stat Counter



Thursday, December 9, 2010

ಕತೆಗಾರ್ತಿಯರು ಮತ್ತು ಕತೆಗಳು


ಇಂಗ್ಲಿಷ್ ಮೂಲ: ಗಿರೀಶ ಕಾರ್ನಾಡ
ಕನ್ನಡಕ್ಕೆ: ಮುರಳೀಧರ ಉಪಾಧ್ಯ ಹಿರಿಯಡಕ


ಒಂದು ಜನಪದ ಕತೆ ಎಲ್ಲಿರುತ್ತದೆ?

ಯುರೋಪಿನ ಜನಪದ ಅದ್ಭುತ ಕತೆಗಳನ್ನು ಓದುತ್ತ ಬೆಳೆದ ಒಂದು ಮಗು ಹೀಗೆ ಉತ್ತರಿಸಬಹುದು - ಜನಪದ ಕತೆ ಹಳೆಯ ಮಾದರಿಯ ಮಧ್ಯಯುಗದ ವೇಷಭೂಷಣದ ಪಾತ್ರಗಳೊಂದಿಗೆ ಪುಸ್ತಕದಲ್ಲಿರುತ್ತದೆ.

ಭಾರತದ ಜನಪದ ಕತೆ, ಕತೆಗಾರನ ಅಂತರಂಗದಲ್ಲಿರುತ್ತದೆ.  ಕತೆಗಾರ ಅಥವಾ ಕತೆಗಾರ್ತಿಯನ್ನು ಬೇರೊಬ್ಬರಿಗೆ ಹೇಳಬೇಕೆಂದು ಅದು ಒತ್ತಾಯಿಸುತ್ತದೆ.  ಕತೆಗಾರ ಅಥವಾ ಕತೆಗಾರ್ತಿ (ಕತೆ ಹೇಳುವವರಲ್ಲಿ ಗಂಡಸರೂ ಇದ್ದಾರೆ.  ಆದರೆ ಹೆಂಗಸರ ಸಂಖ್ಯೆ ಜಾಸ್ತಿ) ಕತೆಯನ್ನು ಇನ್ನೊಬ್ಬರಿಗೆ ಹೇಳದಿದ್ದರೆ ಭಯಂಕರ ಪರಿಣಾಮಗಳಾಗುತ್ತವೆ.  (ಈ ಸಂಕಲನದ ಮೊದಲ ಕತೆಯಲ್ಲಿರುವ ಬಡವಿ, ವಿಧವೆ ಮುದುಕಿ, ಕತೆ ಹೇಳದೆ ತನ್ನ ಬಾಯಿ ಮುಚ್ಚಿಕೊಂಡದ್ದರಿಂದ ದಿನದಿನವೂ ಉಬ್ಬತೊಡಗುತ್ತಾಳೆ.)  ಕತೆ ಹೇಳುವುದರಿಂದ ನಿರೂಪಕನ ಮೇಲೆ ಆರೋಗ್ಯಕರ ಪರಿಣಾಮಗಳಾಗುತ್ತವೆ.  ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಪ್ರಕಾರ ಭಾವಶುದ್ಧೀಕರಣ (catharsis) ಆಗುವುದು ಪ್ರೇಕ್ಷಕರಲ್ಲಿ. ಆದರೆ ಭಾರತದ ಕಂಠಸ್ಥ ಸಂಪ್ರದಾಯದ ಕತೆಗಳಲ್ಲಿ ಹೇಳುವವನು ಶುದ್ಧೀಕರಣವನ್ನು ಅನುಭವಿಸುತ್ತಾನೆ.

ಖುಷಿಕೊಡುವ ಈ ಸಂಕಲನದಿಂದ ನಾವು ಪಡೆಯುವ ಪ್ರಚೋದಕ ಒಳನೋಟಗಳಲ್ಲಿ ಇವು ಕೆಲವು. 'Folk Tales From India' 'of ' ಅಲ್ಲ 'From' ಎಂದು ಸಂಪಾದಕ ಎ.ಕೆ. ರಾಮಾನುಜನ್ ವಿವರಿಸುತ್ತಾರೆ.  ಭಾರತದ ಬಹುಮುಖಿಯಾದ ಪರಿವರ್ತನಶೀಲವಾದ ಕತೆಗಳನ್ನು ಯಾವುದೇ ಸಂಕಲನ ಪ್ರತಿನಿಧಿಸುವುದು ಸಾಧ್ಯವಿಲ್ಲ.  ಶಬ್ದಗಳ ಸೂಕ್ಷ್ಮ ಅರ್ಥ ವ್ಯತ್ಯಾಸಗಳನ್ನು ಕುರಿತ ಈ ಎಚ್ಚರ ಈ ಸಂಕಲನದ ಗುಣಮಟ್ಟವನ್ನು ಸೂಚಿಸುತ್ತದೆ.  ರಾಮಾನುಜನ್ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಒಬ್ಬ ಜಾನಪದ ವಿದ್ವಾಂಸರು.  ಇಷ್ಟು ಮಾತ್ರವಲ್ಲ, ಅವರು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಬರೆಯುತ್ತಿರುವ ಕವಿ.  ಅವರು ನಮ್ಮ ಶ್ರೇಷ್ಠ ಭಾಷಾಂತರಕಾರರಲ್ಲೊಬ್ಬರು. ಅವರು ಭಾರತೀಯ ಭಾಷೆಗಳ ಮಾತಿನ ಏರಿಳಿತ, ಹಾಸ್ಯ, ಕರುಣ ಮತ್ತು ಶ್ಲೇಷೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಬಲ್ಲರು.
ಉಪಶೀರ್ಷಿಕೆ ತಿಳಿಸುವಂತೆ, ಈ ಕತೆಗಳನ್ನು ಭಾರತದ ಇಪ್ಪತ್ತೆರಡು ಭಾಷೆಗಳಿಂದ ಆಯ್ಕೆಮಾಡಲಾಗಿದೆ.  ಇವು ಹಾಸ್ಯ, ದುರಂತ ಮತ್ತಿತರ ವಿವಿಧ ಶೈಲಿಗಳನ್ನು ಪ್ರತಿನಿಧಿಸುತ್ತವೆ.  ('ಹೂ ಬಿಡುವ ಮರ' ನನ್ನ ಇಷ್ಟದ ಕತೆ.  ಈ ಕತೆಯಲ್ಲಿರುವ ಹದಿಹರೆಯದ ಹುಡುಗಿ ತಾನು 'ಹೂಬಿಡುವ ಮರ'ವಾಗಿ ರೂಪಾಂತರಗೊಳ್ಳಬಹುದೆಂದು ತಿಳಿಯುತ್ತಾಳೆ).

ಹನ್ನೆರಡು ವರ್ಷದೊಳಗಿನವರಾದ ನನ್ನ ಇಬ್ಬರು ಮಕ್ಕಳು ತುಂಬ ಆಸಕ್ತಿಯಿಂದ ಈ ಪುಸ್ತಕವನ್ನು ಓದಿದರು.  ಚಿಕ್ಕಮಕ್ಕಳ ಮೇಲೆ ಈ ಕತೆಗಳು ಎಂಥ ಪ್ರಭಾವ ಬೀರಬಲ್ಲವು ಎಂಬುದಕ್ಕೆ  ಇದೊಂದು ಒಳ್ಳೆಯ ರುಜುವಾತು.  ಆದರೆ ಇದು ಬರೇ ಮಕ್ಕಳು ಓದುವ ಪುಸ್ತಕವಲ್ಲ.  ಈ ಕತೆಗಳು ಬಹಿರಂಗದಲ್ಲಿ ಸರಳವಾಗಿದ್ದರೂ ಅನೇಕ ಸಂಕೀರ್ಣ ಸಂಗತಿಗಳನ್ನು ಸೂಚಿಸುತ್ತದೆ.  ನಾನು ನನ್ನ ನಾಟಕ ಮತ್ತು ಸಿನಿಮಾಗಳ ವಸ್ತುಗಳಿಗಾಗಿ ರಾಮಾನುಜನ್‍ರ ಜನಪದ ಕತೆಗಳ ಸಂಗ್ರಹವನ್ನು ನಾಚಿಗೆಯಿಲ್ಲದೆ ಸೂರೆಮಾಡಿದ್ದೇನೆ.

ಈ ಕತೆಗಳನ್ನು ಹೇಳುವವರು ಹೆಚ್ಚಾಗಿ ಮುದುಕಿಯರು.  ಮಕ್ಕಳಿಗೆ ಊಟ ಮಾಡಿಸುವಾಗ ಅಥವಾ ನಿದ್ರೆ ಮಾಡಿಸುವಾಗ ಈ ಕತೆಗಳನ್ನು ಹೇಳುತ್ತಾರೆ.  ಈ ಕತೆಗಳನ್ನು ಹೇಳುವಾಗ ಸುತ್ತಮುತ್ತ ಇರುವವರೂ ಹೆಂಗಸರೇ.  ಈ ಕತೆಗಳನ್ನು ಮಕ್ಕಳಿಗೆ ಹೇಳಿದರೂ ಇವು ಮನೆಯ ಹೆಂಗಸರೊಳಗಿನ ಸಂವಹನ ಮಾಧ್ಯಮಗಳಾಗಿವೆ.  ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಕತೆಗಳು ನೆನಪಿವೆ.  ಆಯ್ಕೆ ಮಾಡಿದ ಕತೆಗೂ ಆ ದಿನ ಮನೆಯಲ್ಲಿ ನಡೆದ ಘಟನೆಗೂ ಸಂಬಂಧವಿರುತ್ತಿತ್ತು.

ತನ್ನ ಪೀಠಿಕೆಯಲ್ಲಿ ರಾಮಾನುಜನ್ ಈ ಕತೆಗಳನ್ನು ಹೇಳುವ ಬೇರೆಬೇರೆ ಸಂದರ್ಭಗಳನ್ನು ಅವುಗಳ ವಿವಿಧ ಪರಿಣಾಮಗಳನ್ನು ವಿಶ್ಲೇಷಿಸುತ್ತಾರೆ.  ಸ್ತ್ರೀಕೇಂದ್ರಿತ ಕತೆಗಳನ್ನು ರಾಮಾನುಜನ್ ವಿಶ್ಲೇಷಿಸಿರುವ ರೀತಿ ರೋಚಕವಾಗಿದೆ.  ತನ್ನ ಸುತ್ತಮುತ್ತಲಿನ ವಾಸ್ತವಗಳನ್ನು ಹೆಣ್ಣು ಹೇಗೆ ಗ್ರಹಿಸುತ್ತಾಳೆ ಎಂಬುದನ್ನು ಈ ಕತೆಗಳು ಸೂಚಿಸುತ್ತವೆ.  ನಮ್ಮ ಅಭಿಜಾತ ಪರಂಪರೆಯ ಗ್ರಂಥಗಳಲ್ಲಿರುವ ಪಿತೃಪ್ರಧಾನ ವ್ಯವಸ್ಥೆಗೆ ಬದಲಿಯಾದ ಭಿನ್ನ ದೃಷ್ಟಿಕೋನ ಇಲ್ಲಿದೆ.  ಮಹಾಕಾವ್ಯಗಳು ಸೀತೆ ಸಾವಿತ್ರಿಯರಂಥ ಪತ್ನಿಯರನ್ನು ವೈಭವೀಕರಿಸುತ್ತವೆ.  ಇದಕ್ಕೆ ಬದಲಾಗಿ ಜನಪದ ಕತೆಗಳು ಹಾದರಗಿತ್ತಿಯರ ಕತೆಗಳನ್ನು ಸಂಭ್ರಮದಿಂದ ನಿರೂಪಿಸುತ್ತವೆ.  ಹಾದರದ ಜೋಡಿಗಳು ಜಯಿಸುವುದು ಇಲ್ಲಿ ಅಸಂಭವವಲ್ಲ.  ಕೆಲವು ಕತೆಗಳಲ್ಲಿ ಗಂಡನಿಂದ ಬಿಡಿಸಲಾಗದ ಒಗಟುಗಳನ್ನು ಹೆಂಡತಿ ಬಿಡಿಸುತ್ತಾಳೆ.  ಈ ಕತೆಗಳಲ್ಲಿರುವ ಹೆಂಗಸರು ಗಟ್ಟಿಗರು, ಜಾಣೆಯರು, ಧೈರ್ಯವಂತರು.  ಗಂಡಸರು ತಮ್ಮ ತಾಯಿ, ಹೆಂಡತಿ ಮತ್ತು ಉಪಪತ್ನಿಯ ಪ್ರಭಾವಕ್ಕೊಳಗಾದವರು.

