stat Counter



Wednesday, August 12, 2015

ಹಿರಿಯ ಸಾಹಿತಿ ಜನಾರ್ದನ ಗುರ್ಕಾರ್ ನಿಧನ

ಹಿರಿಯ ಸಾಹಿತಿ ಜನಾರ್ದನ ಗುರ್ಕಾರ್ ನಿಧನ
ಮೂಡುಬಿದಿರೆ, ಆ. 12: ಹಿರಿಯ ಸಾಹಿತಿ, ಕಾರ್ಕಳ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಜನಾರ್ದನ ಗುರ್ಕಾರ್ ಅಲ್ಪಕಾಲದ ಅಸೌಖ್ಯದಿಂದಾಗಿ ಮೈಸೂರಿನ ಸ್ವಗೃಹದಲ್ಲಿ ಬುಧವಾರ ಮುಂಜಾನೆ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಈರ್ವರು ಗಂಡು ಹಾಗೂ ಒಬ್ಬಾಕೆ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೂಲತಃ ಇಲ್ಲಿಗೆ ಸಮೀಪದ ಅಶ್ವತ್ಥಪುರ ಸಮೀಪದ ಮುದ್ರಬೆಟ್ಟಿನವರಾದ ಅವರು, ತಮ್ಮ ಆರಂಭಿಕ ಶಿಕ್ಷಣವನ್ನು ಸ್ಥಳೀಯ ವಾಣಿವಿಲಾಸ ಹಿ. ಪ್ರಾ. ಶಾಲೆಯಲ್ಲಿ ಪಡೆದು, ಬಳಿಕ ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದರು. ಕರ್ನಾಟಕ ವಿ. ವಿ.ಯಿಂದ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1958ರಲ್ಲಿ ರೈಲ್ವೆ ಇಲಾಖೆಯಲ್ಲಿ ಲೆಕ್ಕಪತ್ರ ಅಧಿಕಾರಿಯಾಗಿ ಸೇವೆಗೆ ಸೇರಿ, ವಿವಿಧೆಡೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, 1990ರಲ್ಲಿ ಮೈಸೂರಿನಲ್ಲಿ ನಿವೃತ್ತರಾಗಿ, ಅಲ್ಲಿಯೇ ನೆಲೆಸಿದ್ದರು.
50ರ ದಶಕದಲ್ಲಿ ಕಾದಂಬರಿ ಕ್ಷೇತ್ರಕ್ಕೆ ಹೊಸರೂಪ ನೀಡಿದ ಗುರ್ಕಾರ್, ಸುಮಾರು 17 ಕಾದಂಬರಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. `ಪರಾವಲಂಬಿ', `ಹಳ್ಳದಿಂದ ಹಾದಿಗೆ', `ಕಾಂತೆಯರ ಕನಸು', `ರಾಯರ ಚಾಳು', `ಕೈಮಾಂಸ', `ಗಂಗಾವತಾರ', `ಬಾವಿ ನೋಡಿದವರು', `ದಂಬನ ನಾಯಿ', `ಅಷ್ಟಗ್ರಹ ಆಸ್ಪತ್ರೆ', `ಪ್ರೇಮಾರಾಧನೆ', `ಕಂಬದ ಹುಚ್ಚು', `ಕಪಿಮುಷ್ಟಿ', `ಗುಡಿಯ ಸುತ್ತಮುತ'್ತ, `ಚೂಡಾಲಾ', `ದೃಷ್ಟಿಹೀನ', `ತವರಿನ ಕುಡಿ', `ಶೃಂಗ ಕಂಕಣ', `ಯುಕ್ತ' ಮತ್ತು `ವಿಜಯಗ್ರಾಮ' ಗುರ್ಕಾರ್ ವಿರಚಿತ ಕಾದಂಬರಿಗಳು. `ಗುಡಿಯ ಸುತ್ತಮುತ್ತ' ಕಾದಂಬರಿ ಶೃಂಗೇರಿ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಯವರಿಂದ ಮೆಚ್ಚುಗೆಗೆ ಪಾತ್ರವಾದ ಕೃತಿ.
