ಪುಸ್ತಕ :- ಮೊಬೈಲ್ ಮೈಥಿಲಿ ಮತ್ತು ಮುಗ್ಧ ಕಥೆಗಳು
ಲೇಖಕರು :- ಕೆ. ಸುರಭಿ ಕೊಡವೂರು
ಪ್ರಕಾಶಕರು :-ಅನುಗ್ರಹ ಪ್ರಕಾಶನ
ಬೆಲೆ :- Rs. 100
ಪುಸ್ತಕ ದೊರೆಯುವ ಸ್ಥಳ :- ಸಪ್ನ, ಫಿನೀಕ್ಸ್ ಬುಕ್ಸ್, ನವಕರ್ನಾಟಕ ಬುಕ್ ಸ್ಟಾಲ್.
ಈ ಕಥೆ ಪುಸ್ತಕ ಕೈಸೇರುತ್ತಿದ್ದಂತೆ ಯಾಕೋ ಬಾಲ್ಯ ನೆನಪಾಯಿತು .ನಾನು ಬಹಳ ಚಿಕ್ಕ ವಯಸ್ಸಿನಿಂದಲೂ ಅಜ್ಜಿಯ ಸಾಂಗತ್ಯ, ಪೋಷಣೆಯಲ್ಲಿ ಹೆಚ್ಚು ಬೆಳೆದವಳು. ಆ ಮುಗ್ಧ ದಿನಗಳಲ್ಲಿ ಅಜ್ಜಿಯನ್ನು ಕತೆ ಹೇಳು ಎಂದು ದಿನಾ ಪೀಡಿಸುತ್ತಿದೆ. ಆಗ ಅಜ್ಜಿ ಹೇಳುತ್ತಿದ್ದ ಕಥೆಗಳು ಕಾಗಕ್ಕ ಗುಬ್ಬಕ್ಕ, ಕಾಗೆ ಭತ್ತವನ್ನು ಹೊತ್ತೊಯ್ಯುವ ಕಥೆ, ಮತ್ತು ಅಮರಾವತಿ ಎಂಬ ಪಟ್ಟಣದ ಒಬ್ಬಳು ರಾಜಕುಮಾರಿಯ ಕಥೆ. ಆಹಾ.... ಅದೆಷ್ಟೊಂದು ಸುಂದರವಾಗಿತ್ತು ಆ ಬಾಲ್ಯ ಆ ಕಥೆಗಳು. ಈ ಕತೆಗಳಲ್ಲಿ ನನಗೆ ಬಹಳ ಇಷ್ಟವಾದದ್ದು ಕಾಗೆ ಭತ್ತವನ್ನು ಹೊತ್ತೊಯ್ಯುವ ಕಥೆ. ಈ ಕಥೆಗೆ ಅಂತ್ಯವೇ ಇಲ್ಲ. ನಿದ್ದೆಯಿಂದ ಕಣ್ಣೆವೆ ಮುಚ್ಚಿ ಕೊಳ್ಳುವವರೆಗೂ ಕಾಗೆ ಭತ್ತವನ್ನು ಒಂದೊಂದಾಗಿ ಹೊತ್ತೊಯ್ಯುತ್ತಿತ್ತು. ಈ ಕಥೆ ಇಷ್ಟವಾಗಲು ಕಾರಣ ಅಜ್ಜಿ ಅದನ್ನು ಹೇಳುತ್ತಿದ್ದ ಆಕರ್ಷಕ ರೀತಿ. ನನ್ನ ಬಾಲ್ಯವನ್ನು ಸೊಗಸಾಗಿಸುವುದೇ ಈ ಸುಂದರ ನೆನಪುಗಳು.
