stat Counter



Monday, December 27, 2010



 

ಪ್ರಾಣೇಶಾಚಾರ್ಯರ ಪತ್ನಿಗೆ
ನಾರಾಣಪ್ಪನ ಚಂದ್ರಿ ಹೇಳಿದ್ದು
- ಜಯರಾಮ ಕಾರಂತ
 (ಡಿ.೨೧ರಂದು ಉಡುಪಿಯ ರಥಬೀದಿ ಗೆಳೆಯರುಸಂಯೋಜಿಸಿದ ಡಾ. ಯು. ಆರ್. ಅನಂತಮೂರ್ತಿಯವರ ೭೯ನೇ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ವಾಚಿಸಿದ ಕವನವಿದು. ಅವರ ಸಂಸ್ಕಾರಕಾದಂಬರಿಯ ಪಾತ್ರಗಳನ್ನಿಟ್ಟುಕೊಂಡೇ ಈ ಕವನವನ್ನು ಕಟ್ಟಲಾಗಿದೆ.)


 ಗೊತ್ತಿಲ್ಲ ನಿಜ ನನಗೆ ಪಾಪ ಪುಣ್ಯದ ಪಕ್ಕಾ ಲೆಕ್ಕಾಚಾರ
ಅದೆಲ್ಲ ನಿಮ್ಮಗಳ ಪಂಡಿತಾಚಾರ್ಯರ ಸೊತ್ತು
ಕಂಗಾಲ ಕಾಯಕ್ಕೆ ತಕ್ಕ ಹೊತ್ತಿಗೆ ತಕ್ಕ ಉಪಚಾರ
ಅಗತ್ಯ ಎಂಬುದು ನನಗೆ ಅನುಭವದಿಂದಷ್ಟೆ ಗೊತ್ತು.

ಕೊಟ್ಟಿದ್ದುಂಟಂತೆ ಯಾವಳೋ ಹಿಂದೆ ಕೈಯಾರೆ ಮಧುರ ಪಕ್ವ ಫಲ
ಜಾತಿಮತ ಆಚರಣೆಯರಿವು ಹಂಗಿಲ್ಲದ ಆ ಆದಿಪುರುಷನಿಗೆ
ನಾರಣಪ್ಪನೇ ಹೇಳಿದ್ದು ಇದನ್ನು
- ಸತ್ಯ ಹೇಳುತ್ತೇನೆ ಅಮ್ಮ,
ಒಂದಿಷ್ಟೂ ನಶೆಯಲ್ಲಿರಲಿಲ್ಲ ಅವನು ಹೀಗೆ ಅಂದಿದ್ದ ಗಳಿಗೆ.

ಪಡೆದ ಋಣ ದೊಡ್ಡದು; ಹಾಗೆ ಪಡೆದದ್ದ ಮರಳಿಸುವ ಲೆಕ್ಕ
ಬಗೆಹರಿಯದದು ಬಡಪೆಟ್ಟಿಗೆ - ಅದೆಲ್ಲ ಅವರವರ ಕರ್ಮ!
ಉಪಚರಿಸಿದ್ದಿಲ್ಲವೇ ನಿಮ್ಮ ಆಚಾರ‍್ಯರೇ ನಿಮ್ಮ ನಿಶ್ಚೇಷ್ಟಿತ ಒಡಲ -
ಮೀಸುತ್ತ ನಿತ್ಯ ಪ್ರಾತಃಕಾಲ? ಬಹುಶಃ ಇಲ್ಲೇ ಇತ್ತು ಧರ್ಮ - ಕರ್ಮದ ಮರ್ಮ.