ಮಾತ್ರವಲ್ಲದೇ, `ಕಂಬದ ಹುಚ್ಚು' ಮತ್ತು `ಬೆಳ್ಳಿಯ ಬಟ್ಟಲು' ಸಣ್ಣ ಕಥಾ ಸಂಕಲನ, `ಅಲಗು ಗಲಗು' ಮತ್ತು `ವಿಜಯೋತ್ತರ ಭಾರತಸ್ತೋತ್ರ' ಲಲಿತ ಪ್ರಬಂಧ, `ಜಾತಿ ಮತ್ತು ಭಾರತ' ವಿಚಾರ ಸಾಹಿತ್ಯ, `ಅಭಿನವ ಧನ್ವಂತರಿ ಡಾ. ಮಳಿಯೆ ಗೋಪಾಲಕೃಷ್ಣ ರಾವ್' ವ್ಯಕ್ತಿ ಚರಿತ್ರೆ, `ಎವರೆಸ್ಟ್ ವೀರ' ಮತ್ತು `ಬೆಂಜಮಿನ್ ಫ್ರಾಂಕ್ಲಿನ್' ಅನುವಾದಿತ ಕೃತಿಗಳು.
ಸಾಹಿತ್ಯ ಪರಿಚಾರಕರೂ ಆಗಿದ್ದ ಗುರ್ಕಾರ್, ಕನ್ನಡದ ಪ್ರಸಿದ್ಧ ಕಾದಂಬರಿಗಾರ್ತಿ ವಾಣಿ ಸನ್ಮಾನ ಸಮಿತಿ ಮೈಸೂರು ಇದರ ಅಧ್ಯಕ್ಷರಾಗಿ, ಖ್ಯಾತ ಆಯುರ್ವೇದ ವೈದ್ಯ ಡಾ. ಎಂ. ಗೋಪಾಲಕೃಷ್ಣ ಅಭಿನಂದನಾ ಸಮಿತಿ ಅಶ್ವತ್ಥಪುರ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈಚೆಗೆ ನಡೆದ ಅಶ್ವತ್ಥಪುರ ಶತಮಾನೋತ್ಸವ ಸಮಿತಿ ಪಂಚ ಮಹನೀಯರಲ್ಲಿ ಗುರ್ಕಾರ್ ಒಬ್ಬರಾಗಿದ್ದರು.
ಎಂದಿಗೂ ಪ್ರಚಾರ, ಪ್ರಸಿದ್ಧಿ ಬಯಸದ ಜನಾರ್ದನ ಗುರ್ಕಾರ್ ಅವರಿಗೆ ಅನೇಕ ಪ್ರಶಸ್ತಿ, ಸಂಮಾನಗಳು ಅರಸಿಬಂದಿವೆ. ಮೈಸೂರು ರೈಲ್ವೆ ನೌಕರರ ಕನ್ನಡ ಸಂಘ ಸನ್ಮಾನ (1984), ಅಶ್ವತ್ಥಪುರ ಶ್ರೀ ವಾಣಿವಿಲಾಸ ಹಿ. ಪ್ರಾ. ಶಾಲೆಯಲ್ಲಿ ಹುಟ್ಟೂರ ಸನ್ಮಾನ (1998), ಕಾಂತಾವರ ಕನ್ನಡ ಸಂಘ ಸನ್ಮಾನ (1994), ಉಡುಪಿಯಲ್ಲಿ ನಡೆದ ದ. ಕ. ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ (1995), ಶ್ರೀಕ್ಷೇತ್ರ ಅಶ್ವತ್ಥಪುರದಲ್ಲಿ ಸನ್ಮಾನ (1995), ಧಾರವಾಡ ಶ್ರೀರಾಮ ಸೇವಾಸಂಘ ಸನ್ಮಾನ (2001), ಉಡುಪಿಯಲ್ಲಿ ನಡೆದ 74ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ (2007), ಮೂಡುಬಿದಿರೆ ವರ್ಧಮಾನ ಪ್ರಶಸ್ತಿ (2008) ಇತ್ಯಾದಿ ಸಂದಿವೆ.
