stat Counter



Thursday, October 28, 2010

Nemichandra's YAD VASHEM (A Review)

Yad Vashem - A Novel in Kannada


By Nemichandra

- Muraleedhara Upadhya Hiriadka
(Translated by K.S. Somayaji)

Nemichandra is famous for her adventurous travelogues. “Ondu Kanasina Payana” (A Dream Journey) and “Peruvina Pavitra Kaniveyalli” (In the Sacred Valley of Peru) are her travelogues. “Nemichandrara Kathegalu” is the collection of the short stories she has penned so far.

“Yad Vashem” is the new name Nemichandra has given to the revised version of her novel which had earlier been serialized in a Kannada Weekly in the name “Nooru Savira Nenapugalu” (One hundred thousand memories). She had visited museums in Israel, Germany, America, and Netherlands for a preparatory study for her novel. “Twenty years ago the cemeteries of the Jews at Goripalya (in Bangaloe) had given birth to a story inside me. This was a story of a Jew girl who was forced to move from the land of Hitler to the land of Gandhi. Pursuing the story, I kept track of the Jews – to see for myself the history which witnessed the annihilate ion of 60 lakh Jews. Then Germany was in flames and the world was a mute spectator. Hitler can be born anywhere today – in America, in Germany, in Israel, even in India which professed non-violence. He can be born anywhere amidst us. This novel is brought out in the background of a belief that it is our responsibility to prevent the birth of a Hitler within us.”

 Yad Vashem is a monument in Jerusalem to the memory of the Jews who were the victims the Nazi holocaust. Rebecca and Hanna – the two sisters who survived the Nazi holocaust are the protagonists of the novel. Bangalore, Washington, Frankfurt in Germany, Berlin, Dachau, Tel Aviv in Israel and Jerusalem are the centres where the action of the story unfolds. The novel develops in the narrative technology of the first person singular in flashback mode.

Moses, a Jew scientist, was living in Berlin with his wife (Helena) and the children – two daughters (Rebecca, Hanna), a son (Isaac). In 1938, when the Nazis start ‘ethnic cleansing’ (forced removal of a particular ethnic group like getting rid of dirt) Moses flees German family to arrive in Netherlands. In 1940, following the invasion of Netherlands by the Nazi army, the wife of Moses, the elder daughter and the son become captives and are thrown into the labour camp at Dachau. Left behind, Moses bolts to Bangalore with the younger daughter Hanna and joins the Indian Institute of Science there. He dies of heart attack in 1945 and Hanna becomes an orphan. The depiction of the childhood and adolescent days of Hanna in the novel is touching.

Hanna becomes Anita without the religious conversion. She is now the daughter-in-law of the neighbouring household in Bangalore where she was given shelter and grew up.

The novel takes a new turn when Anita with her husband Vivek sets out for Germany and Israel in search of her missing mother, elder sister and the younger brother. Anita succeeds in finding her sister Rebecca in Tel Aviva. Rebecca digs out her bitter memories to recount the terrifying and sickening horror stories of the Nazi holocaust. The novel ends with Sabeeha, who had been rendered an orphan following the communal riots in Gujarat, becoming the foster daughter of the couple Vivek and Anita.

It may be said that Kuvempu’s concept of “Aniketana” (the ideal homeless-ness) has taken definite shape in the character portrayal of Anita who not only despises the pogrom committed by Nazis in the past, but also is disgusted at the prevailing senseless violence resulting in mass murders, resorted to by the Israel government. This novel which sheds light on the ancient Egyptian history reminds us of another Kannada novel “Mrityunjaya” by Niranjana.
  
In these days when the mass hysteria of religious intolerance plagues our society, Yad Vashem induces us to introspect. That “literature drives off everything inauspicious” is a dream linked to social responsibility. This dream is artistically depicted in the novel like ‘Menorah’ (a candelabrum with seven branches used in Jewish worship and regarded as a symbol of Judaism) of the Jews. It appears as if Anita of Yad Vashem is getting ready to encounter Lakshmi of S.L. Bhairappa’s novel “Avarana”. In this encounter Nemichandra’s unbiased love for life and her intellectual maturity dazzles. The desire implicit in Allama’s vachana “Kendada maleya karevalli udakavagirabeku” (One needs to be water where it is raining glowing embers) is reflected in Yad Vashem.

Yad Vashem is a novel every thinking youth of the new generation must read. It needs to be translated not only into all Indian languages, but also into English and Hebrew. A challenging script for cinema directors is inherent in this novel. The success achieved by Nemichandra for her maiden novel is commendable.

-------------------------------------------------------------------------------------------------------

Yad Vashem by Nemichanda – Anita Book House (2007)

Saturday, October 23, 2010

B.V. KARANTH'S CONTRIBUTION TO INDIAN THEATRE

ಬಿ. ವಿ. ಕಾರಂತರ ರಂಗನಿರ್ಮಿತಿ

ಮುರಳೀಧರ ಉಪಾಧ್ಯ ಹಿರಿಯಡಕ


ಬಿ.ವಿ. ಕಾರಂತರು ನಿರ್ದೇಶಿಸಿರುವ ಒಟ್ಟು ನಾಟಕಗಳ ಸಂಖ್ಯೆ ಇನ್ನೂರನ್ನು ದಾಟುತ್ತದೆ (ಅನುಬಂಧ -1). ದೆಹಲಿ, ಬೆಂಗಳೂರು, ಭೋಪಾಲ, ಹೆಗ್ಗೋಡು, ಉಡುಪಿ - ಹೀಗೆ ಭಾರತದ ಹತ್ತಾರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅವರು ನಾಟಕಗಳನ್ನು ನಿರ್ದೇಶಿಸಿದ್ದಾರೆ, ನಾಟಕ ಶಿಬಿರಗಳನ್ನು ನಡೆಸಿದ್ದಾರೆ. ಅವರ ಹೆಚ್ಚಿನ ರಂಗಕೃತಿಗಳು ಹಿಂದೀ ಮತ್ತು ಕನ್ನಡದಲ್ಲಿದ್ದುವು. ಮಲೆಯಾಳಂ, ಪಂಜಾಬಿ, ತೆಲುಗುಗಳಲ್ಲೂ ಅವರು ನಾಟಕ ನಿರ್ದೇಶಿಸಿದ್ದಾರೆ. ಅಲ್ಕಾಜಿ, ಹಬೀಬ್ ತನ್ಸೀರ್, ಪಣಿಕ್ಕರ್, ರತನ್ ತಿಯಾಮ್, ಕನ್ಹಯ್ಯಲಾಲ್, ಪ್ರಸನ್ನ - ಇವರು ಗುಣಮಟ್ಟದ ದೃಷ್ಟಿಯಿಂದ ಕಾರಂತರೊಂದಿಗೆ ಹೋಲಿಸಬಹುದಾದ, ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕ ನಿರ್ದೇಶಕರು. ಆದರೆ ರಂಗಕೃತಿಗಳ ಸಮೃದ್ಧಿ ಮತ್ತು ವಸ್ತು-ಭಾಷಾ ವೈವಿಧ್ಯಗಳಲ್ಲಿ ಬಿ.ವಿ. ಕಾರಂತರನ್ನು ಮೀರಿಸುವವರು ಯಾರೂ ಇಲ್ಲ.

ಬಿ.ಎಂ.ಶ್ರೀ, ಸಂಸ, 'ಜಡಭರತ' (ಜೆ.ಬಿ. ಜೋಶಿ), ಪು.ತಿ.ನ., ಮಾಸ್ತಿ, ಕುವೆಂಪು, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಮತ್ತು ಲಂಕೇಶರ ಕನ್ನಡ ನಾಟಕಗಳನ್ನು ಕಾರಂತರು ನಿರ್ದೇಶಿಸಿದ್ದಾರೆ. ಸಂಸ್ಕೃತದ ಕಾಳಿದಾಸ, ಭಾಸ, ಶೂದ್ರಕ, ವಿಶಾಖದತ್ತ, ಮತ್ತು ಬೋಧಾಯನರ ನಾಟಕಗಳು ಅವರ ರಂಗಕೃತಿಗಳಾಗಿವೆ. ಸಂಸ್ಕೃತದಲ್ಲಿ ಭವಭೂತಿಯ, ಕನ್ನಡದ ಕೈಲಾಸಂ ನಾಟಕಗಳನ್ನು ಅವರು ಆಯ್ಕೆ ಮಾಡಿಲ್ಲ. ಇಂಗ್ಲಿಷಿನ ಶೇಕ್ಸ್‌ಪಿಯರ್,ಬರ್ನಾಡ್ ಶಾ, ಗ್ರೀಕ್‍ನ ಈಸ್ಕಿಲಸ್, ಸೊಫೊಕ್ಲಿಸ್, ಇತಾಲಿಯನ್ ಭಾಷೆಯ ಪಿರಾಂಡೆಲ್ಲೊ, ಅಯನೆಸ್ಕೊ, ಫ್ರೆಂಚ್‍ನ ಮೋಲಿಯರ್, ಹಿಂದೀಯ ಜಯಶಂಕರ್ ಪ್ರಸಾದ್, ಭಾರತೇಂದು ಹರಿಶ್ಚಂದ್ರ, ಮೋಹನ್ ರಾಕೇಶ್, ಜಗದೀಶಚಂದ್ರ ಮಾಥುರ್, ಮಣಿಮಧುಕರ್, ರಾಮೇಶ್ವರ್ ಪ್ರೇಮ್, ಸುರೇಂದ್ರ ವರ್ಮ, ಹಬೀಬ್ ತನ್ವೀರ್, ಬಂಗಾಳಿಯ ದ್ವಿಜೇಂದ್ರಲಾಲ್ ರಾಯ್, ಶಂಭುಮಿತ್ರ, ಬಾದಲ್ ಸರ್ಕಾರ್, ಮರಾಠಿಯ ವಿಜಯ ತೆಂಡುಲ್ಕರ್, ಪಂಜಾಬಿಯ ಬಲವಂತ ಗಾರ್ಗಿ - ಇವರೆಲ್ಲರ ಆಯ್ದ ನಾಟಕಗಳನ್ನು ಕಾರಂತರು ನಿರ್ದೇಶಿಸಿದ್ದಾರೆ.

ಕಾರಂತರು ಮೊದಲು ನಾಟಕವನ್ನು ಸ್ಥೂಲವಾಗಿ ಓದಿಕೊಳ್ಳತ್ತಾರೆ. ಅದರ ಬಗ್ಗೆ ಹಲವರಲ್ಲಿ ಮಾತಾಡಿಕೊಳ್ಳುತ್ತಾರೆ. ಆಮೇಲೆ ನಾಟಕದ ಅರ್ಥವಂತಿಗೆಯನ್ನು ಅವರು ಅಂತಿಮವಾಗಿ ಗ್ರಹಿಸುವುದು 'ಸಂಗೀತದ ಸಂಕೇತ'ಗಳಲ್ಲಿ ಎನ್ನುತ್ತಾರೆ ಕೆ.ವಿ. ಸುಬ್ಬಣ್ಣ (1-6). ಕಾರಂತರ, ಮಕ್ಕಳ ನಾಟಕವೊಂದರ ನಿರ್ದೇಶನ ಪ್ರಕ್ರಿಯೆಯ ವಿವರಗಳು ಸುಬ್ಬಣ್ಣನವರ ಇನ್ನೊಂದು ಲೇಖನದಲ್ಲಿವೆ (2-1). ನಾಟಕ ತಾಲೀಮಿನಲ್ಲಿ ಕಾರಂತರು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುತ್ತಾರೆ. ಪ್ರದರ್ಶನದ ದಿನದ ವರೆಗೂ ರಂಗಕೃತಿಯನ್ನು ಪರಿಷ್ಕರಿಸುತ್ತ ಹೋಗುವುದು ಅವರ ಕ್ರಮ. ಕಾರಂತರ ನಿರ್ದೇಶನ ಕ್ರಮ ಮತ್ತು ನಾಟಕಗಳ ಆಯ್ಕೆಯನ್ನು ಕುರಿತ ಕೆಲವು ಸೂಕ್ಷ್ಮ ಸಂಗತಿಗಳತ್ತ ಕೆ.ವಿ. ಸುಬ್ಬಣ್ಣ ಗಮನ ಸೆಳೆಯುತ್ತಾರೆ. ವಾಸ್ತವೇತರ ಮಾರ್ಗದ 'ಸಿದ್ಧ ಶೈಲಿ'ಯ ನಾಟಕಗಳಲ್ಲಿ, ವಿಶಿಷ್ಟ ಪಾತ್ರ ಪ್ರಧಾನ ನಾಟಕಗಳಲ್ಲಿ ಕಾರಂತರಿಗೆ ಆಸಕ್ತಿ ಕಡಿಮೆ (1-6).

ನಿರ್ದೇಶನ ಕಾಲದಲ್ಲಿ ಕಾರಂತರ ಪ್ರತಿಭೆ ಅರಳುವ ಆರೋಹಣಗೊಳ್ಳುವ ಬಗೆಯನ್ನು ಡಾ|ಯು.ಆರ್. ಅನಂತಮೂರ್ತಿಯವರು ಹೀಗೆ ಬಣ್ಣಿಸುತ್ತಾರೆ - ಕಣ್ಣಿನ ಜತೆಗೆ ಕಿವಿ ಕೆಲಸ ಮಾಡಿದಾಗ ನಾಟಕದ ಶಬ್ದಶರೀರ
ಉತ್ಪನ್ನವಾಗುತ್ತದೆ. ಈ ವಿಷಯದಲ್ಲಿ ಕಾರಂತರಿಗಿಂತ 'ಜೀನಿಯಸ್'ನ್ನು ನಾನು ನೋಡಿಲ್ಲ. ಹಾಗೆಯೇ ಒಂದನ್ನು ಇನ್ನೊಂದರ ಜೊತೆ ಸಂಬಂಧಪಡಿಸಿ ನೋಡುವ ಶಕ್ತಿ ಅತ್ಯುತ್ತಮ ಪ್ರತಿಭೆಯ ಲಕ್ಷಣ ಎನ್ನುವುದಾದರೆ ಕಾರಂತರು ತಮ್ಮ ನೆನಪುಗಳನ್ನು ಬಳಸಿಕೊಳ್ಳುವ ಕ್ರಮ ಅದ್ಭುತವಾದುದು. ಅವರು ಮಾಡಿದ್ದು ಪೂರ್ವಭಾವಿಯಾಗಿ ಇದ್ದದ್ದಲ್ಲ. ಅದು ಅಲ್ಲೇ ರಂಗದ ಮೇಲೆಯೇ ಹುಟ್ಟಿಕೊಳ್ಳುವುದು (1-9).

ಬಿ.ವಿ. ಕಾರಂತರು ನಾಟಕದ ವಸ್ತುವಿನ ಮೇಲೆ ತನಗೆ ಹೊಳೆದ ಆರ್ಥವನ್ನು ಹೇರುತ್ತಾರೆ ಎಂಬ ಟೀಕೆ (ಬಿ.ಆರ್. ನಾಗೇಶ್ 1-13)ಯನ್ನು ಒಪ್ಪುವುದು ಕಷ್ಟ. ನಿರ್ದೇಶಕ ನಾಟಕದ ವಸ್ತುವನ್ನು ಗ್ರಹಿಸಿದೆ ಸೋಲುವುದಕ್ಕಿಂತ ತನಗೆ ಹೊಳೆದ ಅರ್ಥವನ್ನು ಹೇರವುದು ಒಳ್ಳೆಯದು. ನಾಟಕಕಾರನ ಆಶಯಕ್ಕಿಂತ, ಆ ನಾಟಕದ ನಿರ್ದೇಶಕನ ಆಶಯ ಬೇರೆಯಾಗಬಾರದು ಎನ್ನುವಾಗ ನಾವು ನಿರ್ದೇಶಕನ ಸೃಜನಶೀಲ ಸ್ವಾತಂತ್ರ್ಯವನ್ನೇ ಪ್ರಶ್ನಿಸಿದಂತಾಗುವುದಿಲ್ಲವೇ? ನಾಟಕಕಾರನ ಆಶಯ ಯಾವುದು ಎಂಬುದರ ಕುರಿತು ಕೂಡ ವಿಮರ್ಶಕರಲ್ಲಿ ಭಿನ್ನಾಭಿಪ್ರಾಯ ಇರುವುದು ಸಾಧ್ಯ.

ನೆನಪಿನಲ್ಲಿ ಉಳಿದ ನಾಟಕಗಳು

'ಹಯವದನ', 'ಸತ್ತವರ ನೆರಳು', 'ಪಂಜರಶಾಲೆ', 'ಸ್ಕಂದಗುಪ್ತ', 'ಬರ್ನಮ್ ವನ� 'ಮಾಲವಿಕಾಗ್ನಿಮಿತ್ರ', ಮತ್ತು 'ಗೋಕುಲ ನಿರ್ಗಮನ' - ಇವು ಬಿ.ವಿ. ಕಾರಂತರ ಮಹತ್ವದ ರಂಗಕೃತಿಗಳೆಂದು ಈ ಗ್ರಂಥದಲ್ಲಿ ಅವರ ನಾಟಕಗಳನ್ನು ಚರ್ಚಿಸಿರುವ ವಿಮರ್ಶಕರು ಪರಿಗಣಿಸಿದ್ದಾರೆ.

ಲಂಕೇಶರು ಬಿ.ವಿ. ಕಾರಂತರ 'ಹಯವದನ'ವನ್ನು ವಿಮರ್ಶಿಸಿ, ತಿರಸ್ಕರಿಸಿದ್ದರು; 'ಕತ್ತೆಗಳಿಗೆ ಮನೋರಂಜನೆ ಕೊಡುವ 'ಗಾರ್ದಭರಂಜನ' ಎಂದಿದ್ದರು. ಕಾವ್ಯದ ಗೇಯತೆಯನ್ನು, ನಾಟಕದ ಸಂಗೀತವನ್ನು ನಿರಾಕರಿಸಿದ್ದ ನವ್ಯಸಾಹಿತ್ಯದ ಅಬ್ಬರದ ದಿನಗಳಲ್ಲಿ ಈ ಟೀಕೆ ಬಂತು ಎಂಬುದನ್ನು ನೆನಪಿಡಬೇಕು. ಕೆ.ವಿ. ಸುಬ್ಬಣ್ಣ ವಿವರಿಸುವಂತೆ, ರಂಜನೆಯಿಂದ ನಾಟಕದ ಗಾಂಭೀರ್ಯಕ್ಕೆ ಭಂಗಬಂದೀತೆಂಬ ಭಯ ಇಂಥ ಟೀಕೆಯ ಹಿನ್ನೆಲೆಯಲ್ಲಿತ್ತು. ಸುರೇಶ ಆವಸ್ಥಿ ಅವರು 'ಹಯವದನ' ಪ್ರಯೋಗದ ಐತಿಹಾಸಿಕ ಮಹತ್ವವನ್ನು ಹೀಗೆ ಗುರುತಿಸಿದ್ದಾರೆ - 1971ರಲ್ಲಿ 'ಹಯವದನ'ದ ಪ್ರಕಟಣೆ, 1973ರಲ್ಲಿ ಅದರ ಕಾರಂತ ನಿರ್ದೇಶನ ಇವು ಸಮಕಾಲೀನ ರಂಗಕರ್ಮದ ಅತ್ಯಂತ ಮಹತ್ವಪೂರ್ಣ ಘಟನೆಗಳು. ಈ ಘಟನೆಗಳು ಭಾರತೀಯ ರಂಗಭೂಮಿಯನ್ನು ಕಲೋನಿಯಲ್ ಮಾರ್ಗದಿಂದ ನಾಟ್ಯಶಾಸ್ತ್ರದ ಪರಂಪರಾಪಥದ ಕಡೆಗೆ ಹೊರಳಿಸಿದುವು. ಇದರೊಂದಿಗೆ ಭಾರತೀಯ ರಂಗಭೂಮಿ ವಸಾಹತುಶಾಹಿ ವೃತ್ತಿಗಳಿಂದ ಮುಕ್ತವಾಗಿ ನಾಟ್ಯಶಾಸ್ತ್ರದ ಯಶಸ್ವೀ ಪರಂಪರೆಯೊಂದಿಗೆ ಕೂಡಿಕೊಳುತ್ತದೆ. (1-8)

'ಸತ್ತವರ ನೆರಳು' ನಾಟಕವನ್ನು ನಿರ್ದೇಶಿಸುವ ಮೊದಲು ಬಿ.ವಿ. ಕಾರಂತರು ಜೆ.ಬಿ. ಜೋಶಿಯವರೊಡನೆ ಚರ್ಚಿಸಿದ್ದರು . 'ಸತ್ತವರ ನೆರಳ'ನ್ನು ಕುರಿತ ವಿಮರ್ಶೆಗಳೆಲ್ಲ ನಿರ್ದೇಶಕನ ರಂಗಕೃತಿಯನ್ನು ಅಲಕ್ಷಿಸಿ ನಾಟಕಕಾರನ ಆಶಯವನ್ನೇ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿಕೊಂಡಿವೆ...... ನಾಟಕವನ್ನು ಬರೆದವನ ಪ್ರೇಕ್ಷಿತಾರ್ಥವನ್ನು ಮುಟ್ಟಿಸುವುದರಲ್ಲಿ ಸೋತಿತೆಂದೇ ಹೇಳಬೇಕು (ಜಿ.ಬಿ. ಜೋಶಿ). ಪ್ರಯೋಗ ಯಶಸ್ವಿಯಾಯಿತು. ಕಾರಂತರು ಗೆದ್ದರು. ಆದರೆ 'ಜಡಭರತ'ರು ಸೋತರು ಎಂದು ನನಗೆ ಬಲವಾಗಿ ಅನ್ನಿಸಿತು (ನ. ರತ್ನ 2-4). ಈ ನಾಟಕದಲ್ಲಿ ಬ್ರಾಹ್ಮಣ್ಯದ ಅವನತಿಯ ಬಗ್ಗೆ ಆಳವಾದ ವಿಷಾದ ಇದೆ ಎಂದು ನಾನು ತಿಳಿದಿದ್ದೇನೆ. ಆದರೆ ಇಡೀ ನಾಟಕ (ಕಾರಂತರ ರಂಗಕೃತಿ) ಬ್ರಾಹ್ಮಣ್ಯದ ಲೇವಡಿಯಾಗಿ ಬಿಟ್ಟಿದೆ (ಡಾ| ಯು.ಆರ್. ಅನಂತಮೂರ್ತಿ 1-9). ಪ್ರಸನ್ನರ ವಿಮರ್ಶೇ ಸಮಕಾಲೀನತೆಯತ್ತ ಹೊರಳುತ್ತದೆ - 'ಸತ್ತವರ ನೆರಳು' ಪ್ರದರ್ಶನದಲ್ಲಿ ಅವರು ಪುರಂದರದಾಸರ ಪದಗಳನ್ನು ಬಳಸಿ ಆಕರ್ಷಕವಾಗಿ ಮಾಡಿದರು ಅಷ್ಟೇ ಹೊರತು ಸಮಕಾಲೀನ ಮಾಡಿದರು ಅಥವಾ ಹತ್ತಿರಕ್ಕೆ ತಂದರು ಅಂತ ನನಗೆ ಅನಿಸಲಿಲ್ಲ (1-7). 'ಸತ್ತವರ ನೆರಳ'ನ್ನು ಕುರಿತು ಬಿ.ವಿ. ಕಾರಂತರು ತನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ, 'ಸತ್ತವರ ನೆರಳ'ಲ್ಲಿ ಹುಸಿ ಧಾರ್ಮಿಕ ಆಷಾಡಭೂತಿಯನ್ನು ಲೇವಡಿ ಮಾಡುವುದೇ ನನ್ನ ಉದ್ದೇಶವಾದ್ದರಿಂದ, 16ನೇ ಶತಮಾನದ ಭಕ್ತಿಪಂಥದ ಪ್ರಸಿದ್ಧರಾದ ಪುರಂದರದಾಸರ ಇಂಥ ಸೋಗುಗಳನ್ನು ಗೇಲಿ ಮಾಡುವ 13-14 ಹಾಡುಗಳನ್ನು ಬಳಸಿದ್ದೇನೆ. ಇವು ಭಕ್ತಿಗೀತೆಗಳಲ್ಲ, ಬದಲಿಗೆ ಏಕಕಾಲದಲ್ಲಿ ವಿಭಿನ್ನ ಸ್ತರಗಳಲ್ಲಿ ಅರ್ಥವನ್ನು ಹೊಳೆಯಿಸುವ ಹಾಡುಗಳು. ಉದಾಹರಣೆಗೆ 'ನಗೆಯು ಬರುತಿದೆ ಎನಗೆ ನಗೆಯು ಬರುತಿದೆ' ಎಂಬ ಪುರಂದರದಾಸರ ಹಾಡು ಸಮಾಜದ ಬೂಟಾಟಿಕೆಗಳಿಗೆ ಬರೆದ ಭಾಷ್ಯದಂತಿದೆ ಎಂದಿದ್ದಾರೆ (1-2). 'ಸತ್ತವರ ನೆರಳ'ನ್ನು ಕುರಿತ ಹೆಚ್ಚಿನ ವಿಮರ್ಶೆಗಳು ನಾಟಕಕಾರ ಜಿ.ಬಿ. ಜೋಶಿಯವರ ಪರವಾಗಿ ವಕಾಲತ್ತು ಮಾಡುವಂತಿವೆ. ನೇಮಿಚಂದ್ರ ಜೈನ್ ಅವರ ಪ್ರಕಾರ 'ಸತ್ತವರ ನೆರಳಿ'ನ ರಂಗಸಂಗೀತ, ರಂಗಭಾಷೆ ನಾಟಕದ ಅರ್ಥಸಾಧ್ಯತೆಯನ್ನು ಹೆಚ್ಚಿಸಿವೆ.

ಭಾರತೀಯ ರಂಗಭೂಮಿಯ ಪರಂಪರೆಯನ್ನು ಪರಿಷ್ಕರಿಸಿ ಸ್ವಯಾರ್ಜಿತವನ್ನಾಗಿ ಮಾಡಿಕೊಳ್ಳುವ ಕಾರಂತರ ಪ್ರಯತ್ನದ ಒಂದು ಅಂಗವಾಗಿ 'ಬರ್ನಮ್‌ವನ'ವನ್ನು ಪರಿಶೀಲಿಸಬೇಕು. ಯಕ್ಷಗಾನದಿಂದಾಗಿ ಶೇಕ್ಸ್‌ಪಿಯರ್ ಮತ್ತಷ್ಟು ಹಿಂದಕ್ಕೆ ಹೋದ. 'ಮ್ಯಾಕ್‍ಬೆತ್'ನ ಸಮಕಾಲೀನ ಅಂಶವನ್ನು ಗುರುತಿಸಲು ಕಾರಂತರಿಗೆ ಸಾಧ್ಯವಾಗಲಿಲ್ಲ' ಎಂದು ಪ್ರಸನ್ನ ಅಭಿಪ್ರಾಯಪಟ್ಟರು (1-7). ಆದರೆ 'ಬರ್ನಮ್‌ವನ'ದಲ್ಲಿ ಯಕ್ಷಗಾನದ ಸಿದ್ಧ ಶೈಲಿ ಇರಲಿಲ್ಲ ಎಂಬ ವಾಸ್ತವಾಂಶದತ್ತ ಸುಬ್ಬಣ್ಣ ನಮ್ಮ ಗಮನ ಸೆಳೆಯುತ್ತಾರೆ. ಕಾರಂತರು ಮ್ಯಾಕ್‍ಬೆತ್'ನ ಆಂತರಿಕ ದುರಂತ ವ್ಯಾಪಾರಗಳಿಗೆ ಅವಧಾರಣೆ ನೀಡಿಲ್ಲ ಎನ್ನುವ ಸುಬ್ಬಣ್ಣ ಅದಕ್ಕೆ ಕಾರಣವೇನೆಂದು ಹುಡುಕುತ್ತಾರೆ....... ವಿಶಿಷ್ಟ ಪಾತ್ರ ಪ್ರಧಾನ ನಾಟಕಗಳಲ್ಲಿ ಕಾರಂತರಿಗೆ ಆಸಕ್ತಿ ಕಡಿಮೆ (1-6). ಸುರೇಶ ಅವಸ್ಥಿ ಅವರು 'ಬರ್ನಮ್‌ವನ'ದಲ್ಲಿ ನಿರ್ವಸಾಹತೀಕರಣದ ಪ್ರಕ್ರಿಯೆಯನ್ನು ಗುರುತಿಸುತ್ತಾರೆ. ಅವರ ಪ್ರಕಾರ 'ಬರ್ನಮ್‌ವನ' ಶೇಕ್ಸ್‌ಪಿಯರ್‌ನ ಕಲೋನಿಯಲ್ ಚಹರೆಯನ್ನು ಬದಲಿಸಿ, ಭಾರತೀಯ ಚಹರೆಯನ್ನು ನೀಡಿದೆ. (1-8)

ತನ್ನ ಕಲ್ಪನೆಯಲ್ಲಿ ಗೇಯನೃತ್ಯಾಭಿನಯರಂಗಕ್ಕೆ ಸೇರಿದ 'ಗೋಕುಲ ನಿರ್ಗಮನ'ವನ್ನು ಕಾರಂತರು ನಾಟಕ ಮಾಧ್ಯಮದಲ್ಲಿ ಪ್ರಯೋಗಿಸಿ ಗೆದ್ದಿದ್ದಾರೆ ಎಂದು ಪು.ತಿ.ನ. ಮೆಚ್ಚಿದರು (1-6). ಪ್ರಸನ್ನರ ಪ್ರಕಾರ ಪು.ತಿ.ನ.ರ 'ಗೋಕುಲ ನಿರ್ಗಮನ' ಕೆಟ್ಟ ನಾಟಕ. ಆದರೆ ಕಾರಂತರು ಅದನ್ನು ಹೇಗೆ ಗ್ರಹಿಸಿದ್ದಾರೆ ಎಂಬುದಕ್ಕಿಂತ, ನಾಟಕವನ್ನು ನೋಡಿದ ಮೇಲೆ ನಮಗೇನು ಅನ್ನಿಸಿತೆಂಬುದು ಮುಖ್ಯ ಎಂದು ಕುರ್ತಕೋಟಿಯವರು ವಾದಿಸುತ್ತಾರೆ. ''ಗೋಕುಲ ನಿರ್ಗಮನ' ಹೊಸ ರಂಗಸಂಪ್ರದಾಯವನ್ನು ಆರಂಭಿಸಿದೆ ಎನ್ನುತ್ತಾರವರು (2-7). ಎ. ಆರ್. ನಾಗಭೂಷಣರವರು ಹೇಳುವಂತೆ, ಕೃಷ್ಣನ ನಿರ್ಗಮನದ ನಂತರ ಗೋಕುಲದ ಜನರು ಕೊಳಲನ್ನು ನುಡಿಸಿದರೆ ಕೇಳಿಬರುವುದು ಅಪಸ್ವರಗಳು ಮಾತ್ರ. ಆಗ ಒಬ್ಬ ದನಗಾಹಿ ಬಂದು ಕೃಷ್ಣ ಬಿಟ್ಟುಹೋಗಿದ್ದ ನವಿಲುಗರಿಯನ್ನು ಮುಡಿಗೆ ಏರಿಸಿದ ಮೇಲೆ ಅವನ ಕೊಳಲಿನಿಂದ ಮಧುರವಾದ ನಾದ ಹರಿಯುತ್ತದೆ. ಮೌನದಲ್ಲಿ ಸಂಭವಿಸುವ ಈ ಮಹತ್ವದ ರಂಗಕ್ರಿಯೆ ನಿರ್ದೇಶಕರ ಸೃಜನಶೀಲತೆಗೆ ಸಾಕ್ಷಿಯಾಗಿದೆ (2-8). 'ಗೋಕುಲ ನಿರ್ಗಮನ'ದ ಅಸದೃಶ ದೃಶ್ಯಗಳತ್ತ (ಕೃಷ್ಣ-ರಾಧೆಯರ ಮಿಲನದ ಸನ್ನಿವೇಶ, ಗೋಪ-ಗೋಪಿಯರ ಸಂಬಂಧದ ಮೂಲಕ ಗೋಕುಲದ ಬದುಕಿನ ವಿಜೃಂಭಣೆಯನ್ನು ಸೂಸುವ ದೃಶ್ಯ) ಅವರು ನಮ್ಮ ಗಮನಸೆಳೆಯುತ್ತಾರೆ. 'ಗೋಕುಲ ನಿರ್ಗಮನ' ಅಪೂರ್ಣ ಕಲಾನುಭವ ನೀಡಿತೆಂದು ಬಿ. ಆರ್. ನಾಗೇಶ್ ವಾದಿಸುತ್ತಾರೆ (2-10). 'ಗೋಕುಲ ನಿರ್ಗಮನ'ದ ಬೆಳಕಿನ ವ್ಯವಸ್ಥೆಯ ಸಾಂಕೇತಿಕ ಚೆಲುವನ್ನು ಮೋಹನ ಸೋನ ವ್ಯಾಖ್ಯಾನಿಸಿದ್ದಾರೆ (2-9ರ ಟಿಪ್ಪಣಿ ನೋಡಿ).
ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ಪ್ರದರ್ಶಿಸುವಾಗ ಬಿ. ವಿ. ಕಾರಂತರು ಹಿಂದೀಯ ಪ್ರಾದೇಶಿಕ ಉಪಭಾಷೆಗಳಲ್ಲೊಂದಾದ ಬುಂದೇಲಿಯಲ್ಲಿ ರಂಗಕೃತಿಯನ್ನು ಸಿದ್ಧಪಡಿಸಿದರು. ಇದರಿಂದಾಗಿ ಕಾಳಿದಾಸನ ನಾಟಕ ಪ್ರಾದೇಶಿಕ, ಸಮಕಾಲೀನ ಬಣ್ಣವನ್ನು ಪಡೆಯಿತು. ಪ್ರಸನ್ನ ವಿವರಿಸಿರುವಂತೆ, ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ಭೋಪಾಲದ ರೆಪರ್ಟರಿಗಾಗಿ ಮಾಡಿಸಿದ್ದು. ಈ ನಾಟಕದಲ್ಲಿ ಅದ್ಭುತವಾದುದೊಂದು ಘಟಿಸಿತು. ತಂತ್ರದ ದೃಷ್ಟಿಯಿಂದ ಸಾಮಾನ್ಯವಾದ ಪ್ರೊಡಕ್ಷನ್ ಅದು. ಆದರೆ ಒಂದೇ ಒಂದು ಪ್ರಮುಖವಾದ ಬದಲಾವಣೆಯನ್ನು ಅವರು ಮಾಡಿಕೊಂಡಿದ್ರು. ಅದೇನಂದ್ರೆ ....... 'ರೊಮಾಂಟಿಸಿಸಮ್'ನ್ನು ಬಹಳ ವಿಜೃಂಭಣೆಯಿಂದ ಬಳಸಿದ 'ಮಾಲವಿಕಾಗ್ನಿಮಿತ್ರ'ವನ್ನು 'ಬುಂದೇಲಿ'ಯಲ್ಲಿ ಆಡಿಸಿಬಿಟ್ಟರು. ಸಾಮಾನ್ಯ ಆಡುಮಾತಿನ ಡಯಲೆಕ್ಟ್ 'ಬುಂದೇಲಿ'. ಯಾವಾಗ ಆ ಡಯಲೆಕ್ಟ್ನಲ್ಲಿ ಕಾಳಿದಾಸನ ಪಾತ್ರಗಳು ಮಾತಾಡಲಿಕ್ಕೆ ಸುರುಮಾಡಿದವೋ ಆಗ ಕಾಳಿದಾಸನ ರೊಮ್ಯಾಂಟಿಸಿಸಮ್‍ನ್ನು ಅಲುಗಾಡಿಸಿದಂತಾಗಿ ಇದ್ದಕ್ಕಿದ್ದ ಹಾಗೆ ವಿಶೇಷವಾದ ಅರ್ಥಗಳು ಆ ಎರಡು ಗಂಟೆಯ ಪ್ರದರ್ಶನದಲ್ಲಿ ಕೇಳುವುದಕ್ಕೆ ಸುರುವಾದುವು. (1-7)

ನಾವು ಇಷ್ಟಪಟ್ಟ ಕಾವ್ಯದ ಸಾಲುಗಳು ನಮ್ಮ ನೆನಪಿನಲ್ಲಿ ಉಳಿಯುವಂತೆ ಒಳ್ಳೆಯ ನಾಟಕಗಳ ಕೆಲವು ದೃಶ್ಯಗಳು ಪ್ರೇಕ್ಷಕರ, ವಿಮರ್ಶಕರ, ನೆನಪಿನಲ್ಲಿ ಉಳಿಯುತ್ತವೆ. ಬಿ.ಆರ್. ನಾಗೇಶ್ ಅವರು ಬಿ.ವಿ. ಕಾರಂತರ ರಂಗಕೃತಿಗಳ ಕೆಲವು ದೃಶ್ಯಗಳನ್ನು ದಾಖಲಿಸಿದ್ದಾರೆ... 'ಹಯವದನ'ದಲ್ಲಿ ಕಾಳಿ ನಿದ್ರೆಯಿಂದ ಎಚ್ಚೆತ್ತ ಬಳಿಕ ಮಾತನಾಡುವ ಕ್ರಮ; ಪದ್ಮಿನಿಯ ಮದುವೆಯ ಚಿತ್ರಣ; 'ಸತ್ತವರ ನೆರಳ'ಲ್ಲಿ ದಾಸರ ಹಾಡುಗಳನ್ನು ನಾಟಕದ ಮೂಲಭೂತ ಆಶಯಕ್ಕೆ ವ್ಯಂಗ್ಯ ವ್ಯಾಖ್ಯೆಯಾಗಿ ಅಳವಡಿಸಿಕೊಂಡದ್ದು; ಅದೇ ನಾಟಕದ ಪ್ರಾರಂಭದಲ್ಲಿ ಬೆಳಕು ಮತ್ತು ನಾದಗಳೊಳಗೆ ಅದ್ಭುತ ಸಮ್ಮಿಲನವನ್ನು ಸೃಷ್ಟಿಸಿದ್ದು; 'ಬರ್ನಮ್‌ವನ'ದಲ್ಲಿ ಮ್ಯಾಕ್‍ಬೆತ್ ವೇಷಭೂಷಣಗಳು ಮತ್ತು'ಬರ್ನಮ್‌ವನ'ದ ಚಿತ್ರಣ; �ಮಹಾನಿರ್ವಾಣ�ದಲ್ಲಿ ಮೊದಲಿಗೆ ಸಾಧಾರಣವಾಗಿ ಕಾಣಿಸಿಕೊಂಡು, ಒಮ್ಮಿಂದೊಮ್ಮೆಗೆ ಪ್ರೇಕ್ಷಕರಿಗೆ ಜುಮ್ಮು ಹುಟ್ಟಿಸಿದ ರಂಗಸಜ್ಜಿಕೆ; ಅಂಧಯುಗದಲ್ಲಿ ಹೊಸಬಗೆಯಾಗಿ ಬಂದ ಚಲನೆ; 'ತುಘಲಕ್' 'ಅಂಧಯುಗ'ಗಳ ವೇಷಭೂಷಣಗಳಲ್ಲಿ ಕಾಣಿಸಿಕೊಂಡ ಅಂಗೀಕಾರ್ಹ ಮತ್ತು ಸುಂದರತೆಗಳ ಸಂಯೋಗ;'ಬರ್ನಮ್‌ವನ'ದಲ್ಲಿ ಬರುವ ಪಾತ್ರಗಳ ಚಲನೆ; 'ಘಾಸಿರಾಮ್ ಕೊತ್ವಾಲ್'ನಲ್ಲಿ ಪುಣೆಯ ಪಂಡಿತರ ಗುಂಪನ್ನೇ ಹಿಮ್ಮೇಳವಾಗಿಯೂ, ಒಳಗಿನ ರಂಗಸಿದ್ಧತೆಗಾಗಿ ಹೊರಗಿನಿಂದ ಬಳಸುವ ಪರದೆಯಾಗಿಯೂ ಉಪಯೋಗಿಸಿದ ಬಗೆ; ಮಕ್ಕಳ ನಾಟಕಗಳಲ್ಲಿ ಕ್ಷಣಾರ್ಧದಲ್ಲಿ ಅದ್ಭುತವಾದ ಹೊಸ ಜಗತ್ತನ್ನು ರಂಗದ ಮೇಲೆ ಸೃಷ್ಟಿಸಿದ ಚಾಕಚಕ್ಯತೆ; 'ಕಿಂದರ ಜೋಗಿ'ಯಲ್ಲಿ ಇಲಿಗಳ ಓಡಾಟ...... ಹೀಗೆ ಹಲವಾರು ಉದಾಹರಣೆಗಳನ್ನು ಕೊಡಬಹುದು. (1-13)

ಮಕ್ಕಳ ನಾಟಕಗಳು

ಕಾರಂತರ, ಮಕ್ಕಳ ನಾಟಕಗಳಲ್ಲಿ ಪವಾಡಸ್ಪರ್ಶವಿದೆ. ಮಕ್ಕಳ ನಾಟಕಗಳ ನಿರ್ದೇಶಕರಾಗಿ ಅವರ ಸಾಧನೆ ಅದ್ವಿತೀಯ. 'ಪಂಜರಶಾಲೆ', 'ಇಸ್ಪೀಟ್ ರಾಜ್ಯ', 'ಬುದ್ದೂರಾಮಚರಿತ', 'ನನ್ನ ಗೋಪಾಲ', 'ಮನೇಲೂ ಚುನಾವಣೆ', 'ಅಳಿಲು ರಾಮಾಯಣ', 'ಕೃತಘ್ನ', 'ರಿಕ್ಕಿ-ಟಿಕ್ಕಿ', 'ನೀಲಿ ಕದುರೆ', 'ಅಬ್ದುಲ್ಲಾ ಗೋಪಾಲ', 'ಛೋಟೀ ಸೈಯದ್ ಬಡೇ ಸೈಯದ್', 'ಕಿಂದರಿ ಜೋಗಿ', 'ಮರಹೋತು ಮರ ಬಂತು ಡುಂ ಡುಂ' - ಇವು ಕಾರಂತರು ನಿರ್ದೇಶಿಸಿದ ಮಕ್ಕಳ ನಾಟಕಗಳು.

ಮಕ್ಕಳ ನಾಟಕ ಸ್ವಯಂಸ್ಫೂರ್ತವಾಗಿರಲು ಸಾಧ್ಯ. ಎಳೆಯರ ನುಡಿ, ನಡೆಗಳಲ್ಲಿ ಸಹಜವಾದ ಕಲಾವಂತಿಕೆಯಿದೆ, ಅವನ್ನು ಪ್ರಚೋದಿಸುವುದೇ ನಾಟಕ ನಿರ್ದೇಶಕನ ಕೆಲಸ. ಅದು ಸುಲಭ.... ನಾಟಕದಲ್ಲಿ ಗ್ರಂಥ ಪಾಠದ ಮಹತ್ವವೇನು? ನಿಜ ನೋಡಿದರೆ ಬಹಳ ಸ್ವಲ್ಪವೇ. ಗ್ರಂಥಪಾಠ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬೇಕಾದೀತು. ಒಂದು ಮಕ್ಕಳ ಕೂಟಕ್ಕೆ ಹೊಂದಿಸಿದ ಪಾಠ ಇನ್ನೊಂದು ಸಂದರ್ಭದಲ್ಲಿ ಅನುವಾಗದೆ ಹೋಗಬಹುದು. ಮಕ್ಕಳ ನಾಟಕ ಸಂಕೀರ್ಣವಾಗಿರಬೇಕು. ಹಾಡು, ಕುಣಿತ, ಮಾತು, ಅಭಿನಯ, ಎಲ್ಲ ಕೂಡಿದ್ದರೇ ಚೆನ್ನು. ಮಕ್ಕಳ ಚೇತನವನ್ನರಳಿಸುವ ಎಲ್ಲ ಪರಿಕರಗಳೂ ಬೇಕು ಎನ್ನುತ್ತಾರೆ ಕಾರಂತರು (1-3). ಹೆಗ್ಗೋಡಿನಲ್ಲಿ ಕಾರಂತರು ನಿರ್ದೇಶಿಸಿದ 'ಪಂಜರಶಾಲೆ' ನಾಟಕವನ್ನು ಕೆ.ವಿ. ಸುಬ್ಬಣ್ಣ ಅದೊಂದು ಹಾಡು, ಕುಣಿತ, ಚಟುವಟಿಕೆಗಳ ದೊಡ್ಡ ಹಬ್ಬವಾಗಿತ್ತು ಎಂದು ವರ್ಣಿಸಿದ್ದಾರೆ. 'ಪಂಜರಶಾಲೆ'ಯನ್ನು ನೋಡಿದ ಹೆಗ್ಗೋಡಿನ ಪ್ರೇಕ್ಷಕರೊಬ್ಬರ ಪ್ರತಿಕ್ರಿಯೆ ಹೀಗಿತ್ತು - 'ಜಾತ್ರೆ ಕಂಡಂಗಿತ್ತು'.
2

ಕಾರಂತರ ರಂಗಸಂಗೀತ

ಬಿ.ವಿ. ಕಾರಂತರ ದೃಷ್ಟಿಯಲ್ಲಿ ರಂಗಸಂಗೀತವೆಂದರೆ ಕೇವಲ ಸಂಗೀತವಲ್ಲ, ಅದೊಂದು ಧ್ವನಿವಿನ್ಯಾಸ. ನಾಟ್ಯಶಾಸ್ತ್ರದ 'ವಾಚಿಕಾ' ಕೇವಲ ಸಂಭಾಷಣೆ ಅಲ್ಲ, ನಾಲಗೆಯ ಸಹಾಯದಿಂದ ಹೊರಡುವ ಎಲ್ಲ ಧ್ವನಿಸಾಧ್ಯತೆಗಳು ಎಂದು ಅವರು ಪುನರ್ವ್ಯಾಖ್ಯಾನಿಸಿದ್ದಾರೆ. ಯಾರಿಗೂ ನುಡಿಸಲು ಸಾಧ್ಯವಾಗುವ ಹೊಸ ವಾದ್ಯಗಳನ್ನು ಅವರು 'ರಂಗಾಯಣ'ದಲ್ಲಿ ಸೃಷ್ಟಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಸಿದ್ಧ ಶೈಲಿಯನ್ನು ಕಾರಂತರು ರಂಗಸಂಗೀತದಲ್ಲಿ ಬಳಸುವುದಿಲ್ಲ. ಸಂಗೀತ ವಿಮರ್ಶಕ ಈಶ್ವರಯ್ಯ ವಿವರಿಸಿರುವಂತೆ, ಸಂಗೀತದ ಚೌಕಟ್ಟಿನಲ್ಲಿ ಬರುವ ಮಾಧುರ್ಯದ ಪರಿಕಲ್ಪನೆ ನಾಟಕದಲ್ಲಿ ಪ್ರಸ್ತುತವಲ್ಲ ಅನ್ನುವುದು ಕಾರಂತರ ಅಭಿಮತ. ರಂಗದಲ್ಲಿ ಹುಟ್ಟಿಕೊಳ್ಳುವ ಎಲ್ಲ ಬಗೆಯ ಧ್ವನಿಯೂ ರಂಗಸಂಗೀತದಲ್ಲಿ ಪ್ರಸ್ತುತ - ಅಪಶ್ರುತಿ ಕೂಡ. ಸಂವಾದಿಗಳಲ್ಲದ ಬಹುಸ್ವರಗಳು ನಾಟಕದಲ್ಲಿ ಸನ್ನಿವೇಶ ನಿರ್ಮಾಣಕ್ಕೆ ನೆರವಾಗುತ್ತವೆ. ರಂಗಸಂಗೀತದಲ್ಲಿ ರಾಗದ, ತಾಳದ ಚೌಕಟ್ಟು ಇರಬೇಕಾಗಿಲ್ಲ. ಅಲ್ಲಿರುವುದು ಧ್ವನಿರೂಪಗಳು ಮತ್ತು ಲಯ ವೈವಿಧ್ಯಗಳು. ರಂಗಸಂಗೀತ ಮಾತಿಗೆ ಹತ್ತಿರವಿರಬೇಕು. ಅಂದರೆ ಅವು ವಾಚಿಕವೇ ಆಗಿರಬೇಕು. ಈ ಚಿಂತನೆಯ ತಳಹದಿಯಲ್ಲಿ ಕಾರಂತರು ಹಲವು ಪ್ರಯೋಗಗಳನ್ನು ಮಾಡಿರುತ್ತಾರೆ (1-14). ದಾಸರ ಕೃತಿಗಳನ್ನು ವಿನಿಕೆಯ ದೃಷ್ಟಿಯಿಂದ ಅಭ್ಯಾಸ ಮಾಡುವವರಿಗೆ ಬಿ.ವಿ. ಕಾರಂತರು 'ಸತ್ತವರ ನೆರಳಿ'ಗಾಗಿ ನಿರ್ದೇಶಿಸಿದ ಪುರಂದರದಾಸರ ಹಾಡುಗಳಲ್ಲಿ ಹೊಸು ಊರುಗೋಲುಗಳೂ, ಸಂಕೇತಗಳೂ, ಕೈಹಿಡಿಗಳೂ, ಸ್ವಾತಂತ್ರ್ಯವೂ ಸಿಗುತ್ತವೆ ಎಂದು ಬಿ.ಜಿ.ಎಲ್. ಸ್ವಾಮಿ ಸೂಚಿಸಿದ್ದಾರೆ. (1-16)

ಕಾರಂತರು ಸಂಗೀತ ಸಂಕೇತಗಳ ಮೂಲಕವೇ ನಾಟಕದ ಅರ್ಥವಂತಿಕೆಯನ್ನು ಗ್ರಹಿಸುತ್ತಾರೆ ಎಂಬ ಸುಬ್ಬಣ್ಣನವರ ಒಳನೋಟಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿಯವರ ಅಭಿಪ್ರಾಯವನ್ನು ಗಮನಿಸಿಬೇಕು - ಆದ್ದರಿಂದ ಗದ್ಯದಲ್ಲಿ ಪದ್ಯದಲ್ಲಿ, ಭಾಷೆಯ ಬಳಕೆಯ ಎಲ್ಲ ಸಾಧ್ಯತೆಗಳಲ್ಲೂ ಕಾರಂತರು ಲೀಲಾಜಾಲವಾಗಿ ವ್ಯವಹರಿಸುತ್ತಾರೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮದಲ್ಲಿ ತನ್ನದೇ ಆದ ಗತಿ-ಶೈಲಿಯಲ್ಲಿ ಕೆಲಸ ಮಾಡಬಲ್ಲರು. ನಾಟಕ, ಕಾವ್ಯ, ಚಳವಳಿ, ಸಿನಮಾ ಯಾವುದೇ ಇರಲಿ ಕಾರಂತರು ಮಾತನಾಡುವುದು ಅದರಲ್ಲಿರುವ ಸಂಗೀತದ ಮೂಲಕ - ಅಂದರೆ ಧ್ವನಿ, ನಾದ, ಸ್ವರ, ಲಯ ವಿನ್ಯಾಸಗಳನ್ನು ತೆರೆದು ತೋರಿಸುತ್ತ ಆವಿರ್ಭಸುತ್ತ. (1-15). ಗುರುರಾಜ ಮಾರ್ಪಳ್ಳಿಯವರು ಕೇಳಿರುವ ಪ್ರಶ್ನೆಗಳನ್ನಿಟ್ಟುಕೊಂಡು ಕಾರಂತರ ರಂಗಸಂಗೀತವನ್ನು ಕುರತು ಚಚೇಯನ್ನು ಮುಂದುವರಿಸಬಹುದು. - ಕಾರಂತರು ಸಂಗೀತದಲ್ಲಿ ಇಷ್ಟೆಲ್ಲ ಸಾಧ್ಯತೆಗಳ ಹುಡುಕಾಟ ಮಾಡಿದರೂ, ಕಾರಂತರಲ್ಲಿ ಎಲ್ಲೊ ಪಾಶ್ಚಾತ್ಯ ಸಂಗೀತದ ಲಿಂಕ್ಸ್‌ನ ಕಸಿ ಭಾರತೀಯ ಸಂಗೀತ ಪದ್ಧತಿಗೆ ಮಾಡಿದಂತೆ ಅನಿಸುತ್ತದೆ. ('ಗೋಕುಲ ನಿರ್ಗಮನ'ದ 'ಬರುತಿಹನೆ ನೋಡೆ' ಎನ್ನುವ ಹಾಡಿನ ಸಂಯೋಜನೆ). ಆದ್ದರಿಂದ ಕಾರಂತರು ಕೇವಲ ಭಾಷೆ, ಬದುಕುಗಳನ್ನು ಮೀರಿ ಹೆಚ್ಚು ಸಾರ್ವತ್ರಿಕವಾದ ಮಾನವೀಯ ಸ್ಪಂದನಗಳಿಗಾಗಿ ಸ್ವರ ಸಂಯೋಜಿಸಿದ್ದಾರೆಯೇ? ಪಾಶ್ಚಾತ್ಯ ಸಂಗೀತದ ಸಂವಹನದಲ್ಲಿ ಭಾರತೀಯ ಸಂಗೀತಕ್ಕಿಂತ ಹೆಚ್ಚು ಸೂಕ್ಷ್ಮತೆಯಿದೆ ಎಂದು ಭಾವಿಸುತ್ತಾರೆಯೇ? ಭಾರತೀಯ ರಂಗಸಂಗೀತ ಕಾಲದೇಶಗಳ ಗಡಿ ಮೀರಿ ತನ್ನದೇ ಸ್ವತಂತ್ರ ನೆಲೆಯಲ್ಲಿ ನಿಲ್ಲಲು ಈ ಕಸಿ ಅನಿವಾರ್ಯವೆಂದುಕೊಂಡಿದ್ದಾರೆಯೇ? (1-15)

3
ಸಿನೆಮಾ ನಿರ್ದೇಶಕ

ಬಿ.ವಿ. ಕಾರಂತರು ನಿರ್ದೇಶಿಸಿದ 'ಚೋಮನ ದುಡಿ' ಸಿನೆಮಾ ರಾಷ್ಟ್ರಪ್ರಶಸ್ತಿ ಪಡೆದ ಸಂದರ್ಭದಲ್ಲಿ ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾಗಿದ್ದ ಖ್ವಾಜಾ ಅಹಮದ್ ಅಬ್ಬಾಸ್ ಅವರು ಬಿ.ವಿ. ಕಾರಂತರಿಗೆ ಬರೆದ ಪತ್ರದ ಒಂದು ಸಾಲು ಹೀಗಿತ್ತು - ಭಾರತದಲ್ಲಿ ಮತ್ತೊಬ್ಬ ಸತ್ಯಜಿತ್ ರಾಯ್ ಹುಟ್ಟಿದ್ದಾನೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು. ಇಂಥ ಪ್ರಶಂಸೆಗಳು ಬಂದರೂ ಕಾರಂತರು ಸಿನೆಮಾ ಮಾಧ್ಯಮಕ್ಕೆ ಮರುಳಾಗಲಿಲ್ಲವೆಂಬುದನ್ನು ಗಮನಿಸಬೇಕು. ಸಿನೆಮಾದಲ್ಲಿ ಮನುಷ್ಯ ಇರುವುದಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ನಾಟಕದಲ್ಲಿ ಮಾತ್ರ ಮನುಷ್ಯ ಹೇಗಿದ್ನೊ ಹಾಗೆ ಜೀವಂತವಾಗಿ ಕಾಣಿಸುತ್ತಾನೆ ಎಂಬ ಅವರ ಅಭಿಪ್ರಾಯ ಇದಕ್ಕೆ ಕಾರಣವಾಗಿರಬಹುದು. 'ವಂಶವೃಕ್ಷ' 'ತಬ್ಬಲಿಯು ನೀನಾದೆ ಮಗನೆ' ಸಿನೆಮಾಗಳನ್ನು ಕಾರಂತರು ಗಿರೀಶ ಕಾರ್ನಾಡ್ ಜತೆಯಲ್ಲಿ ನಿರ್ದೇಶಿಸಿದರು. 'ಬೋರ್ ಬೋರ್ ಚಿಪ್ ಚಿಪ್ ಜಾ' - ಕಾರಂತರು ಮಕ್ಕಳಿಗಾಗಿ ನಿರ್ದೇಶಿಸಿದ ಸಿನೆಮಾ. 'ಶಿವರಾಮ ಕಾರಂತ' ಮತ್ತು 'ದಕ್ಷಿಣ ಕನ್ನಡದ ಭೂತಾರಾಧನೆ' ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಕಾರಂತರು ತನ್ನ ಸಿನೆಮಾಗಳಿಗೆ ಮಾತ್ರವಲ್ಲದೆ ಬೇರೆಯವರ ಹಲವು ಸಿನೆಮಾಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ಮೃಣಾಲ್ ಸೆನ್‍ರ 'ಪರಶುರಾಮ್', 'ಖಾರಿಜ್', 'ಏಕ್ ದಿನ್ ಪ್ರತಿ ದಿನ್', ಎಂ.ಎಸ್. ಸತ್ಯು ಅವರ 'ಕನ್ನೇಶ್ವರ ರಾಮ', ಜಿ.ವಿ. ಅಯ್ಯರ್ ಅವರ 'ಹಂಸಗೀತೆ', 'ಕುದುರೆ ಮೊಟ್ಟೆ', 'ಶಂಕರಾಚಾರ್ಯ', 'ಭಗವದ್ಗೀತೆ', ಗಿರೀಶ್ ಕಾರ್ನಾಡರ 'ಕಾಡು', 'ಆ ಮನಿ', ವಿ.ಆರ್.ಕೆ. ಪ್ರಸಾದ್‍ರ 'ಋಷ್ಯಶೃಂಗ', ಬರಗೂರು ರಾಮಚಂದ್ರಪ್ಪನವರ 'ಬೆಂಕಿ', ಗಿರೀಶ ಕಾಸರವಳ್ಳಿಯವರ 'ಘಟಶ್ರಾದ್ಧ', 'ಮೂರು ದಾರಿಗಳು', 'ಆಕ್ರಮಣ', ಟಿ.ಎಸ್. ರಂಗಾ ಅವರ 'ಗೀಜಗನ ಗೂಡು', 'ಗಿದ್ದ್', ಪ್ರೇಮಾ ಕಾರಂತರ 'ಫಣಿಯಮ್ಮ' 'ನಕ್ಕಳಾ ರಾಜಕುಮಾರಿ' ಮತ್ತು 'ನೀಚ ನಗರ' ಇವು ಕಾರಂತರು ಸಂಗೀತ ನಿರ್ದೇಶನ ಮಾಡಿರುವ ಸಿನೆಮಾಗಳು.

'ಚೋಮನ ದುಡಿ'ಯಲ್ಲಿ ಕಾರಂತರು ಮಿಡಿತೆಗಳ, ಚಿಮ್ಮಂಡೆಗಳ ಕರ್ಕಶ ಶಬ್ದವನ್ನು, ಬಿದಿರಿನ ಹಿಂಡಿನ ತಿಕ್ಕಾಟದ ಶಬ್ಷ, ಡೋಲಿನ ಧ್ವನಿಯನ್ನು ಬಳಸಿದರು. 'ಋಷ್ಯಶೃಂಗ'ದಲ್ಲಿ ಸೂರ್ಯನ ಉರಿಬಿಸಿಲಿನಲ್ಲಿ ಹೆಣಗಳು ಬಿದ್ದಿದ್ದ ದೃಶ್ಯಕ್ಕೆ ತಾನಾಪುರವನ್ನು ಅಪಶೃತಿಯಲ್ಲಿ ನುಡಿಸಿದಾಗ ಹೊಮ್ಮುವ ಮತ್ತು ಸತ್ಯಧ್ವನಿಯನ್ನು ಬಳಸಿದರು. ಋತ್ವಿಕ್ ಘಟಕ್ ಮತ್ತು ಸತ್ಯಜಿತ್ ರೇ ಅವರ ಪ್ರೇರಣೆಯಿಂದ ಕಾರಂತರು ಸಿನೆಮಾ ಸಂಗೀತದಲ್ಲಿ ಸೃಜನಶೀಲ ಪ್ರಯೋಗಗಳನ್ನು ಮಾಡಿದ್ದಾರೆ. 'ಘಟಶ್ರಾದ್ಧ' 'ಋಷ್ಯಶೃಂಗ'ಗಳ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿಗಳನ್ನು, 'ಹಂಸಗೀತೆ' (1977)ಯ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಅವರು ಪಡೆದರು.

4

ನಾಟಕ, ಸಿನೆಮಾಗಳ ನಟನಾಗಿ ಬಿ.ವಿ. ಕಾರಂತರು ಹೆಸರು ಗಳಿಸಲಿಲ್ಲ. ಎಂ.ಎಸ್. ಸತ್ಯು ಅವರ 'ಜೀವದ ಬೊಂಬೆ' ನಾಟಕದಲ್ಲಿ ಪಾತ್ರವಹಿಸಿದಾಗ ಅವರು ಸ್ಕ್ರಿಪ್ಟ್ ಕೈಯಲ್ಲಿ ಹಿಡಿದೇ ಅಭಿನಯಿಸುತ್ತಿದ್ದರಂತೆ ! (1-10). 'ವಂಶವೃಕ್ಷ' ಸಿನೆಮಾದಲ್ಲಿ ಅವರು ಪ್ರೊಫೆಸರ್‌ನ ಪಾತ್ರ ವಹಿಸಿದ್ದರು.

ಕಾರಂತರು ತನ್ನ ಯೌವನದಲ್ಲಿ 'ಗಡ್ಡಧಾರಿ' ಎಂಬ ಕಾವ್ಯನಾದದಲ್ಲಿ 'ಸಾಹಿತ್ಯ ಸ್ಪೀಕಿಂಗ್ ಕಂಪೆನಿ' ಎಂಬ ನಾಟಕವನ್ನು ಬರೆದು ಪ್ರಕಟಿಸಿದ್ದರು. ಭಾಸನ 'ಸ್ವಪ್ನವಾಸವದತ್ತ', ಶೂದ್ರಕನ 'ಮೃಚ್ಛಕಟಿಕ', ಗಿರೀಶ್ ಕಾರ್ನಾಡರ 'ತುಘಲಕ್', 'ಹಯವದನ', 'ಹಿಟ್ಟಿನ ಹುಂಜ', ಶ್ರೀರಂಗರ 'ಕೇಳು ಜನಮೇಜಯ', 'ಕತ್ತಲೆ-ಬೆಳಕು', 'ರಂಗಭಾರತ' ನಾಟಕಗಳನ್ನು ಕಾರಂತರು ಹಿಂದೀಗೆ ಭಾಷಾಂತರಿಸಿದ್ದಾರೆ. 'ಪಂಜರಶಾಲೆ' (ಮೂಲ - ರವೀಂದ್ರನಾಥ ಠಾಕೂರರ ಸಣ್ಣ ಕಥೆ), 'ಹೆಡ್ಡಾಯಣ' (ಮೂಲ - ಕನ್ನಡ ಜನಪದ ಕತೆ) ಮತ್ತು 'ಅಳಿಲು ರಾಮಾಯಣ' - ಇವು ಕಾರಂತರು ಮಕ್ಕಳಿಗಾಗಿ ಕನ್ನಡದಲ್ಲಿ ಬರೆದಿರುವ ನಾಟಕಗಳು.

ವೆಂಕಟರಮಣನ ಸಂಕಟಗಳು

ಹೊರನೋಟಕ್ಕೆ ಅವಸರ, ಗಡಿಬಿಡಿ, ಚಟುವಟಿಕೆ, ಗೊಂದಲ, ಕೂತಲ್ಲಿ ಕೂರಲಾರದ ನಿಂತಲ್ಲಿ ನಿಲ್ಲಲಾರದ ವ್ಯಕ್ತಿತ್ವ. ಅಂತರಂಗದಲ್ಲಿ ಅವರು ಮೃದು, ಕೋಮಲ; ತನ್ನಿಂದ ಯಾರಿಗೂ ನೋವಾಗದಂತೆ ಎಚ್ಚರ. ಪ್ರಕೃತಿ, ಪ್ರಾಣಿಗಳನ್ನು ಕುರಿತು ತುಂಬಾ ಪ್ರೀತಿ. ವ್ಯವಹಾರ ಜ್ಞಾನ ಇಲ್ಲ. 'ಬೆಳ್ಳಗಿದ್ದುದೆಲ್ಲಾ ಹಾಲು' ಎಂದು ನಂಬುವವರು. ಸೃಜನಶೀಲ ವ್ಯಕ್ತಿಯಾಗಿ ಅಹೋರಾತ್ರಿ ದುಡಿಯುವ ತಾಕತ್ತು. ವೈವಿಧ್ಯಪೂರ್ಣ ಪುಸ್ತಕಾಸಕ್ತಿ - ಪ್ರೇಮಾ ಕಾರಂತರು ತನ್ನ ಗಂಡ ಬಿ. ವೆಂಕಟರಮಣ ಕಾರಂತರ ವ್ಯಕ್ತಿತ್ವವನ್ನು ಚಿತ್ರಿಸುವುದು ಹೀಗೆ. ನನಗೆ ಕಾರಂತರು ಕೊಟ್ಟಿರುವಷ್ಟು ಸ್ವಾತಂತ್ರ್ಯ ಯಾವನೇ ಗಂಡ ತನ್ನ ಹೆಂಡತಿಗೆ ಕೊಡಬಲ್ಲ ಎಂದು ಅನ್ನಿಸೋಲ್ಲ ಎನ್ನುತ್ತಾರವರು (1-5). ಜಿ.ವಿ. ಅಯ್ಯರ್ ತನ್ನ ಶಿಷ್ಯ ಕಾರಂತರ ವ್ಯಕ್ತಿತ್ವವನ್ನು ಕುರಿತು, ಮೇಲುನೋಟಕ್ಕೆ ಕಾರಂತ ಭಾವುಕನಾಗೇ ಕಾಣಿಸುತ್ತಾನೆ. ಸರಳ ಸ್ವಭಾವದ ಅವನ ಅಂತರಂಗದಲ್ಲಿರುವುದೆಲ್ಲಾ ಛಲಗಾರನ ಕಪಿಮುಷ್ಟಿಗಳೇ. ಸಾಧನೆ, ತಪಸ್ಸು, ನಡುನಡುವೆ ಸಣ್ಣ ಪುಟ್ಟ ದುಶ್ಚಟಗಳು ...... ತನ್ನ ಬಲಹೀನತೆಯನ್ನು ತುಳಿದೇಳುವ ಆತ್ಮವಿಶ್ವಾಸ, ಇವುಗಳೆ ಕಾರಂತನ ಬಣ್ಣಗಳು-ಬದಲಾವಣೆಗಳು, ರಂಗುರಂಗಿನ ಮಜಲುಗಳು ಎನ್ನುತ್ತಾರೆ. (1-4).

"ಹಣವನ್ನೇದರೂ ಇಟ್ಟುಕೊಂಡಿದ್ದೀರಾ? ಅಥವಾ ಯಥಾಪ್ರಕಾರದ ಕಲಾವಿದರ ಕಣ್ಣೀರ ಕಥೆಯನ್ನು ಸಿದ್ಧಪಡಿಸುತ್ತಿದ್ದೀರಾ?" ಎಂದು 1982ರಲ್ಲಿ ಲಂಕೇಶರು ಕೇಳಿದ ಪ್ರಶ್ನೆಗೆ ಕಾರಂತರ ಉತ್ತರ ಹೀಗಿತ್ತು - ಪೈಸೆ ಹಣವಿಲ್ಲ. ಆದರೆ ನನ್ನ ಹತ್ತಿರ ಪುಸ್ತಕಗಳು, ಸಂಗೀತದ ರಿಕಾರ್ಡುಗಳು, ತಾಳ, ಜಾಗಟೆ, ಡೋಲುಗಳು, ಅನೇಕ ವಾದ್ಯಗಳು, ನಾಟಕ ಸಾಮಗ್ರಿಗಳು ಇವೆ.
'ನಾಟ್ಯಶಾಸ್ತ್ರ'ವನ್ನು ಬರೆದ ಭರತನ ಬದುಕಿನ ಕತೆ ನಮಗೆ ತಿಳಿದಿಲ್ಲ. ಭರತ ಭಾರತದ ಉದ್ದಗಲದಲ್ಲಿ ಅಲೆಮಾರಿಯಾಗಿ ಸಂಚರಿಸಿ ನೂರಾರು ತರದ ರಂಗಕಲೆಗಳನ್ನು ನೋಡಿರಬಹುದು. ಸೂತ್ರಧಾರನಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿರಬಹುದು . ದೇವತೆಗಳು ನಾಟಕ ಪ್ರದರ್ಶಿಸುವಾಗ ರಾಕ್ಷಸರು ಗಲಭೆ ಮಾಡಿದ್ದು ಅವನ ಬದುಕಿನ ಘಟನೆಯೇ ಆಗಿರಬಹುದು. ಬಿ.ವಿ. ಕಾರಂತರ ವ್ಯಕ್ತಿತ್ವವನ್ನು, ಕೊಡುಗೆಗಳನ್ನು ಅವಲೋಕಿಸುವಾಗ ಭರತನ ನೆನಪಾಗುತ್ತದೆ, ಅವನು ವಿವರಿಸುವ 'ಮಾನುಷೀ ಸಿದ್ಧಿ'ಯ ನೆನಪಾಗುತ್ತದೆ.

5
ವೈಚಾರಿಕ ನಿಲುವುಗಳು

ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾರಂತರು ಕೆಲವು ದಿನ ಆರ್.ಎಸ್.ಎಸ್. ಶಾಖೆಗೆ ಹೋಗಿದ್ದರು. ಅನಂತರ ಆಸಕ್ತಿ ಕಳಕೊಂಡರು (1-2). 1983ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಕಾರಂತರು, ಕಾಂಗ್ರೆಸ್ ಪಾರ್ಟಿಯಲ್ಲಿ ನನ್ನನ್ನ ಯಾರೂ ಅಷ್ಟಾಗಿ ಆಕರ್ಷಿಸಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಾರಿಕೆಯಿಂದ, ಜ್ಯೋತಿ ಬಸು ಅವರ control ಮಾಡುವ ಸಾಮರ್ಥ್ಯದಿಂದ ಆಕರ್ಷಿತನಾಗಿದ್ದೇನೆ. ಮೊದಲು ನಂಬೂದಿರಿಪಾಡ್ ಅವರನ್ನು ತುಂಬ ಮೆಚ್ಚಿಕೊಂಡಿದ್ದೆ ಎಂದಿದ್ದಾರೆ. (3-2)

1991ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಬಿ.ವಿ. ಕಾರಂತರು ಸಂಸ್ಕೃತಿಯ ರಾಜಕೀಕರಣದ ಕುರಿತು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ - ಅಡ್ವಾಣಿ, ವಾಜಪೇಯಿ ಬಗ್ಗೆ ಗೌರವ ಇದೆ ನನ್ಗೆ. ಇವ್ರು ಇಬ್ರೂ ಒಳ್ಳೆ ವ್ಯಕ್ತಿಗಳು. ದೆಹಲಿಯಲ್ಲಿ ಎಲ್ಲ ನಾಟಕ ನೋಡ್ಲಿಕ್ಕೆ ಬರ್ತಿದ್ರು. ಅಡ್ವಾಣಿಯವರಂತೂ ಮಕ್ಕಳ ನಾಟಕ ನೋಡ್ಲಿಕ್ಕೆ ಕೂಡ ಬರ್ತಿದ್ರು. ಅಷ್ಟು ಒಳ್ಳೆ ವ್ಯಕ್ತಿ. ರಥಯಾತ್ರೆ ಮಾಡಿದಾಗ ಯಾಕೆ ಮಾಡಿದ್ರು ಅಂತ ಆಶ್ಚರ್ಯ ಆಯ್ತು ನನ್ಗೆ. ಆ ಕೆಟ್ಟ ಬಣ್ಣ, ರಥದಲ್ಲಿ ಕಲರ್ ಸೆನ್ಸೇ ಇರ್ಲಿಲ್ಲ. ಅಡ್ವಾಣಿ ರಥ ಸ್ಟೇಜ್ನಲ್ಲಿ ಮಾಡಿದ ಕಟ್ ಔಟ್ ಥರ ಇತ್ತು. ಅದೊಂದು ವಿಕೃತಿ..... ರಾಮ ಎಲ್ಲೆಲ್ಲ ಹೋಗಿದ್ನೊ, ಅದು ಪವಿತ್ರ ನಮ್ಗೆ. ರಾಮ ಹುಟ್ಟಿದ ಸ್ಥಳ ಅಲ್ಲ. ರಾಮ ಮಾರ್ಗ ಮುಖ್ಯ - ಯಾತ್ರಾ ಸ್ಥಳವಲ್ಲ. ತೀರ್ಥಯಾತ್ರೆ ಮುಖ್ಯ ನಮ್ಗೆ, ರಥಯಾತ್ರೆ ಅಂತ ಅದನ್ನು ತುಂಬ ಕೆಳಮಟ್ಟದಲ್ಲಿ ತೋರಿಸಿಬಿಟ್ರು. ಇತಿಹಾಸ ಮೊದಲ ಬಾರಿ ರಿಪೀಟ್ ಆದಾಗ ಟ್ರಾಜಿಡಿ (ದುರಂತ ನಾಟಕ) ಆಗತ್ತೆ, ಎರಡನೇ ಬಾರಿ ರಿಪೀಟ್ ಆದಾಗ ಕಾಮೆಡಿ ಆಗುತ್ತೆ. ನೋಡಿ, ರಥಯಾತ್ರೆ ಒಂದು ಕಾಮೆಡಿನೇ.... ಭಾರತೀಯ ಜನತೆ ಅಷ್ಟು ಮೂಲಭೂತವಾದಿಗಳಾಗಿಲ್ಲ. ಕ್ರಿಶ್ಚಿಯನ್ನರಿಗೆ ಒಂದೇ ಬೈಬಲ್, ಮುಸ್ಲೀಮರಿಗೆ ಒಂದೇ ಕುರಾನ್. ನಮ್ಗೆ ಹಾಗಲ್ಲ. ಎಷ್ಟೊಂದು ರಾಮಾಯಣಗಳು, ಎಷ್ಟೊಂದು ಪುರಾಣಗಳು ! ನಮ್ಮ ಕೃಷ್ಣ ಎಷ್ಟು ಲೆವೆಲ್‍ಗಳ ದೇವರು ! ತುಂಟ ಕೃಷ್ಣ, ಪ್ರಿಯಕರ ಕೃಷ್ಣ, ದಾರ್ಶನಿಕ ಕೃಷ್ಣ. ಈ ನಮನೀಯತೆ ಬೇರೆ ಯಾವ ಧರ್ಮದಲ್ಲಿದೆ? ಈ ಫೆಕ್ಸಿಬಿಲಿಟಿ (ನಮನೀಯತೆ) ಈ ಫ್ರೀ ಕಲ್ಪನೆ ಇಲ್ದಿದ್ರೆ ನಮ್ಮ ದೇಶದಲ್ಲಿ ಇಷ್ಟು ರಾಮಾಯಣಗಳೇ ಆಗ್ತಾ ಇರ್ಲಿಲ್ಲ....... ನಮ್ಮ ಸಂಸ್ಕೃತಿ ದೇವ್ರಿಗಿಂತ ಹೆಚ್ಚು ಸೃಷ್ಟಿಶೀಲ ಅನ್ನಿಸುತ್ತೆ. ಸೋಮನಾಥಪುರದಲ್ಲಿ ಪೂಜೆಯಿಲ್ಲ. ಆದ್ರೆ ಸಂಸ್ಕೃತಿಯ ದೃಷ್ಟಿಯಿಂದ ಎಲ್ಲ ಮತಧರ್ಮಗಳಿಗೆ ಸೇರಿದವ್ರು ಅಲ್ಲಿಗೆ ಹೋಗ್ತಾರೆ. ಸಂಸ್ಕೃತಿಯನ್ನ ರಾಜಕೀಕರಣ ಮಾಡುವವ್ರು 'ಭಾರತ್ ಭವನ'ದಲ್ಲಿ ತಾರತಮ್ಯ ಶುರುಮಾಡ್ತಾರೆ. ಇದು ಸರಿಯಿಲ್ಲ. ಕಲೆಯಲ್ಲಿ ತಾರತಮ್ಯ ಕೂಡದು. ಆದ್ರಿಂದ್ಲೇ ನಾನು ಸ್ಪರ್ಧೆಗೆ ವಿರೋಧಿ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸ್ಬೇಡಿ ಅನ್ನೋದು ಈ ಕಾರಣಕ್ಕಾಗಿಯೇ. ನೀವು ಭೀಮಸೇನ ಜೋಶಿ ಮತ್ತು ಕುಮಾರ ಗಂಧರ್ವರನ್ನು ಏನು ಕಂಪೇರ್ ಮಾಡ್ತೀರ?9

ಕಾರಂತರ ವೈಚಾರಿಕತೆಯನ್ನು ಅವರ ರಂಗಕೃತಿಗಳಲ್ಲೇ ಹುಡುಕಬೇಕು. ಜಗತ್ತಿನ ವಿವಿಧ ಭಾಷೆಗಳ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ಅವರು ನಿರ್ದೇಶನಕ್ಕೆ ಆಯ್ಕೆ ಮಾಡಿದ್ದಾರೆ. ರಂಗಕೃತಿಗಳ ಆಯ್ಕೆಯಲ್ಲಿ ಅವರು ಕೃತಿಯ ವೈಚಾರಿಕ-ಕಲಾತ್ಮಕ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿದ್ದಾರೆ. ರಾಜಕೀಯ ಪಕ್ಷವೊಂದರ ಸಿದ್ಧಾಂತಕ್ಕೆ ಬದ್ಧವಾಗಿದ್ದ ಬ್ರೆಕ್ಟ್‌ನ ನಾಟಕಗಳನ್ನು ಅವರು ನಿರ್ದೇಶಿಸಿಲ್ಲ. 'ಸಂಕ್ರಾಂತಿ' 'ಸತ್ತವರ ನೆರಳು' ನಾಟಕಗಳನ್ನು ಆಯ್ಕೆಮಾಡುವ ಕಾರಂತರು ಹಿನ್ನೋಟದ ವ್ಯಕ್ತಿಯಲ್ಲ. ರಂಗಭೂಮಿಯಲ್ಲಿರುವ ಪ್ರಜಾಸತ್ತಾತ್ಮಕ ಅಂಶಗಳನ್ನು ಅವರು ಗೌರವಿಸುತ್ತಾರೆ. ರಂಗಸಂಗೀತವನ್ನು ಕುರಿತ ಕಾಣ್ಕೆಯಲ್ಲಿ ಸಂಗೀತವಾಗಲಿ, ನಾಟಕವಾಗಲಿ ಸ್ಥಾವರವಾಗಬಾರದೆಂಬ ನಿಲುವಿದೆ. ಅವರಿಗೆ ವಾಸ್ತವಾದದ ಮಿತಿಗಳ ಅರಿವಿದೆ. ರಂಗಭೂಮಿಯ 'ಲಾಜಿಕ್'ಕ್ಕಿಂತಲೂ ಅವರ 'ಮ್ಯಾಜಿಕ್' ಅವರನ್ನು ವಿಶೇಷವಾಗಿ ಆಕರ್ಷಿಸಿದೆ. ಹಿಂದೀಯ ಪ್ರಾದೇಶಿಕ ಉಪಭಾಷೆಯಾದ ಬುಂದೇಲಿಯಲ್ಲಿ ಕಾಳಿದಾಸನ ನಾಟಕ ಮಾಡಿಸುವ, ಹೆಗ್ಗೋಡಿನಲ್ಲಿ ಮಕ್ಕಳ ನಾಟಕ ನಿರ್ದೇಶಿಸುವ ಕಾರಂತರಿಗೆ ಪ್ರಾದೇಶಿಕ ಅನನ್ಯತೆ ಮತ್ತು ಸಾಂಸ್ಕೃತಿಕ ವಿಕೇಂದ್ರೀಕರಣಗಳಲ್ಲಿ ನಂಬಿಕೆ ಇದೆ. ಕಾರಂತರು ಸಿದ್ಧಾಂತಗಳ ಚೌಕಟ್ಟಿನಲ್ಲಿ ಸಮಾಜವನ್ನು ನೋಡುವವರಲ್ಲ. ಸಂಗೀತ-ನಾಟಕ ಮಾಧ್ಯಮಗಳಲ್ಲಿನ ತನ್ನ ಕ್ಷೇತ್ರಕಾರ್ಯ ಅನುಭವದ ಮೂಲಕ ನಾಡಿನ ಸಾಂಸ್ಕೃತಿಕ ಸಾತತ್ಯವನ್ನು ಗ್ರಹಿಸುತ್ತಾರೆ; ತನ್ನ ಸೃಜನಶೀಲ ಕನಸುಗಳನ್ನು ಸಾಕಾರಗೊಳಿಸುತ್ತಾರೆ. ಸಾಂಸ್ಕೃತಿಕ ಕ್ಷೇತ್ರದ ನಿರ್ವಸಾಹತೀಕರಣದ ಚಳವಳಿಗೆ ತನ್ನ ರಂಗಕೃತಿ ಮತ್ತು ರಂಗಸಂಗೀತದ ಮೂಲಕ ಅವರು ಮೌಲಿಕ ಕೊಡುಗೆ ನೀಡಿದ್ದಾರೆ.

'ಮಹಾಭಾರತ'ದ ನಿರ್ದೇಶಕ ಪೀಟರ್ ಬ್ರೂಕ್‍ನ ಭಾರತಯಾತ್ರೆಯನ್ನು ಕಾರಂತರು ತಕರಾರುಗಳಿಲ್ಲದೆ ಸ್ವಾಗತಿಸಿದರು. ಪೀಟರ್ ಬ್ರೂಕ್‍ನ ಪ್ರಯೋಗದಲ್ಲಿ ನವವಸಾಹತುಶಾಹಿಯ ಕುತಂತ್ರವನ್ನು ಕಂಡ ಕೆ.ವಿ. ಸುಬ್ಬಣ್ಣ ಅದನ್ನು ತೀವ್ರವಾಗಿ ಪ್ರತಿಭಟಿಸಿದರು - ನನ್ನ ವಯಸ್ಸಿನವನಿಗೂ ತಾಯಿಯೆನಿಸುವ, ಜೆಕೆ ಸಾನ್ನಿಧ್ಯದಲ್ಲೇ ಸುಳಿದಾಡಿದ ಮತ್ತು ಮುಖ್ಯವಾಗಿ ಈ ಬೃಹತ್ ದೇಶದ ಸಾಂಸ್ಕೃತಿಕ ಸಲಹೆಗಾರಳಾಗಿದ್ದ ಪುಫುಲ್ ಜಯಕರರಂಥ ಪ್ರಸನ್ನ ಮಹಿಳೆ ಹಾಗೂ ನನ್ನ ಮಟ್ಟಿಗೆ ಬ್ರೂಕ್‍ಗಿಂತ ಮಿಗಿಲಾದ ಪ್ರತಿಭೆಯುಳ್ಳ ಪ್ರಿಯ ಬಿ.ವಿ. ಕಾರಂತರು ಮೊದಲಾದವರು ಬ್ರೂಕ್‍ರನ್ನು ಹಿಂಬಾಲಿಸಿ ತಿರುಗಿದ್ದು ಕಂಡು ನನ್ನ ತಲೆ ತಗ್ಗಿಹೋಗಿದೆ. 10

6
ಕಾರಂತಾಯಣದ ಫಲಶ್ರುತಿ ಏನು? - ಕಾರಂತರು ಭಾರತದ, ಕರ್ನಾಟಕದ ರಂಗಭೂಮಿಗೆ ನೀಡಿರುವ ಕೊಡುಗೆಯನ್ನು ಈ ಗ್ರಂಥದಲ್ಲಿ ವಿವಿಧ ವಿಮರ್ಶಕರು ಹೀಗೆ ಗುರುತಿಸಿದ್ದಾರೆ -
1. ರಂಗಕೃತಿಗಳ ಗುಣಮಟ್ಟ, ಸಂಖ್ಯಾಬಾಹುಳ್ಯ ಮತ್ತು ಭಾಷಾವೈವಿಧ್ಯಗಳ ದೃಷ್ಟಿಯಿಂದ ಕಾರಂತರು ಈ ಶತಮಾನದ, ಭಾರತದ ಪ್ರಧಾನ ನಿರ್ದೇಶಕರಲೊಬ್ಬರು.
2. 'ಹಯವದನ'ದ ಪದ್ಮಿನಿ ಕಪಿಲನ ದೇಹ ಮತ್ತು ದೇವದತ್ತನ ತಲೆಯನ್ನು ಜೋಡಿಸಿದಂತೆ ಕಾರಂತರು ಕಂಪೆನಿ ರಂಗಭೂಮಿಯ ವೈಭವ ಮತ್ತು ಹವ್ಯಾಸಿ ರಂಗಭೂಮಿಯ ಚಿಂತನೆಯನ್ನು ಒಗ್ಗೂಡಿಸಿದರು. ಪ್ರಸನ್ನ ಹೇಳುವಂತೆ, ಮ್ಯಾಜಿಕ್‍ನ ಕೊಂಡಿ ಕಳಚಿದ ಪರಂಪರೆಗೆ ಮತ್ತೆ ಮ್ಯಾಜಿಕ್‍ನ ಕೊಂಡಿಯನ್ನು ಜೋಡಿಸಿದರು.
3. ರಾಷ್ಟ್ರೀಯ ನಾಟಕಶಾಲೆಯ ವಿಕೇಂದ್ರೀಕರಣವನ್ನು ಆರಂಭಿಸಿದ ಕಾರಂತರು, ಭಾರತೀಯ ರಂಗಭೂಮಿಯ ಬಹುವಚನೀಯತೆಯನ್ನು ಗುರುತಿಸಿದರು.
4. ನಾಟ್ಯಶಾಸ್ತ್ರದ ಪರಂಪರೆಯ ಸಾತತ್ಯಕ್ಕೆ ಚಾಲನೆ ನೀಡಿ, ಭಾರತೀಯ ರಂಗಭೂಮಿಯನ್ನು ವಸಾಹತುಶಾಹಿ ರಂಗಭೂಮಿಯ ಪ್ರಭಾವದಿಂದ ಬಿಡಿಸಲು ಅವರು ಸದ್ದಿಲ್ಲದೆ ಪ್ರಯತ್ನಿಸಿದರು.
5. ಕರ್ನಾಟಕದಲ್ಲಿ ನಿರ್ದೇಶಕನಿಗೆ ಸ್ಥಾನಮಾನ ತಂದುಕೊಟ್ಟ ಕಾರಂತರು ತನ್ನ ಭಾಷಾಂತರ ಮತ್ತು ರಂಗಕೃತಿಗಳ ಮೂಲಕ ಕನ್ನಡ ರಂಗಭೂಮಿಗೆ ಅಖಿಲ ಭಾರತ ಮನ್ನಣೆ ದೊರಕಿಸಿದರ.
6. ಮಕ್ಕಳ ನಾಟಕ ಕ್ಷೇತ್ರದಲ್ಲಿ ಪವಾಡಗಳನ್ನು ಮಾಡಲು ಸಾಧ್ಯ ಎಂಬುದನ್ನು ಕಾರಂತರು ಸಾಧಿಸಿ ತೋರಿಸಿದರು.
7. ರಂಗಸಂಗೀತವನ್ನು ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಧ್ವನಿವಿನ್ಯಾಸವಾಗಿ ಬೆಳೆಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.
8. ಭಾರತದ ವಿವಿಧ ಜನಪದ ಸಂಪ್ರದಾಯಗಳಲ್ಲಿರುವ ರಂಗಭೂಮಿಯ ಸಾಧ್ಯತೆಗಳನ್ನು ಕಾರಂತರು ನಾಟಕಗಳಲ್ಲಿ ಅಳವಡಿಸಿಕೊಂಡರು.
9. ಎನ್.ಎಸ್.ಡಿ., ಭೋಪಾಲ 'ರಂಗಮಂಡಲ', ಮೈಸೂರಿನ 'ರಂಗಾಯಣ' ಮತ್ತು ಹತ್ತಾರು ನಾಟಕ ಕಮ್ಮಟಗಳ ಮೂಲಕ ರಂಗಭೂಮಿ ಶಿಕ್ಷಣಕ್ಕೆ ಕಾರಂತರು ಅಸಾಧಾರಣ ಕೊಡುಗೆ ನೀಡಿದ್ದಾರೆ.
10. ಹಿಂದೀ ನಾಟಕಕಾರ ಜಯಶಂಕರ ಪ್ರಸಾದರ ನಾಟಕಗಳಿಗೆ ರಂಗಭಾಷೆಯನ್ನು ತಂದುಕೊಟ್ಟ ಶ್ರೇಯಸ್ಸು ಕಾರಂತರದು (1-8).
ಕೆ.ವಿ. ಸುಬ್ಬಣ್ಣ ವಿವರಿಸಿರುವಂತೆ, ವ್ಯಕ್ತಿಪ್ರಜ್ಞೆಗಿಂತ ಹೆಚ್ಚಾಗಿ ಸಮುದಾಯ ಪ್ರಜ್ಞೆ; ಸಂಗೀತ ಮಾಧ್ಯಮದಲ್ಲಿರುವ ಥರದ ಅಮೂರ್ತ ಅಥವಾ ಸ್ವಚ್ಛಂದ ಅರ್ಥವಂತಿಕೆ; ಬೌದ್ಧಿಕಕ್ಕಿಂತ ಹೆಚ್ಚಾಗಿ ಆಂತರ್ಯದಿಂದ ಉದ್ಭವಿಸುವ ಸೃಜನಶೀಲತೆ - ಇವು ಸುಮಾರಾಗಿ ಕಾರಂತರ ರಂಗಕಾಯಕದ ನೆಲೆಗಟ್ಟು.

ಕಂಪೆನಿ ನಾಟಕಗಳು ವಿಕಾಸಕೊಳಿಸಿದ ರೀತಿಯಲ್ಲಿ 'ವಾಸ್ತವೇತರ' ಅಂಶಗಳನ್ನು ಒಳಗೊಂಡೂ, 'ನಾಟ್ಯಧರ್ಮಿ'ಯಾಗದೆ, 'ಲೋಕಧರ್ಮಿ'ಯಾಗಿ ಉಳಿಯುವ ಅಭಿನಯ ಶೈಲಿ; ಪಾತ್ರ ನಿರೂಪಣಕ್ಕಿಂತ ಸಮುದಾಯ ನಿರೂಪಣದ ಕಡೆ ಹೆಚ್ಚು ಆಸಕ್ತಿ; ರಂಜಕ ಸಂಕಲನ; ಸಾಮಾಜಿಕ ಸಾಮೀಪ್ಯಕ್ಕಾಗಿ ರಂಗಸ್ಥಲದಿಂದ ಹೊರಗೆ ಉಚಾಯಿಸಿಕೊಳ್ಳುವ ಪರಿ - ಇವು ಸ್ಥೂಲವಾಗಿ ಅವರ ರಂಗಕೃತಿಗಳ ರೂಪ.
ಕಂಪೆನಿ ನಾಟಕಗಳು ಆಧುನಿಕ ಭಾರತೀಯ ರಂಗಭೂಮಿಯನ್ನು ತಂದುನಿಲ್ಲಿಸಿದ ನೆಲೆಯಿಂದ ಹೊರಟು, ಅದನ್ನು ಕಲಾಸಂವಹನದ ಗಂಭೀರ ಮಾರ್ಗದಲ್ಲಿ ಮುಂದುವರಿಸಿಕೊಂಡುಹೋದದ್ದು ಮತ್ತು ಆ ಮೂಲಕ ಭಾರತೀಯ ರಂಗಭೂಮಿಯ ಇತಿಹಾಸವನ್ನು ಮುಂದಕ್ಕೆ ನಡೆಸಿದ್ದು; ಪ್ರಾಂತೀಯ ರಂಗಭೂಮಿಗಳ ಸಮುಚ್ಚಯವಾದ ರಂಗಸಂಕುಲವೇ ಭಾರತೀಯ ರಂಗಭೂಮಿ ಅನ್ನುವ ಸಮರ್ಪಕ ಕಲ್ಪನೆಯನ್ನು ದೃಢಗೊಳಿಸಿದ್ದು ಇವು ಕಾರಂತರ ವಿಶಿಷ್ಟ ಸಾಧನೆಗಳೆನ್ನಬಹುದು.

7
ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಕು.ಶಿ. ಹರಿದಾಸ ಭಟ್ಟರು ಬಿ.ವಿ. ಕಾರಂತರ ನಿರ್ದೇಶನದಲ್ಲಿ ನಾಟಕ ಕಮ್ಮಟವೊಂದನ್ನು 1973ರಲ್ಲಿ ಏರ್ಪಡಿಸಿದ್ದರು. ಈ ಕಮ್ಮಟದಲ್ಲಿ ನಾನು ಕಾರಂತರ ಶಿಷ್ಯನಾಗಿದ್ದೆ (ನೋಡಿ 2-2). ಈ ಕಮ್ಮಟ ಉಡುಪಿಯಲ್ಲಿ ನಾವು ಕೆಲವರು ಗೆಳೆಯರು ಒಟ್ಟು ಸೇರಿ 'ರಥಬೀದಿ ಗೆಳೆಯರು' (ಸ್ಥಾಪಕ ಕಾರ್ಯದರ್ಶಿ - ಕೆ.ಎಸ್. ಕೆದ್ಲಾಯ) ಎಂಬ ನಾಟಕ ಸಂಘಟನೆಯನ್ನು ಸ್ಥಾಪಿಸಲು ಪ್ರೇರಣೆ ನೀಡಿತು. ಬಿ.ವಿ. ಕಾರಂತರನ್ನು ಕುರಿತ ಈ ಗ್ರಂಥ ಗುರುಋಣ ತೀರಿಸುವ ನನ್ನ ಒಂದು ಕಿರುಪ್ರಯತ್ನ.

'ರಥಬೀದಿ ಗೆಳೆಯರು' ಸಂಘಟನೆ 1986ರಲ್ಲಿ ಏರ್ಪಡಿಸಿದ್ದ ಬಿ.ವಿ. ಕಾರಂತರನ್ನು ಕುರಿತ ವಿಚಾರಗೋಷ್ಠಿಯೇ ಈ ಗ್ರಂಥಸಂಪಾದನೆಗೆ ತೊಡಗಲು ನನಗೆ ಮೊದಲ ಪ್ರೇರಣೆ.

ಕೆ.ವಿ. ಸುಬ್ಬಣ್ಣ, ಡಾ| ಯು.ಆರ್. ಅನಂತಮೂರ್ತಿ , ಸುರೇಶ ಅವಸ್ಥಿ, ಜಿ.ವಿ. ಅಯ್ಯರ್, ಪ್ರೇಮಾ ಕಾರಂತ, ಬಿ.ಆರ್. ನಾಗೇಶ್, ಡಾ| ವಿಜಯಾ, ಈಶ್ವರಯ್ಯ, ಗುರುರಾಜ ಮಾರ್ಪಳ್ಳಿ, ಪು.ತಿ.ನ. ಇವರು ಈ ಗ್ರಂಥಕ್ಕಾಗಿ ಲೇಖನಗಳನ್ನು ನೀಡಿದ್ದಾರೆ. ಕು.ಶಿ. ಹರಿದಾಸ ಭಟ್, ಡಾ| ಮರುಳಸಿದ್ಧಪ್ಪ, ಕೆ.ವಿ. ಅಕ್ಷರ, ನ.ರತ್ನ, ಹಾಸಾಕೃ, ಎ.ಆರ್. ನಾಗಭೂಷಣ, ಸುರೇಶ ಬಿ., ಬಿ. ಭಾಸ್ಕರ ರಾವ್, ಟಿ.ಎನ್. ಸೀತಾರಾಂ, ಜಿ.ಎನ್. ರಂಗನಾಥ್ ರಾವ್ - ಇವರೆಲ್ಲ ತಮ್ಮ ಪ್ರಕಟಿತ ಲೇಖನಗಳನ್ನು ಈ ಗ್ರಂಥದಲ್ಲಿ ಮುದ್ರಿಸಲು ಅನುಮತಿ ನೀಡಿದ್ದಾರೆ. ವೈದೇಹಿ, ಕೆ. ಎಸ್. ಕೆದ್ಲಾಯ, ಡಾ| ನಿ. ಮುರಾರಿ ಬಲ್ಲಾಳ್, ನಟರಾಜ ದೀಕ್ಷಿತ್ ಮತ್ತು ಮಾಧವಿ ಭಂಡಾರಿಯವರು ಈ ಗ್ರಂಥಕ್ಕಾಗಿ ಒಂದೊಂದು ಲೇಖನವನ್ನು ಭಾಷಾಂತರಿಸಿ ಕೊಟ್ಟಿದ್ದಾರೆ.

ಬಿ.ವಿ. ಕಾರಂತ, ಪ್ರಸನ್ನ, ಕೀರ್ತಿನಾಥ ಕುರ್ತಕೋಟಿ ಅವರ ಉಪನ್ಯಾಸಗಳನ್ನು ಧ್ವನಿಸುರುಳಿಯಿಂದ ಬರೆದು ಕೊಟ್ಟವರು ಪಲ್ಲವಿ ಕೆ.ಎಸ್. 'ಬಿ.ವಿ. ಕಾರಂತ' ಪುಸ್ತಕದ ಕೆಲಸ ಎಲ್ಲಿಯವರೆಗೆ ಬಂತು? ಎಂದು ವಿಚಾರಿಸುತ್ತ ಪ್ರೋತ್ಸಾಹಿಸಿದವರು ವೈದೇಹಿ, ಬಿ.ಆರ್. ನಾಗೇಶ್ ಮತ್ತು ಬೋಳಂತಕೋಡಿ ಈಶ್ವರ ಭಟ್.

ಮುಖಚಿತ್ರಕ್ಕಾಗಿ ಬಿ.ವಿ. ಕಾರಂತರ ಭಾವಚಿತ್ರ ನೀಡಿದವರು ಕೆ.ಜಿ. ಸೋಮಶೇಖರ್, ಕಲಾವಿದ ಮೋಹನ ಸೋನ ಮುಖಪುಟದ ವಿನ್ಯಾಸ ರಚಿಸಿದ್ದಾರೆ. ಕಂಪ್ಯೂಟರ್ ಟೈಪ್‍ಸೆಟ್ ತಯಾರಿಸಿದವರು ಉಡುಪಿಯ ಕಾರ್ತಿಕ್ ಕಂಪ್ಯೂಟರ್ಸ್‍ನವರು. ಮುದ್ರಕರು ಪುತ್ತೂರಿನ ರಾಜೇಶ್ ಪವರ್ ಪ್ರೆಸ್‍ನವರು. ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷ ಬೋಳಂತಕೋಡಿ ಈಶ್ವರಭಟ್ಟರು ಬಿ.ವಿ. ಕಾರಂತರನ್ನು ಕುರಿತ ಅಭಿಮಾನದಿಂದ ಇದನ್ನು ಪ್ರಕಟಿಸುತ್ತಿದ್ದಾರೆ. ಡಾ| ಸುಬ್ಬಣ್ಣಯ್ಯ ಕೋಟಗದ್ದೆ, ಮನೋರಮಾ ಹೆಜಮಾಡಿ ಪ್ರೂಫ್ ತಿದ್ದುವುದರಲ್ಲಿ ನೆರವು ನೀಡಿದ್ದಾರೆ.

ಪ್ರೊ| ಹೆರಂಜೆ ಕೃಷ್ಣ ಭಟ್, ಬಿ. ಕೃಷ್ಣ ಕಾರಂತ, ಎನ್. ಗುರುರಾಜ್, ಶ್ರೀಕಾಂತ ಯಲ್ಲಾಪುರ, ವೇದವ್ಯಾಸ ಭಟ್, ಐ.ಕೆ. ಬೊಳುವಾರು, ಜಿ.ಪಿ. ಬಸವರಾಜು, ಸೂ. ಸುಬ್ರಹ್ಮಣ್ಯಂ, ಬನ್ನಂಜೆ ಗೋವಿಂದಾಚಾರ್ಯ, ನಿತ್ಯಾನಂದ ಪಡ್ರೆ, ಜಯತೀರ್ಥ ಜೋಶಿ, ಎಂ.ಜಿ. ರಾವ್, ಅಲಕಾ ಎಂ.ಎಚ್., ಮಾನಸಿ ಎಂ.ಎಚ್., ಶಾರದಾ ಉಪಾಧ್ಯ, ಜಯಾ ಭಟ್ - ಇವರೆಲ್ಲ ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದ್ದಾರೆ.

ಇವರೆಲ್ಲರ ಉಪಕಾರ, ಸಹಾಯ, ಪ್ರೋತ್ಸಾಹಗಳನ್ನು ನಾನು ಮರೆಯಲಾರೆ.

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸನ್ತ: ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರ ಪ್ರತ್ಯಯನೇಯ ಬುದ್ಧಿ:

- ಕಾಳಿದಾಸ (ಮಾಲವಿಕಾಗ್ನಿಮಿತ್ರ)
ಟಿಪ್ಪಣಿಗಳು

1. ಪಿ.ಲಂಕೇಶ್ - 'ಟೀಕೆ-ಟಿಪ್ಪಣಿ', ಬೆಂಗಳೂರು, 1991 - ಮಧ್ಯಪ್ರದೇಶದಲ್ಲಿ ಬಿ.ವಿ. ಕಾರಂತ - ಪುಟ - 50.
2. ಬಿ.ವಿ. ಕಾರಂತ - 'ಭಾರತ್ ಭವನವನ್ನು ಕಲಾವಿದರಿಗೇ ಬಿಡಬೇಕು', ತರಂಗ ವಾರಪತ್ರಿಕೆ, ಮಣಿಪಾಲ, ಸಂ. ಸಂತೋಷ ಕುಮಾರ ಗುಲ್ವಾಡಿ, ಜನವರಿ 20, 1991.
3. (ಸಂ.) ಟಿ.ಪಿ. ಅಶೋಕ - ಕೆ.ವಿ. ಸುಬ್ಬಣ್ಣನವರ ಆಯ್ದ ಬರಹಗಳು, ಹಂಪಿ, 1992 - ಬ್ರೂಕ್ ಮಹಾಶಯನ ಆಧುನಿಕ ಅಶ್ವಮೇಧ, ಪುಟ - 49.

ಮುರಳೀಧರ ಉಪಾಧ್ಯ ಹಿರಿಯಡಕ (mhupadhya@gmail.com)
ಬಿ.ವಿ. ಕಾರಂತ (1996)
ಪ್ರ- ಕರ್ನಾಟಕ ಸಂಘ, ಪುತ್ತೂರು-574201, ದ.ಕ.
ಈ ಗ್ರಂಥಕ್ಕಾಗಿ ಬರೆದ ಸಂಪಾದಕೀಯ.

Best Books in Kannada 2009

                                 ಕನ್ನಡ ಪುಸ್ತಕ ಪ್ರತಿಷ್ಠೆ - 2009
                                                                  -ಮುರಳೀಧರ ಉಪಾಧ್ಯ ಹಿರಿಯಡಕ


ಕನ್ನಡ ಪುಸ್ತಕ ಪ್ರತಿಷ್ಠೆ - 2009 - ಸಾಹಿತ್ಯ ವಿದ್ಯಾರ್ಥಿಗಳಿಗೆ, ಗ್ರಂಥಪಾಲಕರಿಗೆ ಮತ್ತು ಇತರ ಓದುಗರಿಗಾಗಿ ಒಂದು ಸ್ಥೂಲ ಮಾರ್ಗದರ್ಶಿಕೆ. ಯಾವುದಾದರೂ ಒಳ್ಳೆಯ ಪುಸ್ತಕ ಇಲ್ಲಿ ಕಾಣಿಸದಿದ್ದರೆ ಈ ಬ್ಲಾಗ್‍ಗೆ ಪ್ರತಿಕ್ರಿಯೆ ಬರೆದು, ಈ ಗ್ರಂಥಮಾಹಿತಿಯನ್ನು ಪರಿಷ್ಕರಿಸಲು ದಯವಿಟ್ಟು ಸಹಕರಿಸಿರಿ. ಇವುಗಳಲ್ಲಿ ನೀವು ಓದಿ ಮೆಚ್ಚಿದ ಪುಸ್ತಕಗಳಿದ್ದರೆ ಅವುಗಳ ಹೆಸರು ತಿಳಿಸಿರಿ.


ಕಾವ್ಯ

1. ಎಚ್. ಎಸ್. ವೆಂಕಟೇಶಮೂರ್ತಿ - 'ಎಚ್.ಎಸ್.ವಿ. ಸಮಗ್ರ ಕಾವ್ಯ'

2. ಎಸ್. ಮಂಜುನಾಥ - 'ಜೀವಯಾನ'

3. ಜಯಂತ ಕಾಯ್ಕಿಣಿ - 'ಒಂದು ಜಿಲೇಬಿ'

4. ಚಂದ್ರಶೇಖರ ಕಂಬಾರ - 'ಎಲ್ಲಿದೆ ಶಿವಾಪುರ'

5. ಸವಿತಾ ನಾಗಭೂಷಣ - 'ದರುಶನ'

6. ಯು. ಆರ್. ಅನಂತಮೂರ್ತಿ - 'ಅಭಾವ'

7. ಎಚ್. ಎಲ್. ಪುಷ್ಪ - 'ಲೋಹದ ಕಣ'

8. ಜ್ಯೋತಿ ಗುರುಪ್ರಸಾದ - 'ಮಾಯಾಪೆಟ್ಟಿಗೆ'

9. ದೇಶಪಂಡೆ ಸುಬ್ಬರಾಯ - ಮೋರೆಯಾಚೆಯ ಮುಖ'

10. ಲಕ್ಕೂರು ಆನಂದ - 'ಬಟವಾಡೆಯಾಗದ ರಸೀತಿ'

11. ಕೆ.ಪಿ. ಸುರೇಶ - 'ಕೆ.ಪಿ. ಸುರೇಶ ಪದ್ಯಗಳು'

12. ಕವಿತಾ ರೈ - 'ನವ ವಿಸರ್ಗ'

13. ಹೇಮಾ ಪಟ್ಟಣಶೆಟ್ಟಿ - 'ಉಸಿರ ಬಿಡುವಿನ ಗುಂಟ'

14. ಮಾಲತಿ ಪಟ್ಟಣಶೆಟ್ಟಿ - 'ಎಷ್ಟೊಂದು ನಾವೆಗಳು'

15. ಕೆ. ಷರೀಫಾ - 'ಬುರ್ಖಾ ಪ್ಯಾರಡೈಸ್'

16. ದೀಪಾ ಹಿರೇಗುತ್ತಿ - 'ಪರಿಮಳವಿಲ್ಲದ ಹೂಗಳ ಮಧ್ಯೆ'

17. ಎಚ್. ಆರ್. ರಮೇಶ - 'ಸಾಸುವೆ ಹೂವ ಚರಿತ'


ಕಾದಂಬರಿ

1. ಗೋಪಾಲಕೃಷ್ಣ ಪೈ - 'ಸ್ವಪ್ನ ಸಾರಸ್ವತ'

2. ಕುಂ. ವೀರಭದ್ರಪ್ಪ - 'ಆರೋಹಣ'

3. ಸುರೇಶ ಪಾಟೀಲ - 'ಸ್ವಧಾ'

4. ಜಾನಕಿ ಸುಂದರೇಶ್ - 'ನೂರಿ'

5. ದಮಯಂತಿ ನರೇಗಲ್ಲ - 'ತೇರನೆಳೆವ ಬಾರ ತಂಗಿ'

6. ಬೋಳ ಚಿತ್ತರಂಜನದಾಸ ಶೆಟ್ಟಿ - 'ಒಂಟಿ ಒಬ್ಬಂಟಿ'

7. ಬಿ. ಜನಾರ್ದನ ಭಟ್ - 'ಹಸ್ತಾಂತರ'/'ಅನಿಕೇತನ'

8. ಸುಮತೀಂದ್ರ ನಾಡಿಗ - 'ಮನುಷ್ಯನಿಗೆ ಬಾಲ' (ವೈಜ್ಞಾನಿಕ ಕಾದಂಬರಿ)

9. ಕಾತ್ಯಾಯನಿ ಕುಂಜಿಬೆಟ್ಟು - 'ತೊಗಲು ಬೊಂಬೆ'

10. ಕುಸುಮಾ ಶಾನುಭಾಗ್ - 'ಮಣ್ಣಿಂದ ಎದ್ದವರು'

11. ಸರಸ್ವತಿ ಶಂಕರ್ - 'ಬಿರುಗಾಳಿ'


ಸಣ್ಣ ಕತೆ


1. ಎಂ. ವ್ಯಾಸ - ಅಸ್ತ್ರ; ತಪ್ತ, ಕೆಂಡ (ಮೂರು ಸಂಕಲನಗಳು)

2. ವಸುದೇಂದ್ರ - 'ಹಂಪಿ ಎಕ್ಸ್‌ಪ್ರೆಸ್'

3. ನಟರಾಜ ಹುಳಿಯಾರ್ - 'ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು'

4. ಮಂಜುನಾಥ ಲತಾ - 'ಸನ್ ಆಫ್ ಸಿದ್ದಪ್ಪಾಜಿ'

5. ಕಲಿನಾಥ ಗುಡದೂರು - 'ಮಾಮೂಲಿ ಗಾಂಧಿ'

6. ಶಾಂತರಾಮ ಸೋಮಯಾಜಿ - 'ಇಂಗ್ಲಿಷ್ ಮಂಗ', 'ಮದುವೆಗೊಂದು ನೆಪ'

7. ಶ್ರೀಧರ ಬಳೆಗಾರ - 'ಒಂದು ಫೊಟೋದ ನೆಗೆಟಿವ್'

8. ರಾಘವೇಂದ್ರ ಪಾಟೀಲ - ' ತುದಿಯೆಂಬೊ ತುದಿಯಿಂದ'

9. ಡಾ| ಸಬಿಹಾ ಭೂಮಿಗೌಡ - 'ಕಡಲ ತಡಿಯ ಮನೆ'

10. ಸುಮಂಗಲಾ - 'ಕಾಲಿಟ್ಟಲ್ಲಿ ಕಾಲುದಾರಿ'

11. ಸಂದೀಪ ನಾಯಕ - 'ಗೋಡೆ ಬರೆದ ನವಿಲು'

12. ಚಿದಾನಂದ ಸಾಲಿ - 'ಧರೆಗೆ ನಿದ್ರೆಯು ಇಲ್ಲ'

13. ಕೇಶನ ರೆಡ್ಡಿ ಹಂದ್ರಾಳ - ' ಬಾರಕ್ಕ ಬೆಳದಿಂಗಳೆ'

14. ಡಿ. ಎಸ್. ಚೌಗುಲೆ - 'ಚೌಗುಲೆ ಕತೆಗಳು'

15. ವಸುಮತಿ ಉಡುಪ - 'ಅಂತರಂಗದ ಪಿಸುನುಡಿ'

16. ಮಾಟೇರಿ ನರಸಿಂಹಯ್ಯ - 'ಆಶೀರ್ವಾದ ಮತ್ತು ಇತರ ಕತೆಗಳು'

17. ಎಸ್. ದಿವಾಕರ್ - 'ಎಸ್. ದಿವಾಕರ ಆಯ್ದ ಕತೆಗಳು'

18. ನಾಗರಾಜ ವಸ್ತಾರೆ - 'ಮಡಿಲು' (ನೀಳ್ಗತೆ)


ನಾಟಕ

1. ಪ್ರಸನ್ನ - 'ಕೊಂದವರಾರು?'

2. ಲಕ್ಷ್ಮೀಪತಿ ಕೋಲಾರ - 'ಅಲ್ಲಮನ ಬಯಲಾಟ'

3. ಆರ್. ವಿ. ಭಂಡಾರಿ - 'ಈದ್ಗಾ ಮತ್ತು ಬೆಳಕಿನೆಡೆಗೆ'

4. ಬಿ.ಎಲ್. ವೇಣು - 'ಯಮಲೋಕದಲ್ಲಿ ಮಾನವ'

5. ಡಿ.ವಿ. ಶಂಕರ - 'ಕರೀಬಂಟ; ಟಿಪ್ಪುಸುಲ್ತಾನ; ಹೈದರಾಲಿ'


ಆತ್ಮಕತೆ, ಜೀವನಚರಿತ್ರೆ

1. ಬಿ. ಮಾಲಿನಿ ಮಲ್ಯ - 'ಬಾಳಿಗೊಂದು ಉತ್ತರ'

2. ಎನ್. ಕೆ. ಹನುಮಂತಪ್ಪ - 'ಕ್ರಾಂತಿಯ ವಸಂತ' (ಬಸವಲಿಂಗಪ್ಪ)

3. ಬಿ.ಎಸ್. ಮಯೂರ - ಸ್ಟೀಫನ್ ಹಾಕಿಂಗ್ ಬದುಕು ಮತ್ತು ವಿಚಾರ

4. ಡಾ|ಚಂದ್ರಶೇಖರ ಇಟ್ಟಂಗಿ - 'ಅಣ್ಣಾ ಹಜಾರೆ'

5. ಶ್ರೀನಿವಾಸ ಹಾವನೂರ - 'ಡಾ|ಫೆರ್ಡಿನಾಂಡ್ ಕಿಟ್ಟೆಲ್'

6. ಡಾ|ಎಚ್. ಈ. ಶ್ರೀಧರ (ಸಂ.) - 'ನೆಲದ ಬದುಕು' (ಕೆ.ಟಿ. ಗಟ್ಟಿ ಅಭಿನಂದನ ಗ್ರಂಥ)

7. ಕಡಿದಾಳು ಶ್ಯಾಮಣ್ಣ - 'ಆ ದಶಕ'

8. ಶಿವರಾಂ ಪೈಲೂರು, ಜಿ.ಎಸ್. ಉಬರಡ್ಕ, ಅನಿತಾ ಪೈಲೂರು (ಸಂ.)

- 'ಕಲ್ಲು ಬಾಜಿ' (ಪೈಲೂರು ಶಿವರಾಮಯ್ಯ)


ವಿಜ್ಞಾನ

1. ಮುನಿಯಾಲು ಗಣೇಶ ಶೆಣೈ - 'ಸಸ್ಯ ಸಂಪದ' (ಔಷಧೀಯ ಸಸ್ಯಗಳನ್ನು ಕುರಿತ ಹಲವು ಪುಸ್ತಕಗಳು)

2. ಶಾಂತರಾಮ ಸೋಮಯಾಜಿ - 'ನಾವು ಮತ್ತು ನಮ್ಮ ಮನಸ್ಸು'

3. ಅಡ್ಯನಡ್ಕ ಕೃಷ್ಣ ಭಟ್ - 'ಗ್ರಹಣ'


ಮಕ್ಕಳ ಸಾಹಿತ್ಯ


1. ಬಿ.ವಿ. ರಾಜಾರಾಂ (ಸಂ) - ಶಾಲಾ ಮಕ್ಕಳ ನಾಟಕಗಳು

2. ನಾ.ಡಿಸೋಜ - 'ಮುಳುಗಡೆ ಊರಿಗೆ ಬಂದವರು'

3. ಬಿ.ಆರ್. ಗುರುಪ್ರಸಾದ - 'ಚಂದ್ರಯಾನ-1'

4. ಪುಷ್ಪಾ ನಾಗತಿಹಳ್ಳಿ - 'ಚಂದಿರನೇತಕೆ ಓಡುವನಮ್ಮ?'

5. ಆನಂದ ಪಾಟೀಲ - 'ಅಜ್ಜೀ ಬಿಡಿಕಾಳ್...'

6. ಗುಂಡ್ಮಿ ನಾಗೇಶ ಮಯ್ಯ - 'ಅಗ್ನಿಪರೀಕ್ಷೆ ಮತ್ತು ವಾತ್ಸಲ್ಯ'

7. ಆನಂದ ಪಾಟೀಲ - 'ಹತ್ತು ಹತ್ತು ಇಪ್ಪತ್ತು'

8. ಬಿ. ಜನಾರ್ದನ ಭಟ್ - 'ಜಗತ್ಪ್ರಸಿದ್ಧ ಮಕ್ಕಳ ಕತೆಗಳು'


ಯಕ್ಷಗಾನ, ಜಾನಪದ

1. ಡಾ| ಕೆ.ಎಂ. ರಾಘವ ನಂಬಿಯಾರ್ - 'ಮುಂದಲೆ'

2. ಡಾ| ಪೂವಪ್ಪ ಕಣಿಯೂರು - 'ಮೌಖಿಕ ಸಂಕಥನ'

3. ಡಾ| ನಾರಾಯಣ ಮಧ್ಯಸ್ಥ - 'ಕರ್ಕಿ ಹಾಸ್ಯಗಾರ ಮೇಳ'

4. ಡಾ| ಕೆ. ಎಂ. ರಾಘವ ನಂಬಿಯಾರ್ - 'ಯಾಜಿ ಭಾಗವತರು'


ಉದಯೋನ್ಮುಖ ಲೇಖಕರ ಕೃತಿಗಳು

1. ಸಿದ್ದು ದೇವರ ಮನಿ - 'ಬರುವ ನಾಳೆಗಳಿಗೆ ರಾತ್ರಿಗಳು ಇರುವುದಿಲ್ಲ'

2. ಕೋಡಿಬೆಟ್ಟು ರಾಜಲಕ್ಷ್ಮಿ - 'ಒಂದು ಮುಷ್ಟಿ ನಕ್ಷತ್ರ'

3. ಅರಿಫ ರಾಜಾ - 'ಜಂಗಮ ಫಕೀರನ ಜೋಳಿಗೆ'

4. ಸಚ್ಚಿದಾನಂದ ಹೆಗಡೆ - 'ಕಾರಂತಜ್ಜನಿಗೊಂದು ಪತ್ರ'

5. ರಮೇಶ ಹಿರೇಜಂಜೂರು - 'ಸುಳಿಯಂಚು'

6. ರಶ್ಮಿ ಹೆಗಡೆ - 'ಲೆಕ್ಕಕ್ಕೆ ಸಿಗದವರು'


ಸಂಕೀರ್ಣ

1. ಡಾ| ಎಲ್. ಬಸವರಾಜು - 'ಕತ್ತಲೆ ರಾಕ್ಷಸರಿಗೆ ಬೆಳಕು'

2. ಯು. ಆರ್. ಅನಂತಮೂರ್ತಿ - 'ಕಾಲಮಾನ'

3. ವೈ.ಕೆ. ಮೋಹನ್ - 'ಸಿರಿ ಭೂವಲಯ'

4. ವೈದೇಹಿ (ಸಂ. ಟಿ.ಪಿ. ಅಶೋಕ) - 'ವೈದೇಹಿ ವಾಚಿಕೆ'

5. ಶಾಂತಾರಾಮ ಸೋಮಯಾಜಿ - 'ಮೋಸಕ್ಕೆ ವಾಸ್ತು, ವಾಸಕ್ಕೆ ಮನೆ'

6. ಎ.ಎನ್. ಪ್ರಸನ್ನ - 'ಚಿತ್ರ-ಕತೆ'

7. ಷ. ಶೆಟ್ಟರ್ - 'ಸೋಮನಾಥಪುರ'

8. ಎಸ್.ಜಿ. ಸಿದ್ಧರಾಮಯ್ಯ - ಕನ್ನಡ ಪುಸ್ತಕ ಜಗತ್ತು

9. ಡಾ| ಮಹಾಬಲೇಶ್ವರ ರಾವ್ - 'ಶಿಕ್ಷಣ ಪರಿವರ್ತನೆ'

10. ಅರವಿಂದ ಚೊಕ್ಕಾಡಿ (ಸಂ.) - 'ಎರಡು ತಲೆಮಾರು'

11. ಗಿರಡ್ಡಿ ಗೋವಿಂದರಾಜ - 'ಸಾಹಿತ್ಯಲೋಕದ ಸುತ್ತಮುತ್ತ'

12. ಯಶವಂತ ಚಿತ್ತಾಲ - 'ಅಂತಃಕರಣ'

13. ಪ್ರಸಾದ ರಕ್ಷಿದಿ - 'ಬೆಳ್ಳೇಕೆರೆ ಹಳ್ಳಿಥೀಯೇಟರ್'

14. ಶಿವರಾಂ ಪೈಲೂರು - 'ಊಟ ಭರ್ಜರಿ, ಆದರೆ ಹೊಟ್ಟೆ ಖಾಲಿ'

15. ಡಿ.ಎನ್. ಶಂಕರ ಭಟ್ - 'ಕನ್ನಡ ಬರಹವನ್ನು ಸರಿಪಡಿಸೋಣ'

16. ಡಾ| ಡಿ.ವಿ. ಗುರುಪ್ರಸಾದ್ - 'ಆತಂಕವಾದದ ಸವಾಲು'

17. ಶಾಂತಾರಾಮ ಸೋಮಯಾಜಿ - 'ರೇಷ್ಮೆಗೂಡಿನ ಚಾ ಮತ್ತು ಉಪ್ಪುನೇರಳೆ ಮರದ ಕಣ್ಣೀರು'

18. ತಾರಾಮೂರ್ತಿ - 'ಕುಂತಿಯ ಅಂತರಾಳ'

19. ಎಚ್.ಎಸ್. ಪಾರ್ವತಿ - 'ಪ್ರಾಚೀನ ಕರ್ನಾಟಕದಲ್ಲಿ ಉದ್ಯೋಗಸ್ಥ ಮಹಿಳೆ'

20. ಡಾ| ಗುರುರಾಜ ಕರಜಗಿ - 'ಕರುಣಾಳು ಬಾ ಬೆಳಕೆ'

21. ನಾ. ಕಾರಂತ ಪೆರಾಜೆ - 'ಕಾಡು ಮಾವು'


ಸಂಶೋಧನೆ

1. ಡಾ| ಟಿ.ವಿ. ವೆಂಕಟಾಚಲ ಶಾಸ್ತ್ರಿ - 'ಕನ್ನಡ ಅಭಿಜಾತ ಸಾಹಿತ್ಯ'

2. ಡಾ| ಎಸ್.ಎಸ್. ಅಂಗಡಿ - ' ಕರ್ನಾಟಕದ ಬುಡಕಟ್ಟು ಭಾಷೆ'

3. ಡಾ| ಕೆ. ರವೀಂದ್ರನಾಥ - 'ಚರಿತ್ರೆ-ಚಾರಿತ್ರ್ಯ'

4. ಪಿ.ಎಸ್. ರಾಮು - 'ಪ್ರಾಚೀನ ಭಾರತದ ಆದಿಗ್ರಂಥಗಳು'

5. ಜಯದೇವಪ್ಪ ಜೈನಕೇರಿ - 'ಮಹಾಮಹತ್ತಿನ ಮಠಗಳು'

6. ಜಿ.ಕೆ. ರಮೇಶ - 'ಮರಾಠಿ ಕುಣಬಿಗಳು'

7. ಡಾ| ಟಿ. ವೆಂಕಟೇಶಮೂರ್ತಿ - 'ಕನ್ನಡ ನಾಟಕ - ಯಾಜಮಾನ್ಯ ಸಂಕಥನ'


ಅನುವಾದ

(ಇಂಗ್ಲಿಷ್  ಕನ್ನಡ)

1. ಪಿ. ಸಾಯಿನಾಥ - 'ಬಿತ್ತಿದ್ದೀರಿ, ಅದಕ್ಕೆ ಅಳುತ್ತಿದ್ದೀರಿ' -   ಅನು: ಟಿ.ಎಲ್. ಕೃಷ್ಣೇಗೌಡ

2. ಯು.ಆರ್. ಅನಂತಮೂರ್ತಿ- 'ಶತಮಾನದ ಕವಿ ಯೇಟ್ಸ್'

3. ಹೆನ್ರಿ ಆರ್. ಓಲೆಕುಲೆಟ್(ಕೀನ್ಯಾ)/ಪ್ರಶಾಂತ್ ಬೀಚಿ - 'ಲೋರಿಯೊಂಕ'

4. ರ್‍ಯಾಂಡಿ  ಪಾಶ್/ಉಮೇಶ - 'ದಿ ಲಾಸ್ಟ್ ಲೆಕ್ಚರ್'

5. (ಸಂ.) ಆರ್. ವಿಜಯರಾಘವನ್/ಎಚ್.ಆರ್. ಚಂದ್ರವದನ ರಾವ್ -'ಸಮಕಾಲೀನ ಭಾರತೀಯ ಸಣ್ಣ ಕತೆಗಳು'

6. ಕಮಲಾದಾಸ್/ ಪೂರ್ಣಿಮಾ ಭಟ್ - 'ನನ್ನ ಕತೆ'

7. ಅಮೀರ್ ಮೀರ್/ರವಿ ಬೆಳಗೆರೆ - 'ನೀನಾ ಪಾಕಿಸ್ತಾನ'

8. ಆನಂದ ತೇಲ್ತುಂಬ್ಳೆ/ಶಿವಸುಂದರ್ - 'ಖೈರ್ಲಾಂಜಿ'

9. ಎಂ.ವೈ. ಘೋರ್ಪಡೆ/ಎಂ.ಸಿ. ಪ್ರಕಾಶ್ - 'ನೆನಪಿನ ಚಿತ್ರಗಳು'


ಮಲಯಾಳಮ್ ಕನ್ನಡ

10. ಸಾರಾ ಜೋಸೆಫ್/ಪಾರ್ವತಿ ಐತಾಳ - 'ಅಲಾಹಳ ಹೆಣ್ಣುಮಗಳು'

11. ಎನ್.ಪಿ. ಮಹಮ್ಮದ್/ಪಾರ್ವತಿ ಐತಾಳ - 'ದೇವರ ಕಣ್ಣು'

12. ಆರ್.ಬಿ. ಶ್ರೀಕುಮಾರ್/ಸಾರಾ ಅಬೂಬಕರ್ - 'ಧರ್ಮದ ಹೆಸರಲ್ಲಿ'

13. ಕೆ.ಜಿ. ಶಿವಶಂಕರ ಪಿಳ್ಳೆಯವರ ಕವಿತೆಗಳು, ಅನು: ಕೇರಳಿ ಎನ್. ಶೇಖರ್

14. ಕಮಲಾದಾಸ್/ಪಾರ್ವತಿ ಜಿ. ಐತಾಳ - �ನೀರ್ ಮಾದಳ ಹೂಬಿಟ್ಟ ಕಾಲ�


ಹಿಂದೀ        →  ಕನ್ನಡ


15. ಕೈಫಿ ಆಜ್ಮಿ/ವಿಭಾ - 'ಬೆತ್ತಲೆರಸ್ತೆಯ ಕನಸಿನ ದೀಪ'

16. ಕಮಲೇಶ್ವರ/ಆರ್.ಪಿ. ಹೆಗಡೆ - 'ಅಮ್ಮ'

ಅಸ್ಸಾಮಿ        →  ಕನ್ನಡ

17. ಇಂದಿರಾ ಗೋಸ್ವಾಮಿ/ಆರ್.ಪಿ. ಹೆಗಡೆ - 'ಅಹಿರನ ದಂಡೆಯ ಮೇಲೆ'

ಮರಾಠಿ        ಕನ್ನಡ

18. ಇಂದಿರಾ ಸಂತ್/ಅ.ರಾ. ಪಂಡಿತ - 'ಗರ್ಭ ರೇಶಿಮೆ'

19. ಶ್ರೀ.ರ.ಭಿಡೆ/ವಿರೂಪಾಕ್ಷ ಕುಲಕರ್ಣಿ - 'ರಾಮಾಯಣ ಮಹಾಭಾರತಗಳಲ್ಲಿ ಆತ್ಮಹತ್ಯೆ'

ತೆಲುಗು      →   ಕನ್ನಡ

20. ಕಾಳೀವಟ್ಟಂ ರಾಮರಾವ್/ಚಿದಾನಂದ ಸಾಲಿ - 'ಯಜ್ಞ' (ಕತೆಗಳು)

ತಮಿಳು       →  ಕನ್ನಡ

21. ಬಾಮ/ಎಸ್. ಫ್ಲೊಮಿನ್‍ದಾಸ್ - 'ಸಂಗತಿ'

ಬಂಗಾಳಿ      →   ಕನ್ನಡ

22. ವಿಮಲ್‍ಮಿತ್ರ/ಡಿ.ಎನ್. ಶ್ರೀನಾಥ - 'ಎರಡು ಬಂಗಾಳಿ ಕಾದಂಬರಿಗಳು'

ಇತಾಲಿಯನ್      →  ಕನ್ನಡ

23. ಇಟಾಲೊ ಕ್ವಾಲಿನೊ/ಕೆ.ಪಿ. ಸುರೇಶ - 'ಕೊಸಿಮೊ'

ಜಪಾನಿ      →   ಕನ್ನಡ

24. ಯಸುನಾರಿ ಕವಬಾಟ/ಟಿ.ಎನ್. ಕೃಷ್ಣರಾಜು - 'ಸಾವಿರ ಪಕ್ಷಿಗಳು'

25. ತೆತ್ಸುಕೊ ಕುರೊಯಾನಾರಿ/ವಿ. ಗಾಯತ್ರಿ - 'ತ್ಯೆತ್ತೆ ಜಾನ್' (ಕಾದಂಬರಿ)

ಜರ್ಮನ್        →   ಕನ್ನಡ

26. ಬರ್ಟೊಲ್ಟ್ ಬ್ರೆಕ್ಟ್/ ಕೆ.ವಿ. ನಾರಾಯಣ - 'ಅಂಕೆ ತಪ್ಪಿದ ಆರ್ಥುರೋ ಲೂಯಿ'

27. ರಿಲ್ಕೆ/ಯು.ಆರ್. ಅನಂತಮೂರ್ತಿ - 'ಶತಮಾನದ ಕವಿ ರಿಲ್ಕೆ'

ಉರ್ದು        →   ಕನ್ನಡ

28. ಸದತ್ ಹಸನ್ ಮಾಂಟೋ/ಜಿ. ಬಾಲಕೃಷ್ಣ - 'ಮಾಂಟೊ ಕತೆಗಳು'

ಕನ್ನಡ       →   ಇಂಗ್ಲಿಷ್

29. ಕೆ.ವಿ. ಸುಬ್ಬಣ್ಣ/ಮನು ಚಕ್ರವರ್ತಿ - 'Community & Culture'

ಸಾಹಿತ್ಯ ವಿಮರ್ಶೆ

1. ಶಂಕರ ಮೊಕಾಶಿ ಪುಣೇಕರ್/(ಸಂ) ಜಿ.ಬಿ. ಹರೀಶ - 'ನೀರ ಬೆಳಗು'

2. ಜಿ. ರಾಜಶೇಖರ್ - 'ಆಯ್ದ ಬರಹಗಳು'

3. ಜಿ. ಎಚ್. ನಾಯಕ (ಸಂ.) - 'ಶತಮಾನದ ಕನ್ನಡ ಸಾಹಿತ್ಯ'

4. ಗಿರಡ್ಡಿ ಗೋವಿಂದರಾಜ - 'ಕಲ್ಪಿತ ವಾಸ್ತವ - ಕನ್ನಡ ಸಣ್ಣಕತೆ'

5. ಕೆ. ಸತ್ಯನಾರಾಯಣ - 'ಖಾಸಗಿ ಮೂರ್ತಿ

6. ಮುರಳೀಧರ ಉಪಾಧ್ಯ ಹಿರಿಯಡಕ - 'ಸಾಹಿತ್ಯವಿಮರ್ಶೆ�

7. ಎಸ್. ವಿದ್ಯಾಶಂಕರ್, ಜಯರಾಮ ಅಡಿಗ - 'ಮೋಹನ ಮುರಲಿ'

8. ರಹಮತ್ ತರೀಕೆರೆ - 'ಹೊಸ ತಲೆಮಾರಿನ ತಲ್ಲಣ'

9. ಸಿದ್ಧಲಿಂಗಯ್ಯ - 'ಉರಿಕಂಡಾಯ'

10. ಡಾ| ಎಂ. ಚಂದ್ರಪೂಜಾರಿ - 'ರಾಜಕೀಯದ ಬಡತನ'

11. ಟಿ.ಎಸ್. ನಾಗರಾಜ ಶೆಟ್ಟಿ, ಎಂ.ಜಿ. ಗುಂಡೂರಾವ್ -'ಮಕ್ಕಳ ಸಾಹಿತ್ಯ ಅಂದು-ಇಂದು'

12. ಮಂಜುನಾಥ ಬೇವಿನಕಟ್ಟಿ (ಸಂ.) - 'ರಾಮಾಯಣ ಮರುದರ್ಶನ'

13. ವಿಕ್ರಮ ವಿಸಾಜಿ - 'ನಾದಗಳು ನುಡಿಯಾಗಲೇ' (ಕಂಬಾರ ಕಾವ್ಯ)

14. ಸಿ.ಪಿ. ಸಿದ್ಧಾಶ್ರಮ - 'ಪಾರಂಗತ'

15. ಜಿ. ಎಚ್. ನಾಯಕ - 'ಮತ್ತೆ ಮತ್ತೆ ಪಂಪ'

16. ಡಾ| ಎಂ. ವಿ. ವಸು - 'ಕನ್ನಡದೊಳ್ ಭಾವಿಸಿದ ಜನಪದಂ'

17. ಡಿ.ಎಸ್. ನಾಗಭೂಷಣ - 'ಈ ಭೂಮಿಯಿಂದ ಆ ಆಕಾಶದ ವರೆಗೆ'

18. ಲಿಂಗದೇವರು ಹಳೇಮನೆ - 'ಅವಕಾಶ'

19. ಮಲ್ಲೇಪುರಂ ಜಿ. ವೆಂಕಟೇಶ (ಸಂ.) - 'ತೌಲನಿಕ ಸಾಹಿತ್ಯಾಧ್ಯಯನ'

20. ಬಿ.ಎನ್. ಸುಮಿತ್ರಾಬಾಯಿ - 'ಸರಹದ್ದುಗಳ ಆಚೆ'

21. ದೇರಾಜೆ ಸೀತಾರಾಮಯ್ಯ - 'ರಾಮರಾಜ್ಯ ಪೂರ್ವರಂಗ'

22. ಬಸವರಾಜ ವಕ್ಕುಂದ - 'ಬಹುಮುಖಿ'

23. ಅಹಿತಾನಲ (ನಾಗ ಐತಾಳ) (ಸಂ.) - 'ಅನಂತಮುಖದ ಮೂರ್ತಿ'

ತುಳು

1. ಮುದ್ದು ಮೂಡುಬೆಳ್ಳೆ - 'ಕನ್ನಗ' (ಕವನ ಸಂಕಲನ)

2. ಅಶೋಕ ಆಳ್ವ (ಸಂ.) - 'ಕರ್ಗಿ ಶೆಡ್ತಿ ಹಾಡಿದ ಸಿರಿಕಾವ್ಯ ಲೋಕ'

3. ಅಮೃತ ಸೋಮೇಶ್ವರ (ಭಾಷಾಂತರ) - �ಫಿನ್ಲೆಂಡ್‍ದ ಆದಿ ಕಾವ್ಯೊ ಕಾಲೆವಾಲ�

4. ಡಾ | ಭಾಸ್ಕರಾನಂದ ಕುಮಾರ್ - 'ಭೀಷ್ಮರೆ ಕಡೆತ ದಿನೊಕುಲು' (ನಾಟಕ)



(ಉಡುಪಿಯ 'ಸೀತಾ ಬುಕ್ ಹೌಸ್'ನ ಶ್ರೀಮತಿ ಶಾಂಭವಿ ಅವರಿಗೆ ಕೃತಜ್ಞತೆಗಳು)


(ಈ ಪುಸ್ತಕ ಮಾಹಿತಿಯನ್ನು ಪರಿಷ್ಕರಿಸಿ, ವಿಸ್ತರಿಸಲು ನೀವು ಓದಿದ ಒಳ್ಳೆಯ ಪುಸ್ತಕಗಳನ್ನು ದಯವಿಟ್ಟು ಸೂಚಿಸಿ)



ಮುರಳೀಧರ ಉಪಾಧ್ಯ ಹಿರಿಯಡಕ

mhupadhya@gmail.com

Friday, October 22, 2010

B. V. KARANTHA

ಬಿ .ವಿ. ಕಾರಂತ

(ನಿರ್ದೇಶಕನ ಸಾಧನೆಗಳ ಸಮೂಹಶೋಧ)

- ಮುರಳೀಧರ ಉಪಾಧ್ಯ ಹಿರಿಯಡಕ



ನಿಜದ ಮಾತೆಂದರೆ
ಸಂಗೀತ ಮುಗಿದರೂ ಆ ಗುಂಗು ಹೋಗಿಲ್ಲ
ದಾರಿಯುದ್ದಕೆ ನಾನು ನಡೆದಾಡುವಾಗಲೂ
ಆ ಹಾಡೆ ಕಿವಿಯೊಳಗೆ ಗುಣುಗುಣಿಸಿದಂತಿದೆ
ಅವನ ಆ ಸ್ವರದ ಸಂಯೋಜನೆ
ಆ ಹಾಡುಗಾರಿಕೆಯ ನುಡಿಯ ನುಣುಪು
ಅದಕ್ಕೊಪ್ಪವಾಗಿ ದನಿಗೂಡುವ ವೀಣೆ
ಅದರ ಆ ತಂತಿ ಮಿಡಿತ
ಏಳು ಸ್ತರಗಳದೊಂದು ಏರಿಳಿತದಂದ
ನಡುವೆ ಆ ತಾರಕ
ಆ ವಿರಾಮದ ಮಂದ್ರ
ಗೀತ ಸಂಚಾರದಲಿ ಲೀಲೆಯಿಂದೆಂಬಂತೆ
ಅವನು ತೋರಿದ ಹಿಡಿತ
ಆ ನಡೆಯ ಸೊಗಸು
ಮತ್ತೆ ಮರುಕಳಿಸುವ ಆ ರಾಗಗಳ ಆವೃತ್ತಿ
ಎಲ್ಲವೂ ಚಂದ !

                                                                                                  -ಶೂದ್ರಕ
                                        [ಬನ್ನಂಜೆ ಗೋವಿಂದಾಚಾರ್ಯರ 'ಆವೆಯ ಮಣ್ಣಿನ ಆಟದ ಬಂಡಿ' (1996)ಯಿಂದ]



ಬಿ.ವಿ. ಕಾರಂತರ (ಬಾಬುಕೋಡಿ ವೆಂಕಟರಮಣ ಕಾರಂತ) ಜೀವನ ಪರಿಚಯ ಮತ್ತು ಕೃತಿಸಮೀಕ್ಷೆ ಈ ಗ್ರಂಥದ ಉದ್ದೇಶ. ಇದು ಅಭಿನಂದನ ಗ್ರಂಥವಲ್ಲ. ರಂಗಕೃತಿ ವಿಮರ್ಶೆ ಸಮೂಹಶೋಧವಾಗಿ ಬೆಳೆಸುವ ಪ್ರಯತ್ನ ಇಲ್ಲಿದೆ.

ಬಾಬುಕೋಡಿಯ ಬೋಯಣ್ಣ

ಬಿ.ವಿ. ಕಾರಂತರ ಕುಟುಂಬದ ಹಿರಿಯರು ಒಂದೆರಡು ತಲೆಮಾರುಗಳ ಹಿಂದೆ ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನಿಂದ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆಗೆ ವಲಸೆ ಬಂದಿದ್ದರು. ಈ ಬ್ರಾಹ್ಮಣ ಕುಟುಂಬದ ಕುಲದೇವರು ಸಾಲಿಗ್ರಾಮದ ನರಸಿಂಹ. ಕುಂದಾಪುರ ಕನ್ನಡದ ಒಂದು ಪ್ರಭೇದ ಇವರ ಮನೆಮಾತು. (ವೈದೇಹಿ ತನ್ನ 'ಯಾತ್ರೆ' ಕತೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿರುವ ಕೋಟ ಬ್ರಾಹ್ಮಣರ ಕನ್ನಡವನ್ನು ಪ್ರಯೋಗಿಸಿದ್ದಾರೆ.) ತೋಟದ ಮನೆಯ ಒಡೆಯರೊಬ್ಬರ ಒಕ್ಕಲಾಗಿದ್ದ ಬಾಬುಕೋಡಿ ನಾರಣಪ್ಪಯ್ಯ ಅಡಿಕೆ ತೋಟದವರ ಲೆಕ್ಕ-ಪತ್ರ ಬರೆಯುತ್ತ, ಮನೆಪಾಠ ಹೇಳುತ್ತ ಬದುಕುತ್ತಿದ್ದರು.

ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗ ವೆಂಕಟರಮಣ (ಬಿ.ವಿ. ಕಾರಂತ) ಹುಟ್ಟಿದ್ದು 1928ರ ಅಕ್ಟೋಬರ್ ಏಳರಂದು. (ಅಧಿಕೃತ ದಾಖಲೆಗಳಲ್ಲಿ ನಮೂದಾಗಿರುವ ಜನ್ಮದಿನ 19-9-1929). ತಾಯಿ ಲಕ್ಷ್ಮಮ್ಮ ತನ್ನ ಚೊಚ್ಚಿಲ ಮಗ ವೆಂಕಟರಮಣನನ್ನ ಕೊಂಡಾಟದಿಂದ 'ಬೋಯಣ್ಣ' ಎಂದು ಕರೆಯುತ್ತಿದ್ದರು. ನಾರಣಪ್ಪಯ್ಯ ದಂಪತಿಗಳಿಗೆ - ನಾಲ್ಕು ಗಂಡು, ಎರಡು ಹೆಣ್ಣು - ಒಟ್ಟು ಆರು ಮಕ್ಕಳು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು, ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ, ವಾದ್ಯಗಳ ಧ್ವನಿ ವಿನ್ಯಾಸ ಇವುಗಳಿಂದ ಬೋಯಣ್ಣನ ಭಾವಕೋಶ ಸಮೃದ್ಧವಾಯಿತು.

ಕುಕ್ಕಾಜೆ ಪ್ರಾಥಮಿಕ ಶಾಲೆಯ ನಾಟಕಗಳಲ್ಲಿ ಬೋಯಣ್ಣನಿಗೆ 'ಪಾರ್ಟು ಸಿಕ್ಕಿದವು. ಅಧ್ಯಾಪಕ ಕಳವಾರು ರಾಮರಾಯರು ನಿರ್ದೇಶಿಸಿದ 'ಸುಕ್ರುಂಡೆ ಐತಾಳರು - ಕುಂಬಳಕಾಯಿ ಭಾಗವತರು' ನಾಟಕದಲ್ಲಿ ಮೂರನೇ ಕ್ಲಾಸಿನ ಬೋಯಣ್ಣನದು ಪುರೋಹಿತನ ಐತಾಳನ ಪಾತ್ರ. ಪುರೋಹಿತ ಭಾಗವತನಾಗಬಯಸಿ ಸಂಗೀತವನ್ನು ಮಂತ್ರದ ಧಾಟಿಯಲ್ಲಿ ಹೇಳುವುದು, ಈ ನಾಟಕದ ವಸ್ತು (ಕಾರಂತರು ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಈ ನಾಟಕಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸಿ, ಪ್ರದರ್ಶಿಸಿದರು. ಐದನೆಯ ಕ್ಲಾಸಿನಲ್ಲಿದ್ದಾಗ ಅಧ್ಯಾಪಕ ಪಿ.ಕೆ. ನಾರಾಯಣರು ನಿರ್ದೇಶಿಸಿದ 'ನನ್ನ ಗೋಪಾಲ'ದಲ್ಲಿ 'ಬೋಯಣ್ಣ' ಗೋಪಾಲನಾದ. ಬೋಯಣ್ಣನ ಹಾಡು ಕೇಳಿ ಮೆಚ್ಚಿದ ಊರಿನ ಪಟೇಲರು ಎರಡು ಊಪಾಯಿ ಬಹುಮಾನ ಕೊಟ್ಟು ಪ್ರೋತ್ಸಾಹಿಸಿದರು.

ಪುತ್ತೂರಿನಿಂದ ಓಡಿಹೋದದ್ದು

ಎಂಟನೇ ಕ್ಲಾಸು ಮುಗಿಸಿದ ಬೋಯಣ್ಣ ಪುತ್ತೂರಿನ ಕುಕ್ರಬೈಲು ಕೃಷ್ಣಭಟ್ಟರ ಮನೆಯಲ್ಲಿ ಮನೆಪಾಠ ಹೇಳುವ ಮಾಸ್ಟ್ರಾದ. ಮಹಾಬಲ ಭಟ್ಟರ 'ತ್ಯಾಗರಾಜ ಸಂಗೀತಶಾಲೆ'ಯಲ್ಲಿ ಸಂಗೀತಾಭ್ಯಾಸ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿಕೆ, ಆಗಾಗ ಶಿವರಾಮ ಕಾರಂತರ 'ಬಾಲವನ'ಕ್ಕೆ ಭೇಟಿ - ಹೀಗೆ ಬೋಯಣ್ಣ ಪುತ್ತೂರಿನಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದ. ಗುಬ್ಬಿ ಕಂಪನಿಯ 'ಕೃಷ್ಣಲೀಲಾ' ನಾಟಕ ನೋಡಲು ಪಾಣೆಮಂಗಳೂರಿನಿಂದ ಮಂಗಳೂರಿಗೆ ಹೋದದ್ದು, ಸೈಕಲಿನಿಂದ ಬಿದ್ದು ಹಲವು ದಿನ ನರಳಿದ್ದು ಬೋಯಣ್ಣನಿಗೆ ಈಗಲೂ ನೆನಪಿದೆ. ಕಾರಂತರ 'ಬಾಲಪ್ರಪಂಚ' 'ಸಿರಿಗನ್ನಡ ಅರ್ಥಕೋಶ' - ಇಂಥ ಪುಸ್ತಕಗಳನ್ನು ತಗೊಳ್ಳಲಿಕ್ಕಾಗಿ ಬೋಯಣ್ಣ ಧನಿಗಳ ಮನೆಯಲ್ಲಿ ಕದಿಯತೊಡಗಿದ. ಕದ್ದು ಸಿಕ್ಕಿಬಿದ್ದಾಗ ಕೃಷ್ಣಭಟ್ಟರು ಬುದ್ಧಿವಾದ ಹೇಳಿದರು. ಹದಿಹರಯದ ಬೋಯಣ್ಣ ಪುತ್ತೂರು ಬಿಟ್ಟು ಘಟ್ಟ ಹತ್ತಲು ನಿರ್ಧರಿಸಿದ. 'ಊರುಡು ನಂಜಾಂಡ ಪಾರ್ದ್ ಬದ್ಕೊಡು' (ಊರಲ್ಲಿ ನಂಜಾದರೆ ಓಡಿಹೋಗಿ ಬದುಕಬೇಕು - ತುಳು ಗಾದೆ). ಬೋಯಣ್ಣ ಊರು ಬಿಟ್ಟು ಓಡಿಹೋದದ್ದು 17-11-1944ರಂದು (ತನ್ನ ಮಗ ಶನಿವಾರ ಊರುಬಿಟ್ಟು ಹೋದದ್ದರಿಂದ ಊರೂರು ಅಲೆಯುವಂತಾಯಿತು ಎಂದು ತಾಯಿ ಲಕ್ಷ್ಮಮ್ಮ ಕೊರಗುತ್ತಿದ್ದರಂತೆ). 'ನನ್ನ ಮಗ ಕಾಣೆಯಾಗಿದ್ದಾನೆ. ದಯವಿಟ್ಟು ಎಲ್ಲಿದ್ದಾನೆಂದು ಪತ್ತೆಮಾಡಿಸಿ' ಎಂದು ಬಿ.ವಿ. ಕಾರಂತರ ತಂದೆ ಕೇಂದ್ರ ಸರಕಾರದ ಗೃಹಮಂತ್ರಗಳಿಗೆ ಬರೆದ ಪತ್ರಕ್ಕೆ ಸರಿಯಾದ ಮಾಹಿತಿ ನೀಡುವ ಉತ್ತರ ಬಂತು. ಊರು ಬಿಟ್ಟು ಓಡಿಹೋಗಿ ಸುಮಾರು 25 ವರ್ಷಗಳ ಅನಂತರ ಬಿ.ವಿ. ಕಾರಂತರು ತನ್ನ ತಾಯಿ-ತಂದೆಯನ್ನು ಭೇಟಿಯಾದರು. ಈ ಭೇಟಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ 'ಏವಂ ಇಂದ್ರಜಿತು' ಪ್ರದರ್ಶನದ ದಿನ ನಡೆಯಿತು.