ಇಂತಹ ಸುಂದರ ಬಾಲ್ಯದಿಂದ ಇವತ್ತು ಬಹಳಷ್ಟು ಪುಟಾಣಿಗಳು ವಂಚಿತರು ಅನ್ನುವುದು ದುಃಖದ ಸಂಗತಿ. ಒಂದನೆಯದಾಗಿ ಒಂದು ಕುಟುಂಬವೆಂದರೆ ಅಪ್ಪ ,ಅಮ್ಮ ,ಮಗು ಅಷ್ಟೇ ಆಗಿದೆ. ಹಿರಿಯರ ನೆರಳಿನಿಂದ ಇಂದಿನ ಬಹಳಷ್ಟು ಮಕ್ಕಳು ವಂಚಿತರು. ಅದಲ್ಲದೆ ಮುಂದುವರಿದ ತಾಂತ್ರಿಕ ಕ್ರಾಂತಿಯೊಂದಿಗೆ ಮಕ್ಕಳ ಮುಗ್ಧತನವೂ ಇಲ್ಲವಾಗುತ್ತಿದೆ. ಪುಟಾಣಿಗಳು ಮೊಬೈಲ್ ಕಂಪ್ಯೂಟರ್ ಗೇಮ್ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅಜ್ಜ, ಅಜ್ಜಿ, ಅತ್ತೆ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಈ ಸಂಬಂಧಗಳೆಲ್ಲವೂ ಬಹಳಷ್ಟು ಮಕ್ಕಳಿಗೆ ಅಪರಿಚಿತ. ಒಂದು ವೇಳೆ ಇದ್ದರೂ ಅಲ್ಲಿ ಮನ ಹೃದಯಗಳನ್ನು ಬೆಸೆಯುವ ವಾತ್ಸಲ್ಯ, ಸ್ನೇಹದ ತಂತುಗಳು ಇಲ್ಲ. ಸಂಬಂಧಗಳು ಬರೀ ವ್ಯಾವಹಾರಿಕ, ಇದೆಂತಹ ಬದುಕು ?.
ಮೊದಲ ಕಥೆಯಲ್ಲೆ ಈ ಕತೆಗಳನ್ನು ಬರೆದ ಪುಟ್ಟ ಲೇಖಕಿಯ ಮನಸ್ಸು ಹೇಗೆಂದು ಅರ್ಥವಾಗುತ್ತದೆ. ಈ ಕತೆಗಳನ್ನು ಬರೆಯುವಾಗ ಲೇಖಕಿಯ ವಯಸ್ಸು 7-8 ವರ್ಷ ಇರಬಹುದು.ಅಥವಾ ಇನ್ನೂ ಚಿಕ್ಕ ಪ್ರಾಯ. ಇವತ್ತಿನ ಪ್ರಸ್ತುತ, ನೀರಸ, ರೋಬೋಟ್ ನಂತಹ ಬದುಕಿನ ಪರಿಚಯ ಸಿಗುತ್ತದೆ ಇಲ್ಲಿ. ಮೊಬೈಲ್ ಎಂಬ ಮಾಯಾಪೆಟ್ಟಿಗೆ ಮುಗ್ಧರು ಮಕ್ಕಳು ಹೇಗೆ ದಾಸರಾಗುತ್ತಿದ್ದಾರೆ, ಅದು ಎಷ್ಟು ಕೆಟ್ಟದ್ದು ಅನ್ನುವುದನ್ನು ಈ ಪುಟ್ಟ ಬಾಲಕಿ ಸ್ವತಃ ಅರ್ಥೈಸಿಕೊಂಡು ಬರೆದಿದ್ದಾಳೆ.
