stat Counter



Tuesday, September 28, 2010

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ(ಜೀವನ-ಸಾಧನೆಗಳ ಸಮೂಹ ಶೋಧ) VISHWESHATEERTHA SWAMIJI (Life and Achievements of Pejavara Swamiji

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ
(ಜೀವನ-ಸಾಧನೆಗಳ ಸಮೂಹ ಶೋಧ)
'ಪೇಜಾವರ ಪ್ರಶಸ್ತ್ತಿ' ಗ್ರಂಥದ ಸಂಪಾದಕೀಯ
ಶ್ರೀ ವಿಶ್ವೇಶತೀರ್ಥರು ಪೇಜಾವರ ಸ್ವಾಮಿಗಳೆಂದೇ ಪ್ರಸಿದ್ಧರು. ಶ್ರೀ ವಿಶ್ವೇಶತೀರ್ಥರ ಜೀವನ-ಸಾಧನೆಗಳ ಅಧ್ಯಯನ, ಸಮೀಕ್ಷೆ ಈ ಗ್ರಂಥದ ಉದ್ದೇಶ. ಈ ಗ್ರಂಥದ ಯೋಜನೆ ನಾವು ಸಿದ್ಧಪಡಿಸಿದ ರೂಪುರೇಷೆ ಸ್ಥೂಲವಾಗಿ ಹೀಗಿತ್ತು: (1) ಶ್ರೀ ವಿಶ್ವೇಶತೀರ್ಥರ ಸುದೀರ್ಘ ಸಂದರ್ಶನವೊಂದನ್ನು ದಾಖಲಿಸುವುದು, ಚಿಕ್ಕ ಆತ್ಮಕಥನವೊಂದನ್ನು ಬರೆಯುವಂತೆ ಅವರನ್ನು ವಿನಂತಿಸುವುದು. (2) ಶ್ರೀ ವಿಶ್ವೇಶತೀರ್ಥರು ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಶ್ರೀ ಮಧ್ವಾಚಾರ್ಯರ 'ತತ್ತ್ವವಾದ'ವನ್ನು ಕುರಿತು ಬರೆದಿರುವ ಕೆಲವು ಲೇಖನಗಳನ್ನು ಸಂಕಲಿಸುವುದು. (3) ಶ್ರೀ ವಿಶ್ವೇಶತೀರ್ಥರ ಈ ವರೆಗಿನ ಮೂರು ಪರ್ಯಾಯಗಳ ಸಾಧನೆಯನ್ನು ದಾಖಲಿಸುವುದು. (4) ಶ್ರೀ ವಿಶ್ವೇಶತೀರ್ಥರ ವ್ಯಕ್ತಿತ್ವ, ಸಾಮಾಜಿಕ-ರಾಜಕೀಯ ನಿಲುವುಗಳನ್ನು ಕುರಿತು ಈಗಾಗಲೇ ವಿವಿಧ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಕೆಲವು ಅಸಾಧಾರಣ ಲೇಖನಗಳನ್ನು ಆಯ್ಕೆಮಾಡುವುದು. (5) ಶ್ರೀ ವಿಶ್ವೇಶತೀರ್ಥರ ಜೀವನ ಸಾಧನೆಗಳನ್ನು ಕುರಿತು ತಜ್ಞರಿಂದ ಕೆಲವು ಲೇಖನಗಳನ್ನು ಬರೆಸುವುದು. (6) ಶ್ರೀ ವಿಶ್ವೇಶತೀರ್ಥರು ನೀಡಿರುವ ಕೆಲವು ಮಹತ್ವದ ಸಂದರ್ಶನಗಳನ್ನು ಸಂಕಲಿಸುವುದು. (7) ಶ್ರೀ ವಿಶ್ವೇಶತೀರ್ಥರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆಗಳ ಮಾಹಿತಿ ಸಂಗ್ರಹಿಸಿ, ಅವುಗಳನ್ನು ಪರಿಚಯಿಸುವುದು. (8) ಶ್ರೀ ವಿಶ್ವೇಶತೀರ್ಥರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸುವ ಛಾಯಾಚಿತ್ರಗಳನ್ನು ಸಂಕಲಿಸುವುದು. ಸಂಸ್ಥೆಗಳ ಮಾಹಿತಿ ಸಂಗ್ರಹದ ಕೆಲಸ ನಮಗಿದ್ದ ಕಾಲಮಿತಿಯಿಂದಾಗಿ ಅಪೂರ್ಣವಾಗಿದೆ. ನಮ್ಮ ಇತರ ಉದ್ದೇಶಗಳು ಈಡೇರಿವೆ ಎಂಬ ತೃಪ್ತಿ ನಮಗಿದೆ.
ಹಿನ್ನೆಲೆ 'ಪೇಜಾವರ ಪ್ರಶಸ್ತಿ'ಯ ಮೊದಲ ಭಾಗದಲ್ಲಿ ಉಡುಪಿಯ ಅಷ್ಟಮಠಗಳು ಹಾಗೂ ಪೇಜಾವರ ಮಠವನ್ನು ಕುರಿತು ಆರು ಲೇಖನಗಳಿವೆ. ಕಡಿಯಾಳಿ ವಾದಿರಾಜ ಉಪಾಧ್ಯಾಯರ 'ಅಷ್ಟಮಠದ ಹೆಸರಾಂತ ಯತಿಗಳು' ಹಾಗೂ ಮೆಕೆಂಝಿಯ ಸಂಪುಟದ 'ಪೇಜಾವರ ಮಠದ ಕೈಫಿಯತ್ತು' ಕುತೂಹಲಕಾರಿ ಸಂಗತಿಗಳನ್ನು ತಿಳಿಸುತ್ತವೆ. ಪೇಜಾವರ ಮಠದ ಯತಿಗಳು ಉಡುಪಿಯ ಗಡಿದಾಟಿ, ದೇಶದ ಉದ್ದಗಲದಲ್ಲಿ ಸಂಚಾರ ಮಾಡುತ್ತಿದ್ದರೆಂಬುವುದನ್ನು ಕೈಫಿಯತ್ತು ದೃಢೀಕರಿಸುತ್ತದೆ. ಬನ್ನಂಜೆ ಗೋವಿಂದಾಚಾರ್ಯರ 'ಆಧ್ಯಾತ್ಮಿಕ ಪ್ರಪಂಚಕ್ಕೆ ಉಡುಪಿಯ ಕೊಡುಗೆ' ಹಾಗೂ 'ಪೇಜಾವರ ಮಠದ ಗುರುಪರಂಪರೆ, ಒಂದು ಹೊಸ ಬೆಳಕು' ಈ ವಿಭಾಗದ ಮುಖ್ಯ ಲೇಖನಗಳು. ಪೇಜಾವರ ಮಠ ಆರ್ಥಿಕವಾಗಿ ದುರ್ಬಲವಾಗಿದ್ದ ಉಡುಪಿ ಮಠಗಳಲ್ಲೊಂದಾಗಿತ್ತು. ಎಸ್.ಯು. ಪಣಿಯಾಡಿಯವರ ಸಪ್ಲೈ ಏಜೆನ್ಸಿ (ಲಿ.) 1938ರಲ್ಲಿ ಉಡುಪಿ 'ಪರ್ಯಾಯಂ ಸೊವೆನಿರ್'ನ್ನು ಪ್ರಕಟಿಸಿತ್ತು. ಕತೆಗಾರ ಕೊರಡ್ಕಲ್ ಶ್ರೀನಿವಾಸರಾಯರು ಇದರ ಸಂಪಾದಕರಾಗಿದ್ದರು. ಈ ಸ್ಮರಣ ಸಂಚಿಕೆಯ ಮುಖಪುಟದಲ್ಲಿ ಪೇಜಾವರ ಮಠದ ನೂರು ರೂಪಾಯಿ ಬೆಲೆಯ ಪರ್ಯಾಯ ಪ್ರಾಮಿಸರಿ ನೋಟು'ಗಳನ್ನು ಕೊಳ್ಳಿರಿ ಎಂದು ವಿನಂತಿಸುವ ಜಾಹೀರಾತು ಪ್ರಕಟವಾಗಿದೆ.
'ಕೊಟ್ಟ ಕುದುರೆಯನೇರಿ ಗಡಿದಾಟಿದವರು'
ಎಂ. ನಾರಾಯಣಾಚಾರ್ಯ-ಕಮಲಮ್ಮ ಈ ದಂಪತಿಗಳ ಮಗನಾಗಿ, ಪ್ರಜಾಪತಿ ಸಂದ ವೈಶಾಖ ಶುದ್ಧ ಪಂಚಮಿಯಂದು ಸೋಮವಾರ (27-4-1931), ಸುಬ್ರಹ್ಮಣ್ಯ ಸಮೀಪದ ರಾಮಕುಂಜದಲ್ಲಿ ಜನನ, ಬಹುಧಾನ್ಯ ಸಂರದ ಮಾರ್ಗಶಿರ ಶುದ್ಧ ಪಂಚಮಿ, ಶುಕ್ರವಾರ (3-12-1938) ಪೇಜಾವರ ಮಠದ ಶ್ರೀ ವಿಶ್ವಮಾನ್ಯತೀರ್ಥರಿಂದ ಸನ್ಯಾಸದೀಕ್ಷೆ ಪಡೆದು ಶ್ರೀ ವಿಶ್ವೇಶತೀರ್ಥರಾದದ್ದು, bಆರ್ಕೂರಿನ ಭಂಡಾರಕೇರಿ ಮಠದಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರ ಶಿಷ್ಯರಾಗಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ, ನಿತ್ಯೋತ್ಸವ ಎಂಬಂತೆ ನಡೆಸಿದ ಮೂರು pಅರ್ಯಾಯಗಳು : 1952-54; 1968-1970; 1984-86; 1935ರಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಸ್ಥಾಪನೆ; 'ಗೀತಾಸಾರೋದ್ಧಾರ' ಕೃತಿ ರಚನೆ (1969), ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯತೀರ್ಥರನ್ನು ಪಲಿಮಾರು ಮಠದ ಅಧಿಪತಿಗಳಾಗಿ (1969) ನೇಮಿಸುವಲ್ಲಿ ಮಹತ್ವದ ಪಾತ್ರ; ಬನ್ನಂಜೆ ಗೋವಿಂದಾಚಾರ್ಯರು ಸಂಪಾದಿಸಿದ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಪ್ರಕಟಣೆಗೆ ಪ್ರೋತ್ಸಾಹ; ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ (1956), ಪಾಜಕ ಪ್ರತಿಷ್ಠಾನದ ಸ್ಥಾಪನೆ (1980), ಆನಂದತೀರ್ಥ ಪ್ರತಿಷ್ಠಾನದ ಸ್ಥಾಪನೆ, 'ಪಂಡಿತ ಪೋಷಣಾ ನಿಧಿ' ಸ್ಥಾಪನೆ (1990) ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೂರ್ಣಪ್ರಜ್ಞ ಸಂಶೋಧನಾ ಮಂದಿರ ಆರಂಭ (1994), ಶ್ರೀ ವಿದ್ಯಾಮಾನ್ಯ ಪ್ರಶಸ್ತಿ ಹಾಗೂ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಕೊಡುವ ವ್ಯವಸ್ಥೆ; ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಿಂದ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಕನ್ನಡ ಭಾಷಾಂತರ ಪ್ರಕಟಣೆ, ಹದಿನೇಳು ಸುಧಾ ಮಂಗಲೋತ್ಸವಗಳು; ಉಡುಪಿಯಲ್ಲಿ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಆರಂಭ (1968), ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯ ದಲಿತರ ಕಾಲೋನಿಯಲ್ಲಿ ಪಾದಯಾತ್ರೆ (1970), ಆಂಧ್ರಪ್ರದೇಶದಲ್ಲಿ ಚಂಡಮಾರುತದ ಹಾವಳಿಗೊಳಗಾದವರಿಗಾಗಿ ಹಂಸಲದಿವಿ ಗ್ರಾಮದಲ್ಲಿ 150 ಮನೆಗಳನ್ನು ನಿರ್ಮಿಸಿಕೊತ್ತದ್ದು 978), ಕರ್ಜಿಗಿಯಲ್ಲಿ ವೃದ್ಧಾಶ್ರಮ ಸ್ಥಾಪನೆ; ಭೂಕಂಪ ಪೀಡಿತ ಗೋವಿಂದಪುರದಲ್ಲಿ ಅರವತ್ತು ಮನೆಗಳ ವಿತರಣೆ (1995), ಸುಮಾರು ಅರುವತ್ತು ವಿವಿಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು, ವಿದ್ಯಾರ್ತಿ ವಸತಿಗೃಹಗಳ ಸ್ಥಾಪನೆಗೆ ಮಾರ್ಗದರ್ಶನ, ಇವು ಶ್ರೀ ವಿಶ್ವೇಶತೀರ್ಥರ ಜೀವನದ ಮಹತ್ವದ ಘಟನೆಗಳಲ್ಲಿ ಕೆಲವು. ಈ ಗ್ರಂಥದ ಎರಡನೆಯ ಭಾಗದಲ್ಲಿ ಶ್ರೀ ವಿಶ್ವೇಶತೀರ್ಥರು ನಮ್ಮ ವಿನಂತಿಯನ್ನು ಒಪ್ಪಿ ಬರೆದುಕೊಟ್ಟಿರುವ ಒಂದು ಚಿಕಣಿ ಆತ್ಮಕಥನವಿದೆ. ಬಾಲ್ಯದ ನೆನಪುಗಳು, ಮಠದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಅನುಭವ, ಎರಡನೆಯ ಮಹಾಯುದ್ಧದ ಗಾಯಾಳುಗಳ ಶುಶ್ರೂಷೆಗೆ ಹೋಗಬೇಕೆಂದು ಕನಸು ಕಂಡದ್ದು, ಗಾಂಧೀಜಿಯವರ ಪ್ರಭಾವ, ಮಾಧ್ವ ಮಹಾಮಂಡಲದ ಸ್ಥಾಪನೆಗೆ ಪಟ್ಟ ಶ್ರಮ, ದಲಿತರು ಅನುಭವಿಸುವ ಅವಮಾನದ ಪ್ರತ್ಯಕ್ಷ ಅನುಭವ, 'ಸಮಾಜದಲ್ಲಿ ಸಮುದ್ರ ಮಥನಕ್ಕೆ ಕಾರಣವಾದ' ದಲಿತರ ಕೇರಿ ಭೇಟಿ, ವಾಕ್ಯಾರ್ಥಗಳು, ತುರ್ತು ಪರಿಸ್ಥಿತಿಯ ಪ್ರತಿಭಟನೆ, ಪರಿಸರ ಚಳವಳಿ, ರಾಮಜನ್ಮಭೂಮಿ ಪ್ರಕರಣದ ಕೆಲವು ತೆರೆಮರೆಯ ಸಂಗತಿಗಳು - ಪಂಜಾಬಿನ ಶಾಂತಿಯಾತ್ರೆ, ಗೋಕಾಕ್ ಚಳವಳಿಗೆ ಬೆಂಬಲ ಇವುಗಳ ಕುರಿತು ಸ್ವಾಮೀಜಿಯವರು ವಿವರವಾಗಿ ಬರೆದಿದ್ದಾರೆ. ಬಾಲ್ಯದ ನೆನಪುಗಳನ್ನು ಬರೆಯುತ್ತ ಶ್ರೀ ವಿಶ್ವೇಶತೀರ್ಥರು, ನಾನು ಗಾಂಧೀಜಿಯವರ ವಿಚಾರಕ್ಕೆ ಸಂಬಂಧಿಸಿದ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ತರಿಸಿ ಓದುತ್ತಿದ್ದೆ. ಗಾಂಧೀಜಿಯವರ 'ಹರಿಜನ' ಪತ್ರಿಕೆಯ ಕನ್ನಡ ಅನುವಾದಗಳು, ಗಾಂಧೀಜಿ, ವಿನೋಬಾ, ಮಶ್ರೂವಾಲಾ, ಕುಮಾರಪ್ಪ ಮುಂತಾದವರ ಲೇಖನಗಳನ್ನು ಓದುತ್ತಿದ್ದೆ. ವಿಕೇಂದ್ರೀಕರಣ ಹಾಗೂ ಗ್ರಾಮೋದ್ಯೋಗಿಗಳಿಗೆ ಒತ್ತುಕೊಡುತ್ತಿದ್ದ ಗಾಂಧೀಜಿಯವರ ಆರ್ಥಿಕ ವಿಚಾರಗಳ ಬಗ್ಗೆ ನನ್ನ ಒಲವು ಬೆಳೆದಿತ್ತು. ಇದರ ಜೊತೆಗೆ ಜಯಪ್ರಕಾಶ, ಲೋಹಿಯಾ, ಆಚಾರ್ಯ ನರೇಂದ್ರದೇವ ಮುಂತಾದವರ ಸಮಾಜವಾದಿ ವಿಚಾರಗಳಿಂದಲೂ ಪ್ರಭಾವಿತನಾಗಿದ್ದೆ. ಶ್ರೀಮಂತರ ಹಾಗೂ ಬಡವರ ಆರ್ಥಿಕ ಅಂತರವು ಬಹಳಷ್ಟು ಕಡಿಮೆಯಿರಬೇಕು. ಜನರ ಆರ್ಥಿಕ ಸಮಾನತೆಯನ್ನು ಸಾಧಿಸಬೇಕೆಂಬ ತೀವ್ರ ಕಳಕಳಿಯು ನನ್ನಲ್ಲಿ ಬಾಲ್ಯದಿಂದಲೂ ಬೆಳೆದುಕೊಂಡು ಬಂದಿತ್ತು (2-1) ಎಂದಿದ್ದಾರೆ. 'ಕೊಟ್ಟ ಕುದುರೆಯನೇರಿ ಗಡಿದಾಟಿದ' ಪೇಜಾವರ ಸ್ವಾಮೀಜಿಯವರ ಕನಸು-ನನಸುಗಳನ್ನು ಲಕ್ಷೀಶ ತೋಳ್ಪಾಡಿಯವರು ವಿವರಿಸಿದ್ದಾರೆ (2-3).
'ನಾನಾ ಜನಸ್ಯ ಶುಶ್ರೂಷಾ' ಶ್ರೀ ವಿಶ್ವೇಶತೀರ್ಥರು ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಮಧ್ವಾಚಾರ್ಯರ ವಿವಿಧ ಗ್ರಂಥಗಳ ಕುರಿತು ಬರೆದಿರುವ ಮೂವತ್ತೊಂದು ಲೇಖನಗಳು ಈ ಗ್ರಂಥದಲ್ಲಿವೆ. ಅವರು ಉಪನಿಷತ್ತುಗಳು ಹಾಗೂ ಭಗವದ್ಗೀತೆಯ ಸಾರಾಂಶವನ್ನು ನೀಡಿರುವುದಲ್ಲದೆ ಮಾಧ್ವ ಸಿದ್ಧಾಂತದ ನೆಲೆಯಿಂದ ಅವುಗಳನ್ನು ವ್ಯಾಖ್ಯಾನಿಸದ್ದಾರೆ. ಗಂಭೀರ ತಾತ್ವಿಕ ಜಿಜ್ಞಾಸೆಯಿರುವ ಸಂಸ್ಕೃತ ಗ್ರಂಥಗಳನ್ನು ಕನ್ನಡದಲ್ಲಿ ಪಾರಿಭಾಷಿಕ ಶಬ್ದಗಳ ಭಾರವಿಲ್ಲದೆ, ವಾಗಾಡಂಬರವಿಲ್ಲದೆ ಸರಳವಾಗಿ ಹೇಗೆ ಪರಿಚಯಿಸಬಹುದೆಂಬುದಕ್ಕೆ ಈ ಲೇಖನಗಳು ಮಾದರಿಯಾಗಿವೆ. ಮಧ್ವಾಚಾರ್ಯರ 'ತತ್ತ್ವವಾದ'ವನ್ನು ಶ್ರೀ ವಿಶ್ವೇಶತೀರ್ಥರು ಹೀಗೆ ಪರಿಚಯಿಸುತ್ತಾರೆ - ಸಕಲ ವೇದಗಳಿಂದ ಪ್ರತಿಪಾದ್ಯನಾದ ಶ್ರೀಹರಿಯು ಸರ್ವೊತ್ತಮನಾಗಿದ್ದು ಅವನ ಲೀಲಾವಿಹಾರ ಕೇಂದ್ರವೂ, ಲೀಲಾತ್ಮರ ಸಾಧನಕ್ಷೇತ್ರವೂ ಆಗಿರುವ ಈ ಜಗತ್ತು ಸತ್ಯವಾಗಿದೆ. ಈ ಪರಾತ್ಪರ ಶಕ್ತಿಯ ಸೇವಕರೂ ಸಾಧಕರೂ ಆದ ಈ ಜೀವರು ಭಗವಂತನಿಂದ ಭಿನ್ನವಾಗಿದ್ದು ಮೂಲಭೂತವಾದ ಮತ್ತು ತನ್ನ ಕರ್ತವ್ಯಗಳಿಗೆ ಅನುಗುಣವಾಗಿ ಸ್ವಾಭಾವಿಕವಾದ ಅಂತರವನ್ನು ಪಡೆದಿರುವರು. ಭಗವಂತನ ಅನುಗ್ರಹದಿಂದ ಪರಿಶುದ್ಧ ಭಕ್ತಿಯಿಂದ ತನ್ನ ದಿವ್ಯ ಸ್ವರೂಪದ ಸಾಕ್ಷಾತ್ಕಾರವೇ ಸಾಕ ಜೀವರ ಗುರಿಯಾಗಿರಬೇಕು. ಈ ಪ್ರಮೇಯಗಳನ್ನು ಅಪೌರುಷೇಯ ವೇದ ಮತ್ತು ಇತರ ಶಾಸ್ತ್ರಗಳು ಹಾಗೂ ಪ್ರತ್ಯಕ್ಷ ಮತ್ತು ಯುಕ್ತಿಗಳಿಂದ ನಾವು ತಿಳಿದುಕೊಳ್ಳಬೇಕು. (3-30). ಮಧ್ವಾಚಾರ್ಯರ 'ಗೀತಾತಾತ್ಪರ್ಯ'ದಲ್ಲಿರುವ ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ: ಎಂಬ ಮಾತನ್ನು ಶ್ರೀ ವಿಶ್ವೇಶತೀರ್ಥರು ಧ್ಯೇಯವಾಕ್ಯವಾಗಿ ಸ್ವೀಕರಿಸಿದ್ದಾರೆ - ಇದು ನಮಗೆ ಪ್ರಿಯವಾದ ಧ್ಯೇಯವಾಕ್ಯವೆನಿಸಿದೆ. ಕರ್ಮಾಚರನೆಯು ಆವಶ್ಯಕವೆಂದು ಭಾವಿಸಿ ತಮ್ಮ ವೈಯಕ್ತಿಕ ಧರ್ಮ ಕರ್ಮಗಳನ್ನು ಮಾತ್ರ ಆಚರಿಸಿ, ಸಮಾಜದ ಬಗ್ಗೆ ಉದಾಸೀನವಾಗಿರುವ ಪ್ರವೃತ್ತಿಯನ್ನೇ ನಾವು ಹೆಚ್ಚಾಗಿ ಕಾಣುತ್ತೇವೆ. ಸಮಾಜದ ಸೇವೆಯೆಂದರೆ ಅದೊಂದು ಲೌಕಿಕ ಕಾರ್ಯವೆಂದೂ, ಅದನ್ನು ತೊರೆದು ದಿನವಿಡೀ ಜಪತಪ ಮೊದಲಾದ ವೈಯಕ್ತಿಕ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗುವವನೇ ಕಟ್ಟಾ ಧಾರ್ಮಿಕ ಒಂದು ಭಾವನೆಯು ಪ್ರಚಲಿತವಿದೆ. ಗೀತೆಯಲ್ಲಿ ಹೇಳಿದ ಕರ್ಮದ ಸಂದೇಶವನ್ನು vಅರ್ನಾಶ್ರಮ ಪದ್ಧತಿಯಿಂದ ಬಂದ ನಮ್ಮ ವೃತ್ತಿ ಹಾಗೂ ಜಪ ಪೂಜಾದಿಗಳಲ್ಲೇ ನಾವು ಪರಿಮಿತಗೊಳಿಸಿದ್ದೇವೆ. ನಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಆರ್ತ ಜನತೆಯ ಸೇವೆಯೂ ಒಂದು ಪ್ರಧಾನವಾದ ಅಂಶವಾಗಿದೆಯೆಂದೂ, ಸಾಧಕನು ತನ್ನ ನಿತ್ಯಾನುಷ್ಠಾನಗಳ ಜತೆಗೆ ಈ ಸೇವಾಕಾರ್ಯವನ್ನು ಆಚರಿಸಬೇಕೆನ್ನುವುದು ಗೀತೆಯ ಆದೇಶವೆಂದೂ ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ. ವೇದಾಂತವು ಸಮಾಜ ವಿಮುಖವಾದ ದೃಷ್ಟಿಯನ್ನು ನಮಗೆ ನೀಡದೆ ವೈಯಕ್ತಿಕ ಹಾಗೂ ಸಮಾಜದ ಉನ್ನತಿಗೆ ಪೋಷಕವಾದ, ವಿಧಾಯಕವಾದ ಮಾರ್ಗವನ್ನು ಹೇಗೆ ತೋರಿಸುತ್ತದೆ ಎಂಬುದನ್ನು ಇದರಿಂದ ನಾವು ಮನಗಾಣಬಹುದು. (3-29) ಮಧ್ವಾಚಾರ್ಯರು ತನ್ನ ಎಲ್ಲ ಗ್ರಂಥಗಳನ್ನೂ ಸಂಸ್ಕೃತದಲ್ಲೆ ಬರೆದರು. ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳು ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ಬರೆದರು. ಉಡುಪಿಯ ಅಷ್ಟಮಠಗಳ ಇತಿಹಾಸದಲ್ಲಿ ಶ್ರೀ ವಾದಿರಾಜರ ಅನಂತರ ಕನ್ನಡಪರವಾದ ದಿಟ್ಟ ಹೆಜ್ಜೆಯಿಟ್ಟವರು ಶ್ರೀ ವಿಶ್ವೇಶತೀರ್ಥರು. ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಕನ್ನಡ ಭಾಷಾಂತರಗಳನ್ನು ಮಾಡಿಸಿರುವ ಇವರು ಆ ಎಲ್ಲ ಗ್ರಂಥಗಳಿಗೆ ಕನ್ನಡದಲ್ಲಿ ಪ್ರಸ್ತಾವನೆಯನ್ನು ಬರೆದಿದ್ದಾರೆ. ಶ್ರೀ ವಿಶ್ವೇಶತೀರ್ಥರು ತನ್ನ ಉಪನ್ಯಾಸ ಪ್ರವಚನಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತಗಳಿಂದ ಆಯ್ದ ಉಪಾಖ್ಯಾನಗಳನ್ನು ವಿವರಿಸುತ್ತಾರೆ. ಅವರ ಉಪನ್ಯಾಸಗಳಿಂದ ಆಯ್ದ ಕೆಲವು ದೃಷ್ಟಾಂತ ಕತೆಗಳು ಈ ಗ್ರಂಥದಲ್ಲಿವೆ. (3-31; 3-32) ಪೇಜಾವರ ಸ್ವಾಮೀಜಿಯವರ ಮೂರು ಪರ್ಯಾಯಗಳು ಹಾಗೂ ನೂರಾರು ಸಾಧನೆಗಳ ಸಮಗ್ರ ವಿವರಗಳು ಪಂಡರೀನಾಥಾಚಾರ್ಯ ಗಲಗಲಿ ಅವರ ಲೇಖನದಲ್ಲಿವೆ. (4-1). ಈ ಗ್ರಂಥದ ನಾಲ್ಕನೆಯ ಭಾಗ ಶ್ರೀ ವಿಶ್ವೇಶತೀರ್ಥರ ಪರ್ಯಾಯ ಕಾಲದ ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಾಖಲಿಸುತ್ತದೆ.
'ಚೈತನ್ಯದ ಬುಗ್ಗೆ' ಈ ಗ್ರಂಥದ ಐದನೆಯ ಭಾದಲ್ಲಿ ಶ್ರೀ ವಿಶ್ವೇಶತೀರ್ಥರ ಸರಳ, ನಿರಾಡಂಬರ ಹಾಗೂ ಚೈತನ್ಯದ ಬುಗ್ಗೆಯಂಥ ವ್ಯಕ್ತಿತ್ವವನ್ನು ಕುರಿತು ಶ್ರೀ ವಿದ್ಯಾಮಾನ್ಯತೀರ್ಥರು, ದ. ರಾ. ಬೇಂದ್ರೆ, ಶಂ. ಬಾ. ಜೋಶಿ, ಪಾ. ವೆಂ.ಆಚಾರ್ಯ, kರೀ ಷ್ಣಮೂರ್ತಿ ಪುರಾಣಿಕ, kಈ ರ್ತಿನಾಥ ಕುರ್ತಕೋಟಿ, ಮಾಲತಿ ಪಟ್ಟಣಶೆಟ್ಟಿ, ಕೆ. ಎಸ್. ದೇಶಪಂಡೆ, ಎಮ್. ಕೆ. ಭಾರತೀರಮಣಾಚಾರ್ಯ ಮತ್ತಿತರರು ಬರೆದಿರುವ ಹದಿಮೂರು ಲೇಖನಗಳು ಹಾಗೂ ಎರಡು ಕವನಗಳಿವೆ. ಶ್ರೀ ವಿದ್ಯಾಮಾನ್ಯತೀರ್ಥರ ಲೇಖನದಲ್ಲಿ ಶ್ರೀ ವಿಶ್ವೇಶತೀರ್ಥರು ಹಾಗೂ ಶ್ರೀ ವಿಜಯೀಂದ್ರಾಚಾರ್ಯರ ನಡುವೆ ನಡೆದ ಒಂದು ವಾಕ್ಯಾರ್ಥದ ವಿವರಗಳಿವೆ (5-7), ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ತತ್ವಶಾಸ್ತ್ರದ ವಾಕ್ಯಾರ್ಥಗಳು ಹೇಗೆ ನಡೆಯುತ್ತಿದ್ದವು ಎಂಬುದಕ್ಕೆ ಇದೊಂದು ಮಾದರಿಯಾಗಿದೆ. ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳಷ್ಟು ಜಾಗೃತ ಸಾಮಾಜಿಕ ಪ್ರಜ್ಞೆಯ ಬೇರೊಬ್ಬರನ್ನು ನಾನು ಇನ್ನೂ ಕಂಡಿಲ್ಲ ಎಂದು ಶಂ.ಬಾ. ಜೋಶಿ ಬರೆದಿದ್ದಾರೆ (5-4). ಎ. ಹರಿದಾಸ ಭಟ್ಟರ ಶ್ರೀಗಳವರು ಮತ್ತು ಪರಿವಾರ ಎಂಬ ಲೇಖನ (5-15) ಶ್ರೀ ಶ್ರೀ ವಿಶ್ವೇಶತೀರ್ಥರ ನಿಕಟವತರ್ಿಗಳ ಸಂದರ್ಶನಗಳ ಮೂಲಕ ಅವರ ವ್ಯಕ್ತಿತ್ವದ ಆತ್ಮೀಯ, ಸಮೀಪ ಚಿತ್ರವೊಂದನ್ನು ನೀಡುತ್ತದೆ. ಜರತಾರಿಯ ಬದಲು ಖಾದಿ-ಕಾವಿ ಧರಿಸುವ ಪೇಜಾವರ ಶ್ರೀಗಳು ಪೀಠಾಧಿಪತಿಗಳ ಗುಂಪಿನಲ್ಲಿ ಪ್ರತ್ಯೇಕವಾಗಿ ಕಾಣಿಸುತ್ತಾರೆ. ಬಿಡುವಿಲ್ಲದ ಕಾರ್ಯಕ್ರಮಗಳು ಶ್ರೀ ವಿಶ್ವೇಶತೀರ್ಥರ ದಿನಚರಿಯಲ್ಲಿ ಅನಿವಾರ್ಯ. ಹಳೇಹಾಳ ಒಂದು ಗ್ರಾಮ. ಪರ್ಯಾಯ ಸಂಚಾರ ಕಾಲದಲ್ಲಿ ಶ್ರೀಗಳವರು ಅಲ್ಲಿನ ಸಂದರ್ಶನಕ್ಕಾಗಿ ಕೇವಲ ಹದಿನೈದು ನಿಮಿಷಗಳನ್ನಿಟ್ಟಿದ್ದರು. ಭಕ್ತರು ಬಹಳ ಸಂಖ್ಯೆಯಲ್ಲಿ ಸೇರಿದ್ದರು. ಮೆರವಣಿಗೆಯಲ್ಲಿ ಶ್ರೀಗಳವರನ್ನು ಕರೆದೊಯ್ಯಬೇಕೆಂದು ಜನರ ಅಪೇಕ್ಷೆ. ಶ್ರೀಗಳವರು ಸಮಯವಿಲ್ಲವೆಂದು ನಿರಾಕರಿಸಿದರು. ತಾವು ಕಾರಲ್ಲಿ ಬನ್ನಿ, ನಾವು ನಡೆದುಕೊಂಡು ಬರುತ್ತೇವೆ ಎಂದರು ಜನರು. ಅದು ನನಗೆ ಸಂಕೋಚವಾಗುತ್ತದೆ ಎಂದು ಕೊನೆಗೂ ಶ್ರೀಗಳು ಮೆರವಣಿಗೆಗೆ ಒಪ್ಪಿದರು. ಶ್ರೀಗಳವರು ಓಡುತ್ತ ಹೋದರು. ಜನರೂ ಹಿಂದಿನಿಂದ ಓಡಿದರು. ಇದೊಂದು ರೀತಿಯ ಓಟದ ಮೆರವಣಿಗೆಯಾಯಿತು. ಹೀಗಿದೆ ಶ್ರೀಗಳವರ ಕಾರ್ಯಕ್ರಮದ ಒತ್ತಡ (5-15). ಬಿಜಾಪುರದಲ್ಲಿ ಶ್ರೀ ಬಂಧನಾಳ ಶಿವಯೋಗಿಗಳು ಏರ್ಪಡಿಸಿದ್ದ ಸಮಾರಂಭದಲ್ಲಿ ನಡೆದ ಘಟನೆ ಶ್ರೀ ವಿಶ್ವೇಶತೀರ್ಥರ ಸರಳತೆಗೆ ಉದಾಹರಣೆಯಾಗಿದೆ (8-8). ಮಂಗಳೂರಿನ ಸಂಮಾನ ಸಮಾರಂಭದಲ್ಲಿ ನಡೆದ ಇನ್ನೊಂದು ಘಟನೆಯ ವಿವರ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಈ ಗ್ರಂಥಕ್ಕೆ ಬರೆದಿರುವ ಪ್ರಸ್ತಾವನೆಯಲ್ಲಿದೆ.
'ಒಂದು ಹೆಜ್ಜೆ ಮುಂದೆ' ಎಳವೆಯಲ್ಲೆ ಮಹಾತ್ಮಾ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ಶ್ರೀ ವಿಶ್ವೇಶತೀರ್ಥರು 1970ರಲ್ಲಿ ದಲಿತರ ಕೇರಿಗೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಯಿತು. ದಲಿತರ ಕುರಿತು ತನ್ನಲ್ಲಿ ಸಹಾನುಭೂತಿ ಮೂಡಲು ಕಾರಣವಾದ ಒಂದು ಘಟನೆಯನ್ನು ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ - ಒಮ್ಮೆ ಮಠದಲ್ಲಿ ರೈತರ ಜತೆ ಮಠದ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೆ. ಅವರಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತ ಮತಕ್ಕೆ ಸೇರಿದ ರೈತರೂ ಇದ್ದರು. ಆ ಸಂದರ್ಭದಲ್ಲಿಯೇ ಹಿಂದುಳಿದ ಪಂಗಡಕ್ಕೆ ಸೇರಿದ ರೈತರೂ ಆಗಮಿಸಿದರು. ಅವರು ಮಠದ ಒಳಗೆ ಬರಲು ಸಂಕೋಚಪಟ್ಟಾಗ, ನಾನು ಒಳಬರುವಂತೆ ಹೇಳಿದೆ. ನನ್ನ ಎದುರಿಗೆ ಕುಳಿತುಕೊಂಡಿರುವ ಮುಸಲ್ಮಾನ, ಕ್ರೈಸ್ತ ಮತಕ್ಕೆ ಸೇರಿದ ರೈತರು, 'ಅವರು ಒಳಗೆ ಬರಲು ಅರ್ಹವಾದ ಜಾತಿಗೆ ಸೇರಿದವರಲ್ಲ' ಎಂದು ತಿಳಿಸಿದಾಗ ನನಗೆ, ಒಳಬರದವರ ಸಂಕೋಚದ ಅರಿವಾಯಿತು. ಇತರ ಧರ್ಮಕ್ಕೆ ಸೇರಿದ ರೈತರು ನನ್ನ ಎದುರಿಗೇ ಕುಳಿತುಕೊಂಡು, ನಮ್ಮ ಧರ್ಮದ ಅನುಯಾಯಿಗಳನ್ನು ತಮ್ಮಂತೆ ಒಳಗೆ ಬರಲು ಅರ್ಹರಲ್ಲವೆಂದು ಹೇಳಿರುವುದು ನಮ್ಮ ಧರ್ಮಕ್ಕೆ ಅವಮಾನ ಎಂದು ನನಗೆ ಅರಿವಾಯಿತು. ಇಂತಹ ಕೆಲವು ಸನ್ನಿವೇಶಗಳೇ ಹರಿಜನರ ಸಮಸ್ಯೆಯ ಬಗ್ಗೆ ಗಮನ ಕೊಡಲು ಪ್ರಚೋದಿಸಿದ್ದವು (9-2).
ಶ್ರೀ ವಿಶ್ವೇಶತೀರ್ಥರು ದಲಿತರ ಕೇರಿಗೆ ಭೇಟಿ ನೀಡಿದ ಘಟನೆಯ ಬಗ್ಗೆ ಸಾಂಪ್ರದಾಯಿಕ ಪೀಠಾಧಿಪತಿಯೊಬ್ಬರು ಮುಂದಾಗಿ ಇಂತಹ ಧೈರ್ಯದ ಹೆಜ್ಜೆ ಇಟ್ಟದ್ದು ಇತಿಹಾಸದಲ್ಲಿ ಒಂದು ಅಪರೂಪದ ಉದಾಹರಣೆಯಾಗಿ ನಿಲ್ಲುತ್ತದೆಂಬುದು ಖಂಡಿತ ಎನ್ನುವ ಪಾ.ವೆಂ. ಆಚಾರ್ಯರು ಈ ಘಟನೆಗಳ ಪರಿಣಾಮವನ್ನು ಹೀಗೆ ಗುರುತಿಸುತ್ತಾರೆ: ಶ್ರೀ ವಿಶ್ವೇಶತೀರ್ಥರ ಈ ದಲಿತರ ಸಂಪರ್ಕದ ಕಾರ್ಯ ಎರಡು ರೀತಿಗಳಿಂದ ಪ್ರಭಾವ ಬೀರುತ್ತಿದೆ. ಒಂದು - ಬಗೆಬಗೆಯ ಸಂಕಟ ಅವಮಾನಗಳಿಂದ ಪೀಡಿತರಾದ, ದೇಶದಲ್ಲಿ ಶೇಕಡಾ 16ರಷ್ಟಿರುವ ದಲಿತರಲ್ಲಿ ಹಿಂದೂಧರ್ಮದಲ್ಲಿ ತಮಗೆ ಇನ್ನೂ ಗೌರವದ ಸ್ಥಾನ ಸಂಪಾದನೆ ಸಾಧ್ಯವಿದೆ. ಎಲ್ಲವೂ ನಿರಾಶಾಮಯವಾಗಿಲ್ಲ. ಆತ್ಮಗೌರವವನ್ನು ಸಂಪಾದಿಸುವುದಕ್ಕೆ ತಮ್ಮ ಮಾತೃಧರ್ಮದ ಬೇರುಗಳನ್ನು ಕತ್ತರಿಸಿಕೊಳ್ಳಬೇಕಾಗಿಲ್ಲ ಎಂಬ ಆಶೋದಯವನ್ನುಂಟುಮಾಡಿದೆ. ಇನ್ನೊಂದೆಡೆಯಲ್ಲಿ, ಸವಣರ್ೀಯ ಹಿಂದೂಗಳಲ್ಲಿ ದಲಿತರ ಸಮಸ್ಯೆಯ ತುರ್ತನ್ನು ಅದು ತೀವ್ರವಾಗಿ ಬಿಂಬಿಸುತ್ತಿದೆ. ಈ ದೀನದಲಿತರನ್ನು ಅಲಕ್ಷಿಸುತ್ತಲೇ ಇದ್ದರೆ ಇಡೀ ಹಿಂದೂ ಸಮಾಜವೇ ಹೇಗೆ ವಿಸ್ತರಿಸಲಾರದ ಅಪಾಯಕ್ಕೆ ಗುರಿಯಾದೀತೆಂಬುದನ್ನು ಸವಣರ್ೀಯರ ಗಮನಕ್ಕೆ ಅದು ತಂದುಕೊಡುತ್ತಿದೆ (9-2). ಶ್ರೀ ವಿಶ್ವೇಶತೀರ್ಥರು ಹಿಂದೂ sಅ ಅವರ್ನೀಯರ ಹೃದಯ ಪರವರ್ತನೆ ಮಾಡಬಲ್ಲರೆಂಬ ನಂಬಿಕೆ ಡಾ ಯು.ಆರ್. ಅನಂತಮೂತರ್ಿಯವರಿಗಿದೆ - ಈಗ ನಾವು ಬದಲಾಗಬೇಕಾದ್ದು ದಲಿತರ ವಿಮೋಚನೆಗಾಗಿ ಎಂದು ತಿಳಿಯುವುದು ತಪ್ಪಾಗುತ್ತದೆ. ನಮ್ಮ ದೃಷ್ಟಿಯಲ್ಲಾಗಬೇಕಾದ ಬದಲಾವಣೆ ನಮ್ಮ ವಿಮೋಚನೆಗಾಗಿಯೇ. ದಲಿತರು ಅಸ್ಪೃಶ್ಯರೆಂದು ದೂರವಿಟ್ಟು ನಾವು ಮಹಾಪಾಪಿಗಳಾಗಿದ್ದೇವೆ. ಈ ಪಾಪವನ್ನು ನಾವು ತೊಳೆದುಕೊಳ್ಳಬೇಕಾಗಿದೆ. ಇಡೀ ನಮ್ಮ ದೇಶಕ್ಕೆ ಈ ವಿಷಯದಲ್ಲಿ ನೀವು ಮಾರ್ಗದರ್ಶಕರಾಗಬೇಕು. ಬ್ರಾಹ್ಮಣರು ಮಾತ್ರವಲ್ಲದೆ, ಉಳಿದ ಹಿಂದೂ ಸವಣರ್ೀಯರ ಹೃದಯ ಪರಿವರ್ತನೆಯನ್ನು ನೀವು ಮಾಡಬೇಕಯ. (6-3) ಮಠಗಳು ಒಂದು ಜಾತಿಯವರಿಗೆ ಸಂಬಂಧಪಟ್ಟವುಗಳಲ್ಲ, ಎಲ್ಲ ಹಿಂದುಗಳಿಗೆ ಸಂಬಂಧಿಸಿದ ಜವಾಬ್ದಾರಿ ಅವುಗಳಿಗಿದೆ ಎಂದು ಶ್ರೀ ವಿಶ್ವೇಶತೀರ್ಥರು ಪ್ರತಿಪಾದಿಸುತ್ತಾರೆ. ಈ ಬಗ್ಗೆ ಸಂಪ್ರದಾಯವಾದಿಗಳಿಂದ ಬಂದ ಆಕ್ಷೇಪಗಳಿಗೆ ಅವರು ಹೀಗೆ ಉತ್ತರಿಸಿದ್ದಾರೆ - ಜಗತ್ತಿನ ಜನರ ಕಲ್ಯಾಣಕ್ಕಾಗಿ ತಮ್ಮ ಸಿದ್ಧಾಂತವನ್ನು ಸಾರಿದ ಜಗದ್ಗುರು ಮಧ್ವಾಚಾರ್ಯರ ಪೀಠವು ಕೇವಲ ಒಂದು ಕೋಮಿನ ಪೀಠವಾಗಿರಲು ಹೇಗೆ ಸಾಧ್ಯ? ಶ್ರೀ ಮಧ್ವಾಚಾರ್ಯರು ಆದೇಶಿಸಿದ ತತ್ತ್ವ ಮತ್ತು ನಿಯಮಗಳಿಗೆ ಅನುಗುಣವಾಗಿ ನಡೆಯುವಾಗ ಸಂಪ್ರದಾಯದ ಮೌಲ್ಯ ಮತ್ತು ಸಾರ್ವಜನಿಕ ಸಂಬಂಧ ಇವೆರಡನ್ನು ಸಮನ್ವಯಗೊಳಿಸಲು ಸಾಧ್ಯವೆಂದು ನನ್ನ ದೃಢ ನಂಬಿಕೆಯಾಗಿದೆ. (9-2) ಮಠಾಧಿಪತಿಗಳು, ಏನೂ ಸಾರ್ವಜನಿಕ ಕಾರ್ಯ ಮಾಡುವುದಿಲ್ಲ ಎಂದು ಒಂದು ಕಾಲದಲ್ಲಿ ಆರೋಪ ಇತ್ತು. ಈಗ, 'ಅವರು ಮಾಡುವುದು ಅತಿರೇಕವಾಯಿತು. ತಮ್ಮ ಪೀಠದ ಅಂತಸ್ತನ್ನು ಕೂಡಾ ಬಿಟ್ಟು ಮುಂದುವರಿಯುತ್ತಾ ಇದ್ದಾರೆ' ಎಂಬ ಮಾತನ್ನೂ ಕೇಳುತ್ತೇವೆ. ಆದರೆ ನಾನು ಇಷ್ಟರವರೆಗೆ ನಡೆಸಿಕೊಂಡು ಬಂದ ರೀತಿ ಈ ಎರಡರ ಸಮನ್ವಯದ ಹಾದಿಯಲ್ಲಿ. (9-10). 'ಒಂದು ಹೆಜ್ಜೆ ಮುಂದೆ, ಇಷ್ಟು ಸಾಕು ನನಗೆ' ಎಂದು ಗಾಂಧೀಜಿ ಹೇಳುತ್ತಿದ್ದರು. ಶ್ರೀ ವಿಶ್ವೇಶತೀರ್ಥರು ಗಾಂಧೀಜಿಯವರಿಂದ ಪ್ರೇರಣೆ ಪಡೆದರು. ಆದರೆ ಸಂಪ್ರದಾಯಬದ್ಧ ಮಠವೊಂದರ ಪೀಠಾಧಿಪತಿಯಾಗಿ ತನ್ನ ಇತಿ-ಮಿತಿಗಳೇನು ಎಂಬ ಅರಿವು ಶ್ರೀ ವಿಶ್ವೇಶತೀರ್ಥರಿಗಿದೆ. ಉಡುಪಿಯ ಸಾರ್ವಜನಿಕ ಸಭೆಯೊಂದರಲ್ಲಿ ದಲಿತ ಕವಿ ಸಿದ್ಧಲಿಂಗಯ್ಯನವರು ಕೇಳಿದ ಪ್ರಶ್ನೆಗೆ ಶ್ರೀ ವಿಶ್ವೇಶತೀರ್ಥರು ನೀಡಿದ ಉತ್ತರವನ್ನು ಗೌರೀಶ ಕಾಯ್ಕಿಣಿಯವರು ತನ್ನ ಲೇಖನದಲ್ಲಿ ದಾಖಲಿಸಿದ್ದಾರೆ - ನಾವು ವೈಯಕ್ತಿಕವಾಗಿ ಯಾವುದೇ ಭೇದ-ಭಾವವನ್ನು ನಂಬುವುದಿಲ್ಲ. ಇವು ಅನ್ಯಾಯಪೂರಿತವಾದ ಅನೈತಿಕ ಭೇದಗಳು. ಇವುಗಳನ್ನು ನಂಬುವುದೆಂದರೆ ದೇವರು ಮತ್ತು ದೇವವಾಣಿಯ ವಿರುದ್ಧ ಪಾಪ ಮಾಡಿದಂತೆ. ಮೇಲ್ವರ್ಗ ಕೆಳವರ್ಗ, ಉಚ್ಚ-ನೀಚ ಎಂಬ ಜಾತಿ ಮತಗಳು ತೊಲಗಬೇಕು. ಅವು ನಮ್ಮ ಸನಾತನ ಧರ್ಮದ ಅವಿಭಾಜ್ಯ ಅಂಗಗಳಲ್ಲ. ಮಧ್ಯಯುಗದಲ್ಲಿ ತಲೆ ಎತ್ತಿ ನಿಂತ ಈ ಜಾತಿ-ಮತಗಳು ಆಧುನಿಕ ಯುಗದಲ್ಲಿ ತಮ್ಮಿಂದ ತಾವೇ ಮಾಯವಾಗುವುವು. ನಾವೀಗ ಮಾಡುತ್ತಿರುವುದು ಅತ್ಯಲ್ಪವೆಂಬ ಅರಿವು ನಮಗಿದೆ. ನಮಗೂ ಸಹ ಇತಿ-ಮಿತಿಗಳುಂಟು. ನಾವು ಸೈನ್ಯದ ಕಪ್ತಾನರು. ನಮ್ಮ ಸೈನ್ಯವನ್ನು ಬಿಟ್ಟು ಬಹಳಷ್ಟು ಹಿಂದೆ, ಬಹಳಷ್ಟು ಮುಂದೆ ಹೋಗಲಾರೆವು. ನಾವು ಬಹಳ ಮುಂದೆ ಹೋದರೆ ಶತ್ರುಗಳು ನಮ್ಮನ್ನು ಬಂಧಿಸುವರು ಅಥವಾ ನಾವೇ ಸಮರಾಂಗಣವನ್ನು ತ್ಯಜಿಸಿದೆವೆಂದು ನಮ್ಮ ಸೈನ್ಯವೇ ನಮ್ಮನ್ನು ಕೊಂದೀತು. ನಾವು ಆದಷ್ಟು ಕಾಳಜಿಯಿಂದಿರಬೇಕು. ನಾವು ಸ್ವಲ್ಪ ದೂರ ಹೋಗಬಹುದೇ ವಿನಾ ಬಹಳಷ್ಟು ದೂರ ಹೋಗಲು ಸಾಧ್ಯವಿಲ್ಲ. ನಮ್ಮ ಸೈನ್ಯವನ್ನು ನಮ್ಮೊಂದಿಗೆ ನಾವು ತೆಗೆದುಕೊಂಡು ಹೋಗಬೇಕು. (6-1). ಕನರ್ಾಟಕ ಸರಕಾರದ ಭೂಸುಧಾರಣೆಯ ಶಾಸನವನ್ನು ಶ್ರೀ ವಿಶ್ವೇಶತೀರ್ಥರು ಬೆಂಬಲಿಸಿದರು. ಶ್ರೀ ಕಡಿದಾಳ್ ಮಂಜಪ್ಪನವರನ್ನು ಭೇಟಿಯಾಗಿ ತನ್ನ ಅಭಿಪ್ರಾಯವನ್ನು ತಿಳಿಸಿದರು. (8-8). ದಲಿತರಿಗಾಗಿ ಇರುವ ಮೀಸಲಾತಿಯನ್ನು ಸಮಥರ್ಿಸಿದ ಶ್ರೀ ವಿಶ್ವೇಶತೀರ್ಥರು ಮೀಸಲಾತಿಯ ವಿರೋಧವನ್ನು ವಿರೋಧಿಸಿದರು. (9-2) ಕೈಗಾ ಹೋರಾಟದಂಥ ಪರಿಸರ ರಕ್ಷಣೆಯ ಚಳವಳಿಯಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ. ಬರಗಾಲಪೀಡಿತರಿಗೆ ಪೇಜಾವರ ಶ್ರೀಗಳು ನೀಡಿದ ನೆರವಿನ ವಿವರಗಳು ಬಿ.ಆರ್. ನಾಡಗೌಡ (9-11), ಎ, ಹರಿದಾಸ ಭಟ್ಟ (6-15) ಹಾಗೂ ವಾದಿರಾಜ ಪಂಚಮುಖಿಯವರ (6-12) ಲೇಖನಗಳಲ್ಲಿವೆ. ಪೀಠಾಧಿಪತಿಗಳಾಗಿ ಪೇಜಾವರ ಸ್ವಾಮೀಜಿಯವರು ಮಾಡಿದ ಇನ್ನೂ ಕೆಲವು ಸುಧಾರಣೆಗಳನ್ನು ಸಮಾಜಶಾಸ್ತ್ರಜ್ಞ ಪ್ರೊ ಪಿ. ಶ್ರೀಪತಿ ತಂತ್ರಿಯವರು ತನ್ನ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ (9-14). ಸಂಪ್ರದಾಯವನ್ನು ಮುರಿದು, ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯತೀರ್ಥರನ್ನು ಪಲಿಮಾರು ಮಠದ ಪೀಠಾಧಿಪತಿಯಾಗಿ ನೇಮಿಸುವುದರಲ್ಲಿ ಶ್ರೀ ವಿಶ್ವೇಶತೀರ್ಥರು ಮಹತ್ವದ ಪಾತ್ರ ವಹಿಸಿದರು. (ವಿವರಗಳಿಗಾಗಿ ನೋಡಿ - ಸಂಗೊಳ್ಳಿ, ಎನ್.ಎಸ್. - 'ಉಡುಪಿ ಶ್ರೀ ಕೃಷ್ಣ ಮಠದ ಖಟ್ಲೆ, ತೀಪರ್ು, ಗದಗ, 1982). ಬಾಲಸನ್ಯಾಸದ ಕಟ್ಟುನಿಟ್ಟಿನ ಸಂಪ್ರದಾಯವನ್ನು ನಾಜೂಕಾಗಿ ಸಡಿಲಿಸಿ ಯೌವನದ ಬಳಿಕವೇ ಸನ್ಯಾಸ ದೀಕ್ಷೆ ನೀಡುವ ಕ್ರಮವನ್ನು ಆರಂಭಿಸಿದರು. ಶೃಂಗೇರಿ ಸ್ವಾಮಿಗಳನ್ನು, ವೀರಶೈವ ಪೀಠಾಧಿಪತಿಗಳನ್ನು ತನ್ನ ಸೌಹಾರ್ದತೆಯ ಕಕ್ಷೆಯೊಳಗೆ ಸ್ವಾಗತಿಸಿದರು. ಇದು ಹಿಂದೂ ಧರ್ಮದ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಲು ಪೀಠಾಧಿಪತಿಗಳ ಮಟ್ಟದಲ್ಲಿ ಇಟ್ಟ ಮೊದಲ ಹೆಜ್ಜೆಯಾಗಿತ್ತು. (6-14) ತನ್ನ ಪಾಠ-ಪ್ರವಚನ, ಬರವಣಿಗೆ, ಸಂಸ್ಥೆಗಳ ಸ್ಥಾಪನೆ-ಚಾಲನೆ, ಸಭೆ ಸಮಾರಂಭಗಳ ಆಯೋಜನೆ, ಪಂಡಿತರ ಪೋಷಣೆ-ಪ್ರೋತ್ಸಾಹ, ಪ್ರಕಟಣೆ-ಪ್ರಕಾಶನಗಳ ಮೂಲಕ ಮಾಧ್ವ ಸಿದ್ಧಾಂತಕ್ಕೆ ಶ್ರೀ ವಿಶ್ವೇಶತೀರ್ಥರು ನೀಡಿರುವ ಕೊಡುಗೆಯನ್ನು ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಮೀಕ್ಷಿಸಿದ್ದಾರೆ. (6-9).