1998ರಲ್ಲಿ ಅಶ್ವತ್ಥಪುರದಲ್ಲಿ ನಡೆದ ಅವಿಭಜಿತ ದ. ಕ. ಜಿಲ್ಲಾ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೇಲಾಡಿ ಶಿಕ್ಷಣ ವೇದಿಕೆ ನೀಡುವ ಮಾರಣ್ಣ ಮಾಡ ಪ್ರಶಸ್ತಿ (2007)ಗೆ ಭಾಜನರಾಗಿದ್ದರು. ಮುಂಬೈ ಬಂಟರ ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ಗುರ್ಕಾರರ `ಕಣ್ಣು' ಲಲಿತ ಪ್ರಬಂಧ ಪ್ರಥಮ ಬಹುಮಾನ ಪಡೆದಿತ್ತು (2007).
ಜನಾರ್ದನ ಗುರ್ಕಾರ್ ಅವರ ಕಾದಂಬರಿಗಳನ್ನಾಧರಿಸಿ, ಅವರ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ ಜಗಳೂರು ಗೋಪಾಲದಾಸ್ `ಜನಾರ್ದನ ಗುರ್ಕಾರ್ ಅವರ ಕಾದಂಬರಿಗಳ ಅಧ್ಯಯನ'ಕ್ಕಾಗಿ ಮೈಸೂರು ವಿ. ವಿ.ಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. ಖ್ಯಾತ ವಿಮರ್ಶಕ ಡಾ| ಬಿ. ಜನಾರ್ದನ ಭಟ್ `ಹಿರಿಯ ಸಾಹಿತಿ ಜನಾರ್ದನ ಗುರ್ಕಾರ್' ಜೀವನ ಹಾಗೂ ಸಾಹಿತ್ಯ ಕೃತಿಗಳ ಬಗ್ಗೆ ಗ್ರಂಥ ರಚಿಸಿದ್ದಾರೆ. ಕಿರಣ್ ಮಂಜನಬೈಲು ಸಂಪಾದಕತ್ವದ `ಅರಳಿ ಆರೆಲೆ' ಗುರ್ಕಾರ್ ಜೀವನಗಾಥೆಗೆ ಬೆಳಕು ಚೆಲ್ಲಿದೆ. ಡಾ. ನಾ. ಮೊಗಸಾಲೆ ಸಾರಥ್ಯದ ಕಾಂತಾವರ ಕನ್ನಡ ಸಂಘ `ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಗುರ್ಕಾರ್ ಬಗ್ಗೆ ಪುಸ್ತಕ ಪ್ರಕಟಿಸಿದೆ.
ಸಂತಾಪ
ಹಿರಿಯ ಸಾಹಿತಿ ಜನಾರ್ದನ ಗುರ್ಕಾರ್ ನಿಧನಕ್ಕೆ ಕಾಂತಾವರ ಕನ್ನಡ ಸಂಘ ಸಂಚಾಲಕ ಡಾ. ನಾ. ಮೊಗಸಾಲೆ, ಸಚಿವ ಕೆ. ಅಭಯಚಂದ್ರ ಜೈನ್, ಮಾಜಿ ಶಾಸಕ ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತಿ ಅಂಬಾತನಯ ಮುದ್ರಾಡಿ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ, ದ. ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ವಿ. ಎಲ್., ಮಾಜಿ ಮೊಕ್ತೇಸರರಾದ ಡಾ. ಪಿ. ಎನ್. ಲಕ್ಷ್ಮಣ ರಾವ್, ವಿ. ಅಶ್ವತ್ಥಾಮ ಭಟ್ ಮತ್ತು ವಸಂತಕುಮಾರ್, ಪತ್ರಕರ್ತ ಕಿರಣ್ ಮಂಜನಬೈಲು, ಕೆ. ಪ್ರಭಾಕರ ಭಟ್, ವಿಮರ್ಶಕ ಡಾ| ಬಿ. ಜನಾರ್ದನ ಭಟ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ
Like · Comment · 

No comments:

Post a Comment