stat Counter



Friday, December 24, 2010

Idiom of Criticism in Kannada

ಕನ್ನಡ ವಿಮರ್ಶೆಯ ಭಾಷೆ
- ಸುಬ್ರಾಯ ಚೊಕ್ಕಾಡಿ


ಇಂದು ಬರವಣಿಗೆಯಲ್ಲೂ ಪಾಶ್ಚಾತ್ಯ ಪ್ರಭಾವ ಎದ್ದು ಕಾಣುತ್ತಿದೆ.  ಜೀವನಾನುಭವಕ್ಕಿಂತ ತರಗತಿ ಕೋಣೆಯ ಇಲ್ಲವೇ ಲೈಬ್ರೆರಿ ಕೋಣೆಯ ಓದಿನ ಪ್ರಭಾವವೇ ಹೆಚ್ಚು ಕಾಣಿಸುತ್ತಿದೆ. ಉದಾಹರಣೆಗೆ ನಮ್ಮಲ್ಲಿ ಬರುತ್ತಿರುವ ವಿಮರ್ಶೆಗಳನ್ನೇ ನೋಡಿ.  ಈಗ ವಿಮರ್ಶೆ ಹೆಚ್ಚು ಸೂಕ್ಷ್ಮವಾಗಿದೆ.  ಅನೇಕ ಸಲ ಕೂದಲು ಸೀಳುವ ವಿಮರ್ಶೆಯಾಗಿಯೂ ಕಾಣಿಸಿಕೊಂಡಿದೆ.  ನಿಜ.  ಆದರೆ,  ಪಾರ್ಶ್ವ ನೋಟಗಳ ಆಧಿಕ್ಯದಿಂದ ಒಂದು ಕೃತಿಯ ಸಮಗ್ರ ನೋಟವೇ ಮಾಯವಾಗಿಲ್ಲವೇ? 

ವಿಮರ್ಶೆಯನ್ನು ಓದುವಾಗ, ಆ ಕೃತಿಯನ್ನು ವಿಮರ್ಶಕ ಓದಿ ಸಂತೋಷಪಟ್ಟಿದ್ದಾನೆ, ಇಲ್ಲವೇ ಅತೃಪ್ತಿಗೊಂಡಿದ್ದಾನೆ ಎಂಬ ಅನುಭವ ನಮಗಾಗುತ್ತದೆಯೇ?  ವಿದೇಶಗಳಿಂದ ಅನೇಕ ಹೊಸ ಹೊಸ ವಿಮರ್ಶಾಕ್ರಮಗಳು, ಮಾನದಂಡಗಳು ಆಮದಾಗುತ್ತಿವೆ.  ಅವನ್ನೆಲ್ಲ ಎಷ್ಟು ಪ್ರಮಾಣದಲ್ಲಿ ಹೇಗೆ ಬಳಸಬೇಕು ಎಂಬುದರ ವಿವೇಚನೆಯಿಲ್ಲದೆ, ಕುರುಡಾಗಿ ಇದ್ದಕ್ಕಿದ್ದಂತೆ ಬಳಸಿಕೊಳ್ಳುವುದು ಎಷ್ಟು ಸರಿ?  ಒಂದು ಸಂಸ್ಕೃತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಿದ್ಧಾಂತಗಳು, ವಿಮರ್ಶಾ ಪರಿಕರಗಳು, ಭಿನ್ನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕೃತಿಯೊಂದನ್ನು ಅಳೆಯುವ ಸಾಧನಗಳಾಗುವುದು ಸರಿಯಾಗುತ್ತದೆಯೇ?  ಒಂದು ಕೃತಿಯ ಸಮಗ್ರ ಅನುಭವವನ್ನು ಕಟ್ಟಿಕೊಡುವ ನಮ್ಮದೇ ಮಾನದಂಡಗಳ ನಿರ್ಮಾಣದ ಅಗತ್ಯವಿಲ್ಲವೇ?  ಸಮಗ್ರ ನೋಟವನ್ನು ನೀಡದೇ ಪಾರ್ಶ್ವ ನೋಟಗಳನ್ನು ನೀಡುವ ಕ್ರಮ ಎಷ್ಟು ಸರಿ?  ಇಂಥ ಅನೇಕ ಪ್ರಶ್ನೆಗಳು ನನ್ನನ್ನು ಕಾಡಿವೆ.  ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.  ಇನ್ನು ಸಂಸ್ಕೃತಿ ವಿಮಶೇಯ ಹೆಸರಿನಲ್ಲಿ ಕೃತಿಯೊಂದು ನೆಪಮಾತ್ರವಾಗಿ, ವಿಮರ್ಶಕನ ಪಂಡಿತ್ಯವೇ ವಿಜೃಂಭಿಸುವುದನ್ನು ನಾನು ಕಂಡಿದ್ದೇನೆ.

