- ಮುರಳೀಧರ ಉಪಾಧ್ಯ ಹಿರಿಯಡಕ
1955ರಿಂದ 1995ರ ವರೆಗಿನ ನಾಲ್ಕು ದಶಕಗಳಲ್ಲಿ ಪ್ರಕಟವಾಗಿರುವ ಅನಂತಮೂರ್ತಿಯವರ ಐದು ಕಥಾಸಂಕಲನಗಳಲ್ಲಿರುವ ಒಟ್ಟು ಕಥೆಗಳು 26. 'ಎಂದೆಂದೂ ಮುಗಿಯದ ಕಥೆ' (1955)ಯಲ್ಲಿರುವ ಆರು ಕತೆಗಳು - 'ಎಂದೆಂದೂ ಮುಗಿಯದ ಕಥೆ', 'ಕವಿಯ ಪೂರ್ಣಿಮೆ’, 'ತಾಯಿ', 'ಪಂಜರದ ಗಿಣಿ', 'ಹುಲಿಯ ಹೆಂಗರುಳು'. 'ಪ್ರಶ್ನೆ' (1963) ಸಂಕಲನದಲ್ಲಿ 'ಖೋಜಾರಾಜ', 'ಪ್ರಕೃತಿ', 'ಪ್ರಶ್ನೆ', 'ಕಾರ್ತೀಕ’,'ಪ್ರಸ್ತ' ಹಾಗೂ 'ಘಟಶ್ರಾದ್ಧ' ಎಂಬ ಆರು ಕತೆಗಳಿವೆ. 'ಮೌನಿ' (1972) ಸಂಕಲನದಲ್ಲಿ 'ಕ್ಲಿಪ್ ಜಾಯಿಂಟ್' 'ಮೌನಿ', 'ನವಿಲುಗಳು' ಎಂಬ ಮೂರು ಕತೆಗಳಿವೆ. 'ಆಕಾಶ ಮತ್ತು ಬೆಕ್ಕು' (1981) ಸಂಕಲನದಲ್ಲಿರುವ ಏಳು ಕತೆಗಳು - 'ಆಕ್ರಮಣ', 'ರೂತ್ ಮತ್ತು ರಸೂಲ್', 'ಸಂಯೋಗ', 'ಮೂಲ', 'ಬರ', 'ಆಕಾಶ ಮತ್ತು ಬೆಕ್ಕು'. 'ಸೂರ್ಯನ ಕುದುರೆ' (1995) ಸಂಕಲನದಲ್ಲಿ 'ಸೂರ್ಯನ ಕುದುರೆ', 'ಕಾಮರೂಪಿ', 'ಅಕ್ಕಯ್ಯ', 'ಜರತ್ಕಾರು' ಎಂಬ ನಾಲ್ಕು ಕತೆಗಳಿವೆ.
'ಎಂದೆಂದೂ ಮುಗಿಯದ ಕಥೆ' (1995) ಸಂಕಲನಕ್ಕೆ ಮುನ್ನುಡಿ ಬರೆದ ಕವಿ ಎಂ. ಗೋಪಾಲಕೃಷ್ಣ ಅಡಿಗರು 'ತಾಯಿ' ಮತ್ತು 'ಹುಲಿಯ ಹೆಂಗರುಳು' ಕತೆಗಳನ್ನು ಮೆಚ್ಚಿಕೊಂಡರು. ಅವರು ಬರೆದಿರುವಂತೆ, "'ತಾಯಿ' ಎಂಬ ಕಥೆಯಲ್ಲಿ ಕ್ರೂರಿಯಾದ ಇನ್ನೊಬ್ಬ ತಾಯಿಯ ಕಥೆಯನ್ನು ತನ್ನ ಮಗ ಶೀನನಿಗೆ ಹೇಳುತ್ತ ತನ್ನ ಕ್ರೂರ ವಾಕ್ಯಕ್ಕೆ ರೇಗಿ ಮನೆಬಿಟ್ಟು ಹೋದ ದೊಡ್ಡ ಮಗನನ್ನು ನೆನೆಯುತ್ತ ಪರ್ಯಾಯವಾಗಿ ತನ್ನ ಕ್ರೂರತ್ವದ ಭೂತಾಕಾರವನ್ನು ಕಂಡು ನಡುಗುವ ತಾಯಿ ಅಬ್ಬಕ್ಕನ ಚಿತ್ರ ಮನಕರಗುವಂತೆ ಚಿತ್ರಿತವಾಗಿದೆ. ಇಲ್ಲಿ ಕಥೆಗಾರ ತಾನು ಕಥೆಯ ಹೊರಗೆ ನಿಂತು ಪಾತ್ರಗಳ ಮೂಲಕವೇ ಭಾವಜಟಿಲತೆಯನ್ನು ವ್ಯಕ್ತಪಡಿಸುವುದು ಅತ್ಯುತ್ತಮ ಕಲೆಗಾರಿಕೆಯ ಲಕ್ಷಣ. ವಸ್ತುನಿಷ್ಠತೆ ಮತ್ತು ಮನಸ್ಸಿನ ಸೂಕ್ಷ್ಮಚಿತ್ರಣ ಇವುಗಳ ಸಮನ್ವಯ ಆಧುನಿಕ ಸಾಹಿತ್ಯದ ಅಮೂಲ್ಯ ಗುಣ..... ಈ ಸಣ್ಣ ಕಥೆಯಲ್ಲಿ ಎಷ್ಟು ಎಳೆಗಳಿವೆ ಎಂದು ಗಮನಿಸದರೆ ಈ ಲೇಖಕರ ಪ್ರತಿಭೆ ಅರ್ಥವಾಗುತ್ತದೆ....... ನವ್ಯತೆಯ ಉತ್ತಮ ಗುಣವಾದ ಭಾವಸಂಕೀರ್ಣತೆ ಮತ್ತು ಪರಿಣಾಮವಾದ ಏಕಾಗ್ರತೆ - ಇದು ಈ ಕತೆಯ ಮುಖ್ಯ ಲಕ್ಷಣ."
