stat Counter



Tuesday, September 20, 2016

ಕಣ್ಣ ಹನಿಯೊಂದಿಗೆ... - ಚಂದ್ರಿಕಾ ನಾಗರಾಜ್

ಕಣ್ಣ ಹನಿಯೊಂದಿಗೆ...
                                          -ಚಂದ್ರಿಕಾ ನಾಗರಾಜ್
"ಇಂದಿನ ಫಲಿತಾಂಶ ನನ್ನ ಬದುಕನ್ನು ನಿರ್ಧರಿಸುತ್ತದೆ" ಭಯದಲ್ಲಿ ಕಂಪಿಸಿ ಕಲ್ಲೆಡವಿ ಮುಗ್ಗರಿಸಿ ಬೀಳುತ್ತಿದ್ದವಳನ್ನು ಪಕ್ಕದಲ್ಲಿ ಹೆಜ್ಜೆ ಹಾಕುತ್ತಿದ್ದ ಗೆಳತಿ ಅಪೂರ್ವ ಹಿಡಿದುಕೊಂಡಳು. ಎಡಗಾಲ ಹೆಬ್ಬೆರಳು ಒಡೆದು ರಕ್ತ ಚಿಮ್ಮಿತು.
" ಅನಾಮಿಕ ನೀನು ಫಸ್ಟ್ ಕ್ಲಾಸಲ್ಲಿ ಪಾಸಾಗ್ತಿ ಬಿಡೆ. ಎಡಗಾಲು ಎಡವಿದ್ರೆ ಒಳ್ಳೇದಂತೆ ಕಣೇ" ಎಂದು ಅಪೂರ್ವ ನುಡಿದಾಗ ನಾನು ನೋವಿನಿಂದ ತುಟಿ ಕಚ್ಚಿಕೊಂಡಿದ್ದೆ. "ನಿಮ್ಗೆಲ್ಲ ಏನಮ್ಮ ಪಾಸಾಗ್ತಿರಾ...ಕಮ್ಮಿ ಮಾಕ್ರ್ಸ್ ಬಂದ್ರೆ ರಿವ್ಯಾಲುವೇಷನ್ಗೆ ಹಾಕ್ತಿರ..ಆದ್ರೆ ನಮ್ಗೆ ಹಾಗಾ? ಪಾಲಿಗೆ ಬಂದಿದ್ದು ಪಂಚಾಮೃತ. ಕಮ್ಮಿ ಮಾಕ್ರ್ಸ್ ಬಂದ್ರೆ ರಿವ್ಯಾಲುವೇಷನ್ಗೆ ಹಾಕೋಕೆ ದುಡ್ಡು ಖರ್ಚು ಮಾಡೋಷ್ಟು ತಾಕತ್ತಿದ್ಯಾ? ಒಟ್ನಲ್ಲಿ ದೇವ್ರತ್ರ ಬೇಡೋದು ಹಾಲಲ್ಲಾದ್ರೂ ಹಾಕು ನೀರಲ್ಲಾದರು ಹಾಕು ಅಂತ ..." ಆಕೆಯ ವೇದ ವಾಕ್ಯ ಕೇಳಿ ಬಂದರೂ ಆಕೆಯ ಮಾತಿನಲ್ಲಿದ್ದ ಸತ್ಯಾಂಶದ ಅರಿವಾಗಿತ್ತು ನನಗೆ. ಮತ್ತೆ ಮಾತು ಮುಂದುವರಿಸುತ್ತಾ, "ನಿನ್ನಪ್ಪ ಅಮ್ಮ ಡಾಕ್ಟ್ರು ಇಂಜಿನಿಯರ್ ಆಗಿರೋದೆ ವೇಸ್ಟ್ ಕಣೇಮನೇಲಿ ಕಂಪ್ಯೂಟರ್ ಇದ್ರೂ ಅದ್ಕೆ ಇಂಟರ್ನೆಟ್ ಹಾಕ್ಸ್ಬಾರ್ದ? ಹೋಗ್ಲಿ ನಿಂಗೊಂದು ಮೊಬೈಲ್ನ್ನಾದ್ರೂ ತೆಕ್ಕೊಡ್ಬಾರ್ದಾ? ನಮ್ಗಾದ್ರೆ ಅದೆಲ್ಲ ತಗೋಳೋ ಭಾಗ್ಯ ಇಲ್ಲ. ನಿಮ್ಗೆ ಹಾಗಾ? ಇವಾಗ ನೋಡು ರಿಸಲ್ಟ್ ನೋಡೋಕೆ ಕಾಲೇಜ್ಗೆ ಹೋಗ್ಬೇಕು. ಬೇರೆಯವ್ರತ್ರ ರಿಜಿಸ್ಟರ್ ನಂಬರ್ ಕೊಡೋಣಾಂದ್ರೆ ಕಮ್ಮಿ ಮಾಕ್ರ್ಸ್ ಬಂದ್ರೆ ಆಡ್ಕೋತ್ತಾರೆನೊಂಥ ಭಯ. ಏನ್ ಹಣೆ ಬರಹಾನೋ ನಮ್ದು. ಒಬ್ಬೊಬ್ರದ್ದು ಒಂದೊಂದು ತರ ಲೈಫ್ ಆದ್ರೂ ಬದುಕ್ಬೇಕು." ಅಪೂರ್ವ ಗೊಣಗುತ್ತಲೇ ಇದ್ದಳು. ಕಾಲೇಜಿನ ನೋಟೀಸ್ ಬೋರ್ಡಿನ ಮುಂದೆ ಇಬ್ಬರೂ ನಿಂತಿದ್ದೆವು.
"ಅನಾಮಿಕಾ ನಂಗೆ ಕಂಗ್ರಾಟ್ಸ್ ಹೇಳೆ, 89% ಕಣೇ ನಂಗೆ. ಆದ್ರೂ ಕಮ್ಮಿ ಆಯ್ತು ಪರವಾಗಿಲ್ಲ. ಇವತ್ತು ಪಪ್ಪ ಅಮ್ಮ ಎಷ್ಟು ಖುಷಿಯಾಗ್ತಾರೆ ಗೊತ್ತಾ ? ಆದ್ರೂ ಆಟ್ರ್ಸ್ ಅಲ್ವಾ ಎಲ್ರು ಮೂಗು ಮುರಿತಾರೆ ನೋಡು" ಖುಷಿಯಲ್ಲಿ ಹಾರಾಡುತ್ತಿದ್ದ ಅಪೂರ್ವ, "ಹೇಯ್ ಏನಾಯ್ತೆ ನಿಂಗೆ?" ಗರಬಡಿದವಳಂತೆ ನಿಂತಿದ್ದ ನನ್ನನ್ನು ಅಲುಗಾಡಿಸಿದಳು. ನಾನು ಕುಸಿದು ಕುಳಿತ್ತಿದ್ದೆ. ಕಣ್ಣು ತೆರೆದಾಗ, "ಅನಾಮಿಕ ಡೊಂಟ್ ವರಿ, ರಿವ್ಯಾಲ್ಯುವೇಷನ್ಗೆ ಹಾಕಿದ್ರಾಯ್ತು ಇಲ್ಲಾಂದ್ರೆ ರಿಎಕ್ಸಾಂ ಬರಿ. ನಿಂಗೊತ್ತಾ ನಾನಾಗಿದ್ರೆ ರಿಎಕ್ಸಾಂ ಬರಿತಾನೇ ಇರ್ಲಿಲ್ಲ ಯಾರ್ ಪುನಃ ಓದ್ತಾರೆ. " ಅಂತಹ ಸನ್ನಿವೇಶದಲ್ಲಿ ನನ್ನನ್ನು ನಗಿಸ ಹೊರಟವಳು ನನ್ನ ಮೌನ ಕಂಡು ಸೊಲೊಪ್ಪಿಕೊಂಡು, "ಎದ್ದೇಳು ನಡಿ, ಹೋಗಿರೋದು 2 ಸಬ್ಬೆಕ್ಟ್ಸ್ನಲ್ಲಿ ತಾನೇ, ಕೆಮೆಸ್ಟ್ರೀ, ಮ್ಯಾಥ್ಸ್ ಅಷ್ಟೇ ತಾನೆಅಲ್ಲಾ ನಾಲ್ಕೈದು ಸಬ್ಜೆಕ್ಟ್ನಲ್ಲಿ ಡುಮ್ಕಿ ಹೊಡ್ದವ್ರೂ ಇದ್ದಾರೆ. ನಿನೊಳ್ಳೆ ಆಕಾಶಾನೇ ತಲೆ ಮೇಲೆ ಬಿದ್ದವ್ರಂಗೆ ಕೂತಿದ್ದೀಯಲ್ಲಾ" ಎನ್ನುತ್ತಿದ್ದಂತೆ ಅಲ್ಲೆ ರಿಸಲ್ಟ್ ನೋಡುತ್ತಿದ್ದ ಹುಡುಗ ತಲೆ ತಿರುಗಿ ಬಿದ್ದಿದ್ದ. ಆತನನ್ನು ಉಪಚರಿಸುವ ಕಾರ್ಯಕ್ಕೆ ಹೋದಾಕೆ ತಲೆ ಚಚ್ಚಿಕೊಂಡು, "ದೇವ್ರು ಎಂತೆಂಥ ಜೀವಿಗಳನ್ನ ಸೃಷ್ಟಿಸಿರ್ತಾನೋ...ಅಲ್ಲಾ ಫೇಲಾದೆ ಅಂಥ ಟೆನ್ಷನ್ನಲ್ಲಿ ನೀನು ತಲೆ ತಿರುಗಿ ಬಿದ್ರೆ, ಅವ್ನು ಫೇಲಾಗ್ತೀನೀಂತ ಬಂದ್ನಂತೆ ನೋಡಿದ್ರೆ ಫಸ್ಟ್ ಕ್ಲಾಸಲ್ಲಿ ಪಾಸಾದೇಂತ ಖುಷೀಲಿ ತಲೆ ತಿರ್ಗಿ ಬಿದ್ದ. ಉಫ್..!" ನನಗೆ ನಗು ಬಂತಾ...?! ಇಲ್ಲ ಕಣ್ಣು ಹನಿಯುತಿದೆ. "ಇಂದು ನನ್ನ ಬದುಕಿನ ಅಂತ್ಯ"



=========
ಪದ್ಮಜಮ್ಮ ನನ್ನ ಹೆಸರಿನಲ್ಲಿ ದೇವರಿಗೆ ಅರ್ಚನೆ ಮಾಡಿಸಲು ಹೋಗಿರಬೇಕು. ಡಾಕ್ಟರ್ ಇಂಜಿನಿಯರ್ ನನಗೆ ಸಹಸ್ರ ನಾಮಾರ್ಚನೆ ಮಾಡಲಿದ್ದಾರೆ ಎಂಬುದು ಆಕೆಗ್ಹೇಗೆ ಗೊತ್ತಾಗಬೇಕು? ನನ್ನ ಕೋಣೆ ಹೊಕ್ಕು ಚಿಲಕ ಹಾಕಿಕೊಂಡೆ. ಖಾಲಿ ಡೈರಿಯೊಂದನ್ನ ಹೊರತೆಗೆದೆ.
