stat Counter



Monday, August 20, 2018

ರಾಜಾರಾಮ ತಲ್ಲೂರ್ --ಹಾರಿ ಬಂದ ಹಾರು ಬೂದಿಗೊಂದು ಬಹಿರಂಗ ಪತ್ರ

ಹಾರಿ ಬಂದ ಹಾರುಬೂದಿಗೊಂದು ಬಹಿರಂಗ ಪತ್ರ!
- - - - - - - - - - - -
ಆಗಸ್ಟ್ 3-4 ರಂದು ಉಡುಪಿ ಮಣಿಪಾಲಗಳಲ್ಲಿ ಸುರಿದಿರುವ ಹಾರುಬೂದಿ ಎಂದು ನಾವಂದುಕೊಂಡಿರುವ ನಿಗೂಢ ವಸ್ತುವೇ… ನಮಸ್ಕಾರ!
ನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯು ನೀನು “ಸಿಲಿಕಾ” ಎಂದು ತೀರ್ಮಾನ ಕೊಟ್ಟಿದೆ. ಅದಕ್ಕೆಂದೇ “ಮಣಿಪಾಲದ ಭೂಗರ್ಭತಜ್ನರು ಮತ್ತು ಎನ್ ಐ ಟಿ ಕೆ ಸುರತ್ಕಲ್ಲಿನ ತಜ್ನರು ಅದು ಸಿಲಿಕಾ ಎಂದು ಗುರುತಿಸಿದ್ದಾರೆ” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದು ಬೆಳಗ್ಗೆ ನೋಡಿದ್ದೇನೆ.
ನೀನು ಗಲ್ಫಿನಿಂದ ಬಂದದ್ದು ಹೌದಾದರೆ, ನಿನಗೆ ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ಉಡುಪಿಯೇ ಏಕೆ ಕಣ್ಣಿಗೆ ಬಿತ್ತು ಎಂದು ಗೊತ್ತಾಗಲಿಲ್ಲ. ಹೆಚ್ಚಿನಂಶ ಇಲ್ಲಿನವರು ಬಹಳ ಮಂದಿ ದುಬಾಯಿಯಂತಹ ಕಡೆ ಇರುವವರ ಮೂಲ ಉಡುಪಿ ಆಗಿರುವುದರಿಂದ ಅವರ ಮಣ್ಣಿನ ಋಣ ತೀರಿಸಲು ನೀನು ಇಲ್ಲಿಗೆ ಬಂದದ್ದಿರಬೇಕು ಎಂದುಕೊಂಡಿದ್ದೇನೆ. ಇರಲಿ. ಗಲ್ಫಿನಲ್ಲಿ ಎಲ್ಲವೂ ಕುಶಲವೇ? ಕ್ಷೇಮವೇ?!!
ಆದರೂ ನೀನು 2500ಕಿಲೋಮೀಟರ್ ಗಳಷ್ಟು ದೂರಕ್ಕೆ ಗಾಳಿಗೆ ಎಲ್ಲೂ ಚದುರದೇ, ನೇರವಾಗಿ ಉಡುಪಿಗೇ ಬಂದು ತಲುಪಿದ್ದಕ್ಕಾಗಿ ನಿನಗೆ ವಿಶೇಷ ಪ್ರಶಸ್ತಿಯೊಂದನ್ನು ಕೊಡಲು ಶಿಫಾರಸು ಮಾಡುತ್ತೇನೆ. ಹೇಗೂ ರಾಜ್ಯೋತ್ಸವ ಹತ್ತಿರ ಬರ್ತಾ ಉಂಟು!!
ಅಂದಹಾಗೆ ನಾನಂತೂ ನಿನ್ನನ್ನು ಹಾರುಬೂದಿ ಎಂದುಕೊಂಡಿದ್ದೆ. ನನ್ನಂತೆ ಬಹಳ ಜನ ನಿನ್ನನ್ನು ಹಾರುಬೂದಿ ಎಂದುಕೊಂಡಿದ್ದೆವು. ಯಾಕೆ ಗೊತ್ತಾ? ಈಗ ಇಂಟರ್ನೆಟ್ ಯುಗದಲ್ಲಿ ಏನು ಕಂಡರೂ ಗೂಗಲ್ ಮಾಡುವ ಚಟ ನಮಗೆ. ಹಾರು ಬೂದಿಯ ಬಗ್ಗೆ ಗೂಗಲಣ್ಣ ಏನಂದ ಗೊತ್ತಾ?
ಸುಡುವ ಕಲ್ಲಿದ್ದಲು ಎಲ್ಲಿಂದ ಬಂದಿದೆ ಎಂಬುದನ್ನಾಧರಿಸಿ, ಅದರ ಹಾರುಬೂದಿಯಲ್ಲಿ ಬೇರೆ ಬೇರೆ ಅಂಶಗಳಿರಬಹುದು. ಆದರೆ ಈ ಮೂರು ಅಂಶಗಳು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಅವು ಯಾಕಿರುತ್ತವೆ ಎಂದರೆ, ಹಲವು ಬಗೆಯ ಖನಿಜಾಂಶಗಳಿರುವ ಕಲ್ಲಿನ ಪದರಗಳಡಿಯಲ್ಲೇ ಈ ಕಲ್ಲಿದ್ದಲು ಸಿಗುವುದು!. ಆ ಮೂರು ಅಂಶಗಳು ಯಾವುವೆಂದರೆ:
೧. ಹರಳು ಗಟ್ಟಿದ ಅಥವಾ ಹರಳುಗಟ್ಟಿರದ “ಸಿಲಿಕಾ” (SiO2)
೨. ಅಲುಮೀನಿಯಂ ಆಕ್ಸೈಡ್ (Al2O3)
೩. ಕ್ಯಾಲ್ಷಿಯಂ ಆಕ್ಸೈಡ್ (CaO)
ಇವಲ್ಲದೇ ಸಣ್ಣ ಪ್ರಮಾಣದಲ್ಲಿ ಆರ್ಸೆನಿಕ್, ಬೆರಿಲಿಯಂ, ಬೊರಾನ್, ