stat Counter



Thursday, July 2, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎ. ಎನ್. ಮೂರ್ತಿರಾಯರ ವೈಚಾರಿಕ ಪ್ರಶ್ನೆಗಳು.

ಎ.ಎನ್.  ಮೂರ್ತಿರಾವ್(ಜನನ-೧೯೦೦) ಅವರು ಕನ್ನಡದ ಹಿರಿಯ ಗದ್ಯ ಲೇಖಕರಲ್ಲೊಬ್ಬರು. ಲಲಿತ ಪ್ರಬಂಧ, ವ್ಯಕ್ತಿ ಚಿತ್ರ, ಪತ್ರ ಸಾಹಿತ್ಯ, ಪ್ರವಾಸ ಕಥನ, ಸಾಹಿತ್ಯ ವಿಮರ್ಶೆ, ಆತ್ಮಕತೆ, ರೂಪಾಂತರ- ಭಾಷಾಂತರ-ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಮೌಲಿಕ ಕೃತಿಗಳನ್ನು ಬರೆದಿರುವ ಮೂರ್ತಿರಾಯರು ತನ್ನ ವೈಚಾರಿಕ ನಿಲುವಿನಿಂದ ಗಮನ ಸೆಳೆಯುತ್ತಾರೆ. ’ಚಿತ್ರಗಳು- ಪತ್ರಗಳು’ ಪೂರ್ವ  ದೂರಿಗಳೊಡನೆ’ ಮತ್ತು ’ಸಂಜೆಗಣ್ಣಿನ ಹಿನ್ನೋಟ’ ಇವು ಅವರ ಮುಖ್ಯ ಕೃತಿಗಳು.

’ಜನತಾ ಜನಾರ್ಧನ’ದಲ್ಲಿ ಮೂರ್ತಿರಾಯರ ಹದಿನೆಂಟು ಲೇಖನಗಳಿವೆ. ಇವುಗಳನ್ನು ವ್ಯಕ್ತಿ ಚಿತ್ರಗಳು ಮತ್ತು ವೈಚಾರಿಕ ಲೇಖನಗಳು ಎಂದು ವಿಭಾಗಿಸಬಹುದು. ಸಂಪಾದಕರು   ಈ ಲೇಖನಗಳ ಮೊದಲ ಮುದ್ರಣದ ಇಸವಿಗಳನ್ನು ತಿಳಿಸಿಲ್ಲ. ಡ್.ವಿ.ಜಿ. ಮತ್ತು ಮಾಸ್ತಿಯವರನ್ನು ಕುರಿತ ಎರಡೆರಡು ಲೇಖನಗಳು, ಬಿ.ಎಂ.ಶ್ರೀ.,   ಗಾಂಧೀಜಿ ಮತ್ತು ರಾಧಾಕೃಷ್ಣನ್ ರನ್ನು ಕುರಿತ ಒಂದೊಂದು ಲೇಖನಗಳು ಈ ಪುಸ್ತಕದಲ್ಲಿವೆ.
ಮೂರ್ತಿರಾಯರು ಬರೆದಿರುವ ಹೆಚ್ಚಿನ ವ್ಯಕ್ತಿ ಚಿತ್ರ ಲೇಖನಗಳು ಖಾಸಗಿ ನೆನಪುಗಳ ರೀತಿಯಲ್ಲಿವೆ. ಡಿ.ವಿ.ಜಿ., ಮಾಸ್ತಿ ಮತ್ತು ರಾಧಾಕೃಷ್ಣ ನ್ ರನ್ನು ತಾನು ವೈಯಕ್ತಿಕವಾಗಿ ಭೇಟಿಯಾದಾಗ  ನಡೆಸಿದ ಮಾತುಕತೆಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಮೂರ್ತಿರಾಯರ ವ್ಯಕ್ತಿ ಚಿತ್ರಗಳಲ್ಲಿ ವ್ಯಕ್ತಿ ಪೂಜೆ ಮುಖ್ಯವಲ್ಲ, ವ್ಯಕ್ತಿ ವಿಚಾರ ಚಿಂತನೆ ಮುಖ್ಯ. "ಗುಂಡಪ್ಪನವರದ್ದು ಗಟ್ಟಿ ಗಡತವಾದ ಸ್ವಭಾವ, ಯಾವುದಕ್ಕೂ ಹೆದರಿ ಹಿಂಜರಿಯು ವಂಥದಲ್ಲ" ಎನ್ನುವ ಮೂರ್ತಿರಾಯರು ಗುಂಡಪ್ಪನವರ (ಡಿ.ವಿ.ಜಿ.) ಮಡಿವಂತಿಕೆಯನ್ನು ಕುರಿತ ತನ್ನ ಭಿನ್ನಾಭಿಪ್ರಾಯವನ್ನು ಬರೆಯಲು ಹಿಂಜರಿಯುವುದಿಲ್ಲ. ಡಿ.ವಿ.ಜಿ. ಯವರು ತನ್ನ ;ಗೀತಾತಾತ್ಪರ್ಯ’ದಲ್ಲಿ "ಜಾತಿಗಳೂ ಅವುಗಳಲ್ಲಿ ಪಂಗಡಗಳೂ ಇರುವುದು ದೋಷವೆಂದೂ ಸಮಾಜಕ್ಕೆ ಅದರಿಂದ ಹಾನಿಯೆಂದೂ ಕೆಲವರು ವಾದಿಸುತ್ತಾರೆ. ಅದು ಭ್ರಾಂತಿಯ ವಾದ ಎಂಬುದರಲ್ಲಿ ನನಗೆ ಸಂದೇಹವಿಲ್ಲ" ಎಂದಿರುವುದರ ಕುರಿತು ಮೂರ್ತಿರಾಯರ ಟೀಕೆ ಹೀಗೆದೆ-"ಕೆಲವು ವೇಳೆ ಡಿ.ವಿ.ಜಿ.ಯವರಲ್ಲಿ ಸಾಂಪ್ರದಾಯಿಕ ನಂಬಿಕೆ ಮುಂದಾಗಿ ವೈಚಾರಿಕತೆ ಹಿಂದಾಗುತ್ತದೆ." ಗಾಂಧೀಜಿಯವರನ್ನು ಕುರಿತ ವ್ಯಕ್ತಿ ಚಿತ್ರ ನಮಗೂ ಗಾಂಧೀಜಿಗೂ ವ್ಯತ್ಯಾಸವೇನು ಎಂಬ ಸ್ವವಿಮರ್ಶೆಯ ಧಾಟಿಯಲ್ಲಿದೆ. ಶ್ರೀಮಂತರು ಬಡವರ ಟ್ರಸ್ಟಿಗಳಾಗಿರಬೇಕು. ಶ್ರ್ರೀಮಂತರ ಮನಸ್ಸು ಪರಿವರ್ತನೆಯಾಗುವವರೆಗೂ ನಾವು ಕಾಯ ಬೇಕು ಎನ್ನುವ ಗಾಂಧೀಜಿಯ ಅಭಿಪ್ರಾಯವನ್ನು ಮೂರ್ತಿರಾಯರು ಒಪ್ಪುವುದಿಲ್ಲ. ಅವರು ಹೇಳುವಂತೆ, "ದಾನಿ ನೀನು’ ’ದೀನ ನಾನು’ ಇವೆರಡೂ ಶಾಪಗ್ರಸ್ತ ಭಾವನೆಗಳೇ- ಗಾಂಧೀಜಿಯ ಟ್ರಸ್ಟೀ ವಾದವನ್ನು ಎತ್ತಿ ಹಿಡಿಯಲಾಗುವುದಿಲ್ಲ".
ಮೂರ್ತಿರಾಯರು ’ಉದಯವಾಣಿ’ಯ ವಿಶೇಷಾಂಕಕ್ಕಾಗಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ನೀಡಿದ ಸಂದರ್ಶೆನ ’ದೇವರು ಒಂದು ಸಂವಾದ’ ಎಂಬ ಶೀರ್ಷಿಕೆಯೊಡನೆ ಪ್ರಕಟವಾಗಿ ದೆ. ’ದೇವರ ನಿರಾಕರಣೆಗೆ ನಿಮಗಿರುವ ದೃಢ ಆಧಾರ ಯಾವುದು?’ ಎಂಬ ಪ್ರಶ್ನೆಗೆ ಮೂರ್ತಿರಾಯರು ಹೀಗೆ ಉತ್ತರಿಸುತ್ತಾರೆ-’ಲೋಕದಲ್ಲಿ  ಎಲ್ಲೆಂದರಲ್ಲಿ ಕಾಣುವ ಕೇಡು, ಸಂಕಟ, ಕೆಲವು ಮತಗಳು ಸದ್ಗುಣನಿಧಿಯಾದ ದೇವರೊಬ್ಬ ಇರುವಂತೆ ದುರ್ಗುಣಗಳ ಗಣೆಯಾದ ಒಂದು ಶಕ್ತಿಯೂ ಇದೆ ಎಂದು ನಂಬುತ್ತವೆ...ಎಲ್ಲ ಸೃಷ್ಟಿಗೂ ಕರ್ತನಾದವನು ದೇವರೊಬ್ಬನೇ ಎಂದ ಮೇಲೆ ಕೇಡೂ ದೇವರ ಸೃಷ್ಟಿ ಎಂದೇ ಆಯಿತು. ಸಕಲ ಕೇಡುಗಳ ತವರಾದ ಈ ಸೈತಾನನನ್ನು ದೇವರು ಯಾಕೆ ಸೃಷ್ಟಿಸಿದ? ಈ ಪ್ರಶ್ನೆಗೆ ಸಮರ್ಪಕವಾದ ಉತ್ತರವಿಲ್ಲ. ಕೇಡು ಇದೆ, ಆದ್ದರಿಂದ ದೇವರಿಲ್ಲ ಎನ್ನಬೇಕಾಗುತ್ತದೆ". ಮೂರ್ತಿರಾಯರ ವಿಚಾರಧಾರೆಗೂ ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ ದೇವರ ಅಸ್ತಿತ್ವವನ್ನು ಕುರಿತು ನಡೆದಿರುವ ಚರ್ಚೆಗೂ ಇರುವ ಸಂಬಂಧ ಸಾತತ್ಯಗಳನ್ನು ಗುರುತಿಸಬೇಕು.ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳದ ಮೂರ್ತಿರಾಯರ ಮನೋಧರ್ಮಕ್ಕೆ ’ಗುರುಪೀಠಗಳು ಮತ್ತು ಸಮಾಜ’ ಎಂಬ ಲೇಖನ ಒಳ್ಳೆಯ ಉದಾಹರಣೆ.
ಮೂರ್ತಿರಾಯರ ಪ್ರಕಾರ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರಿತ ನಮ್ಮ ಪ್ರತಿಕ್ರಿಯೆ ನಾಲ್ಕು ವಿಧದಲ್ಲಿ ಸಾಗಿತು-ಭಯ, ಆಕರ್ಷಣೆ, ಅನುಕೂಲ ಸಿಂಧುವಿನ ದೃಷ್ಟಿಯಿಂದ ಅದಕ್ಕೆ  ಸ್ವಾಗತ(ಅದರಿಂದಾಗಿ ಗುಲಾಮ ಮನೋವೃತ್ತಿ), ಮನೋವಿಕಾಸದ ದೃಷ್ಟಿಯಿಂದ ಸ್ವಾಗತ, ಈ ನಾಲುಕ್ ವಿಧದ ಪ್ರತಿಕ್ರಿಯೆಗಳನ್ನು ಅವರು ’ಪೂರ್ವ ಪಶ್ಚಿಮ’ಗಳ ಸಂಘರ್ಷ’ ಲೇಖನದಲ್ಲಿ ಗುರುತಿಸುತ್ತಾರೆ.