ಹಲವು ಸ್ತ್ರೀಕೇಂದ್ರಿತ ಕತೆಗಳು ಮದುವೆಯಿಂದ ಆರಂಭವಾಗುತ್ತವೆ.  ಗಂಡು ಹೆಣ್ಣು ಅಗಲುತ್ತಾರೆ. ಹೆಣ್ಣು ಗಂಡಿನ ನೆರವಿಗೆ ಬರುತ್ತಾರೆ. (ಮೂವತ್ತರ ದಶಕದ ಕನ್ನಡದ ಪ್ರಸಿದ್ಧ ನಾಟಕ 'ಸದಾರಮೆ'ಯ ಸಾರಾಂಶವೂ ಇದೇ).  ಉತ್ತರ ಪ್ರದೇಶದಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದ ಸಮಾಜಶಾಸ್ತ್ರಜ್ಞೆಯೊಬ್ಬರು ನನಗೆ ತಿಳಿಸಿದ ಮಾಹಿತಿ ಇದು - ಹೆಂಗಸರು ತಮ್ಮ ಬಗ್ಗೆ ಮಾತನಾಡುವಾಗ, "ಮೇರಾ ಬ್ಯಾಹ್ ಹುವಾ" (ನನ್ನ ಮದುವೆ ಆಯಿತು) ಎಂದು ಆರಂಭಿಸುತ್ತಿದ್ದರು.  ರಾಮಾಯಣ ಅಥವಾ ನಳದಮಯಂತಿಯ ಆಖ್ಯಾನಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡಿದಾಗ ಈ ಒಂದು ವಾಕ್ಯವು ಅವುಗಳ ಸಾರಾಂಶವಾಗುತ್ತವೆಂಬುದು ಸೋಜಿಗದ ಸಂಗತಿ.