ಇವತ್ತಿನ ಅಮ್ಮಂದಿರಿಗೆ ಮಗುವನ್ನು ಲಾಲಿಸಿ, ಮುದ್ದಿಸಿ, ಚಂದಿರನನ್ನು ತೋರಿಸಿ, ಲಾಲಿ ಹಾಡಿ ಸಂತೈಸುವ ವ್ಯವಧಾನವಿಲ್ಲ, ಊಟ ಮಾಡಿಸುವ ತಾಳ್ಮೆ ಇಲ್ಲ. ಮೊಬೈಲ್ ಎಂಬ ಮಾಯಾಪೆಟ್ಟಿಗೆಯಲ್ಲಿ ಆಟವೊ, ಕಾರ್ಟೂನು ಹಾಕಿ ಕೊಟ್ಟರೆ ಆಯಿತು, ಮಗು ಇಡೀ ಪ್ರಪಂಚವನ್ನೇ ಮರೆತು ಅದರೊಳಗೆ ಕಳೆದು ಹೋಗುತ್ತದೆ. ಮಗುವಿನದ್ದು ಗಲಾಟೆ ಇಲ್ಲ , ಅಮ್ಮನು ನಿರಾಳ. ತಾಯ್ತನ ಎನ್ನುವುದು ಒಂದು ಸಂಭ್ರಮ. ರಚ್ಚೆ ಹಿಡಿದು ಅಳುವ ಮಗುವನ್ನು ಸಂತೈಸಿ ಸಮಾಧಾನಿಸುವುದು ಒಂದು ಕಲೆ. ಈ ಕ್ರಿಯೆ ಅಮ್ಮ ಮಗುವಿನ ಬಾಂಧವ್ಯವನ್ನು, ಕರುಳಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಅನ್ನುವ ವಿಚಾರ ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಆದರೂ ನಮಗೆ ಮಾತ್ರ ಅರ್ಥವಾಗುವುದಿಲ್ಲ. ಮರಳುಗಾಡಿನ ಮರೀಚಿಕೆಯಂತೆ ಕಾಣದ ಅದಾವುದೋ ತೃಷೆಯ ದಾಸರಾಗಿ ಅದರ ಹಿಂದೋಡುವುದೇ ಬದುಕಾಗಿದೆ. ನಮಗೆ ಯಾವಾಗ ಎಚ್ಚರವಾಗುತ್ತದೊ ಗೊತ್ತಿಲ್ಲ.
ಸುರಭಿ ತನ್ನ ಕಥೆಯ ಮೂಲಕ ಒಂದು ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾಳೆ.
ಮೊಬೈಲ್ ಮೈಥಿಲಿಯಲ್ಲಿ ಇಂದಿನ ತಂತ್ರಜ್ಞಾನ ಸಂಬಂಧಿ ಮೊಬೈಲ್, ಕಂಪ್ಯೂಟರ್ ಗಳ ಬಳಕೆಯಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಹಾಗೂ ಮಕ್ಕಳ ಕೈಗೆ ಇಂತಹವನ್ನು ಕೊಡುವ ಪೋಷಕರಲ್ಲಿ ಇರಬೇಕಾದ ವಿವೇಕ, ಎಚ್ಚರಿಕೆಯನ್ನು ಸೂಕ್ಷ್ಮವಾಗಿ ನೀಡಲಾಗಿದೆ. ಇಷ್ಟು ಪುಟ್ಟ ತಲೆಯೊಳಗೆ ಎಂತಹ ವಿವೇಚನಾಯುಕ್ತ ಆಲೋಚನೆ ....
ಹೇನಿನ ಕಥೆಯಲ್ಲಿ ಅಜ್ಜ ಅಜ್ಜಿ ಹೇಳುವ ರಸವತ್ತಾದ ಕಥೆಗಳ ಸೊಗಸು, "ರಾಜಕುಮಾರಿ ಯಾಕೆ ಅಳುತ್ತಿದ್ದಾಳೆ " ಅನ್ನುವ ಪುಟ್ಟ ಕಥೆಯಲ್ಲಿ ದೇವರು ಯಾವತ್ತೂ ಎಲ್ಲ ಕಷ್ಟಗಳ ಸಂದರ್ಭದಲ್ಲೂ ಸಮಯಕ್ಕೆ ಒದಗುತ್ತಾನೆ, ದೇವರು ಇದ್ದಾನೆ ಅನ್ನುವ ಭರವಸೆಯನ್ನು ನೀಡುವ ಸಂದೇಶ, ಚಂದ್ರಮುಖಿ ಯಲ್ಲಿ ಪ್ರಾಣಿ ಪ್ರೀತಿ ಹಾಗೂ ಉನ್ನತವಾದುದನ್ನು ಸಾಧಿಸುವ ಆಕಾಂಕ್ಷೆಗಳು ಅಡಗಿವೆ.
