ಅಡಿಗರ ಕೊಡೆಯಿಂದ ದೂರ ಉಳಿದ ಕವಿ
- ಮುರಳೀಧರ ಉಪಾಧ್ಯ ಹಿರಿಯಡಕ
"ಚಿಕ್ಕಂದಿನಲ್ಲಿ ನಮ್ಮ ಮೈಸೂರು ಮನೆಯ ಅಡಿಗೆಮನೆಯಲ್ಲಿ ಅಮ್ಮನೊಂದಿಗೆ ಮದರಾಸು ತಮಿಳು, ಅಡಿಗೆ ಕೆಲಸ ಮಾಡಿದ ಅಯ್ಯಂಗಾರ್ ಮಡಿ ಹೆಂಗಸೊಂದಿಗೆ ಮೈಸೂರು ತಮಿಳು, ಮನೆಯ ಹೊರಗಡೆ ಸ್ಕೂಲು ಸ್ನೇಹಿತರೊಂದಿಗೆ ಕನ್ನಡ, ಮಹಡಿ ಮೇಲೆ, ಅಪ್ಪನೊಂದಿಗೆ ಅವರ ಸ್ನೇಹಿತರು, ನಮ್ಮ ದೊಡ್ಡಣ್ಣ ಮುಕ್ಕಾಲು ಪಾಲೆಲ್ಲ ಇಂಗ್ಲಿಷ್, ೧೯೫೬ರ ಹೊತ್ತಿಗೆ ನನ್ನ ಮಾತೂ ಮಹಡಿ ಮೇಲೆ ಇಂಗ್ಲಿಷಾಗಿತ್ತು. ಹೀಗೆ ಮೂರು ಭಾಷೆಗೆ ಮೂರು ಸನ್ನಿವೇಶ, ಕಾರ್ಯ ವಿಭಜನೆ, ಮಹಡಿಯಿಂದ ಕೆಳಕ್ಕಿಳಿದರೆ ಭಾಷಾಂತರ. ಈಗಂತೂ ನಾನು ಈ ದೇಶದಲ್ಲಿ ಇರುವುದರಿಂದ, ಎಲ್ಲ ಯೋಚನೆಗೂ ವೇದನೆಗೂ ಭಾಷಾಂತರ, ದೇಶಾಂತರ. ಮನಸ್ಸಿನೊಳಗೆ, ಪುಸ್ತಕದ ಪ್ರೀತಿಯಲ್ಲಿ, ಕೆಲವು ಕನಸಿನಲ್ಲಿ, ಕೆಲವು ಸಾರಿ ಕನ್ನಡ, ತಮಿಳು." - ಇವು ಎ.ಕೆ. ರಾಮಾನುಜನ್ ಅವರ ’ಮತ್ತೊಬ್ಬನ ಆತ್ಮಚರಿತ್ರೆ’ಯ ಸಾಲುಗಳು. ಆದರೆ ಈ ಪುಸ್ತಕದಲ್ಲಿ ರಾಮಾನುಜನ್ ತನ್ನ ಆತ್ಮಕತೆಯನ್ನು ತದ್ರೂಪಿಯೊಬ್ಬನ ಮೂಲಕ ನಿರೂಪಿಸುತ್ತಿದ್ದಾರೆ ಎಂಬ ಗುಮಾನಿ ಮೂಡುತ್ತದೆ.