'ಪ್ರಗತಿಶೀಲ ಸಮಾಜ ಸುಧಾರಕ' ರಾಮಜನ್ಮಭೂಮಿ ಪ್ರಕರಣದಲ್ಲಿ ತನ್ನ ಶಾಂತಿ ಪ್ರಯತ್ನಗಳು ವಿಫಲವಾದುದನ್ನು ಶ್ರೀ ವಿಶ್ವೇಶತೀರ್ಥರು ತನ್ನ ಆತ್ಮಕಥನದಲ್ಲಿ ಹೀಗೆ ವಿವರಿಸಿದ್ದಾರೆ - ರಾಮಜನ್ಮಭೂಮಿಯನ್ನು ಸಂತರಿಗೆ ಒಪ್ಪಿಸಬೇಕು. ಅಲ್ಲಿದ್ದ ಮಸೀದಿಯನ್ನು ಒಡೆಯದೆ ಹಾಗೆಯೇ ಉಳಿಸಿಕೊಂಡು ದೇವಸ್ಥಾನದ ರೂಪು ಬರುವಂತೆ ಕೆಲವೊಂದು ಬದಲಾವಣೆಗಳನ್ನು ಮಾತ್ರ ಮಾಡುವುದು. ಇದು ಕಾಂಚಿ ಶಂಕರಾಚಾರ್ಯರೂ ನಾವೂ ಆಲೋಚಿಸಿ ರೂಪಿಸಿದ ಸೂತ್ರವಾಗಿತ್ತು. ಮಸೀದಿಯನ್ನು ಒಡೆಯದಿರುವುದರಿಂದ ಮುಸಲ್ಮಾನರ ಮನಸ್ಸಿಗೂ ಆಘಾತವಾಗುವುದಿಲ್ಲ. ಅವರನ್ನೂ ಇದಕ್ಕೆ ಒಪ್ಪಿಸಬಹುದೆಂದು ಅನೇಕ ರಾಜಕಾರಣಿಗಳ ಅಭಿಪ್ರಾಯವಾಗಿತ್ತು. ಅನಂತರದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ಹಿಂದು ಮುಸ್ಲಿಂ ಸಂತರ ವಿಚಾರವಿನಿಮಯ ಸಭೆಯನ್ನು ಏರ್ಪಡಿಸಲು ಪ್ರಯತ್ನಿಸಿದೆ. ಆಂಧ್ರಭವನದಲ್ಲಿ ಆಂಧ್ರ ರಾಜ್ಯಪಾಲ ಕೃಷ್ಣಕಾಂತಜಿ ಮತ್ತು ಬಿಹಾರದ ರಾಜ್ಯಪಾಲ ಸಲೀಮರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಿತು. ಬಹಳ ಸೌಹಾರ್ದ ವಾತಾವರಣದಲ್ಲಿಯೇ ಈ ಸಭೆ ನಡೆಯಿತು. ನನ್ನ ಜೊತೆಗೆ ವಿಶ್ವ ಹಿಂದೂ ಪ್ರಮುಖ ಸಂತರಾದ ಸತ್ಯಮಿತ್ರಾನಂದಜಿ, ಸ್ವಾಮೀ ಚಿನ್ಮಯಾನಂದ ಮುಂತಾದವರೂ ಭಾಗವಹಿಸಿದ್ದರು. ಲಖನೋದ ಆಲಿಮಿಯಾನ್ ಮುಂತಾದ ರಾಷ್ಟ್ರದ ಪ್ರಮುಖ ಮುಸ್ಲಿಂ ಸಂತರು ಬಂದಿದ್ದರು. ನಾವು ಸನ್ಯಾಸಿಗಳು, ಭಿಕ್ಷೆ ಬೇಡುವುದು ಧರ್ಮ, ರಾಮಜನ್ಮಭೂಮಿಯ ಜಾಗದಲ್ಲಿರುವ ಬಾಬ್ರಿ ಮಸೀದಿಯನ್ನು ನಮಗೆ ಬಿಟ್ಟುಕೊಡಿ ಎಂದು ಇಡೀ ಮುಸ್ಲಿಂ ಸಮಾಜದಲ್ಲಿ ನಾವು ಭಿಕ್ಷೆಯನ್ನು ಕೇಳುತ್ತೇವೆಂದು ಹಿಂದೂ ಸಂತರು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಮುಸ್ಲಿಂ ಸಂತರಿಂದ ಈ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಯೇ ಬಂದಿತು. ಅವರು ಈ ಬೇಡಿಕೆಯನ್ನು ನಿರಾಕರಿಸಲಿಲ್ಲ. ಮುಸಲ್ಮಾನರಿಗೆ ಆ ಪ್ರದೇಶದಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡುವಿರಾ? ಎಂದು ಮುಸ್ಲಿಂ ಸಂತರು ನಮ್ಮಲ್ಲಿ ಪ್ರಶ್ನಿಸಿದರು. ಅವಕಾಶ ಕೊಡಲು ನಾವು ಸಂತೋಷದಿಂದ ಒಪ್ಪಿದೆವು. ವಿವಾದಿತ ಪ್ರದೇಶದಲ್ಲಿ ಕರಸೇವೆ ಕಾರ್ಯಕ್ರಮವನ್ನು ಮೊದಲು ಸ್ಥಗಿತಗೊಳಿಸುವಂತೆ ಬಿಹಾರದ ರಾಜ್ಯಪಾಲ ಸಲೀಮರು ಸೂಚಿಸಿದರು. ನಮ್ಮ ಬೇಡಿಕೆಯನ್ನು ಮುಸ್ಲಿಂ ಸಂತರು ಸ್ವೀಕರಿಸಿ ವಿವಾದವನ್ನು ಹಿಂತೆಗೆದುಕೊಂಡರೆ ಅದು ವಿವಾದಿತ ಪ್ರದೇಶವೇ ಆಗಲಾರದು. ಆದುದರಿಂದ ಕರಸೇವೆಯನ್ನು ನಿಲ್ಲಿಸುವ ಆವಶ್ಯಕತೆಯಿಲ್ಲವೆಂದು ನಾನು ಪ್ರತಿಪಾದಿಸಿದೆ. ಕೊನೆಗೆ ತಾತ್ವಿಕವಾಗಿ ಅವರು ನಮ್ಮ ಬೇಡಿಕೆಯನ್ನು ಸ್ವೀಕರಿಸಿದರು. ಆದರೆ ಮುಸ್ಲಿಂ ಸಮಾಜವು ಇದನ್ನು ಒಪ್ಪುವಂತೆ ಪೂರ್ವಸಿದ್ಧತೆಯನ್ನು ಮಾಡಬೇಕಾಗಿದೆ. ಆದ್ದರಿಂದ ಕಾಲಾವಕಾಶ ಬೇಕೆಂದು ಬಯಸಿದರು. ಈ ವಿವಾದವನ್ನು ಬಗೆಹರಿಸಲು ಹಿಂದೂ-ಮುಸ್ಲಿಂ ಸಂತರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲಾಯಿತು. ಅಷ್ಟರಲ್ಲಿ ಬಿಹಾರಿನಲ್ಲಿ ಅದ್ವಾನಿ-ರಥಯಾತ್ರೆಯನ್ನು ತಡೆದು ಅದ್ವಾನಿಯವರ ಬಂಧನ, ವಿ.ಪಿ.ಸಿಂಗ್ ಸರಕಾರದ ಪತನ ಮುಂತಾದ ಘಟನೆಗಳು ಸಂಭವಿಸಿದ್ದರಿಂದ ಆ ಸಮಿತಿಯ ಸಮಾವೇಶವೇ ನಡೆಯಲಿಲ್ಲ. ಹೀಗಾಗಿ ರಾಮಜನ್ಮಭೂಮಿಯ ಬಗ್ಗೆ ನಮ್ಮ ಶಾಂತಿ ಪ್ರಯತ್ನವು ವಿಫಲವಾಯಿತು. (2-1) ರಾಜಾರಾಮ ತೋಳ್ಪಾಡಿಯವರು ಶ್ರೀ ವಿಶ್ವೇಶತೀರ್ಥರ ರಾಜಕೀಯ ಒಲವುಗಳನ್ನು ಕುರಿತ ಲೇಖನದಲ್ಲಿ ಮೂರು ಅಂಶಗಳನ್ನು ಗುರುತಿಸಿದ್ದಾರೆ. ಒಂದು-ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಬಗೆಗಿನ ಅವರ ಅಚಲವಾದ ವಿಶ್ವಾಸ. ಎರಡು-ಗಾಂಧೀಜಿಯವರ ವಿಚಾರಗಳ ಬಗೆಗಿನ ಅವರ ಅಪರಿಮಿತವಾದ ಗೌರವ, ಮೂರು-ಸಮಾಜವಾದದ ಕುರಿತು ವಿಶೇಷವಾಗಿ ಜಯಪ್ರಕಾಶ್ ನಾರಾಯಣ್ ಪ್ರತಿಪಾದಿಸಿದ ವಿಚಾರಗಳ ಕುರಿತು ಅವರ ಕಾಳಜಿ. ಶ್ರೀ ವಿಶ್ವೇಶತೀರ್ಥರು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡಿದ್ದಾರೆ. ಶ್ರೀಮತಿ ಇಂದಿರಾ ಗಾಂಧಿಯವರ ಕಾಲದ ತುತರ್ು ಪರಿಸ್ಥಿತಿಯನ್ನು ಪ್ರತಿಭಟಿಸಿ ಅವರು ಬರೆದ ಪತ್ರ ಈ ಗ್ರಂಥದಲ್ಲಿದೆ (7-1). ಶ್ರೀ ವಿಶ್ವೇಶತೀರ್ಥರನ್ನು, ಗಾಂಧೀಜಿಯ ಅಹಿಂಸೆಯ ಪರಿಕಲ್ಪನೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಒಂದು ಪರಿಷ್ಕೃತ ರೂಪದಲ್ಲಿ ಒಪ್ಪಿಕೊಳ್ಳುವ ಓರ್ವ 'ಮೃದು ಹಿಂದುತ್ವವಾದಿ' ಎಂದು ಪರಿಗಣಿಸುವ ರಾಜಾರಾಮ ತೋಳ್ಪಾಡಿಯವರು, ಜಾತೀಯತೆ ಪ್ರತಿಪಾದಿಸುವ ಸಂಕುಚಿತ ದೃಷ್ಟಿಯನ್ನು ತೊಲಗಿಸುವ ನೆಲೆಯಲ್ಲಿ ಅವರು ನಡೆಸಿದ ಪ್ರಯತ್ನಗಳು, ದಲಿತರು ಹಾಗೂ ಸಮಾಜದ ಇತರ ಹಿಂದುಳಿದ ವರ್ಗಗಳ ಕುರಿತಂತೆ ಅವರ ಔದಾರ್ಯಪೂರ್ಣವಾದ ನಿಲುವು, ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳ ಕುರಿತು ಅವರ ಪ್ರತಿರೋಧ, ಸ್ವಾಮೀಜಿಯವರನ್ನು ಒಬ್ಬ ಪ್ರಗತಿಶೀಲ ಸಮಾಜ ಸುಧಾರಕನನ್ನಾಗಿ ಗುರುತಿಸಲು ನಮ್ಮನ್ನು ಒತ್ತಾಯಿಸುತ್ತದೆ ಎನ್ನುತ್ತಾರೆ (7-2).
ಶಿಷ್ಯ-ವಾತ್ಸಲ್ಯ ಹದಿನೇಳು ಸುಧಾ ಮಂಗಲೋತ್ಸವಗಳನ್ನು ನಡೆಸಿರುವ ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಕುಲಪತಿಗಳಾಗಿರುವ ಶ್ರೀ ವಿಶ್ವೇಶತೀರ್ಥರು ಗಹನವಾದ ತಾತ್ವಿಕ ವಿಷಯಗಳನ್ನು ಸರಳವಾಗಿ ವಿವರಿಸಬಲ್ಲ ಬೋಧಕರಾಗಿ ಪ್ರಸಿದ್ಧರು. ಅವರ ಬೋಧನ ಕ್ರಮ ಮತ್ತು ಶಿಷ್ಯವಾತ್ಸಲ್ಯಗಳನ್ನು ಕುರಿತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಎ.ವಿ. ನಾಗಸಂಪಿಗೆ, ಸಗ್ರಿ ರಾಘವೇಂದ್ರ ಉಪಾಧ್ಯಾಯ, ಡಾ ರಾಮಕೃಷ್ಣ ಜೋಶಿ, ಕೆ. ವಿಠ್ಠಲೋಪಾಧ್ಯಾಯ, ಅರುಣಾಚಲ ಹೆಬ್ಬಾರ್ ಹಾಗೂ ಡಿ. ಸುದರ್ಶನ ಜೋಯಿಸರು ಬರೆದಿರುವ ಲೇಖನಗಳು ಈ ಗ್ರಂಥದ ಎಂಟನೆಯ ಭಾಗದಲ್ಲಿವೆ. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಶ್ರೀ ವಿಶ್ವೇಶತೀರ್ಥರು ಮಾಡಿದ ಜಗನ್ನಾಥನ ಶೃಂಗಾರರಸ ಪ್ರಧಾನವಾದ 'ರಸಗಂಗಾಧರ' ಪಾಠ ಕೇಳಿದ್ದನ್ನು ಡಿ. ಸುದರ್ಶನ್ ಜೋಯಿಸ್ ನೆನಪಿಸಿಕೊಂಡಿದ್ದಾರೆ. (8-8) ಪೂರ್ಣಪ್ರಜ್ಞ ವಿದ್ಯಾಪೀಠದ ಒಬ್ಬ ವಿದ್ಯಾಥರ್ಿ ಪಾಠ-ಪ್ರವಚನಗಳಲ್ಲಿ ಅನಾಸಕ್ತನಾದ. ಅವನನ್ನು ತಿದ್ದಲು ಸಾಧ್ಯವಾಗದೆ ಪ್ರಾಧ್ಯಾಪಕರು ಸೋಲೊಪ್ಪಿಕೊಂಡರು. ಶ್ರೀ ವಿಶ್ವೇಶತೀರ್ಥರು ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಕೊನೆಗೆ ಸೋಲೊಪ್ಪಿಕೊಂಡರು. (8-5) ಮಾತೃ ವಾತ್ಸಲ್ಯದಿಂದ ತುಂಬಿದ ಪೇಜಾವರ ಶ್ರೀಗಳ ಶಿಷ್ಯ-ವಾತ್ಸಲ್ಯವನ್ನು ಕುರಿತು ಹೆಚ್ಚಿನವರು ಪ್ರಸ್ತಾವಿಸಿದ್ದಾರೆ. ಒಮ್ಮೆ ಮಠದಲ್ಲಿ ಆಥರ್ಿಕ ದು:ಸ್ಥಿತಿ ಇದ್ದಾಗ ಶ್ರೀ ವಿಶ್ವೇಶತೀರ್ಥರು ಮುಸುಂಬಿ ಕುಡಿಯಲು ನಿರಾಕರಿಸಿ, 'ಮುಸುಂಬಿ ತರಬೇಡಿ. ಆ ಹಣವನ್ನು ಮಠದ ವಿದ್ಯಾಥರ್ಿಗಳ ಊಟದ ಖಚರ್ಿಗೆ ತೆಗೆದಿರಿಸಿ' ಎಂದರಂತೆ. (8-9) ತನ್ನ ಸಂಚಾರದ ಅವಧಿಯಲ್ಲೂ ಶ್ರೀ ವಿಶ್ವೇಶತೀರ್ಥರು ವಿದ್ಯಾಥರ್ಿಗಳಿಗೆ ಪಾಠ ಮಾಡುತ್ತಾರೆ. (6-9) 'ಸೀತಾಯಣ'ದ ಪೋಲಂಕಿ ರಾಮಮೂತರ್ಿಯವರೊಡನೆ ಶ್ರೀ ವಿಶ್ವೇಶತೀರ್ಥರು ನಡೆಸಿದ ಸಂವಾದದ ವಿವರಗಳು ಶ್ರೀ ವಿಶ್ವಪ್ರಸನ್ನತೀರ್ಥರ (8-1) ಹಾಗೂ ಪ್ರೊ ಶ್ರೀಪತಿ ತಂತ್ರಿಗಳ (9-14) ಲೇಖನಗಳಲ್ಲಿವೆ. ಸಂಸ್ಕೃತ ಗೊತ್ತಿಲ್ಲದೆ ಭಾಷಾಂತರದ ಮೂಲಕ ವಾಲ್ಮೀಕಿ ರಾಮಾಯಣವನ್ನು ಅಥರ್ೈಸವಾಗ ಆಗಿರುವ ಪ್ರಮಾದಗಳನ್ನು ಶ್ರೀ ವಿಶ್ವೇಶತೀರ್ಥರು ಪೋಲಂಕಿಯವರಿಗೆ ವಿವರಿಸಿದರು. ಪೋಲಂಕಿಯವರು ತನ್ನ ತಪ್ಪುಗಳನ್ನು ಒಪ್ಪಿಕೊಂಡರು.
ಲೋಕಾಂತಪ್ರಿಯ 'ಪೇಜಾವರ ಪ್ರಶಸ್ತಿ'ಯ ಒಂಬತ್ತನೆಯ ಭಾಗದಲ್ಲಿ ಶ್ರೀ ವಿಶ್ವೇಶತೀರ್ಥರ ಐದು ಸಂದರ್ಶನಗಳಿವೆ. ಲಕ್ಷ್ಮಣರೇಖೆಯನ್ನು ದಾಟಿದ ಪೀಠಾಧಿಪತಿಯಾಗಿ ಶ್ರೀ ವಿಶ್ವೇಶತೀರ್ಥರು ಎದುರಿಸಿದ ಪ್ರಶ್ನೆಗಳು, ಅವುಗಳಿಗೆ ನೀಡಿರುವ ಉತ್ತರಗಳು ಎ. ಹರಿದಾಸ ಭಟ್ಟ ಹಾಗೂ ಗೋಪಾಡಿ ರಾಘವೇಂದ್ರ ಭಟ್ಟರ ಸಂದರ್ಶನಗಳಲ್ಲಿವೆ. ಧಾಮರ್ಿಕ, ಸಾಮಾಜಿಕ ಆಚರಣೆಗಳಲ್ಲಿರುವ ಲಿಂಗಾಧಾರಿತ ಅಸಮಾನತೆಯನ್ನು ಕುರಿತ ಶ್ರೀ ವಿಶ್ವೇಶತೀರ್ಥರ ಅಭಿಪ್ರಾಯಗಳು ಡಾ (ಶ್ರೀಮತಿ) ಶ್ರೀರಾಮ ಹೆಲರ್ೆಕರ ಅವರ ಲೇಖನದಲ್ಲಿವೆ. (9-2) ಬಾಲಸನ್ಯಾಸ, ಶಿಕ್ಷಣದಲ್ಲಿ ಕನ್ನಡ-ಸಂಸ್ಕೃತಗಳ ಸ್ಥಾನ-ಮಾನ, ಮೀಸಲಾತಿ, ತುತರ್ುಪರಿಸ್ಥಿತಿ ಈ ವಿಷಯಗಳನ್ನು ಕುರಿತ ಪೇಜಾವರ ಸ್ವಾಮೀಜಿಯವರ ಅಭಿಪ್ರಾಯಗಳು ಪ್ರೊ ಕು.ಶಿ. ಹರಿದಾಸ ಭಟ್ಟರಿಗೆ ನೀಡಿದ ಸಂದರ್ಶನದಲ್ಲಿವೆ. (9-1) 'ನಿಮಗೆ ಏಕಾಂತ ಇಷ್ಟವೋ ಅಥವಾ ಲೋಕಾಂತವೋ?' ಎಂಬ ಪ್ರಶ್ನೆಗೆ ಶ್ರೀ ವಿಶ್ವೇಶತೀರ್ಥರು ಹೀಗೆ ಉತ್ತರ ನೀಡಿದ್ದಾರೆ- ಇದು ಎರಡೂ ಬೇಕಾಗುತ್ತದೆ. ಕೆಲವೊಮ್ಮೆ ಚಿಂತನ-ಮಂಥನ ಬಯಸುವಾಗ ಎಲ್ಲರಿಂದ ಪ್ರತ್ಯೇಕವಾಗಿ ಇರಬೇಕು ಅಂಥ ನನಗೆ ಅನ್ನಿಸುತ್ತದೆ. ಆದರೆ ಬರೀ ಏಕಾಂತವೂ ನನ್ನ ಸ್ವಭಾವಕ್ಕೆ ಒಗ್ಗುವುದಿಲ್ಲ. ಸಮಾಜದ ಮಧ್ಯೆ ಇರುವುದರಿಂದಲೇ ನನಗೆ ಸನ್ಯಾಸಿಯಾಗಿ ಒಳ್ಳೆಯ ರೀತಿಯ ಬದುಕನ್ನು ಬದುಕಲು ಹೆಚ್ಚು ಅನುಕೂಲವಾಗಿದೆಯೆಂದು ನಾನು ಭಾವಿಸುತ್ತೇನೆ. (9-4). 'ಕೊಟ್ಟ ಕುದುರೆಯನೇರಿ ಗಡಿದಾಟಿದ' ಶ್ರೀ ವಿಶ್ವೇಶತೀರ್ಥರ ಪೂರ್ಣದೃಷ್ಟಿ ಅನಿಕೇತನವಾಗಿ, ವಿಶ್ವವ್ಯಾಪ್ತಿಯಾಗುತ್ತದೆ- ಅಲ್ಲದೆ ಕೇವಲ ಹಿಂದೂ ಸಮಾಜಕ್ಕೆ, ತತ್ತ್ವಜ್ಞಾನಕ್ಕೆ ಸೀಮಿತರಾಗದೆ ಪ್ರಪಂಚದ ಮಾನವರಾಗಿ ಕೂಡ ಸ್ಪಂದಿಸಬೇಕು. ಮನುಷ್ಯರಿಗೆ, ಪ್ರಾಣಿಗಳಿಗೆ ಆಗುವ ಆಘಾತಗಳಿಗೆ ಕೂಡ ಸ್ಪಂದಿಸಬೇಕು. ಕೈಗಾ ಚಳವಳಿಯಂತಹ ಚಳವಳಿಯಲ್ಲಿ ನಾವು ತೊಡಗಿದಾಗ ಜನತೆ ನಮ್ಮ ಕಳಕಳಿಯನ್ನು ಅರ್ಥಮಾಡಿಕೊಳ್ಳಬೇಕು. (6-8) ಈ ಗ್ರಂಥದ ಯೋಜನೆಯನ್ನು ಸಿದ್ಧಪಡಿಸುವಾಗ ನಾವು ಶ್ರೀ ವಿಶ್ವೇಶತೀರ್ಥರನ್ನು ಭೇಟಿಯಾಗಿ, ಅವರ ಮಾರ್ಗದರ್ಶನದಲ್ಲಿರುವ ಸುಮಾರು ಅರವತ್ತು ಶೈಕ್ಷಣಿಕ ಸಾಮಾಜಿಕ, ಧಾಮರ್ಿಕ ಸಂಸ್ಥೆಗಳ ಪಟ್ಟಿ ತಯಾರಿಸಿದೆವು. (11-5) ಆ ಎಲ್ಲ ಸಂಸ್ಥೆಗಳ ಸಂಕ್ಷಿಪ್ತ ಪರಿಚಯವನ್ನು ಈ ಗ್ರಂಥದಲ್ಲಿ ಪ್ರಕಟಿಸಬೇಕೆಂಬ ನಮ್ಮ ಯೋಜನೆ ಯಶಸ್ವಿಯಾಗಲಿಲ್ಲ. ಈ ಗ್ರಂಥ ಪ್ರಕಟಣೆಗಿದ್ದ ಕಾಲಮಿತಿ ಹಾಗೂ ಪೇಜಾವರ ಮಠದ ಸಂಸ್ಥೆಗಳನ್ನು ನೋಡಿಕೊಳ್ಳುವ ಒಂದು ಕೇಂದ್ರೀಕೃತ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ. ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಾರ್ಗದರ್ಶನ ಪಡೆಯುತ್ತಿರುವ ಹದಿನಾಲ್ಕು ಸಂಸ್ಥೆಗಳ ಪರಿಚಯ ಹಾಗೂ ಛಾಯಾಚಿತ್ರಗಳು ಈ ಗ್ರಂಥದ ಹತ್ತನೆಯ ಭಾಗದಲ್ಲಿವೆ. ಅನುಬಂಧದಲ್ಲಿ ಪೇಜಾವರಶ್ರೀಗಳ ಜೀವನ-ಸಾಧನೆಗಳಿಗೆ ಸಂಬಂಧಪಟ್ಟ ಹಲವು ಉಪಯುಕ್ತ ಮಾಹಿತಿಗಳಿವೆ. ಶ್ರೀ ವಿಶ್ವೇಶತೀರ್ಥರ ಸಾಧನೆ, ವೇದಾಂತದ ಜೀವನ ವಿಮುಖ ರೂಪವನ್ನು ಮರೆಮಾಡಿ, ತಗ್ಗಿಸಿ ಜೀವನಪರವಾದ ರೂಪಕ್ಕೆ ಒತ್ತುಕೊಟ್ಟು ಬೆಳಗಿಸಿದ ರಾಜಾರಾಮ ಮೋಹನ್ ರಾಯ್, ದಯಾನಂದ ಸರಸ್ವತಿ ಮೊದಲಾದವರ ಕೆಲಸದ ಮುಂದುವರಿಕೆ ಎನ್ನುವ ಡಾ ಪ್ರಭಾಕರ ಜೋಶಿಯವರ ಹಾರೈಕೆ, ಈ ಗ್ರಂಥದ ಸಂಪಾದಕರ ಹಾರೈಕೆಯೂ ಹೌದು- ಒಂದು ಹೆಜ್ಜೆ ಮುಂದಿಟ್ಟವರು ನಿಶ್ಚಿತವಾಗಿಯೂ ಪ್ರಶಂಸಾರ್ಹರೇ. ಶ್ರೀ ವಿಶ್ವೇಶತೀರ್ಥರಿಗೆ ಇರುವ ಅಸಾಮಾನ್ಯ ಪ್ರಭಾವ, ಸಾಮಥ್ರ್ಯಗಳಿಂದ ಅವರು ಇನ್ನೂ ಸ್ವಲ್ಪ ಮುಂದೆ ಹೋಗಬಹುದಿತ್ತು. ಹೋಗಬೇಕು ಎಂದು ನಿರೀಕ್ಷೆಯಿದ್ದರೆ ಅದು ನ್ಯಾಯವಾದದ್ದು. ಈ ನಿರೀಕ್ಷೆಯನ್ನು ಪೂರೈಸುವ ಹೊಸ ಉಪಕ್ರಮಗಳು ಅವರ ಸನ್ಮಾನ ಷಷ್ಠ್ಯಬ್ದಿಯ ಸಂಕಲ್ಪವಾಗಲಿ. (9-13) ಶ್ರೀ ವಿಶ್ವೇಶತೀರ್ಥರು, ತುತರ್ು ಪರಿಸ್ಥಿತಿಯನ್ನು ಹೇರಿ ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಬರೆದ ಪತ್ರದಲ್ಲಿ ಸಂಸ್ಕೃತ ಸುಭಾಷಿತವೊಂದನ್ನು ನೆನಪಿಸಿದ್ದರು.
