stat Counter



Saturday, July 11, 2020

ಬನ್ನಂಜೆಯವರ ಲೇಖನಗಳು- ಮುರಳೀಧರ ಉಪಾಧ್ಯ ಹಿರಿಯಡಕ

ಬನ್ನಂಜೆಯವರು ಅನುವಾದಿಸಿದ ಬಾಣ ಭಟ್ಟರ ಕಾದಂಬರಿಗೆ ಮುನ್ನುಡಿ ಬರೆದ ಬೇಂದ್ರೆ, ಬನ್ನಂಜೆ ಗದ್ಯದ ಕುರಿತು, " ಇಲ್ಲಿ ಗದ್ಯವು ಚರ್ವಣಾನುಕೂಲವಾಗಿದೆ   ವಜ್ರದಂತಕ್ಕಾಗಿ ಹುಟ್ಟಿದ ಕಬ್ಬಿಣದ ಕಡಲೆ  ಇಲ್ಲಿಲ್ಲ. ಮಾತು ಕಬ್ಬಿನ ಗಣಿಕೆ. ಕಬ್ಬದ ತುಣುಕೆ" ಎಂದು ಕೊಂಡಾಡಿದ್ದಾರೆ. ನನ್ನ ಗುರು ಗಳಾಗಿದ್ದ ಪ್ರೋತಾಶಾ  ಬಲ್ಲಾಳರು ಬನ್ನಂಜೆಯವ ರನ್ನು ಕುರಿತು ನನ್ನ ಒಂದು ಲೇಖನದಲ್ಲಿ ಬೇಂದ್ರೆ ಬನ್ನಂಜೆ ಕುರಿತು ಆಡಿದ ಒಂದು  ಮಾತು ಬರೆದಿದ್ದಾರೆ-"ಬನ್ನಂಜೆ ಅಪೂರ್ವ  ವ್ಯಕ್ತಿ. ಆತನ ಮಹತ್ವ ಎಲ್ಲರಿಗೂ ತಿಳಿಯಬಾರದು. ಆತ ಒಟ್ಟು ಪೋಲಿ ಹುಡುಗನಂತೆ ಇರುತ್ತಾನಲ್ಲ ಅದೇ ನನಗೆ ಇಷ್ಟ", ಮಿತ್ರ ಡಿ.ಆರ್ .ನಾಗರಾಜ್ ರ. ಮಾತು ನೆನಪಾಗುತ್ತದೆ-"ನಾನು ಕನ್ನಡ ಎಂ.ಎ. ಕ್ಲಾಸಿಗೆ ಹೋಗಿ ಪಾಠ ಮಾಡುವಾಗ ಬನ್ನಂಜೆಯವರ  ಬಾಣ ಭಟ್ಟನ ಕಾದಂಬರಿಯ ಅಧ್ಯಾಯಗಳನ್ನು ಓದಿ ಹೇಳುತ್ತೇನೆ.

               ಬನ್ನಂಜೆಯವರ ಲೇಖನಗಳು ’ಬನ್ನಂಜೆ ಬರಹಗಳು ಸಂಪುಟ ೧, ೨, ೩ ರಲ್ಲಿ ಪ್ರಕಟವಾಗಿವೆ. ಬನ್ನಂಜೆಯವರು ’ಉದಯವಾಣಿಯಲ್ಲಿ ೨೫ ವರ್ಷ, ’ರಾಮಾನುಜ’ ಜಡಭರತ’ ಕಾವ್ಯನಾಮಗಳಲ್ಲಿ ೭೫೦ಕ್ಕಿಂತ ಹೆಚ್ಚು ಪುಸ್ತಕ ವಿಮರ್ಶೆಗಳನ್ನು ಬರೆದಿದ್ದಾರೆ. ಅವು ಪುಸ್ತಕರೂಪದಲ್ಲಿ ಪ್ರಕಟವಾಗಿಲ್ಲ, ಬನ್ನಂಜೆ ಯವರು ’ಉದಯವಾಣೆ’ ಯಲ್ಲಿ
"ಕಿಷ್ಕಿಂಧಾ ಕಾಂಡ" ದಲ್ಲಿ ಪಾ.ವೆಂ. ಆಚಾರ್ಯ ಹಾಸ್ಯ ಲೇಖನಗಳಲ್ಲಿರುವಂತೆ  ತೀಕ್ಣ ರಾಜಕೀಯ ವಿಡಂಬನೆ ಇದೆ. ’ಕಿಷ್ಕಿಂಧಾ ಕಾಂಡ’ ಪುಸ್ತಕ ರೂಪದಲ್ಲಿ ಪ್ರಕಟವಾಗಿಲ್ಲ.