ಅತ್ತೀಪೇಟೆ ಕೃಷ್ಣಸ್ವಾಮಿ ಅಯ್ಯಂಗಾರ್ (ಎ.ಕೆ.) ರಾಮಾನುಜನ್ ಹುಟ್ಟಿದ್ದು ಮೈಸೂರಿನಲ್ಲಿ (೧೯೨೯). ಅವರ ತಂದೆಗೆ ಸಂಸ್ಕೃತ, ತಮಿಳು, ಗಣಿತಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿ. ಮೈಸೂರಿನಲ್ಲಿ ಇಂಗ್ಲಿಷ್ ಎಂ.ಎ., ಪೂನಾದ ಡೆಕ್ಕನ್ ಕಾಲೇಜಿನಲ್ಲಿ ಭಾಷಾಶಾಸ್ತ್ರ ವಿದ್ಯಾಭ್ಯಾಸ. ಫುಲ್ಬ್ರೈಟ್ ಸ್ಕಾಲರ್ಶಿಪ್ ಪಡೆದು ಅಮೆರಿಕಕ್ಕೆ ಪ್ರಯಾಣ. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ದಕ್ಷಿಣ ಏಷ್ಯಾ ಭಾಷಾ ವಿಭಾಗದ ಮುಖ್ಯಸ್ಥ. ಕವಿ, ಭಾಷಾಂತರಕಾರ, ಜಾನಪದ ವಿದ್ವಾಂಸರಾಗಿ ಅಂತಾರಾಷ್ಟ್ರೀಯ ಖ್ಯಾತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ತಮಿಳು ಲೇಖಕರ ಸಂಘ, ’ಪದ್ಮಶ್ರೀ’ ನೀಡಿದ ಭಾರತ ಸರಕಾರ, ಮೆಕಾರ್ಥರ್ ಫೌಂಡೇಶನ್, ಇವರೊಬ್ಬ ’ಜೀನಿಯಸ್’ ಎಂಬುದನ್ನು ಗುರುತಿಸಿದ್ದುವು. (ಕಾವ್ಯಂ ಯಶಸೇ ಅರ್ಥ ಕೃತೇ’ ಎಂಬ ಮಮ್ಮಟನ ಮಾತು ಈ ಕವಿಯ ಪಾಲಿಗೆ ನಿಜವಾಯಿತು. ಮೆಕಾರ್ಥರ್ ಫೌಂಡೇಶನ್ನ ’ಜೀನಿಯಸ್’ ಪ್ರಶಸ್ತಿಯ ಮೊತ್ತ ಇಪ್ಪತ್ತಾರು ಲಕ್ಷ ರೂ.ಗಳು) ಜುಲೈ ೧೪, ೧೯೯೩ರಂದು ರಾಮಾಜನ್ ಚಿಕಾಗೋದಲ್ಲಿ ಹೃದಯಾಘಾತದಿಂದ ನಿಧನರಾದರು.
"ಅಮೆರಿಕಕ್ಕೆ ಬಂದಾಗಲೇ ಕನ್ನಡ ಪದ್ಯ. ಮೈಸೂರಲ್ಲಿ ಬರಿ ಮಾತು". ರಾಮಾನುಜನ್ ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ದುಭಾಷಿ ಕವಿ. ’ಹೊಕ್ಕುಳಲ್ಲಿ ಹೂವಿಲ್ಲ’ (೧೯೬೯) ’ಮತ್ತು ಇತರ ಪದ್ಯಗಳು (೧೯೭೭), ’ಕುಂಟೋಬಿಲ್ಲೆ’ (೧೯೯೦) ಇವು ರಾಮಾನುಜನ್ರ ಕನ್ನಡ ಸಂಕಲನಗಳು. ’ಮತ್ತು ಇತರ ಪದ್ಯಗಳು’ ಸಂಕಲನದ ಕವನಗಳಿಗೆ ಹೆಸರಿಲ್ಲ. ’ಒಂದು ಕೊಡೆ ಒಂದು ವಾಚು’, ಅಜ್ಞಾತ ಪರ್ವದಲ್ಲಿ ಬೃಹನ್ನಳೆ ಸೈರಂಧ್ರಿಯನ್ನು ದೂರದಿಂದ ನೋಡಿದಾಗ’, ಅಂಗುಲ ಹುಳುವಿನ ಪರಕಾಯ ಪ್ರವೇಶ’, ’ಕೆಲವರ ಪುನರ್ಜನ್ಮ’, ’ಪರಮಹಂಸರು ಹೇಳಿದಂತರಲ್ಲ’, ’ಮೊನ್ನೆ ಯಾರೊ ಹೇಳಿದರು’, ’ಅಮೆರಿಕಕ್ಕೆ ಬಂದಾಗಲೇ’, ’ಮದುವೆ ಮಂಚ’, ’ನೆನ್ನೆ’, ’ಪದ್ಯದ ಮಾತು ಬೇರೆ’, ’ಸಂಶಯ ಭಕ್ತಿ’ - ಇವು ಅವರ ಮಹತ್ವದ ಕವನಗಳು.
"ಬಚ್ಚಲು ಮನೆ ಗಂಗಾಳದಲ್ಲಿ
ಅಪ್ಪ ಮರೆತ ಹೊಸ ಹಲ್ಲು ಸ್ವತಂತ್ರವಾಗಿ
ಹಲ್ಲು ಕಿರಿಯಿತು!
ನಾನು ನೋಡಿದೆ"
(ಅಪ್ಪ-ಮಗ)
* * * * * * *
"ಮೈ ಉರಿಯುವ ಕೋಪದಲ್ಲಿ ಮನೆಗೆ ಬಂದೆ
ಹೊರಗೆ ತೋಟ
ಕೆಂಡಸಂಪಿಗೆ ಮರ ಹೂ ಬಿಟ್ಟು
ನಿಂತಿತ್ತು."
(’ಜಪಾನಿ ಶೈಲಿಯ ಋತುಸಂಹಾರ’ದಿಂದ)
ರಾಮಾನುಜನ್ರ ಇಂಥ ಕಿರುಕವನಗಳೂ ನವ್ಯ ಕಾವ್ಯದ ವಿಮರ್ಶೆಯಲ್ಲಿ ಚರ್ಚೆಗೊಳಗಾದುವು. ವಕ್ರೋಕ್ತಿ, ಸಂಕೀರ್ಣ ಬೌದ್ಧಿಕ ತರ್ಕ, ಭಾಷಾ ಸೂಕ್ಷ್ಮತೆ, ಐರನಿ, ಪದಭಂಜಕ ಪ್ರವೃತ್ತಿ, ಕಲಾಸೌಷ್ಠವ ನಿಷ್ಠ ಕಾಳಜಿ - ರಾಮಾನುಜನ್ ಕಾವ್ಯದ ಇಂಥ ವೈಶಿಷ್ಟ್ಯಗಳನ್ನು ಕನ್ನಡ ವಿಮರ್ಶಕರು ಈಗಾಗಲೇ ಗುರುತಿಸಿದ್ದಾರೆ. ಕುರ್ತಕೋಟಿ ಅವರು ಹೇಳುವಂತೆ, "ರಾಮಾನುಜನ್ರ ಕಾವ್ಯಕ್ಕೆ ನಾದದ ಹಂಗು ಇಲ್ಲ". "ನಾದಲೀಲೆಯ ಬದಲಿಗೆ ಇಲ್ಲಿರುವುದು ವಕ್ರೋಕ್ತಿ ಲೀಲೆ. ಆಡುಮಾತಿನ ವ್ಯಂಗ್ಯ, ಶ್ಲೇಷೆ, ಲೈಂಗಿಕಾರ್ಥಗಳನ್ನು ಬಳಸುವುದರಲ್ಲಿ ಈ ಕವಿ ಪ್ರವೀಣ - "ಬಿದ್ದಾಗ ಮೋಕ್ಷ ಸ್ವಾಮೀ, ಎದ್ದಾಗ ಪುನರ್ಜನ್ಮ, ನಡುನಡುವೆ ಜನ್ಮಾಂತರ."
ಕುಮಾರವ್ಯಾಸನಿಂದ ಎರವಲು ಪಡೆದ "ಹೊಕ್ಕುಳಲ್ಲಿ ಹೂವಿಲ್ಲ" ಎಂಬ ಶೀರ್ಷಿಕೆ, ಪುರಾಣಗಳನ್ನು ಕುರಿತ ಈ ಕವಿಯ ನಿಲುವನ್ನು ಸೂಚಿಸುತ್ತದೆ. ಹೋಮರನ ’ಒಡಿಸ್ಸಿ’ಯ ಮೆನೆಲೆಅಸ್’ ಹೇಳಿದ ಕತೆಯನ್ನು ಭಾಷಾಂತರಿಸುವ, ’ಸಂಶಯಭಕ್ತಿ’ ಎಂಬ ಕವನ ಬರೆದಿರುವ ರಾಮಾನುಜನ್ ಚಾರ್ವಾಕ ಕವಿ. ಇವರು ಪದಭಂಜಕ ಮಾತ್ರವಲ್ಲ, ಪುರಾಣಭಂಜಕರೂ ಹೌದು. ’ಸಂಶಯಭಕ್ತಿ’ ಯಲ್ಲಿ ದೇವರನ್ನು ಅರ್ಥೈಸುತ್ತ, "ಮನುಷ್ಯಮಾತ್ರನಾದ ನನಗೆ ಮಾತ್ರ ದಕ್ಕಿದ ಭ್ರಾಂತಿ, ಮದ್ದೇ ಇಲ್ಲದ ಭ್ರಮೆ, ದೇಹದೊಂದಿಗೇ ಒಕ್ಕರಿಸಿದ ಸಂದೇಹ’ ಎನ್ನುತ್ತಾರೆ. ’ಕೆಲವರ ಪುನರ್ಜನ್ಮ’ ಕೊನೆಯ ಸಾಲುಗಳಿವು - "ಆದರೂ ಪುನರ್ಜನ್ಮ ಎನಿಸಲಿಲ್ಲ, ಗೀತೆಯ ಕೊಟೇಶನ್ ಕೂಡ ಜ್ಞಾಪಕಕ್ಕೆ ಬರಲಿಲ್ಲ." ’ಕುಂಟೋಬಿಲ್ಲೆ’ಯಲ್ಲಿರುವ ಭಾಷಾಂತರ ಕವನಗಳಲ್ಲಿ ಇವರ ರಾಜಕೀಯ ಒಲವುಗಳನ್ನು ಗುರುತಿಸಬಹುದು.
ರಾಮಾನುಜನ್ರ ಕಾವ್ಯದಲ್ಲಿ ಸಣ್ಣಪುಟ್ಟ ಸಂಗತಿಗಳ ಹಳೆಯ ನೆನಪುಗಳು ಮತ್ತೆ ಮತ್ತೆ ಮಿಂಚುತ್ತವೆ - "ಯಾವುದೂ ಅಳಿಸಿ ಹೋಗುವುದಿಲ್ಲ ಸ್ವಾಮೀ." ಆದರೆ ಅನಿವಾಸಿ ಭಾರತೀಯರಾಗಿದ್ದ ಇವರ ಕಾವ್ಯದಲ್ಲಿ ಬೇರು ಕಳಚಿಕೊಂಡ ಸಂಕಟವಾಗಲಿ, ಪರಕೀಯತೆಯಾಗಲಿ ಇಲ್ಲ. "ಮುತ್ತಿಟ್ಟರೆ ಸಿಬಿರು, ಒದ್ದರೆ ಪುಷ್ಪವೃಷ್ಟಿ" ಎನ್ನುವ ಈ ಕವಿ ಒದ್ದು ಕಾವ್ಯ ಸೃಷ್ಟಿಸಿದರು, ಕಾವ್ಯಭಾಷೆಯನ್ನು ಬೆಳೆಸಿದರು. ’ಮಧುರೆಯಲ್ಲಿ ಒಂದು ತಲೆ’, ’ಅಣ್ಣಯ್ಯನ ಮಾನವಶಾಸ್ತ್ರ’ ರಾಮಾನುಜನ್ ಬರೆದ ಕತೆಗಳು. ’The Striders', 'Relations', 'Selected Poems', 'Second Thoughts' - ಅವರ ಇಂಗ್ಲಿಷ್ ಕವನ ಸಂಕಲನಗಳು.
ಎ.ಕೆ. ರಾಮಾನುಜನ್ ಭಾಷಾಂತರ ಕೃತಿಗಳನ್ನು ಉಲ್ಲೇಖಿಸುವಾಗ ಅವರ ’ಅವಳಿ-ಜವಳಿ’ ಕವನ ನೆನಪಾಗದಿರುವುದಿಲ್ಲ.
"ದೊಡ್ಡವರು ಮಾಡಿದರೆಂದು
ಅವಳ ತೊಡಿಗೆ ಇವಳಿಗಿಟ್ಟು
ಇವಳ ತೊಡಿಗೆ ಅವಳಿಗಿಟ್ಟು
ಹಾಡಬಯಸಿದೆ
ಏನಾಯಿತು ಗೊತ್ತೆ?
ಅವಳ ಸೀರೆ ಇವಳು ಹರಿದು
ಇವಳ ಸೀರೆ ಅವಳು ಹರಿದು
ಓಡಬಯಸಿದೆ
ಹಾಳಾಗಿ ಹೋಗಲೆಂದು
ಅವನ ಉಡಿಗೆ ಇವಳಿಗುಡಿಸಿ
ಇವಳ ಉಡಿಗೆ ಅವನಿಗುಡಿಸಿ
ನೋಡಬಯಸಿದೆ."
ರಾಮಾನುಜನ್ ಸೃಜನಶೀಲ ಭಾಷಾಂತರಕಾರ. ’ಶೌರಿ’ ಬರೆದ ’ಹಳದಿ ಮೀನು’ ಕಾದಂಬರಿಯನ್ನು ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅನಂತಮೂರ್ತಿಯವರ ’ಸಂಸ್ಕಾರ’, ಅಡಿಗರ ಕೆಲವು ಕವನಗಳು, ಮತ್ತು ವಚನಗಳನ್ನು ('Speaking of Siva-1973) ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ('The Interior Landscape' (1967), 'Hymns for the Drawing (1981), 'Poems of Love and War' (1985) - ಇವು ತಮಿಳು ಪ್ರಾಚೀನ ಕಾವ್ಯಗಳ ಭಾಷಾಂತರಗಳು. ('Folktales from India (1992) ಗ್ರಂಥದಲ್ಲಿ ಇಪ್ಪತ್ತೆರಡು ಭಾಷೆಗಳ ಕತೆಗಳಿವೆ. ಜನಪದ ಕತೆಗಳನ್ನು ರಾಮಾನುಜನ್ ’ಅನ್ವಯವನ್ನರಸುತ್ತಿರುವ ರೂಪಕಗಳು’ ಎಂದು ವರ್ಣಿಸಿದ್ದಾರೆ. ’ಗಾದೆಗಳು’ ಎಂಬ ಮೊದಲ ಕೃತಿಯಲ್ಲೆ ರಾಮಾನುಜನ್ರ ಒಳನೆಲೆ ಕಾಣಸಿಗುತ್ತದೆ. ವಿದೇಶಿ ವಿದ್ವಾಂಸರು ಭಾರತದ ಮಹಾ ಪರಂಪರೆಯ ಗ್ರಂಥಗಳನ್ನು ಮಾತ್ರವಲ್ಲದೆ, ಕನ್ನಡ ತಮಿಳಿನಂಥ ಪ್ರಾದೇಶಿಕ ಭಾಷೆಗಳ ಕೃತಿಗಳನ್ನು, ಜನಪದ ಸಾಹಿತ್ಯವನ್ನು ಗಮನಿಸುವಂತೆ ಮಾಡಿದ್ದು ರಾಮಾನುಜನ್ರ ಸಾಧನೆ. 'God as a Customer - ಅವರ ಇತ್ತೀಚಿಗಿನ ಗ್ರಂಥ.
"ನಿಮ್ಮ ವಿಶಿಷ್ಟ ಕೊಡುಗೆ ಏನು?’ ಎಂದು ಪ್ರಶ್ನಿಸಿದರೆ ರಾಮಾನುಜನ್ ಬಹುಶ: ಹೀಗೆ ಉತ್ತರಿಸುತ್ತಿದ್ದರು - "ಕಾಲಪುರುಷನ ದವಡೆ ಒಳಗೆ ಎಲ್ಲ ಅವರಿವರು ಹೇಳಿದ್ದೇ ಹೊಸದೇನಿಲ್ಲ." (’ನೆನ್ನೆ’ - ಕವನದ ಕೊನೆಯ ಸಾಲು). ತುಂಬಿದ ಕೊಡ ತುಳುಕುವುದಿಲ್ಲ. ರಾಮಾನುಜನ್ ಕಾವ್ಯದ ಅನುಕರಣೆ - ನಿರಾಕರಣೆ ಎರಡೂ ಕಷ್ಟ. ಕಾರ್ನಾಡರು ತನ್ನ ಒಂದೆರಡು ನಾಟಕ
ಸಿನಿಮಾಗಳ ಕತೆಗಳನ್ನು ರಾಮಾನುಜನ್ ಸಂಗ್ರಹದಿಂದ ಪಡೆದರು. ಕಂಬಾರರಿಗೆ ಬ್ರೆಕ್ಟ್ನ ಕತೆ ಹೇಳಿದವರು ರಾಮಾನುಜನ್. ನಾಡಿಗರ ’ಹೆಬ್ಬಾವು’ ಕವನದ ೧೩೦ ಸಾಲುಗಳಲ್ಲಿ ೧೧೭ ಸಾಲುಗಳನ್ನು ರಾಮಾನುಜನ್ ಕತ್ತರಿಸಿದರಂತೆ. ಅಡಿಗರ ಕೊಡೆ ಕೆಳಗೆ ಒದ್ದಾಡದೆ ದೂರ ನಿಂತು ನಗುತ್ತಿದ್ದ ವಾಮನ - ಈ ರಾಮಾನುಜನ್.
’ವರ್ತಮಾನ’ ಕವನದ ಕೊನೆಯಲ್ಲಿ ಈ ಕವಿ ಪ್ರಶ್ನಿಸುತ್ತಾರೆ - "ಅಮೆಜಾನ್ ನದಿ ದಾಟಬಹುದು, ಈ ಅನುದಿನದ ಅಂತರಂಗೆ ದಾಟುವುದು ಹೇಗೆ? ಕಣ್ಣೊಳಗಿನ ಈ ಕ್ಷಿತಿಜ ಮುಟ್ಟುವುದು ಹೇಗೆ?" ರಾಮಾನುಜನ್ ಪ್ರತಿಭೆ ’ಶಬುದಕ್ಕೆ ಹೇಸಿ ಮುಗುದ’ನಾದ ಅಜಗಣ್ಣನಂಥದ್ದು. ಅವರ ಕುಂಟೋಬಿಲ್ಲೆ ಆಟದ ಹದಿಹರೆಯದ ಬೆಚ್ಚನೆಯನ್ನು ತುಂಟಾಟವನ್ನು ತನ್ನ ವ್ಯಕ್ತಿತ್ವದಲ್ಲಿ ಕಾವ್ಯದಲ್ಲಿ ಕೊನೆಯ ವರೆಗೂ ಉಳಿಸಿಕೊಂಡಿದ್ದರು. ಬಹಿರಂಗದಲ್ಲಿ ಭಾಷ ವಿಜ್ಝಾನಿಯ ಕಸರತ್ತು, ಅಂತರಂಗದಲ್ಲಿ ಇಲ್ಲಿ ಸಲ್ಲುವ ಲೋಕಾಯತ ಮನೋಧರ್ಮ - ಇವೆರಡರ ಸಂಧಿಯಲ್ಲಿ ಕಾವ್ಯದ ಅಂತರಗಂಗೆ. ಇದು ರಾಮಾನುಜನ್ ಕಾವ್ಯದ ನೆಯ್ಗೆ.
(ಉದಯವಾಣಿ, ೨೫-೦೭-೧೯೯೨)
ಎ,ಕೆ. ರಾಮಾನುಜನ್ (1993)
(ಸಂ) ಟಿ. ಪಿ. ಆಶೋಕ
ಪ್ರ.- ಕರ್ನಾಟಕ ಸಂಘ
ಪುತ್ತೂರು - 574201
(ದ.ಕ.)
No comments:
Post a Comment