stat Counter



Sunday, December 19, 2010

U R Ananthamurthy (Common Pursuit)


ಯು. ಆರ್. ಅನಂತಮೂರ್ತಿ
(
ಕೃತಿಗಳ ಸಮೂಹಶೋಧ)
- ಮುರಳೀಧರ ಉಪಾಧ್ಯ ಹಿರಿಯಡಕ


 ನಾನು ಸಂಪಾದಿಸಿದ 'ಬಿ. ವಿ. ಕಾರಂತ' ಗ್ರಂಥ 1996ರಲ್ಲಿ ಪ್ರಕಟವಾಯಿತು. ಅನಂತಮೂರ್ತಿಯವರನ್ನು ಕುರಿತ ಗ್ರಂಥದ ಸಂಪಾದನೆಯ ಕೆಲಸವನ್ನು 1996ರಲ್ಲಿ ಆರಂಭಿಸಿ 2000ರಲ್ಲಿ ಮುಗಿಸುತ್ತಿದ್ದೇನೆ. ಗ್ರಂಥದ ಸಂಪಾದನೆಯನ್ನು ಆರಂಭಿಸಿದಾಗ ನನ್ನ ಯೋಜನೆ ಹೀಗಿತ್ತು - 1. ಡಾ| ಯು. ಆರ್. ಅನಂತಮೂರ್ತಿಯವರ ಕೃತಿಗಳ ಕುರಿತು ಕನ್ನಡದಲ್ಲಿ ಪ್ರಕಟವಾಗಿರುವ ಕೆಲವು ಅತ್ಯುತ್ತಮ ಲೇಖನಗಳನ್ನು ಆಯ್ಕೆ ಮಾಡುವುದು. 2. ಅವರ ಕೃತಿಗಳ ಕುರಿತು ಇಂಗ್ಲಿಷ್‍ನಲ್ಲಿ ವಿಮರ್ಶಕರು ಬರೆದಿರುವ ಕೆಲವು ಲೇಖನಗಳನ್ನು ಆಯ್ಕೆ ಮಾಡಿ ಭಾಷಾಂತರ ಮಾಡಿಸುವುದು. 3. ಅವರ ಕೆಲವು ಸಂದರ್ಶನಗಳನ್ನು, ಬಾಲ್ಯದ ನೆನಪುಗಳಿರುವ ಒಂದೆರಡು ಲೇಖನಗಳನ್ನು ಆಯ್ಕೆ ಮಾಡುವುದು. 4. ಗ್ರಂಥಕ್ಕಾಗಿ ಕೆಲವು ಹೊಸ ಲೇಖನಗಳನ್ನು ಬರೆಸುವುದು. 5. ಗ್ರಂಥಕ್ಕಾಗಿ ಆಯ್ಕೆಮಾಡದ ಅನಂತಮೂರ್ತಿಯವರ ಕೃತಿಗಳನ್ನು ಕುರಿತ ಇತರ ವಿಮರ್ಶೆಗಳ ಮುಖ್ಯಾಂಶಗಳನ್ನು ಟಿಪ್ಪಣಿಗಳಲ್ಲಿ ಗುರುತಿಸುವುದು. 6. ಅನಂತಮೂರ್ತಿಯವರ ಜೀವನ-ಸಾಧನೆಗಳ ಸ್ಥೂಲಚಿತ್ರಣ ನೀಡುವ ಪ್ರಸ್ತಾವನೆಯೊಂದನ್ನು ಗ್ರಂಥಕ್ಕಾಗಿ ಬರೆಯುವುದು. ಇದು ಪರಾಕುಪಂಪನ್ನು ಒತ್ತುವ ಅಭಿನಂದನ ಗ್ರಂಥವಾಗಬಾರದೆಂದು ನಾನು ಎಚ್ಚರವಹಿಸಿದ್ದೇನೆ. ವರ್ಷಗಟ್ಟಲೆ ಕಾದರೂ ಹೊಸ ಲೇಖನಗಳನ್ನು ಬರೆಸುವುದರಲ್ಲಿ ನನಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಗ್ರಂಥದ ಮೊದಲ ಭಾಗದಲ್ಲಿ ಅನಂತಮೂರ್ತಿಯವರ ಎರಡು ಲೇಖನಗಳು, ನಾಲ್ಕು ಸಂದರ್ಶನಗಳು ಹಾಗೂ ಅವರನ್ನು ಹತ್ತಿರದಿಂದ ಕಂಡ ಸಾಹಿತಿಮಿತ್ರರು ಬರೆದಿರುವ ನಾಲ್ಕು ಲೇಖನಗಳಿವೆ. 'ನನ್ನ ಲೇಖನೋದ್ಯೋಗ' ಎಂಬುದು ಅನಂತಮೂರ್ತಿಯವರು 1992ರಲ್ಲಿ ಬರೆದ ''Being a Writer in India' ಎಂಬ ಲೇಖನವನ್ನು ಬಿ. ಜನಾರ್ದನ ಭಟ್ ಅವರು ಪುಸ್ತಕಕ್ಕಾಗಿ ಭಾಷಾಂತರಿಸಿದ್ದಾರೆ. ಲೇಖನಗಳಲ್ಲಿ ಅನಂತಮೂರ್ತಿಯವರು ತನ್ನ ಬಾಲ್ಯ ಯೌವನದ ಅನುಭವಗಳು ಹಾಗೂ ಪ್ರೇರಣೆಗಳ ಕುರಿತು ಬರೆದಿದ್ದಾರೆ. ಡಾಕ್ಟರ್ ರಾಮಮನೋಹರ ಲೋಹಿಯಾರ ಅನುಯಾಯಿಗಳ ಪ್ರಭಾವಕ್ಕೆ ಒಳಗಾಗಿ ನನ್ನ ಹಸಿ ತಾರುಣ್ಯದಲ್ಲಿ ಒಂದು ರೈತ ಸತ್ಯಾಗ್ರಹ (ಕಾಗೋಡು ರೈತ ಸತ್ಯಾಗ್ರಹ) ನನ್ನ ಜೀವನದ ದಿಕ್ಕನ್ನೆ ಬದಲಿಸಿಬಿಟ್ಟಿತು. ಹೀಗೆ ನಾನು ಬರಹಗಾರನಾದದ್ದು. ನಾನು ಪಾಶ್ಚಾತ್ಯ ವಿಚಾರಗಳ ಕುರುಡು ಅನುಯಾಯಿಯಾಗಿ ಹೋಗದಂತೆ ನನ್ನನ್ನು ಕಾಪಾಡಿದ ಡಾಕ್ಟರ್ ಲೋಹಿಯಾರ ಕ್ರಾಂತಿಕಾರಕ ವೈಚಾರಿಕತೆಗೆ ನಾನು ಋಣಿಯಾಗಿದ್ದೇನೆ. ಎನ್ನುತ್ತಾರೆ ಅನಂತಮೂರ್ತಿ. ಅವರು ಬರೆದಿರುವಂತೆ, "ನಾನು ಪರಂಪರೆಯ ಜೊತೆ ಜಗಳ ಮಾಡುವುದು ಹೊರಗಿನವನಾಗಿ ಅಲ್ಲ, ಒಳಗಿನವನಾಗಿ. ಹೀಗಾಗಿ ನನ್ನನ್ನು ನಾನು ಒಬ್ಬ ಒಳವಿಮರ್ಶಕನೆಂದು ತಿಳಿದುಕೊಂಡಿದ್ದೇನೆ. ಇದರಲ್ಲಿ ನಾನು ಮಾರ್ಗದರ್ಶನ ಪಡೆದದ್ದು ಕನ್ನಡ ಪರಂಪರೆಯಿಂದಲೇ."
ಜಿ. ರಾಜಶೇಖರ್ ಅವರಿಗೆ 1938ರಲ್ಲಿ ನೀಡಿದ ಸಂದರ್ಶನ ಅನಂತಮೂರ್ತಿಯವರ ಸುದೀರ್ಘ ಹಾಗೂ ಮುಖ್ಯ ಸಂದರ್ಶನಗಳಲ್ಲೊಂದು. ಅನಂತಮೂರ್ತಿಯವರ ಬಾಲ್ಯ-ಯೌವನದ ನೆನೆಪುಗಳು, ವೈಚಾರಿಕ ನಿಲುವುಗಳು ಸಂದರ್ಶನದಲ್ಲಿ ದಾಖಲಾಗಿವೆ. ಇವತ್ತು ನಮಗೂ ನಮ್ಮ ಪುಸ್ತಕಗಳಿಗೂ ನಡುವೆ ಯುರೋಪು ಅಡ್ಡ ಬಂದುಬಿಟ್ಟಿದೆ. ಅಲ್ಲಿಂದ ಬರೋ ಪುಸ್ತಕಗಳು, ಅವುಗಳ ಪ್ರತಿಷ್ಠೆ, ಪ್ರಚಾರ, ಸಾಮ್ರಾಜ್ಯಶಾಹಿಯ ಒತ್ತಡಗಳು, ನಮ್ಮ ಕೊಲೋನಿಯಲ್ ಪಾಸ್ಟ್ ಇವೆಲ್ಲ ಇಲ್ಲಿ ಕೆಲಸ ಮಾಡುತ್ತವೆ. ಯುರೋಪ್‍ನಿಂದ, ಅಮೇರಿಕದಿಂದ ಬುರುವ ಪುಸ್ತಕಗಳಲ್ಲಿ ನೂರರಲ್ಲಿ ತೊಂಬತ್ತು ಪುಸ್ತಕ ನಾವು ಓದದೆ ಇದ್ದರೆ ನಮಗೆ ಏನೂ ನಷ್ಟವಿಲ್ಲ. ಅವುಗಳಿಂದಾಗಿ ನಾವು ನಮ್ಮ ದೇಶದ್ದನ್ನು, ದೇಶೀಯವಾದುದನ್ನು ಕೇಳಿಸಿಕೊಂಡೇ ಇರುವುದಿಲ್ಲ. ಓದಿಯೇ ಇರುವುದಿಲ್ಲ. ಎನ್ನುತ್ತಾರೆ ಅನಂತಮೂರ್ತಿ. ದೆಹಲಿಯ 'ಕಥಾ'ದವರಿಗಾಗಿ ನಿರ್ದೇಶಕ ಪ್ರಸನ್ನರು 1995ರಲ್ಲಿ ಅನಂತಮೂರ್ತಿಯವರೊಡನೆ ನಡೆಸಿದ ಸಂವಾದದಲ್ಲಿ ಗಂಭೀರ ವಿಚಾರಗಳಿವೆ. ಅನಂತಮೂರ್ತಿಯವರ ಕೃತಿಗಳ ಗಂಡುಪಾತ್ರಗಳಿಗೂ ಹೆಣ್ಣು ಪಾತ್ರಗಳಿಗೂ ಇರುವ ವ್ಯತ್ಯಾಸಗಳನ್ನು ಪ್ರಸನ್ನ ಸಂವಾದದಲ್ಲಿ ಚರ್ಚಿಸಿದ್ದಾರೆ. ಸಂವಾದವನ್ನು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಗ್ರಂಥಕ್ಕಾಗಿ ಇಂಗ್ಲಿಷಿನಿಂದ ಭಾಷಾಂತರಿಸಿದ್ದಾರೆ. ಸಮಕಾಲೀನ ಸಾಹಿತ್ಯ ಸಂಸ್ಕೃತಿಯನ್ನು ಕುರಿತ ಅನಂತಮೂರ್ತಿಯವರ ಚಿಂತನೆಗಳು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ 1994ರಲ್ಲಿ ನೀಡಿದ ಸಂದರ್ಶನದಲ್ಲಿವೆ.
ಕೀರ್ತಿನಾಥ ಕುರ್ತಕೋಟಿ, ಡಾ| ಚಂದ್ರಶೇಖರ ಕಂಬಾರ, ಡಾ| ಸುಮತೀಂದ್ರ ನಾಡಿಗ ಹಾಗೂ 'ಚದುರಂಗ'ರು ಅನಂತಮೂರ್ತಿಯವರ ಕುರಿತು ಬರೆದಿರುವ ಲೇಖನಗಳು ಗ್ರಂಥದ ಮೊದಲ ಭಾಗದಲ್ಲಿವೆ. ಅದ್ಭುತ ಮಾತುಗಾರ ಅನಂತಮೂರ್ತಿಯವರನ್ನು ಕುರ್ತಕೋಟಿ, ಕೋಲ್‍ರಿಜ್ ಕವಿಯ ಹಳೆಯ ನಾವಿಕನಿಗೆ ಹೋಲಿಸಿದ್ದಾರೆ." ಅವರು ನಮ್ಮ ಕೈಹಿಡಿದು ಮಾತಾಡತೊಡಗಿದರೆ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ" ಎನ್ನುತ್ತಾರೆ ಕುರ್ತಕೋಟಿ. ಚಂದ್ರಶೇಖರ ಕಂಬಾರ ಅವರು ತನ್ನ ಲೇಖನದಲ್ಲಿ 'ಗುರುರಾಯ' (ಎಂ. ಎನ್. ರಾಯ್ ಕುರಿತ ಕವನ)ದಂಥ ಅನಂತಮೂರ್ತಿಯವರ ಕೆಲವು ಅಲಕ್ಷಿತ ಕವನಗಳನ್ನು ಗುರುತಿಸಿದ್ದಾರೆ. ಆಡೆನ್ನನ 'Sir no man's change' ಅನಂತಮೂರ್ತಿಯವರ 'ಖೋಜರಾಜನ ಪ್ರಾತರ್ಗೀತೆಹಾಗೂ ಅಡಿಗರ 'ಪ್ರಾರ್ಥನೆ' ಕವಿತೆಗಳ ಅಂತರ್‌ಪಠ್ಯೀಯ ಸಂಬಂಧಗಳ ತೌಲನಿಕ ವಿಮರ್ಶೆ ಸುಮತೀಂದ್ರ ನಾಡಿಗರ ಲೇಖನದಲ್ಲಿದೆ. ಚದುರಂಗರ ಲೇಖನದಲ್ಲಿ ಹಳೆಯ ನೆನಪುಗಳು ಮಾತ್ರವಲ್ಲ ಅನಂತಮೂರ್ತಿಯವರ ಕೃತಿಗಳ ಕುರಿತ ಅವರ ವಿಮರ್ಶೆಯೂ ಇದೆ.


ಯು. ಆರ್. ಅನಂತಮೂರ್ತಿ
(2000)
(
ಸಂ) ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment