ದೀಪದ ಕೆಳಗೆ (ಜಿಜ್ಞಾಸೆಯ ತುಣುಕುಗಳು) ಲೇ:ಅಮೃತ ಸೋಮೇಶ್ವರ
ಪ್ರ:ಪ್ರಕೃತಿ ಪ್ರಕಾಶನ, ಕೋಟೆಕಾರು, ಮಂಗಳೂರು-೫೭೫೦೨೨.
ಮೊ.ಮುದ್ರಣ:೨೦೦೩ ಬೆಲೆ.ರೂ.೩೦.
ವಿವಿಧ ಪತ್ರಿಕೆಗಳ ’ ಸಂಪಾದಕರಿಗೆ ಪತ್ರ’ ವಿಭಾಗದಲ್ಲಿ ಪ್ರಕಟವಾಗಿರುವ, ತುಳು-ಕನ್ನಡ ಸಾಹಿತಿ, ಜಾನಪದ ತಜ್ಞ ಅಮೃತಸೋಮೇಶ್ವರ ಅವರ ೩೩ ವೈಚಾರಿಕ ಪತ್ರಗಳು ’ ದೀಪದ ಕೆಳಗೆ’ ಪುಸ್ತಕದಲ್ಲಿವೆ. ’ಮನಸ್ಸಿಗೆ ಕಸಿವಿಸಿಯನ್ನುಂಟು ಮಾಡಿದ ಕೆಲವು ಪತ್ರಿಕಾ ವಾರ್ತೆಗಳಿಗೆ ಸಾಂದರ್ಭಿಕವಾಗಿ ಸ್ಪಂದಿಸಿ ಇಲ್ಲಿನ ಹೆಚ್ಚಿನ ’ಸಂಪಾದಕರಿಗೆ ಪತ್ರ’ಗಳು ಕಾಣಿಸಿಕೊಂಡಿವೆ. ಇತರ ಮಹನೀಯರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯಾಗಿ ಮೂಡಿದ ಬರೆಹಗಳೂ ಇಲ್ಲಿವೆ. ಯಾವುದೇ ವಿಚಾರವು ಚರ್ಚೆಗೆ ಒಡ್ಡಲ್ಪಟ್ಟು ಪ್ರಯೋಜನಕಾರಿಯಾದ ನೆಲೆಗೆ ತಲುಪಿದರೆ ಒಳ್ಳೆಯದೆಂಬ ಧೋರಣಿಯಿಂದ ಈ ಚರ್ಚೆಗಳು ನಡೆದಿವೆಯೇ ಹೊರತು ತರ್ಕ ಪ್ರತಿಷ್ಠೆ ಗಳಿಗಾಗಿ ಅಲ್ಲ" ಎನ್ನುತ್ತಾರೆ ಅಮೃತ ಸೋಮೇಶ್ವರ.
’ಅಪ್ರಸ್ತುತ ಸಂಪ್ರದಾಯ -ಬಾಲ ಸಂಸ್ಥಾನ’, ಮಂತ್ರಕ್ಕೆ ಭಾಷಾ ಬಂಧನವಿಲ್ಲ’, ’ಸಾಧುಗಳು ನಗ್ನರಾಗಿ ಓಡಾಡುವುದು ಸರಿಯಲ್ಲ’, ಬಹಿರಂಗ ಸ್ಥಳಗಳಲ್ಲಿ ಪ್ರತಿಮೆಗಳು ಬೇಡ’ ಇಂಥ ಪತ್ರ ಶೀರ್ಷಿಕೆಗಳೇ ಅಮೃತರ ಅಭಿಪ್ರಾಯವನ್ನು ಸ್ಪಷ್ಪಪಡಿಸುತ್ತವೆ. ಜಾತಿ ಪದ್ಧತಿಯನ್ನು ಅಂಟಿಸಿದ ಅಪರಂಜಿಯಂತೆ ಕಾಪಾಡುತ್ತಿರುವ ನಮ್ಮ ಸಮಾಜದ ಅಕಾಲಿಕ ಆಚರಣೆಗಳನ್ನು ಅಮೃತರು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ.
ಇಲ್ಲಿನ ಕೆಲವು ಪತ್ರಗಳು ಬರೇ ಪ್ರಶ್ನೆಗಳಾಗಿ ಉಳಿಯದೆ, ವೈಚಾರಿಕ ಲೇಖನ ಗಳಾಗಿ ಬೆಳೆದಿವೆ. ’ಸಾಂಸ್ಕೃತಿಕ ವಸ್ತುಗಳನ್ನು ಸುಡುವವರು’, ’ಇದು ನಮ್ಮ ಧಾರ್ಮಿಕತೆ’, ’ಮೂಲಭೂತವಾದದ ಮೊನೆ ಮೊಂಡಾದೀತೆ?’’ ಇಂಥ ಕೆಲವು ಗಂಭೀರ ಲೇಖನಗಳು, ಜಿಜ್ಞಾಸೆಯ ತುಣುಕುಗಳು ಈ ಪುಸ್ತಕದಲ್ಲಿವೆ.
No comments:
Post a Comment