" ದಿ ಗ್ರೇಟ್ ಇಂಜಿನಿಯರ್ ಅಖಿಲೇಶ್ ಶರ್ಮ ಹಾಗೂ ಡಾಕ್ಟರ್ ಅನುಸೂಯ ಶರ್ಮರವರಿಗೆ ನನ್ನ ನಮಸ್ಕಾರಗಳು.
ನಮ್ಮಲ್ಲಿ ತುಂಬಾ ಮಂದಿ ತಂದೆ ತಾಯಿಯರು ಯೋಚಿಸೋದು ತಮ್ಮ ಮಕ್ಕಳಿಗೆ ಹೊಟ್ಟೆ ಬಟ್ಟೆಗೇನೂ ಕೊರತೆ ಇಲ್ಲ. ಅವರು ಸುಖವಾಗಿದ್ದಾರೆ. ಅಷ್ಟಕ್ಕೂ ನಾವು ಕಷ್ಟ ಪಡೋದ್ಯಾಕೆ ಅವ್ರಿಗಾಗೆ ತಾನೆ. ಆದ್ರೆ ಚಿಕ್ಕ ತಪ್ಪು ಅಂದುಕೊಂಡ ದೊಡ್ಡ ತಪ್ಪನ್ನ ದೊಡ್ಡವ್ರು ಅನ್ನಿಸಿಕೊಂಡವರೇ ಮಾಡಿ ದಡ್ಡತನ ಮಾಡಿರ್ತಾರೆ. ಅಂಥವರಲ್ಲಿ ನೀವೂ ಹೊರತಲ್ಲ.
ಅಮ್ಮ ಡಾಕ್ಟರ್, ಅಪ್ಪ ಇಂಜಿನಿಯರ್ ದೊಡ್ಡದಾದ ಬಂಗಲೆ. ಕೆಲಸಕ್ಕೆ ಆಳು ಕಾಳುಗಳಿದ್ದಾರೆ.  'ಅನಾಮಿಕ' ಒಬ್ಬ ರಾಜಕುಮಾರಿ ಎಂದೇ ಹೊರ ಜಗತ್ತು ಹುಬ್ಬೇರಿಸುತ್ತದೆ ನನ್ನನ್ನು ಕಂಡು. ಒಳಗಿನ ಬೇಗೆ ಹೊರಗಿನ ಹವಾಮಾನಕ್ಕೆಲ್ಲಿ ಅರ್ಥವಾಗಬೇಕು ಅಲ್ವಾ? ಅದೆಷ್ಟೋ ಒಳ ಜಗತ್ತಿನ ಸತ್ಯಗಳು ಹೊರ ಜಗತ್ತಿಗೆ ಹೇಗರಿವಾಗಬೇಕು? ನಾವೆಲ್ಲ ಮೇಲ್ನೋಟದ ಸುಂದರತೆಗೆ ಮಾರು ಹೋಗುವವರು, ಅದನ್ನೆ ಸತ್ಯವೆಂದು ನಂಬುವವರು.
ತೊಟ್ಟಿಲು ತೂಗಿದ ಬಳೆಗಳ ಸದ್ದು, ನಿದ್ರಿಸಲು ಲಾಲಿ ಹಾಡಿದ ದನಿ, ಬೆಳದಿಂಗಳೂಟ ಮಾಡಿಸಿದ ಮುದ್ದು ಕೈಗಳು ನನಗೀಗಲೂ ನೆನಪಿವೆ. ಜೀವ ಹೊರಗಿನ ಪ್ರಪಂಚಕ್ಕೆ ನಮ್ಮ ಮನೆ ಕೆಲಸದಾಳು. ಆದ್ರೆ, ನನಗೆ ಮಾತ್ರ ಅಮ್ಮ, ಪದ್ಮಜಮ್ಮ. ಆದ್ರೆ, ಡಾ||ಅನುಸೂಯ ನನಗೆ ಮಮ್ಮಿ. ಕೂಸುಮರಿ ಮಾಡಿದ, ಅಂಬಾರಿ ಹೊತ್ತ ಪದ್ಮಜಮ್ಮ ನನಗೆ ಅಪ್ಪನಂತೆ. ಅಖಿಲೇಶ್ ಶರ್ಮ ನನ್ನ ಡ್ಯಾಡಿ. ಯಾಕೆ ಹೀಗೆ?
ಒಂದು ನಿಜ ಸಂಗತಿ ಏನೆಂದರೆ, ನಿಮ್ಮಿಬ್ಬರ ಮುಖವನ್ನು ನಾನು ಇದುವರೆಗೂ ಸರಿಯಾಗಿ ಕಂಡಿಲ್ಲ. ನಾನು ನೋಡಲು ಮಮ್ಮಿಯಂತಾ? ಡ್ಯಾಡಿಯಂತಾ? ನನ್ನ ಕೆಳದುಟಿಯ ಕೆಳಗಿರುವ ಮಚ್ಚೆ ಮಮ್ಮಿಗಿದ್ಯಾ? ನನಗೆ ಬಂದಿರುವ ಬಿಲ್ಲಿನಂತಹ ಹುಬ್ಬು ಡ್ಯಾಡಿಯದೋ? ಗೊತ್ತಿಲ್ಲ. ನಿಮಗೆ ಕೆಲಸ ಮುಖ್ಯ, ಹಣ ಮುಖ್ಯ. ಒಂದು ಮುಂಜಾನೆ ಹೋದರೆ ಬರುತ್ತಿದ್ದುದು ರಾತ್ರಿ ಯಾವಾಗಲೋ...ಯಾರಿಗೂ ಗೊತ್ತಿಲ್ಲ. ಡ್ಯಾಡಿಯದೊಂದು ಮಗ್ಗುಲಾದರೆ ಮಮ್ಮಿದು ಮತ್ತೊಂದು ಮಗ್ಗುಲು. ಆದರೊಂದು ದಿನ ನಾನು ಜ್ವರ ಬಂದು ಮಲಗಿದ್ದಾಗ ಇಬ್ಬರೂ ಒಂದೊಂದು ಘಳಿಗೇಲಿ ಬಂದು ಹಣೆಗೆ ಮುತ್ತಿಕ್ಕಿ ತಲೆ ಸವರಿ ಹೋದದ್ದು ಇಂದಿಗೂ ನೆನಪಿದೆ.