ಗುಬ್ಬಿ ಕಂಪೆನಿಯಲ್ಲಿ

ಪುತೂರಿನಿಂದ ಮೈಸೂರಿಗೆ ಓಡಿಬಂದ ಬಿ.ವಿ. ಕಾರಂತ ’ಕತ್ತೆ ಯಾವುದು ಕುದುರೆ ಯಾವುದ” ಎಂದು ತಿಳಿಯದ ಮುಗ್ಧ (ನೋಡಿ 1-1). ಮಹಾರಾಜರನ್ನು ಭೇಟಿಯಾಗಿ ಅವರ ಆಶ್ರಯದಲ್ಲಿ ಸಂಗೀತ ಕಲಿಯಬೇಕೆಂದು ಕನಸು ಕಾಣುತ್ತಿದ್ದ ಕಾರಂತರಿಗೆ ಗುಬ್ಬಿ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಮೊದಲು ಬಾಲಕೃಷ್ಣ, ಮಾರ್ಕಂಡೇಯ ಇತ್ಯಾದಿ ಪಾತ್ರಗಳಲ್ಲಿ ಮಿಂಚಿದ ಈ ಚಂದದ ಯುವಕ ಮುಂದೆ ಖಾಯಂ ಆಗಿ ಸ್ತ್ರೀ ಪಾತ್ರ ಮಾಡಬೇಕಾಯಿತು. ಗುಬ್ಬಿ ಕಂಪೆನಿಯ ಮಾಲಿಕ ಗುಬ್ಬಿವೀರಣ್ಣ (1890-1972); ಕಂಪೆನಿಯ ನಾಟಕಕಾರ ನಿರ್ದೇಶಕರಾದ ಬಿ. ಪುಟ್ಟಸ್ವಾಮಯ್ಯ ಕಾರಂತರಿಗೆ ತುಂಬ ಉತ್ತೇಜನ ನೀಡಿದರು. ಕಂಪೆನಿಯ ಪೂಜೆಯ ಭಟ್ಟರಾಗಿದ್ದ ಕಾರಂತ, ನಾಟಕಗಳ ಹಸ್ತಪ್ರತಿಯ ಪ್ರತಿ ತಯಾರಿಸುವ ಕೆಲಸವನ್ನೂ ಮಾಡುತ್ತಿದ್ದರು; ಗಾಂಧೀಜಿಯ 'ಹರಿಜನ' ಪತ್ರಿಕೆಯಿಂದ ಪ್ರೇರಣೆ ಪಡೆದು ಹಿಂದೀ ಕಲಿಯತೊಡಗಿದರು. ಗುಬ್ಬಿಕಂಪೆನಿಯಲ್ಲಿ ಬೆಳ್ಳಾವೆ ನರಹರಿ ಶಾಸ್ತ್ರಿ, ಹುಣಸೂರು ಕೃ಼ ಷ್ಣಮೂರ್ತಿ, ಕು.ರಾ. ಸೀತಾರಾಮ ಶಾಸ್ತ್ರಿ, ಜಿ.ವಿ. ಅಯ್ಯರ್, ಬಾಲಕೃಷ್ಣ ಮತ್ತಿತರರ ಒಡನಾಟದಲ್ಲಿ ಅವರು ಬೆಳೆದರು. ಗುಬ್ಬಿ ಚನ್ನಬಸವೇಶ್ವರ ನಾಟಕ ಸಂಘದಲ್ಲಿ ಆರು ವರ್ಷವಿದ್ದ ಕಾರಂತರು ಮುಂದೆ ಬೆಂಗಳೂರು ಸೇರಿದರು.

ಬಿ.ವಿ. ಕಾರಂತರ ಇಂಗ್ಲಿಷ್ ಜ್ಞಾನ ಚೆನ್ನಾಗಿರಲಿಲ್ಲ. ಅವರು ಖಾಸಗಿಯಾಗಿ ಹಿಂದೀ ಮಾಧ್ಯಮದಲ್ಲಿ ಮೆಟ್ರಿಕ್, ಇಂಟರ್ಮೀಡಿಯೆಟ್, ಬಿ.ಎ. ಮಾಡಿದರು. ಪರೀಕ್ಷೆ ಬರೆಯಲು ಆಗಾಗ ಕಾಶಿಗೆ ಹೋಗಿ ಬರುತ್ತಿದ್ದ ಅವರಿಗೆ ಗುಬ್ಬಿವೀರಣ್ಣ ಮತ್ತು ಅವರ ಕುಟುಂಬದವರು ಆರ್ಥಿಕ ಸಹಾಯ ನೀಡಿದರು. (ಬಿ.ವಿ. ಕಾರಂತರ ದುರ್ಬಲ ಇಂಗ್ಲಿಷ್ ಬಗ್ಗೆ ಪ್ರಸಿದ್ಧ ತುಂಟಾಟವೊಂದು ಹೀಗಿದೆ - ದೆಹಲಿಯಲ್ಲಿ ಒಮ್ಮೆ ಬಿ.ವಿ. ಕಾರಂತರನ್ನು ಶಿವರಾಮ ಕಾರಂತರೆಂದು ತಪ್ಪು ತಿಳಿದ ಒಬ್ಬರು ಇಂಗ್ಲಿಷಿನಲ್ಲಿ ಮಾತನಾಡಿಸಿದರು. ನಾನು ಶಿವರಾಮ ಕಾರಂತ ಅಲ್ಲ; ಬಿ.ವಿ. ಕಾರಂತ ಎಂದು ಇಂಗ್ಲಿಷ್ ನಲ್ಲಿ ವಿವರಿಸಲು ಬಿ.ವಿ. ಕಾರಂತರಿಗೆ ಸಾಕೋಸಾಕಾಯಿತಂತೆ). ಬೆಂಗಳೂರಿನಲ್ಲಿ ಒಂದು ಮಾರವಾಡಿ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಜಿ.ವಿ. ಅಯ್ಯರ್ ಮತ್ತು ಬಾಲಕೃಷ್ಣರ ಪ್ರೋತ್ಸಾಹ ಸಿಕ್ಕಿತು.

ಕಾಶಿಯಲ್ಲಿ ಕಾರಂತ

1956-58ರಲ್ಲಿ ಬಿ.ವಿ. ಕಾರಂತರು ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಹಿಂದೀ ಎಂ.ಎ. ಅಧ್ಯಯನ ಮಾಡಿದರು. ಎಂ.ಎ.ಯ ಪ್ರಬಂಧಕ್ಕಾಗಿ ಅವರು ಆಯ್ಕೆಮಾಡಿದ ವಿಷಯ - 'ಲಯತತ್ವ ಮತ್ತು ಹಿಂದೀ ಕಾವ್ಯ'. ಪಂಡಿತ ಓಂಕಾರನಾಥ ಠಾಕೂರರ ಶಿಷ್ಯನಾಗಿ ಅವರು ಹಿಂದೂಸ್ಥಾನಿ ಸಂಗೀತ ಕಲಿತರು. ಕಾಶಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ಸೇರಿದ್ದ ಕಾರಂತರು ಮುಂದೆ ಅದರಿಂದ ದೂರವಾದರು. ಯುವಕ ಕಾರಂತರು ಬೆಂಗಳೂರಿನ ತರುಣಿಯೊಬ್ಬರಿಗೆ ಪ್ರೇಮಪತ್ರ ಬರೆದರು - ’ನಿನ್ನ ಮೇಲೆ ನನಗೆ ಮನಸ್ಸಾಗಿದೆ (ಮೇರಾ ಮನ್ ತುಜ್ ಸೆ ಲಗಾ ಹುವಾ ಹೈ” ’ನನ್ನ ಮನಸ್ಸು ಬೇರೊಬ್ಬನನ್ನು ಬಯಸುತ್ತಿದೆ (ಮೇರಾ ಮನ್ ಕಹೀ ಔರ್ ಲಗ್ ಚುಕಾ ಹೈ)’ ಎಂದು ಅವಳಿಂದ ಉತ್ತರ ಬಂದಾಗ ಪ್ರಕರಣ ಮುಕ್ತಾಯವಾಯಿತು !

1958ರಲ್ಲಿ ಬಿ.ವಿ. ಕಾರಂತ-ಪ್ರೇಮಾ ದಂಪತಿಗಳಾದರು. ಮೈಸೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈ ಮದುವೆ ನಡೆಯಿತು. ಶಿಕ್ಷಕಿಯಾಗಿದ್ದ ಪ್ರೇಮಾ ಮದುವೆಯಾದ ಮೇಲೆ ಕೆಲಸ ಕಳೆದುಕೊಂಡರು. ನವದಂಪತಿಗಳು ಆರ್ಥಿಕ ದು:ಸ್ಥಿತಿಯಿಂದ ಕಂಗಾಲಾದರು. ಗಂಗೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಬಿ.ವಿ. ಕಾರಂತರ ನಿರ್ಧಾರ ಅದೃಷ್ಟವಶದಿಂದ ಬದಲಾಯಿತು. ಸಂಶೋಧನೆ (ಪಿ.ಎಚ್‍ಡಿ.)ಗಾಗಿ ಕಾರಂತರು 'ರಂಗಭೂಮಿ ಮತ್ತು ಹಿಂದೀ ನಾಟಕ’) ಎಂಬ ವಿಷಯ ಆರಿಸಿಕೊಂಡರು. ಪ್ರೊ ಹಜಾರಿ ಪ್ರಸಾದ್ ದ್ವಿವೇದಿ ಮಾರ್ಗದರ್ಶಕರಾಗಿದ್ದರು. ಸಂಶೋಧನೆಯ ಕ್ಷೇತ್ರಕಾರ್ಯಕ್ಕಾಗಿ ಕಾರಂತರು ಕೆಲವು ತಿಂಗಳು ಕಲ್ಕತ್ತಾದಲ್ಲಿದ್ದರು.

ರಾಷ್ಟ್ರೀಯ ನಾಟಕಶಾಲೆಯಲ್ಲಿ

ಬಿ.ವಿ. ಕಾರಂತರು ತನ್ನ ಮೂವತ್ತರೆಡನೆಯ ವಯಸ್ಸಿನಲ್ಲಿ (1960ರಲ್ಲಿ) ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಸೇರಿದರು. ಶ್ರೀರಂಗ­­೩ ಮತ್ತು ಕಲ್ಕತ್ತಾದ ಡಾ. ಪ್ರೇಮಲತಾ ಶರ್ಮ ಅವರ ಸಹಾಯದಿಂದ ಅವರು ಎನ್.ಎಸ್.ಡಿ. ಸೇರುವುದು ಸಾಧ್ಯವಾಯಿತು. ಕಾರಂತರು ಎನ್.ಎಸ್.ಡಿ. ವಿದ್ಯಾರ್ಥಿಯಾಗಿದ್ದಾಗ (1960-62) ಅನುಕ್ರಮವಾಗಿ ನಾತುಸೇನ್, ನೇಮಿಚಂದ್ರ ಜೈನ್ ಮತ್ತು ಅಲ್ಕಾಜಿ ಎನ್.ಎಸ್.ಡಿ.ಯ ನಿರ್ದೇಶಕರಾಗಿದ್ದರು. ಪ್ರೇಮಾ ಕಾರಂತರಿಗೆ ದೆಹಲಿಯ ಅರವಿಂದ ಆಶ್ರಮಶಾಲೆಯಲ್ಲಿ ಕೆಲಸ ಸಿಕ್ಕಿತು. ಭಾಸನ 'ಸ್ವಪ್ನವಾಸವದತ್ತ', ಗಿರೀಶ ಕಾರ್ನಾಡರ 'ತುಘಲಕ್' ನಾಟಕಗಳನ್ನು ಹಿಂದೀಗೆ ಭಾಷಾಂತರಿಸಿದ, ಅಚ್ಚ ಹಿಂದೀ ಮಾತನಾಡುವ ಬಿ.ವಿ.ಕಾರಂತರು ಪ್ರೊ
ಅಲ್ಕಾಜಿಯವರ ಗಮನಸೆಳೆದರು. ಬಿ.ವಿ. ಕಾರಂತರ ಮೊದಲ ನಾಟಕಗಳಲ್ಲಿ ಅಲ್ಕಾಜಿಯವರ ಸ್ಪಷ್ಟ ಪ್ರಭಾವವಿತ್ತು.

ಎನ್.ಎಸ್.ಡಿ. ಪದವೀಧರ ಬಿ.ವಿ. ಕಾರಂತರು ದೆಹಲಿಯ ಪಟೇಲ್ ಸ್ಕೂಲ್‍ನಲ್ಲಿ 'ಡ್ರಾಮಾ ಮಾಸ್ಟರ್ ಆದರು (1963). 'ಪಂಜರಶಾಲೆ' 'ನನ್ನ ಗೋಪಾಲ' 'ಇಸ್ಪೀಟ ರಾಜ' ಇವು ಪಟೇಲ್ ಸ್ಕೂಲ್‍ನಲ್ಲಿ ಅವರು ನಿರ್ದೇಶಿಸಿದ ನಾಟಕಗಳು. ಅವರು ದೆಹಲಿಯಲ್ಲಿ ತನ್ನ ಮಿತ್ರರೊಡನೆ ಆರಂಭಿಸಿದ ಸಂಘಟನೆ - 'ಕನ್ನಡ ಭಾರತಿ'. 'ತುಘಲಕ್' 'ರಂಗಭಾರತ' 'ದಾರಿ ಯಾವುದಯ್ಯ ವೈಕುಂಠಕೆ' - ಇವು ಅವರು ದೆಹಲಿಯಲ್ಲಿ ನಿರ್ದೇಶಿಸಿದ ಮುಖ್ಯ ನಾಟಕಗಳು. 1978ರಲ್ಲಿ ಕಾರಂತರು ಜರ್ಮನಿ, ಹಂಗೇರಿ, ಯುಗೊಸ್ಲಾವಿಯಾ, ಬಲ್ಗೇರಿಯಾಗಳ ಪ್ರವಾಸ ಮಾಡಿ ಅಲ್ಲಿನ ರಂಗಭೂಮಿಗಳ ಸ್ಥಿತಿಯನ್ನು ಅಧ್ಯಯನಮಾಡಿದರು (ನೋಡಿ 4-1).

ಬೆಂಗಳೂರಿನಲ್ಲಿ ಹೊಸ ಪ್ರಯೋಗಗಳು

ಬಿ.ವಿ. ಕಾರಂತರು 1971ರ ದಶಕದಲ್ಲಿ ಬೆಂಗಳೂರಿಗೆ ಬಂದಾಗ ಹವ್ಯಾಸಿ ರಂಗಭೂಮಿ ಜನಾಕರ್ಷಣೆಯನ್ನು ಕಳಕೊಂಡಿತ್ತು. ಚಿಂತನಪ್ರಧಾನವಾಗಿದ್ದ ಹವ್ಯಾಸಿ ರಂಗಭೂಮಿಯಲ್ಲಿ ಕಂಪೆನಿ ನಾಟಕಗಳ ದೃಶ್ಯವೈಭವ, ರಂಗಸಂಗೀತ, ನೃತ್ಯಗಳು ನಾಪತ್ತೆಯಾಗಿದ್ದವು. ಕಪಿಲನ ದೇಹ ಮತ್ತು ದೇವದತ್ತನ ತಲೆಯನ್ನು ಬೆಸೆದ 'ಹಯವದನ'ದ ಪದ್ಮಿನಿಯಂತೆ ಬಿ.ವಿ. ಕಾರಂತರು ಕಂಪೆನಿ ಮತ್ತು ಹವ್ಯಾಸಿ ರಂಗಭೂಮಿಗಳ ಉತ್ತಮಾಂಶಗಳನ್ನು ಒಗ್ಗೂಡಿಸಿದರು; ಮಾನುಷೀ ಸಿದ್ಧಿಯನ್ನು ಪಡೆದರು.

ಬಾದಲ್ ಸರ್ಕಾರವರ 'ಏವಂ ಇಂದ್ರಜಿತ್', ಗಿರೀಶ್ ಕಾರ್ನಾಡರ 'ಹಯವದನ', ಲಂಕೇಶರ 'ಸಂಕ್ರಾಂತಿ', 'ಈಡಿಪಸ್' (ಮೂಲ - ಸೊಫೊಕ್ಲಿಸ್), ಚಂದ್ರಶೇಖರ ಕಂಬಾರರ 'ಜೋಕುಮಾರಸ್ವಾಮಿ', ಜಿ.ಬಿ. ಜೋಶಿ ಅವರ 'ಸತ್ತವರ ನೆರಳು' ಇವು ನಿರ್ದೇಶಕ ಕಾರಂತರ ಸೃಜನಶೀಲತೆಯನ್ನು ಮೆರೆಸಿದವು. 'ಹಯವದನ' 'ಸತ್ತವರ ನೆರಳು'ಗಳ ಕುರಿತು ತೀವ್ರ ಟೀಕೆ, ಭಿನ್ನಾಭಿಪ್ರಾಯಗಳಿದ್ದುವು. 'ಸತ್ತವರ ನೆರಳು' ಇನ್ನೂರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿತು (ನೋಡಿ 2-3, 2-4, 2-5).

ಶ್ರೀರಂಗರ 'ಸ್ವರ್ಗಕ್ಕೆ ಮೂರೇ ಬಾಗಿಲು', 'ಕತ್ತಲೆ-ಬೆಳಕು' ಮತ್ತಿತರ ಶ್ರೀರಂಗರ ನಾಟಕಗಳನ್ನೂ ಕಾರಂತರು ನಿರ್ದೇಶಿಸಿದರು. ಕಾರಂತರ ಪ್ರತಿಭೆಯನ್ನು ಗುರುತಿಸಿದ ಶ್ರೀರಂಗರು ನಿರ್ದೇಶಕನ ಸ್ವಾತಂತ್ರ್ಯಕ್ಕೆ ಮೌನಸಮ್ಮತಿ ನೀಡಿದರು. ಹೆಗ್ಗೋಡಿನಲ್ಲಿ ನಿರ್ದೇಶಿಸಿದ 'ಪಂಜರಶಾಲೆ', ಉಡುಪಿಯಲ್ಲಿ ನಿರ್ದೇಶಿಸಿದ 'ಹೆಡ್ಡಾಯಣ'ಗಳಲ್ಲಿ ಮಕ್ಕಳ ನಾಟಕರಂಗದಲ್ಲಿ ಮಾಡಬಹುದಾದ ಪವಾಡಗಳನ್ನು ಅವರು ತೋರಿಸಿಕೊಟ್ಟರು. ಕಾರಂತರು ಬೆಂಗಳೂರಿನಲ್ಲಿ ಮಾಡಿದ ರಂಗಪ್ರಯೋಗಗಳ ಸೋಲು-ಗೆಲುವಿನ ಸಮೀಕ್ಷೆ ಈ ಗ್ರಂಥದಲ್ಲಿರುವ ಡಾ
ವಿಜಯಾ ಅವರ ಲೇಖನದಲ್ಲಿದೆ (ನೋಡಿ 1-10).

ಎನ್.ಎಸ್.ಡಿ. ನಿರ್ದೇಶಕ

ಬಿ.ವಿ. ಕಾರಂತರು 1977-1981ರ ಅವಧಿಯಲ್ಲಿ ಎನ್.ಎಸ್.ಡಿ.ಯ (ದೆಹಲಿಯ ರಾಷ್ಟ್ರೀಯ ನಾಟಕಶಾಲೆ) ನಿರ್ದೇಶಕರಾಗಿದ್ದರು. ’ಬರ್ನಮ್‍ವನ’ 'ಷಹಜಹಾನ್' 'ಮುದ್ರಾರಾಕ್ಷಸ' 'ಭಗವದಜ್ಜುಕೀಯ' 'ಛೋಟೀ ಸೈಯದ್' 'ಅಂಧೇರ್ ನಗರಿ ಚೌಪಟ್ ರಾಜಾ' - ಇವು ಅವರು ಎನ್.ಎಸ್.ಡಿ.ಯಲ್ಲಿದ್ದಾಗ ನಿರ್ದೇಶಿಸಿದ ನಾಟಕಗಳು. ಇವುಗಳಲ್ಲಿ ಎರಡು ಸಂಸ್ಕೃತ ನಾಟಕಗಳು ಎಂಬುದನ್ನು ಗಮನಿಸಬೇಕು. ’ಬರ್ನಮ್‍ವನ’ ದಲ್ಲಿ ಶೇಕ್ಸ್‌ಪಿಯರ್‌ನನ್ನು ಪಶ್ಚಿಮದಿಂದ ಪೂರ್ವದ ರಂಗಭೂಮಿಗೆ ತರುವ ಸೃಜನಶೀಲ ಲಂಘನವಿತ್ತು. ಇದರಲ್ಲಿ ಕಾರಂತರು ಯಕ್ಷಗಾನದ ಚಲನೆಯನ್ನು ಇಂಡೋನೇಶ್ಯಾ ಕ್ಯಾಂಬೋಡಿಯಾಗಳ ವಸ್ತ್ರವಿನ್ಯಾಸವನ್ನೂ ಬಳಸಿದರು.

ಅಲ್ಕಾಜಿಯವರು ಎನ್.ಎಸ್.ಡಿ.ಯನ್ನು ಪಾಶ್ಚಾತ್ಯ ರಂಗಭೂಮಿಯ ಶಿಸ್ತಿನಿಂದ ಬೆಳೆಸಿದ್ದರು. ಕಾರಂತರು ರಾಷ್ಟ್ರೀಯ ನಾಟಕಶಾಲೆಯ ಭಾರತೀಕರಣವನ್ನೂ, ವಿಕೇಂದ್ರೀಕರಣವನ್ನೂ ಆರಂಭಿಸಿದರು. ಭಾರತೀಯ ರಂಗಭೂಮಿ ಬಹುರೂಪಿ ಎಂಬ ಅಂಶಕ್ಕೆ ಅವರು ಒತ್ತು ನೀಡಿದರು. ಅಲ್ಕಾಜಿಯವರ ಆಡಳಿತ ನೈಪುಣ್ಯ, ಶಿಸ್ತುಗಳಿಲ್ಲದ ಕಾರಂತರು ಎನ್.ಎಸ್.ಡಿ. ನಿರ್ದೇಶಕರಾಗಿ ಸೋತದ್ದು ಆಶ್ಚರ್ಯವೇನಲ್ಲ. [ಗೋಪಾಲಕೃಷ್ಣ ಅಡಿಗರಿಗೆ ಅಲ್ಕಾಜಿಯವರ 'ತುಘಲಕ್' ಪರಿಣಿತವಾದ ಡ್ರಿಲ್, ಬಿ.ವಿ. ಕಾರಂತರ 'ತುಘಲಕ್' ನಿಜವಾದ ನಾಟಕ ಅನ್ನಿಸಿತಂತೆ ! (ನೋಡಿ 1-6]

ಭೋಪಾಲದ ಅಗ್ನಿದಿವ್ಯ

ಭೋಪಾಲದ 'ಭಾರತಭವನ' ಐ.ಎ.ಎಸ್. ಅಧಿಕಾರಿ, ಕವಿ ಅಶೋಕ ವಾಜಪೇಯಿಯವರ ಕನಸು. ಬಿ.ವಿ. ಕಾರಂತರು 1982ರಿಂದ 1986ರ ವರೆಗೆ ಭೋಪಾಲದ ರಂಗಮಂಡಲದ ಲ್ಲಿದ್ದರು. 'ಘಾಸಿರಾಮ್ ಕೊತ್ವಾಲ್' 'ಜರಾಸಂಧ' ’ಚತುಬಾರ್ನಿ’, 'ಮಾಲವಿಕಾಗ್ನಿಮಿತ್ರ' 'ಸ್ಕಂದಗುಪ್ತ' ಇವು ಈ ಅವಧಿಯಲ್ಲಿ ಅವರು ನಿರ್ದೇಶಿಸಿದ ನಾಟಕಗಳು. ಇದೇ ಅವಧಿಯಲ್ಲಿ ಅವರು ಆಸ್ಟ್ರೇಲಿಯಾಕ್ಕೆ ಹೋಗಿ 'ಹಯವದನ' ನಿರ್ದೇಶಿಸಿದರು.

'ಮಾಲವಿಕಾಗ್ನಿಮಿತ್ರ'ವನ್ನು ಮಾರ್ಗದಿಂದ ದೇಸಿಯತ್ತ ತರುವ ಪ್ರಯತ್ನದಲ್ಲಿ ಕಾರಂತರು ಯಶಸ್ವಿಯಾದರು. ಸಂಸ್ಕೃತ 'ಮಾಲವಿಕಾಗ್ನಿಮಿತ್ರ'ವನ್ನು ಹಿಂದೀಯ ಪ್ರಾದೇಶಿಕ ಉಪಭಾಷೆಯಾದ ಬುಂದೇಲಿಯಲ್ಲಿ ಪ್ರಯೋಗಿಸುವುದು ಸೀಮೋಲ್ಲಂಘನದ ಐತಿಹಾಸಿಕ ನಿರ್ಧಾರವಾಗಿತ್ತು.

'ತೊಂಡುಮೇವರಿಗೆ ಹಾದಿ ಕೇಳದಿರು ಹತ್ತು ದುರ್ಗವನ್ನು' ಎಂಬಂತೆ, ನಾಟಕಲೀನರಾಗಿದ್ದ ಕಾರಂತರು 'ಸ್ವಾಧೀನ ಕುಶಲಿ'ಯಾಗಿರುವುದು ಸಾಧ್ಯವಾಗಲಿಲ್ಲ. ಯಾಕೆಂದರೆ ಸುತ್ತ-ಮುತ್ತ 'ಹೊಟ್ಟೆಕಿಚ್ಚಿಗೆ ಜಗದ ಭಟ್ಟಿ ಕೆಡಿಸಬ್ಯಾಡ್ರೀ' ಎಂಬ ಕವಿವಾಣಿ ಅರ್ಥವಾಗದ ಸಣ್ಣತನದ ಹಲವರಿದ್ದರು. ವಿಭಾ ಪ್ರಕರಣದಲ್ಲಿ ಕೊಲೆ ಪ್ರಯತ್ನದ ಆರೋಪ ಹೊತ್ತ ಕಾರಂತರು ವಿಚಾರಣೆಯ ಅವಧಿಯಲ್ಲಿ ಐದು ತಿಂಗಳು ಜೈಲಿನಲ್ಲಿರಬೇಕಾಯಿತು. ಈ ಅಗ್ನಿದಿವ್ಯದಲ್ಲಿ ಕಾರಂತರು ಗೆದ್ದರು. (ವಿಭಾ ಪ್ರಕರಣ - 1-5ರ ಟಿಪ್ಪಣಿ ನೋಡಿ). "ಒಂದು ವರ್ಷ ನನಗೆ ಹಾಡಲಿಕ್ಕಾಗಲಿಲ್ಲ. ಯೋಚಿಸಲಿಕ್ಕೂ ಆಗಲಿಲ್ಲ. ನನ್ನ ಮೇಲೆ ಆಕಾಶವೇ ಕಳಚಿಬಿದ್ದಂತಾಗಿತ್ತು" ಎನ್ನುತ್ತಾರೆ ಕಾರಂತರು. ಶೂದ್ರಕನ 'ಮೃಚ್ಛಕಟಿಕ'ದ ಚಾರುದತ್ತನಂತೆ ಕಾರಂತರು ತನ್ನ ಆರೋಪಗಳಿಂದ ಮುಕ್ತರಾದರು.

ಮೈಸೂರಿನ 'ರಂಗಾಯಣ'ದಲ್ಲಿ

ಮೈಸೂರಿನಲ್ಲಿ ಕರ್ನಾಟಕ ಸರಕಾರ ಆರಂಭಿಸಿದ ರೆಪರ್ಟರಿ 'ನಾಟಕ ಕರ್ನಾಟಕ ರಂಗಾಯಣ' 1986ರಲ್ಲಿ 'ರಂಗಾಯಣ'ದ ನಿರ್ದೇಶಕರಾದ ಕಾರಂತರು 1995ರಲ್ಲಿ ರಾಜಕೀಯ ಕಾರಣದಿಂದ ರಾಜೀನಾಮೆ ನೀಡಿದರು. 'ಗೋವಿನ ಹಾಡು' 'ಮೂಕನ ಮಕ್ಕಳು' ಮತ್ತು 'ಚಂದ್ರಹಾಸ' ಇವು ರಂಗಾಯಣದಲ್ಲಿ ಕಾರಂತರು ನಿರ್ದೇಶಿಸಿದ ನಾಟಕಗಳು.

'ರಂಗಾಯಣ'ದ ಸಾಧನೆಗಳನ್ನು 'ಲಂಕೇಶ್ ಪತ್ರಿಕೆ' ಹೀಗೆ ಗುರುತಿಸಿತು - ಈ ಐದೂವರೆ ವರ್ಷದಲ್ಲಿ ಕಾರಂತರು ಸಾಕಷ್ಟು ಸುದ್ದಿ ಮಾಡಿದ್ದಾರೆ. ಕಲಾಮಂದಿರದ ಆವರಣದಲ್ಲಿ ಕಲಾತ್ಮಕ ಜೀವ ತುಂಬಿದ್ದಾರೆ. 'ಭೂಮಿಗೀತ' 'ವನರಂಗ'ಗಳಲ್ಲಿ ಕತ್ತಲು-ಬೆಳಕಿನ ಮಾಯಾಜಾಲವನ್ನೇ ಸೃಷ್ಟಿಸಿ 'ಹಿಪ್ಪೋಲಿಟಸ್' ಪ್ರಯೋಗದ ಮೂಲಕ ಗ್ರೀಕ್ ರಂಗಭೂಮಿಯನ್ನೇ ಇಲ್ಲಿನ ರಂಗಾಸಕ್ತರಿಗೆ ಪರಿಚಯಿಸಿದ್ದಾರೆ. ರಂಗಭೂಮಿಯ ಶ್ರೇಷ್ಠತೆ ಕುರಿತಂತೆ ಅನೇಕ ಬಗೆಯ ಸಾಂಸ್ಕೃತಿಕ ವಾಗ್ವಾದಗಳಿಗೆ ವೇದಿಕೆ ನಿರ್ಮಿಸಿ ಅಂತಾರಾಷ್ಟ್ರೀಯ ಖ್ಯಾತಿಯ ವೆಸಿಲೊಗಯಿಸ್, ಪ್ರಿಟ್ಸ್‌ಬೆನೆವಿಟ್ಸ, ಫಿಲಿಪ್, , ಅಲೆಕ್ಸಾಂಡ್ರಾ, ಜಾನ್ ಮಾರ್ಟಿನ್ ಮುಂತಾದವರನ್ನೆಲ್ಲಾ ಆಹ್ವಾನಿಸಿ ತಮ್ಮ ಖ್ಯಾತಿ ಪ್ರಭಾವಗಳನ್ನೆಲ್ಲ ಮಾಡಿಕೊಂಡಿದ್ದಾರೆ. ದೇವನೂರರ 'ಕುಸುಮಬಾಲೆ'ಯನ್ನು ರಂಗಕ್ಕೆ ತಂದ ಸಿ. ಬಸವಲಿಂಗಯ್ಯನವರಂಥ ಸಮರ್ಥ ನಿರ್ದೇಶಕನ ಪ್ರತಿಭೆ ಅರಳಲು ನೆರವಾಗಿದ್ದಾರೆ. 'ಗೋವಿನ ಹಾಡು', 'ಕಿಂದರಿ ಜೋಗಿ', 'ತಿರುಕನ ಕನಸು' ಮುಂತಾದ ಮಕ್ಕಳ ನಾಟಕಗಳು, 'ಚೆರ್ರಿ ತೋಟ', 'ರೋಡು', 'ಮಗ್ಗದವರು', 'ತಲೆದಂಡ', 'ಪ್ರತಿಶೋಧ', 'ಕತ್ತಲೆ ಬೆಳಕು', 'ಶ್ರೀಕೃಷ್ಣ ಸಂಧಾನ', 'ಜಗದೇಕವೀರನ ಕತೆ', 'ಚಂದ್ರಹಾಸ', 'ಅಲೆಗಳಲ್ಲಿ ರಾಜಹಂಸ', 'ಬೇಳೆಕಾಳಿನ ಪ್ರಸಂಗ', 'ಮೂಕನ ಮಕ್ಕಳು', ’ಶೇಕ್ಸ್‌ಪಿಯರ್‌ನಿಗೆ ನಮಸ್ಕಾರ' ಮುಂತಾದ ಪ್ರಯೋಗಗಳು....... ಇವುಗಳಲ್ಲಿ ಎಲ್ಲವೂ ಯಶಸ್ವಿ ಪ್ರಯೋಗಗಳಲ್ಲವಾದರೂ ಕಲಾವಿದರ ತರಬೇತಿಗಾಗಿ ನಿಯೋಜನೆಗೊಂಡವಾದ್ದರಿಂದ ವಿಮರ್ಶೆಯಲ್ಲಿ ರಿಯಾಯ್ತಿ ಬಯಸುತ್ತವೆ5.

ಗ್ರೀಕ್ ನಾಟಕಕಾರ ಯುರಿಪಿಡಿಸ್‍ನ 'ಹಿಪೋಲಿಟಸ್'ನ ಕನ್ನಡ ಭಾಷಾಂತರವನ್ನು (ನಿರ್ದೇಶನ - ವೆಸಿಲಿಯೊಸ್ ಕಲಿಟ್ಸಿಸ್, ಸಂಗೀತ - ಬಿ.ವಿ. ಕಾರಂತ, ಫಲಿಪ್ ಕೊವ್ವಾಂಟಿಸ್) 'ರಂಗಾಯಣ'ದವರು ನ್ಯೂಯಾರ್ಕ್‍ನಲ್ಲಿ ಪ್ರದರ್ಶಿಸಿದರು. 1980ರ ದಶಕದಲ್ಲಿ ಕಾರಂತರು ನಿರ್ದೇಶಿಸಿದ ಇತರ ನಾಟಕಗಳು - 'ತದ್ರೂಪಿ' (ಪ್ರಸನ್ನ), 'ದಿಡ್ಡಿಬಾಗಿಲು' ('ರಶೊಮನ್'), 'ಹಿಟ್ಟಿನ ಹುಂಜ' (ಗಿರೀಶ್ ಕಾರ್ನಾಡ್), 'ಮಿಸ್ ಸದಾರಮೆ' ಮತ್ತು 'ಕಿಂಗ್ ಲಿಯರ್'.

2

ನಾಟಕ ನಾಟಕಕಾರನ ಸೃಷ್ಟಿ - ರಂಗ ನಿರ್ಮಿತಿ ನಿರ್ದೇಶಕನ ಸೃಷ್ಟಿ. ಸಾಹಿತ್ಯ ಕೃತಿಯನ್ನು ಅವಲಂಬಿಸದೆಯೂ ನಿರ್ದೇಶಕ ರಂಗಕೃತಿಯನ್ನು ಸೃಷ್ಟಿಸಬಲ್ಲ, ನಾಟಕ ಚಿರಂಜೀವಿ. ಆದರೆ ರಂಗಕೃತಿ 'ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸಾ' ಎಂಬಂತೆ ಕಾಲಬದ್ಧ, ತಾತ್ಕಾಲೀನ, ನಾಟಕಕಾರನ ಆಶಯಕ್ಕಿಂತ ನಿರ್ದೇಶಕನ ಆಶಯ ಭಿನ್ನವಾಗಿರಬಹುದು. 'ಗೋಕುಲ ನಿರ್ಗಮನ'ದ ಒಂದನೇ ಪ್ರಯೋಗಕ್ಕೂ, ಅದೇ ಕಲಾವಿದರ , ಆ ನಾಟಕದ ನೂರನೇ ಪ್ರಯೋಗಕ್ಕೂ ಸೂಕ್ಷ್ಮ ವ್ಯತ್ಯಾಸಗಳಿರಬಹುದು. ನಾಟಕದಂತೆ ರಂಗಕೃತಿ ನಮ್ಮ ಮುಂದೆ ಇರುವುದಿಲ್ಲ. ಇದು ರಂಗಕೃತಿ ವಿಮರ್ಶೆಯ ಮುಖ್ಯ ಸಮಸ್ಯೆ. 'ಬರ್ನಮ್ ವನ'ವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನ 'ಮುದ್ದಣ ಮಂಟಪ'ದಂಥ ಆದರ್ಶ ಬಯಲು ರಂಗಮಂಟಪದಲ್ಲಿ ನೋಡುವುದಕ್ಕೂ, ಅದರ ವಿಡಿಯೋ ಕ್ಯಾಸೆಟ್ ನೋಡುವುದಕ್ಕೂ ತುಂಬ ವ್ಯತ್ಯಾಸವಿದೆ.ನಿರ್ದೇಶಕ ತನ್ನ ರಂಗಕೃತಿಯಲ್ಲಿ ನಾಟಕಕಾರನ ಕೃತಿ, ನಟರು, ಸಂಗೀತ ನಿರ್ದೇಶಕ, ಬೆಳಕಿನ ತಜ್ಞ, ವಸ್ತ್ರ ವಿನ್ಯಾಸ ತಜ್ಞರ ಮತ್ತು ತನ್ನ ಪ್ರತಿಭೆಯನ್ನು ಸಂಯೋಜಿಸಿ ಕಲಾನುಭವವನ್ನು ನೀಡುವುದರಲ್ಲಿ, ಪ್ರಬಂಧ ಧ್ವನಿಯನ್ನು ಮೂಡಿಸುವುದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾನೆ ಎನ್ನುವುದರ ಅವಲೋಕನ ರಂಗಕೃತಿ ವಿಮರ್ಶೆಯಲ್ಲಿ ಮುಖ್ಯ.

ರಂಗಕೃತಿ ವಿಮರ್ಶೆ ಕನ್ನಡದಲ್ಲಿ ಬೆಳೆದಿಲ್ಲ ಎಂಬ ಅಭಿಪ್ರಾಯವನ್ನು ಈ ಗ್ರಂಥದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ. ಪ್ರಸನ್ನ ಹೇಳುವಂತೆ, ನಾಟಕದ ನಿರ್ದೇಶಕನನ್ನ ಇವತ್ತಿಗೂ ಕೂಡ ಕನ್ನಡ ಸಾಹಿತ್ಯವೇ ಇರಲಿ ಹಿಂದೀ ಸಾಹಿತ್ಯವೇ ಇರಲಿ, ಯಾವುದೇ ಸಾಹಿತ್ಯವಿರಲಿ, ಎರಡನೆಯ ದರ್ಜೆಯ ಪ್ರಜೆಯಾಗಿ ನೋಡ್ತಾರೆಯೇ ಹೊರತು, ನಿರ್ದೇಶಕರ ಕೃತಿಯನ್ನು ವಿಮರ್ಶಿಸುವ ಕೆಲಸವನ್ನು ಇನ್ನೂ ಮಾಡಿಲ್ಲ (1-7). ಈ ಅಭಿಪ್ರಾಯವನ್ನು ಕೆ. ವಿ. ಸುಬ್ಬಣ್ಣನವರೂ ಒಪ್ಪುತ್ತಾರೆ - ನಮ್ಮಲ್ಲಿ ಶಾಬ್ದಿಕ ಭಾಷೆ ಸಾಹಿತ್ಯದ ಸಂಸ್ಕೃತಿಗಳು ಬೆಳೆದಿಲ್ಲ. ಇದರಿಂದ ಪ್ರಬುದ್ಧ ಸಾಹಿತ್ಯ ವಿಮರ್ಶಕರು ಕೂಡ ರಂಗ ವಿಮರ್ಶೆಯಲ್ಲಿ ತೊಡಗಿದಾಗ ಬಾಲಿಶವಾಗುವುದುಂಟು. ಕೆಲವರಂತೂ ಸಾಹಿತ್ಯದ ಪರಿಷ್ಕಾರದ ಪಠನವೇ ರಂಗಭೂಮಿಯ ಕೇಂದ್ರಬಿಂದು ಎಂದು ಭಾವಿಸಿಕೊಳ್ಳುತ್ತಾರೆ ಮತ್ತು ಇವರಿಗೆ ಬರವಣಿಗೆ ರೂಢಿಯಾಗಿ ಭಾಷೆಯ ಮೇಲೆ ಪ್ರಭುತ್ವ ಸಿದ್ಧಿಸಿರುವುದರಿಂದ ಇವರ ಬಾಲಿಶ ವಿಮರ್ಶೆಯೂ ತಾತ್ಕಾಲಿಕವಾಗಿ ಮನ್ನಣೆಗೊಂಡುಬಿಡುತ್ತದೆ (1-6). ಸಾಹಿತ್ಯ ವಿಮರ್ಶೆ ಬೆಳೆಯುವಂತೆ ರಂಗಭೂಮಿ ವಿಮರ್ಶೆ ಬೆಳೆಯಲಾರದು ಎನ್ನುವ ಬಿ.ವಿ. ಕಾರಂತರು ಅದಕ್ಕೆ ನೀಡುವ ಕಾರಣಗಳು ಹೀಗಿವೆ - ವರ್ತಮಾನದ ಈ ತುರ್ತೇ ರಂಗಭೂಮಿಯ ಅನನ್ಯತೆ ಮತ್ತು ಮಿತಿ. ಇದೆ ಸ್ಥಾನಸಾಪೇಕ್ಷ ಮತ್ತು ಸ್ಥಳಸಾಪೇಕ್ಷವಾದದ್ದು. ಅದಕ್ಕೋಸ್ಕರವೇ ಸಾಹಿತ್ಯ ವಿಮರ್ಶೆ ಬೆಳೆಯೋ ಹಾಗೆ ರಂಗಭೂಮಿ ವಿಮರ್ಶೆ ಬೆಳೆಸೋಕೆ ಸಾಧ್ಯ ಇಲ್ಲ. Film Appreciation Course ಮಾಡೋ ಹಾಗೆ Theatre Appreciation Course ಮಾಡೋಕ್ಕಾಗಲ್ಲ. ಇಲ್ಲಿ Appreciationಗೆ ಯಾವ ಸೂತ್ರವೂ ಇಲ್ಲ. ಅನುಭವ ಮಾತ್ರ ನಿಜ. ಪ್ರೇಕ್ಷಕರಿಗೆ common sense ಇರೋದು ಬಹಳ ಮುಖ್ಯ. ಒಂದು ರಂಗಪ್ರದರ್ಶನ ಇನ್ನೊಂದು ರಂಗಪ್ರದರ್ಶನಕ್ಕಿಂತ ಭಿನ್ನ. ಒಂದೇ ನಾಟಕದ ಎರಡನೇ ಪ್ರದರ್ಶನವೇ ಹೊಸ ಪ್ರಯೋಗವಾಗಿರುತ್ತದೆ. ಹಾಗಾಗಿ ಯಾವ common sense ನಟರು, ಯಾವ ನಿರ್ದಿಷ್ಟ ಪ್ರೇಕ್ಷಕರಿಗೆ, ಯಾವ ನಿರ್ದಿಷ್ಟ ಕಾಲ ಮತ್ತು ದೇಶಗಳಲ್ಲಿ ಎದುರಾದರು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ವಿಮರ್ಶೆ ಮಾಡೋದಿಕ್ಕೆ ಆಗೋದಿಲ್ಲ. ರಂಗಭೂಮಿಯ ಮಾಧ್ಯಮವೇ ಒಂದು ರೀತಿಯ democratic process. ಇದರಲ್ಲೇ ವಿಮರ್ಶೆ ಒಳಗೊಂಡಿರುತ್ತೆ (3-2).

ಕೆ.ವಿ. ಸುಬ್ಬಣ್ಣನವರ 'ನಾಟಕ - ಹಾಗೆಂದರೇನು?'6 (ಕೆ.ವಿ. ಸುಬ್ಬಣ್ಣನವರ ಆಯ್ದ ಬರಹಗಳು - ಸಂ. ಟಿ.ಪಿ. ಅಶೋಕ, 1992) ಮತ್ತು ಗಿರಡ್ಡಿ ಗೋವಿಂದರಾಜರ 'ರಂಗಕೃತಿ ವಿಮರ್ಶೆ' (ನಾಟಕ ಸಾಹಿತ್ಯ ಮತ್ತು ರಂಗಭೂಮಿ - ಗಿರಡ್ಡಿ, 1989) ಕನ್ನಡದಲ್ಲಿ ರಂಗಕೃತಿ ವಿಮರ್ಶೆಯನ್ನು ಕುರಿತ ಮುಖ್ಯ ಲೇಖನಗಳು. ಆದರೆ ನಾಟಕದಲ್ಲಿನ (ರಂಗಕೃತಿ) ಅನೇಕ ಸಾಹಿತ್ಯೇತರ ಅಂಶಗಳ ವಿಷಯದಲ್ಲಿ, ಶುದ್ಧ ತಾಂತ್ರಿಕ ತೊಂದರೆಯಿಂದಾಗಿ ವಿಮರ್ಶೆ ತಪು ಮಾಡುವದೇ ಹೆಚ್ಚು ಎನ್ನುವ ಎ.ಬಿ. ವಾಕ್ಲೀ ರಂಗಕೃತಿ ವಿಮರ್ಶೆಯ ಸಮಸ್ಯೆಗಳನ್ನು ಚರ್ಚಿಸಿದ್ದಾನೆ.7

ಟಿಪ್ಪಣಿಗಳು

1. ಬಿ.ವಿ. ಕಾರಂತರ ತಮ್ಮಂದಿರು - 1. ಶ್ರೀ ಶ್ಯಾಮ 2. ಶ್ರೀ ಬಾಲಕೃಷ್ಣ ಕಾರಂತ - ಮುಂಬೈಯಲ್ಲಿ ಇಂಜಿನಿಯರ್ ಆಗಿದ್ದಾರೆ. 3. ಶ್ರೀ ಕೃಷ್ಣ ಕಾರಂತ - ಉಡುಪಿಯಲ್ಲಿದ್ದಾರೆ. ತಂಗಿಯರು - 1. ಶ್ರೀಮತಿ ಮಹಾಲಕ್ಷ್ಮಿ ಸೇತುರಾಮ ತಂಜಾವೂರಿನಲ್ಲಿದ್ದಾರೆ. 2. ಶ್ರೀಮತಿ ಸರೋಜಿನಿ ಗೋಪಾಲಕೃಷ್ಣ ಮಯ್ಯ, ಕಾಸರಗೋಡು ತಾಲೂಕಿನ ಕುರ್ಚಿ ಪಳ್ಳದಲ್ಲಿದ್ದಾರೆ.

2. ಲಂಕೇಶ್ ಬರೆದಿರುವಂತೆ, ಎಲ್ಲ ದ.ಕ.ಗಳಂತೆ ಇವರಿಗೂ ಇಂಗ್ಲಿಷೆಂದರೆ ಪಂಚಪ್ರಾಣ; ಆದರೆ ಇಂಗ್ಲಿಷ್ ಬರುವುದಿಲ್ಲ. ಅವರು ತಾವು ಮದುವೆಯಾಗಲಿದ್ದ ಹುಡುಗಿಯಿಂದ ಬಂದ ಕಾಗದಲ್ಲಿ ’I am inclined towards you' ಎಂಬ ಇಂಗ್ಲಿಷ್ ವಾಕ್ಯ ಕಂಡಾಗ 'inclined' ಎಂಬ ಮಾತು ಅರ್ಥವಾಗದೆ ಅದೊಂದು ಬೈಗುಳವಿರಬೇಕೆಂದು ಹೆದರಿಕೊಂಡು, ಸ್ನೇಹಿತರಿಂದ ಅದರರ್ಥ ತಿಳಿದುಕೊಂಡು ಸಮಾಧಾನದ ನಿಟ್ಟಿಸಿರುಗರೆದರಂತೆ. ಇದನ್ನು ಕಾರಂತ ದಂಪತಿಗಳಿಬ್ಬರೂ ಹೇಳಿಕೊಂಡು ನಗುತ್ತಾರೆ. (ಪಿ.ಲಂಕೇಶ - 'ಕಂಡದ್ದು ಕಂಡ ಹಾಗೆ - 'ಬಿ.ವಿ. ಕಾರಂತ ಮತ್ತು ನಾನು').

3. ಶ್ರೀರಂಗರು ತನ್ನ ಆತ್ಮಕತೆಯಲ್ಲಿ, ಅದರಂತೆ ನಾನು ರೇಡಿಯೋದಲ್ಲಿದ್ದಾಗ ನನ್ನ ಗೆಳೆಯರೊಬ್ಬರು 'ಒಬ್ಬ ಒಳ್ಳೆಯ ಹುಡುಗ ಡ್ರಾಮಾ ಸ್ಕೂಲಿಗೆ ಹೋಗ್ಬೇಕಂತಾನ. ಕೇಂದ್ರದ ಸ್ಕಾಲರ್‌ಶಿಪ್‍ಗೆ ಅರ್ಜಿ ಹಾಕ್ಯಾನ. ನಿಮ್ಮ ಸಹಾಯ ಬೇಕು' ಅಂದರು. ಆ ವರ್ಷ ನಾನು ಆಯ್ಕೆ ಸಮಿತಿಯ ಸದಸ್ಯನಿರಲಿಲ್ಲ. 'ನಿಮ್ಮ ಪರಮ ಮಿತ್ರರಾದ ಮಾಮಾವರೇರಕದ ಸದಸ್ಯ ಇದ್ದಾರ ಈ ಸಲ. ಅವರಿಗೊಂದು ಚೀಟಿ ಕೊಡ್ರಿ' ಅಂದರು. 'ಅದಿರಲಿ, ನಿಮ್ಮ ಒಳ್ಳೆಯ ಹುಡುಗ ಯಾರು?' ಎಂದೆ. 'ಹುಡುಗ'ನ ಪರಿಚಯ ಮಾಡಿಕೊಟ್ಟರು. ನಾನು ಚೀಟಿ ಕೊಟ್ಟೆ. ಆ ಹುಡುಗನಿಗೆ ಪ್ರವೇಶ ದೊರೆಯಿತು. ಈಗ ಅವನು 'ಹುಡುಗ'ನಾಗಿ ಉಳಿದಿಲ್ಲ. ತನ್ನ ಯೋಗ್ಯತೆಯಿಂದ ಒಂದು ವಿಶಿಷ್ಟ ಹೆಸರನ್ನು ಗಳಿಸಿಕೊಂಡಿದ್ದಾರೆ. ಇಂದು ಯಾರಿಗೆ ಅವನ ಹೆಸರು ಗೊತ್ತಿಲ್ಲ? ಆದರೂ ಹೇಳುವೆ. ಆ ಹುಡುಗನ ಹೆಸರು ಬಿ.ವಿ. ಕಾರಂತ (ಶ್ರೀರಂಗ - ಸಾಹಿತಿಯ ಆತ್ಮಜಿಜ್ಞಾಸೆ, ಅಕ್ಷರ ಪ್ರಕಾಶನ, ಸಾಗರ, 1994).

4. 'ರಂಗಾಯಣ'ದ ಇತರ ಶಿಕ್ಷಕರು - ಎಸ್. ರಘುನಂದನ (ಪ್ರಶಿಕ್ಷಕ - ಅಭಿನಯ), ಜಯತೀರ್ಥ ಜೋಶಿ (ಉಪನಿರ್ದೇಶಕರು- ಕಲೆ), ಅಂಜು ಸಿಂಗ್ (ಪ್ರಶಿಕ್ಷಕ - ಸಮರಕಲೆ), ಸಂತೋಷಕುಮಾರ್, ಶ್ರೀನಿವಾಸ ಭಟ್ಟ (ಶಿಕ್ಷಕ - ಸಂಗೀತ), ನ. ಬಸವಲಿಂಗಯ್ಯ.

5. ಆರ್. ಸ್ವಾಮಿ ಆನಂದ - ಲಂಕೇಶ ಪತ್ರಿಕೆ, ಆಗಸ್ಟ್ 24, 1994.

6. ಕೆ.ವಿ. ಸುಬ್ಬಣ್ಣನವರ ಲೇಖನದ ಸಾರಾಂಶ ಹೀಗಿದೆ - 1. ಇವತ್ತು ನಾಟಕ ಎನ್ನುವುದಕ್ಕೆ ಎರಡು ಅರ್ಥಗಳಿವೆ - ಸಾಹಿತ್ಯ ಕೃತಿ ಮತ್ತು ರಂಗನಿರ್ಮಿತಿ. ಒಂದರ ಮಾಧ್ಯಮ ಭಾಷೆ, ಇನ್ನೊಂದರಲ್ಲಿ ಅಭಿನಯ; ಒಂದು ದೇಶಸ್ಥ, ಇನ್ನೊಂದು ಕಾಲಸ್ಥ - ಹೀಗಾಗಿ ಇವು ಬೇರೆ ಬೇರೆ. ಇವುಗಳ ವಿಮರ್ಶೆ ಬೇರೆ ಬೇರೆಯಾಗಿಯೇ ನಡೆಯಬೇಕು. ರಂರಂಗನಿರ್ಮಿತಿಯಲ್ಲಿ ಒಂದೊಂದು ಪ್ರಯೋಗವೂ ಒಂದೊಂದು ಸ್ವತಂತ್ರ ಕೃತಿ; ವಿಮರ್ಶೆ ಕೂಡ ಒಂದೊಂದು ಪ್ರಯೋಗವನ್ನೇ ಲಕ್ಷಿಸಬೇಕಾಗುತ್ತದೆ. 2. ಸಾಹಿತ್ಯ ನಾಟಕ ರಂಗಯೋಗ್ಯವಾಗಿರಬೇಕು ಅಥವಾ ರಂಗನಿರ್ಮಿತಿ ಸಾಹಿತ್ಯ ಕೃತಿಯನ್ನು ಅವಲಂಬಿಸಿರಬೇಕು ಎಂಬ ನಿಯತವೇನೂ ಇಲ್ಲ. ಈ ಪರಸ್ಪರ ಒದಗುವಂಥ ಯೋಗ್ಯತೆ ಆಯಾ ಕೃತಿಗಳ ಕಲಾತ್ಮಕತೆಗೆ ಸಂಬಂಧಿಸಿಲ್ಲವಾದ್ದರಿಂದ ವಿಮರ್ಶೆಯಲ್ಲಿ ಅದು ಅಪ್ರಸ್ತುತ. 3. ಒಂದು ಸಾಹಿತ್ಯ ಕೃತಿಯನ್ನು ರಂಗನಿರ್ಮಿತಿಗೆ ಆಧಾರವಾಗಿ ಎತ್ತಿಕೊಂಡರೆ ಅದನ್ನು ಒಂದು ಪರಿಕರ ದ್ರವ್ಯವಾಗಿ ಕೊಳ್ಳುವುದಷ್ಟೇ. ಹಾಗೆ ಬಳಸಿಕೊಂಡಾಗ ಅದು ಮೂಲದ ಕಲಾಕೃತಿಯಾಗಿ, ಅದೇ ಘಟಕವಾಗಿ ಉಳಿಯುವುದಿಲ್ಲ. ಮೂಲಘಟಕ ಛಿದ್ರಗೊಂಡು ಬೇರೆ ಮಾಧ್ಯಮದಲ್ಲಿ ಪುನಸ್ಸಂಘಟಿತವಾಗಿ ಬೇರೆ ಕಲಾಕೃತಿಯೇ ಆಗುತ್ತದೆ. ಸಾಹಿತ್ಯ ಕೃತಿ ಕೂಡ ರಂಗತಂತ್ರಗಳನ್ನು ಬಳಸಿಕೊಂಡರೂ ಅದು ತಂತ್ರ ಮಾತ್ರವಾಗಿರುತ್ತದಲ್ಲದೆ, ತನ್ನ ಸಾರ್ಥ್ಯಕ್ಕೆ ಆ ಮಾಧ್ಯಮವನ್ನು ಹಾರೈಸುವಂಥ ಅಪೂರ್ಣ ಕೃತಿಯಾಗಿರುವುದಿಲ್ಲ. (ಕೆ.ವಿ. ಸುಬ್ಬಣ್ಣನವರ ಆಯ್ದ ಲೇಖನಗಳು' (ಸಂ.) - ಟಿ.ಪಿ. ಅಶೋಕ, 1992, ಪುಟ-88).

7. ವಾಕ್ಲೀ ಹೇಳುತ್ತಾನೆ - ಪ್ರೇಕ್ಷಕರಿಗೆ ಸರಿಯಾದ ಕಾರಣಗಳಿಗಾಗಿಯೇ ಖುಷಿಕೊಡುವ ಒಳ್ಳೆಯ ನಾಟಕಗಳು ಎಷ್ಟೋ ಸಲ ವಿಮರ್ಶಕನಿಗೆ ತೊಂದರೆ ಕೊಡುತ್ತದೆ. ಅವುಗಳ ಬಗೆಗೆ ಬರೆಯುವುದು ಕಷ್ಟ. ತನ್ನ ಪ್ರಭೇದಕ್ಕೆ ಯಾವ ಹೊಸದನ್ನೂ ಸೇರಿಸದ ಒಂದು ನಾಟಕ ತನ್ನಷ್ಟಕ್ಕೆ ತಾನು ಕುತೂಹಲಕಾರಿಯಾಗಿರಬಹುದು; ಆದರೆ ವಿಮರ್ಶೆಯನ್ನು ಗೊಂದಲಗೆಡಿಸುತ್ತದೆ...... ಇನ್ನೂ ಸ್ವಲ್ಪ ಮುಂದುವರಿದು ತಾಂತ್ರಿಕ ವಿವರಗಳಲ್ಲಿ ಪ್ರವೇಶಿಸುವುದಾದರೆ ಮೆಲೊಡ್ರಾಮ, ಪ್ರಹಸನಗಳಂಥ ಕೆಲವು ನಾಟಕ ಪ್ರಕಾರಗಳು ರಂಗದ ಮೇಲಿನಕ್ಕಿಂತ ಅಚ್ಚಿನಲ್ಲಿ (ವಿಮರ್ಶೆಯಲ್ಲಿ) ಹೆಚ್ಚು ಕೆಟ್ಟದಾಗಿ ಕಾಣಿಸುತ್ತವೆ. ಮೊಲೊಡ್ರಾಮವನ್ನು ವರ್ಣಿಸುವಾಗ ವಿಮರ್ಶಕ ಸಾಮಾನ್ಯವಾಗಿ ವ್ಯಂಗ್ಯದ ಆಮಿಷಕ್ಕೆ ಒಳಗಾಗುವುದೇ ಹೆಚ್ಚು. ಪ್ರಹಸನದ ಕಥಾವಸ್ತುವನ್ನು ರೂಪಿಸುವುದಂತೂ ಕಷ್ಟದ ಕೆಲಸ. ಇದೇ ಕಾರಣಕ್ಕಾಗಿಯೇ 'ವೈಚಾರಿಕ ನಾಟಕ' ಅಚ್ಚಿನಲ್ಲಿ ಹೆಚ್ಚು ಪ್ರಶಂಸೆ ಪಡೆದುಕೊಳ್ಳುವ ಸಂಭವ ಹೆಚ್ಚು. ವಿಚಾರಗಳ ಅಭಿವ್ಯಕ್ತಿಗೆ ಮುದ್ರಣ ಹೆಚ್ಚು ಒಳ್ಳೆಯ ಮಾಧ್ಯಮವಾಗಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ, ವಿಮರ್ಶೆ ಸಾಹಿತ್ಯದ ಒಂದು ಪ್ರಕಾರವಾಗಿರುವುದರಿಂದ ನಾಟಕದಲ್ಲಿಯ ಸಾಹಿತ್ಯಕ ಅಂಶಗಳಿಗೆ ನ್ಯಾಯಸಲ್ಲಿಸಬಹುದು. ಆದರೆ ನಾಟಕದಲ್ಲಿಯ ಅನೇಕ ಸಾಹಿತ್ಯೇತರ ಅಂಶಗಳ ವಿಷಯದಲ್ಲಿ, ಶುದ್ಧ ತಾಂತ್ರಿಕ ತೊಂದರೆಯಿಂದಾಗಿ, ವಿಮರ್ಶೆ ತಪ್ಪುಮಾಡುವುದೇ ಹೆಚ್ಚು. ಇದು ಒಂದು ಕಲೆಯ ಪರಿಣಾಮಗಳಿಗೆ ವರ್ಗಾಯಿಸುವದರಲ್ಲಿರುವ ತೊಂದರೆ. ಭಾಷಾಂತರ - ಗಿರಡ್ಡಿ ಗೋವಿಂದರಾಜ. (Walkley, A.B. Victorian Dramatic Criticism 1971. ನೋಡಿ - ಗಿರಡ್ಡಿ ಗೋವಿಂದರಾಜ - 'ನಾಟಕ ಸಾಹಿತ್ಯ ಮತ್ತು ರಂಗಭೂಮಿ' 1989, ಹೆಗ್ಗೋಡು)



ಬಿ. ವಿ. ಕಾರಂತ

ಸಂ. ಮುರಳೀಧರ ಉಪಾಧ್ಯ ಹಿರಿಯಡಕ (mupadhyahiri.blogspot.com)

ಪ್ರ. ಕರ್ನಾಟಕ ಸಂಘ, ಪುತ್ತೂರು

Wednesday, October 20, 2010

arundhati roy- ' come september' speech'

A letter from B.R. Nagesh





secrets of sustainable living

" Here in india,even in the midst of all violence and greed,the is still immence hope.If you can do it , we can do it.We still have a population that has not yet been completely colonised by that consumerist dream.We have a living tradition of those who have stuggled for Gandhi's vision of sustainability and self reliance, for socialist ideas of egalitarianism and social justice.We have Ambedkars' vision, which challenges the Gandhians as well as the socialists in serious ways.We have the most spectacular coalition of resistance movements with experince understanding and vision.
Most of all India has a surviving Adivasi population of allmost 100 miliion. They are the ones who still know the secrets of sustainable living. If they disappear, they will take those secrets with them."
- Arudhati Roy[ Outlook sep 20- 2010]
Arunthati Roys' " Come September' speech video available in google video

Monday, October 18, 2010

ಮುರಳೀಧರ ಉಪಾಧ್ಯ ಹಿರಿಯಡಕ - ಕರಾವಳಿಯ ಕನ್ನಡ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು

Kan-06-2010

ಕರಾವಳಿಯ ಕನ್ನಡ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು


- ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ

ಮಾರ್ಗದರ್ಶಕರಿಗೆ ಮಾರ್ಗದರ್ಶನ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಈ ಹೊತ್ತು ಬಳಲಿರುವ ಕ್ಷೇತ್ರ ಎಂದರೆ 'ಸಂಶೋಧನೆ' ಎಂದು ದಿ. ಡಿ. ಆರ್. ನಾಗರಾಜ ತನ್ನ 'ಕನ್ನಡ ಸಂಶೋಧನೆಯ ದು:ಸ್ಥಿತಿ' ಎಂಬ ಲೇಖನದಲ್ಲಿ ಬರೆದಿದ್ದಾರೆ. (ಅವರ 'ಸಂಸ್ಕೃತಿ ಕಥನ' ಲೇಖನದಲ್ಲಿರುವ ಈ ಲೇಖನದ ಪ್ರಥಮ ಮುದ್ರಣದ ಮಾಹಿತಿಯನ್ನು ಗ್ರಂಥದ ಸಂಪಾದಕರು ನೀಡಿಲ್ಲ.) ಡಿ. ಆರ್. ನಾಗರಾಜರು ಈ ಲೇಖನದಲ್ಲಿ ಬರೆದಿರುವಂತೆ, 'ಈಗ ನಿಜವಾದ ಸಮಸ್ಯೆ ಎಂದರೆ, ಸಂಶೋಧನಾಕಾಂಕ್ಷಿಗಳನ್ನು ತರಬೇತುಗೊಳಿಸುವ ಜೊತೆಗೆ ಅವರ ಮಾರ್ಗದರ್ಶಕರಿಗೂ ತರಬೇತಿ ನೀಡಬೇಕಾದ ಅಗತ್ಯ....... ಸಂಶೋಧನೆಯ ಬಗೆಗೆ ದೀರ್ಘಕಾಲೀನ ತರಬೇತಿ ಶಿಬಿರಗಳು, ವಿಶೇಷ ಅಧ್ಯಯನದ ಕೋರ್ಸುಗಳು, ಆಸಕ್ತ ಮಾರ್ಗದರ್ಶಕರಿಗೆ ವಿಶೇಷ ತರಬೇತಿ ನೀಡುವ ಕ್ರಮಗಳನ್ನು ವಿಶ್ವವಿದ್ಯಾನಿಲಯಗಳು ರೂಪಿಸಬೇಕಾಗಿದೆ. ಇದು ತಕ್ಷಣದ ತುರ್ತು'. ಡಿ. ಆರ್. ರವರ ಈ ಮಾತಿನ ಹಿನ್ನೆಲೆಯಿಂದ ನೋಡಿದಾಗ, ಉಡುಪಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿರುವ, 'ಕರಾವಳಿ ಸಂಸ್ಕೃತಿ ಶೋಧನೆಯ ಸಾಧ್ಯತೆಗಳು' ಎಂಬ ವಿಚಾರಕಿರಣದ ಮಹತ್ವ ಅರಿವಾಗುತ್ತದೆ.

ಕರಾವಳಿ ಭಾಗದಲ್ಲಿ ಮಧ್ವಾಚಾರ್ಯರು, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಗಣಪತಿ ರಾವ್ ಐಗಳ್, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಡಾ. ಗುರುರಾಜ ಭಟ್, ಎಂ. ಮುಕುಂದ ಪ್ರಭು, ವೆಂಕಟರಾಜ ಪುಣಿಂಚಿತ್ತಾಯ, ಪಾ. ವೆಂ. ಆಚಾರ್ಯ, ಡಾ. ಕೆ.ಪಿ. ಉಪಾಧ್ಯಾಯ, ಡಾ. ಡಿ. ಎನ್. ಶಂಕರಮೂರ್ತಿ , ಡಾ. ವಿವೇಕ ರೈ ಮತ್ತಿತರ ಹಲವಾರು ಹಿರಿಯರು ಸಂಶೋಧನಾ ಕ್ಷೇತ್ರವನ್ನು ಬೆಳೆಸಿದ್ದಾರೆ. 'ಮಹಾಭಾರತ ತಾತ್ಪರ್ಯ ನಿರ್ಣಯ' ಎಂಬ ಮಹತ್ವದ ಸಂಶೋಧನಾಗ್ರಂಥ ಬರೆದಿರುವ ಮಧ್ವಾಚಾರ್ಯರು ಗ್ರಂಥ ಸಂಪಾದಕ, ಸಂಶೋಧಕ ಎದುರಿಸಬೇಕಾದ ಸಮಸ್ಯೆಗಳನ್ನು ಹೀಗೆ ವಿವರಿಸಿದ್ದಾರೆ: 1) ಇಲ್ಲದ ಭಾಗಗಳನ್ನು ಸೇರಿಸಿರುವುದು. 2) ಇದ್ದದ್ದನ್ನು ತೆಗೆದುಹಾಕುವುದು. 3) ಗ್ರಂಥದ ಅನುಪೂರ್ವಿ ಯನ್ನು ಬದಲಿಸುವುದು. 4) ಪ್ರತಿಕಾರರ ಪ್ರಮಾದದಿಂದ ಘಟಿಸುವ ತಪ್ಪುಗಳು - ಹೀಗೆ ನಾಲ್ಕು ಬಗೆಯ ಪಾಠದೋಷಗಳನ್ನು ಗಮನಿಸಿ ಹತ್ತಾರು ಬಗೆಯ ಹಸ್ತಪ್ರತಿಗಳನ್ನು ಪರಿಶೀಲಿಸಿ ಶುದ್ಧಪಾಠವನ್ನು ನಿರ್ಣಯಿಸಬೇಕು. (1920ರಲ್ಲಿ ಎಂ. ಎಸ್. ಪುಟ್ಟಣ್ಣನವರು 'ಹೇಮಂತ' (ಹ್ಯಾಮ್ಲೆಟ್) ನಾಟಕವನ್ನು ಇತ್ತೀಚಿಗೆ ಸಂಪಾದಿಸಿರುವ ತಪ್ಪುಗಳ ಕುರಿತು ಜೂನ್ 2010ರ 'ದೇಶಕಾಲ' ತ್ರೈಮಾಸಿಕದಲ್ಲಿ ರಾಮಚಂದ್ರದೇವ ಅವರು ಬರೆದಿರುವ ಟಿಪ್ಪಣಿ ಗಮನಿಸಿರಿ).

ಗೋವಿಂದ ಪೈಗಳು 1949ರಲ್ಲಿ ಬರೆದ 'ಪ್ರಾಕ್ತನ ವಿಮರ್ಶನದ ಮುಂದಣ ಹೆಜ್ಜೆ' ಲೇಖನದಲ್ಲಿ 'ಆಂಗ್ಲರ ಕೈಯಲ್ಲಿ ಪರತಂತ್ರವಾಗಿದ್ದ ಭಾರತ'ದ ಕುರಿತು 'ಅವರು ಬರೆದ ಇತಿಹಾಸವನ್ನು ಇನ್ನು ನಿರ್ದಯವಾಗಿ ಅಗಸಹೊಯ್ಲು ಯೊಯ್ದು ಒಗೆದಲ್ಲದೆ ಅದರ ಮೈಲಿಗೆ ಹೋಗುವಂತಿಲ್ಲ. ಮಡಿಯಾಗುವಂತಿಲ್ಲ' ಎಂದರು.
ಹಸ್ತಪ್ರತಿಗಳು


'ಯಕ್ಷಗಾನ ಬಯಲಾಟ' ಎಂಬ ಅಪೂರ್ವ ಸಂಶೋಧನ ಗ್ರಂಥವನ್ನು ಬರೆದಿರುವ ಶಿವರಾಮ ಕಾರಂತರು 1962ರಲ್ಲಿ ಬರೆದಿರುವ 'ಜಿಲ್ಲೆಯಲ್ಲಿ ಸಂಶೋಧನೆಗೆ ಸಾಮಗ್ರಿಗಳು' ಎಂಬ ಲೇಖನದಲ್ಲಿ ಸೂಚಿಸಿರುವ ಕೆಲವು ವಿಷಯಗಳು ಇಂದಿಗೂ ಸಂಶೋಧಕರನ್ನು ಕಾಯುತ್ತಿವೆ - 1. ಕೌಶಿಕ ರಾಮಾಯಣಕ್ಕೆ ಪೂರ್ವಪೀಠಿಕೆಯಾಗಿ ಬರೆದ ವಾಲಗಳ್ಳಿ ರಾಮಾಯಣ 2. ಮದ್ರಾಸಿನ ಓರಿಯೆಂಟಲ್ ಲೈಬ್ರೆರಿ ಪ್ರಕಟಿಸಿರುವ 'ವೆಂಕಾಮಾತ್ಯನ ರಾಮಾಯಣ' 3. ತಿರುವಾಂಕೂರು ಸರಕಾರದ ಹಸ್ತಪ್ರತಿ ಸಂಗ್ರಹದಲ್ಲಿರುವ ತುಳುನಾಡಿನ ಸ್ಥಳಗಳ ಕುರಿತು ಮಾಹಿತಿ ನೀಡುವ 'ವಿಶ್ವದರ್ಶನ' ಎಂಬ ಸಂಸ್ಕೃತ ಗ್ರಂಥ.
'ಕನ್ನಡ ಕಾವ್ಯಕ್ಕೆ ಉಡುಪಿಯ ಮಠಾಧಿಪತಿಗಳ ಕೊಡುಗೆ', 'ಕನ್ನಡ ಕಾವ್ಯಕ್ಕೆ ಕಾರ್ಕಳದ ಜೈನ ಕವಿಗಳ ಕೊಡುಗೆ' - ಸಂಶೋಧನೆಗೆ ಯೋಗ್ಯ ವಿಷಯಗಳು. ಕನ್ನಡದ ಮೊದಲ ಸಾಂಗತ್ಯ ಕಾವ್ಯ 'ಕಾಮನ ಕತೆ' ಬರೆದ ಕಲ್ಯಾಣಕೀರ್ತಿಯ ಕೃತಿ ಸಂಶೋಧನೆಗೆ ಯೋಗ್ಯವಾಗಿದೆ. ಐತಿಹಾಸಿಕ ಘಟನೆಯನ್ನು ವಸ್ತುವಾಗಿ ಆಯ್ಕೆ ಮಾಡಿರುವ ಚದುರ ಚಂದ್ರಮ (1646)ನ 'ಗೊಮ್ಮಟೇಶ್ವರ ಚರಿತ' ಅಧ್ಯಯನಕ್ಕೆ ಯೋಗ್ಯವಾಗಿದೆ. ಚಂದ್ರಮನ, 620 ಕಂದಪದ್ಯಗಳಿರುವ 'ಗಣಿತ ವಿಲಾಸ'ವನ್ನು ಗಣಿತಶಾಸ್ತ್ರ ಮತ್ತು ಕನ್ನಡ ವಿದ್ವಾಂಸರು ಜಂಟಿಯಾಗಿ ಶೋಧಿಸಬೇಕಾಗಿದೆ. ಯುದ್ಧವಿರೋಧಿ ಕಾವ್ಯ ಎಂಬ ನೆಲೆಯಿಂದ ರತ್ನಾಕರವರ್ಣಿಯ 'ಭರತೇಶ ವೈಭವ'ದ ಮರುಓದು ಸಾಧ್ಯ.
ಕನ್ನಡದ ಆದ್ಯರು

ಕೊಳಂಬೆ ಪುಟ್ಟಣ್ಣ ಗೌಡರು ಆಂಡಯ್ಯನ ಮಾರ್ಗದಲ್ಲಿ ಮುನ್ನಡೆದವರು. ಅವರ 'ಕಾಲೂರ ಚೆಲುವ' ವಿಶೇಷ ಅಧ್ಯಯನಕ್ಕೆ ಯೋಗ್ಯವಾಗಿದೆ. ಗೋವಿಂದ ಪೈಗಳ 'ಗೊಲ್ಗೊಥಾ' ಕಾವ್ಯ ಕುತೂಹಲವಿರುವ ಸಂಶೋಧಕರನ್ನು ಕಾಯುತ್ತಿದೆ. ಗೊಲ್ಗೊಥಾದ ವಸ್ತುವಿನಲ್ಲಿ ಪೈಗಳು ಮಾಡಿಕೊಂಡಿರುವ ಸೂಕ್ತ ಬದಲಾವಣೆಗಳನ್ನು ಗಮನಿಸಿಬೇಕು. ಹಟ್ಟಿಯಂಗಡಿ ನಾರಾಯಣರಾಯರ (1863-1921) ಆಂಗ್ಲ ಕವಿತಾವಳಿಯನ್ನು ಎಂ. ಎನ್. ವಿ. ಪಂಡಿತಾರಾಧ್ಯರು ಮೂಲ ಇಂಗ್ಲಿಷ್ ಕವನಗಳೊಂದಿಗೆ 1865ರಲ್ಲಿ ಸಂಪಾದಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯಕ್ಕೆ ಹಟ್ಟಿಯಂಗಡಿಯವರು ನೀಡಿದ ಕೊಡುಗೆಯ ಐತಿಹಾಸಿಕ ಮಹತ್ವವನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಇತ್ತೀಚಿನ 'ದೇಶ-ಕಾಲ'ದಲ್ಲಿ ಪ್ರೊ. ಪ್ರಭಾಕರ ಆಚಾರ್ಯರು ರಾಮಾಶ್ವಮೇಧವನ್ನು ಕುರಿತು ಬರೆದಿರುವ ಲೇಖನ ಮುದ್ದಣನ ಕೃತಿಗಳನ್ನು ಕುರಿತ ಮರು ಓದಿಗೆ ನಾಂದಿ ಹಾಡಿದೆ. ಗಂಗಾಧರ ಚಿತ್ತಾಲ ಹಾಗೂ ಕವಿ, ಭಾಷಾಶಾಸ್ತ್ರಜ್ಞ ಕೆ. ವಿ. ತಿರುಮಲೇಶರ ಕಾವ್ಯದ ತಲಸ್ಪರ್ಶಿ ಅಧ್ಯಯನ ಸಂಶೋಧನ ಗ್ರಂಥಗಳ ವಸ್ತುವಾಗಬೇಕು. 'ಕವಿ ಅಡಿಗರ ರಾಜಕೀಯ ನಿಲುವುಗಳು' ಅಧ್ಯಯನಕ್ಕೆ ಒಳ್ಳೆಯ ವಿಷಯ.