'ಹುಲಿಯ ಹೆಂಗರುಳು' ಕಥೆಯನ್ನು ಕುರಿತು ಅಡಿಗರು, "ಇಷ್ಟೇ ಪರಿಣಾಮಕಾರಿಯಾದರೂ ಇನ್ನಷ್ಟು ಶ್ರೀಮಂತವಾಗಿರುವುದು 'ಹುಲಿಯ ಹೆಂಗರುಳು' ಎಂಬ ಕಥೆ. ಇಲ್ಲಿಯ ತಂತ್ರದಲ್ಲಿ ಇನ್ನಷ್ಟು ವೈವಿಧ್ಯವಿದೆ. ಕಥೆಗಾರನ ಸಾಹಿತ್ಯ ಶೈಲಿಯೊಡನೆ ಕಥೆಯೊಳಗೇ ಒಂದು ಕಥೆ ಹೇಳುವ ನಾಲ್ಕಾರು ಪಾತ್ರಗಳ ಸಂಭಾಷಣಾ ಶೈಲಿ ಬಹು ಸುಂದರವಾಗಿ ಸಮ್ಮಿಳಿತವಾಗಿದೆ....... ಈ ಕಥೆಯ ಉದ್ದಕ್ಕೂ ಸಂಕೇತಗಳು ಪರಿಣಾಮಕಾರಿಯಾಗಿ ಬರುತ್ತವೆ. ಒಂದೆರಡು ಸಾಲುಗಳಲ್ಲೇ ವಿಪುಲತೆಯನ್ನು ತುಂಬುವ ಶಕ್ತಿ ಈ ಕಥೆಯ ಉದ್ದಕ್ಕೂ ಕಾಣುತ್ತದೆ...... ಕಥಾದೃಷ್ಟಿಯಿಂದ, ಸ್ವಭಾವಚಿತ್ರಣದ ದೃಷ್ಟಿಯಿಂದ ವ್ಯಕ್ತಿ ಮತ್ತು ಸಮಾಜದ ಏಕಕಾಲ ಚಿತ್ರಣದಿಂದ ಈ ಕಥೆ ಅತ್ಯುತ್ತಮವಾದದ್ದು. ವರ್ತಮಾನ ಕಾಲದ ಅಸ್ಥಿರ ಬಿಂದುವಿನಲ್ಲಿ ಭೂತ-ಭವಿಷ್ಯಗಳನ್ನು ಸೆರೆಹಿಡಿದುಕೊಡುವ ಆಧುನಿಕ ಪ್ರಜ್ಞೆಗೆ ಇದೊಂದು ಉತ್ತಮ ಉದಾಹರಣೆಯೂ ಹೌದು" ಎಂದಿದ್ದಾರೆ.
'ಪ್ರಶ್ನೆ' (1963) ಸಂಕಲನಕ್ಕೆ ಮುನ್ನುಡಿ ಬರೆದಿರುವ ರಾಜೀವ ತಾರಾನಾಥರು, ಈ ಸಂಕಲನದ ಕತೆಗಳಲ್ಲಿ ಅನುಭವದ ಮೊನಚು ಮತ್ತು ಸಮಗ್ರತೆಗಳು ವಿವಿಧ ಮಟ್ಟಗಳಲ್ಲಿ ಬೆಸೆದುಕೊಳ್ಳುತ್ತವೆ. ಕಥನರೀತಿಯಲ್ಲಿ ಸಾಂಕೇತಿಕತೆ ಮತ್ತು ವಾಸ್ತವಿಕತೆಯನ್ನು ಒಮ್ಮೆಗೇ ತರುವ ಪ್ರಯತ್ನ ಕಾಣುತ್ತದೆ ಎಂದಿದ್ದಾರೆ. ಸಣ್ಣ ಕತೆ ಇಲ್ಲಿ ಪ್ರಬುದ್ಧ ಅವಸ್ಥೆಯನ್ನು ಪಡೆದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
'ಘಟಶ್ರಾದ್ಧ' ಕತೆಯನ್ನು ಕುರಿತ ಅವರ ವಿಮರ್ಶೆ ಇಲ್ಲಿದೆ - "ಹಾಗೆಯೇ 'ಘಟಶ್ರಾದ್ಧ'ದಲ್ಲಿ ಇಷ್ಟೇ ಶಕ್ತಿಪೂರ್ಣವಾದ, ಆದರೆ ಇನ್ನೂ ನಿರ್ದಿಷ್ಟವಾದ ಸಾಂಕೇತಿಕತೆಯಿದೆ. ನಾಣಿ ಮತ್ತು ಶಾಸ್ತ್ರಿಯ ಸಂಬಂಧದ ಘಟನೆಗಳು ಯಮುನಕ್ಕ ಮತ್ತು ಮೇಷ್ಟರ ಸಂಬಂಧದ ಮುಖ್ಯ ವೃತ್ತಕ್ಕೆ ಸಾಂಕೇತಿಕ ಕಥನವಾಗುತ್ತದೆ. ಯಮುನಕ್ಕ ಪತಿತಳಾದ, ಕ್ರಮೇಣ ದುಷ್ಟಶಕ್ತಿಗಳಿಗೆ ಸಂಪೂರ್ಣ ಶರಣಾಗತಳಾಗುವ ಜೀವನದ ಭೀಕರ ರುದ್ರನಾಟಕವನ್ನು, ನಾಣಿಯ ಮುಗ್ಧತೆಯನ್ನು ಶಾಸ್ತ್ರಿ ನಾಶಮಾಡಲು ಪ್ರಯತ್ನಿಸುವ ಕಥೆಯಲ್ಲಿಯೂ ಸೂಚ್ಯವಾಗಿ ಕಾಣಬಹುದು. ಶಾಸ್ತ್ರಿ ತನಗಿಂತ ಕಿರಿಯನಾದ ನಾಣಿಯನ್ನು ಪ್ರಲೋಭಿಸುತ್ತಾನೆ, ಕಿಚಾಯಿಸುತ್ತಾನೆ. ದೇವರ ಪ್ರತಿಮೆಯನ್ನು ಅವನಿಂದ ಮುಟ್ಟಿಸಿ ಅವನನ್ನು ವಶಪಡಿಸಿಕೊಳ್ಳುತ್ತಾನೆ. ನಾಣಿ ಮತ್ತು ಶಾಸ್ತ್ರಿಯ ಸಂಬಂಧದ ಈ ವಿಕೃತಿ ಕೊನೆಯಲ್ಲಿ ವಿಕೃತವಾಗುವ ಯಮುನಕ್ಕ ಮೇಷ್ಟ್ರರ ಸಂಬಂಧದ ಮೇಲೆ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಈ ಸಂಬಂಧದ ಕೇಂದ್ರ ಸಂಗತಿ ಬಲಾತ್ಕಾರದ ಗರ್ಭಪಾತ. ಮೂಢನಂಬಿಕೆಯ ಚಿತ್ರಣ ಬಾಲಸಹಜವಾದ ನಾಣಿಯ ನಡವಳಿಯಲ್ಲಿ ಮಾತ್ರ ನೇರವಾಗಿ ಕಥಿತವಾದರೆ, ಯಮುನಕ್ಕನ ಜೀವನದಲ್ಲಿ ಅದು ಸಾಂಕೇತಿಕವಾಗುತ್ತದೆ; ಅವಳು ಸಮಾಜದ ಮೂಢನಂಬಿಕೆಗೆ ಬಲಿಯಾಗುತ್ತಾಳೆ. ಕೊನೆಯಲ್ಲಿ ವೃದ್ಧರಾದ ಉಡುಪರು ಸಣ್ಣ ಹುಡುಗಿಯೊಬ್ಬಳನ್ನು ಮದುವೆಯಾಗುವುದು ವಿಕೃತವೂ ಅನ್ಯಾಯವೂ ಆದರೂ ಈ ಕಲ್ಯಾಣ ಸಮಾಜದ ಮೂಢನಂಬಿಕೆಯನ್ನು ತೃಪ್ತಿಪಡಿಸಲು ಅವಶ್ಯವಾದದ್ದು. ಆದ್ದರಿಂದ ಗ್ರಾಹ್ಯವಾದದ್ದು ಎಂಬುದು ಧ್ವನಿತವಾಗುತ್ತದೆ. ಹೀಗೆ ಮೂಢನಂಬಿಕೆ ಮೂರು ಮಟ್ಟಗಳಲ್ಲಿ ಪ್ರಮುಖ ಪಾತ್ರ ವಹಿಸುವುದರ ಸಾಂಕೇತಿಕ ನಿರೂಪಣೆ ಕಥೆಯಲ್ಲಿ ಬಂದಿದೆ".