ಎಲ್ಲ ಮಕ್ಕಳನ್ನು ಶಾಲಾ ವಾಹನ ಹತ್ತಿಸಲು, ಮನೆಗೆ ವಾಪಾಸು ಕರೆತರಲು ಬರುತ್ತಿದ್ದು  ಅವರ ತಾಯಂದಿರು. ಆದರೆ, ನನ್ನೊಡನೆ ಬರುತ್ತಿದ್ದುದು ಪದ್ಮಜಮ್ಮ. ಶಾಲಾ ಸಮಾರಂಭಗಳಲ್ಲಿ ನಿಮ್ಮ ಹೆಸರು ದಾನಿಗಳ ಪಟ್ಟಿಯಲ್ಲಿ ಬರುತ್ತಿದ್ದುದು ಮಾತ್ರ. ವೇದಿಕೆಯ ಮುಂಭಾಗದಲ್ಲಿ ನನ್ನ ಕಾರ್ಯಕ್ರಮ ವೀಕ್ಷಿಸಲು ಹಾಜರಾಗುತ್ತಿದ್ದುದು ಪದ್ಮಜಮ್ಮ ಮಾತ್ರ.
ನೀವು ಟ್ಯೂಷನ್ಗೆಂದು ನೇಮಿಸಿದ ಅರವಿಂದ ಸರ್ ನೋಡಲು ತುಂಬಾ ಸಭ್ಯಸ್ಥನಂತಿದ್ದ ಮೊದ ಮೊದಲು ಆತ ನನ್ನೊಡನೆ ವರ್ತಿಸುತ್ತಿದುದರ ಅರಿವು ನನಗೆ ಆಗುತ್ತಿರಲಿಲ್ಲ. ಆದರೆ ಪದ್ಮಜಮ್ಮನಿಗೆ ಮಾತ್ರ ಆತನ ವರ್ತನೆ ಗಮನಕ್ಕೆ ಬಂದಿತ್ತು. ಆತನನ್ನು ಮನೆಗೆ ಬರದಂತೆ ತಡೆದಳು. ಕಾರಣ ಕೇಳದೆ ನೀವಿಬ್ಬರೂ ಆಕೆಯನ್ನ ದಂಡಿಸಿದ್ರಿ ಎಂಬುದು ನನಗೆ ಗೊತ್ತಾಯಿತು. ಯಾಕಾಗಿ ಡ್ಯಾಡಿ? ಒಬ್ಬ ಸ್ನೇಹಿತನ ಮಗಳು ತನ್ನ ಮಗಳಂತೆ ಭಾವಿಸುವ ಸಹೃದಯ ನಿಮ್ಮ ಖಾಸಾ ದೋಸ್ತ್ ಅರವಿಂದ ಶೆಣೈಗಿಲ್ಲವೇ? ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆಯಂತೆ ಕೇಳುತ್ತಿದ್ದೇನೆ. ಆತನಿಗೂ ಅಕ್ಕ, ತಂಗಿ, ಹಾಗೂ ನನ್ನಂತೆ ಇರುವ ಮಗಳಿಲ್ಲವೇ ? ಯಾಕೆ ಪರ ಹೆಣ್ಣು ಮೋಹದ ಬೊಂಬೆಯಂತೆ ಕಾಣುತ್ತಾರೆ ಪುರುಷ ಪ್ರಧಾನ ಸಮಾಜದಲ್ಲಿ? ನಮ್ಮ ಸಂಸ್ಕøತಿ, ಸದಾಚಾರಗಳ ಬಗ್ಗೆ ಮಾತಾಡಿದರೆ ಸಾಕಾ?ಹೆಣ್ಣಿಗೆ ಗೌರವ ಕೊಡುವುದು ನಮ್ಮ ಸಂಸ್ಕøತಿಯಲ್ಲವೇ?
ಮಾತ್ತೊಂದು ದಿನ ನನಗೆ ಶಾಕ್ ಆಗುವಂತಹ ಒಂದು ವಿಷಯ ಕಿವಿಗೆ ಬಿತ್ತು. ಯಾರಿಂದ ಎಂಬುದು ಬೇಡವಾದ ವಿಚಾರ. ಆದರೆ, ಮಮ್ಮಿ ನಿನ್ನಿಂದ ಇಂಥ ಘೋರ ಅನ್ಯಾಯವೇ?
