇಲಿಯಲ್ಲಿ ಕಾಳಿದಾಸನ ನಾಟಕ ಮಾಡಿಸುವ, ಹೆಗ್ಗೋಡಿನಲ್ಲಿ ಮಕ್ಕಳ ನಾಟಕ ನಿರ್ದೇಶಿಸುವ ಕಾರಂತರಿಗೆ ಪ್ರಾದೇಶಿಕ ಅನನ್ಯತೆ ಮತ್ತು ಸಾಂಸ್ಕೃತಿಕ ವಿಕೇಂದ್ರೀಕರಣಗಳಲ್ಲಿ ನಂಬಿಕೆ ಇದೆ. ಕಾರಂತರು ಸಿದ್ಧಾಂತಗಳ ಚೌಕಟ್ಟಿನಲ್ಲಿ ಸಮಾಜವನ್ನು ನೋಡುವವರಲ್ಲ. ಸಂಗೀತ-ನಾಟಕ ಮಾಧ್ಯಮಗಳಲ್ಲಿನ ತನ್ನ ಕ್ಷೇತ್ರಕಾರ್ಯ ಅನುಭವದ ಮೂಲಕ ನಾಡಿನ ಸಾಂಸ್ಕೃತಿಕ ಸಾತತ್ಯವನ್ನು ಗ್ರಹಿಸುತ್ತಾರೆ; ತನ್ನ ಸೃಜನಶೀಲ ಕನಸುಗಳನ್ನು ಸಾಕಾರಗೊಳಿಸುತ್ತಾರೆ. ಸಾಂಸ್ಕೃತಿಕ ಕ್ಷೇತ್ರದ ನಿರ್ವಸಾಹತೀಕರಣದ ಚಳವಳಿಗೆ ತನ್ನ ರಂಗಕೃತಿ ಮತ್ತು ರಂಗಸಂಗೀತದ ಮೂಲಕ ಅವರು ಮೌಲಿಕ ಕೊಡುಗೆ ನೀಡಿದ್ದಾರೆ.

'ಮಹಾಭಾರತ'ದ ನಿರ್ದೇಶಕ ಪೀಟರ್ ಬ್ರೂಕ್‍ನ ಭಾರತಯಾತ್ರೆಯನ್ನು ಕಾರಂತರು ತಕರಾರುಗಳಿಲ್ಲದೆ ಸ್ವಾಗತಿಸಿದರು. ಪೀಟರ್ ಬ್ರೂಕ್‍ನ ಪ್ರಯೋಗದಲ್ಲಿ ನವವಸಾಹತುಶಾಹಿಯ ಕುತಂತ್ರವನ್ನು ಕಂಡ ಕೆ.ವಿ. ಸುಬ್ಬಣ್ಣ ಅದನ್ನು ತೀವ್ರವಾಗಿ ಪ್ರತಿಭಟಿಸಿದರು - ನನ್ನ ವಯಸ್ಸಿನವನಿಗೂ ತಾಯಿಯೆನಿಸುವ, ಜೆಕೆ ಸಾನ್ನಿಧ್ಯದಲ್ಲೇ ಸುಳಿದಾಡಿದ ಮತ್ತು ಮುಖ್ಯವಾಗಿ ಈ ಬೃಹತ್ ದೇಶದ ಸಾಂಸ್ಕೃತಿಕ ಸಲಹೆಗಾರಳಾಗಿದ್ದ ಪುಫುಲ್ ಜಯಕರರಂಥ ಪ್ರಸನ್ನ ಮಹಿಳೆ ಹಾಗೂ ನನ್ನ ಮಟ್ಟಿಗೆ ಬ್ರೂಕ್‍ಗಿಂತ ಮಿಗಿಲಾದ ಪ್ರತಿಭೆಯುಳ್ಳ ಪ್ರಿಯ ಬಿ.ವಿ. ಕಾರಂತರು ಮೊದಲಾದವರು ಬ್ರೂಕ್‍ರನ್ನು ಹಿಂಬಾಲಿಸಿ ತಿರುಗಿದ್ದು ಕಂಡು ನನ್ನ ತಲೆ ತಗ್ಗಿಹೋಗಿದೆ. 10