ಹಾಗೆ ಉಂಟೇ ಉಂಟು ಸತ್ತು ಒಣಗಿದ್ದಕ್ಕೆ ಚಿಗುರುವುದಕ್ಕೆ ಇನ್ನೊಂದು ಜನ್ಮ
ಗೊತ್ತಿರಲಿಲ್ಲವೆ ಹೇಳಿ ನಿಮ್ಮ ಆಚಾರ್ಯರಿಗೆ ಈ ನಿಯಮ?
ಅಥವಾ ಸತ್ತು ಒರಗಿದ ಮೇಲೂ ಬಿಡುಗಡೆ ಎಂಬ ಆಯಾಮ
ದಕ್ಕದೇ ಹೋದಲ್ಲಿ ಹವ್ವೆಂದೆರಗುವ ಹದ್ದುಬಸ್ತಿನ ಭಯ ಯಾರಿಗಮ್ಮ?

 ಇದ್ದಾಗ ಇಡೀ ಅಗ್ರಹಾರ ನಡುಗಿಸಿದ್ದ ಒಬ್ಬ ಕೇವಲ ಮನುಷ್ಯ
ಹೋದ ಮೇಲೂ ನಡುಗಿಸಿದ್ದು ಹೌದೆಂದರೆ ಅದು ಅವನ ತಪ್ಪೆ?
ನನ್ನ ಇಡೀ ಇರುವಿಕೆಗವನು ಜೀವಜಲವಾಗಿದ್ದುದು ಸತ್ಯ -
ಹಾಗೆಂದು ಕಣ್ಮುಚ್ಚಿದ ಮೇಲೂ ಕಣ್ಣೊಳಗವನ ಬಂಧಿಸಿಡುವುದು ಒಪ್ಪೆ?

 ಹಾಗೆಂದು ನಿಮ್ಮವರ ಕೇಳೋಣವೆಂದರೆ ಸಿಕ್ಕದೆ ಉತ್ತರ -
ಯಾವುದೇ ತಾಳೆಗರಿ ಗ್ರಂಥದ ಯಾವುದೇ ಕಟ್ಟಿನ ಒಳಗೆ,
ಲೋಕಾಂತದಿಂದ ಏಕಾಂತಕ್ಕೆ ಜಾರಿದ ಜೀವ ನಡುಗಿ ಬಿದ್ದಾಗ ತಡೆದೆ,
ನೆಟ್ಟಗಿದ್ದಿದ್ದರೆ ನೀವೂ ಮಾಡದಿರುತ್ತಿದ್ದಿರ ಹೀಗೆ?

 ಎಂಟು ಗೇಣಿನ ದೇಹ - ಒಳಗೆ ಸಾವಿರದೆಂಟು ದಾಹದ ಬೆಡಗು
ಒಂದೊಂದರ ಉಜ್ವಲ ಚೇಷ್ಟೆಯ ಅರಿವು ನನಗೂ ಅಷ್ಟಿಷ್ಟು ಉಂಟು.
ದೇಹಗಳ ಬಂಧ ಭ್ರಮೆ ಹಸಿವು ಸಾವಿನ ಭೀತಿ ಗೆಲ್ಲುವ ಅಂಟು
ಅನ್ನುವುದುಂಟಲ್ಲ - ಅದಕ್ಕೆಲ್ಲಿ ಸಂಸ್ಕಾರ ಕಟ್ಟಳೆಯ ಸೋಗು.

 ಅಂದುಕೊಂಡೇ ನಡೆದುಕೊಂಡವಳು ಎಂದೂ ನಾನು ಅವನ ಜತೆ
ಹೇಗೆ, ಹಾಗೆ ಆಚರಿಸಿದೆ ಅದನ್ನೆ ಆಚಾರ್ಯರ ಜತೆಗೂ - ಹಾಗೆಂದೆ
ಬಾಧಿಸಿಯೂ ಬಾಧಿಸದೆ ನಿಮ್ಮಗಳ ಧರ್ಮಸೂಕ್ಷ್ಮದ ಪ್ರಶ್ನೆ
ಉರಿಯುತ್ತ ನಿಂತಿದ್ದೇನೆ ಆನಂತಮುಖದ ಮುಖ್ಯಪ್ರಾಣನ ಮುಂದೆ.

(ಉದಯವಾಣಿ, 26-12-2010)

No comments:

Post a Comment