ಕುಮುದಾ ಆಂಟಿಯನ್ನ ಮನೆಯವರೆಲ್ಲರು ಬಲವಂತದಿಂದ ನಿನ್ನೆದುರು ನಿಲ್ಲಿಸಿ ಒಡಲಲ್ಲಿರುವುದು ಹೆಣ್ಣೋ, ಗಂಡೋ ಎಂದು ಪರೀಕ್ಷಿಸಲೆಂದು ತಿಳಿಸಿದಾಗ ನೀನು ಅಪರಾಧವೆಸಗುತ್ತದ್ದೇನೆಂಬುದು ಗೊತ್ತಿದ್ದೂ ಪರೀಕ್ಷಿಸಿ ಹೆಣ್ಣು ಎಂದು ದೃಢ ಪಡಿಸಿದೆ. ಆಗ ಅವರು ತೆಗೆಯುವಂತೆ ಹೇಳಿದಾಗ ನೀನು ತಾನೊಬ್ಬ ಹೆಣ್ಣು ಮಗುವಿನ ತಾಯಿ ಎಂಬುದನ್ನ ಮರೆತು ಭ್ರೂಣಹತ್ಯೆ ಮಾಡಿ ದೊಡ್ಡ ಪಾಪಕ್ಕೆ ಗುರಿಯಾದೆ. ಅಪರಾಧ ಹೊರ ಬರಲಿಲ್ಲ. ಯಾರಿಗೂ ಗೊತ್ತಾಗಲಿಲ್ಲ. ಆದರೆ, ಎಲ್ಲರಿಗೂ ಕಂಡು ಕಾಣದಂತೆ ಉಳಿದದ್ದುಆ ತಾಯಿ ಕುಮುದಾಳ ಕಣ್ಣಹನಿ ಮಾತ್ರ!
ಯಾಕೆ ಹೀಗಾಗುತ್ತಿದೆ? ಹೆಣ್ಣು ಹುಟ್ಟಿದರೆ ಯಾರಿಗೇನು ನಷ್ಟ? ಆಕೆಗೆ ಬದುಕುವ ಹಕ್ಕಿಲ್ಲವೇ? ಆಕೆ ಹೊರೆ ಎಂದ್ಯಾಕೆ ಭಾವಿಸಬೇಕು? ಒಬ್ಬ ಹೆಣ್ಣು ಇರದೆ ಇರುತ್ತಿದ್ದರೆ ಇಂದು ತಾಯಿಯೇ ದೇವರೆನ್ನಲಾಗುತ್ತಿತ್ತೆ? ಯಾರನ್ನಕರೆಯಬೇಕಿತ್ತು ಅಮ್ಮ ಎಂದು? ಯಾರಿಂದ ಹುಟ್ಟುತ್ತಿದ್ದೆವು ನಾವುಗಳು.
ಅಂದೊಂದು ದಿನ ನಾನು ಹಠ ಹಿಡಿದು ಪದ್ಮಜಮ್ಮನ ಜೊತೆ ತರಕಾರಿ ತರಲೆಂದು ಮಾರ್ಕೆಟ್ಗೆ ಹೋಗಿದ್ದೆ. ಬರುತ್ತಿದ್ದ ದಾರಿಯಲ್ಲಿ ಡ್ಯಾಡಿ, ನೀನು ಕಟ್ಟಿಸುತ್ತಿದ್ದ ಬೃಹತ್ ಗಾತ್ರದ ಕಟ್ಟಡವನ್ನು ನೋಡಿ ಕಂಗಾಲಾದೆ. ಕಾರಣ ಅಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದುದು ಬಾಲ ಕಾರ್ಮಿಕರು. ಹೇಗೆ ಮನಸ್ಸಾಯಿತು? ಮನೆಯಲ್ಲಿದ್ದ ಹೆಣ್ಣು ಮಗಳ ವಯಸ್ಸಿನ ಮಕ್ಕಳನ್ನು ಕರೆದು ಕೆಲಸ ಮಾಡಿಸಲು ಡ್ಯಾಡಿನಿಜ ಹೇಳ ಬೇಕೆಂದ್ರೆ ಅವರನ್ನೆಲ್ಲ ಶಾಲೆಗೆ ಕಳಿಸುವಷ್ಟು ದುಡ್ಡು ನಿನ್ನ ಬಳಿ ಇದೆ, ಆದರೆ ದೊಡ್ಡತನ ಮಾತ್ರ ಇಲ್ಲವಷ್ಟೆ.
ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸಲ್ಲಿ ಪಾಸಾದ ಸಂಭ್ರಮ ನನ್ನ ಕಣ್ಣಲ್ಲಿತ್ತು. ಪದ್ಮಜಮ್ಮನ ಮೊಗದಲ್ಲಿತ್ತು. ಆದರೆ, ನಿಮಗಿಬ್ಬರಿಗೂ ನಾನು ಪಡೆದಿದ್ದ ಮಾಕ್ರ್ಸ್ ಸಾಕಾಗಲಿಲ್ಲ. ಬೈದಿರಿ, ಹೊಡೆದಿರಿ. ಸತ್ತೇ ಹೋಗುವಷ್ಟು ಬೇಸರವಾಗಿತ್ತು. ಆದರೆ, ಪದ್ಮಜಮ್ಮನ ಮಡಿಲು ನೋವ ಮರೆಸಿತ್ತು. ನನಗೆ ಆಟ್ರ್ಸ್ ವಿಭಾಗಕ್ಕೆ ಸೇರಿ ಒಬ್ಬ ಕನ್ನಡ ಉಪನ್ಯಾಸಕಿಯಾಗಿ ಹೊರ ಹೊಮ್ಮಬೇಕೆಂಬ ಆಸೆ. ಒಬ್ಬ ಡಾಕ್ಟರ್ ಇಂಜಿನಿಯರ್ ಮಗಳು ಆಟ್ರ್ಸ್ ತೆಗೆದುಕೊಳ್ಳುವುದೇ? ನೋ ಛಾನ್ಸ್, ನೀನು ಸೈನ್ಸ್ ತಗೊಬೇಕು, ನನ್ನ ಥರ 'ಡಾಕ್ಟರ್' ಆಗ್ಬೇಕು ಅಂತ ನೀನು ಹೇಳಿದ್ದೆ ಮಮ್ಮಿ. ಆದರೆ ಡ್ಯಾಡಿ, ನೀನು ನನ್ನ ಹಾಗೆ ಇಂಜಿನಿಯರ್ ಆಗ್ಬೇಕು ಅಂದಿದ್ದೆ. ಇಬ್ಬರ ಕನಸುಗಳ ಒಬ್ಬಳೇ ಮಗಳಾದ ನಾನು ಹೇಗೆ ಈಡೇರಿಸಲಿ? ನಿಮ್ಮ ಆಯ್ಕೆಯಂತೆ ನಾನು ಸೈನ್ಸ್ ತೆಗೆದುಕೊಂಡೆ. ನನ್ನ ಆಸೆ ಕಮರಿತ್ತು. ಯಾಕೆ ಆಟ್ರ್ಸ್ ತೆಗೆದುಕೊಂಡವರನ್ನ ದಡ್ಡರೆನ್ನಲಾಗುತ್ತದೆ? ಎಲ್ರು ಡಾಕ್ಟರ್ ಇಂಜಿನಿಯರ್ಗಳಾದ್ರೆ
ಸಮಾಜದಲ್ಲಿ ಇತರೆ ಕೆಲಸಗಳನ್ನು ಯಾರು ಮಾಡ್ತಾರೆ? ಸೈನ್ಸ್ ಎಂದರೆ ಪ್ರತಿಷ್ಠೆಯ ಸಂಕೇತವೇ? ತಮ್ಮ ಮಕ್ಕಳು ಸೈನ್ಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಂದಿಯ ನಡುವೆ ನಮ್ಮ ಮಕ್ಕಳು ಆಟ್ರ್ಸ್ ಎನ್ನುವ ತಂದೆ ತಾಯಿಯರ ದನಿ ಏಕೆ ಎಲ್ಲೋ ಕಳೆದು ಹೋಗುತ್ತವೆ.? ಸೈನ್ಸ್ ಓದಿದವರು ಮಾತ್ರ ಜಾಣರೇ? ನಿಜ ಹೇಳಬೇಕೆಂದರೆ ದೇವರು ಪ್ರತಿಯೊಬ್ಬರನ್ನು ಒಂದಲ್ಲ ಒಂದು ಕ್ಷೇತ್ರದಲ್ಲಿ ಬುದ್ದಿವಂತರನ್ನಾಗಿಸುತ್ತಾನೆ. ಆದರೆ, ಅದನ್ನು ಗುರುತಿಸುವ ಸೂಕ್ಷ್ಮ ಬುದ್ಧಿ ಇಲ್ಲದೇ ದಡ್ಡತನ ಮೆರೆಯುತ್ತಿದ್ದೇವಲ್ಲವೇ?
ಅವತ್ತೊಂದಿನ ಮನೆಗೆ ಬೇಗ ಬಂದು ಯಾರೋ ಹುಡುಗನ ಜೊತೆ ಹರಟ್ತಿದ್ಯಂತಲ್ಲಾ ಯಾರವ್ನು ಎಂದು ಹೊಡೆದ್ರಿ. ಆದ್ರೆ ನನಗೆ ಉತ್ತರಿಸುವ ಅವಕಾಶ ಕೊಡಲಿಲ್ಲ. ಆದ್ರೆ ಇವತ್ತು ಹೇಳ್ತಿದ್ದೀನಿ ಡ್ಯಾಡಿ, ಅವ್ನು ಅಶುತೋಷ್, ನಿನ್ನ ಸ್ವಂತ ಅಣ್ಣನ ಮಗ ಅಂದ್ರೆ ನನ್ನ ಅಣ್ಣ. ಅವನು ಸಿಕ್ಕಾಗ ನನಗೆ ನಿಧಿ ಸಿಕ್ಕಷ್ಟು ಸಂತೋಷವಾಗಿತ್ತು. ಸಂಬಂಧಗಳ ಅಗತ್ಯವೇ ಇರದ ನಿಮ್ಮಂತಹ ಬ್ಯುಸಿ ಲೈಫ್ನವರಿಗೆ ಏನೂ ಅನ್ನಿಸಿರಲಿಕ್ಕಿಲ್ಲ. ಸಂಬಂಧಗಳು ಹಳಸುತ್ತಿರುವುದು ನಮ್ಮದೇ ಮೊಂಡುತನದಿಂದ ಅಲ್ಲವೇ? ನಿಮಗೆ ಸಂಬಂಧಗಳಿಗಿಂತಲೂ ಪ್ರತಿಷ್ಠೆ ಮುಖ್ಯ.