ಎಳೆಯ ಪ್ರೇಕ್ಷಕರ ಮೇಲೆ ಏನು ಪರಿಣಾಮವಾಗುತ್ತದೆ?  ಮಕ್ಕಳಿಗೆ ಊಟ ಮಾಡಿಸುವುದು ಅವರನ್ನು ಎಚ್ಚರದಲ್ಲಿರಿಸುವುದಲ್ಲದೆ ಈ ಕತೆಗಳಿಗೆ ಬೇರೆ ಉದ್ದೇಶವಿದೆಯೇ?  ವಿವಿಧ ರೀತಿಯ ಕುಟುಂಬ ಸಂಬಂಧಗಳನ್ನು ಕುರಿತ ಹಲವು ಕತೆಗಳಿವೆ.  ಮಕ್ಕಳನ್ನು ಕುರಿತ ತಂದೆ ತಾಯಂದಿರ, ಅಂತೆಯೇ ಸೋದರ-ಸೋದರಿಯರ ನಿಷಿದ್ಧ ಭಾವನೆಗಳು ಇಲ್ಲಿ ಅನಾವರಣಗೊಳ್ಳುತ್ತವೆ.  ಈ ಕತೆಗಳು ಮಗುವಿಗೆ ನಿಷಿದ್ಧ ಭಾವನೆಗಳನ್ನು ಎದುರಿಸಲು ಮಾನಸಿಕ ಶಿಕ್ಷಣವನ್ನು ನೀಡುತ್ತವೆ.
ಹೀಗೆ ಉದ್ಧರಿಸುತ್ತ ಹೋಗಬಹುದು - ಹಿಂದೂ ಪುರಾಣಗಳ ದೇವರುಗಳು ಬೆವರುವುದಿಲ್ಲ, ಎವೆಯಿಕ್ಕುವುದಿಲ್ಲ, ಅವರು ಪಾದಗಳು ನೆಲವನ್ನು ಸ್ಪರ್ಶಿಸುವುದಿಲ್ಲ - ಈ ಕತೆಗಳಲ್ಲಿರುವ ದೇವತೆಗಳಿಗೆ ಮೆಯ್ಗಳಿವೆ; ಮಲ ಮೂತ್ರಾದಿಗಳು ಅವರಲ್ಲೂ ಇವೆ.  ದೇವಿಯರು ಮುಟ್ಟಾಗುತ್ತಾರೆ.  'ಒಂದಾನೊಂದು ಕಾಲದಲ್ಲಿ' 'ಒಂದಾನೊಂದು ಊರಿನಲ್ಲಿ' ಮುಂತಾದ ವಾಕ್ಸರಣಿಗಳ ಬಗ್ಗೆಯೂ ರಾಮಾನುಜನ್ ವ್ಯಾಖ್ಯಾನ ಮಾಡುತ್ತಾರೆ.  ಟಿ.ವಿ. ವೀಡಿಯೋಗಳು ಈ ಪರಂಪರೆಯನ್ನು ನಾಶಮಾಡಲಿವೆಯೆ?  ಉತ್ತರಿಸುವುದು ಅಷ್ಟು ಸುಲಭವಲ್ಲ.  ಈ ಕಥನಕಲೆ ಇಂದಿಗೂ ಜೀವಂತವಾಗಿದೆ, ಚೆನ್ನಾಗಿದೆ ಎಂಬುದು ನಮ್ಮ ನಗರಗಳ ಹೆಚ್ಚಿನ ಜನರಿಗೆ ಗೊತ್ತಿಲ್ಲ.  ಮದ್ರಾಸು, ಮುಂಬಯಿ, ಕಲ್ಕತ್ತಾಗಳಂಥ ಆಧುನಿಕ ನಗರಗಳಲ್ಲೂ ಕೂಡ ಜಾನಪದ, 'ಕೇವಲ ಒಂದು ಉಪನಗರ ಅಥವಾ ಸೋದರಸಂಬಂಧಿ ಅಥವಾ ಅಜ್ಜಿಯಷ್ಟು ದೂರದಲ್ಲಿದೆ ಎನ್ನುತ್ತಾರೆ ರಾಮಾನುಜನ್.  ಈ ಕತೆಗಳು ನಾಶವಾಗುವ ಮೊದಲೇ ಅವುಗಳನ್ನು ರಕ್ಷಿಸಿ, ಲಾವಣ್ಯ, ಹೆತ್ತವರ ಪ್ರೀತಿ, ತಿಳುವಳಿಕೆಗಳೊಂದಿಗೆ ನಮಗೆ ಹಸ್ತಾಂತರಿಸಿರುವ ರಾಮಾನುಜನ್‍ರಿಗೆ ಕೃತಜ್ಞತೆಗಳು.

ಎಳೆ ಮತ್ತು ಇಳಿ ವಯಸ್ಸಿನವರು ಸಂತೋಷದಿಂದ ಓದುವಂತೆ ಈ ಪುಸ್ತಕದ ವಿನ್ಯಾಸ ಆಕರ್ಷಕವಾಗಿದೆ.  ಭಾರತದ ಮನೆಮನೆಗಳಲ್ಲಿ ಖಂಡಿತ ಇರಬೇಕಾದ ಪುಸ್ತಕ ಇದು.

(ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್ 4-7-1993)


ಎ.ಕೆ. ರಾಮಾನುಜನ್ ನೆನಪಿನ ಸಂಪುಟ (1993)
ಸಂ - ಟಿ. ಪಿ. ಅಶೋಕ
ಪ್ರ - ಕರ್ನಾಟಕ ಸಂಘ, ಪುತ್ತೂರು 574 201 (ದ.ಕ.)



No comments:

Post a Comment