stat Counter



Wednesday, February 23, 2011

Kaalapallata[column writings- kannada] by- shridhara balagar[2011]


ಶ್ರೀಧರ ಬಳೆಗಾರರ 'ಕಾಲಪಲ್ಲಟ'

ಪ್ರೊ| ರಾಜೇಂದ್ರ ಚೆನ್ನಿ

ಶ್ರೀಧರ ಬಳೆಗಾರ ಅವರ ಅಂಕಣ ಬರಹಗಳನ್ನೊಳಗೊಂಡ ಈ ಕೃತಿಯನ್ನು ಓದುತ್ತಾ ಹೋದ ಹಾಗೆ ನನಗೆ ಅನಿಸಿದ ವಿಷಾದ, ಕಳವಳ, ಅಸಹಾಯಕತೆ ಇವು ವಿಮರ್ಶಕ ಪ್ರತಿಕ್ರಿಯೆಗೆ ಸೂಕ್ತವಲ್ಲದಿದ್ದರೂ ನನಗೆ ಅನಿಸಿದ ಪ್ರಾಮಾಣಿಕ ಭಾವನೆಗಳು. ಹೀಗೆ ಅನ್ನಿಸಿದ್ದಕ್ಕೆ ಕಾರಣವೆಂದರೆ ಶ್ರೀಧರ ಅವರ ಬರಹದ ಮುಖ್ಯ ಕಾಳಜಿಯೆಂದರೆ ಕೃಷಿ ಆಧಾರಿತ ಜೀವನಕ್ರಮವೊಂದು ಆಧುನಿಕತೆಯ ಹಿಂದಿರುವ ಬಂಡವಾಳದ ರಾಕ್ಷಸಶಕ್ತಿಯಿಂದ ಪಲ್ಲಟಗೊಂಡು ಇನ್ನೆಂದೂ ಮರಳಿಬಾರದಂತೆ ಕಣ್ಮರೆಯಾದುದರ ದುರಂತ. ಮೂವತ್ತು ವರ್ಷಗಳ ಹಿಂದೆ ಧಾರವಾಡದಿಂದ ಶಿವಮೊಗ್ಗೆಗೆ ಬಂದು ನೆಲೆಸಿ ಇಲ್ಲಿಯ ಮಲೆನಾಡ ಸಂಸ್ಕೃತಿಗೆ ಮಾರುಹೋಗಿಬಿಟ್ಟ ನನ್ನ ತಲ್ಲಣವೂ ಈ ದುರಂತಕ್ಕೆ ಸಾಕ್ಷಿಯಾಗಿರುವುದರಿಂದಯೇ ಹುಟ್ಟಿಕೊಂಡಿದ್ದು. ಚರಿತ್ರೆಯ ಎಲ್ಲಾ ಘಟ್ಟಗಳಲ್ಲೂ ಪಲ್ಲಟದ ಇಂಥದ್ದೇ ಒಂದು ಪ್ರತಿಕ್ರಿಯೆ ನಡೆಯುತ್ತಿರುತ್ತದೆಯೇನೋ. ಆದರೆ, ನನಗೆ ಮಾತ್ರ ಚರಿತ್ರೆ ಒಂದು ಕ್ರೂರ ಆಯ್ಕೆ ಮೂಲಕ ಇಂಥದ್ದೊಂದು ಭೀಕರವಾದ ಪಲ್ಲಟ ಮಲೆನಾಡು, ಕರಾವಳಿ, ಕರ್ನಾಟಕ ಭಾರತವನ್ನು ನಲುಗಿಸಿಬಿಟ್ಟಿದ್ದರ ಸಾಕ್ಷಿಯಾಗುವಂತೆ ಮಾಡಿದೆ ಎಂದೆನ್ನಿಸುತ್ತದೆ. ಹೀಗೆ ಅನ್ನಿಸಿದಾಗ ನೆನಪಾಗುವುದು ವಡ್ಡಾರಾಧನೆಯಲ್ಲಿ ಬರುವ ಸನ್ನಿವೇಶ, ತೊಟ್ಟಿಲಲ್ಲಿ ಮಲಗಿದ ಶಿಶುವೊಂದು ಬರಲಿರುವ ಕೇಡುಗಾಲದ ಬಗ್ಗೆ ಎಚ್ಚರಿಕೆ ಕೊಡುತ್ತದೆ. ’ಬೊಳಂ ಬೋಳ ಭಟ್ಟಾರಾಎಂದು ಶುರುವಾಗುವ ಅದರ ಭವಿಷ್ಯವಾಣಿ ಮನುಷ್ಯರು ಸದಾ ಹೆದರಿಕೆಯಲ್ಲಿರುವ ಕರಾಳ ಭವಿಷ್ಯವೊಂದರ ಪ್ರತಿಮೆಯಾಗಿದೆ. ಶ್ರೀಧರರಂಥ ಶ್ರೇಷ್ಠ ಕತೆಗಾರನೊಬ್ಬನಾಗಲಿ, ನಾನಾಗಲಿ ನಮ್ಮ ಬರಹದಲ್ಲಿ ಈ ಪಲ್ಲಟದ ವಿರಾಟ ದುರಂತದ ಬಗ್ಗೆ ಗಾಢ ವಿಷಾದದಿಂದ ಬರೆಯುವುದನ್ನು ಬಿಟ್ಟು ಏನನ್ನೂ ಮಾಡಲಾರೆವೆ ಎಂದು ಕಳವಳವಾಗುತ್ತದೆ.


 ಬಂದಿರುವ, ಬರುತ್ತಿರುವ ಕೇಡುಗಾಲದ ತೀವ್ರವಾದ ಅರಿವು ಸಾಧ್ಯವಾಗುವುದು ಕಳೆದುಹೋದದ್ದರ ಬಗೆಗಿನ ಅಷ್ಟೇ ತೀವ್ರವಾದ ಹಂಬಲ ಮತ್ತು ನೆನಪುಗಳಿಂದ. ಶ್ರೀಧರ ದಾಖಲೆ ಮಾಡುತ್ತಿರುವುದು ಅವರು ಕಂಡು ಅನುಭವಿಸಿದ ಮತ್ತು ಈಗ ತೀವ್ರ ಹಂಬಲದಿಂದ ನೆನಪಿಸಿಕೊಳ್ಳುವ ಕೃಷಿ ಆಧಾರಿತ ಜೀವನಕ್ರಮವನ್ನು. ಕೃಷಿ ಎಂದಿಗೂ ವ್ಯವಸಾಯವಾಗದೇ ಇಡಿಯಾದ, ಸಾವಯವವಾದ ಸಮಗ್ರವಾದ ಜೀವನಶೈಲಿಯಾಗಿದ್ದ ಕಾಲವನ್ನು. ಒಂದು ದೃಷ್ಟಿಯಲ್ಲಿ ಬದಲಾಗದ ಗ್ರಾಮೀಣ ಭಾರತವೇ ಆಗಿತ್ತು. ತನ್ನ ಮನೆ, ಕುಟುಂಬ, ಜಾನುವಾರುಗಳು, ಗದ್ದೆ, ತನ್ನ ಸಮುದಾಯ ಇವುಗಳನ್ನೇ ನೆಚ್ಚಿಕೊಂಡು ಅದಕ್ಕೆ ಸಾಕಾಗುವಷ್ಟು ಮಾತ್ರ ಉತ್ಪಾದನೆ ಮಾಡಿಕೊಂಡು ಹೆಚ್ಚುವರಿಯ ಕನಸು ಕಾಣದ ರೈತನ ಜೀವನಕ್ರಮವಾಗಿತ್ತು. ಮಾತ್ರವಲ್ಲ, ಈ ಕಾರಣದಿಂದಾಗಿಯೇ ತನ್ನ ಪರಿಸರ, ಸಮುದಾಯ ಹಾಗೂ ಮನುಷ್ಯನ ಸಂಬಂಧಗಳ ಸಾವಯವ ಜಗತ್ತಿನಲ್ಲಿ ಬದುಕುತ್ತಿದ್ದ ಸಮಾಜವೂ ಆಗಿತ್ತು. ಬಹುಶಃ ಅನೇಕರಿಗೆ ಇದು ಏರಿಳಿತವಿಲ್ಲದ ಸ್ಠಗಿತಗೊಂಡ ಜೀವನವಾಗಿ ಕಂಡು ನಿರಾಸೆ ಹುಟ್ಟಿಸುವಂತಿತ್ತು. ಆದರೆ ಆಧುನಿಕತೆ, ಕೃಷಿಯಲ್ಲಿ ಕ್ರಾಂತಿ ತರುವ ಭರಾಟೆಯಲ್ಲಿ ರಾಸಾಯನಿಕ ಗೊಬ್ಬರಗಳು, ಸಾಲ, ಹೈಬ್ರಿಡ್ ಬೀಜಗಳು, ಹಣ ಮತ್ತು ಆಮಿಷಗಳನ್ನು ಒಡ್ಡಿದ ಸರಕಾರಗಳು ಮತ್ತು ಇಡೀ ಈ ಚಾರಿತ್ರಿಕ ಪ್ರಕ್ರಿಯೆಯ ಹಿಂದಿರುವ ಬಂಡವಾಳಗಳಿಂದಾಗಿ ಹುಟ್ಟಿಕೊಂಡ ಹೊಸ ಜೀವನಕ್ರಮದ ವಿಕಾರಗಳಿಂದ ಆಘಾತಗೊಂಡಿರುವ ಮನಸ್ಸುಗಳಿಗೆ ಆ ಹಿಂದಿನ ಜಗತ್ತೇ ಆಪ್ಯಾಯಮಾನವಾಗಿ ಕಾಣುತ್ತದೆ.
 ಈ ಕೃತಿಯಲ್ಲಿ ನನಗೆ ಪ್ರಧಾನವೆಂದು ಕಾಣುವ ಕೃಷಿಕಥನಗಳ ಬಾಗಿಲಲ್ಲಿಇಂಥ ನೋಟಕ್ರಮಗಳಿರುವ ಈ ವರೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ ಬರಹವಾಗಿದೆ. ಈ ಲೇಖನದ ಮೊದಲ ಭಾಗದಲ್ಲಿ ನಂದಿಬಯಲು ಗ್ರಾಮದ ಸಾಂಪ್ರದಾಯಿಕ ಬದುಕನ್ನು ಶ್ರೀಧರ ಅಪ್ಪಟ ಕಥೆಗಾರನಂತೆ ನಿಖರವಾದ ಸೂಕ್ಷ್ಮವಾದ ವಿವರಗಳೊಂದಿಗೆ ವರ್ಣಿಸುತ್ತಾರೆ. ಈ ವರ್ಣನೆಯಲ್ಲಿ ಶ್ರೀಧರ ಬಳಸುವ ಪ್ರತಿಮೆಗಳು ಉತ್ತಮ ಕಾವ್ಯವೊಂದನ್ನು ಓದಿದಂತೆ ಮಾಡುತ್ತವೆ. ಎರಡನೇ ಭಾಗದಲ್ಲಿ ತಿಮ್ಮಣ್ಣನು ಎನ್‍ಟಿ (NT) ಯಾಗಿ ರೂಪಾಂತರಗೊಂಡಿದ್ದರ ಪುರಾಣವಿದೆ. ಶ್ರೀಧರರ ಬರಹಗಳ ಎರಡು ವಿರುದ್ಧ ಧೃವಗಳ ಪ್ರತಿಮೆಗಳಿವು. ಇವುಗಳಲ್ಲಿ ಮೊದಲನೆಯದನ್ನು ಶ್ರೀಧರ ತೀವ್ರ ಆತ್ಮೀಯತೆ ಹಾಗೂ ಪ್ರೀತಿಯಿಂದ ಕಟ್ಟಿಕೊಡುತ್ತಾರೆ. ಇದು ಶ್ರ‍ೇಷ್ಠ ಕತೆಗಾರನೊಬ್ಬನ ನೆನಪಿನ ಉಗ್ರಾಣದ ದ್ಯೋತಕ ಮಾತ್ರವಾಗಿಲ್ಲ. ಎನ್ಟಿ ಪುರಾಣಗಳಲ್ಲಿ ಕಾಣುವ ಆಧುನಿಕ ಬಂಡವಾಳದ ವಿಕಾರಗಳಿಗೆ ವೈದೃಶ್ಯವಾಗಿ ಶ್ರೀಧರರ ಸಂವೇದನೆ ಪೂರ್ಣವಾಗಿ ಒಪ್ಪಿಕೊಳ್ಳುವುದೇ ಈ ಕಳೆದುಹೋದ ಜಗತ್ತನ್ನು. ಕೃತಿಯ ಇನ್ನೊಂದು ಲೇಖನದಲ್ಲಿ ಅವರು ಹೇಳುವಂತೆ, ಇದು ನೆನಪೋ, ಕನಸೋ, ಭ್ರಮೆಯೋ ಅದು ಗತಕಾಲದ ಮರುಹಂಬಲವೋ ಎನ್ನುವುದು ಮುಖ್ಯವಲ್ಲ. ಅದು ಭಾವನಾತ್ಮಕವಾಗಿ ನಿಜವಾದದ್ದು. ಈ ಲೇಖನವನ್ನು ಓದುತ್ತಿದ್ದ ಹಾಗೆ ಗೆಳೆಯ ರಾಮುಗೆ ಫೋನ್ ಮಾಡಿ ಹೇಳಿದೆ, "ಶ್ರೀಧರ್ ತೀವ್ರ nostalgia ದಿಂದ ಆ ಬದುಕಿನ ಬಗ್ಗೆ ಬರೆಯುತ್ತಾರೆ. ನಮಗೆಲ್ಲಾ ಈಗ ಇದು ಸರಿಯೆನ್ನಿಸುತ್ತದೆಯಲ್ಲವೆ? ಅಂದರೆ ಇಂದಿನ ಕೇಡುಗಾಲದ ಭೀಕರವಾದ ಪತನವನ್ನು ನೋಡುತ್ತಿರುವವರಿಗೆ ಹೀಗಿಲ್ಲದಿದ್ದ, ಭಿನ್ನವಾಗಿದ್ದ ನಮ್ಮ ಬಾಲ್ಯದ ಅಥವಾ ಎರಡು ದಶಕಗಳ ಹಿಂದಿನ ಜಗತ್ತು ಕೂಡ ಒಳ್ಳೆಯದಾಗಿ ಕಾಣುತ್ತದೆಯಲ್ಲವೆ?" ರಾಮು ಹೇಳಿದರು, "ಬಹುಶಃ nostalgia ಬಿಟ್ಟು ನಮಗೆ ಈಗ ಉಳಿದಿರುವುದೇನು? ಅಥವಾ nostalgia ಆಗಿರುವ ಬದಲು ಅದೊಂದು ವಾಸ್ತವಿಕ ಮೌಲ್ಯವೇ ಆಗಿತ್ತಲ್ಲವೇ?" ರಾಮು ಹೇಳಿದ್ದು ಸರಿಯೆನ್ನಿಸುತು. ಬಹುಶಃ ಈ ತರಹದ್ದೇ ಆದ ಪಲ್ಲಟವನ್ನು ನೋಡಿ ತಳಮಳಗೊಂಡಿದ್ದ ಹತ್ತೊಂಬತ್ತನೆಯ ಶತಮಾನದ ಇಂಗ್ಲೆಂಡ್‍ನ ರೋಮ್ಯಾಂಟಿಕ್ ಕವಿಗಳು nostalgiaಅನ್ನು ಅತ್ಯಂತ ಸೃಜನಶೀಲವಾಗಿ ಬಳಸಿಕೊಂಡರು. ಕವಿ ಬ್ಲೇಕ್‍ನ darh satanic millsಗಳು ಅವನು