- ಮುರಳೀಧರ ಉಪಾಧ್ಯ ಹಿರಿಯಡಕ
ಅನಂತಮೂರ್ತಿಯವರ ಏಳು ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ - 'ಪ್ರಜ್ಞೆ ಮತ್ತು ಪರಿಸರ' (1971), 'ಸನ್ನಿವೇಶ' (1974), 'ಸಮಕ್ಷಮ' (1980), 'ಪೂರ್ವಾಪ'(1990), 'ಸಂಸ್ಕೃತಿ ಮತ್ತು ಅಡಿಗ' (1996), 'ಬತ್ತಲೆಪೂಜೆ ಯಾಕೆ ಕೂಡದು?' (1996), 'ನವ್ಯಾಲೋಕ' (1997).
ಖ್ಯಾತ ವಿಮರ್ಶಕ ಡಾ| ಬಿ. ದಾಮೋದರ ರಾವ್ ಅವರು 'ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ವಿಮರ್ಶೆ' (1973) ಎಂಬ ತನ್ನ ಲೇಖನದಲ್ಲಿ ಅನಂತಮೂರ್ತಿಯವರ ವಿಮರ್ಶೆಯ ಮಹತ್ವವನ್ನು, ವೈಶಿಷ್ಟ್ಯ, ಗುರಿಯನ್ನು ಕುರಿತು ಹೀಗೆ ಬರೆದಿದ್ದಾರೆ: "ಯು. ಆರ್. ಅನಂತಮೂರ್ತಿಯವರದು ಜೀವನದಲ್ಲಿ ಮತ್ತು ಕಲಾ ಮಾಧ್ಯಮದಲ್ಲಿ ಗಂಭೀರವಾದ ವೈಚಾರಿಕ ಆಸಕ್ತಿಯುಳ್ಳ ಸಾಹಿತಿಯ ವಿಮರ್ಶೆಯಾಗಿದೆ. ಇಲ್ಲಿ ಕಾಳಜಿಯ ಪ್ರಾಮುಖ್ಯತೆಯ ದೃಷ್ಟಿಯಿಂದ ಸಾಹಿತ್ಯ, ಸಂಸ್ಕೃತಿಗಳನ್ನು ಪ್ರತ್ಯೇಕಿಸುವುದು ಸುಲಭವಲ್ಲ. ಅನಂತಮೂರ್ತಿಯವರ ಲೇಖನಗಳಲ್ಲಿ ನಮ್ಮ ಸಂಸ್ಕೃತಿಯ ರಚನಾತ್ಮಕ ವಿಮರ್ಶೆ, ಸಾಹಿತ್ಯ ಚರ್ಚೆಯೊಂದಿಗೆ ಮಿಳಿತವಾಗುವುದು ಸ್ವಾಭಾವಿಕ. ಏಕೆಂದರೆ ಅವರಿಗೆ ಸಾಹಿತ್ಯ, ಒಬ್ಬ ವ್ಯಕ್ತಿ ತನ್ನ ವಿಶಿಷ್ಟ ಅನುಸಂಧಾನದ ಮೂಲಕ ಸಮಷ್ಟಿಯ ಸಾಧಾರಣ ಸ್ವರೂಪವನ್ನು ಕಂಡುಕೊಳ್ಳುವ ಮಾರ್ಗ ಮಾತ್ರವಲ್ಲ, ಸಮಾಜದ ಇಂದನ್ನು, ಅದರ ನಾಳೆಯ ಧಾಟಿಯನ್ನು ರೂಪಿಸುವ ಒಂದು ಪ್ರಬಲ ಸಾಧನವೂ ಆಗಿದೆ".
ಅನಂತಮೂರ್ತಿಯವರ ಚಿಂತನೆಯ ನಿರ್ದಿಷ್ಟ ಕ್ರಮವನ್ನು ಡಾ| ದಾಮೋದರ ರಾವ್ ಹೀಗೆ ಗುರುತಿಸುತ್ತಾರೆ - "ಅವರ ಚಿಂತನೆಯಲ್ಲಿ ಒಂದು ನಿರ್ದಿಷ್ಟ ಕ್ರಮವಿದೆ. ಎರಡು ಧ್ರುವಗಳ ಮೂಲಕ ಯಾವುದೇ ಸಮಸ್ಯೆಯನ್ನು ಪ್ರವೇಶಿಸಿ ವಿಶ್ಲೇಷಿಸುವುದು ಅನಂತಮೂರ್ತಿಯವರ ವೈಚಾರಿಕ ತಂತ್ರವಾಗಿದೆ. ಪ್ರಜ್ಞೆ-ಪರಿಸರ, ರಸಪ್ರಜ್ಞೆ-ತತ್ವ, 'ಬ್ರಾಹ್ಮಣ'-'ಶೂದ್ರ' ಇತ್ಯಾದಿ ದ್ವಂದ್ವಗಳ ತಾಕಲಾಟದ ಅನಂತರ ಒಪ್ಪಂದದ ರೀತಿಯಲ್ಲಿ ಅವರ ವಿಶ್ಲೇಷಣಕ್ರಿಯೆ ವಿರಮಿಸುತ್ತದೆ. ಧ್ರುವಗಳ ಕರ್ಷಣೆಯನ್ನು ಮರೆಯದಷ್ಟು ಸಂಕೀರ್ಣತೆ, ಎಚ್ಚರಿಕೆ ಅನಂತಮೂರ್ತಿಯವರಲ್ಲಿ ಖಂಡಿತ ಇದೆ. ಆದರೆ ಚೌಕಟ್ಟಿನ ಅನುಕೂಲಕ್ಕೋಸ್ಕರ, ಶೋಧಿತವಾಗುವ ಸನ್ನಿವೇಶವನ್ನು ಧ್ರುವೀಕರಿಸುವ ಕ್ರಿಯೆಯ ಪ್ರಾರಂಭದಲ್ಲಿಯೇ, ಒಂದು ರೀತಿಯ ಸರಳತೆ, ಸಾಂದ್ರತೆಯ ಧಕ್ಕೆ ಆಗುವ ಸಾಧ್ಯತೆಯಿದೆ. ಏಕೆಂದರೆ ಸಂಘರ್ಷದಿಂದ ಲಭಿಸುವ ನಾಟಕೀಯ ತೀವ್ರತೆಗಾಗಿ ಎರಡು ವಸ್ತುಗಳ ಮುಖಾಮುಖಿ ಮಾಡುವಾಗ ತೀರ ವಿರೋಧವಾದ ಗುಣಗಳನ್ನು ಅವುಗಳಿಗೆ ಆರೋಪಿಸಬೇಕಾಗುತ್ತದೆ. ಇದು ಅನಂತಮೂರ್ತಿಯವರ ಕತೆ, ಕಾದಂಬರಿಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ".
"ಒಂದು ದೃಷ್ಟಿಯಲ್ಲಿ ಅನಂತಮೂರ್ತಿಯವರ ವಿಮರ್ಶೆಯ ಅಂತಿಮ ಗುರಿ ಅವರು ನಿರ್ಮಿಸಿರುವ ಕಥಾಸಾಹಿತ್ಯಕ್ಕೆ ಬೇಕಾದ, ವಾಚಿಕ ವರ್ಗವನ್ನು ಸಿದ್ಧಗೊಳಿಸುವುದು" ಎನ್ನುತ್ತಾರೆ ಡಾ| ದಾಮೋದರ್ ರಾವ್.
ಕೆ. ಸತ್ಯನಾರಾಯಣ ಅವರು ವಿಮರ್ಶಕ ಅನಂತಮೂರ್ತಿಯವರ ಸಾಧನೆಗಳನ್ನು ಹೀಗೆ ಗುರುತಿಸುತ್ತಾರೆ - "ವಿಮರ್ಶಕರಾಗಿ ಅವರ ದೊಡ್ಡ ಸಾಧನೆಯೆಂದರೆ ಅಡಿಗರಂತಹ ಕವಿಗಳಿಗೆ ನಿರ್ಮಿಸಿದ ವಿಮರ್ಶೆಯ ಪರಿಭಾಷೆ ಮತ್ತು ವಿಮರ್ಶೆಯ ವಾತಾವರಣ. ಒಳ್ಳೆಯ ಕವಿ ಲೇಖಕನೊಬ್ಬ ತಾನು ಬರುವಾಗ ಒಳ್ಳೆಯ ವಿಮರ್ಶಕನೊಬ್ಬನನ್ನು ಕರೆದುಕೊಂಡು ಬರುತ್ತಾನೆ ಎಂಬ ಮಾತಿಗೆ ಅಡಿಗರ ಕಾವ್ಯ, ಅನಂತಮೂರ್ತಿಯವರ ವಿಮರ್ಶೆಯ ಅನ್ಯೋನ್ಯತೆಯೇ ಸಾಕ್ಷಿಯಾಗಿದೆ. ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ - ಇಂತಹವರುಗಳ ಬಗ್ಗೆ ಅನಂತಮೂರ್ತಿಯವರು ಬರೆದಿರುವ ವಿಮರ್ಶೆಗಳಲ್ಲಿ ಒಳನೋಟ ಸೂಕ್ಷ್ಮತೆಗಳಿದ್ದರೂ ಅವರ ವಿಮರ್ಶಾಪ್ರಜ್ಞೆ ಇಡಿಯಾಗಿ ಸ್ಪಂದಿಸಿದ್ದು ಅಡಿಗರಿಗೇ ಮಾತ್ರವೇ ಅನ್ನಿಸುತ್ತದೆ".
"ಸಾಹಿತ್ಯ ವಿಮರ್ಶೆಯನ್ನು ಸಂಸ್ಕೃತಿ ವಿಮರ್ಶೆಯ ಒಂದು ಮಾಧ್ಯಮವಾಗಿ ಬೆಳೆಸುವುದರಲ್ಲೂ ಅನಂತಮೂರ್ತಿಯವರ ಪಾತ್ರ ಬಹಳ ಮಹತ್ವದ್ದು. ಒಂದು ಕಾಲಕ್ಕೆ ಕೃತಿಯೇ ಸರ್ವಸ್ವ ಎಂದು ತಿಳಿದು ಪ್ರಾಯೋಗಿಕ ವಿಮರ್ಶೆ ಮತ್ತು ಕೃತಿನಿಷ್ಠ ವಿಮರ್ಶೆಗೆ ಬದ್ಧರಾಗಿದ್ದ ಇವರು ಅನಂತರದ ವರ್ಷಗಳಲ್ಲಿ ವಿಮರ್ಶೆಯನ್ನು ಸಂಸ್ಕೃತಿ ಚಿಂತನೆಯಾಗಿ ಬೆಳೆಸಿದರು. ಇದಕ್ಕಾಗಿ ಅನ್ಯಕ್ಷೇತ್ರಗಳ ಶಿಸ್ತನ್ನು ಜ್ಞಾನವನ್ನು ತಮ್ಮ ವಿಮರ್ಶೆಯಲ್ಲಿ ಬಳಸಿದರು. ಬದುಕನ್ನು ಸಾಹಿತ್ಯಕೃತಿಗಳನ್ನು 'ಅಧ್ಯಯನದ ವಸ್ತು'ಗಳನ್ನಾಗಿ ಕಾಣುವ, ಡಿ. ಆರ್. ನಾಗರಾಜ್ ಮಾದರಿಯ ಚಿಂತಕರಲ್ಲಿ ಅನಂತಮೂರ್ತಿಯವರ ಪ್ರಭಾವವನ್ನು, ಮುಂದುವರಿಕೆಯನ್ನು ಕಾಣಬಹುದು. ಯಾವ ವಿಮರ್ಶಾಕ್ರಮವೂ ಸ್ವಯಂಪೂರ್ಣವಾದದ್ದಲ್ಲ ಎಂಬುದು ಹಳೆಯ ಮಾತು. ನಿನ್ನೆ, ಮೊನ್ನೆಯ ತನಕ ಸಾಹಿತ್ಯ ವಿಮರ್ಶೆ, ಸೃಜನಶೀಲ ಬರವಣಿಗೆಗೆ ಪೂರಕವಾಗಿ ನಿಲ್ಲುತ್ತಿತ್ತು. ಈಗ ಸಂಸ್ಕೃತಿ ಚಿಂತನೆಯ ಮಾಧ್ಯಮವಾಗಿ ವಿಮರ್ಶೆಗೆ ತನ್ನದೇ ಆದ ಸ್ವಾಯತ್ತತೆ, ಸ್ವಂತಿಕೆ ಇದೆ. ಈ ಪರಿವರ್ತನೆಯಲ್ಲಿ ಅನಂತಮೂರ್ತಿಯವರ ಕಾಣಿಕೆ ಮಹತ್ವದ್ದು. "(ಕೆ. ಸತ್ಯನಾರಾಯಣ)
ಈ ಗ್ರಂಥದಲ್ಲಿ ಅನಂತಮೂರ್ತಿಯವರು ’ಪೂರ್ವಾಪರ’ ಸಂಕಲನಕ್ಕೆ ಬರೆದ ಪ್ರಸ್ತಾವನೆ, 'ಪೂರ್ವಾಪರ'ವನ್ನು ಕುರಿತ ಟಿ.ಪಿ. ಅಶೋಕರ ಲೇಖನ, ಬೆತ್ತಲೆಸೇವೆ ಕುರಿತ ಅನಂತಮೂರ್ತಿಯವರ ಚಿಂತನೆಗಳ ಪರಿಶೀಲನೆ - 'ಆಚರಣೆ ಮತ್ತು ಅರ್ಥ', 'ನವ್ಯಾಲೋಕ' ಸಂಕಲನಕ್ಕೆ ನಾನು ಬರೆದಿರುವ ಮುನ್ನುಡಿ, ಹಾಗೂ ರಾಮಚಂದ್ರದೇವ ಅವರ 'ಅನಂತಮೂರ್ತಿಯವರ ಸಾಹಿತ್ಯ ಒಂದು ಮುಖಾಮುಖಿ' - ಎಂಬ ಲೇಖನಗಳಿವೆ. ಈ ಸಂಪಾದಕೀಯದ 'ವೈಚಾರಿಕ ನಿಲುವುಗಳು' ಎಂಬ ಭಾಗದಲ್ಲಿ ಅನಂತಮೂರ್ತಿಯವರ ಕೆಲವು ಮುಖ್ಯ ಲೇಖನಗಳ ಸ್ಥೂಲ ಪರಿಚಯ ಇದೆ.