ಪ್ರಕಟವಾಗಿರುವ, ಬನ್ನಂಜೆಯವರ ಲೇಖನ ಸಂಪುಟಗಳಲ್ಲಿ ಒಟ್ಟು ೭೫ ಲೇಖನಗಳಿವೆ. ಉಡುಪಿಯ ಕೊಡುಗೆ,  ಭಗವದ್ಗೀತೆ ದಾಸ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಆತ್ಮ ಕಥನ, ಕರಾವಳಿಯ ಕನ್ನಡ ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ- ಹೀಗೆ ವೈವಿಧ್ಯಪೂರ್ಣ ವಿಷಯಗಳನ್ನು ಕುರಿತು ಬನ್ನಂಜೆ ಬರೆದಿದ್ದಾರೆ.

    ಬನ್ನಂಜೆಯವರ ವೈಚಾರಿಕ ನೆಲೆಗಳು ಅವರ ಲೇಖನಗಳಲ್ಲಿ ಹೇಗೆ ಕಾಣಿಸುತ್ತವೆ  ಎನ್ನುವುದಕ್ಕೆ ಒಂದೆರಡು ಉದಾಹರಣೆಗಳು ಇಲ್ಲಿವೆ-

"ಬದುಕು ನನ್ನ ದೃಷ್ಟಿಯಲ್ಲಿ" ಎಂಬ ಲೇಖನದಲ್ಲಿ ಬನ್ನಂಜೆಯವರು "ಬದುಕು ಸಮಷ್ಟಿಗಾಗಿ ಇದೆ ಎನ್ನುವುದು ನಿಜ. ಆದರೆ ಅದಕ್ಕೆ ಸೃಷ್ಟಿಯ ವೈಯಕ್ತಿಕತೆಯ ಛಾವು ಇದೆ ಎನ್ನುವುದು ಅಷ್ಟು ನಿಜ ಪ್ರಾಚೀನರು ಹೇಳುತ್ತಾರೆ-ಬದುಕು ನಿಷ್ಕಾಮವಾಗಿರಬೇಕು, ನಿ:ಸ್ವಾರ್ಥವಾಗಿರಬೇಕು  ಇದು ಸಾಧ್ಯವೇ? ಆಸೆಯೆ ಇರದವನು ಬದುಕಿದ್ದಾನೆ ಎಂಬುದಕ್ಕಾದರೂ ಏನು ಸಾಕ್ಷಿ? ಕೊನೆಗೆ ಬದುಕುವಾಸೆಯಾದರೂ ಇರಬೇಕಲ್ಲ. ಮನುಷ್ಯನ ಬದುಕು ಎಂದರೆ ಬಯಕೆಗಳ ಸರಮಾಲೆ. ಮತ್ತೆ ನಿಷ್ಕಾಮ ಕರ್ಮ’ ಎಂದರೇನು? ನಿಸ್ವಾರ್ಥ ಸೇವೆ ಎಂದರೇನು? ನಿಷ್ಕಾಮ ಎಂದರೆ ಕಾಮನೆಗಳ ತ್ಯಾಗ ಅಲ್ಲ, ವಿಸ್ತಾರ ಎಲ್ಲರಿಗೂ ಒಳಿತಾಗಲಿ ಎನ್ನುವುದು  ನಿಷ್ಕಾಮ  ನನಗೆ ನನ್ನ ಹೆಂಡತಿ ಮಕ್ಕಳಿಗೆ  ಮಾತ್ರ ಎನ್ನುವುದು ಸಕಾಮ.ನನಗೆ ಸಂಪತ್ತು, ಮನೆಮಾತು, ಕಾರು ಬೇಕೆನ್ನುವುದೂ ತಪ್ಪಲ್ಲ . ನನಗೆ ಮಾತ್ರ ಬೇಕೆನ್ನುವುದು ತಪ್ಪು. ಅದು ಸ್ವಾರ್ಥ’  

ಭವಭೂತಿ ಸಾರ್ಥಕ ಬದುಕಿಗೆ ನೀಡಿದ ಸೂತ್ರ ಬನ್ನಂಜೆಯವರಿಗೆ ಇಷ್ಟ-’ಅದ್ವೈತಂ ಸುಖ ದು:ಖಯೋ; ’ "ಸುಖದಲ್ಲು ದು:ಖದಲ್ಲು , ಸಿರಿತನದಲ್ಲು ಬಡತನದಲ್ಲು ಹೊಂದಿ ಬಾಳುವ ಸಾಮರಸ್ಯ."

’ಆಯಿತೇ  ಅರುವತ್ತು’ ಎಂಬ ಲೇಖನದಲ್ಲಿ ಬನ್ನಂಜೆ ನನಗೆ "ಅಶಾಂತಿ ಇಲ್ಲವಲ್ಲ. ಅರುವತ್ತರ ಶಾಂತಿ ಯಾಕೆ?" ಎಂದು ಪ್ರಶ್ನಿಸುತ್ತ ಹೀಗೆ ಬರೆದಿದ್ದಾರೆ-"ಪ್ರಾಯ: ಅಶಾಂತಿಯೇ ಮುಪ್ಪಿನ ಮೂಲ ದ್ರವ್ಯ ದೇಹದ ವಯಸ್ಸು ನನಗೆ ಮುಖ್ಯವಲ್ಲ. ಮಾನಸಿಕವಾಗಿ ನನಗೆ ಮುಪ್ಪು ಬರಲಿಲ್ಲ. ನಾನಿನ್ನೂ ಯುವಕ. ನನ್ನ ಜೀವನದುದ್ದಕ್ಕೂ ನನ್ನ  ಸಂಗಾತಿಗಳಾಗಿ  ನನ್ನನ್ನು ಶಾಂತಿ ಪರ್ವದತ್ತ  ಒಯ್ದಂಥವು ನನ್ನ ಪುಸ್ತಕಗಳು. ಮುಖ್ಯವಾಗಿ ಉಪನಿಷತ್ತುಗಳು ಮತ್ತು ಮಹಾಭಾರತ. ನನ್ನ ಸಂಸಾರದ  ಮಂದಿ ನನ್ನನ್ನು ಮುಪ್ಪಿನತ್ತ ಎಳೆದರೆ, ಇವು ನನ್ನನ್ನು ಅನಂತ    ಯೌವನದತ್ತ  ಎಳೆಯುತ್ತಿವೆ. ಇದು ನನ್ನನೇ ತಪ್ಪಿರಬಹುದು. ನಾನು ಮನೆಯಲ್ಲಿ ಅತಿಥಿಯಂತೆ ಬದುಕಿದೆ. ನಾನು  ಅವರ ಮುಂದೆ ನನ್ನ ಎದೆಯನ್ನು ಬಿಟ್ಟಿಕೊಳ್ಳಲ್ಲಿಲ್ಲ. ನನ್ನ  ಒಳವನಿ ಅವರಿಗೆ ಕೇಳಿಸದಿರಲಿ ಎಂದು ನನ್ನೊಗಳಿಗೆ ನೋವು ಅವರನು ಕಂಗೆಡಿಸದಿರಲಿ ಎಂದು."
’ಧರ್ಮ ಮತ್ತು ಮುಖವಾಡ’ ಎಂಬ ಲೇಖನದಲ್ಲಿ ಬನ್ನಂಜೆಯವರು "ಧರ್ಮ’ ಎಂದರೆ ಸದ್ ಭಾವ ಮತ್ತು ಪ್ರಾಮಾಣಿಕತೆ ಎಂಬ ಮೂಲವ್ಯಾಖ್ಯೆಗೆ ನಾವು ಮತ್ತೆ ಮರಳಬೇಕು’ ಎನ್ನುತ್ತಾರೆ. ಅವರ ಪ್ರಕಾರ  ಎರಡು ವರ್ಗದ ಜನ ಬೆಳೆಯುತ್ತಿದ್ದಾರೆ. ಧಾರ್ಮಿಕತೆಯ ಸೋಗು ಹಾಕಿ, ಮುಖವಾಡದ ಬದುಕು ಬದುಕುತ್ತಿರುವ ’ ಧರ್ಮಧ್ವಜ’ ರದ್ದು ಒಂದು ವರ್ಗ ಇಂಥ ಅಪ್ರಾಮಾಣಿಕತೆಯೇ ಧರ್ಮದ ಮಾನದಂಡವಾದರೆ ನಮಗೆ ಈ ಧರ್ಮವೇ ಬೇಡ ಎನ್ನುವ ಕ್ರಾಂತಿವಾದಿಗಳದ್ದು ಇನ್ನೊಂದು ವರ್ಗ" ಮೊದಲ ವರ್ಗದ ಧರ್ಮ ಧ್ವಜರೇ ಎರಡನೆಯ ವರ್ಗದ ಹುಟ್ಟಿಗೆ ಕಾರಣಪುರುಷರು. ಧರ್ಮಕ್ಕೆ ನಿಜವಾದ ಅಪಾಯ ಇರುವುದು ’ಧರ್ಮ ಬೇಡ’ ಎನ್ನುವ ಕ್ರಾಂತಿ ವಾದಿಗಳಿಂದಲ್ಲ. ಧರ್ಮಧ್ವಜರಿಂದ ಮತ್ತು ಅದನ್ನು  ಸಮರ್ಥಿಸುವ ಧರ್ಮ ಸಂಸ್ಥೆಗಳಿಂದ  ಇದೇ ಧರ್ಮದ ದೊಡ್ಡ ದುರಂತ" ಎನ್ನುತ್ತಾರೆ ಬನ್ನಂಜೆ.