ಹೌದು, ಅದೆಷ್ಟೋ ತಪ್ಪುಗಳು ನಿಮಗೆ ಗೊತ್ತಿಲ್ಲದೆಯೋ ಗೊತ್ತಿದ್ದೋ ನಡೆದು ಬಿಟ್ಟಿವೆ. ಅದರ ಫಲಗಳನ್ನೆಲ್ಲ ನಾನು ಅನುಭವಿಸಿದೆ. ಜೊತೆಗೆ ಪದ್ಮಜಮ್ಮ ಕೂಡ. ಇಂತಹ ತಪ್ಪುಗಳ ಅದೆಷ್ಟೋ ತಂದೆ ತಾಯಿಯರು ಇಂದು ಮಾಡುತ್ತಿದ್ದಾರೆ. ಸಮಾನತೆಯ ನಿಲುವಿಂದ ಹೊರಗಡಿ ಇಟ್ಟ ಹೆಣ್ಣು ಪುರುಷನಂತೆ ತಾನು ಹಗಲು ರಾತ್ರಿ ಹೊರಗಡೆ ದುಡಿತಾ ಮನೆಯ ಜವಾಬ್ದಾರಿ ಕೆಲಸದಾಳುಗಳ ಮೇಲೆ. ಮಗುವಿನ ಜವಾಬ್ದಾರಿ ಇತರ ಸಂಘ-ಸಂಸ್ಥೆಗಳ ಮೇಲೆ ಅಥವಾ ಕೆಲಸದವಳ ಮೇಲೆ. ಅವರು ಹೇಗೆ ತಮ್ಮ ಮಕ್ಕಳನ್ನು ಪೋಷಿಸುತ್ತಾರೆಂಬ ಆಲೋಚನೆಯೂ  ಇರುವುದಿಲ್ಲ. ಎಲ್ಲರಿಗೂ ಪದ್ಮಜಮ್ಮನಂತಹ ಸಾಕು ತಾಯಿ ಸಿಗಲಾರಳಲ್ಲವೇ?
ನಿಮ್ಮಿಬ್ಬರದೂ ಪ್ರೇಮ ವಿವಾಹವಂತೆ. ಪರಸ್ಪರ ಮೆಚ್ಚಿ, ಅರ್ಥ ಮಾಡಿಕೊಂಡು ಆದ ವಿವಾಹವಂತೆ. ಆದರೆ, ನನಗನಿಸುವುದು ನೀವಿಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುವುದು ಇನ್ನೂ ಇತ್ತು. ಅದೆಷ್ಟೋ ಪಾರ್ಟಿಗೆ ಡ್ಯಾಡಿ ಸಂಗಾತಿ ಜೊತೆಯಿಲ್ಲದೆ ನೋವಿಂದ ಹೋಗುತ್ತಿದ್ದರು. ಅದೆಷ್ಟೋ ರಾತ್ರಿಗಳಲ್ಲಿ ಅನುಮಾನಿಸೋ ಗಂಡನ ಮೇಲಿನ ಬೇಸರದಿಂದ ಮಮ್ಮಿ ತಲೆದಿಂಬಿನ ಮೇಲೆ ಕಣ್ಣೀರ ಹರಿಸುತ್ತಿದ್ದರು. ಇವೆಲ್ಲವನ್ನು ಮರೆಯಲ್ಲಿ ನಿಂತು ನಾನು ನೋಡುತ್ತಿದ್ದೆ. ಪದ್ಮಜಮ್ಮನ ಬಳಿ ಕೇಳುತ್ತಿದ್ದೆ. "ಮಮ್ಮಿ ಡ್ಯಾಡಿ ಯಾಕೆ ಹೀಗೆ?"
ಆಕೆ ನನ್ನನ್ನು ಬರಸೆಳೆದು ಹಣೆಗೊಂದು ಮುತ್ತನ್ನಿಟ್ಟು ನಿಟ್ಟುಸಿರೊಂದ ಹೊರ ಚೆಲ್ಲುತ್ತಿದ್ದಳು ನೋವಿನಿಂದ. ಪ್ರತಿ ಬಾರಿಯೂ ನಿಟ್ಟುಸಿರ ಉತ್ತರ ಆಕೆಯಿಂದ.
ಪದ್ಮಜಮ್ಮನಿಗೂ ಒಂದು ಮನೆಯಿತ್ತು. ಕುಡುಕ ಗಂಡನಿದ್ದ. ಆದರೂ ಆಕೆಯನ್ನು ಪ್ರೀತಿಸುತ್ತಿದ್ದ. ಮನೆಗೆ ಬೇಕಾದುದನ್ನು ತಂದು ಹಾಕುತ್ತಿದ್ದ. ನನಗಿಂತಲೂ ಸಣ್ಣ ವಯಸ್ಸಿನ ಮಗನಿದ್ದ.. ಚೆನ್ನಾಗಿಯೇ ಓದಿಕೊಂಡಿದ್ದ. ಅಲ್ಲಿ ಬಡತನವಿತ್ತು. ಆದರೂ, ನೆಮ್ಮದಿ ಇತ್ತು. ಸ್ವಚ್ಛಂದ ವಾತಾವರಣವಿತ್ತು. ಆದರೆ, ಎಲ್ಲವೂ ಇರುವ ನಮಗೆ...? ಪದ್ಮಜಮ್ಮನ ಕಣ್ಣು ಹನಿಯುತ್ತಿದ್ದುದು ನಮ್ಮೊಳಗಿನ ಶೀತಲ ಸಮರ ಕಂಡು,
ನೀವು ನನಗೆ ಎಲ್ಲವನ್ನು ಕೊಟ್ಟಿರಿ. ಪ್ರೀತಿಯೊಂದನ್ನು ಹೊರತು ಪಡಿಸಿ. ನನಗೆ ನಿಮ್ಮಿಬ್ಬರ ಪ್ರೀತಿಯ ಬಯಕೆಯಿತ್ತು. ಒಡನಾಟದ ಕೊರತೆ ಇತ್ತು. ಆದರೆ, ಇನ್ನು ಮುಂದೆ ನಿಮಗೆಂದೆ ದೊಡ್ಡ ಕೊರತೆಯನ್ನು ನೀಡಿ ಹೋಗುತ್ತಿದ್ದೇನೆ. ಹೌದು, ಮಮ್ಮಿ ಡ್ಯಾಡಿ, ನೀವಿಬ್ಬರು ನನ್ನ ಆಸೆ ವಿರೋಧಿಸಿಪ್ರತಿಷ್ಠೆಗೆ ಮಾರು ಹೋಗಿ ಸೈನ್ಸ್ಗೆ ಸೇರಿಸಿದ್ರಿ. ತುಂಬಾ ಕಷ್ಟ ಪಟ್ಟೆ. ನನಗಿದ್ದ ಬೇರೆ ಕ್ಷೇತ್ರಗಳೆಡಗಿನ ಒಲವನ್ನು ಮೊಟಕುಗೊಳಿಸಿಕೊಂಡೆ. ಆದರೆ, ಇಂದು ನನ್ನ ಭವಿಷ್ಯ ಹೊರ ಬಂದಿದೆ.