ಸುಲಭಾ: ಪುರುಷಾ: ರಾಜನ್ ಸತತಂ ಪ್ರಿಯವಾದಿನ: ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭ:
(ಮುಖದೆದುರು ಸಿಹಿಯಾಗಿ ಮಾತನಾಡುವ ಜನ ಹೇರಳವಾಗಿ ಸಿಗುತ್ತಾರೆ. ಆದರೆ, ಕಹಿಯಾದರೂ ವಿಹಿತವಾದುದನ್ನು ಹೇಳುವವರಾಗಲಿ, ಕೇಳುವವರಾಗಲಿ ಸಿಗುವುದು ಕಷ್ಟ.) 'ಪೇಜಾವರ ಪ್ರಶಸ್ತಿ' ಗ್ರಂಥದ ಓದುಗರೂ ಈ ಸುಭಾಷಿತದ ಒಡಲಾಳದ ಆಶಯವನ್ನು ನೆನಪಿಡಬೇಕೆಂದು ನಾವು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.*** 'ಪೇಜಾವರ ಸ್ವಾಮಿಗಳಿಗೆ ಚಿನ್ನದ ತುಲಾಭಾರ ಮಾಡುವಷ್ಟೇ ಮುಖ್ಯ ಅವರ ವ್ಯಕ್ತಿತ್ವದ ಸಮಗ್ರ ಪರಿಚಯ ನೀಡುವ ಗ್ರಂಥವೊಂದರ ಪ್ರಕಟಣೆ ಎಂದು ತಿಳಿಸಿದವರು ಧರ್ಮಸ್ಥಳದ ಧಮರ್ಾಧಿಕಾರಿಗಳಾದ, ಶ್ರೀ ವಿಶ್ವೇಶತೀರ್ಥರ ಪೀಠಾರೋಹಣದ ವಜ್ರ ಮಹೋತ್ಸವ ಸಮಿತಿಯ ಕಾಯರ್ಾಧ್ಯಕ್ಷರಾದ ರಾಜಷರ್ಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು. ಶ್ರೀ ಹೆಗ್ಗಡೆಯವರ ಕನಸನ್ನು ನಮಗೆ ವಿವರಿಸಿ, ಈ ಕೆಲಸಕ್ಕೆ ನಮ್ಮನ್ನು ತೊಡಗಿಸಿದವರು ಪ್ರೊ ಕು.ಶಿ. ಹರಿದಾಸ ಭಟ್ಟರು. ಈ ಗ್ರಂಥದ ಪ್ರಕಾಶಕರು ಬೆಂಗಳೂರಿನ, ಶ್ರೀ ವಿಶ್ವೇಶತೀರ್ಥರ ಪೀಠಾರೋಹಣ ವಜ್ರಮಹೋತ್ಸವ ಸಮಿತಿಯವರು. (ಗೌರವಾಧ್ಯಕ್ಷರು-ನಿವೃತ್ತ ಮುಖ್ಯ ನ್ಯಾಯಾಧೀಶರು ಶ್ರೀ ಎಂ.ಎನ್.ವೆಂಕಟಾಚಲಯ್ಯ, ಉಪಾಧ್ಯಕ್ಷರು-ಶ್ರೀ ಕೆ. ವಿಷ್ಣುಮೂತರ್ಿ ಎಕರ್ಾಡಿತ್ತಾಯ, ಪ್ರೊ ಕೆ.ಟಿ. ಪಾಂಡುರಂಗಿ, ಶ್ರೀ ಸದಾನಂದ ಎ. ಶೆಟ್ಟಿ, ಶ್ರೀ ಬಿ.ಆರ್. ಶೆಟ್ಟಿ, ಶ್ರೀ ಎನ್. ವಿನಯ ಹೆಗ್ಡೆ, ಶ್ರೀ ಬಿ. ಕೃಷ್ಣ ಭಟ್, ಶ್ರೀ ಕೆ. ಬಲರಾಮ ದಾಸ್, ಶ್ರೀ ಕೆ. ಶಂಕರ ರಾವ್, ಶ್ರೀ ಬಿ. ಗೋವಿಂದ ರಾವ್, ಖಚಾಂಚಿ-ಶ್ರೀ ಎಸ್.ಎಸ್. ಮಡಿ, ಕಾರ್ಯದಶರ್ಿಗಳು: ಶ್ರೀ ಪಿ.ಜಿ. ಬಾಗಿಲ್ತಾಯ, ಪ್ರೊ ಡಿ. ಪ್ರಹ್ಲಾದಾಚಾರ್ಯ, ಪ್ರೊ ಎನ್. ವಜ್ರಕುಮಾರ್, ಡಾ ಎಂ.ಎಸ್. ಆಳ್ವ, ಶ್ರೀ ಕೆ. ನಾರಾಯಣದಾಸ್, ಶ್ರೀ ಶ್ರೀಕಾಂತ ಕೆಮ್ತೂರ್, ಶ್ರೀ ಕೆ. ಎಲ್. ರಾಮನಾಥ್ ಭಟ್, ಶ್ರೀ ಯು. ಕೇಶವ ಆಚಾರ್). ಈ ಗ್ರಂಥದ ಮುಖಪುಟ ವಿನ್ಯಾಸ ರಚಿಸಿದವರು ಹಿರಿಯ ಕಲಾವಿದ ಶ್ರೀ ರಮೇಶ ರಾವ್, ಉಡುಪಿ. ಈ ಗ್ರಂಥದ ಸಂಪಾದನೆಯ ಸಂದರ್ಭದಲ್ಲಿ ನಮಗೆ ನೆರವು ನೀಡಿದವರು ಶ್ರೀ ರಘುರಾಮಾಚಾರ್ಯ ಪೇಜಾವರ ಮಠ, ಉಡುಪಿ, ಪ್ರೊ ನಿ. ಶ್ರೀಶ ಬಲ್ಲಾಳ, ಅಂಬಲಪಾಡಿ, ಉಡುಪಿ, ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯ ಸಂಸ್ಕೃತ ಕಾಲೇಜು, ಉಡುಪಿ, ಶ್ರೀ ಬನ್ನಂಜೆ ಗೋವಿಂದಾಚಾರ್ಯ, ಉಡುಪಿ, ಶ್ರೀ ಟಿ. ಮೋಹನದಾಸ ಪೈ, ಮಣಿಪಾಲ, ಶ್ರೀ ಟಿ. ಸತೀಶ ಯು. ಪೈ, ಮಣಿಪಾಲ ಪವರ್ ಪ್ರೆಸ್, ಮಣಿಪಾಲ, ಶ್ರೀ ಹರಿದಾಸ ಭಟ್ಟ, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು, ಹಾಗೂ ಪೇಜಾವರ ಸ್ವಾಮೀಜಿಯವರ ಮಾರ್ಗದರ್ಶನ ಪಡೆಯುತ್ತಿರುವ ಸಂಸ್ಥೆಗಳ ಆಡಳಿತಮಂಡಳಿಯವರು. ನಮ್ಮ ವಿನಂತಿಯ ಮೇರೆಗೆ ಈ ಗ್ರಂಥಕ್ಕಾಗಿ ಹೊಸ ಲೇಖನಗಳನ್ನು ಬರೆದುಕೊಟ್ಟವರು- ಡಾ ಎಂ. ಪ್ರಭಾಕರ ಜೋಶಿ, ಪ್ರೊ ಪಿ. ಶ್ರೀಪತಿ ತಂತ್ರಿ, ಶ್ರೀ ರಾಜಾರಾಮ ತೋಳ್ಪಾಡಿ, ಶ್ರೀ ಲಕ್ಷ್ಮೀಶ ತೋಳ್ಪಾಡಿ, ಶ್ರೀ ಎಂ.ಎನ್. ಪ್ರಭು, ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಡಾ ಬಿ.ಆರ್. ನಾಡಗೌಡ, ಶ್ರೀ ಶ್ರೀನಿವಾಸ ವರಖೇಡಿ, ಶ್ರೀ ವಾದಿರಾಜ ಪಂಚಮುಖಿ, ಶ್ರೀ ವಿಶ್ವಪ್ರಸನ್ನತೀರ್ಥರು, ಶ್ರೀ ವಿದ್ಯಾಪ್ರಸನ್ನತೀರ್ಥರು, ಡಾ ರಾಮಕೃಷ್ಣ ಜೋಶಿ, ಶ್ರೀ ಅರುಣಾಚಲ ಹೆಬ್ಬಾರ್, ಡಾ (ಶ್ರೀಮತಿ) ಶ್ರೀರಾಮ ಹೆಲರ್ೆಕರ, ಡಾ ಸಿ.ಎಚ್. ಶ್ರೀನಿವಾಸಮೂತರ್ಿ, ಶ್ರೀ ಎ. ಹರಿದಾಸ ಭಟ್ಟ, ಶ್ರೀ ಬಿ.ಎನ್. ರಾಘವೇಂದ್ರಾಚಾರ್ಯ, ಪ್ರೊ ಎಂ. ಆರ್. ಹೆಗಡೆ - ಇವರೆಲ್ಲರಿಗೂ ನಮ್ಮ ಕೃತಜ್ಞತೆಗಳು (ನೋಡಿ-ಅನುಬಂಧ 11-8). ಈ ಗ್ರಂಥದ ಸಂಪಾದಕರಾದ ನಾವು (ಮುರಳೀಧರ ಉಪಾಧ್ಯ ಹಿರಿಯಡಕ, ಹೆರಂಜೆ ಕೃಷ್ಣ ಭಟ್ಟ) ವಿದ್ಯಾಥರ್ಿಗಳಾಗಿದ್ದಾಗ, ಶ್ರೀ ವಿಶ್ವೇಶತೀರ್ಥರ ಪಯರ್ಾಯ ಕಾಲದಲ್ಲಿ ಮಠದಲ್ಲಿ ಊಟ ಮಾಡುತ್ತ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಬೆಳೆದವರು. ಅನ್ನದ ಋಣ ತೀರಿಸಲು ಸಾಧ್ಯವಿಲ್ಲ. ಅನ್ನದ ಋಣವನ್ನು ನೆನಪಿಸಿಕೊಂಡು, 'ಪೇಜಾವರ ಪ್ರಶಸ್ತಿ ಗ್ರಂಥವನ್ನು ಅಪರ್ಿಸುತ್ತ, ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಿಗೆ ಅಭಿವಂದನೆಗಳನ್ನು ಸಲ್ಲಿಸುತ್ತೇವೆ.
ಪೇಜಾವರ ಪ್ರಶಸ್ತಿ (1999)(ಸಂ. ಮುರಳೀಧರ ಉಪಾಧ್ಯ ಹಿರಿಯಡಕ, ಹೆರಂಜೆ ಕೃಷ್ಣ ಭಟ್ಟ)

No comments:

Post a Comment