stat CounterSunday, December 19, 2010

Aagase Baagilu - collections of poems by Girija (Hegade) Gaonkar

ಅಗಸೆ ಬಾಗಿಲು
ಗಿರಿಜಾ (ಹೆಗಡೆ) ಗಾಂವ್ಕರ್

- ಮುರಳೀಧರ ಉಪಾಧ್ಯಾಯ ಹಿರಿಯಡಕ


ಶ್ರೀಮತಿ ಗಿರಿಜಾ (ಹೆಗಡೆ) ಗಾಂವ್ಕರ ಅವರ ಮೊದಲ ಸಂಕಲನ 'ಅನಾವರಣ' ಪ್ರಕಟವಾದದ್ದು 1997ರಲ್ಲಿ.  ಮೊದಲ ಸಂಕಲನದ ಲೇಖಕರ ಮಾತಿನಲ್ಲಿ ಅವರು ಬರೆದಿರುವಂತೆ 'ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಮಲಗಿರುವ ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ನಾನು ಚಿಕ್ಕಂದಿನಿಂದಲೂ ಹೆಣ್ಣು-ಗಂಡಿನ ಬಗೆಗೆ ತೋರುವ ತಾರತಮ್ಯದ ವಿಚಾರವಾಗಿ ಚಿಂತಿಸುತ್ತ, ಹೀಗೇಕೆ? ಎಂಬ ಪ್ರಶ್ನೆಯೊಂದಿಗೇ ಬೆಳೆದದ್ದು! ನನ್ನಲ್ಲಿಯ ಬರಹಗಾರ್ತಿ ಸ್ವಲ್ಪಮಟ್ಟಿಗೆ ಜಾಗೃತಳಾಗಿದ್ದು ಕಥೆ
ಗಾರ್ತಿಯಾಗಿ, ನಂತರದಲ್ಲೇ ಕಾವ್ಯಕನ್ನಿಕೆಯ ಸೆರಗ ಹಿಡಿದದ್ದು.

'ದೊಡ್ಡವಳಾದ ಕರ್ಮ' 'ಸ್ಥಿತಿ' 'ಈ ಹುಡುಗಿಯರೇ ಹೀಗೆ!' 'ಕಟುವಾಸ್ತವಕ್ಕೆ ಕನಸು ಬೆಂದಾಗ' -ಇವು 'ಅನಾವರಣ' ಸಂಕಲನದಲ್ಲಿ ನನಗೆ ಇಷ್ಟವಾದ ಕವನಗಳು.  ಪುರುಷಪ್ರಧಾನ ಸಮಾಜದ ಲಿಂಗಾಧಾರಿತ ಅಸಮಾನತೆಯಿಂದಾಗಿ ಅಸಹಾಯಕರಾಗಿರುವ ಹೆಣ್ಣುಮಕ್ಕಳ ಅವಸ್ಥೆ ಈ ಕವನಗಳಲ್ಲಿವೆ. 'ಕಟುವಾಸ್ತವಕ್ಕೆ ಕನಸು ಬೆಂದಾಗ' ಕವನದ ಸಾಲುಗಳಿವು -

"ಇದು ಕವನವಲ್ಲ ಗೆಳತಿ
ಹಂಬಲದ ಹೆಮ್ಮರಕೆ ಬಿದ್ದ
ಕೊಡಲಿ ಏಟಿನ ಸುತ್ತಸಿಡಿದ
ಚೂರು ಚಕ್ಕೆ ಚೂರುಗಳು !
ಎಣ್ಣೆ ಇಲ್ಲದೇ ಆರಿದ ದೀಪಕೆ
ಉಳಿದ ಸುಟ್ಟು ಕರಕಾದ
ಬಿತ್ತಿಯ ಆ ಹತ್ತಿ ಎಳೆಗಳು

'ಅನಾವರಣ' (1997) ಪ್ರಕಟವಾಗಿ ಹದಿಮೂರು ವರ್ಷಗಳ ಅನಂತರ 'ಅಗಸೆಬಾಗಿಲು' ಸಂಕಲನ ಪ್ರಕಟವಾಗುತ್ತಿದೆ.  'ಅಗಸೆ ಬಾಗಿಲಿ'ನಲ್ಲಿ 34 ಕವನಗಳಿವೆ.  'ಮ್ಯಾಕ್‍ಬೆತ್ ಮತ್ತು ಸಾವು', 'ಅಂತರ' 'ನೆನಪಿದೆಯಾ', 'ಉಪಮೆ', 'ನಿರ್ಣಯ' - ಇಂಥ ಹಲವು ಅಸಾಧಾರಣ ಕವನಗಳು ಈ ಸಂಕಲನದಲ್ಲಿವೆ.

ಅಶ್ವತ್ಥಾಮ ಚಿರಂಜೀವಿಯಾಗಿರುವ ಹಾಗೆ ಮ್ಯಾಕ್‍ಬೆತ್ ಕೂಡ ಚಿರಂಜೀವಿಯಾಗಿದ್ದಾನೆ.  'ಎಲ್ಲರೊಳಗೂ ಒಮ್ಮೆಯಾದರೂ ಹುಟ್ಟುತ್ತೀಯ ಮತ್ತು ಸಾಯುತ್ತೀಯ!' ('ಮ್ಯಾಕ್‍ಬೆತ್ ಮತ್ತು ಸಾವು') ಎನ್ನುತ್ತಾರೆ ಕವಯಿತ್ರಿ.  'ಅಂತರ' 'ನಿರ್ಣಯ' ಕವನಗಳಲ್ಲಿ ಕವಯಿತ್ರಿ ಸ್ತ್ರೀಲೋಕದೊಳಗಿನ ಆರ್ಥಿಕ ಅಸಮಾನತೆಯ ಕುರಿತು ಚಿಂತಿಸುತ್ತಿದ್ದಾರೆ.  'ಅಂತರ' ಕವನದಲ್ಲಿ 'ಬೆಳ್ಳಂಬೆಳಗಿನ ಬಂಗಾರದ ಬಿಸಿಲಿಗೆ ಅದೇ ಬಣ್ಣದ ಕೆನ್ನೆಯ ಹುಡುಗಿ ಕಪ್ಪು ಕೂದಲು ಒರೆಸುತ್ತ ನಿಂತಿದ್ದಾಳೆ ಮಹಡಿಯ ಮೇಲೆ!' 'ಅಲ್ಲೇ ನೆಲದಲ್ಲಿ ಮೆಟ್ಟುಗತ್ತಿಯ ಮೇಲೆ ಕೂತು ಅಡಿಕೆ ಸುಲಿಯುವ ಆ ಕೆಲಸದವಳ ಕಪ್ಪು ಕೈಗಳು ಆಗತಾನೆ ಕಪ್ಪಿಸಿಕೊಂಡು ನೋವಲ್ಲಿ ಮಿಡಿಯುತ್ತಿವೆ!'  'ನಿರ್ಣಯ' ಕವನದಲ್ಲಿರುವುದು ಒಂದು ಬೀಚ್‍ನ ಚಿತ್ರಣ.  ಉಳ್ಳವರು 'ವಾಹ್ ಸುಂದರ ಸೂರ್ಯಾಸ್ತಮಾನ ' ಎನ್ನುತ್ತಾ ಕ್ಯಾಮೆರಾ ಕ್ಲಿಕ್ಕಿಸುತ್ತಿದ್ದಾರೆ.  ಆದರೆ ಕವನದ ದೃಷ್ಟಿಕೇಂದ್ರ ಇರುವುದು ಆ ಬೀಚ್‍ನಲ್ಲಿ
 ಚುರಮುರಿ ಮಾರುವ, ಬಲೂನ ಮಾರುವ, ಭಿಕ್ಷೆ ಬೇಡುವ ಮಕ್ಕಳ ಮೇಲೆ.

