ಪುರುಷೋತ್ತಮ ಬಿಳಿಮಲೆ ಅವರ 'ಕನ್ನಡ ಕಥನಗಳು' ಕೃತಿ ಕುರಿತು ರಾಜೇಂದ್ರ ಪ್ರಸಾದ್ ಅವರ ಟಿಪ್ಪಣಿ...
---
ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ತುಂಬಾ ಕಾರ್ಯಶೀಲರಾಗಿದ್ದವರು.. ೯೦ ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟು ದೆಹಲಿ ಸೇರಿದ ಮೇಲೆ ಸಂಸ್ಥೆ ಮತ್ತು ಸಂಘಟನೆಗಳಲ್ಲಿ ಹೆಚ್ಚು ಕೆಲಸ ಮಾಡುತ್ತಾ ಬರೆಯುವುದನ್ನೇ ಮರೆತುಬಿಟ್ಟಿದ್ದರು. ಈಗಲೂ ಅದೇ ಕೆಲಸಗಳಲ್ಲಿ ಸದಾ ಚಟುವಟಿಕೆಯಿಂದಿದ್ದಾರೆ. ಅದರ ನಡುವೆ ಬಹುರೂಪ, ಮೆಲುದನಿ, ಜನಸಂಸ್ಕೃತಿ ಮೊದಲಾದವು ಪ್ರಕಟವಾದುವು. ಅವುಗಳಲ್ಲಿ ಈಚಿನದು 'ಕನ್ನಡ ಕಥನಗಳು' ಪುಸ್ತಕ.
ಈ ಪುಸ್ತಕದಲ್ಲಿ ಬೇರೆ ಬೇರೆಯ ಸಂದರ್ಭಗಳಲ್ಲಿ ಬರೆದ ಒಟ್ಟು ಒಂಭತ್ತು ಕಥನಗಳು ಇವೆ. ಕಥನ ಎಂಬುದಿಲ್ಲಿ ಸೃಜನಶೀಲವಾದ್ದಲ್ಲ, ಬದಲಿಗೆ ನುಡಿ ಮತ್ತು ನಡೆ ಸಂಕಥನದ್ದು. ಎಲ್ಲ ಬರಹಗಳು ನೇರವಾಗಿ ಕನ್ನಡದ ನುಡಿ ಮತ್ತು ನಡೆಯನ್ನು ಕುರಿತಾಗಿ ಹಲವು ಹಿನ್ನೆಲೆಗಳ ಚರ್ಚೆಯಲ್ಲಿ ಕಟ್ಟಿದ ಕಥನಗಳು. ಮೊದಲ ಕಥನ ಭಾರತ ರಾಮಾಯಣದ ಕಥನಗಳು, ಅವುಗಳ ಪಾತ್ರ ಎಲ್ಲವೂ ಹೇಗೆ ಬದಲಾದ ರಾಜಕೀಯ ಘಟ್ಟದಲ್ಲಿ ಅಸಹನೆಯ ಸ್ವರೂಪವನ್ನು ಪಡೆಯುತ್ತಿವೆ ಎಂಬುದರ ಜೊತೆಗೆ ಈ ಕಥನಗಳು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹೇಗೆ ನೆಲದಿಂದ ನೆಲಕ್ಕೆ, ನುಡಿಯಿಂದ ನುಡಿಗೆ ತಮ್ಮನ್ನು ವಿಸ್ತರಿಸಿಕೊಂಡಿವೆ ಎಂಬುದ ಸೋದಾಹರಣವಾದ ಲೇಖನ. ಅದರ ಮೊದಲ ಪುಟದಲ್ಲೇ ಮಹಾಭಾರತವು ೧೧೨೯ ಬೇರೆ ಬೇರೆ ಕಥನವಾಗಿ ರೂಪುಗೊಂಡಿರುವ ವಿಷಯ ಪ್ರಸ್ತಾಪವಿದೆ. ಅಬ್ಬಾ!