6
ಕಾರಂತಾಯಣದ ಫಲಶ್ರುತಿ ಏನು? - ಕಾರಂತರು ಭಾರತದ, ಕರ್ನಾಟಕದ ರಂಗಭೂಮಿಗೆ ನೀಡಿರುವ ಕೊಡುಗೆಯನ್ನು ಈ ಗ್ರಂಥದಲ್ಲಿ ವಿವಿಧ ವಿಮರ್ಶಕರು ಹೀಗೆ ಗುರುತಿಸಿದ್ದಾರೆ -
1. ರಂಗಕೃತಿಗಳ ಗುಣಮಟ್ಟ, ಸಂಖ್ಯಾಬಾಹುಳ್ಯ ಮತ್ತು ಭಾಷಾವೈವಿಧ್ಯಗಳ ದೃಷ್ಟಿಯಿಂದ ಕಾರಂತರು ಈ ಶತಮಾನದ, ಭಾರತದ ಪ್ರಧಾನ ನಿರ್ದೇಶಕರಲೊಬ್ಬರು.
2. 'ಹಯವದನ'ದ ಪದ್ಮಿನಿ ಕಪಿಲನ ದೇಹ ಮತ್ತು ದೇವದತ್ತನ ತಲೆಯನ್ನು ಜೋಡಿಸಿದಂತೆ ಕಾರಂತರು ಕಂಪೆನಿ ರಂಗಭೂಮಿಯ ವೈಭವ ಮತ್ತು ಹವ್ಯಾಸಿ ರಂಗಭೂಮಿಯ ಚಿಂತನೆಯನ್ನು ಒಗ್ಗೂಡಿಸಿದರು. ಪ್ರಸನ್ನ ಹೇಳುವಂತೆ, ಮ್ಯಾಜಿಕ್‍ನ ಕೊಂಡಿ ಕಳಚಿದ ಪರಂಪರೆಗೆ ಮತ್ತೆ ಮ್ಯಾಜಿಕ್‍ನ ಕೊಂಡಿಯನ್ನು ಜೋಡಿಸಿದರು.
3. ರಾಷ್ಟ್ರೀಯ ನಾಟಕಶಾಲೆಯ ವಿಕೇಂದ್ರೀಕರಣವನ್ನು ಆರಂಭಿಸಿದ ಕಾರಂತರು, ಭಾರತೀಯ ರಂಗಭೂಮಿಯ ಬಹುವಚನೀಯತೆಯನ್ನು ಗುರುತಿಸಿದರು.
4. ನಾಟ್ಯಶಾಸ್ತ್ರದ ಪರಂಪರೆಯ ಸಾತತ್ಯಕ್ಕೆ ಚಾಲನೆ ನೀಡಿ, ಭಾರತೀಯ ರಂಗಭೂಮಿಯನ್ನು ವಸಾಹತುಶಾಹಿ ರಂಗಭೂಮಿಯ ಪ್ರಭಾವದಿಂದ ಬಿಡಿಸಲು ಅವರು ಸದ್ದಿಲ್ಲದೆ ಪ್ರಯತ್ನಿಸಿದರು.
5. ಕರ್ನಾಟಕದಲ್ಲಿ ನಿರ್ದೇಶಕನಿಗೆ ಸ್ಥಾನಮಾನ ತಂದುಕೊಟ್ಟ ಕಾರಂತರು ತನ್ನ ಭಾಷಾಂತರ ಮತ್ತು ರಂಗಕೃತಿಗಳ ಮೂಲಕ ಕನ್ನಡ ರಂಗಭೂಮಿಗೆ ಅಖಿಲ ಭಾರತ ಮನ್ನಣೆ ದೊರಕಿಸಿದರ.
6. ಮಕ್ಕಳ ನಾಟಕ ಕ್ಷೇತ್ರದಲ್ಲಿ ಪವಾಡಗಳನ್ನು ಮಾಡಲು ಸಾಧ್ಯ ಎಂಬುದನ್ನು ಕಾರಂತರು ಸಾಧಿಸಿ ತೋರಿಸಿದರು.
7. ರಂಗಸಂಗೀತವನ್ನು ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಧ್ವನಿವಿನ್ಯಾಸವಾಗಿ ಬೆಳೆಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.
8. ಭಾರತದ ವಿವಿಧ ಜನಪದ ಸಂಪ್ರದಾಯಗಳಲ್ಲಿರುವ ರಂಗಭೂಮಿಯ ಸಾಧ್ಯತೆಗಳನ್ನು ಕಾರಂತರು ನಾಟಕಗಳಲ್ಲಿ ಅಳವಡಿಸಿಕೊಂಡರು.
9. ಎನ್.ಎಸ್.ಡಿ., ಭೋಪಾಲ 'ರಂಗಮಂಡಲ', ಮೈಸೂರಿನ 'ರಂಗಾಯಣ' ಮತ್ತು ಹತ್ತಾರು ನಾಟಕ ಕಮ್ಮಟಗಳ ಮೂಲಕ ರಂಗಭೂಮಿ ಶಿಕ್ಷಣಕ್ಕೆ ಕಾರಂತರು ಅಸಾಧಾರಣ ಕೊಡುಗೆ ನೀಡಿದ್ದಾರೆ.
10. ಹಿಂದೀ ನಾಟಕಕಾರ ಜಯಶಂಕರ ಪ್ರಸಾದರ ನಾಟಕಗಳಿಗೆ ರಂಗಭಾಷೆಯನ್ನು ತಂದುಕೊಟ್ಟ ಶ್ರೇಯಸ್ಸು ಕಾರಂತರದು (1-8).
ಕೆ.ವಿ. ಸುಬ್ಬಣ್ಣ ವಿವರಿಸಿರುವಂತೆ, ವ್ಯಕ್ತಿಪ್ರಜ್ಞೆಗಿಂತ ಹೆಚ್ಚಾಗಿ ಸಮುದಾಯ ಪ್ರಜ್ಞೆ; ಸಂಗೀತ ಮಾಧ್ಯಮದಲ್ಲಿರುವ ಥರದ ಅಮೂರ್ತ ಅಥವಾ ಸ್ವಚ್ಛಂದ ಅರ್ಥವಂತಿಕೆ; ಬೌದ್ಧಿಕಕ್ಕಿಂತ ಹೆಚ್ಚಾಗಿ ಆಂತರ್ಯದಿಂದ ಉದ್ಭವಿಸುವ ಸೃಜನಶೀಲತೆ - ಇವು ಸುಮಾರಾಗಿ ಕಾರಂತರ ರಂಗಕಾಯಕದ ನೆಲೆಗಟ್ಟು.