ಈ ಕಾಲದ ಅತ್ಯಂತ ಕಷ್ಟದ, ಆದರೆ ಅತ್ಯಂತ ಮುಖ್ಯ ಹುಡುಕಾಟವೆಂದರೆ ವಸಾಹತುಶಾಹಿ ಚರಿತ್ರೆ ಸೃಷ್ಟಿಸಿದ ಕೀಳರಿಮೆಯಿಂದ ಭಾರತೀಯ ಹೇಗೆ ಮುಕ್ತನಾಗಬಲ್ಲ ಎಂಬುದು; ವಸಾಹತುಶಾಹಿ ದಿಗ್ಬಂಧನವನ್ನು ಮನಸ್ಸಿನಿಂದಲೇ ಉಚ್ಚಾಟಿಸುವುದು ರಾವು ಬಿಡಿಸುವಂಥ ಕ್ರಿಯೆ ಎಂದು ''ಪೂರ್ವಾಪರ'ದ ಪ್ರಸ್ತಾವನೆಯಲ್ಲಿ ಅನಂತಮೂರ್ತಿ ಬರೆದಿದ್ದಾರೆ. 'ಪುನರುತ್ಥಾನವಾದಿಯೂ ಆಗದಂತೆ, ಕೇವಲ ಪಾಶ್ಚಾತ್ಯರ ಬೆನ್ನು ಹತ್ತದಂತೆ ನಮ್ಮ ನಾಗರೀಕತೆಯನ್ನು ಹೇಗೆ ಕಟ್ಟಿಕೊಳ್ಳಬೇಕೆಂಬ ತವಕ ಈ ಲೇಖನಗಳಲ್ಲಿ ಹರಿದಿದೆ' ಎನ್ನುತ್ತಾರೆ ಟಿ.ಪಿ. ಅಶೋಕ.
'ಕರ್ನಾಟಕದ ಚಂದ್ರಗುತ್ತಿಯ ಬೆತ್ತಲೆಸೇವೆಯ ಆಚರಣೆ ಮತ್ತು ಅದಕ್ಕೆ ಬಂದ ಪ್ರಗತಿಶೀಲರ ವಿರೋಧ - ಇವನ್ನು ಕೇಂದ್ರವಾಗಿ ಇಟ್ಟುಕೊಡು ಅನಂತಮೂರ್ತಿ ತನ್ನ ಪ್ರಬಂಧದಲ್ಲಿ ಪರಂಪರೆ ಮತ್ತು ಆಧುನಿಕತೆಗಳನ್ನು ವಿಶ್ಲೇಷಿಸುತ್ತಾರೆ. ಅನೇಕರು ತಿಳಿದುಕೊಂಡಿರುವಂತೆ ಅವರು ಇಲ್ಲಿ ಬೆತ್ತಲೆಸೇವೆಯನ್ನು ಸಮರ್ಥಿಸಿಲ್ಲ ಎನ್ನುವ ಜಿ. ರಾಜಶೇಖರ್, "ಅನಂತಮೂರ್ತಿ ತನ್ನ ಪ್ರಬಂಧದಲ್ಲಿ ಬೆತ್ತಲೆಸೇವೆಯನ್ನು ನಮ್ಮ ಬಹುವಚನಿ ಪರಂಪರೆಯ ಒಂದು ಆಚರಣೆ ಎಂತಲೂ, ಅದಕ್ಕೆ ಬಂದ ವಿರೋಧವನ್ನು ಪಶ್ಚಿಮಮುಖಿ ಆಧುನಿಕ ಮತ್ತು ಶುಷ್ಕ ವೈಚಾರಿಕತೆಯಿದ್ದು ಎಂಬಂತೆಯೂ ಚಿತ್ರಿಸಿದ್ದಾರೆ. ಎಲ್ಲವೂ ಕಲಸುಮೇಲೋಗರವಾಗಿರುವ ಮತ್ತು ಧಾರ್ಮಿಕ ನಂಬಿಕೆ ಕೂಡ ಸಮಸ್ಯಾತ್ಮಕವಾಗಿರುವ ನಮ್ಮ ಕಾಲದ ಸ್ಥಿತಿಯನ್ನು ಇಂತಹ ನೇರ ಸರಳ ವರ್ಗೀಕರಣಗಳಿಂದ ವಿವರಿಸಲು ಬರುವುದಿಲ್ಲ. ರಾಮಕೃಷ್ಣ ಪರಮಹಂಸ, ಗಾಂಧಿ ಅಥವಾ ಕುವೆಂಪು ಅಂತಹವರ ಧಾರ್ಮಿಕ ನಂಬಿಕೆಯ ಸ್ವರೂಪವನ್ನು ಕೂಡ ಅದು ವಿವರಿಸಲಾರದು" ಎಂದು ರಾಜಶೇಖರ್ ವಾದಿಸುತ್ತಾರೆ.