" ಧರ್ಮ ಶಾಸ್ತ್ರಗಳು, ಸ್ಮೃತಿ ಗ್ರಂಥಗಳು ಶಾಶ್ವತ  ಸತ್ಯಗಳಲ್ಲ" ಎಂಬ ಬನ್ನಂಜೆಯವರ ಮಾತನ್ನು ಗಮನಿಸಬೇಕು.-" ಧರ್ಮಶಾಸ್ತ್ರಗಳು, ಸ್ಮೃತಿ ಗ್ರಂಥಗಳು  ಶಾಶ್ವತ ಧರ್ಮದ ಚೌಕಟ್ಟಿ ನಲ್ಲಿ ಸಮಾಜ ಧರ್ಮವನ್ನು ಹೇಳುತ್ತೇವೆ. ಅವು ಆಯಾಕಾಲದ ಕಾನ್ ಸ್ಟಿಟ್ಯೂಶನ್ ಇದ್ದಂತೆ. ಆದ್ದರಿಂದಲೇ ಅವು  ಸಾರ್ವಜನಿಕ ಸತ್ಯಗಳಲ್ಲ, ಕಾಲ ಕಾಲಕ್ಕೆ ಧರ್ಮ ಶಾಸ್ತ್ರಗಳೂ ಬದಲಾಗಿವೆ. ಧರ್ಮಗಳೂ ಬದಲಾಗಿವೆ. ಧರ್ಮಶಾಸ್ತ್ರಗಳು, ಸ್ಮೃತಿ ಗ್ರಂಥಗಳು ಮನೆಯಿದ್ದಂತೆ. ನಮ್ಮ ರಕ್ಷಣೆಗೆಂದೇ ಇರುವಂಥವು.ಆದರೆ ಮನೆ  ಹಳತಾದಾಗ ಬದಲಾಯಿಸಬೇಕು. ಇಲ್ಲ, ನವೀಕರಣ ಮಾಡಬೇಕು. ತೀರ ಹಳತಾದಾಗ ಕೆಡವಿ ಹೊಸ ಮನೆ ಕಟ್ಟಬೇಕು. ಇಲ್ಲವಾದರೆ ರಕ್ಷೆಗಿದ್ದ ಮನೆಯೇ ತಲೆಯ ಮೇಲೆ ಕುಸಿದು ನಾಶಕ್ಕೆ ಕಾರಣವಾದೀತು."