ಕಂಪೆನಿ ನಾಟಕಗಳು ವಿಕಾಸಕೊಳಿಸಿದ ರೀತಿಯಲ್ಲಿ 'ವಾಸ್ತವೇತರ' ಅಂಶಗಳನ್ನು ಒಳಗೊಂಡೂ, 'ನಾಟ್ಯಧರ್ಮಿ'ಯಾಗದೆ, 'ಲೋಕಧರ್ಮಿ'ಯಾಗಿ ಉಳಿಯುವ ಅಭಿನಯ ಶೈಲಿ; ಪಾತ್ರ ನಿರೂಪಣಕ್ಕಿಂತ ಸಮುದಾಯ ನಿರೂಪಣದ ಕಡೆ ಹೆಚ್ಚು ಆಸಕ್ತಿ; ರಂಜಕ ಸಂಕಲನ; ಸಾಮಾಜಿಕ ಸಾಮೀಪ್ಯಕ್ಕಾಗಿ ರಂಗಸ್ಥಲದಿಂದ ಹೊರಗೆ ಉಚಾಯಿಸಿಕೊಳ್ಳುವ ಪರಿ - ಇವು ಸ್ಥೂಲವಾಗಿ ಅವರ ರಂಗಕೃತಿಗಳ ರೂಪ.
ಕಂಪೆನಿ ನಾಟಕಗಳು ಆಧುನಿಕ ಭಾರತೀಯ ರಂಗಭೂಮಿಯನ್ನು ತಂದುನಿಲ್ಲಿಸಿದ ನೆಲೆಯಿಂದ ಹೊರಟು, ಅದನ್ನು ಕಲಾಸಂವಹನದ ಗಂಭೀರ ಮಾರ್ಗದಲ್ಲಿ ಮುಂದುವರಿಸಿಕೊಂಡುಹೋದದ್ದು ಮತ್ತು ಆ ಮೂಲಕ ಭಾರತೀಯ ರಂಗಭೂಮಿಯ ಇತಿಹಾಸವನ್ನು ಮುಂದಕ್ಕೆ ನಡೆಸಿದ್ದು; ಪ್ರಾಂತೀಯ ರಂಗಭೂಮಿಗಳ ಸಮುಚ್ಚಯವಾದ ರಂಗಸಂಕುಲವೇ ಭಾರತೀಯ ರಂಗಭೂಮಿ ಅನ್ನುವ ಸಮರ್ಪಕ ಕಲ್ಪನೆಯನ್ನು ದೃಢಗೊಳಿಸಿದ್ದು ಇವು ಕಾರಂತರ ವಿಶಿಷ್ಟ ಸಾಧನೆಗಳೆನ್ನಬಹುದು.

