stat Counter



Thursday, October 14, 2010

Haji Abdulla ಸಾಹೇಬ್ (ಹಾಜಿ ಅಬ್ದುಲ್ಲಾ ಸಾಹೇಬ್)

06-Kan-10
Haji Abdulla Saheb
ಹಾಜಿ ಅಬ್ದುಲ್ಲಾ ಸಾಹೇಬ್
- ಮುರಳೀಧರ ಉಪಾಧ್ಯ ಹಿರಿಯಡಕ

ಉಡುಪಿಯ ಕಾರ್ಪೋರೇಶನ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಸಾಹೇಬರು (1882-1935) 'ಉಡುಪಿಯ ಅಕ್ಬರ' ಎಂದು ಪ್ರಸಿದ್ಧರು. ಉಡುಪಿಯ ಶ್ರೀಮಂತ ವರ್ತಕ ಖಾಸಿಮ್ ಬುಡಾನ್ ಸಾಹೇಬರ ಮಗ. ಹಾಜಿ ಅಬ್ದುಲ್ಲಾ ಸಾಹೇಬರು ಸ್ಥಾಪಕ ಅಧ್ಯಕ್ಷರಾಗಿದ್ದ ಕಾರ್ಪೋರೇಶನ್ ಬ್ಯಾಂಕ್ 1906ರ ಮಾರ್ಚ್ 16ರಂದು, ಅವರು ಬಾಡಿಗೆಯಾಗಿ ನೀಡಿದ್ದ ಅವರ ಸ್ವಂತ ಮನೆಯ ಒಂದು ಕೋಣೆಯಲ್ಲಿ ಕಾರ್ಯಾರಂಭಮಾಡಿತು. ಸ್ವದೇಶಿ ಚಳುವಳಿಯಿಂದ ಪ್ರೇರಣೆ ಪಡೆದು ಆರಂಭಗೊಂಡ ಕಾರ್ಪೋರೇಶನ್ ಬ್ಯಾಂಕ್ ಆರಂಭದಿಂದಲೂ ಜಾತ್ಯತೀತವಾಗಿತ್ತು. ಅಬ್ದುಲ್ಲಾ ಸಾಹೇಬರಿಗೆ ಸಹಕಾರಿ ಚಳುವಳಿಯಲ್ಲಿ ಆಸಕ್ತಿ ಇತ್ತು. ಅವರು ಸ್ಥಾಪಕ ಅಧ್ಯಕ್ಷರಾಗಿದ್ದ ಉಡುಪಿ ಕೋ-ಆಪರೇಟಿವ್ ಸೊಸೈಟಿ 1912ರಲ್ಲಿ ಆರಂಭಗೊಂಡಿತು. (ಈಗಿನ ಉಡುಪಿ ಕೋ-ಆಪರೇಟಿವ್ ಬ್ಯಾಂಕ್)
1909ರಲ್ಲಿ ಉಡುಪಿಯ ಬನ್ನಂಜೆಯಲ್ಲಿ ಆರಂಭಗೊಂಡ ದಲಿತರ ಶಾಲೆಗಾಗಿ ಅಬ್ದುಲ್ಲಾ ಸಾಹೇಬರು ಒಂದು ಕಟ್ಟಡವನ್ನೂ ಒಂದು ಎಕ್ರೆ ಸ್ಥಳವನ್ನೂ ದಾನ ಮಾಡಿದರು. 1912ರಲ್ಲಿ ಹಜ್ ಯಾತ್ರೆ ಮಾಡಿದ ಸಾಹೇಬರು, ಬರುವಾಗ ಮಾರಿಷಿಯಸ್ ದ್ವೀಪಕ್ಕೆ ಭೇಟಿ ನೀಡಿದರು. ಅವರು ದಕ್ಷಿಣ ಕನ್ನಡದ ರೈತರಿಗೆ ಮಾರಿಷಿಯಸ್ ನ ಕಬ್ಬಿನ ತಳಿಯನ್ನು ಪರಿಚಯಿಸಿದರು. ಅಬ್ದುಲ್ಲಾ ಸಾಹೇಬರು 1917ರಲ್ಲಿ ಕುಂದಾಪುರ ತಾಲೂಕು ಬೋರ್ಡ್ 1918ರಲ್ಲಿ ಉಡುಪಿ ತಾಲೂಕು ಬೋರ್ಡ್‌ನ ಅಧ್ಯಕ್ಷರಾದರು. ಪಶ್ಚಿಮ ಕರಾವಳಿ ಮತ್ತು ನೀಲಗಿರಿ ಭೂಮಾಲಿಕರ ಪ್ರತಿನಿಧಿಯಾಗಿ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ಸರಕಾರ ಅವರನ್ನು ನೇಮಿಸಿತು (1919). ಅಬ್ದುಲ್ಲಾ ಸಾಹೇಬರು 1926ರಲ್ಲಿ ಮದ್ರಾಸ್ ಶಾಸನ ಸಭೆಗೆ ಅವಿರೋಧವಾಗಿ ಆಯ್ಕೆಯಾದರು. 1920ರಲ್ಲಿ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಉಡುಪಿ ಮುನಿಸಿಪಾಲಿಟಿಯ ಪ್ರಥಮ ಅಧ್ಯಕ್ಷರಾದರು (1935).
ಉಡುಪಿಯ ಕವಿ ಮುದ್ದಣ ರಸ್ತೆಯಲ್ಲಿರುವ ಆಸ್ಪತ್ರೆಗೆ (ಈಗಿನ ಮಹಿಳಾ ಆಸ್ಪತ್ರೆ) ಸ್ಥಳದಾನ ಮಾಡಿದವರು ಹಾಜಿ ಅಬ್ದುಲ್ಲಾ ಸಾಹೇಬರು. ಈ ಆಸ್ಪತ್ರೆ ಅಬ್ದುಲ್ಲಾ ಸಾಹೇಬರ ಅಜ್ಜ ಬುಡಾನ್ ಸಾಹೇಬರ ಹೆಸರಿನಲ್ಲಿದೆ. ಉಡುಪಿಯ ವಿ.ಜೆ.ಯು. ಕ್ಲಬ್, ಅಂಜುಮಾನ್ ಉರ್ದು ಶಾಲೆ, ಅಂಜುಮಾನ್ ಅತಿಥಿಗೃಹಗಳು ಸ್ಥಳದಾನಕ್ಕಾಗಿ ಅಬ್ದುಲ್ಲಾ ಸಾಹೇಬರಿಗೆ ಋಣಿಯಾಗಿವೆ. ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ, ಬನಾರಸ್ ಹಿಂದೂ ಕಾಲೇಜಿಗೆ, ಮಂಗಳೂರಿನ ಮಹಿಳಾ ಆಸ್ಪತ್ರೆಗೆ (1917) ಅಬ್ದುಲ್ಲಾ ಸಾಹೇಬರು ದಾನ ನೀಡಿದ್ದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ತನ್ನ ತಂದೆ ಖಾಸಿಮ್ ಸಾಹೇಬರ ಸ್ಮಾರಕ ದತ್ತಿನಿಧಿಯೊಂದನ್ನು ಸ್ಥಾಪಿಸಿದರು (1901).
ಉಡುಪಿಯ ಕೃಷ್ಣಮಠದ ಪರ್ಯಾಯಕ್ಕೆ, ಲಕ್ಷದೀಪೋತ್ಸವಕ್ಕೆ ಅಬ್ದುಲ್ಲಾ ಸಾಹೇಬರು ನೀಡುತ್ತಿದ್ದ ಕೊಡುಗೆ, ಬಡವರಿಗೆ ನೀಡುತ್ತಿದ್ದ ದಾನ, ಸರ್ವಧರ್ಮಗಳ ಹಬ್ಬಗಳನ್ನು ಆಚರಿಸುತ್ತಿದ್ದ ರೀತಿ - ಇವುಗಳ ಕುರಿತು ದಂತಕತೆಗಳಿವೆ. 1911ರಲ್ಲಿ ನಡೆದ ದಿಲ್ಲಿ ದರ್ಬಾರಿನಲ್ಲಿ ಬ್ರಿಟಿಷ್ ಸರಕಾರ ಅಬ್ದುಲ್ಲಾ ಸಾಹೇಬರಿಗೆ 'ದಿಲ್ಲಿ ದರ್ಬಾರ್ ಪದಕ' ನೀಡಿ ಗೌರವಿಸಿತು. 1909ರಲ್ಲಿ 'ಖಾನ್ ಸಾಹೇಬ್' ಬಿರುದನ್ನು ನೀಡಿತು.
ಕೊಡುಗೈ ದಾನಿಯಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬರು ಔದಾರ್ಯದ ಉರುಳಲ್ಲಿ ಸಿಲುಕಿದರು. ಅವರ ವ್ಯಾಪಾರ ಸಂಸ್ಥೆ ದಿವಾಳಿಯಾಯಿತು. ಬ್ಯಾಂಕಿನಿಂದ ಪಡೆದ ಸಾಲ ತೀರಿಸಲಾಗದೆ ಅವಮಾನ ಅನುಭವಿಸಿದ ಅಬ್ದುಲ್ಲಾ ಸಾಹೇಬರು 1935 ಆಗಸ್ಟ್ 12ರಂದು ಆತ್ಮಹತ್ಯೆ ಮಾಡಿಕೊಂಡರು. ಹಾಜಿ ಅಬ್ದುಲ್ಲಾ ಸಾಹೇಬರು ಕಾರ್ಪೋರೇಶನ್ ಬ್ಯಾಂಕ್ ಎಂಬ ನಿರಂತರ ಚಿಗುರುವ ಅಶ್ವತ್ಥವನ್ನು ನೀಡಿ ಚಿರಂಜೀವಿಯಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ ನೋಡಿ:
1. ಹಾಜಿ ಅಬ್ದುಲ್ಲಾ ಸಾಹೇಬ್ (2006)
ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಕಾರ್ಪೋರೇಶನ್ ಬ್ಯಾಂಕ್, ಪಾಂಡೇಶ್ವರ, ಮಂಗಳೂರು 575 001

2. Haji Abdullah Saheb (2006)
Muraleedhara Upadhya Hiriadka
Translated by Dr. M. Prabhakara Joshi
Pub.- Corporation Bank, Pandeshwara, Mangalore 575 001

No comments:

Post a Comment