ಗಿರಿಜಾ ಹೆಗಡೆಯವರ ಮೊದಲ ಕವನ ಸಂಕಲನದಲ್ಲಿ ಹದಿಹರೆಯ ಕನಸುಗಳಗಿಂತ, ನಿಂತ ನೆಲದ ಕಟು ವಾಸ್ತವಗಳನ್ನು ಕುರಿತ ಚಿಂತನಶಾಲಿ ಕವನಗಳೇ ಜಾಸ್ತಿ ಇದ್ದುವು.  ಹದಿಮೂರು ವರ್ಷದ ಅನಂತರ ಪ್ರಕಟವಾಗುತ್ತಿರುವ ಅವರ 'ಅಗಸೆ ಬಾಗಿಲು' ಸಂಕಲನದಲ್ಲಿ ಅವರ ಕಾವ್ಯದ 'ಆಗಬೋಟು' ನಿಂತಲ್ಲೇ ನಿಂತಿದೆ ಅನ್ನಿಸುವುದಿಲ್ಲ.  ಅಡಿಗರು ಹೇಳುವಂತೆ 'ಚಲನವೇ ಜೀವನ, ನಿಶ್ಚಲವೇ ಮರಣ'.  ಗಿರಿಜಾ (ಹೆಗಡೆ) ಗಾಂವ್ಕರ್ ಅವರ ಕಾವ್ಯ ಸ್ಥೂಲ ವಿವರಣೆಯಿಂದ ಸೂಕ್ಷ್ಮ ವಿಶ್ಲೇಷಣೆಯತ್ತ ಹೊರಳುತ್ತಿದೆ.   ಆರ್ಥಿಕ ಅಸಮಾನತೆಯನ್ನು ಅಲಕ್ಷಿಸುವ ಅರ್ಥಶಾಸ್ತ್ರದ ಅಪಾಯದ ಅರಿವು ಈ ಕವಯಿತ್ರಿಗಿದೆ.

 ಗಿರಿಜಾ (ಹೆಗಡೆ) ಗಾಂವ್ಕರ್ ಕಾವ್ಯಕ್ಷೇತ್ರದ ಅಗಸೆ ಬಾಗಿಲಲ್ಲಿ ನಿಂತಿಲ್ಲ.  ಅಗಸೆವಟ್ಟೆಯಲ್ಲಿ ಮುನ್ನಡೆದರೆ ಅಗಸೆ ಮರದ ಹೂಗಳ ಚೆಲುವು ಕಾಣಿಸುತ್ತದೆ.  ಆದರೆ ಬೇಂದ್ರೆಯವರ 'ಜೋಗಿ' ಕವನದ ಮಾವಿನ ಮರದ ಬುಡದಲ್ಲಿರುವ ಏಳು ಹೆಡೆಯ ಹಾವು ಈ ಅಗಸೆಯ ಬುಡದಲ್ಲೂ ಇದೆ.  ಅಗಸೆ ಮರದ ಮೇಲೆ ಕೋಗಿಲೆಯೊಂದು 'ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತೆ' ಎಂದು ಹಾಡುತ್ತಿದೆ.

 ಈ ಸಂಕಲನದ 'ಅಗಸೆ ಬಾಗಿಲು' ಕವನದ ಕೊನೆಯಲ್ಲಿ ಹನುಮಂತನಿದ್ದಾನೆ.  'ಹನುಮದ್ವಿಲಾಸಕ್ಕೆ ಇಲ್ಲ ಎಲ್ಲೆ!' ಎಂಬ ಅಡಿಗರ ಮಾತು ನೆಪಿಸಿಕೊಳ್ಳುತ್ತ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಈ ಕವಯಿತ್ರಿಗೆ ಶುಭ ಹಾರೈಸುತ್ತೇನೆ.
AGASE BAGILU[ COLLECTION OF POEMS]
BY- GIRIJA HEGDE GAONKAR
PUBLISHED BY-SHRI RAGHAVENDRA PRAKASHNA
AMBARKODLA, ANKOLA-581314[KARNATAKA
FIRST IMPRESSION-2010 PAGES-68, PRICE-RS 60

No comments:

Post a Comment