ಡಾ| ರಾಮಚಂದ್ರದೇವ ಅವರು ಬೆತ್ತಲೆಸೇವೆಯನ್ನು ಕುರಿತ ಗಂಭೀರ ಸಂವಾದವನ್ನು ಹೊಸ ಒಳನೋಟಗಳೊಂದಿಗೆ ಮುಂದುವರಿಸಿದ್ದಾರೆ - ನಮ್ಮ ಸಂಸ್ಕೃತಿಯಲ್ಲಿ ದಿಗಂಬರತ್ವ ಎರಡು ರೀತಿಯಲ್ಲಿ ವ್ಯಕ್ತವಾಗಿದೆ. ಒಂದು, ಅರಿವುಪೂರ್ವದ ದಿಗಂಬರತ್ವ; ಇನ್ನೊಂದು ಸ್ವಂತದ ಮತ್ತು ಸುತ್ತಲಿನ ಅರಿವಿನಿಂದ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡ ದಿಗಂಬರತ್ವ, ಚಂದ್ರಗುತ್ತಿಯಲ್ಲಿ ನಡೆದ ಜೋಗಿತಿಯರ ಬೆತ್ತಲೆಸೇವೆ ಅರಿವುಪೂರ್ವದ ದಿಗಂಬರತ್ವ - ಅಕ್ಕಮಹಾದೇವಿಯ ದಿಗಂಬರತ್ವ ಅಥವಾ ಬಾಹುಬಲಿಯ ದಿಗಂಬರತ್ವ ಸ್ವಂತದ ಸಂಪೂರ್ಣ ಅರಿವಿನಿಂದ ಹುಟ್ಟಿದ ಪ್ರಜ್ಞಾಪೂರ್ವಕ ಆಯ್ಕೆ ಎಂದು ವಿವರಿಸುವ ಅವರು, ಅರಿವುಪೂರ್ವದ ಬೆತ್ತಲೆಸೇವೆಯಂಥಾ ಆಚರಣೆಯನ್ನು ವೈಭವೀಕರಿಸುವುದರಿಂದ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
'ನವ್ಯಾಲೋಕ'ವನ್ನು ಕುರಿತು ಡಾ| ಸಿ. ಎನ್. ರಾಮಚಂದ್ರನ್," ಅಡಿಗರ 'ಭೂಮಿಗೀತ'ದ ಸಂಕಲನ; ಚನ್ನಯ್ಯನವರ 'ಆಮೆ', 'ಗಂಗಾಧರ ಚಿತ್ತಾಲರ ಕವನಗಳು'; ಶ್ರೀಕೃಷ್ಣ ಆಲನಹಳ್ಳಿಯವರ 'ತಪ್ತ', ಕವಿ 'ಏಟ್ಸ್' ಮುಂತಾದ ಮುನ್ನುಡಿಗಳನ್ನು ನವ್ಯ ವಿಮರ್ಶೆಯ ಅತ್ಯುತ್ತಮ ಮಾದರಿಗಳೆಂದು ಪರಿಗಣಿಸಬಹುದು. ಇವುಗಳಲ್ಲಿ ನಾವು ಖ್ಯಾತ ಅಮೆರಿಕನ್ ನವ್ಯ ವಿಮರ್ಶಕ ಕ್ಲಿಯಂತ್ ಬ್ರೂಕ್ಸ್‌ನ ವಿಮರ್ಶೆಯಲ್ಲಿ ಕಂಡುಬರುವ ಶ್ರೀಮಂತ ಸಾಹಿತ್ಯಕ ಸಂವೇದನೆ, ಸೂಕ್ಷ್ಮ ವಿಶ್ಲೇಷಣೆ ಮತ್ತು ಸಮಗ್ರ ಸ್ಪಂದನಶೀಲತೆ ಇವುಗಳನ್ನು ಕಾಣುತ್ತೇವೆ" ಎನ್ನುತ್ತಾರೆ. ಡಾ| ಬಿ. ದಾಮೋದರ ರಾಯರ ಅಭಿಪ್ರಾಯದಂತೆ, 'ಭೂಮಿಗೀತ'ದ ಮುನ್ನುಡಿ ಅನಂತಮೂರ್ತಿ ವಾಙ್ಮಯದಲ್ಲೇ ಅತ್ಯಂತ ಶ್ರೇಷ್ಠವಾದ ಬರವಣಿಗೆ.
ಡಾ| ರಾಮಚಂದ್ರದೇವ ಅವರ ' ಅನಂತಮೂರ್ತಿಯವರ ಸಾಹಿತ್ಯ ಒಂದು ಮುಖಾಮುಖಿ' ಲೇಖನದಲ್ಲಿ ಅನಂತಮೂರ್ತಿಯವರ ಕೃತಿಗಳನ್ನು ಕುರಿತ ಹೊಸ ತಲೆಮಾರಿನ ಲೇಖಕ-ವಿಮರ್ಶಕರೊಬ್ಬರ ಪ್ರತಿಕ್ರಿಯೆಯನ್ನು ಕಾಣುತ್ತೇವೆ. ರಾಮಚಂದ್ರದೇವ ಅವರು ಅನಂತಮೂರ್ತಿಯವರ ಕೃತಿಗಳನ್ನು ಮೆಚ್ಚಿಕೊಳ್ಳುವುದು ಈ ಕಾರಣಗಳಿಗಾಗಿ - 1. ಅವರು ನಮ್ಮ ಕಾಲದ ಬದಲಾವಣೆಗಳನ್ನು ದೊಡ್ಡ ಮಟ್ಟದಲ್ಲಿ ಕಲಾಕೃತಿ ಮಾಡುತ್ತಾರೆ. 2. ಅವರ ಕತೆ-ಕಾದಂಬರಿಗಳಲ್ಲಿ ಕಾವ್ಯದ ಧ್ವನಿಶಕ್ತಿ ಇದೆ. 'ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ' ಎಂಬ ಲೇಖನವನ್ನು ಕುರಿತ ತನ್ನ ಅಭಿಪ್ರಾಯವನ್ನು, ಅನಂತಮೂರ್ತಿಯವರ ಕೃತಿಗಳ ಶೂದ್ರ ಪಾತ್ರಗಳನ್ನು ಕುರಿತ ತನ್ನ ಆಕ್ಷೇಪವನ್ನು ರಾಮಚಂದ್ರದೇವ ವಿವರಿಸಿದ್ದಾರೆ. ರಾಮಚಂದ್ರ ಶರ್ಮ ಹಾಗೂ ಗಂಗಾಧರ ಚಿತ್ತಾಲರ ಕಾವ್ಯವನ್ನು ಕುರಿತ ಅನಂತಮೂರ್ತಿಯವರ ವಿಮರ್ಶೆಯನ್ನು ಡಾ| ದೇವ ಮುಂದುವರಿಸಿದ್ದಾರೆ. ಚಿತ್ತಾಲರು ಧ್ವನಿ ಸಿದ್ಧಾಂತಕ್ಕೆ ಸವಾಲೆಸೆಯುತ್ತಾರೆ ಎಂಬುದನ್ನು ದಾಮೋದರ ರಾವ್ ಹಾಗೂ ಅನಂತಮೂರ್ತಿ ಗಮನಿಸಿದ್ದಾರೆ. 'ಧ್ವನಿಪೂರ್ಣತೆಯೇ ಧ್ವನಿಕಾವ್ಯವೇ ಶ್ರೇಷ್ಠ ಕಾವ್ಯವೆಂದು ಒಪ್ಪಿಕೊಳ್ಳದೆಯೂ ಮೀಮಾಂಸೆಯನ್ನು ಮುಂದುವರಿಸಲು ಸಾಧ್ಯವೇ?' ಎಂಬ ಡಾ| ದಾಮೋದರ ರಾಯರ ಪ್ರಶ್ನೆಗೆ ಡಾ| ರಾಮಚಂದ್ರದೇವ ಅವರ ಉತ್ತರ ಹೀಗಿದೆ - "ಇದಕ್ಕೆ ಉತ್ತರ, ಭಾವತೀವ್ರತೆ, ಬೆಚ್ಚಗಿನ ಅನುಭವ, ಕಾಡುವ ಶಕ್ತಿ ಇರುವುದೇ ಧ್ವನಿ ಇಲ್ಲದೆ ಕೂಡಾ ಚಿತ್ತಾಲರ ಕಾವ್ಯ ನಮ್ಮನ್ನು ಮುಟ್ಟಲು ಕಾರಣ. ಧ್ವನಿಶಕ್ತಿ ಇದ್ದು ಭಾವತೀವ್ರತೆ, ಕಾಡುವ ಶಕ್ತಿ ಇಲ್ಲದಿದ್ದರೆ ಬರವಣಿಗೆ ನಮ್ಮನ್ನು ಮುಟ್ಟುವುದಿಲ್ಲ. ಭಾವತೀವ್ರತೆಯೇ, ಕಾಡುವ ಶಕ್ತಿಯೇ ಕಾವ್ಯದ ಜೀವಾಳ; ಧ್ವನಿಯಲ್ಲ. " ಡಾ| ರಾಮಚಂದ್ರದೇವ ಅವರು ಬರೆದಿರುವಂತೆ, ರಾಜಕೀಯ ಖದೀಮರ ಬಗ್ಗೆ ಅನಂತಮೂರ್ತಿಯವರಿಗೆ ಶಿವರಾಮ ಕಾರಂತ, ಅಡಿಗ, ಲಂಕೇಶರ ಹಾಗೆ ಸಿಟ್ಟಿಲ್ಲ. ಖದೀಮತನ ಸಹಾ ಬದಲಾವಣೆಯ ಮೊದಲಿನ ಹಂತ ಇರಬಹುದು ಎಂಬುದು ಅವರ ತಿಳುವಳಿಕೆ.