'ಪ್ರಶ್ನೆ' ಮತ್ತು ’ಕಾರ್ತೀಕ’ ರಾಜೀವ ತಾರಾನಾಥರು ಮೆಚ್ಚಿಕೊಂಡಿರುವ ಇತರ ಕಥೆಗಳು. ಅವರು ಬರೆದಿರುವಂತೆ, ಶ್ರೀ ಅನಂತಮೂರ್ತಿಯವರು ತಮ್ಮ ಸಣ್ಣಕತೆಗಳಲ್ಲಿ ಜೀವನಾನುಭವದ ಒಳಹೊರಗುಗಳನ್ನು ಒಟ್ಟಿಗೆ ಬೆಸೆಯುವ ಪ್ರಯತ್ನಕ್ಕೆ 'ಪ್ರಶ್ನೆ' ಮತ್ತು 'ಕಾರ್ತೀಕ' ಉತ್ತಮ ಉದಾಹರಣೆಗಳು.
ಜಿ.ಎಸ್. ಅಮೂರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ತಾನು ಸಂಪಾದಿಸಿದ 'ಕನ್ನಡದ ಆಯ್ದ ಕತೆಗಳು' ಸಂಕಲನಕ್ಕೆ ಅನಂತಮೂರ್ತಿಯವರ 'ಕಾರ್ತೀಕ’ ' ಕತೆಯನ್ನು ಆಯ್ಕೆಮಾಡಿದ್ದಾರೆ. ಅವರ ಪ್ರಕಾರ, ಅನಂತಮೂರ್ತಿಯವರ 'ಕಾರ್ತೀಕ’ 'ದ ನಾಯಕ - ವ್ಯಕ್ತಿತ್ವದ ಸಮಗ್ರತೆಯ ಶೋಧದಲ್ಲಿ ತನ್ನ ಭೂತ, ವರ್ತಮಾನಗಳಿಂದಾಯ್ದ ಭಿನ್ನ ಪ್ರತಿಮೆಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಭೂತ ವರ್ತಮಾನಗಳರೆಡರಲ್ಲೂ ಅವನು ಗುರುತಿಸುವ ಯಾತನೆಯ ಸಮಾನ ವಿನ್ಯಾಸಗಳು ಅವನಲ್ಲಿ ಅಸ್ತಿತ್ವವಾದೀ ನಿರಾಸೆ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಆದರೆ ಇದರ ಜೊತೆಗೆಯೆ ಕತೆಯ ಕೇಂದ್ರಪ್ರತೀಕವಾದ 'ಕಾರ್ತೀಕ’ ಸಂಕೇತಿಸುವ ಸ್ವಾತಂತ್ರ್ಯ, ಮೀರುವಿಕೆಗಳ ಸಾಧ್ಯತೆಗಳನ್ನೂ ಕತೆ ಒಳಗೊಳ್ಳುವುದರಿಂದ ಕತೆಯ ಒಟ್ಟು ಪರಿಣಾಮ ನೇತ್ಯಾತ್ಮಕವಾಗುವುದಿಲ್ಲ.
ಅನಂತಮೂರ್ತಿಯವರ ಕತೆಯಲ್ಲಿ ಕಂಡುಬರುವ ಅಪೂರ್ವ ಆತ್ಮಪ್ರಜ್ಞೆಯ ಹಾಗೂ ಕಾಲವನ್ನು ಕುರಿತ ಸಮಗ್ರ ಕಲ್ಪನೆಗಳಿಂದಾಗಿ ಭೂತ ವರ್ತಮಾನಗಳನ್ನು ಒಂದೇ ಕ್ಷಣದಲ್ಲಿ ಒಳಗೊಳ್ಳಬಲ್ಲ ಹಾಗೂ ಒಮ್ಮೆಲೆ ಹಲವಾರು ಸ್ತರಗಳಲ್ಲಿ ಕ್ರಿಯಾಶೀಲವಾಗಬಲ್ಲ ಹೊಸ ರಚನೆಯ ಶೋಧ ಅನಿವಾರ್ಯವಾಗುತ್ತದೆ. 'ಕಾರ್ತೀಕ’ ಇಂಥ ಒಂದು ರಚನೆ. ಇಂಥ ಕತೆಗಳಲ್ಲಿ ಭಾಷೆ ಕಾವ್ಯದ ಸ್ತರದಲ್ಲಿಯೇ ದುಡಿಯಬೇಕಾಗುವುದರಿಂದ ಭಾಷಿಕ ರಚನೆಯ ಸ್ವರೂಪವೂ ಬದಲಾಗುತ್ತದೆ. ನವೋದಯ ಹಾಗೂ ನವ್ಯ ಕಥಾಮಾರ್ಗಗಳಲ್ಲಿಯ ಅಂತರ ಈ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಜಿ.ಎಸ್. ಅಮೂರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ತಾನು ಸಂಪಾದಿಸಿದ 'ಕನ್ನಡದ ಆಯ್ದ ಕತೆಗಳು' ಸಂಕಲನಕ್ಕೆ ಅನಂತಮೂರ್ತಿಯವರ 'ಕಾರ್ತೀಕ’ ' ಕತೆಯನ್ನು ಆಯ್ಕೆಮಾಡಿದ್ದಾರೆ. ಅವರ ಪ್ರಕಾರ, ಅನಂತಮೂರ್ತಿಯವರ 'ಕಾರ್ತೀಕ’ 'ದ ನಾಯಕ - ವ್ಯಕ್ತಿತ್ವದ ಸಮಗ್ರತೆಯ ಶೋಧದಲ್ಲಿ ತನ್ನ ಭೂತ, ವರ್ತಮಾನಗಳಿಂದಾಯ್ದ ಭಿನ್ನ ಪ್ರತಿಮೆಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಭೂತ ವರ್ತಮಾನಗಳರೆಡರಲ್ಲೂ ಅವನು ಗುರುತಿಸುವ ಯಾತನೆಯ ಸಮಾನ ವಿನ್ಯಾಸಗಳು ಅವನಲ್ಲಿ ಅಸ್ತಿತ್ವವಾದೀ ನಿರಾಸೆ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಆದರೆ ಇದರ ಜೊತೆಗೆಯೆ ಕತೆಯ ಕೇಂದ್ರಪ್ರತೀಕವಾದ 'ಕಾರ್ತೀಕ’ ಸಂಕೇತಿಸುವ ಸ್ವಾತಂತ್ರ್ಯ, ಮೀರುವಿಕೆಗಳ ಸಾಧ್ಯತೆಗಳನ್ನೂ ಕತೆ ಒಳಗೊಳ್ಳುವುದರಿಂದ ಕತೆಯ ಒಟ್ಟು ಪರಿಣಾಮ ನೇತ್ಯಾತ್ಮಕವಾಗುವುದಿಲ್ಲ.
ಅನಂತಮೂರ್ತಿಯವರ ಕತೆಯಲ್ಲಿ ಕಂಡುಬರುವ ಅಪೂರ್ವ ಆತ್ಮಪ್ರಜ್ಞೆಯ ಹಾಗೂ ಕಾಲವನ್ನು ಕುರಿತ ಸಮಗ್ರ ಕಲ್ಪನೆಗಳಿಂದಾಗಿ ಭೂತ ವರ್ತಮಾನಗಳನ್ನು ಒಂದೇ ಕ್ಷಣದಲ್ಲಿ ಒಳಗೊಳ್ಳಬಲ್ಲ ಹಾಗೂ ಒಮ್ಮೆಲೆ ಹಲವಾರು ಸ್ತರಗಳಲ್ಲಿ ಕ್ರಿಯಾಶೀಲವಾಗಬಲ್ಲ ಹೊಸ ರಚನೆಯ ಶೋಧ ಅನಿವಾರ್ಯವಾಗುತ್ತದೆ. 'ಕಾರ್ತೀಕ’ ಇಂಥ ಒಂದು ರಚನೆ. ಇಂಥ ಕತೆಗಳಲ್ಲಿ ಭಾಷೆ ಕಾವ್ಯದ ಸ್ತರದಲ್ಲಿಯೇ ದುಡಿಯಬೇಕಾಗುವುದರಿಂದ ಭಾಷಿಕ ರಚನೆಯ ಸ್ವರೂಪವೂ ಬದಲಾಗುತ್ತದೆ. ನವೋದಯ ಹಾಗೂ ನವ್ಯ ಕಥಾಮಾರ್ಗಗಳಲ್ಲಿಯ ಅಂತರ ಈ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಗಿರಡ್ಡಿ ಗೋವಿಂದರಾಜ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ ತಾನು ಸಂಪಾದಿಸಿದ 'ಕನ್ನಡ ಕಥಾಸಂಕಲನ'(1983)ಕ್ಕೆ ಅನಂತಮೂರ್ತಿಯವರ 'ನವಿಲುಗಳು' ಕತೆಯನ್ನು ಆಯ್ಕೆಮಾಡಿದ್ದಾರೆ. ಅವರು ಬರೆದಿರುವಂತೆ, 'ನವಿಲುಗಳು' ಕಥೆಯ ನಾಯಕ ಹಲುವು ದ್ವಂದ್ವಗಳ ನಡುವೆ ತೊಳಲುತ್ತಿರುವವನು. ಎಲ್ಲ ಸೌಕರ್ಯಗಳಿದ್ದೂ ಅವನಿಗೆ ಯಾವುದರಲ್ಲೂ ತೃಪ್ತಿಯಿಲ್ಲ. ತಾನು ಪಡಪೋಸಿಯಾಗಿಬಿಟ್ಟೆ ಎಂಬ ನೋವು ಅವನಿಗೆ. ಎಲ್ಲದರಲ್ಲೂ ಇದೆ, ಇಲ್ಲ ಅಥವಾ ಇತ್ತೆ, ಇರಲಿಲ್ಲವೆ ಎಂಬ ದ್ವಂದ್ವಗಳು, ಜೀವನದ ಬೇರು ಅಲುಗಿಸುವಂಥದ್ದು ಏನೂ ಆಗುತ್ತಿಲ್ಲವಲ್ಲ ಎಂದು ಒಮ್ಮೆ ದುಃಖವೆನಿಸಿದರೆ ಮರುಕ್ಷಣ ಹಾಗೆ ಅನಿಸುವುದು ಕೂಡ ತನ್ನ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉಪಾಯವಾಗಿದ್ದರೆ? ಎಂಬ ಸಂದೇಹ ತಲೆಯೆತ್ತುತ್ತದೆ. ಈ ಎಡಬಿಡಂಗಿತನದ ನೋವಿನಲ್ಲಿ - ಕೊನೆಯ ಪಕ್ಷ ತಾನು ಬಾಲಕನಾಗಿದ್ದಾಗ ಪರಿಶುದ್ಧನಾಗಿದ್ದೆನೋ ಇಲ್ಲವೋ ಎಂಬುದನ್ನು ತಿಳಿಯುವ ಆಶೆಯಾಗುತ್ತದೆ. ಹಾಗೆಂದು ತಾನು ಹುಟ್ಟಿ ಬೆಳೆಯದ ಹಳ್ಳಿಯ ಪರಿಸರದಲ್ಲಿ ತಾನು ಹಿಂದೊಮ್ಮೆ ಕಂಡು ಮೈಮರೆತಿದ್ದ ನೋಡಿ ಮತ್ತು ಆ ತತ್ಪರತೆಯನ್ನು ಅನುಭವಿಸುವುದು ಸಾಧ್ಯವೇ ಎಂದು ನೋಡಿದರೆ ಎಲ್ಲಾ ಬದಲಾಗಿದೆ. ಜಾನಪದ ಕಥೆಗಳ ರಾಜಕುಮಾರಿಯ ಶಯ್ಯಾಗಾರದಂತಿದ್ದ ಜಾನಕಮ್ಮನ ಮಹಡಿಯ ಮನೆ, ಹೆಳವ ಮೂಕ ಹೆಂಗಸು ಕಲ್ಯಾಣಿಯ ಕಂಗಾಲಾಗಿಸುವ ಕೂಗು ಈಗ ಮೊದಲಿನ ನಿಗೂಢತೆಯನ್ನು ಕಳೆದುಕೊಂಡಿದೆ. ನವಿಲುಗಳು ಮೊದಲಿನಂತೆಯೇ ಬಂದು ಕುಣಿದರೂ ಆ ತತ್ಪರತೆ ಸಾಧ್ಯವಾಗುವುದಿಲ್ಲ. ಬದಲಾಗಿ, ಬಾಲ್ಯದಲ್ಲಿಯಾದರೂ ತಾನು ನಿಜವಾಗಿಯೂ ತತ್ಪರತೆಯನ್ನು ಅನುಭವಿಸಿದ್ದೆನೆ? ಎಂದು ಸಂಶಯ ಮೂಡುತ್ತದೆ. ಆದರೆ ಈ ಜೀವನದಲ್ಲಿ ಯಾವ ಕಾಲವೂ ಪವಿತ್ರವಲ್ಲ ಎನ್ನುವ ತೀರ್ಮಾನಕ್ಕೆ ಬರಲು ಕೂಡ ಇಷ್ಟವಾಗುವುದಿಲ್ಲ. ಕೊನೆಗೆ ಉಳಿಯುವುದು ನೋವು ಮಾತ್ರ. ಹೀಗೆ ಕಥೆ ಹಲವು ಬಗೆಯ ಸೂಕ್ಷ್ಮಗಳನ್ನು ಕೆದಕುತ್ತ, ಮುಟ್ಟಿದಲ್ಲೆಲ್ಲ ತೀವ್ರವಾಗಿ ಮಿಡಿಯುತ್ತ ಹೋಗುವ ರೀತಿ ಅನನ್ಯವಾದದ್ದು. ಸಣ್ಣಕತೆಯ ಪರಿಮಿತಿಯನ್ನು ಹಿಗ್ಗಿಸಿಕೊಳ್ಳುವ ಅನಂತಮೂರ್ತಿಯವರ ಪ್ರಯತ್ನ ಇಂಥಲ್ಲೆಲ್ಲ ಸ್ಪಷ್ಟವಾಗುತ್ತದೆ. 'ಕ್ಲಿಪ್ ಜಾಯಿಂಟ್' 'ಆಕಾಶ ಮತ್ತು ಬೆಕ್ಕು' ಈ ದಿಶೆಯಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಕತೆಗಳಾಗಿವೆ.
'ಪ್ರಕೃತಿ', 'ಮೌನಿ', ಕ್ಲಿಪ್ ಜಾಯಿಂಟ್' , 'ಬರ' ಕತೆಗಳನ್ನು ಕುರಿತ ಐದು ಲೇಖನಗಳು, ಅನಂತಮೂರ್ತಿಯವರ ಕಥಾಸಾಹಿತ್ಯವನ್ನು ಕುರಿತ ಮೂರು ಲೇಖನಗಳು ಈ ಸಂಕಲನದಲ್ಲಿವೆ.
ಜಿ.ಎಚ್. ನಾಯಕರ ಪ್ರಕಾರ ಇಚ್ಛಾಶಕ್ತಿ ಮತ್ತು ಸಂಕಲ್ಪಬಲದ ಭಂಗವೇ 'ಪ್ರಕೃತಿ' ಕತೆಯ ಕೇಂದ್ರವಸ್ತು. ಕತೆಗಾರ ಅನಂತಮೂರ್ತಿ ಪರಂಪರಾಗತ ಮೌಲ್ಯಗಳನ್ನು ಮೂಲಪ್ರವೃತ್ತಿಗಳಲ್ಲೊಂದಾದ ಕಾಮದ ಮುಖಾಂತರ ಶೋಧಿಸುತ್ತಾರೆ ಎಂಬುದಕ್ಕೆ ತನ್ನ ಅಭಿಪ್ರಾಯವನ್ನು ನಾಯಕರು 'ಪ್ರಕೃತಿ' ಕತೆಯನ್ನು ವಿಶ್ಲೇಷಿಸುತ್ತಾರೆ. ಡಿ. ರಘುನಾಥ ರಾವ್ ಅವರ ಪ್ರಕಾರ 'ಪ್ರಕೃತಿ' ಕಥೆಯಲ್ಲಿ ಕಾಮ ಮುಖ್ಯವಾಗಿದೆ. ಆದರೆ ಅದೇ ಪ್ರಧಾನವಲ್ಲ, ಕಥೆಯಲ್ಲಿ ಬೇರೆ ಎಳೆಗಳೂ ಕೂಡಿಕೊಂಡಿವೆ. 'ಪ್ರಕೃತಿ' ಕತೆಯಲ್ಲಿ ಹೊರಗಿನ ಪ್ರಕೃತಿ ಅಂತರಂಗದ ಪ್ರಕೃತಿಗೆ ಸರ್ವದೃಷ್ಟಿಯಿಂದಲೂ ಸಾರ್ಥಕವಾದ ಪ್ರತಿಮೆಯಾಗಿದೆ ಎಂಬ ಅಂಶದತ್ತ ರಘುನಾಥ ರಾವ್ ನಮ್ಮ ಗಮನ ಸೆಳೆಯುತ್ತಾರೆ.
ಮೌನಿ' ತುಂಬ ಚರ್ಚೆಗೊಳಗಾಗಿರುವ ಕತೆ. ಧಾರ್ಮಿಕವಾಗಿ ಬ್ರಾಹ್ಮಣ ಸಮಾಜದ ಅತ್ಯುಚ್ಚ ಸ್ಥಾನವಾದ ಶ್ರೀಮಠವು, ಅದೇ ಸಮಾಜದ ಎರಡು ಸಂಭವಗಳನ್ನು ಹೇಗೆ ಕಾಣುತ್ತದೆ ಮತ್ತು ಹೇಗೆ ಅವುಗಳೊಡನೆ ವ್ಯವಹರಿಸುತ್ತದೆ ಎಂಬುದನ್ನು ಗೊತ್ತುಪಡಿಸುವುದು ಈ ಕತೆಯಲ್ಲಿ ಲೇಖಕರ ಉದ್ದೇಶ ಎಂದು ಸುಬ್ರಾಯ ಚೊಕ್ಕಾಡಿ ಬರೆದಿದ್ದಾರೆ. ಈ ಕತೆಯ ನಾಯಕಪಾತ್ರ ಅಪ್ಪಣ್ಣ ಭಟ್ಟನೂ ಅಲ್ಲ, ಕುಪ್ಪಣ್ಣ ಭಟ್ಟನೂ ಅಲ್ಲ, ಬದಲು ಶ್ರೀಮಠ ಎಂದು ಅವರು ವಾದಿಸುತ್ತಾರೆ. ಜಿ.ಎಸ್. ಅಮೂರ ಅವರು 'ಮೌನಿ' ಕತೆಗೂ ಮಾಲಮುಡ್ (Malamud) ಅವರ 'ದ ಮೋರ್ನರ್ಸ್' (The Mourners) ಕತೆಗೂ ಇರುವ ಸಾಮ್ಯಗಳತ್ತ ಗಮನ ಸೆಳೆಯುತ್ತಾರೆ. 'ಮೌನಿ' ಕತೆಯನ್ನೋದಿದ ಯಾರಿಗೇ ಆದರೂ ಅದೊಂದು ಅನುವಾದವೆಂದಾಗಲೀ, ಪ್ರತಿಕೃತಿ ಎಂದಾಗಲೀ ಅನಿಸಲಾರದು. ಅಷ್ಟರಮಟ್ಟಿಗೆ ಅದು ಕನ್ನಡದ್ದಾಗಿದೆ ಎನ್ನುತ್ತಾರೆ ಜಿ.ಎಸ್. ಅಮೂರ್. 'ಮೌನಿ'ಯು ತನ್ನ ವಿವರಗಳಲ್ಲಿ ಉಪಯೋಗಿಸಿಕೊಂಡ ಅಂಶಗಳು ಎಲ್ಲಿಂದಲೋ ಆಮದುವಾದವುಗಳಲ್ಲ; ಅದು ಭಾರತೀಯ ಬದುಕಿನಿಂದಲೇ ಆಯ್ದ ದೃಶ್ಯಗಳಿಂದಲೇ ರಚಿತವಾದ ಕೃತಿ ಎಂಬುದನ್ನು ತೋರಿಸಲು ಎಸ್. ಆರ್. ವಿಜಯಶಂಕರ್ ಅನೇಕ ಉದಾಹರಣೆಗಳನ್ನು ನೀಡಿದ್ದಾರೆ.
