stat Counter



Sunday, November 27, 2016

ಮಹಾಲಿಂಗ ---ಇನ್ನಿಲ್ಲವಾದ ರಾಬರ್ಟ್ ಗ್ರೀಸಿಂಕ್ ಎಂಬ ವಿಶಿಷ್ಟ ಚೇತನ

ಅದ್ಭುತ ಕಲಾವಿದ ಅದ್ಭುತ ಜೀವನ*

🎨🎨🎨🎨🎨🎨🎨🎨🎨🎨🎨


*ಇನ್ನಿಲ್ಲವಾದ ರಾಬರ್ಟ್ ಗ್ರೀಸಿಂಕ್ ಎಂಬ ವಿಶಿಷ್ಟ ಚೇತನ*

ಗ್ರೀಸಿಂಕ್ ಡಚ್ ಕಲಾವಿದ. ತಂದೆಯೂ ಕಮರ್ಷಿಯಲ್ ಕಲಾವಿದ. ಹೃದಯದ ಶಾಂತಿ ಹುಡುಕುತ್ತ ಹಿಪ್ಪಿಯಾಗಿ ಹಿಮಾಲಯಕ್ಕೆ ಬಂದ ಈ ರಾಬರ್ಟ್ ಗ್ರೀಸಿಂಕ್ ಕೊನೆಗೆ ಹಾಳು ಹಂಪೆಗೆ ಹಲವು ದಶಕಗಳ ಹಿಂದೆ ಬಂದು ಸೇರಿದ. ಮನಕ್ಕೆ ಮಣ್ಣು ನೆಮ್ಮದಿ ಕೊಟ್ಟಿತು. ಹಂಪಿಯ ಬಂಡೆ, ಜನ, ದೇವರು, ಹಾಳು ಮಂಟಪಗಳು ಚಿತ್ರಿಸುತ್ತಿದ್ದ. ಅವನ ಶೈಲಿ ಇರುವುದನ್ನು ಇದ್ದಂತೆ ಹೇಳುವುದು. ಎರಡು ಕಿ. ಮೀ ದೂರದ ಕಲ್ಲುಗಳು ಅವನ ಚಿತ್ರದಲ್ಲಿ ಸ್ಮಷ್ಟವಿರುತ್ತಿದ್ದವು.

ಅವನು ಹಂಪಿಯ ಲಂಬಾಣಿ ಹೆಣ್ಣನ್ನು ಮದುವೆಯಾದ. ಅವರಲ್ಲಿ ಒಬ್ಬನಾದ. ಲಂಬಾಣಿ ಕನ್ನಡ ಅದ್ಭುತವಾಗಿ ಕಲಿತ. ಊರು ಮರೆತ. ಮಕ್ಕಳಾದುವು. ಸಂಸಾರ ನಡೆಸಿದ. ಚಿತ್ರ ಬಿಡಿಸಿ ಸರಳ ಬದುಕಿಗೆ ದುಡ್ಡು ಮಾಡಿದ. ಗೊತ್ತಿದ್ದವರಿಗೆ ಗೊತ್ತಿತ್ತು ಅವನ ಚಿತ್ರಗಳ ತಾಕತ್ತು.
ಮಡದಿ ಮರಣಿಸಿದ ಬಳಿಕ ಮತ್ತೆ ಅದೇ ಸಮುದಾಯದ ಹೆಣ್ಣೋರ್ವಳ ವರಿಸಿದ. ಸಂಸಾರ ಕಾಪಾಡಿದ. ಹಂಪಿ ಬಿಟ್ಟು ಹೋಗಲೆ ಇಲ್ಲ. ಹಂಪಿಯ ಲಂಬಾಣಿಗಳು ಬದುಕಾದರು. ಹಂಪಿಯ ಬಂಡೆಗಳು ಬಡವರು ಬಂಧುಗಳಾದರು. ಚಿತ್ರ ಪ್ರದರ್ಶನ ಮಾರಾಟ ಆದದ್ದು ಇದ್ದು. ಆ ಬಗ್ಗೆ ಆಸೆಬುರುಕ ಅವನಲ್ಲ

