stat Counter



Thursday, June 30, 2016

ರಶೀದ್ ವಿಟ್ಲ - ರವಿಶಂಕರ ಒಡ್ಡಂಬೆಟ್ಟು - " ಸಾವಿನದು ಕೊನೆಯಿಲ್ಲದ ಯಾನ "

ನಮ್ಮನ್ನು ಬಿಟ್ಟು... ಹೋದರು ಒಡ್ಡಂಬೆಟ್ಟು
**********************************

44 ರ ತರುಣ, ಕವಿ ಹೃದಯಿ, ಬರಹಗಾರ, ಉಪನ್ಯಾಸಕ ರವಿಶಂಕರ ಶೆಟ್ಟಿ ಒಡ್ಡಂಬೆಟ್ಟು ಕೊನೆಗೂ ವಿಧಿಯ ಲೀಲೆಗೆ ಲೀನರಾದರು ಎನ್ನಲು ತುಂಬಾ ದುಖವಾಗುತ್ತದೆ. ಸಣ್ಣ ಪ್ರಾಯದ ಪತ್ನಿ, ಇನ್ನೂ ಏನೂ ಅರಿಯದ ಇಬ್ಬರು ಎಳೆ ಕಂದಮ್ಮಗಳು, ಅಪಾರ ಅಭಿಮಾನಿಗಳನ್ನು ಒಡ್ಡಂಬೆಟ್ಟು ಬಿಟ್ಟು ಕಾಣದ ಲೋಕಕ್ಕೆ ಮರೆಯಾದರು. ಈ ಹರೆಯದಲ್ಲಿ ಇಂತಹ ಅಪರಂಜಿ ವ್ಯಕ್ತಿಗೆ ಈ ಸಾವು ನ್ಯಾಯವೇ..?

ಅದು 2001 ರ ಸಮಯ. ನಾನು ಆ ಸಂದರ್ಭ "ವಿಜಯ ಕರ್ನಾಟಕ"ದ ವರದಿಗಾರನಾಗಿದ್ದೆ. ರವಿಶಂಕರ ಒಡ್ಡಂಬೆಟ್ಟು ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿದ್ದರು. ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರು ಮತ್ತು ಕವಿ, ಸಾಹಿತಿ ವಿ.ಗ. ನಾಯಕ ಅವರು ಒಡ್ಡಂಬೆಟ್ಟು ಅವರನ್ನು ಅಂದು ನನಗೆ ಪರಿಚಯಿಸಿದ್ದರು. ಅಂದಿನಿಂದ ಪ್ರಾರಂಭವಾದ ಒಡ್ಡಂಬೆಟ್ಟು ಸ್ನೇಹ ಈ ತನಕವೂ ಜೀವಂತವಾಗಿತ್ತು. ಒಡ್ಡಂಬೆಟ್ಟು ತುಂಬಾ ಮೃಧು ಸ್ವಭಾವಿ. ಕವಿ ಹೃದಯಿ. ಮಾತು ಕಮ್ಮಿ ಕೆಲಸ ಜಾಸ್ತಿ. ಸಾಹಿತ್ಯಾಸಕ್ತ. ಜತೆಗೆ ಸಂಘಟಕ. ಅವರ ಜೊತೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ ಅನುಭವ ನನಗಿದೆ. ತುಂಬಾ ಸಿಂಪಲ್ ಪರ್ಸನ್. ಎಲ್ಲಾ ವಿಚಾರದಲ್ಲೂ ಅಗಾಧ ಜ್ಞಾನ, ಚಾಕಚಕ್ಯತೆ ಇದ್ದರೂ ಅವರಿಗಿಂತ ಎಳೆಯರಾದ ನನ್ನಂತಹವರಲ್ಲಿ ಕೇಳಿಯೇ ಕೆಲವೊಂದು ವಿಚಾರಗಳನ್ನು ಫೈನಲ್ ಮಾಡುತ್ತಿದ್ದುದನ್ನು ಮನಗಂಡಿದ್ದೇನೆ.

ಅವರ ಹನಿಗವನ ನಮ್ಮ ಮನದ ಕದ ತಟ್ಟುತ್ತಿತ್ತು. ಕವನದ ಅವರ ನಾಲ್ಕು ಗೆರೆಗಳು ಚಿಂತಿಸುವವರಿಗೆ ನೂರು ಅರ್ಥವನ್ನು ನೀಡುತ್ತಿತ್ತು. ಬರಹದಲ್ಲಿ ತೀಕ್ಷ್ಣತೆಯಿತ್ತು. ಸಮಾಜ ಕಂಟಕರ ವಿರುದ್ಧದ ಆಯುಧವಾಗಿತ್ತು. ಎಷ್ಟೇ ದೊಡ್ಡವನಾದರೂ ಅನ್ಯಾಯವೆಸಗಿದವರಿಗೆ ಟಾನಿಕ್ ಆಗಿ ಒಡ್ಡಂಬೆಟ್ಟು ಹನಿಗವನ ಪ್ರಚಲಿತದಲ್ಲಿತ್ತು. ಹನಿಗವನದಿಂದಲೇ ಒಡ್ಡಂಬೆಟ್ಟು ಹೆಸರು, ಕೀರ್ತಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯ ಕುಬಣೂರು ಗ್ರಾಮದವರಾದ ರವಿಶಂಕರ ಒಡ್ಡಂಬೆಟ್ಟು, ಸಾಯುವ ಮುನ್ನ ಕಾವೂರು ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈ ಹಿಂದೆ ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲೂ ಉಪನ್ಯಾಸಕರಾಗಿ ಅಲ್ಲಿನ ಎನ್ನೆಸ್ಸೆಸ್ ಘಟಕವನ್ನು ಕಟ್ಟಿ ಬೆಳೆಸಿದ್ದರು. ಅವರ ಹಲವಾರು ಕವನ ಸಂಕಲನಗಳು ಬಿಡುಗಡೆಗೊಂಡು ಪ್ರಸಿದ್ಧಿ ಪಡೆದಿವೆ. ನೂರಾರು ಲೇಖನ, ಕವನಗಳು ರಾಜ್ಯದ ಪ್ರಸಿದ್ಧ ಪತ್ರಿಕೆಗಳಲ್ಲಿ, ಮ್ಯಾಗಸಿನ್ ಗಳಲ್ಲಿ ಅಚ್ಚೊತ್ತಿವೆ. ಅವರ ಸಾಹಿತ್ಯಗಳು ಸಾಹಿತ್ಯ ಸಮಾರಂಭಗಳಲ್ಲಿ ಅನುರಣಿಸಿವೆ. ಹತ್ತು ಹಲವು ಪ್ರಶಸ್ತಿ ಸನ್ಮಾನಗಳು ಒಡ್ಡಂಬೆಟ್ಟುಗೆ ಒಲಿದುಬಂದಿದೆ. ವಿಶೇಷವೆಂದರೆ ಅವರ ಪ್ರತಿಯೊಂದು ಬರಹ, ಮಾತು ಎಲ್ಲವೂ ಸೌಹಾರ್ದತೆಗೆ, ಸಾಮರಸ್ಯಕ್ಕೆ, ಸಭ್ಯ ಸಮಾಜದ ಸೃಷ್ಟಿಗೆ ಪೂರಕವಾಗಿದ್ದವು.

ಕೊನೆಯ ಕಾಲದಲ್ಲಿ ಒಡ್ಡಂಬೆಟ್ಟು ಅವರು ತಮ್ಮ ಫೇಸ್ಬುಕ್ ನಲ್ಲಿ ಬರೆದ ಸ್ಟೇಟಸ್ ನನ್ನಂತಹ ಹಲವಾರು ಅಭಿಮಾನಿಗಳ ಕಣ್ ರೆಪ್ಪೆಯನ್ನು ಒದ್ದೆ ಮಾಡಿತ್ತು. ಅದನ್ನಿಲ್ಲಿ ಯಥಾವತ್ತಾಗಿ ನೀಡುತ್ತಿದ್ದೇನೆ. ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ದಿನಾಂಕ; 16.10.2015. ವಿವರ ಈ ಕೆಳಗಿನಂತಿವೆ.
"ಕಳೆದ 6 ವರ್ಷದಿಂದ ನಾನು ಕ್ಯಾನ್ಸರ್ ಎಂಬ ಪೀಡೆಯಿಂದ ಬಳಲುತ್ತ ಇದ್ದೇನೆ. ಗುಣವಾಗುತ್ತ ಇಲ್ಲ. 50 ಸಲ ಕಿಮೊಥೆರಪಿ, 50 ಸಲ ರೇಡಿಯೊಥೆರಪಿ ಕೊಟ್ಟು ಬಳಲಿ ಬೆಂಡಾಗಿದ್ದೇನೆ. 50 ಲಕ್ಷ ಖರ್ಚಾದದ್ದಕ್ಕೆ ಸರಕಾರದ ಸಹಾಯ ಸಿಕ್ಕಿದೆ. ಐದಾರು ಸಲ ಆಪರೇಶನ್ ಮಾಡಿಯೂ ಪ್ರಯೋಜನವಾಗಿಲ್ಲ. ಆದರೂ ಆತ್ಮಬಲವನ್ನು ನಂಬಿ ಜೀವ ಉಳಿಸಿಕೊಂಡಿದ್ದೇನೆ ಚಿಕ್ಕ ಮಕ್ಕಳಿಗೋಸ್ಕರವಾಗಿ. ಸಾವು ಸಹ್ಯ. ನೋವನ್ನು ಸಹಿಸುವುದು ಹೇಗೆ? ಇದನ್ನೆಲ್ಲ ನಾನು ಹಂಚಿಕೊಳ್ಳುವುದು ಸರಿಯೇ? ನನಗಿಂತಲೂ ಕಷ್ಟದವರಿರುವಾಗ? ಆದರೂ ಮನಸ್ಸು ಹಗುರ ಮಾಡಿಕೊಳ್ಳುವುದು ಮುಖ್ಯ ತಾನೆ?"

ಒಡ್ಡಂಬೆಟ್ಟು ನಮ್ಮ ಜೊತೆಗಿಲ್ಲದಿದ್ದರೂ ಅವರು ಅಮರರಾಗಿದ್ದಾರೆ. ಅವರ ಹನಿಗವನ, ಕವಿತೆಗಳ ಪದಪುಂಜ ನಮ್ಮಿಂದ ಎಂದೂ ಮಾಸಲ್ಲ. ಸ್ನೇಹಜೀವಿ, ಕವಿಮನಸ್ಸಿನ ಅಪರೂಪದ ವ್ಯಕ್ತಿ ಸದಾ ನಮ್ಮೊಳಗಿರುತ್ತಾರೆ. ಒಡ್ಡಂಬೆಟ್ಟು ಅಕಾಲಿಕ ಸಾವು ಅವರ ಈ ಕೆಳಗಿನ ಹನಿಗವನವನ್ನು ಮತ್ತೆ ನೆನಪಿಸಿತು.
"ಲೋಕದ ಪಯಣದಲ್ಲಿ
ಬದುಕು ಒಂದು
ಸಣ್ಣ ನಿಲ್ದಾಣ
ಸಾವಿನದು
ಕೊನೆಯಿಲ್ಲದ ಯಾನ"

-ರಶೀದ್ ವಿಟ್ಲ.

No comments:

Post a Comment