ಮುಂದೆ ಹಳಗನ್ನಡ ಸಾಹಿತ್ಯ ಬೆಳೆದು ಮುಂದೆ ನಡುಗನ್ನಡಕ್ಕೆ ಛಂದಸ್ಸುಗಳನ್ನು ಬದಲು ಮಾಡಿಕೊಳ್ಳುತ್ತಾ, ಹೊಸತನ್ನು ಕಂಡುಕೊಳ್ಳುತ್ತಾ ವಿಷಯ ವಿಸ್ತಾರ ಮಾಡುತ್ತಾ ಬಂದು ಇವಾಗ ಹೇಗೆ ನಿಂತಿದೆ? ಈ ಕಾಲದ ಓದುಗರಿಗೆ ಹಳಗನ್ನಡ ಓದು ಕಲಿಕೆ ತೆಗೆದುಕೊಳ್ಳುವ ಕ್ರಮವೇನು ಎಂಬ ಚರ್ಚೆಯ ಜೊತೆಗೆ ಮುಗಿಯುತ್ತದೆ. ಇದು ಬಹಳ ಮುಖ್ಯವಾದುದು. ಈಗಾಗಲೇ ಅಂತಹ ಕೆಲವು ಕೆಲಸಗಳನ್ನು ಸ್ವತಃ ಬಿಳಿಮಲೆಯವರೇ ಜೆ ಎನ್ ಯು ನ ಕನ್ನಡಪೀಠದ ಮೂಲಕ ಹಳಗನ್ನಡ ಕೃತಿಗಳ ಅನುವಾದ, ಚರ್ಚೆ, ನುಡಿ ಕಲಿಕೆ ಇತ್ಯಾದಿಗಳನ್ನು ಶುರುಮಾಡಿದ್ದಾರೆ. ಅವರ ಮಾತನ್ನು ಅವರೇ ಮೊದಲಿಗೆ ಶುರುಮಾಡಿ ನಾವು ಮಾಡಬೇಕಾದ್ದನ್ನು ಮನದಟ್ಟು ಮಾಡಿದ್ದಾರೆ. ಈ ಅಧ್ಯಾಯದಲ್ಲಿ ಅವರು ಸಾಹಿತ್ಯದ ಯಕ್ಷಗಾನವನ್ನು ಕೂಡ ಸೇರಿಸಿದ್ದಾರೆ. ಇದುವರೆಗೂ ಇಂತಹ ಕ್ರಮವನ್ನು ಕಂಡಿರಲಿಲ್ಲ. ಆದ್ರೆ ಅದು ಎಷ್ಟು ಮುಖ್ಯವೆಂಬುದನ್ನು ನಾವು ಅರಿಯಬೇಕಿದೆ. ಯಕ್ಷಗಾನದ ಕಥನಗಳ ಹಲವಾರು ಪಠ್ಯಗಳನ್ನು ಉಲ್ಲೇಖಿಸಿದ್ದಾರೆ.
ಮುಂದುವರಿದು ಶರಣರು ಮತ್ತು ದಾಸರು ಜನಪದೀಯರ ದೈವೀಕ ಆಚರಣೆಗಳನ್ನು ಕಂಡ ಬಗೆಯನ್ನು ಅವರ ವಚನ, ಕೀರ್ತನೆಗಳ ಮೂಲಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಯಾವುದೇ ಸುಧಾರಣೆಯು ಶಿಷ್ಟ ರೂಪ ಪಡೆದಾಗ ಅದು ಜನಪದವನ್ನು ಕಾಣುವ ಬಗೆಯೇ ಬೇರೆಯಾಗುತ್ತದೆ. ಅದಕ್ಕಿಲ್ಲಿ ನಿದರ್ಶನಗಳ ಸಮೇತ ವಿವರಿಸಲಾಗಿದೆ.. ಮತ್ತು ಹಾಗೇ ಆ ಶಿಷ್ಟ ಭಕ್ತಿ ಪರಂಪರೆಗಳು ಹೇಗೆ ಮೈಲಾರಲಿಂಗ ಪರಂಪರೆಯನ್ನ, ಕರಾವಳಿಯ ನಾಗಾರಾಧನೆ, ತುಳುನಾಡ ದೈವಗಳು, ಯಕ್ಷಗಾನವನ್ನು ಪ್ರಭಾವಿಸಿದುವು ಎಂಬದರ ಕುರಿತು ಸವಿಸ್ತಾರವಾದ ಚರ್ಚೆಯಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಇಂತಹ ಸಾಧಾರಣೆಗಳು ಜನಪದದ ಆಚರಣೆಗಳನ್ನು ತನ್ನ ಅಧೀನಕ್ಕೆ ಒಳಪಡಿಸಿಕೊಳ್ಳಲು ಪ್ರಯತ್ನಿಸಿ ಬಹುತೇಕ ಕಡೆ ಯಶಸ್ವಿಯಾಗುವುದು. ಅದಕ್ಕೆ ಒಳ್ಳೆಯ ಉದಾ: ಬೊಬ್ಬರ್ಯನ ಭೂತವನ್ನು ಬಭ್ರುವಾಹನ ಅವತಾರ ಎಂದು ಕಥೆ ಕಟ್ಟುವುದು.