ಕ್ಲಿಪ್ ಜಾಯಿಂಟ್'ನ ಮೂಲವಸ್ತು ಲೈಂಗಿಕ ನಿರಾಶೆ ಎಂದು ಮಕರಂದ ಪರಾಂಜಪೆ ಅಭಿಪ್ರಾಯಪಡುತ್ತಾರೆ. "ಈ ಕತೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಆಧುನಿಕ ಸನ್ನಿವೇಶಕ್ಕೆ ಬರೆದ ರೂಪಕದಂತಿದೆ ಈ ಕತೆ. ಇಲ್ಲಿ ಬರುವ ಎಲ್ಲಾ ಘಟನೆಗಳೂ ರೂಪಕವಾಗಿ ಮತ್ತು ಸಂಕೇತಗಳಾಗಿ ಕಾಣಿಸುಕೊಳ್ಳುತ್ತವೆ. ಹಾಗಾದಾಗ ಸಂಪ್ರದಾಯಸ್ಥ ಸಮಾಜ ವ್ಯಕ್ತಿಗಳು, ಪಾಶ್ಚಾತ್ಯ ಆಧುನಿಕ ಸಮಾಜದಿಂದ ಆಕರ್ಷಿತರಾಗಿದ್ದಾರೆ ಎಂದು ಕಥೆ ಸೂಚ್ಯವಾಗಿ ಹೇಳಿದಂತಾಗುತ್ತದೆ. ಪಾಶ್ಚಾತ್ಯ ಸಮಾಜದಲ್ಲಿ ಸ್ವಾತಂತ್ರ್ಯವನ್ನು, ಭೌತಿಕ ಸಂತೋಷಗಳನ್ನು, ಪಂಚೇಂದ್ರಿಯಗಳಿಗೆ ಬೇಕಾದ ಆನಂದವನ್ನು ಹಣದಿಂದ ಪಡೆಯಬಹುದು. ಇಂಥ ಸಮಾಜವು ಸಂಪ್ರದಾಯಸ್ಥ ಸಮಾಜದ ವಿನಾಶದಿಂದ ಬಂದವನಿಗೆ ಒಂದು ರೀತಿಯ ತೃಪ್ತಿಯನ್ನು ನೀಡುವ ಸಾಧ್ಯತೆ ಇದೆ" ಎನ್ನುತ್ತಾರೆ ಪರಾಂಜಪೆ. ಜಿ. ಎಚ್. ನಾಯಕರು ಬರೆದಿರುವಂತೆ, ಅನಂತಮೂರ್ತಿಯವರ 'ಪ್ರಕೃತಿ', 'ಕಾರ್ತೀಕ', 'ಘಟಶ್ರಾದ್ಧ'ದಂಥ ಕಥೆಗಳ ಮಟ್ಟದ ಕಲಾತ್ಮಕ ಯಶಸ್ಸು ಇಲ್ಲಿ ಸಿದ್ಧಿಸಿಲ್ಲವಾದರೂ ಅವರ ಕಥೆಗಳ ಸಂದರ್ಭದಲ್ಲಿ ಮಾತ್ರವಲ್ಲದೆ ಇಡೀ ಕನ್ನಡ ಸಣ್ಣಕತೆಯ ಚರಿತ್ರೆಯ ಸಂದರ್ಭದಲ್ಲೇ 'ಕ್ಲಿಪ್ ಜಾಯಿಂಟ್' ಅತ್ಯಂತ ಮಹತ್ವಾಕಾಂಕ್ಷೆಯಿಂದ ಕೂಡಿದ, ಕನ್ನಡದಲ್ಲಿ ಸಣ್ಣಕತೆಯ ಪ್ರಕಾರವು ತನ್ನ ಜೀರ್ಣಶಕ್ತಿಯನ್ನು ಪಣಕ್ಕೊಡ್ಡಿದ ಕಥೆಯಾಗಿದೆ.
ಬರ' ಕತೆಯನ್ನು ಕುರಿತ ತನ್ನ ಒಂದು ಹಿನ್ನುಡಿಯಲ್ಲಿ ಎಚ್. ಪಟ್ಟಾಭಿರಾಮ ಸೋಮಯಾಜಿವರು ಅನಂತಮೂರ್ತಿಯವರ ವಿಶಿಷ್ಟ ಮಾರ್ಗವೊಂದನ್ನು ಗುರುತಿಸಿದ್ದಾರೆ. ಬದುಕಿನ ನಿಷ್ಠುರ ಕ್ಷಣಗಳಿಗೆ, ಒಂದು ನಿರ್ದಿಷ್ಟ ದೃಷ್ಟಿಕೋನದ ನೆಲೆಯನ್ನು ಅಭದ್ರಗೊಳಿಸುವ ಸವಾಲುಗಳಿಗೆ, ಪಾತ್ರಗಳನ್ನು ಅಥವಾ ಸನ್ನಿವೇಶಗಳನ್ನು ಮುಖಾಮುಖಿಗೊಳಿಸುವುದರ ಮೂಲಕ, ಸಂಕಟದ ಗಳಿಗೆಗಳಲ್ಲಿಯಷ್ಟೇ ನಿಚ್ಚಳಗೊಳ್ಳುವ ಮಾನಸಿಕ ಸೂಕ್ಷ್ಮಗಳನ್ನು ಹಿಡಿಯುವುದು ಈ ವಿಶಿಷ್ಟ ಮಾರ್ಗ.