7
ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಕು.ಶಿ. ಹರಿದಾಸ ಭಟ್ಟರು ಬಿ.ವಿ. ಕಾರಂತರ ನಿರ್ದೇಶನದಲ್ಲಿ ನಾಟಕ ಕಮ್ಮಟವೊಂದನ್ನು 1973ರಲ್ಲಿ ಏರ್ಪಡಿಸಿದ್ದರು. ಈ ಕಮ್ಮಟದಲ್ಲಿ ನಾನು ಕಾರಂತರ ಶಿಷ್ಯನಾಗಿದ್ದೆ (ನೋಡಿ 2-2). ಈ ಕಮ್ಮಟ ಉಡುಪಿಯಲ್ಲಿ ನಾವು ಕೆಲವರು ಗೆಳೆಯರು ಒಟ್ಟು ಸೇರಿ 'ರಥಬೀದಿ ಗೆಳೆಯರು' (ಸ್ಥಾಪಕ ಕಾರ್ಯದರ್ಶಿ - ಕೆ.ಎಸ್. ಕೆದ್ಲಾಯ) ಎಂಬ ನಾಟಕ ಸಂಘಟನೆಯನ್ನು ಸ್ಥಾಪಿಸಲು ಪ್ರೇರಣೆ ನೀಡಿತು. ಬಿ.ವಿ. ಕಾರಂತರನ್ನು ಕುರಿತ ಈ ಗ್ರಂಥ ಗುರುಋಣ ತೀರಿಸುವ ನನ್ನ ಒಂದು ಕಿರುಪ್ರಯತ್ನ.

'ರಥಬೀದಿ ಗೆಳೆಯರು' ಸಂಘಟನೆ 1986ರಲ್ಲಿ ಏರ್ಪಡಿಸಿದ್ದ ಬಿ.ವಿ. ಕಾರಂತರನ್ನು ಕುರಿತ ವಿಚಾರಗೋಷ್ಠಿಯೇ ಈ ಗ್ರಂಥಸಂಪಾದನೆಗೆ ತೊಡಗಲು ನನಗೆ ಮೊದಲ ಪ್ರೇರಣೆ.

ಕೆ.ವಿ. ಸುಬ್ಬಣ್ಣ, ಡಾ| ಯು.ಆರ್. ಅನಂತಮೂರ್ತಿ , ಸುರೇಶ ಅವಸ್ಥಿ, ಜಿ.ವಿ. ಅಯ್ಯರ್, ಪ್ರೇಮಾ ಕಾರಂತ, ಬಿ.ಆರ್. ನಾಗೇಶ್, ಡಾ| ವಿಜಯಾ, ಈಶ್ವರಯ್ಯ, ಗುರುರಾಜ ಮಾರ್ಪಳ್ಳಿ, ಪು.ತಿ.ನ. ಇವರು ಈ ಗ್ರಂಥಕ್ಕಾಗಿ ಲೇಖನಗಳನ್ನು ನೀಡಿದ್ದಾರೆ. ಕು.ಶಿ. ಹರಿದಾಸ ಭಟ್, ಡಾ| ಮರುಳಸಿದ್ಧಪ್ಪ, ಕೆ.ವಿ. ಅಕ್ಷರ, ನ.ರತ್ನ, ಹಾಸಾಕೃ, ಎ.ಆರ್. ನಾಗಭೂಷಣ, ಸುರೇಶ ಬಿ., ಬಿ. ಭಾಸ್ಕರ ರಾವ್, ಟಿ.ಎನ್. ಸೀತಾರಾಂ, ಜಿ.ಎನ್. ರಂಗನಾಥ್ ರಾವ್ - ಇವರೆಲ್ಲ ತಮ್ಮ ಪ್ರಕಟಿತ ಲೇಖನಗಳನ್ನು ಈ ಗ್ರಂಥದಲ್ಲಿ ಮುದ್ರಿಸಲು ಅನುಮತಿ ನೀಡಿದ್ದಾರೆ. ವೈದೇಹಿ, ಕೆ. ಎಸ್. ಕೆದ್ಲಾಯ, ಡಾ| ನಿ. ಮುರಾರಿ ಬಲ್ಲಾಳ್, ನಟರಾಜ ದೀಕ್ಷಿತ್ ಮತ್ತು ಮಾಧವಿ ಭಂಡಾರಿಯವರು ಈ ಗ್ರಂಥಕ್ಕಾಗಿ ಒಂದೊಂದು ಲೇಖನವನ್ನು ಭಾಷಾಂತರಿಸಿ ಕೊಟ್ಟಿದ್ದಾರೆ.

ಬಿ.ವಿ. ಕಾರಂತ, ಪ್ರಸನ್ನ, ಕೀರ್ತಿನಾಥ ಕುರ್ತಕೋಟಿ ಅವರ ಉಪನ್ಯಾಸಗಳನ್ನು ಧ್ವನಿಸುರುಳಿಯಿಂದ ಬರೆದು ಕೊಟ್ಟವರು ಪಲ್ಲವಿ ಕೆ.ಎಸ್. 'ಬಿ.ವಿ. ಕಾರಂತ' ಪುಸ್ತಕದ ಕೆಲಸ ಎಲ್ಲಿಯವರೆಗೆ ಬಂತು? ಎಂದು ವಿಚಾರಿಸುತ್ತ ಪ್ರೋತ್ಸಾಹಿಸಿದವರು ವೈದೇಹಿ, ಬಿ.ಆರ್. ನಾಗೇಶ್ ಮತ್ತು ಬೋಳಂತಕೋಡಿ ಈಶ್ವರ ಭಟ್.

ಮುಖಚಿತ್ರಕ್ಕಾಗಿ ಬಿ.ವಿ. ಕಾರಂತರ ಭಾವಚಿತ್ರ ನೀಡಿದವರು ಕೆ.ಜಿ. ಸೋಮಶೇಖರ್, ಕಲಾವಿದ ಮೋಹನ ಸೋನ ಮುಖಪುಟದ ವಿನ್ಯಾಸ ರಚಿಸಿದ್ದಾರೆ. ಕಂಪ್ಯೂಟರ್ ಟೈಪ್‍ಸೆಟ್ ತಯಾರಿಸಿದವರು ಉಡುಪಿಯ ಕಾರ್ತಿಕ್ ಕಂಪ್ಯೂಟರ್ಸ್‍ನವರು. ಮುದ್ರಕರು ಪುತ್ತೂರಿನ ರಾಜೇಶ್ ಪವರ್ ಪ್ರೆಸ್‍ನವರು. ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷ ಬೋಳಂತಕೋಡಿ ಈಶ್ವರಭಟ್ಟರು ಬಿ.ವಿ. ಕಾರಂತರನ್ನು ಕುರಿತ ಅಭಿಮಾನದಿಂದ ಇದನ್ನು ಪ್ರಕಟಿಸುತ್ತಿದ್ದಾರೆ. ಡಾ| ಸುಬ್ಬಣ್ಣಯ್ಯ ಕೋಟಗದ್ದೆ, ಮನೋರಮಾ ಹೆಜಮಾಡಿ ಪ್ರೂಫ್ ತಿದ್ದುವುದರಲ್ಲಿ ನೆರವು ನೀಡಿದ್ದಾರೆ.