ಕನ್ನಡ ಸಂಶೋಧನೆಯ ಸ್ಥಿತಿಗತಿ, ಅರೆಭಾಷೆಯ ಸಬಲೀಕರಣ, AKR ಅವರ ಭಾರತೀಯ ಜನಪದ ಕಥೆಗಳು, ಕರಾವಳಿಯ ತಳಸಮುದಾಯದ ಸಾಂಸ್ಕೃತಿಕ ಕಥನಗಳು, ನದಿ ಮತ್ತು ಮಹಾಭಾರತದ ಮತ್ತಷ್ಟು ಕಥನಗಳು ಇಲ್ಲಿವೆ. ಒಂದನ್ನು ಓದಲು ಹಿಡಿದರೆ ಇಲ್ಲಿರುವ ಒಂಭತ್ತು ಕಥನಗಳನ್ನೂ ನೀವು ಓದಲೇಬೇಕಾಗುತ್ತದೆ. ಯಾವುದನ್ನೂ ಬಿಡುವ ಹಾಗಿಲ್ಲ. ಬಿಳಿಮಲೆಯವರ ಭಾಷೆ ಮತ್ತು ವಿಷಯ ವಿಸ್ತಾರತೆ ಅದಕ್ಕೆ ಮತ್ತೊಂದನ್ನು ಬೆಸೆದು ತರುವ ನೈಪುಣ್ಯತೆಯನ್ನು ಕಂಡಾಗ ಅವರು ಕಾದಂಬರಿಕಾರರಾಗಿದ್ದರೆ ನಮಗೆ ಎಂತಹ ಅದ್ಬುತವಾದ ಕಥನಗಳ ಸಾಧ್ಯತೆ ಇತ್ತು ಎಂದೆನಿಸುತ್ತದೆ. ಈಗಲೂ ಅವರು ಅವರ ಪಂಜ, ಬಂಟಮಲೆ, ಬಿಳಿಮಲೆಯ ಬದುಕನ್ನು ಕಾದಂಬರಿಯಾಗಿಸಿದರೆ ನಾನು ಪ್ರಕಟಿಸಲು ಸಿದ್ಧ.
ದೆಹಲಿಯಲ್ಲಿ ಹಲವು ರೀತಿಯ ಕನ್ನಡ ಸಂಘಟನೆಗಳನ್ನ ಕಟ್ಟುತ್ತಾ ಇಪ್ಪತ್ತಕ್ಕೂ ಹೆಚ್ಚು ವರ್ಷಗಳನ್ನು ಅದರಲ್ಲೇ ಕಳೆದು ಬಿಟ್ಟಿದ್ದಾರೆ. (ಆ ಕೆಲಸಗಳು ಕೂಡ ಬಹುಮುಖ್ಯವಾದುವು ಎಂಬುದರಲ್ಲಿ ಎರಡನೇಯ ಮಾತಿಲ್ಲ) ಈಗ ನಿವೃತ್ತಿಯ ಅಂಚಿನಲ್ಲಿರುವ ಅವರು ನಮಗಾಗಿ ಮತ್ತಷ್ಟು ಬರೆಯಬೇಕೆಂದು ಬಯಸುತ್ತೇನೆ.
- ರಾಜೇಂದ್ರ ಪ್ರಸಾದ್
---
ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಕನ್ನಡ ಕಥನಗಳು' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
No comments:
Post a Comment