ಸುರಭಿ- ಈ ಹುಡುಗಿಯ ಕಾಲ್ಪನಿಕ ಜಗತ್ತು ಬಹಳ ವಿಶಾಲ ಹಾಗೂ ಸುಂದರವಾಗಿದೆ. ಕೃಷ್ಣ, ಅವನ ತಲೆಯಲ್ಲಿರುವ ನವಿಲುಗರಿ, ಅವನು ಊದುವ ಕೊಳಲು- ಇವೆಲ್ಲವೂ ಇಂದಿಗೂ ಕಿರಿಯರಿಂದ ಹಿಡಿದು ಹಿರಿಯರವರೆಗೂ ಸೆಳೆಯುವ ಅಂಶಗಳು. ಕೃಷ್ಣನಿಗೆ ಕೊಳಲು ಹೇಗೆ ಸಿಕ್ಕಿತು ಅನ್ನುವ ಕುರಿತಾದ ಒಂದು ಸುಂದರ ಕಥೆ. ಈ ಪುಟ್ಟ ಮನಸ್ಸು ಸೃಷ್ಟಿಸುವ ಬಣ್ಣ ಬಣ್ಣದ ಕನಸಿನ ಜಗತ್ತು, ಮುಗ್ಧ ಪ್ರಪಂಚಕ್ಕೆ ಖಂಡಿತಾ ಓದುಗರ ಮನಸ್ಸು (ಅದು ಹಿರಿಯರು ಇರಲಿ ಪುಟಾಣಿಗಳು ಇರಲಿ ) ಸೆಳೆಯಲ್ಪಡುತ್ತದೆ.
"ಗೂಡುದೀಪದಲ್ಲಿ ಪುಟ್ಟ ಹಕ್ಕಿ ಮರಿ" ಕಥೆಯಲ್ಲಿ ಪುಟ್ಟ ಮನಸ್ಸಿನ ಪ್ರಬುದ್ಧ ಆಲೋಚನೆಗಳು ಎದ್ದು ಕಾಣುತ್ತವೆ. ಅಂತಃಕರಣ ತುಂಬಿದ ಆಂತರ್ಯ ವ್ಯಕ್ತವಾಗಿದೆ.
"ನಾನು ಹಕ್ಕಿಯನ್ನು ಸಾಕಿದ್ದು" - ಈ ಕಥೆಯನ್ನು ಓದುವಾಗ ನಮ್ಮ ಮನೆಯಲ್ಲೂ ನಡೆದ ಒಂದು ಘಟನೆಗೂ ಈ ಕಥೆಯಲ್ಲಿ ಉಲ್ಲೇಖಿಸಲ್ಪಟ್ಟ ಘಟನೆಗೂ ಸಾಮ್ಯವಿದೆ, ಹಾಗೂ ಸತ್ಯವಿದೆ ಅನ್ನಿಸಿತು. ಈ ಕಥೆಯಲ್ಲಿ ನಡೆದಂತೆಯೇ ನಮ್ಮ ಮನೆಯಲ್ಲೂ ಒಂದು ಹಕ್ಕಿ ಮೊಟ್ಟೆ ಇಟ್ಟು ಸ್ವಲ್ಪ ಸಮಯದ ನಂತರ ಆ ಮೊಟ್ಟೆಗಳು ಒಡೆದು ಮೂರು ಮರಿಗಳು ಹೊರ ಬಂದಿದ್ದುವು. ಒಂದು ದಿನ ಆ ಮರಿಗಳ ಅಮ್ಮನನ್ನು ಒಂದು ಬೆಕ್ಕು ಹಿಡಿದು ಕೊಂದು ತಿಂದಿತು. ತೀರಾ ಪುಟ್ಟ ಮರಿಗಳು . ಅವುಗಳನ್ನು ಹೇಗೆ ರಕ್ಷಿಸುವುದು ಎಂದು ನಮಗೆ ತೋಚಲೇ ಇಲ್ಲ. ಮರಿಗಳು ಹಸಿವಿನಿಂದ ಬಹಳ ಕಲರವ ಮಾಡುತ್ತಿದ್ದವು. ಇದನ್ನು ದೂರದಲ್ಲಿ ಕುಳಿತು ಒಂದು ಹಕ್ಕಿ ನೋಡುತ್ತಿತ್ತು. ಈ ಮರಿಗಳ ಕಲರವ ಹೆಚ್ಚಾದಂತೆ ಸ್ವಲ್ಪ ಸಮಯದ ಬಳಿಕ ಆ ಹಕ್ಕಿ ಎಲ್ಲೋ ಹಾರಿ ಹೋಗಿ ಮತ್ತೆ ಮರಳಿ ಮರಿಗಳಿದ್ದ ಗೂಡಿನ ಬಳಿ ಬಂದು ಅವುಗಳಿಗೆ ಆಹಾರವನ್ನು ತಿನ್ನತೊಡಗಿತು. ನಮ್ಮ ಪಾಲಿಗಿದು ಒಂದು ಆಶ್ಚರ್ಯದ ವಿಚಾರವೇ, ಬೇರೆ ಹಕ್ಕಿ ಬಂದು ತನ್ನದಲ್ಲದ ಮರಿಗಳಿಗೆ ಆಹಾರ ಉಣ್ಣಿಸುತ್ತದೆ ಎಂದರೆ ಅದ್ಭುತವಲ್ಲದೆ ಇನ್ನೇನು ? ... ನಾವು ಮನುಷ್ಯರು ಅದೆಷ್ಟೊಂದು ಸ್ವಾರ್ಥಿಗಳು ಅನ್ನಿಸಿತು ಆ ಕ್ಷಣ. ಇದು ಸುರಭಿ ಬರೆದ ಕಥೆಯನ್ನು ಓದುವಾಗ ನೆನಪಾದ ಕತೆ .ಈ ಕಥೆಯ ಅಂತ್ಯ ಸುಖಕರವಾಗಿದೆ .ಆದರೆ ನಾನು ನೋಡಿದ ಘಟನೆ ಆ ಮರಿಗಳನ್ನು ಕಿಡಿಗೇಡಿ ಬೆಕ್ಕು ತಿಂದು ಮುಗಿಸುವ ದುರ್ಘಟನೆ ಯೊಂದಿಗೆ ಕೊನೆಗೊಳ್ಳುತ್ತದೆ, ಇದು ನೋವಿನ ವಿಚಾರ .
ಸುಧೀರ್ ರಾವ್ ಕೊಡವೂರು ಕಲಾಕ್ಷೇತ್ರದ ಒಬ್ಬ ಮಹಾನ್ ಸಾಧಕ . ಇವರು ಮಾಡಿರುವ ಸಾಧನೆಗಳು ಒಂದೆರಡಲ್ಲ ನೃತ್ಯ, ಸಂಗೀತ ಭಾಗವತಿಕೆ ಹೀಗೆ ಹಲವಾರು . ಅವರ ಮಗಳಾದ ಸುರಭಿ ತನ್ನ ಅಪ್ಪನ ಕಲಾಕ್ಷೇತ್ರದಲ್ಲಿ ಆರಂಭದಲ್ಲಿ ಮಾಡಿದ ಸಾಧನೆಯನ್ನು ಕಥೆಯಾಗಿಸಿ ಉಲ್ಲೇಖಿಸಿದ ರೀತಿ ಈ ಹುಡುಗಿಯ ಸಾಮರ್ಥ್ಯವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಈ ಕಥೆಯನ್ನು ಓದಿಯೇ ಸವಿಯಬೇಕು.