ಪ್ರೊ| ಹೆರಂಜೆ ಕೃಷ್ಣ ಭಟ್, ಬಿ. ಕೃಷ್ಣ ಕಾರಂತ, ಎನ್. ಗುರುರಾಜ್, ಶ್ರೀಕಾಂತ ಯಲ್ಲಾಪುರ, ವೇದವ್ಯಾಸ ಭಟ್, ಐ.ಕೆ. ಬೊಳುವಾರು, ಜಿ.ಪಿ. ಬಸವರಾಜು, ಸೂ. ಸುಬ್ರಹ್ಮಣ್ಯಂ, ಬನ್ನಂಜೆ ಗೋವಿಂದಾಚಾರ್ಯ, ನಿತ್ಯಾನಂದ ಪಡ್ರೆ, ಜಯತೀರ್ಥ ಜೋಶಿ, ಎಂ.ಜಿ. ರಾವ್, ಅಲಕಾ ಎಂ.ಎಚ್., ಮಾನಸಿ ಎಂ.ಎಚ್., ಶಾರದಾ ಉಪಾಧ್ಯ, ಜಯಾ ಭಟ್ - ಇವರೆಲ್ಲ ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದ್ದಾರೆ.

ಇವರೆಲ್ಲರ ಉಪಕಾರ, ಸಹಾಯ, ಪ್ರೋತ್ಸಾಹಗಳನ್ನು ನಾನು ಮರೆಯಲಾರೆ.

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸನ್ತ: ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರ ಪ್ರತ್ಯಯನೇಯ ಬುದ್ಧಿ:

- ಕಾಳಿದಾಸ (ಮಾಲವಿಕಾಗ್ನಿಮಿತ್ರ)
ಟಿಪ್ಪಣಿಗಳು

1. ಪಿ.ಲಂಕೇಶ್ - 'ಟೀಕೆ-ಟಿಪ್ಪಣಿ', ಬೆಂಗಳೂರು, 1991 - ಮಧ್ಯಪ್ರದೇಶದಲ್ಲಿ ಬಿ.ವಿ. ಕಾರಂತ - ಪುಟ - 50.
2. ಬಿ.ವಿ. ಕಾರಂತ - 'ಭಾರತ್ ಭವನವನ್ನು ಕಲಾವಿದರಿಗೇ ಬಿಡಬೇಕು', ತರಂಗ ವಾರಪತ್ರಿಕೆ, ಮಣಿಪಾಲ, ಸಂ. ಸಂತೋಷ ಕುಮಾರ ಗುಲ್ವಾಡಿ, ಜನವರಿ 20, 1991.
3. (ಸಂ.) ಟಿ.ಪಿ. ಅಶೋಕ - ಕೆ.ವಿ. ಸುಬ್ಬಣ್ಣನವರ ಆಯ್ದ ಬರಹಗಳು, ಹಂಪಿ, 1992 - ಬ್ರೂಕ್ ಮಹಾಶಯನ ಆಧುನಿಕ ಅಶ್ವಮೇಧ, ಪುಟ - 49.

ಮುರಳೀಧರ ಉಪಾಧ್ಯ ಹಿರಿಯಡಕ (mhupadhya@gmail.com)
ಬಿ.ವಿ. ಕಾರಂತ (1996)
ಪ್ರ- ಕರ್ನಾಟಕ ಸಂಘ, ಪುತ್ತೂರು-574201, ದ.ಕ.
ಈ ಗ್ರಂಥಕ್ಕಾಗಿ ಬರೆದ ಸಂಪಾದಕೀಯ.

No comments:

Post a Comment