ಪಿಯುಸಿ ಫೇಲ್...
ನಾಳೆ ಪತ್ರಿಕೆಗಳಲ್ಲಿ ಟಿವಿ ಚಾನೆಲ್ಗಳಲ್ಲಿ ಪಾಸಾದ ಅದರಲ್ಲೂ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರದೇ ಸುದ್ದಿ ಬರುತ್ತದೆ. ಅದನ್ನೆಲ್ಲ ನೋಡುತ್ತ ನಾ ಹೇಗೆ ಸಹಿಸಿಕೊಳ್ಳಲಿ ನನ್ನ ನೋವನ್ನು? ಅವರೆಲ್ಲರಲ್ಲಿ ನಿಮ್ಮ ಸ್ನೇಹಿತರ, ವಿರೋಧಿಗಳ ಮಕ್ಕಳೂ ಇರಬಹುದು. ಆಗ ನಿಮ್ಮ ಘನತೆಗೆ ಅವಮಾನವಾಗುವುದಿಲ್ಲವೇ? ನಿಮಗೆ ಇಂದು ನಾನು ಫೇಲಾದ ವಿಷಯ ಹೇಳಿದರೆ ನನ್ನನ್ನು ಸಾಯೋ ಹಾಗೆ ಹೊಡಿಬೋದು ಅಥವಾ ಸಾಯಿಸಲು ಬಹುದು. ಆಮೇಲೆ ನೀವು ಜೈಲು ಪಾಲಾಗೋದಕ್ಕಿಂತ ನನ್ನನ್ನು ನಾನೇ ಕೊಂದುಕೊಳ್ಳುತ್ತೇನೆ.
ಸುದ್ದಿ ವಾಹಿನಿಗಳಲ್ಲಿ ಗೆದ್ದವರ ನಡುವೆ ಸೋತ ನನ್ನ ಹೆಸರು ಬರಬಹುದೇನೋ? "ಪಿಯುಸಿ ಫೇಲಾದ ಹುಡುಗಿ ಆತ್ಮಹತ್ಯೆಗೆ ಶರಣು. ನಾನು ಎಲ್ಲೋ ನಿಂತು ನೋಡುತ್ತೇನೆ. ಆತ್ಮಹತ್ಯೆ ಮಾಡಿಕೊಂಡವರು ನರಕಕ್ಕೆ ಹೋಗುತ್ತಾರಂತೆ. ಆದರೆ, ನನ್ನ ಪ್ರಕಾರ ಮನೆಯೇ ನರಕ. ಪದ್ಮಜಮ್ಮನ ಪ್ರೀತಿಯೇ ಸ್ವರ್ಗ. ಇನ್ನು ಬೇರೆ ಲೋಕವಿದೆಯೇ?
ಕ್ಷಮೆಯಾಚಿಸಲು ನಾನು ತಪ್ಪು ಮಾಡುತ್ತಿಲ್ಲ. ನಿಮಗೆ ಹಾಗೂ ಜಗತ್ತಿನಲ್ಲಿರುವ ಅತ್ಯಂತ ಬ್ಯುಸಿ ತಂದೆ ತಾಯಿಗಳಿಗೆ ಅವರ ತಪ್ಪುಗಳನ್ನು ಅರಿವಾಗಿಸಲು ಹೊರಟಿದ್ದೇನೆ. ಆದರೂ, ಯಶೋದ ಮಾತೆಯಂತಹ ಪದ್ಮಜಮ್ಮಳಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ಆಕೆಗೆ ಆಕೆಯ ಪ್ರೀತಿಗೆ ಚಿರಋಣಿ. ಮುಂದಿನ ಜನ್ಮವೆಂಬ ಕಲ್ಪನೆ ನಿಜವಾದರೆ ಆಕೆಯ ಮಡಿಲಲ್ಲಿ ಮಗುವಾಗಿ ಜನಿಸುತ್ತೇನೆ. ಗುಡ್ ಬೈ ಫಾರೆವರ್...
ಕಣ್ಣ ಹನಿಯೊಂದಿಗೆ...
ಅನಾಮಿಕ ಶರ್ಮ

ಬರೆದು ಮುಗಿಸಿದ್ದೆ. ಶಾಲನ್ನು ಫ್ಯಾನಿಗೆ ಕಟ್ಟಿ ಉರುಳನ್ನು ಕೊರಳಿಗೆ ಹಾಕಿಕೊಂಡು ಸಾವನ್ನು ಬರಮಾಡಿಕೊಂಡಿದ್ದೆ ಕಣ್ಣಹನಿಯೊಂದಿಗೆ.

No comments:

Post a Comment