ಕನಕನ ಭಕ್ತಿ: ಮಾತಿನಲ್ಲಿ ಮೈದೆಳೆಯುವ ದೇವರ ಸಮಸ್ಯೆ
- ಜಿ. ರಾಜಶೇಖರ
- ಜಿ. ರಾಜಶೇಖರ
ಕನಕನ ರಚನೆಗಳನ್ನು ಉತ್ತರಕರ್ನಾಟಕದ ಜನಪರರು ಪ್ರಸ್ತುತಪಡಿಸುವ ವಿಧಾನ ಮತ್ತು ಅದರ ಅರ್ಥವಂತಿಕೆ ಕುರಿತು ವೀರೇಶ ಬಡಿಗೇರ ಸೋದಾಹರಣವಾಗಿ ನಿರೂಪಿಸಿದ್ದಾರೆ. ಕನಕನ ಸಮಕಾಲೀನ ಜಾನಪದ ಪ್ರಸ್ತುತಿಯ ಪ್ರಾತ್ಯಕ್ಷಿಕೆ ಸಮೇತ ಅವರು ಮಾಡಿದ ಉಪನ್ಯಾಸ ಸೊಗಸಾಗಿತ್ತು; ಗಾಢವಾಗಿಯೂ ಇತ್ತು. ಗೆಳೆಯ ರಾಜರಾಮ ತೋಳ್ಪಾಡಿ, ಉಡುಪಿ ಕ್ಷೇತ್ರದ ಜೊತೆ ಕನಕನಿಗೆ ಇದ್ದ ಸಮಸ್ಯಾತ್ಮಕ ಸಂಬಂಧ ಕುರಿತು ಪ್ರಬಂಧ ಮಂಡಿಸಿದ್ದಾರೆ. ತೋಳ್ಪಾಡಿ ಉಡುಪಿಯ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರು. ವ್ಯಕ್ತಿಗತ ಒಳನೋಟಗಳ ಜೊತೆ ಸಮಾಜಶಾಸ್ತ್ರದ ಶಿಸ್ತನ್ನೂ ಮೈಗೂಡಿಸಿಕೊಂಡಿರುವ ತೋಳ್ಪಾಡಿ ಅವರ ಪ್ರಬಂಧ ನಮ್ಮನ್ನು ಆಳವಾದ ಚಿಂತನೆಗೆ ತೊಡಗಿಸುವಂತಹ ಮೌಲಿಕ ಬರಹವಾಗಿದೆ. ಈ ಇಬ್ಬರು ವಿದ್ವಾಂಸರೂ, ತಮ್ಮ ತಮ್ಮ ವಿಷಯಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಅವರ ಉಪನ್ಯಾಸಗಳ ಕುರಿತು ಚರ್ಚೆಗೆ ಕಾರಣವಾಗಬಹುದಾದ ಮಹತ್ವದ ಯಾವ ಭಿನ್ನಮತವೂ ನನಗೆ ಇಲ್ಲ. ಆದರೆ ಕನಕ ಮತ್ತು ಇತರ ಅನೇಕ ಭಕ್ತಕವಿಗಳ ಬಗ್ಗೆ ನನಗೆ ಇರುವ ಒಂದು ಸಮಸ್ಯೆಯನ್ನು ನಾನು ಈ ಸಂದರ್ಭದಲ್ಲಿ ಹೇಳಬೇಕು. ದೇವರ ಕುರಿತು ನನ್ನ ವೈಯಕ್ತಿಕ ನಿಲುವೇನು ಎಂದು ನನ್ನನ್ನು ಯಾರಾದರೂ ಕೇಳಿದರೆ, "ನನಗೆ ಗೊತ್ತಿರುವ ಮಟ್ಟಿಗೆ ನಾನೊಬ್ಬ ನಾಸ್ತಿಕ" ಎಂದು ಉತ್ತರಿಸಿಯೇನು. ನನ್ನಂತಹ ನಾಸ್ತಿಕನೊಬ್ಬ ಪರಮ ಆಸ್ತಿಕನಾದ ಕನಕನಿಗೆ ಸ್ಪಂದಿಸುವ ಬಗೆ ಹೇಗೆ? ಕನಕನ ಕಾವ್ಯದಿಂದ ಭಕ್ತಿಯನ್ನು ಬೇರ್ಪಡಿಸಿ, ಹೊರಗಿಟ್ಟು, ಕೇವಲ ಆ ಕಾವ್ಯದ ಆಡುಮಾತಿನ ಬಳಕೆ, ನಾದಮಮತೆ, ಸಾಮಾಜಿಕ ವಿಮರ್ಶೆಇತ್ಯಾದಿ ಲೌಕಿಕ ಸಂಗತಿಗಳನ್ನು ಮಾತ್ರ ಗ್ರಹಿಸುವುದು ಕನಕನನ್ನು ಓದುವ ಸರಿಯಾದ ವಿಧಾನವೊ? ಈ ಬಗೆಯ ಸೆಕ್ಯೂಲರ್, ಆ್ಯಂಟಿ ಸೆಪ್ಟಿಕ್ ಓದು, ನಮ್ಮ ಅಗತ್ಯಗಳನ್ನು ಈಡೇರಿಸಬಹುದು. ಆದರೆ ಕನಕನಿಗೆ ನ್ಯಾಯ ಒದಗಿಸುತ್ತಿದೊ ಎಂಬ ಪ್ರಶ್ನೆ ನನ್ನನ್ನು ಬಾಧಿಸುತ್ತದೆ. ಹಾಗೆ ನೋಡಿದರೆ ನಾಸ್ತಿಕ ಓದುಗ ಮತ್ತು ಧಾರ್ಮಿಕ ಶ್ರದ್ಧೆಯ ಕವಿ - ಎತ್ತೆಣಿಂದೆತ್ತಣ ಸಂಬಂಧ ಎಂಬ ಪ್ರಶ್ನೆಗಿಂತ ನಾಸ್ತಿಕ ಓದುಗನೊಬ್ಬನಿಗೆ ಧಾರ್ಮಿಕ ಶ್ರದ್ಧೆಯ ಕವಿಯೊಬ್ಬನನ್ನು ಓದುವ ಜರೂರು ಏನು ಎಂಬ ಪ್ರಶ್ನೆ ಮುಖ್ಯವಾದದ್ದು ಎಂದು ನನಗೆ ಅನ್ನಿಸುತ್ತದೆ. ರಾಮಕೃಷ್ಣ ಪರಮಹಂಸರ ನಿಜ ಜೀವನದ ಪ್ರಸಂಗವೊಂದರ ಮುಖಾಂತರ ನನ್ನ ಮಾತನ್ನು ಸ್ಪಷ್ಟಗೊಳಿಸಲು ಯತ್ನಿಸುತ್ತೇನೆ.
ಪರಮಹಂಸರ ಆಪ್ತ ಶಿಷ್ಯನೊಬ್ಬ ಕಾಶಿಗೆ ಹೋಗಬೇಕು ಎಂದು ಅವರ ಬಳಿ ಸದಾ ವರಾತ ಮಾಡುತ್ತಿದ್ದ. ಪರಮಹಂಸರಿಗೆ ಕಾಶಿಯಾತ್ರೆಯ ಬಗ್ಗೆ ಉತ್ಸಾಹವಿರಲಿಲ್ಲ. ಒಮ್ಮ ಯಥಾಪ್ರಕಾರ ಆ ಶಿಷ್ಯ ಅದರ ಪ್ರಸ್ತಾಪ ಮಾಡಿದಾಗ ಪರಮಹಂಸರು ತಮ್ಮ ಎದೆ ಮುಟ್ಟಿ ತೋರಿಸುತ್ತ, "ನೋಡು, ಇಲ್ಲಿ ಶಿವ ನೆಲೆಸಿದ್ದರೆ ಕಾಶಿಗೆ ಹೋಗುವ ಅಗತ್ಯವೇ ಇಲ್ಲ; ಅಕಸ್ಮಾತ್ ಇಲ್ಲಿ ಶಿವ ಇಲ್ಲ ಎಂದಿಟ್ಟುಕೊ; ಕಾಶಿಗೆ ಹೋಗಿ ಏನು ಪ್ರಯೋಜನ?" ಎಂದು ಕೇಳಿದರು. ಪರಮಹಂಸರ ದೃಷ್ಟಿಯಲ್ಲಿ ಶಿವನ ಇರವಿಗೆ ಕಾಶಿ ಅಪ್ರಸ್ತುತ; ಅದೊಂದು ಜಡ, ಸ್ಥಾವರ ಕ್ಷೇತ್ರ. ಹಾಗೆಂದು ಶಿವನ ಇರವಿನ ಬಗ್ಗೆ ಅವರಿಗೆ ಸಂದೇಹವೇನೂ ಇಲ್ಲ. ನಮ್ಮ ಹೃದಯದಲ್ಲಿ ಅವನು ನೆಲಸಿದ್ದಾನೊ ಇಲ್ಲವೊ ಎಂಬುದು ಮಾತ್ರ ಸಮಸ್ಯೆ. ವಚನಕಾರರ ದೃಷ್ಟಿಯಲ್ಲಿ ಶಿವನ ಇರವಿಗೆ ಸ್ಥಾವರ ಲಿಂಗ ಹೇಗೆ ಅಪ್ರಸ್ತುತವೋ ಹಾಗೆಯೇ ಪರಮಹಂಸರಿಗೆ ಕಾಶಿಯಂತಹ ತೀರ್ಥಕ್ಷೇತ್ರವೂ ಅಪ್ರಸ್ತುತ. ಆದರೆ ಜಂಗಮ ಶಿವ, ಆಗಿಸಿಕೊಂಡರೆ, ಮಾತ್ರ ನಿಜ; ಇಲ್ಲವಾದರೆ ಇಲ್ಲ. ಹಾಗಾಗಿ ಈ ಬಗೆಯ ಅದ್ವೈತ ಶ್ರದ್ಧೆಯಲ್ಲಿ ದೇವರು ಸಮಸ್ಯಾತ್ಮಕವೇ ಹೊರತು ಇದಮಿತ್ಥಂ ಏನನ್ನೂ ಹೇಳಬರುವುದಿಲ್ಲ. ಅದ್ವೈತ ಶ್ರದ್ಧೆಯ ಪರಮಹಂಸರು, ಶಿವ ಹೃದಯದಲ್ಲಿ ನೆಲಸಿದರೆ ಮಾತ್ರ ನಿಜ ಎಂದು ನಂಬಿದರೆ, ಮಾಧ್ವ ದ್ವೈತ ಶ್ರದ್ಧೆಯ ಪುರಂದರ, ಕನಕರೂ ತಮ್ಮ ತಮ್ಮ ಆರಾಧ್ಯ ದೈವಗಳನ್ನು ತಮ್ಮ ಹೃದಯದಲ್ಲಿಯೇ ಅರಸಿದವರು. "ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ" ಎಂಬ ಕನಕನ ಪ್ರಾರ್ಥನೆ ದ್ವೈತ ಅದ್ವೈತಗಳ ಸುಲಭ ವರ್ಗೀಕರಣಕ್ಕೆ ಸಿಗುವಂತಹದ್ದಲ್ಲ. ದೇವರ ದರ್ಶನಕ್ಕೆ ಮತ್ತು ಸಾಕ್ಷಾತ್ಕಾರಕ್ಕೆ ಕಾಶೀಯಾತ್ರೆ ಮಾಡುವ ಅಗತ್ಯವೇ ಇಲ್ಲ ಎಂದು ಭಾವಿಸಿದ ಪರಮಹಂಸರು, ಕೊನೆಗೊಮ್ಮೆ ಶಿಷ್ಯನ ಮಾತಿಗೆ ಕಟ್ಟುಬಿದ್ದು ಕಾಶೀಯಾತ್ರೆ ಕೈಗೊಳ್ಳುತ್ತಾರೆ. ದಕ್ಷಿಣೇಶ್ವರದಲ್ಲಿ ರಾಮಕೃಷ್ಣ ಪರಮಹಂಸರ ದಿನಚರಿಯನ್ನು ಹೃದಯಂಗಮವಾಗಿ ನಿರೂಪಿಸುವ ಕಥಾಮೃತದಲ್ಲಿ ಇದನ್ನು ಕುವೆಂಪು 'ರಾಮಕೃಷ್ಣ ವಚನವೇದ' ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಮನೋಜ್ಞವಾಗಿ ಅನುವಾದಿಸಿದ್ದಾರೆ. ಇದರಲ್ಲಿ ಬರುವ ಈ ಕಾಶೀಯಾತ್ರೆಯ ಪ್ರಸಂಗ ಸ್ವಾರಸ್ಯಕರವಾಗಿದೆ. ಪರಮಹಂಸರಿಗೆ ಕಾಶಿಯ ದೇವಾಲಯಗಳಲ್ಲಿ ಆಸಕ್ತಿ ಹುಟ್ಟುವುದಿಲ್ಲ. ಆ ದೇವಾಲಯಗಳ ಗರ್ಭಗುಡಿಯ ಪೂಜೆ, ಪುನರಸ್ಕಾರಗಳಿಗಿಂತ ಅವರಿಗೆ ಕಾಶಿಯ ಜನಜಾತ್ರೆಯೇ ಹೆಚ್ಚು ಖುಷಿ ಕೊಟ್ಟಿತು. ಅವರನ್ನು ನಿಜಕ್ಕೂ ಬೆರಗುಗೊಳಿಸಿದ್ದು ಅಲ್ಲಿನ ಗಂಗಾನದಿಯ ಹರಿವು; ನದಿಯಲ್ಲಿ ದೋಣಿಯಲ್ಲಿ ಹೋಗುತ್ತಿದ್ದಂತೆಯೇ ಪರಮಹಂಸರು ಸಮಾಧಿ ಸ್ಥಿತಿಗೇರಿದರು. ಪರಮಹಂಸರಿಗೆ ದೇವರು ಹೃದಯದಲ್ಲಿ ನೆಲೆಗೊಂಡರೆ ಮಾತ್ರ ನಿಜ; ದಾಸರಿಗೆ ಆತ ಹೃದಯದಲ್ಲಿ ಬಂದು ನೆಲಸಬೇಕಾದವನು; ಹಾಗೆ ನೆಲಸಿದಾಗ ಮಾತ್ರ ನಿಜವಾಗುವವನು. "ಬಸವನಾದರೋ, ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ" ಎಂದು ಸಂದೇಹಿಸಿ, ತನ್ನ ವಚನದ ಕೊನೆಯಲ್ಲಿ ಮನೆಯೊಳಗೆ ಮನೆಯೊಡೆಯನಿಲ್ಲ ಎಂದು ತೀರ್ಮಾನಿಸಿಬಿಡುತ್ತಾನೆ; ಅಂದರೆ ಅವನ ಮಟ್ಟಿಗೆ ದೇವರನ್ನು ಆಗಿಸಿಕೊಳ್ಳುವುದು ಇನ್ನಷ್ಟು ಕಷ್ಟಕರ. ವಚನಕಾರರು, ದಾಸರು - ಇವರಲ್ಲಿ ಯಾರಿಗೂ ದೇವರು ಈಗಾಗಲೇ ಇರುವ, ಮತ್ತು ಪೂರ್ಣವಾಗಿ ವ್ಯಕ್ತಗೊಂಡಿರುವ ಸಿದ್ಧ, ಸ್ಥಾಪಿತ ಸತ್ಯವಲ್ಲ; ಸ್ಥಾವರ ಮೂರ್ತಿಯೂ ಅಲ್ಲ. ಅದು ಭಾಷೆಯಲ್ಲೋ ಭಾವದಲ್ಲೋ ಆಗಿಸಿಕೊಳ್ಳಬೇಕಾದ, ಸಾಕ್ಷಾತ್ಕರಿಸಿಕೊಳ್ಳಬೇಕಾದ ಅನುಭವ, ಅನುಭಾವ. ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿ, ಸ್ಥಾವರವೂ, ವ್ಯಕ್ತವೂ ಪೂರ್ಣಗೊಂಡದ್ದೂ ಆಗಿರುವುದರಿಂದ ಅದನ್ನು ಪ್ರಶ್ನಿಸಲು, ಅಲ್ಲಗೆಳೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. ಆದರೆ ವಚನಕಾರರು, ದಾಸರು ಮತ್ತು ಪರಮಹಂಸರಿಗೆ, ದೇವರು ಭಾಷೆ ಮತ್ತು ಅನುಭಾವದಲ್ಲಿ ಮೈದಳೆಯುವ ಸತ್ಯ. ಕನಕ, ಪುರಂದರರು, ತೀರ್ಥಕ್ಷೇತ್ರಗಳು ಮತ್ತು ಸ್ಥಾವರ ಮೂರ್ತಿಗಳ ಬಗ್ಗೆ ಸ್ತುತಿ ಪದ್ಯಗಳನ್ನು ರಚಿಸಿದ್ದಾರೆ. ಉಡುಪಿ, ಮೇಲುಕೋಟೆ, ತಿರುಪತಿ, ಶ್ರೀರಂಗ ಮುಂತಾದ ಕ್ಷೇತ್ರಗಳನ್ನು ತಮ್ಮ ಹಾಡುಗಳಲ್ಲಿ ಹೊಗಳಿದ್ದಾರೆ. ಕನಕನ ಅಂಕಿತವೇ ಕಾಗಿನೆಲೆಯಾದಿ ಕೇಶವ. ಹಾಗೆಂದು ದೇವರ ಕುರಿತು ದಾಸರ ಅಂತಿಮ ನಿಲುವು ಇದೇ ಎಂಬ ತೀರ್ಮಾನಕ್ಕೆ ಬರುವಂತಿಲ್ಲ. ಪುರಂದರ, ಕನಕ, ಅಥವಾ ಇತರ ಯಾವುದೇ ಭಕ್ತಕವಿಯ ಕಾವ್ಯವನ್ನು ನಾವು ಮೊದಲಿನಿಂದ ಕಡೆಯ ವರೆಗೆ - ಯಾವುದು ಆ ಕವಿಗಳ ಮೊದಲ ರಚನೆ, ಯಾವುದು ಅನಂತರದ್ದು ಎಂದು ಹೇಗೆ ತೀರ್ಮಾನಿಸುವುದು ಎಂಬ ಸಮಸ್ಯೆ ಇದ್ದರೂ - ಓದಿದರೆ, ಅಂದರೆ ಕತೆ ಓದಿದ ಹಾಗೆ ಮೊದಲನೆಯ ಪುಟದಿಂದ ಕೊನೆಯವರೆಗೂ ಓದಿದರೆ, ನಮ್ಮ ಈ ಆಧುನಿಕ ಓದಿಗೆ ಸಿಗುವ ವಿರೋಧಾಭಾಸಗಳು ಒಂದೆರಡಲ್ಲ. ದೇವರ ಕಲ್ಪನೆಯ ಬಗ್ಗೆಯೇ ಈ ಕವಿಗಳು ನಮ್ಮನ್ನು ಎಷ್ಟು ಗೊಂದಲಗೊಳಿಸುತ್ತಾರೆ! ಉದಾಹರಣೆಗೆ, ತನ್ನ ಒಂದು ರಚನೆಯಲ್ಲಿ ಕನಕ "ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತ್ತಲಿದ್ದೆ ಎಂದು" ಉದ್ಗರಿಸಿ, ದೇವರ ದರ್ಶನ ಭಕ್ತರಿಗೆ ಅತ್ಯಂತ ಸುಲಭಸಾಧ್ಯ ಎಂದು ಪ್ರತಿಪಾದಿಸುತ್ತಾನೆ. ಅವನೇ ತನ್ನ ಇನ್ನೊಂದು ಸುಪ್ರಸಿದ್ಧ ಪದ್ಯದಲ್ಲಿ "ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ಕೂಗಿದರು ದನಿ ಕೇಳಲಿಲ್ಲವೇ....... "ಎಂದು ಆರ್ತನಾಗಿ ಮೊರೆಯಿಡುತ್ತಾನೆ. "ಏನೆಂದು ಕೊಂಡಾಡಿ ಸ್ತುತಿಸಲೋ ದೇವ, ನಾನೇನು ಬಲ್ಲೆ ನಿನ್ನಯ ಮಹಿಮೆ ಘನವ" ಎಂದು ಪ್ರಾರಂಭವಾಗುವ ತನ್ನದೊಂದು ಪದ್ಯದಲ್ಲಿ ಕನಕ ದೇವರ ಗುಣಾತಿಶಯವನ್ನು ವರ್ಣಿಸಿ ತಾನು ಒಬ್ಬ ಹುಲುಮಾನವ, ನರಜನ್ಮ ಹುಳು, ತನು ನಿತ್ಯವಲ್ಲದ ಗೊಂಬೆ, ಪ್ರಾಪಂಚಿಕ ಎಂದು ಮುಂತಾಗಿ ಹೇಳುತ್ತಾನೆ. ಆದರೆ ಈ ಪದ್ಯದಲ್ಲಿ ಮತ್ತು ಇನ್ನೂ ಹಲವು ಪದ್ಯಗಳಲ್ಲಿ ಕವಿ ಬಳಸುವ 'ನಾನು' ಆಧುನಿಕ ಸಾಹಿತ್ಯದಲ್ಲಿ ಬರುವ ಲೇಖಕ/ಪಾತ್ರದ ಸ್ವಯಂ ನಿರೂಪಣೆಯ 'ನಾನು' ಖಂಡಿತ ಅಲ್ಲ. ಆಧುನಿಕ ಸಾಹಿತ್ಯದ ಈ ಸ್ವಯಂ ನಿವೇದಕನಿಗೆ ಖಚಿತ ಹೆಸರು, ಕಾಲ, ದೇಶ, ವೃತ್ತಿ ಮತ್ತು ವ್ಯಕ್ತಿತ್ವಗಳ ಸಂದರ್ಭವಿದೆ. ಆದರೆ ಭಕ್ತಿಕಾವ್ಯದ 'ನಾನು' ಎಲ್ಲ ಕಾಲದೇಶಗಳಿಗೂ ಸಲ್ಲುವ ಸಾಮಾನ್ಯ. ಈ ಕಾವ್ಯದಲ್ಲಿ ದೇವರ ಹಾಗೆ ಭಕ್ತಿಯೂ ಸಮಸ್ಯಾತ್ಮಕವೇ. "ಭಕ್ತಿಯೆಂಬುದ ಮಾಡಬಾರದು, ಬರುತ್ತ ಕುಯ್ಯುವುದು, ಹೋಗುತ್ತ ಕುಯ್ಯವುದು" ಎಂದು ಬಸವ ಹೇಳಿದ. ಕನಕನ ಭಕ್ತಿಯೂ ಹೀಗೆ ಕುತ್ತಿಗೆಗೆ ಬರುವಂಥದ್ದು.
ಕನಕನ ವ್ಯಕ್ತಿತ್ವ, ಆತನ ಕಾವ್ಯ, ಆತನ ಕುರಿತು ಇರುವ ಐತಿಹ್ಯಗಳು ಇವೆಲ್ಲವೂ ವಿಮೋಚನೆಯ ಆಶಯವನ್ನು ಹೊಂದಿವೆ; ಸಮಾನತೆ, ಅಪರಿಗ್ರಹ ಹಾಗೂ ಪ್ರಾಮಾಣಿಕತೆಗಳ ಮೌಲ್ಯವನ್ನು ಎತ್ತಿಹಿಡಿಯುತ್ತವೆ. ಈ ದೃಷ್ಟಿಯಿಂದ ಕನಕನ ಇರುವ ಕುರಿತು ಇರುವ ಜಾನಪದಕ್ಕೂ, ಉಡುಪಿ ಕ್ಷೇತ್ರದ ದಿನನಿತ್ಯದ ವಾಸ್ತವಕ್ಕೂ ಯಾವುದೇ ಯಥಾರ್ಥ ಸಂಬಂಧವಿಲ್ಲ ಎಂಬ ರಾಜಾರಾಮ ತೋಳ್ಪಾಡಿಯವರ ಪ್ರತಿಪಾದನೆ ನೂರಕ್ಕೆ ನೂರು ನಿಜ. ಉಡುಪಿಯ ಬಗ್ಗೆ ಅವರು ಹೇಳಿದ ಮಾತು ಉಡುಪಿಗಿಂತ ಹೆಚ್ಚಾಗಿ ಮರಾಠಿ ಭಕ್ತಿಪಂಥದ ಕವಿಗಳ ಆರಾಧ್ಯಕ್ಷೇತ್ರವಾಗಿದ್ದ ಪಂಢರಪುರಕ್ಕೆ ಅನ್ವಯಿಸುತ್ತದೆ. ಕೆಳಜಾತಿಯ ಕನಕನ ಭಕ್ತಿಗೆ ಒಲಿದು, ದೇವಾಲಯದ ಗೋಡೆಯನ್ನೇ ಕೆಡವಿ ದೇವರು ಆತನಿಗೆ ದರ್ಶನ ನೀಡಿದ ಕತೆಯನ್ನೇ ಹೋಲುವಂತಹ ಕತೆಗಳು ಪಂಢರಪುರದ ಬಗ್ಗೆ ಹೇರಳವಾಗಿವೆ. ಕನಕನಿಗೆ ಉಡುಪಿ ಹೇಗೋ, ಹಾಗೆ ಮರಾಠಿ ಸಂತಕವಿಗಳಿಗೆ ಪಂಢರಪುರ. ಆದರೆ ಈಗ ಪಂಢರಪುರ ಉಡುಪಿಗಿಂತಲೂ ಹೆಚ್ಚು ಕರ್ಮಠವಾಗಿರುವ ಕ್ಷೇತ್ರ. ಅಲ್ಲಿ ಎದ್ದುಕಾಣುವ ವೈದಿಕ ಬ್ರಾಹ್ಮಣ ಆಚರಣೆಗಳು ಮತ್ತು ಮಡಿಮೈಲಿಗೆಯ ವಿಧಿನಿಷೇಧಗಳನ್ನು ನೋಡಿದರೆ ಇದು ಒಂದು ಕಾಲಕ್ಕೆ ತಮ್ಮದೇ ಆದ ರೀತಿಯಲ್ಲಿ ಜಾತಿ, ಲಿಂಗಭೇದಗಳನ್ನೂ, ಗೊಡ್ಡು ಆಚರಣೆಗಳನ್ನೂ ಧಿಕ್ಕರಿಸಿ ನಿಂತ ಮರಾಠಿ ಭಕ್ತಕವಿಗಳ ನೆಲೆಯಾಗಿತ್ತೆ ಎಂದು ಸಖೇದಾಶ್ಚರ್ಯವಾಗುತ್ತದೆ. ಅಲ್ಲಿನ ದೇವಾಲಯದ ಗರ್ಭಗುಡಿಯಲ್ಲಿ ಇಟ್ಟಿಗೆಯ ಮೇಲೆ ಸ್ಥಾವರ ಮೂರ್ತಿಯಾಗಿ ನಿಂತಿರುವ ವಿಠಲನಿಗಿಂತ ತುಕಾರಾಂನ ಅಭಂಗಗಳಲ್ಲಿ ನಮಗೆ ಎದುರಾಗುವ ವಿಠಲನೇ ಹೆಚ್ಚು ನಿಜವೆನ್ನಿಸುತ್ತದೆ. ಆದರೆ ಪಂಢರಪುರ ತನ್ನ ರೂಢಿ ಜಡಸ್ಥಿತಿಯಲ್ಲೂ ಮರಾಠಿ ಭಕ್ತಿಪಂಥದ ನೆನಪನ್ನು ಉಳಿಸಿಕೊಂಡಿದೆ. ಈಗಲೂ ಆ ಕ್ಷೇತ್ರದಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಭಾಗವಹಿಸುವ ವಾರಕರಿ ಯಾತ್ರೆ ನಡೆಯುತ್ತದೆ. ಈ ಆಚರಣೆ ಕೂಡ ತಲೆಮಾರಿನಿಂದ ತಲೆಮಾರಿಗೆ ಮರಾಠಿ ಭಕ್ತಿಕಾವ್ಯದ ಪರಂಪರೆಯ ನೆನಪನ್ನು ಬಾಳಿಸಿ ರಕ್ಷಿಸುತ್ತದೆ. ಉಡುಪಿಯ ಕೃಷ್ಣ ದೇವಾಲಯದಲ್ಲಿ ಪ್ರತಿದಿನ ದೇವರಿಗೆ ನೈವೇದ್ಯವಾಗಿ ರಾಗಿ ಅಂಬಲಿಯನ್ನು ಇರಿಸುತ್ತಾರೆ. ರಾಗಿ, ಉಡುಪಿಯಲ್ಲಿ ಮಾಧ್ವ ಬ್ರಾಹ್ಮಣರೇ ಯಾಕೆ, ಯಾರ ದಿನನಿತ್ಯದ ಆಹಾರವೂ ಅಲ್ಲ. ಕೆಳಜಾತಿಯ ಭಕ್ತಕವಿ ಕನಕನ ನೆನಪನ್ನು ಉಡುಪಿಯ ಮಾಧ್ವ ಬ್ರಾಹ್ಮಣರು ಉಳಿಸಿಕೊಂಡಿರುವ ಬಂದಿರುವ ರೀತಿ ಅದು. ಆಚರಣೆ ಬರಿಯ ಸಂಕೇತವಾಗಿದ್ದು, ಅದು ಸೂಚಿಸುವ ಜಾತಿಸಮಾನತೆ ಮತ್ತು ವಿಮೋಚನೆಯ ಆದರ್ಶ, ಉಡುಪಿಯಲ್ಲಿ ಸಂಪೂರ್ಣ ನಾಪತ್ತೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅಂತಹ ಸಂಕೇತಗಳು ಸಹ ಕಾಣದ ಊರು ನಿಜಕ್ಕೂ ದರಿದ್ರವಲ್ಲವೆ?
published on mupadhyahiri.blogspot.com
E-mail: mhupadhya@gmail.com
No comments:
Post a Comment