ಪುಟ್ಟ ಲೇಖಕಿ ಸುರಭಿಯ ಊರು ಕೊಡವೂರು. ಅಲ್ಲೊಂದು ತಕ್ಕಮಟ್ಟಿಗೆ ಪ್ರಸಿದ್ಧ ದೇವಾಲಯವಿದೆ. ಅದರ ಕುರಿತಾಗಿ, ತನ್ನೂರಿನ ಕುರಿತಾಗಿ ಹಾಗೂ ಆ ಊರಿನಲ್ಲಿ ನೆಲೆಸಿದ್ದ ಓರ್ವ ಕವಿಯ ಕುರಿತಾದ ತಾನು ಕೇಳಿ ಅರಿತ ಕಥೆಯನ್ನು ಇಲ್ಲಿ ಉಲ್ಲೇಖಿಸಿದ್ದಾಳೆ ಹುಡುಗಿ. ಈ ಮೂಲಕ ಆ ಊರಿನ ಹಿನ್ನೆಲೆಯನ್ನು ಓದುಗರು ಅರಿಯುವ ಒಂದು ಅವಕಾಶ. ಕೊಡವೂರು ನನಗೂ ನನ್ನ ಸಂಬಂಧಿಕರು ಅಲ್ಲಿ ಇರುವ ಕಾರಣ ಚಿರಪರಿಚಿತವೇ ಆದರೆ ಆ ಊರಿನಲ್ಲಿ ಅರುಣಾಬ್ಜ ಎಂಬ ಕವಿ ಇದ್ದರು ಅನ್ನುವುದು ಅಪರಿಚಿತ ಸಂಗತಿ.
ಹಾರುವ ಪ್ರಾಣಿಗಾಗಿ ಹುಡುಕಾಟ - ಹೀಗೊಂದು ಕಥೆ . ಈ ಕಥೆಯಲ್ಲಿ ಉಡುಪಿಯಲ್ಲಿರುವ ಎಲ್ಲಾ ದೇವಾಲಯಗಳ ಪರಿಚಯ ಹಾಗೂ ಇತಿಹಾಸ ಪ್ರಸಿದ್ಧ ಬಾರಕೂರಿನಲ್ಲಿ ರುವ ಬಸದಿಗಳ ಸ್ಥೂಲ ಪರಿಚಯ ಅಡಗಿದೆ. ಮೊದಲಿನಿಂದಲೂ ಅದೇಕೋ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಬಾರಕೂರು ಎಂದರೆ ಅದೇನೋ ಸೆಳೆತ.
7-8 ವರ್ಷ ಪ್ರಾಯದ ಪುಟ್ಟ ಹುಡುಗಿ ಕಥೆ ಬರೆದಿದ್ದಾಳೆ ಅನ್ನುವಾಗ ಏನೋ ಕುತೂಹಲ. ಆ ಕುತೂಹಲವೇ ನನ್ನನ್ನು ಮೊಬೈಲ್ ಮೈಥಿಲಿಯ ಕಥೆಗಳನ್ನು ಓದಿಸಿಕೊಂಡು ಹೋಯಿತು. ಓದಿ ಮುಗಿಸುವ ಹೊತ್ತಿಗೆ ಆ ಮಗುವಿನ ಟ್ಯಾಲೆಂಟ್, ಸಾಧನೆ, ಸಾಮರ್ಥ್ಯದ ಮೇಲೆ ಬಹಳ ಅಭಿಮಾನ, ಪ್ರೀತಿ ಮೂಡಲಾರಂಭಿಸಿತು. ಕಲೆ, ಸಾಹಿತ್ಯ ಬರಹ ಯಾರ ಸ್ವತ್ತೂ ಅಲ್ಲ. ಆದರೂ ಸಣ್ಣ ವಯಸ್ಸಿನಲ್ಲೇ ಈ ಮಗು ಮಾಡಿರುವ ಸಾಧನೆ ಶ್ಲಾಘನೀಯ ಹಾಗೂ ಅಭಿನಂದನಾರ್ಹ. ಈ ಕಥೆಗಳನ್ನು ಓದುವಾಗ ಸುರಭಿ ಮುಂದೆಯೂ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತವೆ . ಮನದಾಳದ ಹಾರೈಕೆಯೂ ಕೂಡ ಇದುವೇ ಈ ಮಗು ಇನ್ನಷ್ಟು ಉನ್ನತ ಸಾಧನೆ ಮಾಡಲಿ ಅನ್ನುವುದು. ಓದುವ ಹವ್ಯಾಸವಿರುವ ಮಕ್ಕಳಿಗೆ ಓದಿಗೆ ಇದೊಂದು ಒಳ್ಳೆಯ ಸಾಹಿತ್ಯ, ಪುಸ್ತಕ .
- ನಯನ ಬಜಕೂಡ್ಲು
No comments:
Post a Comment