ಈಗ ಎಪ್ಪತ್ತು ವರುಷದ ಮುದುಕನಾಗಿ ಹಂಪಿಯಲ್ಲೆ ಸತ್ತ. ಸಂಸಾರ ದೊಡ್ಡದಿತ್ತು. ನೂರಾರು ಚಿತ್ರಗಳು ಇದ್ದವು. ಎಲ್ಲ ಈ ದೇಶದ ಜನ, ಹಬ್ಬ, ಜೀವನ, ಸಂತೋಷ, ಪ್ರಕೃತಿ. ರಾಬರ್ಟ್ ಗ್ರೀಸಿಂಕ್ ಇವನ್ನೆಲ್ಲ ಪ್ರೀತಿಸಿದ್ದ ಎಂಬುದಕ್ಕೆ ಇವೇ ಸಾಕ್ಷಿ.

ಮಹಾ ಕಲಾವಿದ ಗಾಗಿನ್ ನೆನಪಾಗಬಹುದು ನಿಮಗೆ. ಅವನೂ ಸಾಗರದ ನಡುವಿನ ದ್ವೀಪವಾಸಿಗಳ ಜೊತೆ ಹೀಗೆಯೆ ಬದುಕಿದ. ಅವನಿಗೂ ಇವನಿಗೂ ವ್ಯತ್ಯಾಸವಿದೆ. ರಾಬರ್ಟ್ ಪ್ರಸಿದ್ದಿಯನ್ನೂ ಬಯಸಲಿಲ್ಲ. ಸ್ಥಳೀಯ ಹೆಣ್ಣುಮಕ್ಕಳ ಸ್ನೇಹ ಇವನಿಗೆ ಗಟ್ಟಿ ಭಾರತೀಯ ಸಂಸಾರವೆ ಆಗಿತ್ತು. ಗಾಗಿನ್ ನಂತೆ ಎಲ್ಲೆಲ್ಲ ತಿರುಗುವ ಬಯಕೆಯು ರಾಬರ್ಟ್ ಗೆ ಇರಲಿಲ್ಲ

ವಿಶಿಷ್ಟವಾಗಿ ಬದುಕಿ, ನಮ್ಮವನೆ ಆಗಿ ತುಂಬು ಬಾಳಿದ ಈ ಒಂದು ಕಾಲದ ಹಿಪ್ಪಿ ನಿನ್ನೆ ಅಲ್ಲ ಮೊನ್ನೆ ನಮ್ಮ ಬಿಟ್ಟು ನಡೆದ.

ಯಾವ್ಯಾವನೋ ಸಾಂಸ್ಕತಿಕ ಪುಢಾರಿಯನ್ನು ಪೇಪರ್ ಟೈಗರ್ ನ್ನು ಮಹಾವ್ಯಕ್ತಿ ಎಂದು ಭಾರೀ ಪ್ರತಿಭಾವಂತ ಅಂತ ಭ್ರಮಿಸಿ ನಾವು ಫೂಲ್ ಆಗುತ್ತೇವೆ. ರಾಬರ್ಟ್ ಗೀಸಿಂಕ್ ಈ ನಲುವತ್ತು ವರುಷ ಹಂಪಿಯಲ್ಲೆ ಇದ್ದುದು ನಮಗೆ ಗೊತ್ತೇ ಇರಲಿಲ್ಲ. ಕೊಟ್ಟಿರುವ ಚಿತ್ರಗಳಲ್ಲಿ ಅವನು ಈ ನೆಲ ಜನ ರನ್ನು ಪ್ರೀತಿಸಿದ್ದು ಅರ್ಥವಾಗಿ ಈಗ ನೆನೆದು ಕಣ್ಣು ಮನಸ್ಸು ಒದ್ದೆ ಮಾಡುವುದು ನಮಗೆ ಉಳಿದದ್ದು

*🔥ಇದು ದೊಂದಿ ಬಳಗದ ಪ್ರಸ್ತುತಿ*🔥

No comments:

Post a Comment