ಸಮಕಾಲೀನ ವಿಮರ್ಶೆಯ ಸಮಸ್ಯೆಗಳನ್ನು ಯೋಚಿಸುವಾಗ ಇಂಗ್ಲಿಷ್ ಕವಿ ಅಲೆಕ್ಸಾಂಡರ್ ಪೋಪ್‍ನ ಕವನವೊಂದರ ಸಾಲುಗಳು ನೆನಪಾಗುತ್ತವೆ - "ಗಾಯಗೊಳಿಸಲು ಆಸೆ, ಆದರೆ ಸ್ವತಃ ಘಾತಿಸಲು ಹೆದರಿಕೆ. ದೋಷವೊಂದರ ಸೂಚನೆ. ಆದರೆ ಅದರ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಲು ಹಿಂಜರಿಕೆ". ಅನಂತಮೂರ್ತಿಯವರ ಕೃತಿಗಳ ವಿಮರ್ಶೆ ಗಂಭೀರವಾಗಿ ನಡೆದಿದೆ ಅನ್ನಿಸುತ್ತದೆ. ಅಡಿಗರು ಪ್ರಸ್ತಾಪಿಸಿದ ನೈತಿಕ ಧೈರ್ಯ ಇಲ್ಲಿ ಕಾಣಿಸುತ್ತದೆ. ಓದುಗರು, ಸಾಹಿತ್ಯ ವಿದ್ಯಾರ್ಥಿಗಳು ಹಾಗೂ ವಿಮರ್ಶಕರಿಗಾಗಿ ಅನಂತಮೂರ್ತಿಯವರ ಕೃತಿಗಳ ಕುರಿತ ಅತ್ಯುತ್ತಮ ವಿಮರ್ಶೆಯನ್ನು ಸಂಕಲಿಸುವುದೇ ಈ ಗ್ರಂಥ ಸಂಪಾದನೆಯಲ್ಲಿ ನನ್ನ ಮುಖ್ಯ ಉದ್ದೇಶ. ಈ ಸಂಪಾದಕೀಯದಲ್ಲಿ ಅನಂತಮೂರ್ತಿಯವರ ಕೃತಿಗಳ ವಿವಿಧ ವಿಮರ್ಶೆಗಳು ಮುಖಾಮುಖಿಯಾಗಿವೆ. ಸಂಪಾದಕನಾದ ನಾನು ಈ ಮುಖಾಮುಖಿಯ ನಡುವೆ ಕೆಲವು ಕಡೆಗಳಲ್ಲಿ ಟೀಕೆ-ಟಿಪ್ಪಣಿ ಮಾಡಲು ಹೋಗಿಲ್ಲ. ಇದಕ್ಕೆ ಕಾರಣಗಳು - ವಿಮರ್ಶೆಯ ವಿಮರ್ಶೆ ಸುಲಭದ ಕೆಲಸವೇನೂ ಅಲ್ಲ, ಅವಸರದ ತೀರ್ಮಾನಗಳು ಸರಿಯಲ್ಲ. ಗೋವಿಂದ ಪೈಗಳು ಹೇಳುವ ಸಮಕಾಲೀನ ವಿಮರ್ಶೆಯ ಸಮಸ್ಯೆಗಳಿಂದ ನಾನು ಕೂಡ ಹೊರತಲ್ಲ
*****
1870-73ರಲ್ಲಿ ನಾನು ಮಂಗಳೂರಿನಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದೆ. 1973ರಲ್ಲಿ ಮಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವೊಂದಕ್ಕೆ ಡಾ| ಯು. ಆರ್. ಅನಂತಮೂರ್ತಿಯವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಎದುರು ಕನ್ನಡ ವಿಮರ್ಶೆಯ ಕುರಿತು ಒಂದು ಪ್ರಬಂಧ ಮಂಡಿಸಿದ್ದು, ಅವರು ಮೆಚ್ಚುಗೆ ಸೂಚಿಸಿದ್ದು ನನ್ನ ನೆನಪಿನಲ್ಲಿ ಹಸಿರಾಗಿದೆ. ಅನಂತಮೂರ್ತಿಯವರ ನಿಕಟ ಒಡನಾಟದ ಅವಕಾಶ ನನಗೆ ಸಿಕ್ಕಿಲ್ಲ. ಅವರ ಸ್ವಂತ ಮನೆಗೆ ನಾನು ಒಮ್ಮೆಯೂ ಹೋಗಿಲ್ಲ. ಹೀಗಾಗಿ, ಈ ಪುಸ್ತಕಕ್ಕಾಗಿ ನಾನು ಬರೆದಿರುವ ಅವರ ವ್ಯಕ್ತಿಪರಿಚಯದಲ್ಲಿ ಆತ್ಮೀಯತೆಯ ಸ್ಪರ್ಶ ಕಾಣಿಸದಿರುವುದು ಸಹಜ.