'ಮಂದಾರ ರಾಮಾಯಣ' ತುಳು ಮಹಾಕಾವ್ಯದ ಕವಿ ಮಂದಾರ ಕೇಶವ ಭಟ್ಟರು ತಮ್ಮ ಕಾವ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕನ್ನಡ-ತುಳು ಮಂದಾರ ರಾಮಾಯಣಗಳ ತೌಲನಿಕ ಅಧ್ಯಯನದೊಂದಿಗೆ ಕಾವ್ಯ ಭಾಷಾಂತರದ ಸಮಸ್ಯೆಗಳ ಚರ್ಚೆ ಯನ್ನು ಮುಂದುವರಿಸಬೇಕಾಗಿದೆ. ತುಳು ಪಾಡ್ದನಗಳ ಕನ್ನಡ ಬಾಷಾಂತರಗಳು ಲಭ್ಯವಿರುವುದರಿಂದ, ಅವುಗಳನ್ನು ಕುರಿತ ಕನ್ನಡ ಜಾನಪದ ಸಂಶೋಧಕರ ಸಮೂಹ ಶೋಧ ಮುಂದುವರಿಯುತ್ತಿದೆ.
ಅರುಣಾಬ್ಜನ ತುಳು ಮಹಾಭಾರತ ಹಾಗೂ ಕುಮಾರವ್ಯಾಸ ಭಾರತಗಳ ತೌಲನಿಕ ಅಧ್ಯಯನ ಆಗಬೇಕಾಗಿದೆ.
ಸಾಹಿತ್ಯ ಸಂಶೋಧನೆ

ಗುಲ್ವಾಡಿ ವೆಂಕಟರಾಯರ 'ಇಂದಿರಾಬಾಯಿ' ಕಾದಂಬರಿಯ ಇಂಗ್ಲಿಷ್ ಭಾಷಾಂತರವು ಸಂಶೋಧನೆಗೆ ಯೋಗ್ಯವಾಗಿದೆ. ಕಡೆಂಗೋಡ್ಲು ಶಂಕರ ಭಟ್ಟರ 'ಈ ಪೀಳಿಗೆ' ಕನ್ನಡ ವಿಮರ್ಶೆ ಅಲಕ್ಷಿಸಿರುವ ಒಂದು ಮಹತ್ವದ ರಾಜಕೀಯ ಕಾದಂಬರಿ. ಬೋಳಾರ ಬಾಬೂರಾಯರ 'ವಾಗ್ದೇವಿ', ಬೆಳ್ಳೆ ರಾಮಚಂದ್ರ ರಾಯರ ಕಾದಂಬರಿಗಳು ಸಂಶೋಧನೆಗೆ ಯೋಗ್ಯವಾಗಿವೆ. ಜಿ. ರಾಜಶೇಖರ ಅವರ 'ಕಾರಂತರ ಕಾದಂಬರಿಗಳಲ್ಲಿ ದಕ್ಷಿಣ ಕನ್ನಡತನ' ಲೇಖನ ಅದೇ ಶೀರ್ಷಿಕೆಯ ಸಂಶೋಧನ ಗ್ರಂಥವೊಂದರ ಪೀಠಿಕೆಯಂತಿದೆ. 'ಕಾರಂತರ ಕಾದಂಬರಿಗಳಲ್ಲಿ ಕಾಣಿಸುವ 20ನೆಯ ಶತಮಾನದ 'ಕರಾವಳಿ ಕರ್ನಾಟಕದ ಸಮಾಜ', 'ಕಾರಂತರ ರಾಜಕೀಯ ಕಾದಂಬರಿಗಳು', 'ಕಾರಂತರ ಕಾದಂಬರಿಗಳಲ್ಲಿ ದಾಂಪತ್ಯ' - ಪ್ರತ್ಯೇಕ ಅಧ್ಯಯನದ ವಿಷಯಗಳಾಗಬಹುದು. ವ್ಯಾಸರಾಯ ಬಲ್ಲಾಳರ ಕಾದಂಬರಿಗಳಲ್ಲಿ ಕಾಣಿಸುವ ಸಾಮಾಜಿಕ ಪರಿವರ್ತನೆ, ಬಲ್ಲಾಳರ ಕಾದಂಬರಿಗಳಲ್ಲಿ 'ಗಾಂಧೀವಾದ', 'ಬಲ್ಲಾಳರ ಕಾದಂಬರಿಗಳ ಸ್ತ್ರೀ ಪಾತ್ರಗಳು' ಗಂಭೀರ ಅಧ್ಯಯನಕ್ಕೆ ಅರ್ಹವಾಗಿವೆ. ದಕ್ಷಿಣ ಕನ್ನಡದ ಸಾಮಾಜಿಕ ಪರಿವರ್ತನೆಯ ಕುರಿತು ಸಮಾಜಶಾಸ್ತ್ರಜ್ಞ ಪ್ರೊ. ಶ್ರೀಪತಿ ತಂತ್ರಿಯವರ ಒಳನೋಟಗಳ ಬೆಳಕಿನಲ್ಲಿ ಹೊಸ ತಲೆಮಾರಿನ ಸಂಶೋಧಕರು ಮುನ್ನಡೆಯಬಹುದು. ಕೆ. ಟಿ. ಗಟ್ಟಿಯವರ ಕಾದಂಬರಿಗಳನ್ನು ಓದುಗರ ಪ್ರತಿಕ್ರಿಯೆಯ ನೆಲೆಯಲ್ಲಿ ಅಧ್ಯಯನ ಮಾಡಬಹುದು.
ಸಣ್ಣಕತೆಗಾರರಲ್ಲಿ ಬಾಗಲೋಡಿ ದೇವರಾವ್, ಯಶವಂತ ಚಿತ್ತಾಲ, ವೈದೇಹಿ, ಬೊಳುವಾರು ಮಹಮ್ಮದ್ ಕುಂಞಿ, ಪಕೀರ್ ಮಹಮ್ಮದ್ ಕಟ್ಪಾಡಿ, ಎಂ. ವ್ಯಾಸ, ಶಾಂತರಾಮ ಸೋಮಯಾಜಿ, ಜಯಂತ ಕಾಯ್ಕಿಣಿ ಅವರ ಕತೆಗಳು ಅಧ್ಯಯನಕ್ಕೆ ಯೋಗ್ಯವಾಗಿವೆ. ಕುಂದಾಪುರ ಕನ್ನಡ, ಹವ್ಯಕ ಕನ್ನಡದ ಜನಪದ ಕತೆಗಳು ಸಂಶೋಧಕರನ್ನು ನಿರೀಕ್ಷಿಸುತ್ತಿವೆ. ಪಿ.ಬಿ. ಪ್ರಸನ್ನರ ಸಣ್ಣಕತೆಗಳ ಆಧಾರದಿಂದ 'ಉಡುಪಿ ಕನ್ನಡ'ವನ್ನು ಕುರಿತ ಸಂಶೋಧನ ಲೇಖನವನ್ನು ಬರೆಯಬಹುದು.
ಗಿರೀಶ ಕಾರ್ನಾಡರ ನಾಟಕಗಳು ವಿಮರ್ಶಕರಿಗೆ, ಸಂಶೋಧಕರಿಗೆ ಪಂಥಾಹ್ವಾನ ನೀಡುತ್ತಿವೆ. ಉಡುಪಿ ರಾಮಕೃಷ್ಣಾಚಾರ್ಯರ 'ಕರ್ಣಾಟಕ ಅವಂತೀ ಸುಂದರಿ ಪರಿಣಯ' 1907ರಲ್ಲಿ ಪ್ರಕಟವಾಗಿದೆ. ಇಂಥ ಬಳಕೆ ತಪ್ಪಿದ ಕೃತಿಗಳ ಮೇಲೆ ಹೊಸ ತಲೆಮಾರಿನ ಸಂಶೋಧಕರು ಬೆಳಕು ಚೆಲ್ಲಬೇಕಾಗಿದೆ. ಸಂಶೋಧನ ಗ್ರಂಥಗಳ ಮೂಲಕ ಶಿವರಾಮ ಕಾರಂತರ ನಾಟಕಗಳ, ಬಿ. ವಿ. ಕಾರಂತರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆಯ ಮೌಲ್ಯಮಾಪನ ನಡೆಸಬೇಕಾಗಿದೆ.

ಹಿರಿಯ ಸಂಶೋಧಕರ ಕೃತಿಗಳ ಮರುಓದು ಸುಲಭದ ಕೆಸಲವೇನಲ್ಲ. ಮುಳಿಯ ತಿಮ್ಮಪ್ಪಯ್ಯನವರ 'ನಾಡೋಜ ಪಂಪ', ಸೇಡಿಯಾಪು ಕೃಷ್ಣ ಭಟ್ಟರ 'ಛಂದೋಗತಿ' ಇವುಗಳ ಮರು ಓದಿನಿಂದ ಪಂಡಿತ ಪರಂಪರೆಯ ಸಂಶೋಧಕರ ಒಳನೋಟಗಳ ಅರಿವಾಗುತ್ತದೆ. 'ನಾಡೋಜ ಪಂಪ'ದಲ್ಲಿ ಮುಳಿಯ ತಿಮ್ಮಪ್ಪಯ್ಯನವರು ಊಹಿಸಿದ್ದ ಕೆಲವು ಸಂಗತಿಗಳು ನಾಲ್ಕು ದಶಕಗಳ ಅನಂತರ ಜಿನವಲ್ಲಭನ ಶಾಸನ ಸಿಕ್ಕಿದಾಗ ನಿಜವಾದುವು. ಅಡಿಗರು ಬಿ.ಎಂ.ಶ್ರೀ ಅವರನ್ನು ಕುರಿತ ಕವನದಲ್ಲಿ 'ದೊಡ್ಡವರು ನೀವು ನಾವೇನೂ ಕುಬ್ಜರಲ್ಲ' ಎನ್ನುತ್ತಾರೆ. ಹೊಸ ತಲೆಮಾರಿನ ಸಂಶೋಧಕರು ಶ್ರದ್ಧೆ, ಆತ್ಮವಿಶ್ವಾಸಗಳಿಂದ ಮುನ್ನಡೆಯಬೇಕಾಗಿದೆ. ಸುರತ್ಕಲ್ ವೆಂಕಟರಾಮಾಚಾರ್ಯರ ಸಂಶೋಧನ ಲೇಖನಗಳ ಅಧ್ಯಯನ ಬಾಕಿ ಉಳಿದಿದೆ.
ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದಿರುವ ಪುಸ್ತಕಗಳ ಸಂಖ್ಯೆ 400ಕ್ಕಿಂತ ಹೆಚ್ಚು. ಇವುಗಳ ಕುರಿತು ಸಂಶೋಧನ ಗ್ರಂಥ ರಚನೆಯಾಗಿಲ್ಲ. ಕಾರಂತರು ಹಾಗೂ ಜಿ.ಟಿ. ನಾರಾಯಣ ರಾಯರು ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯ ಮೌಲ್ಯಮಾಪನ ಆಗಬೇಕಾಗಿದೆ. ಗೌರೀಶ ಕಾಯ್ಕಿಣಿ ಮತ್ತು ಪಾ. ವೆಂ. ಆಚಾರ್ಯರ ವೈಚಾರಿಕ ಕೃತಿಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ.
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹತ್ತಾರು ತತ್ತ್ವಜ್ಞಾನದ ಗ್ರಂಥ ಲೇಖನಗಳನ್ನು, ಆತ್ಮಕತೆಯನ್ನು ಬರೆದಿದ್ದಾರೆ. ಅವರು ಹಾಗೂ ಕು. ಶಿ. ಹರಿದಾಸ ಭಟ್ಟರ ಗದ್ಯ ಕೃತಿಗಳು ಅಧ್ಯಯನಕ್ಕೆ ಯೋಗ್ಯ ವಿಷಯಗಳು. ಬನ್ನಂಜೆ ಗೋವಿಂದಾಚಾರ್ಯರು ಕಾಳಿದಾಸ, ಭವಭೂತಿ, ಶೂದ್ರಕ ಇವರ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸಂಸ್ಕೃತ ಪಾಂಡಿತ್ಯವಿರುವ ಕನ್ನಡ ಸಂಶೋಧಕರು ಭಾಷಾಂತರ ಸಾಹಿತ್ಯಕ್ಕೆ ಬನ್ನಂಜೆಯವರು ನೀಡಿದ ಕೊಡುಗೆಯ ಅಧ್ಯಯನ ಮಾಡಬಹುದಾಗಿದೆ. ಡಾ. ರಘುಪತಿ ಭಟ್ ಅವರು ಆರಂಭಿಸಿದ ಉಡುಪಿ ಜಿಲ್ಲೆಯ ಸ್ಥಳನಾಮಗಳ ಭಾಷಾಶಾಸ್ತ್ರೀಯ ಅಧ್ಯಯನವನ್ನು ಮುಂದುವರಿಸುವವರು ಕಾಣುತ್ತಿಲ್ಲ. ಜಿ. ರಾಜಶೇಖರ್ ಸಮಕಾಲೀನ ಕರ್ನಾಟಕದ ಒಬ್ಬ ಮುಖ್ಯ ಸಾಹಿತ್ಯ, ರಾಜಕೀಯ ವಿಮರ್ಶಕ. ಅವರ ನೂರಾರು ಲೇಖನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲು ಅವರು ಅನುಮತಿ ನೀಡಿಲ್ಲ. ಅವರ ಕೆಲವು ಲೇಖನಗಳ ಸಂಕಲನವೊಂದು ಇತ್ತೀಚಿಗೆ ಅಕ್ಷರ ಪ್ರಕಾಶನದಿಂದ ಪ್ರಕಟವಾಗಿದೆ. ರಾಜಶೇಖರ ಅವರ ಸಮಗ್ರ ಸಾಹಿತ್ಯ ವಿಮರ್ಶೆ ಲೇಖನಗಳ ಅಧ್ಯಯನ ಕನ್ನಡ ವಿಮರ್ಶೆಗೆ ಮಹತ್ವದ ಕೊಡುಗೆಯಾಗಬಹುದು.
ಮಂಗಳೂರು ವಿಶ್ವವಿದ್ಯಾಲಯದ ಇತ್ತೀಚಿಗಿನ ಸೆಮಿಸ್ಟರ್ ಪದ್ಧತಿಯ ಕನ್ನಡ ಪಠ್ಯ ಪುಸ್ತಕಗಳು ಅವುಗಳನ್ನು ಕುರಿತ ವಿದ್ಯಾರ್ಥಿಗಳ ಪ್ರತಿಕ್ರಿಯೆ ಒಂದು ಸಂಪ್ರಬಂಧದ ವಿಷಯವಾಗಬೇಕು. ಕರಾವಳಿಯ ಲೇಖಕರ ಆತ್ಮಕತೆಗಳ (ಕಾರಂತ, ಸೇಡಿಯಾಪು, ಕು.ಶಿ., ಬಿ.ವಿ. ಕಾರಂತ, ನಾ. ಮೊಗಸಾಲೆ, ಕೂರಾಡಿ ಸೀತಾರಾಮ ಅಡಿಗ) ಅಧ್ಯಯನ ಅನೇಕ ಅಲಕ್ಷಿತ ಸಂಗತಿಗಳ ಮೇಲೆ ಬೆಳಕು ಚೆಲ್ಲಬಹುದು.
ಮರುಓದು


ದೇವಿದಾಸ (1780) 'ಕೃಷ್ಣ ಸಂಧಾನ', 'ದೇವಿ ಮಹಾತ್ಮೆ', 'ಭೀಷ್ಮ ಪರ್ವ', 'ಸೈಂಧವ ವಧೆ', 'ಚಿತ್ರಸೇನ ಕಾಳಗ', 'ಗಿರಿಜಾ ಕಲ್ಯಾಣ'ಗಳನ್ನು ಬರೆದಿರುವ ಯಕ್ಷಗಾನ ಕವಿ. ಹದಿನೆಂಟು, ಹತ್ತೊಂಬತ್ತನೆಯ ಶತಮಾನದ ಇಂಥ ಮಹತ್ವದ ಯಕ್ಷಗಾನ ಕವಿಗಳನ್ನು ಕುರಿತ ಸಂಶೋಧನ ಗ್ರಂಥಗಳು ರಚನೆಯಾಬೇಕು. (ಹಿರಿಯಡ್ಕದಲ್ಲಿ ನನ್ನ ಗುರುಗಳಾಗಿದ್ದ ಯಕ್ಷಗಾನ ಕವಿ ಸೀತಾನದಿ ಗಣಪಯ್ಯ ಶೆಟ್ಟರು 'ಯಕ್ಷಗಾನ ಪ್ರಸಂಗ ಬರೆದವರು ಕವಿಗಳಲ್ಲವೇ' ಎಂದು ಪ್ರಶ್ನಿಸುತ್ತಿದ್ದುದು ನೆನಪಾಗುತ್ತದೆ). ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ 'ಜಾನಪದ ಕೈಪಿಡಿ'ಯ ಮಾದರಿಯಲ್ಲಿ 'ಯಕ್ಷಗಾನ ಕೈಪಿಡಿ'ಯೊಂದು ಪ್ರಕಟವಾಗಬೇಕು. ಅದರಲ್ಲಿ ಯಕ್ಷಗಾನ ಪ್ರಸಂಗಗಳು, ಕವಿಗಳು, ಕಲಾವಿದರು, ಮೇಳಗಳು ಹಾಗೂ ಪಾರಿಭಾಷಿಕ ಪದಗಳ ಕಿರುಪರಿಚಯ ಇರಬೇಕು. ಅಮೃತ ಸೋಮೇಶ್ವರರಂಥ ಸಮಕಾಲೀನ ಕವಿಗಳು ಯಕ್ಷಗಾನ ಪ್ರಸಂಗ ಸಾಹಿತ್ಯಕ್ಕೆ ನೀಡಿದ ತಿರುವು ಸಂಶೋಧನೆಗೆ ಅರ್ಹವಾಗಿದೆ. ಶೇಣಿ, ರಾಮದಾಸ ಸಾಮಗ, ಶಂಕರನಾರಾಯಣ ಸಾಮಗರ ಧ್ವನಿಸುರುಳಿಗಳ ಮೂಲಕ ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಯನ್ನು ಅಧ್ಯಯನ ಮಾಡಬಹುದು.
ಬಾಸೆಲ್ ಮಿಶನ್ ಗ್ರಂಥಭಂಡಾರ ಸೂಚಿ, ಗೋವಿಂದ ಪೈ ಗ್ರಂಥಭಂಡಾರ ಸೂಚಿ, ಹಾ. ಮಾ. ನಾ. ಗ್ರಂಥಭಂಡಾರ ಸೂಚಿ, ಸುರತ್ಕಲ್ ವೆಂಕಟರಾಮಾಚಾರ್ಯ ಗ್ರಂಥಭಂಡಾರ ಸೂಚಿ ಇವುಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಪ್ರಕಟಿಸಬೇಕು.
ನಮ್ಮ ಕೆಲವು ಹೊಸ ಸಂಶೋಧಕರ ಸಂಪ್ರಬಂಧಗಳು ತಾವು ಆ ಕ್ಷೇತ್ರದ ಮೊದಲಿಗರು ಎಂಬ ಭ್ರಮೆಯಿಂದ ಹೊರಡುತ್ತವೆ; 'ಹಿಂದಣ ಹೆಜ್ಜೆ'ಗಳನ್ನು ಅಲಕ್ಷಿಸುತ್ತವೆ. ಕ್ಷಿಪ್ರ ಪ್ರಸಾದ ಬಯಸುತ್ತವೆ. ಸಂಶೋಧಕರ ಒಕ್ಕೂಟ ಅಥವಾ ಕನ್ನಡ ವಿಶ್ವವಿದ್ಯಾನಿಲಯದಂಥ ಸಂಸ್ಥೆಗಳು ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಸಂಪ್ರಬಂಧಗಳ ಸಾರಸಂಗ್ರಹಗಳನ್ನು ನಿರಂತರ ಪ್ರಕಟಿಸಬೇಕು.

ಪಿಎಚ್.ಡಿ. ನೀಡುವ ವಿಶ್ವವಿದ್ಯಾನಿಲಯಗಳು ಸಂಶೋಧನ ಗ್ರಂಥಗಳ ಸಂಕ್ಷಿಪ್ತ ರೂಪವನ್ನು, ಪ್ರಚಾರ ಉಪನ್ಯಾಸ ಮಾಲೆಯ ಕಿರುಹೊತ್ತಗೆಯ ರೂಪದಲ್ಲಾದರೂ ಪ್ರಕಟಿಸುವುದು, ವೆಬ್‍ಸೈಟ್‍ನಲ್ಲಿ ಪ್ರಕಟಿಸುವುದನ್ನು ಕಡ್ಡಾಯ ಮಾಡಬೇಕು.
ಅಡಿಗರ 'ಭೂತ' ಕವನದ ಸಾಲುಗಳನ್ನು ನೆನಪಿಸಿಕೊಳ್ಳುತ್ತ ಈ ಟಿಪ್ಪಣಿಗಳನ್ನು ಮುಗಿಸುತ್ತಿದ್ದೇನೆ.

'ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗರೆಮಿರಿವ ಚಿನ್ನದದಿರು
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು'
(ಉಡುಪಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೇ 1, 2, 2010ರಂದು ಏರ್ಪಡಿಸಿದ 'ಕರಾವಳಿ ಸಂಸ್ಕೃತಿ ಸಂಶೋಧನೆಯ ಆದ್ಯತೆಗಳು' ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ).
(ತುಳುವ, ಎಪ್ರಿಲ್-ಜೂನ್/2010, ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
MURALEEDHARA UPADHYA HIRIADKA -  Reseach Topics -COASTAL KARNATAKA KANNADA LITERATURE

Sunday, October 17, 2010

Conversations with History: Noam Chomsky

Conversations with History: Amartya Sen

Govinda Pai (ಗೋವಿಂದ ಪೈ)

ರಾಷ್ಟ್ರಕವಿ ಗೋವಿಂದ ಪೈ
ಮುರಳೀಧರ ಉಪಾಧ್ಯ ಹಿರಿಯಡಕ

ಗೋವಿಂದ ಪೈಗಳು ಮುದ್ದಣನಿಗಿಂತ ಹದಿಮೂರು ವರ್ಷ, ಪಂಜೆ ಮಂಗೇಶರಾಯರಿಗಿಂತ ಒಂಬತ್ತು ವರ್ಷ ಚಿಕ್ಕವರು. ಮಂಗಳೂರಿನ ರಥಬೀದಿಯ ಸಾಹುಕಾರ ಬಾಬಾ ಪೈ ಮನೆತನ ವೈಷ್ಣವ ಸಂಪ್ರದಾಯದ ಗೌಡ ಸಾರಸ್ವತ ಬ್ರಾಹ್ಮಣರ ಪ್ರಸಿದ್ಧ ಮನೆತನವಾಗಿತ್ತು. ಸಾಹುಕಾರ ತಿಮ್ಮಪ್ಪ-ದೇವಕಿ ದಂಪತಿಗಳ ಚೊಚ್ಚಲ ಮಗನಾಗಿ ಗೋವಿಂದ ಪೈಗಳು ಜನಿಸಿದ್ದು ಕ್ರಿ.ಶ. 1883ನೆಯ ಇಸವಿ ಮಾರ್ಚ್ 23ರಂದು. ಅವರು ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಮುಗಿದ ನಂತರ ನೆಲೆಸಿದ್ದು, ಮಂಜೇಶ್ವರದಲ್ಲಿದ್ದ ತನ್ನ ಮಾತಾಮಹ ಲಕ್ಷ್ಮಣ ಶ್ಯಾನುಭಾಗರ ಮನೆಯಲ್ಲಿ.

ಮಂಗಳೂರಿನ ಮಿಶನ್ ಶಾಲೆಯಲ್ಲಿ ಕಲಿತ ಪೈಗಳು ಮುಂದೆ ಕೆನರಾ ಹೈಸ್ಕೂಲು ಸೇರಿದರು. ಕೆನರಾ ಹೈಸ್ಕೂಲಿನಲ್ಲಿ (1897-98) ಬಂಟವಾಳ ವಾಮನ ಬಾಳಿಗ ಮತ್ತು ಬಂಟವಾಳ ಪುಂಡಲೀಕ ಬಾಳಿಗರು ಅವರ ಕನ್ನಡ ಅಧ್ಯಾಪಕರಾಗಿದ್ದರು. ಎಂ.ಎನ್. ಕಾಮತರು ಸಹಪಾಠಿಗಳಾಗಿದ್ದರು. ಗೋವಿಂದ ಪೈಗಳು ಮತ್ತು Angel (ಮಾತೆ) ಎಂಬ ಕೈಬರಹದ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಎಫ್.ಎ. (1899-1900) ವಿದ್ಯಾರ್ಥಿಯಾಗಿದ್ದಾಗ ತನ್ನ ಪ್ರಾಧ್ಯಾಪಕರಾಗಿದ್ದ ಪಂಜೆ ಮಂಗೇಶರಾವ್, ಅರವಳ್ಳಿ ಸುಬ್ಬರಾವ್, ಯು.ಎಸ್. ರಾಘವೇಂದ್ರರಾವ್, ಎಂ. ಶೇಷಗಿರಿ ಪ್ರಭು, ಮಾರ್ಕ್ ಹಂಟರ್ , ಅಕಾಲ ಮೃತ್ಯುವಿಗೀಡಾದ ಸಹಪಾಠಿ ಕುಂಬ್ಳೆ ನರಸಿಂಗರಾವ್ ಇವರನ್ನು ಪೈಗಳು ತಮ್ಮ ಉಪನ್ಯಾಸವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ('Fox' ಎಂಬ ಅಡ್ಡ ಹೆಸರಿದ್ದ ಅಧ್ಯಾಪಕರಿಗೆ ವರ್ಗವಾಗಿ ಹಂಟರ್ ಅವರು ಬಂದಾಗ ವಿದ್ಯಾರ್ಥಿ ವೃಂದದಲ್ಲಿ HUNTER CAME AND THE FOX RAN AWAY ಎಂಬ ಹೊಸ ಗಾದೆ ಹುಟ್ಟಿತಂತೆ).
ಯಕ್ಷಗಾನ ಪ್ರದರ್ಶನಗಳು, ಸಾಂಗಲಿಯ ಮರಾಠಿ ನಾಟಕ ಮಂಡಳಿಯ ನಾಟಕಗಳು, ಬಾಸೆಲ್ ಮಿಶನ್‍ನ 'ಹಳಗನ್ನಡ ವ್ಯಾಕರಣ ಸೂತ್ರಗಳು' (1899) ಎಂಬ ಪುಸ್ತಕ, 'ಸುವಾಸಿನಿ' ಪತ್ರಿಕೆ - ಇವು ಬಾಲ್ಯದಲ್ಲಿ ಗೋವಿಂದ ಪೈಗಳ ಸಾಹಿತ್ಯಸೃಷ್ಟಿಗೆ ಪ್ರೇರಣೆ ನೀಡಿದುವು. ಗೋವಿಂದ ಪೈಗಳು ಹದಿನೇಳನೆಯ ವರ್ಷದಲ್ಲಿ (1900) 'ಸುವಾಸಿನಿ' ಪತ್ರಿಕೆಯನ್ನು ಕುರಿತು ಬರೆದ ಮೂರು ಕಂದಪದ್ಯಗಳಿಗೆ ಆ ಪತ್ರಿಕೆ ಐದು ರೂಪಾಯಿ ಬಹುಮಾನ ನೀಡಿತು. ಕವಿಗಳಿಗೆ ಹುಚ್ಚು ಹಿಡಿಯುತ್ತದೆಂಬ ನಂಬಿಕೆಯಿಂದ ಪೈಗಳ ತಾಯಿ ಕವನ ಬರೆದುದಕ್ಕಾಗಿ ಮಗನನ್ನು ಒಮ್ಮೆ ದಂಡಿಸಿದರಂತೆ. ಗೋವಿಂದ ಪೈಗಳು ವೃತ್ತಕಂದಗಳಲ್ಲಿ ಭಾಷಾಂತರಿಸಿದ ಶೇಕ್ಸ್ ಪಿಯರ್ ನ TWELFTH NIGHT ನಾಟಕದ ಕೆಲವು ದೃಶ್ಯಗಳನ್ನು ಓದಿದ ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಪ್ಪ) ಅದನ್ನು ಮುಂದುವರಿಸಲು ಸಲಹೆ ನೀಡಿದ್ದರು.

ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವಧಿಯಲ್ಲಿ ಪೈಗಳು ಬಹುಭಾಷಾ ಪ್ರವೀಣರಾಗಿ ಬೆಳೆದರು. ಆಗ ಡಾ ಎಸ್. ರಾಧಾಕೃಷ್ಣನ್ ಅವರ ಸಹಪಾಠಿಯಾಗಿದ್ದರು. ತಂದೆಯ ಅನಾರೋಗ್ಯದ ಸುದ್ದಿ ಬಂದುದರಿಂದಾಗಿ, ಗೋವಿಂದ ಪೈಗಳು ಅಂತಿಮ ಬಿ.ಎ. ಪರೀಕ್ಷೆಯನ್ನು ಪೂರ್ತಿಗೊಳಿಸದೆ ಊರಿಗೆ ಹಿಂದಿರುಗಿದರು. ಅವರು ಉತ್ತರಿಸಿದ್ದ ಇಂಗ್ಲಿಷ್ ಭಾಷಾವಿಷಯದಲ್ಲಿ ವಿಶ್ವವಿದ್ಯಾನಿಲಯದ ಮೊದಲ ಸ್ಥಾನ - ಬಂಗಾರದ ಪದಕ - ಪಡೆದರು.
ಸುಮಾರು 1909ರಲ್ಲಿ ನಡೆದಿರಬಹುದಾದ ಗೋವಿಂದ ಪೈಗಳ ಮದುವೆಯ ತೇದಿ ಲಭ್ಯವಿಲ್ಲ. ಅವರ ಪತ್ನಿ ಲಕ್ಷ್ಮಿ ಯಾನೆ ಕೃಷ್ಣಾಬಾಯಿ ಮುದ್ದಣನ ಮನೋರಮೆಯಂಥ ಸಹೃದಯಿನಿಯಾಗಿದ್ದರು. ಪೈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಕೃಷ್ಣಾಬಾಯಿ 1927ರಲ್ಲಿ ಉಬ್ಬಸ ಉಲ್ಬಣಗೊಂಡು ತೀರಿಕೊಂಡರು. ತನ್ನ 44ನೆಯ ವಯಸ್ಸಿನಲ್ಲಿ ವಿಧುರರಾದ ಗೋವಿಂದ ಪೈಗಳು ಮರುಮದುವೆಯಾಗಲಿಲ್ಲ. ಹೆಂಡತಿಯ ಸಾವು ಅವರ ಜೀವನಕ್ಕೆ ತಿರುವು ನೀಡಿದ ದೊಡ್ಡ ಆಘಾತವಾಗಿತ್ತು. ವಿಪ್ರಲಂಭ ಮತ್ತು ಭಕ್ತಿಗಳು ಸಂಲಗ್ನಗೊಂಡಿರುವ 'ನಂದಾದೀಪ' ಕವನ ಮಾಲಿಕೆಯನ್ನು ಪೈಗಳು ಪತ್ನಿಯ ಸವಿನೆನಪಿಗಾಗಿ ಬರೆದರು. ನಾನು ಹೆಚ್ಚಾಗಿ ಹಾಡುವುದು ನೊಂದಾಗ ಎಂದ ಪೈಗಳ ಕಾವ್ಯದ ಒಂದು ಮುಖ್ಯ ವಸ್ತು ಸಾವು.

ಆಗರ್ಭ ಶ್ರೀಮಂತರಾಗಿದ್ದ ಗೋವಿಂದ ಪೈಗಳು ಯಾವ ಉದ್ಯೋಗಕ್ಕೂ ಸೇರಲಿಲ್ಲ. 1950ರ ದಶಕದಲ್ಲಿ ರೂ.1500 ಭೂಕಂದಾಯ ಕಟ್ಟುತ್ತಿದ್ದ ಪೈಗಳನ್ನು ಸರಕಾರ ಗೌರವ ನ್ಯಾಯಾಧೀಶರನ್ನಾಗಿ ನೇಮಿಸಿತ್ತು. ಸರಸ್ವತಿಯ ಜತೆಗೆ ಲಕ್ಷ್ಮಿಯ ಕೃಪಾಕಟಾಕ್ಷದಲ್ಲಿದ್ದ ಅವರಿಗೆ ತನ್ನ ಅಧ್ಯಯನ ಸಂಶೋಧನೆಗಳಿಗಾಗಿ ಸಾವಿರಾರು ಗ್ರಂಥಗಳನ್ನು ಕೊಂಡುಕೊಳ್ಳುವುದು ಕಷ್ಟವಾಗಲಿಲ್ಲ. ಪೈಗಳು ತನ್ನ ಯೌವನದಲ್ಲಿ ಬರೋಡಾ ಸಂಸ್ಥಾನದ ನೌಸಾದಿಯಲ್ಲಿ ಅರವಿಂದ ಘೋಷ್‍ರ ಪ್ರೇರಣೆಯಿಂದ ಸ್ಥಾಪನೆಗೊಂಡಿದ್ದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಸೇರಲೆಂದು ಹೋಗಿದ್ದರು. ಪತ್ನಿಯ ಅನಾರೋಗ್ಯದ ಸುದ್ದಿ ಬಂದುದರಿಂದ ಅವರು ಊರಿಗೆ ಹಿಂದಿರುಗಿದರು. ಈ ಭೇಟಿಯಿಂದಾಗಿ ಅವರಿಗೆ ಕಾಕಾ ಕಾಲೇಲ್ಕರ್ (ಜನನ 1885) ಅವರ ಸ್ನೇಹಲಾಭವಾಯಿತು.

"ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ. ಕನ್ನಡ ಸಾಕುತಾಯಿ, ನನ್ನನ್ನು ಸಾಕಿದ ದಾಯಿ" ಎನ್ನುತ್ತಿದ್ದ ಗೋವಿಂದ ಪೈಗಳು 1925ರಲ್ಲಿ ಕೊಂಕಣಿ ಲೇಖನಗಳನ್ನು ಬರೆದರು. ಆಗ ಕೊಂಕಣಿ ಪತ್ರಿಕೋದ್ಯಮ ಬೆಳೆದಿರಲಿಲ್ಲ. ಆದ್ದರಿಂದ ಅವರ ಕೊಂಕಣಿ ಬರವಣಿಗೆಗೆ ಉತ್ತೇಜನ ಸಿಗಲಿಲ್ಲ. 1911ರಲ್ಲಿ ಆದಿಪ್ರಾಸ ಕೈಬಿಟ್ಟು ಬರೆದ 'ಹೊಲೆಯನು ಯಾರು?' ಮತ್ತಿತರ ಕವನಗಳಿಂದ ಗೋವಿಂದ ಪೈಗಳು ವಿವಾದಗ್ರಸ್ತ ಕವಿಯಾಗಿ ಪ್ರಸಿದ್ಧರಾದರು. "ಇಂದು ಒಬ್ಬನೇ ನಡೆವ ಮೇಕೆ ದಾರಿಯೇ ಮುಂದು ತೇರು ಎಳೆವ ಹೆದ್ದಾರಿ" ಎಂಬ ಅವರ ಭವಿಷ್ಯವಾಣಿ ನಿಜವಾಯಿತು. 1927ರಲ್ಲಿ ತನ್ನ ಹೆಂಡತಿಯ ಅಗಲಿಕೆಯ ಅನಂತರ ಅಂತರಂಗದಲ್ಲಿ ಒಂಟಿಯಾದ ಪೈಗಳು ಸಂಶೋಧನ ಕ್ಷೇತ್ರದಲ್ಲಿ ತಲ್ಲೀನರಾದರು. ಅವರ ಅಭಿಮಾನಿ ಕವಿಮಿತ್ರ ಪಾಂಡೇಶ್ವರ ಗಣಪತಿರಾಯರು 'ಪಂಡಿತವಕ್ಕಿ' ಎಂಬ ಕವನ ಬರೆದು ಕಾವ್ಯಸೃಷ್ಟಿಯನ್ನು ಅಲಕ್ಷಿಸಬಾರದೆಂದು ಗೋವಿಂದ ಪೈಗಳನ್ನು ವಿನಂತಿಸಿದರು. ಪೈಗಳು ತನ್ನ ಹೆಚ್ಚಿನ ಸಂಪ್ರಬಂಧಗಳನ್ನು ಜನಸಾಮಾನ್ಯರಿಗೆ ಸುಲಭಗ್ರಾಹ್ಯವಾಗಿದ್ದ ವಾರ, ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದರು. ಅವರು ಬದುಕಿದ್ದಾಗ ಅವರ ಸಂಪ್ರಬಂಧಗಳ ಒಂದು ಚಿಕ್ಕ ಸಂಕಲನ ('ಮೂರು ಉಪನ್ಯಾಸಗಳು' - 1940) ಮಾತ್ರ ಪ್ರಕಟವಾಯಿತು. 1961ರ ಜುಲೈ 11ರಂದು ಪೈಗಳು ತನ್ನ ಬರಹಗಳ ಕೃತಿಸ್ವಾಮ್ಯವನ್ನು ಮೈಸೂರಿನ ಕಾವ್ಯಾಲಯದ ಕೂಡಲಿ ಚಿದಂಬರಂ ಅವರಿಗೆ ನೀಡಿದರು.

1947ರ ರಾಷ್ಟ್ರ ವಿಭಜನೆ ಮತ್ತು 1956ರ ದಕ್ಷಿಣ ಕನ್ನಡ ಜಿಲ್ಲೆ ವಿಭಜನೆ (ಕಾಸರಗೋಡು ತಾಲೂಕು ಕೇರಳ ರಾಜ್ಯಕ್ಕೆ ಸೇರಿದ್ದು) ಇವುಗಳಿಂದ ಗೋವಿಂದ ಪೈಗಳು ಭಾವೋದ್ರಿಕ್ತರಾದರು. 1963ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ನೀಡಿದ ಗೌರವ ಡಾಕ್ಟರೇಟನ್ನು ಪೈಗಳು ತಿರಸ್ಕರಿಸಿದರು. ಕಾಸರಗೋಡು ಕೇರಳಕ್ಕೆ ಸೇರಲು ಕಾರಣರಾದ ಕೆ.ಎಂ. ಪಣಿಕ್ಕರ್ ಆಗ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದುದು ಪೈಗಳ ಈ ನಿರ್ಧಾರದ ಹಿಂದಿನ ಪ್ರಚ್ಛನ್ನ ಕಾರಣವಾಗಿತ್ತಂತೆ. ಮದ್ರಾಸು ಸರಕಾರ 1949ರಲ್ಲಿ ಗೋವಿಂದ ಪೈಗಳಿಗೆ ರಾಷ್ಟ್ರಕವಿ ಬಿರುದನ್ನಿತ್ತು ಗೌರವಿಸಿತು. 1950ರಲ್ಲಿ ಪೈಗಳು ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಗೋವಿಂದ ಪೈಗಳ ಸಂಪ್ರಬಂಧ ಸೃಷ್ಟಿ 1959ರ ಅನಂತರ ಕಡಿಮೆಯಾಯಿತು. 1960-62ರ ನಡುವೆ ಅವರು ಪರಿಷ್ಕರಿಸಿದ 'ಮಂಜೇಶ್ವರ ದೇವಸ್ಥಾನ' ಅವರ ಕೊನೆಯ ಸಂಶೋಧನ ಲೇಖನವಾಯಿತು. 3-10-1962ರಲ್ಲಿ ಬರೆದ ಪತ್ರವೊಂದರಲ್ಲಿ ನನ್ನ ವಯಸ್ಸಿನ 80ನೆ ಪರ್ವದಲ್ಲಿದ್ದೇನೆ. ಅದಾಗಿ ಯಾವುದನ್ನಾದರೂ ಹೊಸತನ್ನು ಓದಿ ನೋಡಬೇಕೆಂಬ ಇಷ್ಟವೂ ಇಲ್ಲ, ಓದುವ ತಾಳ್ಮೆಯೂ ಇಲ್ಲ ಎಂದು ಬರೆದಿದ್ದಾರೆ. 1963 ಸೆಪ್ಟೆಂಬರ್ ನಲ್ಲಿ ಜ್ವರದಿಂದ ಬಳಲುತ್ತಿದ್ದ ಪೈಗಳಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಗೋವಿಂದ ಪೈಗಳು ಸೆಪ್ಟೆಂಬರ್ 6, 1963ರಂದು ಶುಕ್ರವಾರ ಬೆಳಿಗ್ಗೆ 9-10ಕ್ಕೆ ಮಂಗಳೂರಿನಲ್ಲಿ ತಮ್ಮ ತಮ್ಮನ ಮಗ ತುಕಾರಾಮ ಪೈಗಳ ಮನೆಯಲ್ಲಿ ನಿಧನರಾದರು.

ವ್ಯಕ್ತಿತ್ವ


ದ.ರಾ. ಬೇಂದ್ರೆಯವರು ಗೋವಿಂದ ಪೈಗಳನ್ನು ಕುರಿತ ತಮ್ಮ ಸಾನೆಟ್‍ನಲ್ಲಿ "ಕಲ್ಲು-ಕಾಗದ-ಕಡತಗಳಲ್ಲಿ ಕಾಲನ ಕಾಲು ಸಿಕ್ಕು ತೊಳಲಾಡುವಲ್ಲಿ ಕುಣಿಕೆ ಬಿಡಿಸಿದಿರಣ್ಣ ! ...... ಹರಸಿದಿರಿ ತರುಣರನು. ಆ ಅಸೂಯೆಯ ದಗ್ಧ ನೀವು ಕಾಲಜ್ಞಾನಿ ಮುಗ್ಧ, ಅಕ್ಕರಿಗ ವಿದಗ್ಧ" ಎಂದಿದ್ದಾರೆ. 'ತಾವೊಂದು ಗೊಮ್ಮಟಸಮ ಮಹಾಕಾವ್ಯ' ಎಂದಿದ್ದಾರೆ ಕುವೆಂಪು. ಸಂಶೋಧಕ ಕವಿ ಬನ್ನಂಜೆ ಗೋವಿಂದಾಚಾರ್ಯರಿಗೆ 'ಹಳೆಯ ಕಾಲದ ಮನೆಯ' ಪೈಗಳು 'ಅಲ್ಲಿ ಕಾಲಿಟ್ಟವರ ಬಗೆ ತುಂಬ ಹೊಸತನದ ಬೆಳಕು' ತುಂಬುವ 'ಮಗುವಿನಂಥದೆ ನಗು'ವಿನ 'ಬೆಳ್ಳಿಮೀಸೆಯ ಮಗು'ವಾಗಿ ಕಂಡರು.

ಖಂಡತುಂಡವಾದ ಅವರ ಮಾತಿನಂತೆಯೇ, ಮನಸ್ಸಿನಂತೆಯೇ ಅವರ ಆಕೃತಿ. ಆ ನೆರೆತ ಬೆಳ್ಳಿಮೀಸೆ; ಆ ಸಿಂಹದಂಥ ರೂಪ; ತುಂಡು ತೋಳಿನ ಜುಬ್ಬ ಅಥವಾ ಬನಿಯನ್, ಉದ್ದದಟ್ಟಿ, ಕೆಲವೇಳೆ ಛತ್ರಿ, ಮಂಗಳೂರು ಚಪ್ಪಲಿ, ಇಷ್ಟೆ ಅವರ ಪೋಷಾಕು. ಏತಕ್ಕಾದರೂ ಬೆರಳು ಕೊಡವುತ್ತಾ, ಮೀಸೆ ಕಡಿಯುತ್ತಾ, ಬೀಡಿ ಸೇದುತ್ತಾ ಅದು ಯಾವುದೋ ವಿಚಾರವನ್ನು ಹೊರಗೆಡಹುತ್ತಾ ಇದ್ದಾಗ ಅವರನ್ನು ನೋಡುವುದು ಒಂದು ಹಬ್ಬವಾಗುತ್ತಿತ್ತು. ಮನಸ್ಸು, ಮಾತು ನಡತೆಗಳಲ್ಲಿ ಅಂತರವಿಲ್ಲದ ಹಿರಿಮೆ ಅವರದು. ಎಲ್ಲಕ್ಕಿಂತ ವಿಶಿಷ್ಟವಾದುದು ಅವರ ವ್ಯಕ್ತಿಗುಣ. ಆ ಸರಸ ಸಂಭಾಷಣೆ, ಆ ವಿಶ್ವಾಸ, ಆ ಗೆಳೆತನ, ಆ ನಗು, ಆ ಮಗುವಿನಂಥ ಮನಸ್ಸು ನಮಗೆ ಇನ್ನೆಲ್ಲಿ ದೊರೆತಾವು? - ನಿಟ್ಟೂರು ಶ್ರೀನಿವಾಸರಾಯರು ಬಣ್ಣಿಸುವ ಗೋವಿಂದ ಪೈಗಳ ವ್ಯಕ್ತಿಚಿತ್ರವಿದು.
ಅತಿಥಿ ಸತ್ಕಾರಕ್ಕೆ ಪ್ರಸಿದ್ಧರಾಗಿದ್ದ ಗೋವಿಂದ ಪೈಗಳ ಬಗ್ಗೆ ದಂತಕತೆಗಳು ಹುಟ್ಟಿಬೆಳೆದಿವೆ. ಗೋವಿಂದ ಪೈ, ಸುಬ್ರಾಯ ಪೈ ಸಹೋದರರ ಆತ್ಮೀಯ ಉಪಚಾರವನ್ನು, ಗಡದ್ದಾದ ಊಟ-ಉಪಹಾರಗಳನ್ನು ಮಂಜೇಶ್ವರದ ಕಡಲದಂಡೆಯಲ್ಲಿ ಪಟ್ಟಾಂಗ ಹೊಡೆದುದನ್ನು, ಶಿವರಾಮ ಕಾರಂತ, ಮಾಸ್ತಿ, ಜಿ.ಪಿ. ರಾಜರತ್ನಂ, ದ.ಬಾ. ಕುಲಕರ್ಣಿ, ಶ್ರೀನಿವಾಸ ಹಾವನೂರ ಮತ್ತಿತರ ಲೇಖಕರು ತಮ್ಮ ಬರಹಗಳಲ್ಲಿ ನೆನಪಿಸಿಕೊಂಡಿದ್ದಾರೆ. 'ನಾನು ಹದಿನೆಂಟು ವರ್ಷ ಬೀಡಿ, ಹದಿನೆಂಟು ವರ್ಷ ಸಿಗರೇಟ್, ಮತ್ತೆ ಸುಮಾರಾಗಿ ಹದಿನೆಂಟು ವರ್ಷ ಬೀಡಿ ಹೀಗೆ 54 ವರುಷ ಹೊಗೆ ಕುಡಿದಿದ್ದೇನೆ' ಎನ್ನುವ ಪೈಗಳ ವಿವರಣೆಯನ್ನು ದ.ಬಾ. ಕುಲಕರ್ಣಿ ದಾಖಲಿಸಿದ್ದಾರೆ. ಸಂಶೋಧನ ಜಿಜ್ಞಾಸೆಯ ಅಭಿಪ್ರಾಯಭೇದಗಳಿಗಾಗಿ ಪೈಗಳು ಸ್ನೇಹಿತರನ್ನು ದೂರ ಮಾಡಲಿಲ್ಲ.

ತನ್ನ ಸ್ವಂತ ಕೃತಿಗಳ ಕುರಿತ ವಿಮರ್ಶೆಯಲ್ಲಿ ಪೈಗಳ ದೊಡ್ಡತನ ಕಾಣಿಸುತ್ತದೆ - "ನಾನು ಕವಿಯೇ ಅಹುದೋ ಅಲ್ಲವೋ ಎಂಬುದು ಭವಿಷ್ಯಕ್ಕೆ ಬಿಟ್ಟ ಪ್ರಶ್ನೆ". ತನ್ನ 'ಗಿಳಿವಿಂಡು' ಕವನ ಸಂಕಲವನ್ನು ಕುರಿತು ಅವರು 'ಗಿಳಿವಿಂಡಿ'ನಲ್ಲಿಯ ಕೆಲವು ಮೂರನೆಯ ತರಗತಿ (THIRD RATE)ಯ ಕವನಗಳನ್ನು ತಗೆದು, ಹೊಸ ಕೆಲವನ್ನು ಸೇರಿಸಿ, ಅದೇ ಹೆಸರನ್ನು ಇಲ್ಲವೆ ಬೇರೊಂದನ್ನಿಟ್ಟು ಸದ್ಯದಲ್ಲೆ ಪ್ರಕಟಿಸಬೇಕೆಂದು ಯೋಚಿಸಿದ್ದೇನೆ ಎಂದಿದ್ದಾರೆ. ಜಗತ್ತಿನ ಹಲವು ಪ್ರಮುಖ ಭಾಷೆಗಳ ಗ್ರಂಥಗಳಿಂದ ಕೂಡಿದ ನಾಡಿನ ಅಪೂರ್ವ ಖಾಸಗಿ ಗ್ರಂಥಭಂಡಾರ ಗೋವಿಂದ ಪೈಗಳಲ್ಲಿತ್ತು. ಪೈಗಳ ಮನೆಗೆ ಭೇಟಿಯಿತ್ತ ನಾಟಕಕಾರ ಶ್ರೀರಂಗರಿಗೆ ಪುಸ್ತಕಗಳಿಂದಲೇ ಗೋಡೆಗಳನ್ನು ನಿರ್ಮಿಸಿದ್ದಾರೇನೊದ್ದಾರೇನೊ ಅನ್ನಿಸಿತು. ಉಳ್ಳವರ ವರ್ಗಕ್ಕೆ ಸೇರಿದ್ದ ಪೈಗಳು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ದಾನಶೂರರಾಗಿದ್ದರು. ಮಕ್ಕಳನ್ನು ಕತೆಗಳ ಮಾಯಾಲೋಕ್ಕೆ ಕರೆದೊಯ್ಯುವುದು ಅವರಿಗೆ ತುಂಬ ಇಷ್ಟದ ಕೆಲಸವಾಗಿತ್ತು.

ಇದುವರೆಗೆ ಪ್ರಕಟವಾಗಿರುವ ಗೋವಿಂದ ಪೈಗಳ ನಾಲ್ಕು ಪತ್ರಸಂಕಲನಗಳಲ್ಲಿ ಅವರ ಇನ್ನೂರಕ್ಕಿಂತ ಹೆಚ್ಚು ಪತ್ರಗಳು ಪ್ರಕಟಗೊಂಡಿವೆ. ಈ ಪತ್ರಗಳು ಪೈಗಳ ಪ್ರಾಮಾಣಿಕತೆ, ವಿನಯ, ಪರೋಪಕಾರ, ಸ್ಮೃತಿಶಕ್ತಿ, ಸಂಶೋಧನೆಯ ಒಳನೋಟ, ಮುಪ್ಪಿನ ಕಷ್ಟಗಳು - ಇವನ್ನೆಲ್ಲ ವಿವರಿಸುತ್ತವೆ. ಉಡುಪಿಯ ಲೇಖಕಿ ಸರಸ್ವತಿಬಾಯಿ ರಾಜವಾಡೆಯವರ ಪತ್ರಗಳಿಗೆ ನೀಡಿದ ಉತ್ತರಗಳಲ್ಲಿ ಪೈಗಳು ಆಪ್ತಸಲಹೆಯ ತಜ್ಞರಂತೆ ಕಾಣಿಸುತ್ತಾರೆ. ಇಂಗ್ಲೆಂಡಿನ ತತ್ತ್ವಜ್ಞಾನಿ ಹರ್ಬರ್ಟ್ ಸ್ಪೆನ್ಸರ್(1820-1903)ನ ಗ್ರಂಥವನ್ನು ಓದಿ, ತನ್ನ ಅಭಿಪ್ರಾಯ ತಿಳಿಸಿ ಅವರಿಗೆ ಪತ್ರ ಬರೆದಿದ್ದರು. ಸ್ಪೆನ್ಸರ್‍ ರಿಂದ ಈ ಪತ್ರಕ್ಕೆ ಉತ್ತರ ಬಂದಿತ್ತು.
"ಯಾರನ್ಯ ಧರ್ಮವಂ ಯಾರನ್ಯ ಜನಗಳ ಸ್ವಾತಂತ್ರ್ಯವಂ ಮನ್ನಿಸುವರೋ ತಮ್ಮದರಂತೆ, ಅವರ ಧರ್ಮಂ, ಜನಂ, ಸ್ವಾತಂತ್ರ್ಯ ಬಾನಂತೆ ಬೆಳೆಯುತ್ತಿದೆ" - ಗೋವಿಂದ ಪೈಗಳ 'ವೈಶಾಖಿ'ಯಲ್ಲಿ ಬುದ್ಧ ಹೇಳುವ ಮಾತುಗಳಿವು. 'ಸರ್ವಧರ್ಮ ಸಮಭಾವ'ದ ಆದರ್ಶವನ್ನು ಗೋವಿಂದ ಪೈಗಳು ನೋಂಪಿಯಂತೆ ಪಾಲಿಸುತ್ತಿದ್ದರು. 'ವೈಶಾಖಿ', 'ಗೊಲ್ಗೊಥಾ' ಖಂಡಕಾವ್ಯಗಳಲ್ಲಿ, ಯೇಸು-ಕೃಷ್ಣ, 'ಶ್ವಪಚನ್ನು ದೊರೆಕೊಳದೆ ದಿವಕೇರ್ವೆನೆಂತು?’, 'ಹೊಲೆಯನು ಯಾರು?' ಕವನಗಳಲ್ಲಿ ಆಸ್ತಿಕ ಗೋವಿಂದ ಪೈಗಳ ಉದಾರವಾದಿ ಧಾರ್ಮಿಕ-ಸಾಮಾಜಿಕ ನಿಲುವನ್ನು ಕಾಣುತ್ತೇವೆ.

'ವರುಷವೆರಡಾಯ್ತು' (1949), 'ರಾಹುವನು ತೊಲಗಿಸಿದೊ ಕೇತುವನು ತಂದೆ' (1959), 'ಸತ್ತು ಗಡ ಬದುಕಿದಿರಿ ಮಹಾತ್ಮ ನೀ ಧನ್ಯ' (1957) 'ವರುಷ ಹದಿನಾಲ್ಕು ನೀನೆಮೆಗೆ ಬಿಡುಗಡೆಯ ನೀಡಿ' (1962) ಇಂಥ ರಾಜಿಕೀಯ ಕವನಗಳಲ್ಲಿ ಸ್ವಾತಂತ್ರ್ಯೋತ್ತರ ರಾಜಕೀಯವನ್ನು ಕುರಿತ ಪೈಗಳ ಅತೃಪ್ತಿ, ನಿರಾಶೆ ಸ್ಪಷ್ಟವಾಗಿ ತೋರುತ್ತದೆ. ಕಾಶ್ಮೀರ ಮತ್ತು ಗೋವಾಗಳ ವಿಮೋಚನೆಯಾಗದಿದ್ದುದರಿಂದ ಕವಿ ಪೈಗಳು ಅಸಮಾಧಾನಗೊಂಡಿದ್ದರು. ಪ್ರಜಾಪ್ರಭುತ್ವದ ಸರಕಾರ ನಿರಂಕುಶತೆಯತ್ತ ಸಾಗುತ್ತಿರುವುದನ್ನು ಅವರು ಗುರುತಿಸಿದ್ದರು. ಮಹಾತ್ಮಾ ಗಾಂಧೀಜಿಯನ್ನು ಕುರಿತ ಪೈಗಳ ಭಕ್ತಿ-ಗೌರವ 'ದೆಹಲಿ ಅಥವಾ ಮಹಾತ್ಮನ (ಗಾಂಧಿಯ) ಕಡೆಯ ದಿನ' ಮತ್ತಿತರ ಕವನಗಳಲ್ಲಿ ಅಭಿವ್ಯಕ್ತಗೊಂಡಿದೆ.
'ಗಿಳಿವಿಂಡು' (1930), 'ನಂದಾದೀಪ' (1968), 'ಹೃದಯರಂಗ' (1969), ಇಂಗಡಲು (1983) - ಇವು ಗೋವಿಂದ ಪೈಗಳ ಕವನ ಸಂಕಲನಗಳು. ಈಗ ಲಭ್ಯವಿರುವ ಗೋವಿಂದ ಪೈಗಳ ಒಟ್ಟು ಕವನಗಳು 177. ಕನ್ನಡದ ಮೊತ್ತಮೊದಲ ಸಾನೆಟ್ ಬರೆದವರು ಪೈಗಳು. ಕಥನ ಕವನ, ಪ್ರಗಾಥ, ಖಂಡಕಾವ್ಯ, ಸಾನೆಟ್ - ಇವುಗಳಲ್ಲಿ ಅವರ ಸಾಧನೆಯನ್ನು ಅಲಕ್ಷಿಸುವಂತಿಲ್ಲ. ಆದಿ ಪ್ರಾಸ ನಿರಾಕರಣೆಯ ಅವರ ನಿರ್ಧಾರ ಹೊಸಗನ್ನಡ ಕಾವ್ಯದ ಮುನ್ನಡೆಗೆ ದಿಕ್ಸೂಚಿಯಾಯಿತು. ಕೀರ್ತಿನಾಥ ಕುರ್ತಕೋಟಿಯವರು ಬರೆದಿರುವಂತೆ ಗೋವಿಂದ ಪೈಗಳ ಕಾವ್ಯ ಹಳೆ ಹೊಸ ಕಾವ್ಯಗಳನ್ನು ಒಂದೆಡೆಗೆ ಜೋಡಿಸುವ ಸೇತುವೆಯಾಗಿದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ ಅವರ ಕಾವ್ಯದ ಭಾಷೆ ಮಿಶ್ರಲೋಹದಂತೆ ಬಹಳ ದಿನ ಬಾಳಬಲ್ಲುದಾಗಿದೆ.

'ಗೊಲ್ಗೊಥಾ' (1931), 'ವೈಶಾಖಿ ಅಥವಾ ಬುದ್ಧನ ಕಡೆಯ ದಿನಗಳು' (1947) - ಖಂಡಕಾವ್ಯಗಳಲ್ಲಿ ಪೈಗಳ ಮಹಾಕವಿ ಪ್ರತಿಭೆಯ ಮಿಂಚುಗಳಿವೆ. ಪೈಗಳ ವ್ಯುತ್ಪತ್ತಿ ಪ್ರತಿಭೆಗಳ ಸಮರಸದ ದಾಂಪತ್ಯ ಈ ಕಾವ್ಯಗಳಲ್ಲಿದೆ. ಅವರ ಛಂದೋಪ್ರಯೋಗಗಳಿಗೆ ಐತಿಹಾಸಿಕ ಮಹತ್ವವಿದೆ.

'ಹೆಬ್ಬೆರಳು' (1964), 'ಚಿತ್ರಭಾನು ಅಥವಾ 1947 (1962), 'ತಾಯಿ ಮತ್ತು ಇತರ ನೋ ನಾಟಕಗಳು' - ಇವು ಪೈಗಳ ನಾಟಕಗಳು. ಆರ್ಯ-ಅನಾರ್ಯ ಸಂಬಂಧವನ್ನು ಸಂಕೀರ್ಣವಾಗಿ ಚಿತ್ರಿಸುವ 'ಹೆಬ್ಬೆರಳು' ಇಂದಿಗೂ ಪ್ರಸ್ತುತವಾಗಿದೆ. 1942ರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ ಪೈಗಳ 'ಚಿತ್ರಭಾನು'ಗೆ ಪ್ರೇರಣೆ ನೀಡಿದೆ. ಜಪಾನಿನ ನೋ ನಾಟಕಗಳನ್ನು ಭಾಷಾಂತರಿಸುವುದರ ಮೂಲಕ ಪೈಗಳು ಪಶ್ಚಿಮದ ಬದಲು ಪೂರ್ವದ ಕಡೆ ನೋಡಲು ಸೂಚಿಸುತ್ತಿದ್ದಾರೆ.
ಸಂಶೋಧಕ


'ಗೋವಿಂದ ಪೈ ಸಂಶೋಧನ ಸಂಪುಟ' (ಸಂ.-ಮುರಳೀಧರ ಉಪಾಧ್ಯ ಹಿರಿಯಡಕ, ಹೆರಂಜೆ ಕೃಷ್ಣ ಭಟ್) 1995ರಲ್ಲಿ ಪ್ರಕಟವಾಯಿತು. ಈ ಸಂಪುಟದಲ್ಲಿ ಗೋವಿಂದ ಪೈಗಳ 144 ಲೇಖನ, ಸಂಪ್ರಬಂಧಗಳಿವೆ. ಗೋವಿಂದ ಪೈಗಳ ಒಟ್ಟು ಇಂಗ್ಲಿಷ್, ಕನ್ನಡ ಲೇಖನ, ಸಂಪ್ರಬಂಧಗಳ ಸಂಖ್ಯೆ - 165.

ಗೋವಿಂದ ಪೈಗಳ ಭಾಷಾ ಪ್ರವೀಣತೆಯನ್ನು ಕಂಡಾಗ ಇದು ವಾಸ್ತವವೊ ಅಥವಾ ಪುರಾಣ ಕತೆಯೊ ಎಂದು ಅಚ್ಚರಿಯಾಗುತ್ತದೆ. ಅವರ ಗ್ರಂಥಭಂಡಾರದಲ್ಲಿ 36 ಭಾಷೆಗಳ 4734 ಪುಸ್ತಕಗಳಿವೆ. ಇಂಗ್ಲಿಷ್, ಕನ್ನಡ, ಕೊಂಕಣಿ ಭಾಷೆಗಳಲ್ಲಿ ಅವರು ಲೇಖನಗಳನ್ನು ಬರೆದಿದ್ದಾರೆ. ಸಂಸ್ಕೃತ, ಪ್ರಾಕೃತ, ಪಾಲಿ, ಮರಾಠಿ, ಬಂಗಾಲಿ, ಉದರ್ು, ಜರ್ಮನ್, ಜಪಾನಿ ಮತ್ತು ತುಳುವಿನಿಂದ ಭಾಷಾಂತರ ಮಾಡಿದ್ದಾರೆ. ಬ್ರಿಟಿಷರ ಭಾರತದಲ್ಲಿ ತಮ್ಮ ಜೀವನದ 64 ವರ್ಷಗಳನ್ನು ಕಳೆದ ಪೈಗಳು ಜಗತ್ತಿನ ಜ್ಞಾನನಿಧಿ ಇಂಗ್ಲಿಷಿನಲ್ಲಿ ಮಾತ್ರ ಇದೆ ಎಂಬುದನ್ನು ಒಪ್ಪಲಿಲ್ಲ - ಎಂಬುದು ಮಹತ್ವದ ಸಂಗತಿ. ಸಂಸ್ಕೃತ, ಪಾಲಿ, ಪ್ರಾಕೃತ, ಪರ್ಷಿಯನ್,ಜಪಾನಿ, ಚೀನೀ ಇಂಥ ಪೌರಾತ್ಯ ಭಾಷೆಗಳಲ್ಲಿ ಜ್ಞಾನದ ಕೊಪ್ಪರಿಗೆಗಳಿವೆ ಎಂಬುದು ಅವರಿಗೆ ಗೊತ್ತಿತ್ತು. ಅವರು ಪಶ್ಚಿಮದ ವ್ಯಾಪಾರಿ ಕಣ್ಣುಗಳಿಂದ ಪೂರ್ವವನ್ನು ನೋಡುತ್ತಿದ್ದ ತಥಾಕಥಿತ 'ಓರಿಯಂಟಲಿಷ್ಟ'ರಿಗೆ ಸವಾಲು ಹಾಕಬಲ್ಲ ಮಹಾವಿದ್ವಾಂಸರಾಗಿದ್ದರು. ಕವಿಯ ಪ್ರತಿಭೆ, ಸಂಶೋಧಕನ ಬಹುಜ್ಞತೆ ಮತ್ತು ಉಚಿತಾನುಚಿತ ವಿವೇಕಗಳು ಅವರಲ್ಲಿ ಮುಪ್ಪುರಿಗೊಂಡಿದ್ದುವು. ಅವರ ಗ್ರೀಕ್ ಭಾಷಾಪಾಂಡಿತ್ಯ ಎರಡು ಸಂಪ್ರಬಂಧಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪೈಗಳು ಉತ್ಸವಮೂರ್ತಿಗಳನ್ನು ನೋಡಿ ತೃಪ್ತರಾಗದೆ ಕತ್ತಲೆಯಲ್ಲಿರುವ ಗರ್ಭಗುಡಿಯ ಮೂರ್ತಿಗಳನ್ನು ಶೋಧಿಸುತ್ತಿದ್ದ ಸಂಶೋಧಕ.
ಕವಿಗಳ ಮತ್ತು ರಾಜರುಗಳ ಕಾಲನಿರ್ಣಯದಿಂದ ಸಾಹಿತ್ಯ ಪರಂಪರೆ ಮತ್ತು ರಾಜಕೀಯ ಪರಂಪರೆಯ ಸಾತತ್ಯ ಮತ್ತು ಅಂತರ್ಸಂಬಂಧಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಪೈಗಳ ಮಹತ್ವದ ಸಂಪ್ರಬಂಧಗಳು ಬುದ್ಧ, ಮಹಾವೀರ, ಮಧ್ವಾಚಾರ್ಯ, ವೀರಶೈವ ಆಚಾರ್ಯತ್ರಯರು, ಚಾಳುಕ್ಯ ವಿಕ್ರಮ, ರನ್ನ, ದುರ್ಗಸಿಂಹ, ಜಯಕೀರ್ತಿ, ಬ್ರಹ್ಮಶಿವ, ಶಿಶುಮಾಯಣ, ಸೋಮರಾಜ, ಷಡಕ್ಷರದೇವ, ರತ್ನಾಕರ ಸಿದ್ಧ, ಲಕ್ಷ್ಮೀಶ, ಹರಿಹರ, ರಾಘವಾಂಕರ ಕಾಲನಿರ್ಣಯಗಳಿಗೆ ಸಂಬಂಧಪಟ್ಟಿವೆ. ಜ್ಯೋತಿಷಶಾಸ್ತ್ರದ ತಲಸ್ಪರ್ಶಿಅಧ್ಯಯನದಿಂದಾಗಿ ಕಾಲನಿರ್ಣಯಗಳಲ್ಲಿ ಸ್ಥೂಲ ವಿವರಗಳಿಂದ ಸೂಕ್ಷ್ಮ ವಿವರಗಳಿಗೆ ಹೋಗುವುದು ಪೈಗಳಿಗೆ ಸಾಧ್ಯವಾಯಿತು.

ಗೋವಿಂದ ಪೈಗಳು ಅಲಿಖಿತ ಇತಿಹಾಸವನ್ನು ಅಲಕ್ಷಿಸಿಲ್ಲ. ಬಾಸೆಲ್ ಮಿಶನ್‍ನಲ್ಲಿ ಸಿಕ್ಕಿದ ಕೈಫಿಯತ್ತಿನ ಆಧಾರದಿಂದ ಪೈಗಳು 'ವಿಜಯನಗರದ ನಿರ್ಮಾಣವೂ ಶೃಂಗೇರಿಯ ಗುರುಪರಂಪರೆಯೂ' ಎಂಬ ಲೇಖನ ಬರೆದಿದ್ದಾರೆ. 'ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕಲಾವೈಭವ' ಎಂಬ ಸಂಪ್ರಬಂಧವನ್ನು ಬರೆದಿರುವ ಪೈಗಳು ಕರಾವಳಿಯ ಜಾನಪದ ಅಧ್ಯಯನ ಮಾಡಿದ ಮೊದಲಿಗರಲ್ಲೊಬ್ಬರು. ಪಾರ್ತಿಸುಬ್ಬನ ಕಾಲನಿರ್ಣಯ ಮಾಡುವಲ್ಲಿ ಅವರು ಕಂಠಸ್ಥ ಸಂಪ್ರದಾಯದ ಇತಿಹಾಸಕ್ಕೆ ಮಹತ್ವ ನೀಡಿದ್ದಾರೆ.

ಗೋವಿಂದ ಪೈಗಳು 'ಓರಿಯಂಟಲಿಸ್ಟ್' ಪುರೋಹಿತರನ್ನು ನಂಬಿ ಪಶ್ಚಿಮ ಬುದ್ಧಿಯಾಗದ, ರಾಷ್ಟ್ರೀಯತೆಯನ್ನು ಅತಿರೇಕಿಸದೆ ಇತಿಹಾಸವನ್ನು ವೈಭವೀಕರಿಸದ ಸಂಶೋಧಕರಾಗಿದ್ದರು. ಅವರ ಇತಿಹಾಸ ದೃಷ್ಟಿ ವಸಾಹತುಶಾಹೀ ಕಾಲದಲ್ಲಿ ರೂಪಿತವಾದ ಚಿತ್ರಕ್ಕೆ ಒಳಗೊಳ್ಳಲಿಲ್ಲವೆಂಬುದು ಅಭಿಮಾನ ಪಡಬೇಕಾದ ಸಂಗತಿ. ಗೋವಿಂದ ಪೈಗಳ ಯೌವನಕಾಲದ ಭಾರತದಲ್ಲಿ ವಸಾಹತುಶಾಹಿ ಚಿಂತನೆಯು ದಟ್ಟವಾಗಿತ್ತು. ಗಾಂಧೀಯುಗದ ಚಿಂತನೆಯಿಂದ ಪ್ರಭಾವಿತರಾಗಿದ್ದ ಪೈಗಳಲ್ಲಿ ಪಶ್ಚಿಮದ ಗಾಳಿ, ನಾವು ನಮ್ಮ ನೆಲದಲ್ಲಿ ಕುಸಿಯುವಂತೆ ಮಾಡಬಾರದೆಂಬ ಎಚ್ಚರ ಇತ್ತು. ಅವರು ನಿರ್ವಸಹಾತೀಕರಣ ಪ್ರಕ್ರಿಯೆಗೆ ಪ್ರೇರಣೆ ನೀಡಿದ ಸ್ವೋಪಜ್ಞ ಸಂಶೋಧಕರಾಗಿದ್ದರು. ಪೈಗಳ ಪೂರ್ವಾಪರ ಚಿಂತನೆಯಲ್ಲಿ ಅಪರ ಪೂರ್ವವನ್ನು ಕಂಡ ರೀತಿಯ ಕುರಿತು ತೀವ್ರ ಆಕ್ಷೇಪ ಕಂಡುಬರುತ್ತದೆ. ಅವರು 1949ರಲ್ಲಿ ಬರೆದ 'ಪ್ರಾಕ್ತನ ವಿಮರ್ಶನದ ಮುಂದಣ ಹೆಜ್ಜೆ' ಒಳನೋಟ, ಮುನ್ನೋಟಗಳಿರುವ ಒಂದು ಮಹತ್ವದ ಲೇಖನ.

ಗೋವಿಂದ ಪೈಗಳ ಹಲವು ಸಂಪ್ರಬಂಧಗಳು ಆಖ್ಯಾನ, ಉಪಖ್ಯಾನಗಳಿಂದ ಕೂಡಿದ ಕಾವ್ಯಗಳಂತೆ ಸುದೀರ್ಘವಾಗಿವೆ. ಆದರೆ ಅವರ ಗದ್ಯದಲ್ಲಿ ಶಬ್ದಗಳ ಅಪವ್ಯಯವಿಲ್ಲ, ಅನಗತ್ಯವಾದ ವಾಗಾಡಂಬರವಿಲ್ಲ, ಶೈಲಿಯಲ್ಲಿ ಅವಿಶದತೆ ಇಲ್ಲ.

ಗೋವಿಂದ ಪೈಗಳು ಸಣ್ಣತನಗಳಿಲ್ಲದ ದೊಡ್ಡ ಸಂಶೋಧಕರಾಗಿದ್ದರು. ತುಳುನಾಡು, ಕರ್ನಾಟಕ, ಭಾರತದ ಇತಿಹಾಸದಲ್ಲಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಸ್ಪಷ್ಟವಾಗಿದ್ದ ನೂರಾರು ವಿಷಯಗಳನ್ನು ಸ್ಪಷ್ಟಗೊಳಿಸಿದರು. ಕಾಲನಿರ್ಣಯಗಳಿರುವ ಅವರ ಹತ್ತಾರು ಸಂಪ್ರಬಂಧಗಳು ಕಾಲದ ಪರೀಕ್ಷೆಯಲ್ಲಿ ಗೆದ್ದಿವೆ. ಪೈಗಳು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಸಂಶೋಧನೆಯ ಸಾಮಗ್ರಿಗಳ 'ಸರ್ವಸಂಗ್ರಹ' ಕಾಲದ ಸಂಶೋಧಕರು. ಸರ್ವಸಂಗ್ರಹದ ಜತೆಯಲ್ಲಿ ಅವರು 'ಸತ್ಯ ಸಂಗ್ರಹ'ಕ್ಕಾಗಿ ಶ್ರಮಿಸಿದರು. ಭಾರತದ ರಾಜಕೀಯ ಬೆಳವಣಿಗೆಯನ್ನಾಗಲಿ, ವಸಾಹತುಶಾಹಿ ಚಿಂತನಾಕ್ರಮದ ಅಪಾಯವನ್ನಾಗಲಿ ಅವರು ಅಲಕ್ಷಿಸಲಿಲ್ಲ. ಪೈಗಳು ಹೊಸ ಹೊಸ ಶಬ್ದಗಳನ್ನು ಸೃಷ್ಟಿಸುತ್ತ ಕನ್ನಡ ಗದ್ಯಕ್ಕೆ ಕಸಿ ಕಟ್ಟಿ ಅದನ್ನು ಬೆಳೆಸಿದರು.
(ಇನ್ನಷ್ಟು ಮಾಹಿತಿಗಾಗಿ 'ಗೋವಿಂದ ಪೈ ಸಂಶೋಧನ ಸಂಪುಟ'ದ ಸಂಪಾದಕೀಯ ನೋಡಿ.)
ಗ್ರಂಥ ಋಣ:

ಗೋವಿಂದ ಪೈ ಸಂಶೋಧನ ಸಂಪುಟ (1995)
ಸಂ.: ಹೆರಂಜೆ ಕೃಷ್ಣಭಟ್, ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ
ಎಂ.ಜಿ.ಎಂ. ಕಾಲೇಜು, ಉಡುಪಿ 576102