ತಿರಸ್ಕರಿಸಿದ ಚರ್ಚುಗಳು ಆಗಿರಬಹುದು; ಅಥವಾ ಕವಿ ವರ್ಡ್ಸ್‌ವರ್ಥ್ ತೀವ್ರ ಭಾವುಕತೆಯಿಂದ ಮೋಹಿಸಿದ್ದ ಗ್ರಾಮೀಣ ಹಸಿರು ಇಂಗ್ಲೆಂಡ್‍ನ ನಾಶವನ್ನು ಬಿತ್ತಲು ಹುಟ್ಟಿಕೊಂಡಿದ್ದ ಕಾರ್ಖಾನೆಗಳು ಆಗಿರಬಹುದು. ರೋಮ್ಯಾಂಟಿಕ್‍ರಿಗೆ nostalgia ಒಂದು ಬಂಡಾಯದ, ನಿರಾಕರಣೆಯ ಮಾದರಿಯಾಗಿತ್ತು. ಬಂಡವಾಳ, ಯಾಂತ್ರೀಕರಣಗಳ ಮೂಲಕ ಪ್ರತಿಷ್ಠಾನಗೊಳ್ಳುತ್ತಿದ್ದ ಹೊಸ ಜಗತ್ತಿನ ತೀವ್ರ ವಿಮರ್ಶೆಯೂ ಆಗಿತ್ತು. ಬಹುಶಃ ಕುವೆಂಪು ಅವರ ಮಲೆನಾಡು, ಕಾರಂತರ ಕರಾವಳಿ, ಬೇಂದ್ರೆಯವರ ಧಾರವಾಡಗಳೂ ಇದೇ ಮಾದರಿಯವು.
 ಶ್ರೀಧರರ ಬರಹ ಉದ್ದಕ್ಕೂ ಧ್ಯಾನಿಸುವುದು ಒಂದು ಕಾಲದಲ್ಲಿ ವಾಸ್ತವಾಗಿದ್ದ ಕೃಷಿ ಆಧಾರಿತ ಜೀವನಕ್ರಮವನ್ನು, ಇದು ಆರಾಧನೆಯಿಂದಲ್ಲ. ಒಂದು ಗಟ್ಟಿಯಾದ ಮೌಲ್ಯ ವ್ಯವಸ್ಥೆಯು ಪಲ್ಲಟವಾದದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನವಾಗಿದೆ.
(ಮುನ್ನುಡಿ)
ಶ್ರೀಧರ ಬಳೆಗಾರ - `ಕಾಲಪಲ್ಲಟ` (ಅಂಕಣ ಬರಹಗಳು)
ಪ್ರಥಮ ಮುದ್ರಣ - 2011
ಬೆಲೆ -95
ಪುಟಗಳು -114
ಪ್ರಕಾಶಕರು

ಅಂಕಿತ ಪುಸ್ತಕ
53, ಶ್ಯಾಮಸಿಂಗ್ ಕಾಂಪ್ಲೆಕ್ಸ್
ಗಾಂಧಿ ಬಜಾರ್ ಮುಖ್ಯ ರಸ್ತೆ
ಬಸವನಗುಡಿ, ಬೆಂಗಳೂರು 56004080

080- 26617100


No comments:

Post a Comment