"ಸೆಕ್ಸ್ ಮತ್ತು ಸಮಾಜ" ಎಂಬ ಲೇಖನದಲ್ಲಿ ಬನ್ನಂಜೆಯವರು ವೈದಿಕ ಸಾಹಿತ್ಯದ ಒಂದು ಮಾತಿನತ್ತ ನಮ್ಮ ಗಮನ ಸೆಳೆಯುತ್ತಾರೆ-" ನಾಹಂ ಕರ್ತಾ, ಕಾಮ: ಕರ್ತಾ ನಾಹಂ ಕಾರಯಿತಾ, ಕಾಮ: ಕಾರಯಿತಾ"-ಇದರ ಅರ್ಥ-"ನನ್ನ ಬದುಕಿನಲ್ಲಿ ಏನೆಲ್ಲ  ನಡೆಯಿತು ಅದನ್ನು ಮಾಡಿದ್ದು ನಾನಲ್ಲ-ಕಾಮ, ಮಾಡಿಸಿದವನೂ ನಾನಲ್ಲ, ಕಾಮನೇ,"

ಧಾರ್ಮಿಕ ಗ್ರಂಥಗಳ ತೌಲನಿಕ ಅಧ್ಯಯನದ ಒಳನೋಟಗಳು ಬನ್ನಂಜೆಯವರ ಮೊಸೆನ್ ಮತ್ತು ಉಪನಿಷತ್ತು’ ಎಂಬ ಲೇಖನದಲ್ಲಿದೆ. ಬೇಂದ್ರೆ ಕಾವ್ಯ ಮತ್ತು ಸುಮತೀಂದ್ರ ನಾಡಿಗರ ’ಪಂಚಭೂತಗಳು ಕಾವ್ಯವನ್ನು ಕುರಿತ ವಿಮರ್ಶೆಯಲ್ಲಿ ಬನ್ನಂಜೆಯವರ ಹೊಳಹುಗಳಿವೆ.

ನನಗೆ ತುಂಬ ಇಷ್ಟವಾದ ಬನ್ನಂಜೆಯವರ ವಿಮರ್ಶಾ ಕೃತಿ ವಾಲ್ಮೀಕಿ ಕಂಡ ರಾಮಾಯಣ’ ಎಂಬ ಕಿರು ಹೊತ್ತಗೆ. ವಾಲ್ಮೀಕಿಗೆ ಅನುಷ್ಟು ಪ್ ಛಂದಸ್ಸು ಎಷ್ಟು ಮುಖ್ಯವೋ ವೌನವೂ ಅಷ್ಟೇ ಇಷ್ಟ. ವಾಲ್ಮೀಕೀಯ ವೌನಕಾಂಡ, ಧ್ವನಿಕಾಂಡಗಳನ್ನು ಗುರುತಿಸಿರುವುದು ಬನ್ನಂಜೆಯವರ ಅಗ್ಗಳಿಕೆ. ದಶರಥ ತನ್ನ ಮೂವರು ಪುತ್ರಿಯರಿಗೆ ನಾಲ್ಕು ಪಾಲು ಮಾಡಿ ಪಾಯಸ ಹಂಚಿದ್ದನ್ನು ತಿಳಿಸುವ ವಾಲ್ಮೀಕಿಯ ಶ್ಲೋಕಗಳು ಧ್ವನಿಪೂರ್ಣವಾಗಿವೆ. ದಶರಥನ ಭಯ, ಮುಂದಾಲೋಚನೆಗಳು ಈ ಶ್ಲೋಕದಲ್ಲಿ ಅಡಗಿವೆ.ಚಂದ ಭಾರತದ ತ್ರಿತ್ರಮನಾಡಿ ಭಾನುಮತಿ ಸೋತ್ತೋಲೆ ಎಂಬ ಪದ್ಯದಂಥ ಈ ಧ್ವನಿ ಪೂರ್ಣ ಶ್ಲೋಕಗಳ ಅರ್ಥವನ್ನು ಅನಾವರಣ ಮಾಡುತ್ತ ಬನ್ನಂಜೆಯವರು," ವಾಲ್ಮೀಕಿ ತನ್ನ ವೌನದಲ್ಲಿ ಎಷ್ಟು ಅರ್ಥವನ್ನು ತುಂಬಬಲ್ಲ ಎನ್ನುವುದಕ್ಕೆ ಈ ಪ್ರಕರಣ ಒಮ್ದು ಶ್ರೇಷ್ಠ ಉದಾಹರ್ಣೆ" ಎಂದು ವಿವರಿಸುತ್ತಾರೆ.
ಬನ್ನಂಜೆಯವರಿಗೆ ’ ಕನ್ನಡಂಗಳಲ್ಲಿ ಆಸಕ್ತಿ ಇದೆ. ಆವೆಯ ಮಣ್ಣಿನ ಆಟದ ಬಂಡಿ’ಯ ಸೂತ್ರಧಾರ ಕುಂದಾಪುರ ಕನ್ನಡ ಮಾತನಾಡುತ್ತಾನೆ. " ಅಯ್ಯಯ್ಯೋ ಅಯ್ಯಯ್ಯೋ, ಈ ಹಾಳಾದ್ ಹಾಟ್ ಕುಣ್ತಾ ಕಟ್ಕಂಟ್ ಹಸಿದ್ ಹಸಿದ್ ಸಾಕಾಗಿ ನನ್ನ  ಮೈ ಕೈ ಎಲ ವೂ ಒ ಣ್ಕಟ್ ತಾವ್ರೇ ಬೀಜದಾಂಗೆ ಒಟ್ಟಿ ಬಡ ಆಯಿ ಹೋಯ್ತ್."

ಬನ್ನಂಜೆಯವರ ಕನ್ನಡ ಗದ್ಯದ ಸೊಗಸು ಅವರು ನನ್ನ ಭಾಷಾಂತರ ಕೃತಿಗಳಿಗೆ ನೀಡಿದ ಹೆಸರುಗಳಲ್ಲೆ ಗೊತ್ತಾಗುತ್ತದೆ-ಅಭಿಜ್ಞಾನ ಶಾಕುಂತಲ -ನೆನಪಾದಳು ಶಕುಂತಲೆ, ಉತ್ತರ ರಾಮ ಚರಿತ- ಮತ್ತೆ ರಾಮನ ಕತೆ, ಮೃಚ್ಷಕಟಿಕ-" ಆಮೆಯ ಮಣ್ಣಿನ ಆಟದ ಬಂಡಿ, ವಿಷ್ಣು ಸಹಸ್ರನಾಮ-ದ್ರೆವರ ಸಾವಿರ ಹೆಸರಿನ ಹಾಡು."

