ಶಾಂತಾರಾಮ ಸೋಮಯಾಜಿಯವರ ’ಕೆಂಪು ಹೂವು’ ಕಥಾಸಂಕಲನ ೧೯೭೨ರಲ್ಲು ಪ್ರಕಟವಾಯಿತು.೧೯೭೯ರಿಂದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂಜಿನಿಯರಿಂಗ್ ಪ್ರೊಫೆಸರ್ ಆಗಿ ನೆಲೆಸಿರುವ ಡಾ| ಸೋಮಯಾಜಿಯವರು ೧೯೯೧-೯೨ರ ಅವಧಿಯಲ್ಲಿ ಬರೆದಿರುವ ಕತೆಗಳು ’ಮಣ್ಣಿನ ಬಳೆ ಮತ್ತು ಇತರ ಕತೆಗಳು’ ಸಂಕಲನದಲ್ಲಿ ಪ್ರಕಟವಾಗಿವೆ. ಈ ಸಂಕಲನದಲ್ಲಿ ಸೋಮಯಾಜಿಯವರ ಸೃಜನಶೀಲ ಆರೋಹರಣಕ್ಕೆ ರುಜುವಾತು ನೀಡುವ ಹನ್ನೊಂದು ಕತೆಗಳಿವೆ. ’ಮಣ್ಣಿನ ಬಳೆ’ ಸೋಮಯಾಜಿಯವರ ಪ್ರಾತಿನಿಧಿಕ ಕತೆ. ಈ ಕತೆಯ ನಿರೂಪಕನ ಪತ್ನಿ ಕ್ಯಾನ್ಸರ್ ರೋಗಿಯಾಗಿ ಸಾವಿನ ದವಡೆಯಲ್ಲಿದ್ದಾಳೆ. ಅವಳ ಮಗ ರವಿ, ಕೌಟುಂಬಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದ ಅಸ್ವಸ್ಥ ಯುವಕ.ಅವನಿಗೆ ತನ್ನ ತಾಯಿಯ ಶವಸಂಸ್ಕಾರಕ್ಕಿಂತ ಗೆಳತಿಯೊಡನೆ ಮಜಾ ಮಾಡುವುದು ಮುಖ್ಯವಾಗುತ್ತದೆ. ಈ ಕತೆಯಲ್ಲಿ ಬರುವ ರೋಪೀಟಾ ಎಂಬ ಜಲದೇವತೆ, ಕತೆಯ ನಿರೂಪಕ ತನ್ನ ಸಂಕಟದಲ್ಲಿ ಕಾಣುವ ಕನಸುಗಳ ಸಂಕೇತ ಅಡಿಗರ ’ವರ್ಧಮಾನ’ ಕವನದಲ್ಲಿರುವ ತಂದೆಯಂತೆ ಈ ಕತೆಯ ನಾಯಕ ತನ್ನ ಮಗನ ವರ್ತನೆಯನ್ನು ಕಂದು ಕಂಗಾಲಾಗಿದ್ದಾನೆ.
’ಪಿಂಡೋಸೀಟ್’ ಮನುಷ್ಯನ ಸ್ವಾರ್ಥ ಮತ್ತು ವ್ಯವಸ್ಥೆಯ ಕ್ರೌರ್ಯಗಳನ್ನು ಧ್ವನಿಸುವ ಕಥೆ. ಅಮಾನುಷವಾಗುತ್ತಿರುವ, ಯಾಂತ್ರಿಕವಾಗುತ್ತಿರುವ ಮನುಷ್ಯ ಸಂಬಂಧಗಳು ಕತೆಗಾರ ಸೋಮಯಾಜಿಯವರನ್ನು ಕಾಡುತ್ತವೆ.’ಅಸಹ್ಯವೆನ್ನು’ ಈ ಸಂಕಲನದ ಇನ್ನೊಂದು ಒಳ್ಳೆಯ ಕತೆ. ’ಪವಾಡ ಮಾವಿನಮರ’ ಸ್ಥಳ ಪುರಾಣವೊಂದನ್ನು ಜನಪದ ನಂಬಿಕೆಗಳ ಅಧ್ಯಯನ ತಂತ್ರದಲ್ಲಿ ನಿರೂಪಿಸುವ ಕಥೆ.ಮಾಂತ್ರಿಕ ವಾಸ್ತವಿಕತೆ, ಫ್ಯಾಂಟಿಸಿ ಮತ್ತು ಜನಪದ ಕಥನ ತಂತ್ರಗಳನ್ನು ಇತ್ತೀಚೆಗೆ ಕೆಲವು ಕನ್ನಡ ಕತೆಗಾರರು ಬಳಸುತ್ತಿದ್ದಾರೆ. ಸೋಮಯಾಜಿಯವರು ಈ ಕಥನ ತಂತ್ರಗಳ ಪ್ರಯೋಗಗಳನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ’ನಾಟಕ’ ಎರಡು ಮುದ್ದು ಕಣ್ಣುಗಳು’ ’ಒಂದು ಹಂದಿಯ ಕತೆ’ ’ಖಾಲಿ ಲಕೋಟೆ’ ಕತೆಗಳಲ್ಲಿ ಕತೆಗರರು ಏನು ಹೇಳುತ್ತಿದ್ದಾರೆ ಎನ್ನುವುದರಷ್ಟೆ ಹೇಗೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.
ಕತೆಗಾರ ಸೋಮಯಾಜಿಯವರು ಮುನ್ನುಡಿಯಲ್ಲಿ ತನ್ನ ಕತೆಗಳ ಧ್ವನಿಯನ್ನು ವಿವರಿಸಿದ್ದಾರೆ. ಅವರು ಬಳಸುವ ಸಂಕೇತ, ತಂತ್ರಗಳು ಸಂವಹನದ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ. ಜೀವನದ ಅರ್ಥಪೂರ್ಣ ಸನ್ನಿವೇಶಗಳ ಮುಂಚುನೋಟ ನೀಡುವ ಸಣ್ಣಕತೆ ತನ್ನ ಧ್ವನಿ ಶಕ್ತಿಯಿಂದ ಜೀವನದ ಸಮಗ್ರ ನೋಟ ನೀಡುವುದು ಸಾಧ್ಯ ಎಂಬ ಕತೆಗಾರಿಕೆಯ ಪವಾಡ ರಹಸ್ಯ ಸೋಮಯಾಜಿಯವರಿಗೆ ಗೊತ್ತು. ಅಮೆರಿಕದಲ್ಲಿರುವ ಈ ಕನ್ನಡ ಕತೆಗಾರರಿಂದ ಅನಿವಾಸಿ ಭಾರತೀಯರ ಬದುಕನ್ನು ಚಿತ್ರಿಸುವ ಇನ್ನಷ್ಟು ಆಳ-ಎತ್ತರದ ಕತೆಗಳನ್ನು ನಾವು ನಿರೀಕ್ಷಿಸಬಹುದು.
ಮಣ್ಣಿನ ಬಳೆ ಮತ್ತು ಇತರ ಕತೆಗಳು
ಲೇ: ಶಾಂತಾರಾಮ್ ಸೋಮಯಾಜಿ
ಪ್ರ:ಲೋಹಿಯಾ ಪ್ರಕಾಶಾನ, ’ಕ್ಷಿತಿಜ’
ಕಪ್ಪಗಲ್ ರಸ್ತೆ, ಗಾಂಧೀನಗರ,
ಬಳ್ಳಾರಿ-೫೮೩೧೦೩.
ಮೊದಲ ಮುದ್ರಣ
ಮುರಳೀಧರ ಉಪಾಧ್ಯ, ಹಿರಿಯಡಕ
No comments:
Post a Comment