ಇದರ ಜೊತೆ ಭಾಷೆಯ ಕ್ಲಿಷ್ಟ ಹಾಗೂ ಅಸಮರ್ಪಕ ಬಳಕೆ ಆಸಕ್ತ ಓದುಗನ ಓದಿನ ಸುಖವನ್ನೇ ನಾಶಪಡಿಸುವುದನ್ನು ಕಂಡಿದ್ದೇನೆ.  ಅನೇಕ ಸಲ ಇದು ಕನ್ನಡವೇ ಎಂಬ ಅನುಮಾನ ನನ್ನನ್ನು ಕಾಡಿದ್ದಿದೆ.  ತತ್‍ಕ್ಷಣಕ್ಕೆ ನನ್ನ ಕೈಗೆ ಸಿಕ್ಕಿದ ಈ ಕೆಲವು ಉದಾಹರಣೆಗಳನ್ನು ನೋಡಿ:

1. ಜೈವಿಕ ನಿಯತಿಯ ನೆಲಯಲ್ಲಿ ಲಿಂಗ ಸಂಬಂಧಗಳನ್ನು ಪರಿಭಾವಿಸಿಕೊಳ್ಳುವ ನೆಲೆಯಲ್ಲಿ ಆರ್ಥಿಕೋತ್ಪಾದನೆ ಮತ್ತು ಸಂತಾನೋತ್ಪಾದನೆಗಳನ್ನು ಪರಸ್ಪರ ಪ್ರತ್ಯೇಕ ಕಾರ್ಯಭಾರವಾಗಿ ವರ್ಗಾಯಿಸಿಕೊಳ್ಳುವುದು.
2. ಆ ಕ್ರಿಯೆ ನಡೆದಾಗ ಅವರು ಯಾವುದೇ ಖಿನ್ನತೆ, ಅಸಹಾಯಕತೆ ಮತ್ತು ನಿರುತ್ಸಾಹವನ್ನು ಆತ್ಮಹತ್ಯೆ ಮಾಡಿಕೊಳ್ಳುವವರಂತೆ ತೋರುವುದಿಲ್ಲ.

3. ಇದರಿಂದಾಗಿ ಸಮಾಜ ಒಡೆದುಹೋಗಿ ಸ್ವಂತದ್ದರ ಬಗ್ಗೆ ತನ್ನ ತಾನುಸಿಕೊಳ್ಳುವ ಬಗ್ಗೆ ಕಾಳಜಿಯಾಗಿ ಸ್ವಕೇಂದ್ರಿತ ಸುರಕ್ಷತೆ ಒಂದೇ ಬೇಕೆನಿಸುತ್ತದೆ.

4. ಇದಕ್ಕೆ ಬೇಕಾದುದು ವಿಶಿಷ್ಟ ಸಾಮಾಜಿ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವುದರಿಂದ ಎಂಧ ಕ್ರೂರ ಶಕ್ತಿಗಿಂತಲೂ ಒಳ್ಳೆಯ ಸಾಧನೆ ಆಗುತ್ತದೆ.

ನಿಮಗೇನಾದರೂ ಅರ್ಥವಾಯಿತೆ?  ನನಗಂತೂ ಆಗಿಲ್ಲ.  ಇಂಥ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು.  ನಮ್ಮ ಸಾಹಿತ್ಯ ಪ್ರೇಮವನ್ನು ಕೊಲ್ಲಲು ಇಂಥ ಒಂದರೆಡು ಸಾಲುಗಳೇ ಸಾಕು.  ಜನ ಸಾಹಿತ್ಯವನ್ನು ಓದುವುದಿಲ್ಲ; ದೂರ ಹೋಗುತ್ತಿದ್ದಾರೆ ಎಂದು ಆಕ್ಷೇಪಿಸುವವರು ಇದನ್ನು ಗಮನಿಸಬೇಕು.

ಅಂದರೆ, ಇವರಿಗೆ ಭಾಷೆಯ ಬಳಕೆಯ ಬಗ್ಗೆ ಅವಜ್ಞೆ ಇದೆ.  ಭಾಷೆಯ ಶುದ್ಧ ಹಾಗೂ ಸೂಕ್ಷ್ಮ ರೂಪದ ಬಳಕೆ ಇಂದು ಮರೀಚಿಕೆಯಾಗುತ್ತಿದೆ.  ಆ ಕಡೆಗೆ ದಿವ್ಯ ನಿರ್ಲಕ್ಷ್ಯ ಹಾಗೂ ಹೇಗೆ ಬರೆದರೂ ತಪ್ಪಲ್ಲ ಎನ್ನುವ ಉಡಾಫೆಯ ಸಮರ್ಥನೆ ತುಂಬಾ ಆತಂಕಪಡುವಂಥದ್ದು.  ಅನೇಕ ಸಂದರ್ಭಗಳಲ್ಲಿ ಇವರು ಇಂಗ್ಲಿಷ್‍ನಲ್ಲಿಯೋಚಿಸಿ, ಅದನ್ನು ಕನ್ನಡಕ್ಕೆ ಅನುವಾದಿಸಿ ಬರೆಯುತ್ತಾರೇನೋ ಅನ್ನಿಸಿದರೆ, ಅದನ್ನು ತಪ್ಪನ್ನೆಲಾಗದು.  ಇಂಗ್ಲಿಷ್‍ನ ದಾಸ್ಯ ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂಬುದಂತೂ ನಿಜ.
(ವಿಘಟನೆಯ ಬಿರುಕುಗಳು; ಕಟ್ಟುವ ಕನಸುಗಳು', ದಕ್ಷಿಣ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ (2006)ದಿಂದ ಆಯ್ದ ಭಾಗ)
mupadhyahiri.blogspot.com[sakheegeetha]
ಸಮಾಲೋಕ
ಸುಬ್ರಾಯ ಚೊಕ್ಕಾಡಿ
ಚಾಣಕ್ಯ ಪ್ರಕಾಶನ, ವಿಜಾಪುರ
ಮೊದಲ ಮುದ್ರಣ 2010
ಬೆಲೆ 85/-

No comments:

Post a Comment