ಬನ್ನಂಜೆಯವರು ಸೃಷ್ಟಿಸಿರುವ ಹಲವು ಶಬ್ದಗಳಿವೆ. ಒಂದೆರಡು  ಉದಾಹರಣೆ- ’ದ್ವಿಜೋತ್ತಮ" (ದ್ರೋಣ) -’ಹೆಬ್ಬಾರುವ’ ’ ಕೀಳು ಹಿರಿಮೆ’-

ತನ್ನ ಮಿತಿಯನ್ನು ಮೀರಿದ ದೈವದ ಮಹಿಮೆಯನ್ನು ಕಂಡಾಗ ಉಂಟಾಗುವ ರೋಮಾಂಚ) ಬನ್ನಂಜೆಯವರ ಪತ್ತ್ ರೂಪೊಡು ಜತ್ತಿನಾಯೆ ಎಂಬ ತುಳು ಕವನದ ಸಾಲು ಇದು- "ಏರಾಯೆ ಏರಾಯೆ, ಏರಾಯೆ ಗೊತ್ತಾ, ಮಾರಾಯೆ ಪಂಜುರ್ಲಿ ದೇವೆರತ್ತಾ". ವರಾಹ ಇಲ್ಲಿ ’ ಪಂಜುರ್ಲಿ’ ಆಗಿದ್ದಾನೆ.

ಬನ್ನಂಜೆ  ಗೋವಿಂದಾಚಾರ್ಯರ  ಕನ್ನಡ ಗದ್ಯ ಸತ್ಯ ಶ್ಯಾಮರ  ಗದ್ಯವನ್ನು ನೆನಪಿಸುವ ಗದ್ಯ . ಆದರೆ  ಸತ್ಯ ಶ್ಯಾಮದ ಗದ್ಯದಲ್ಲಿರುವ ಬೆಡಗು (ಅವಿಶದತೆ) ಬನ್ನಂಜೆ ಗದ್ಯದಲ್ಲಿಲ್ಲ. ಬನ್ನಂಜೆ ಗದ್ಯ ವಾಗಾಡಂಬರದ  ವಾಚಸ್ಪತಿ ಗದ್ಯವಲ್ಲ. ಅವರ ಗದ್ಯ ದೇಸಿಯ ಬನಿ ಇರುವ ಕಾವ್ಯ ಸ್ಪರ್ಶದ ಗದ್ಯ. ’ಅವಚನೀಯ  ಬೇರೆನೊ ಇಹುದು’ ಎಂದು ಸೂಚಿಸುವ ಗದ್ಯ . ಸಂಸ್ಕೃತದ ಕೊಡೆಯಡಿ ಯಲ್ಲಿ ನಡೆಯವ ಸ್ವಾಭಿಮಾನಿ ಕನ್ನಡ ಗದ್ಯ. ಮುದ್ದಣನ ಉಡುಪಿಯಲ್ಲಿ ಸಂಸ್ಕೃತದ ದೀವಟಿಗೆಯ ಬೆಳಕಿನಲ್ಲಿ ಸಾಗಿದ ಬನ್ನಂಜೆ, "ಕರಿಮಣಿ ಸರದಲ್ಲಿ ಕೆಂಪು ಹವಳ" ವನ್ನು ಪೋಣಿಸುವ ಮುದ್ದಣನ ಗದ್ಯ ಮಾರ್ಗವನ್ನು ನವೀಕರಿಸುತ್ತ ಮುನ್ನಡೆದಿದ್ದಾರೆ.

(೨೦-೧೨-೨೦೧೫ ರಂದು ಬೆಂಗಳೂರಿನಲ್ಲಿ ನಡೆದ  ಬನ್ನಂಜೆ ೮೦ ವಿಚಾರಗೋಷ್ಟಿಯಲ್ಲಿ ಮಾಡಿದ ಭಾಷಣದ ಸಾರಾಂಶ.)

ಪ್ರೋ ಮುರಳೀಧರ ಉಪಾಧ್ಯ
’ಸಖೀಗೀತ’
ಎಂ.ಐ.ಜಿ-೧(ಎಚ್)
ದೊಡ್ಡನಗುಡ್ಡೆ, ಉಡುಪಿ -೫೭೬೧೦೨
ಮೊಬೈಲ್-೯೪೪೮೨೧೫೭೭೯.
ಬ್ಲಾಗ್-mupadhyahiri.blogspot.in



No comments:

Post a Comment