ಜಿ. ಎಚ್. ನಾಯಕರು 1971ರಲ್ಲಿ ಬರೆದ 'ಅನಂತಮೂರ್ತಿಯವರ ಕಥಾ ಸಾಹಿತ್ಯ', ಅನಂತಮೂರ್ತಿಯವರ ಕಥೆಗಳನ್ನು ಕುರಿತ ವಿಮರ್ಶಾತ್ಮಕ ಚರ್ಚೆಯನ್ನು ಬೆಳೆಸಿದ ಒಂದು ಮುಖ್ಯ ಲೇಖನ. 'ಖೋಜರಾಜ', 'ಪ್ರಕೃತಿ', 'ಪ್ರಶ್ನೆ', 'ಕಾರ್ತೀಕ', 'ಪ್ರಸ್ತ', 'ಘಟಶ್ರಾದ್ಧ' ಮತ್ತು 'ಕ್ಲಿಪ್ ಜಾಯಿಂಟ್' - ಇವುಗಳಿಗೆಲ್ಲಾ ಸಂಬಂಧಿಸಿದಂತೆ ಜಿ. ಎಚ. ನಾಯಕರು ಸೂತ್ರರೂಪದಲ್ಲಿ ಹೀಗೆ ಬರೆದಿದ್ದಾರೆ -" ಪರಂಪರಾಗತ ಮೌಲ್ಯಗಳನ್ನು ವೈಯಕ್ತಿಕ ಅನುಭವಗಳ ಮುಖಾಮುಖಿಯಲ್ಲಿ ನಾನಾ ಛಾಯೆ, ಸ್ತರ, ಸಂದರ್ಭಗಳಲ್ಲಿಟ್ಟು ಪರೀಕ್ಷಿಸುವುದು, ಶೋಧಿಸುವುದು ಅನಂತಮೂರ್ತಿಯವರ ಕಥೆಗಳಲ್ಲಿ ಕಾಣುವ ಮುಖ್ಯ ಅಂಶ. ಈ ಶೋಧನೆಯ ಪ್ರಕ್ರಿಯೆ ಮತ್ತು ಪರಿಣಾಮ ವೈಚಾರಿಕತೆಯ ಒಡಲಿನಿಂದಲೇ ಕೃತಿಗೊಳ್ಳಲು ನೋಡುತ್ತಿರುವುದನ್ನು ಗುರುತಿಸಬಹುದು. ಈ ಶೋಧನೆಗೆ ಅನಂತಮೂರ್ತಿಯವರು ಪ್ರಧಾನವಾಗಿ ಕಾಮದ ಮುಖಾಂತರ ಪ್ರವೇಶಿಸುತ್ತಾರೆಂಬ ಇನ್ನೊಂದು ಮಾತನ್ನೂ ಸೇರಿಸಬೇಕಾಗುತ್ತದೆ". ಇದೇ ಲೇಖನದಲ್ಲಿ ನಾಯಕರು, "ಪರಂಪರಾಗತ ಮೌಲ್ಯಪ್ರಜ್ಞೆಯೇ ಶಾಪವಾಗಿರುವಂತೆ, ಅದೇ ಈ ಸಮಾಜದ ಅಸ್ವಸ್ಥತೆಗೆ ಅದರಲ್ಲೂ ಬ್ರಾಹ್ಮಣ ಸಮಾಜದ ಎಲ್ಲರ ಬದುಕಿನ ನಿಸ್ಸಾರತೆಗೆ ಕಾರಣವಾಗಿರುವಂತೆ ಅನಂತಮೂರ್ತಿಯವರು ತಿಳಿಯುತ್ತಾರೆ ಎನ್ನುವಂತಿದೆ ಅವರ ಕಥೆಗಳು ಮತ್ತು ಕಾದಂಬರಿ" ಎನ್ನುತ್ತಾರೆ. ತಮ್ಮ ಕಥೆಗಳಲ್ಲಿ ಪರಂಪರಾಗತ ಮೌಲ್ಯಶೋಧನೆಗೆ ಕಾಮವೊಂದನ್ನೇ ನಿಕಷವಾಗಿ ಒಡ್ಡಿದ್ದಾರೆ. ಎನ್ನುವ ಜಿ. ಎಚ್. ನಾಯಕರ ಅಭಿಪ್ರಾಯವನ್ನು ಡಿ. ರಘುನಾಥ ರಾವ್ ಅವರು ಒಪ್ಪುವುದಿಲ್ಲ. 'ಮೌಲ್ಯಶೋಧನೆಯ ಪ್ರಯತ್ನ ಪ್ರಧಾನವಾಗಿ ಈ ವರೆಗೆ ಒಂದು ನಿಟ್ಟಿನಲ್ಲಿ ನಡೆದಿರುವುದುರಿಂದ ಅವರ ಕಥೆಗಳ ಅನುಭವ ಸರಳಗೊಳ್ಳುತ್ತದೆ' ಎಂಬ ನಾಯಕರ ಅಭಿಪ್ರಾಯಕ್ಕೆ ರಘುನಾಥರಾಯರ ಪ್ರತಿಕ್ರಿಯೆ ಹೀಗಿದೆ -" ಒಂದೇ ಅನುಭವ ಹೆಚ್ಚು ಆಳ ಅಗಲಗಳನ್ನು ಪಡೆದುಕೊಳ್ಳುತ್ತಾ ಬದುಕಿನ ಬಗ್ಗೆ ಮಹತ್ವದ ತಿಳುವಳಿಕೆಯನ್ನುಂಟುಮಾಡುವಂತಿದ್ದರೆ - ಅದು ಅನುಭವವನ್ನು ಸರಳಗೊಳಿಸಿದಂತಾಗುವುದಿಲ್ಲವೆಂದು ತನ್ನ ತಿಳುವಳಿಕೆ".
ಕೆ. ಸತ್ಯನಾರಾಯಣ ಅವರು ತನ್ನ, ಯು. ಆರ್. ಅನಂತಮೂರ್ತಿಯವರ ಎರಡು ದಶಕದ ಕತೆಗಳು' ಲೇಖನದಲ್ಲಿ ಜಿ. ಎಚ್. ನಾಯಕರು ಆರಂಭಿಸಿದ ಚರ್ಚೆಯನ್ನು ಮುಂದುವರಿಸುತ್ತ ಹೀಗೆನ್ನುತ್ತಾರೆ -" ಬದುಕಿನ ಶೋಧನೆಗೆ ಲೈಂಗಿಕ ಜೀವನವೊಂದನ್ನೇ ಪ್ರಧಾನವಾಗಿ ನಿಕಷವಾಗಿಟ್ಟುಕೊಳ್ಳುವ ಮತ್ತು ವ್ಯಕ್ತಿಯ ಎಲ್ಲ ಗುಣಸ್ವಭಾವಗಳು ಸಂಸ್ಕೃತಿಯಿಂದಲೇ ಪ್ರಧಾನವಾಗಿ ದತ್ತವಾಗುತ್ತವೆ ಎಂದು ಭಾವಿಸುವ ಇವರ ಬರವಣಿಗೆಗಳು ಅಂತಿಮವಾಗಿ ವಾಲುವುದು ವ್ಯಕ್ತಿಯ ಕಡೆಗೆ, ವ್ಯಕ್ತಿ ತನ್ನ ಸಫಲತೆಯನ್ನು ತನ್ನಲ್ಲೇ ಕಂಡುಕೊಳ್ಳಬಲ್ಲ ಎಂಬ ನಿಲುವಿಗೆ. ಆದರೆ ಬದುಕಿನ ಶೋಧನೆಗೆ ಅನೇಕ ನಿಕಷಗಳನ್ನಿಟ್ಟುಕೊಳ್ಳುವ ಪ್ರಯತ್ನ ಮಾಡಿದಾಗ, ವ್ಯಕ್ತಿಯ ಗುಣಸ್ವಭಾವಗಳು ವೈಚಿತ್ರ್ಯಗಳು ಸಂಸ್ಕೃತಿಯಿಂದಲೇ ದತ್ತವಾದುದಲ್ಲ, ವ್ಯಕ್ತಿಗೆ ಅನನ್ಯವಾದದ್ದು ಕೆಲವಿರುತ್ತದೆ ಎಂದು ತಿಳಿದಾಗ ಈ ಲೇಖಕರು ವಾಲುವುದು ಸಮುದಾಯದ ಕಡೆಗೆ - ವ್ಯಕ್ತಿ ತನ್ನ ಜೀವನ ಸಾಫಲ್ಯವನ್ನು ಕುಟುಂಬ ಜೀವನದಲ್ಲಿ ಸಮುದಾಯದಲ್ಲಿ ಕಂಡುಕೊಳ್ಳಬೇಕೆಂಬ ನಿಲುವಿಗೆ".