’ಭಗವದ್ಗೀತೆ’ಯಲ್ಲಿ ಕೃಷ್ಣ ಅರ್ಜುನನಿಗೆ, ’ ಇದರಲ್ಲಿ ಏನನ್ನೂ ಬಿಡದೆ ಎಲ್ಲವನ್ನೂ ಯೋಚಿಸಿ ನೋಡು, ಅನಂತರ ನಿನ್ನ ಇಚ್ಚೆಯಂತೆ ಮಾಡು" ಎನ್ನುತ್ತಾನೆ. ಕೃಷ್ಣ ಅರ್ಜುನನಿಗೆ ನೀಡಿದ ಸ್ವಾತಂತ್ರ್ಯ  ನಮ್ಮ ತತ್ವಜ್ಞಾನ ಪರಂಪರೆಯಲ್ಲಿ ಪ್ರಶ್ನಿಸುವ ಮನೋವೃತ್ತಿಗೆ  ಅವಕಾಶವಿದ್ದುದನ್ನು  ಸೂಚಿಸುತ್ತದೆ. ಪ್ರಶ್ನಿಸುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಷ್ಕರಿಸುವ ಮನೋಧರ್ಮ ವಿ.ಎನ್. ಮೂರ್ತಿರಾಯರಲ್ಲಿದೆ. ವ್ಯಕ್ತಿ ಸ್ತವನಕ್ಕಿಂತ ವಿಚಾರ ಮಂಥನಕ್ಕೆ ಒತ್ತು ನೀಡುವ ’ಜನತಾ ಜನಾರ್ದನ’ ಗಂಭೀರ ಚಿಂತನೆಯಲ್ಲಿ ಆಸಕ್ತರಾದವರೆಲ್ಲ ಓದಬೇಕಾದ ಪುಸ್ತಕ.
ಮುರಳೀಧರ ಉಪಾಧ್ಯ, ಹಿರಿಯಡಕ 
ಜನತಾ   ಜನಾರ್ಧನ
(ಲೇಖನಗಳ ಸಂಗ್ರಹ)
ಲೇ:ಎ.ಎನ್. ಮೂರ್ತಿ ರಾವ್
ಪ್ರ:ಮನೋಹರ ಗ್ರಂಥಮಾಲಾ,
ಲಕ್ಷ್ಮೀಭವನ, ಸುಭಾಸ ರಸ್ತೆ, 
ಧಾರವಾಡ-೫೮೦೦೦೧
ಮೊದಲ ಮುದ್ರಣ:೧೯೯೫, ಬೆಲೆ:ರೂ.೫೦.

No comments:

Post a Comment