1995ರ ಅವಧಿಯಲ್ಲಿ ಅನಂತಮೂರ್ತಿಯವರು ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದಲ್ಲಿ ಗೌರವನಿರ್ದೇಶಕರಾಗಿದ್ದರು. ಮಣಿಪಾಲಕ್ಕೆ ಆಗಾಗ ಬಂದುಹೋಗುತ್ತಿದ್ದರು. ಗೋಪಾಲಕೃಷ್ಣ ಅಡಿಗರು ಉಡುಪಿಯಲ್ಲಿದ್ದಾಗ ಅವರ ಮಾರ್ಗದರ್ಶನದಲ್ಲಿ ಉಡುಪಿಯ 'ರೈಟರ್ಸ್ ಕ್ಲಬ್'ನ ಹಲವು ಕಾರ್ಯಕ್ರಮಗಳು ನಡೆದುವು. ಅನಂತಮೂರ್ತಿಯವರ ಮಾರ್ಗದರ್ಶನದಲ್ಲಿ ಅಂಥ ಕಾರ್ಯಕ್ರಮಗಳನ್ನು ಪುನಾರಾರಂಭಿಸಲು ನನಗೆ ಆಸಕ್ತಿ ಇತ್ತು. ಆದರೆ ಅವರ ಬಿಡುವಿಲ್ಲದ ಪ್ರವಾಸಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ಆದರೆ 'ಮಾಹೆ'ಯ ಮಾನವಿಕ ವಿಭಾಗದ ಸಹ ನಿರ್ದೇಶಕರಾಗಿದ್ದ ಡಾ| ಮುರಾರಿ ಬಲ್ಲಾಳರು, ಅನಂತಮೂರ್ತಿಯವರ ಮಾರ್ಗದರ್ಶನದಲ್ಲಿ ಹತ್ತಾರು ಸಾಹಿತ್ಯಕ ವೈಚಾರಿಕ ಉಪನ್ಯಾಸಗಳನ್ನು ಏರ್ಪಡಿಸಿದರು. ಉಡುಪಿಯ 'ರಥಬೀದಿ ಗೆಳೆಯರ' ಹಲವು ಸಮಾರಂಭಗಳಲ್ಲಿ ಅನಂತಮೂರ್ತಿ ಭಾಗವಹಿಸಿದರು.
ನಾನು, (ಪ್ರೊ| ಹೆರಂಜೆಯವರ ಜತೆಯಲ್ಲಿ) ಸಂಪಾದಿಸಿದ 'ಗೋವಿಂದ ಪೈ ಸಂಶೋಧನ ಸಂಪುಟ' ಅನಂತಮೂರ್ತಿಯವರ ಮೆಚ್ಚುಗೆ ಗಳಿಸಿತು. ಬಿ.ಎ. ಕಾರಂತರನ್ನು ಕುರಿತು ನಾನೊಂದು ಗ್ರಂಥ ಸಂಪಾದಿಸುತ್ತಿರುವುದು ತಿಳಿದಾಗ, ವಿಶೇಷ ಆಸಕ್ತಿವಹಿಸಿ ಒಂದು ಲೇಖನ ನೀಡಿದರು. ಆ ಲೇಖನಕ್ಕೆ ನಾನೇ ಲಿಪಿಕಾರನಾದೆ. ತನ್ನ ಲೇಖನಗಳ ಎರಡು ಸಂಕಲನಗಳನ್ನು ಸಂಪಾದಿಸಲು ಅನಂತಮೂರ್ತಿ ನನಗೆ ಅನುಮತಿ ನೀಡಿದರು. ಅನಂತಮೂರ್ತಿಯವರ ನೂರೈವತ್ತು ಪುಟಗಳ ಲೇಖನಸಂಕಲನವೊಂದನ್ನು ಪ್ರಕಟಿಸಲು ಸಾಧ್ಯವೇ? ಎಂದು ವಿಚಾರಿಸಿ ನಮ್ಮ ರಾಜ್ಯದ ಒಂದು ವಿಶ್ವವಿದ್ಯಾನಿಲಯಕ್ಕೆ ನಾನು ಪತ್ರ ಬರೆದೆ. ಆರ್ಥಿಕ ಅಡಚಣೆಯಿಂದ ಪುಸ್ತಕ ಪ್ರಕಟಣೆ ಸಾಧ್ಯವಿಲ್ಲವೆಂದು ಆ ವಿಶ್ವವಿದ್ಯಾನಿಲಯ ಪ್ರಸಾರಾಂಗದಿಂದ ಉತ್ತರ ಬಂತು! (ನಾನು ಸಂಕಲಿಸಿದ ಅನಂತಮೂರ್ತಿಯವರ 'ಸಂಸ್ಕೃತಿ ಮತ್ತು ಅಡಿಗ' ಸಂಕಲನವನ್ನು ಮುಂದೆ ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿತು). ತನ್ನ ಮುನ್ನುಡಿಗಳ ಸಂಕಲನಕ್ಕೆ ('ನವ್ಯಾಲೋಕ') ಮುನ್ನಡಿ ಬರೆಯಬೇಕೆಂದು ಅನಂತಮೂರ್ತಿ ನನ್ನನ್ನು ವಿನಂತಿಸಿದರು. 'ದೊಡ್ಡವರ ಸಹವಾಸ'ದ ಬಗ್ಗೆ ಅಂಜುತ್ತಲೇ ನಾನು ಆ ಮುನ್ನುಡಿಯನ್ನು ಬರೆದೆ.
ಯು. ಆರ್. ಅನಂತಮೂರ್ತಿ (2000)
(ಸಂ) - ಮುರಳೀಧರ ಉಪಾಧ್ಯ ಹಿರಿಯಡಕ
No comments:
Post a Comment