ಡಾ| ರಾಮಚಂದ್ರದೇವ ಅವರು 'ಸೂರ್ಯನ ಕುದುರೆ' ಕಥಾಸಂಕಲನವನ್ನುವಿಮರ್ಶಿಸುತ್ತ ಅನಂತಮೂರ್ತಿಯವರ ದೃಷ್ಟಿಕೋನದಲ್ಲಾಗಿರುವ ಬದಲಾವಣೆಯನ್ನು ಗುರುತಿಸುತ್ತಾರೆ - ಆದರೆ 'ಸೂರ್ಯನ ಕುದುರೆ' ಕಥೆಗಳಿಗೆ ಬರುವಾಗ ಅನಂತಮೂರ್ತಿ ಪೂರ್ವ-ಪಶ್ಚಿಮ ಸಂಸ್ಕೃತಿ ಬಗ್ಗೆ ಹಿಂದಿನ ದೃಷ್ಟಿಕೋನಕ್ಕಿಂತ ತದ್ವಿರುದ್ಧ ದೃಷ್ಟಿಕೋನ ತಳೆಯುತ್ತಾರೆ. ಇಲ್ಲಿ ಜೀವನ ಪೊಳ್ಳಾಗಿರುವುದು ಪಾಶ್ಚಾತ್ಯೀಕರಣಗೊಂಡ ವ್ಯಕ್ತಿಗಳದ್ದು; ಪರಂಪರಾಗತ ಜೀವನ ನಡೆಸುವ ಭಾರತೀಯರದ್ದಲ್ಲ. ಅಂದರೆ 'ಪ್ರಶ್ನೆ', 'ಸಂಸ್ಕಾರ', 'ಭಾರತೀಪುರ'ಗಳಲ್ಲಿ ಭಾರತೀಯ ಸಂಸ್ಕೃತಿಯ ಕೊಳೆತುಹೋದ ಅಂಶಗಳನ್ನೂ, ಪಾಶ್ಚಾತ್ಯ ಸಂಸ್ಕೃತಿಯ ಅತ್ಯುತ್ತಮ ಅಂಶಗಳನ್ನೂ, ಅನಂತಮೂರ್ತಿ ಕಾಣುತ್ತಿದ್ದರು. ಈಗಿನ ಕಥೆಗಳಲ್ಲಿ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಅಂಶಗಳನ್ನೂ, ಪಾಶ್ಚಿಮಾತ್ಯ ಸಂಸ್ಕೃತಿಯ ಕೊಳೆತ ಅಂಶಗಳನ್ನು ಎತ್ತಿ ಹಿಡಿಯುತ್ತಿದ್ದಾರೆ". ಸಂವಾದಯೋಗ್ಯವಾದ ಈ ಅಭಿಪ್ರಾಯದ ಕುರಿತು ಚರ್ಚೆ ಆರಂಭವಾಗಿಲ್ಲ.
ಮಾಸ್ತಿಯವರ ಅನಂತರ ಕನ್ನಡ ಸಣ್ಣಕತೆಗೆ ಘನತೆಯನ್ನು ತಂದ, ಅವರ ಸಾಧ್ಯತೆಯನ್ನು ವಿಸ್ತರಿಸಿದ ಇನ್ನೊಬ್ಬ ಕತೆಗಾರರೆಂದರೆ - ಅನಂತಮೂರ್ತಿ. ತನ್ನ 'ಪ್ರಶ್ನೆ' ಸಂಕಲನದ ಮೂಲಕ ಕನ್ನಡ ಸಣ್ಣಕತೆಯ ವೈಚಾರಿಕ ಮತ್ತು ಕಲಾತ್ಮಕ ಸ್ವರೂಪವನ್ನೇ ಬದಲಿಸಿದ ಅನಂತಮೂರ್ತಿಯವರಿಂದ ನವ್ಯಕತೆಯ ಬೆಳವಣಿಗೆಗೆ ದೊರೆತ ಬಹುಮುಖಪ್ರೇರಣೆಯನ್ನು ಗಿರಡ್ಡಿ ಗೋವಿಂದರಾಜರು ಹೀಗೆ ಗುರುತಿಸಿದ್ದಾರೆ: 1. ವೈಚಾರಿಕತೆಯನ್ನು ರೂಪಿಸಿಕೊಟ್ಟರು. 2. ಆ ವೈಚಾರಿಕತೆಯ ಅಭಿವ್ಯಕ್ತಿಗೆ ಬೇಕಾದ ತಾಂತ್ರಿಕ ಸಾಧ್ಯತೆಗಳನ್ನು ತೋರಿಸಿಕೊಟ್ಟರು. 3. ಆ ವೈಚಾರಿಕತೆಯನ್ನು ಸಮರ್ಥವಾಗಿ ಧ್ವನಿಸಬಲ್ಲ ವಸ್ತುಗಳನ್ನು ಸೂಚಿಸಿದರು. 4. ಇದೆಲ್ಲಕ್ಕೂ ಸೂಕ್ತವಾದ ಸೂಕ್ಷ್ಮವಾಗಿ ಮಿಡಿಯಬಲ್ಲ ಕಾವ್ಯಮಯವಾದ ಭಾಷೆಯನ್ನು ರೂಢಿಸಿಕೊಟ್ಟರು." ಅನಂತಮೂರ್ತಿಯವರು ಕಾದಂಬರಿಗಿಂತ ಹೆಚ್ಚಾಗಿ ಸಣ್ಣಕತೆಯಲ್ಲೆ ಯಶಸ್ಸು ಗಳಿಸದ್ದಾರೆ" ಎನ್ನುತ್ತಾರೆ ಜಿ. ಎಸ್. ಅಮೂರ - "ಅನಂತಮೂರ್ತಿಯವರ ಕಾದಂಬರಿಗಳು ತತ್ವಸಂಕೇತಗಳ ಹೊಂದಾಣಿಕೆಯನ್ನು ಸಾಧಿಸುವಲ್ಲಿ ಕೆಲವೊಂದು ಸಲ ಸೋಲುವುದರಿಂದ ತಮ್ಮ ಕಲಾತ್ಮಕತೆಯನ್ನು ಕಳೆದುಕೊಂಡು ಬೌದ್ಧಿಕ ಪ್ರಯೋಗಗಳಾಗಿ ಬಿಡುತ್ತಿವೆ. ಆದರೆ ಅವರ ಸಣ್ಣಕತೆಗಳು ಮಾತ್ರ ತಾತ್ವಿಕತೆಯನ್ನು ಸಂಪೂರ್ಣ ಅರಸಿಕೊಂಡು ಕೇವಲ ಸಂಕೇತಗಳಾಗಿ ನಮ್ಮ ಅನುಭವವನ್ನು ಮುಟ್ಟುವುದರಿಂದ ಹೆಚ್ಚಿನ ಕಲಾತ್ಮಕತೆ ಅವುಗಳಿಗೆ ಸಾಧ್ಯವಾಗಿದೆ".
ಮಕರಂದ ಪರಾಂಜಪೆಯವರು ಹೇಳುವಂತೆ, ಭಾರತೀಯ ನವ್ಯ ಪರಂಪರೆಯ ಉತ್ಕೃಷ್ಟ ಮಾದರಿ ಎಂದರೆ ಅನಂತಮೂರ್ತಿಯವರೇ.
ಯು. ಆರ್. ಅನಂತಮೂರ್ತಿ (2000)
(ಸಂ) ಮುರಳೀಧರ ಉಪಾಧ್ಯ ಹಿರಿಯಡಕ
(ಸಂ) ಮುರಳೀಧರ ಉಪಾಧ್ಯ ಹಿರಿಯಡಕ
No comments:
Post a Comment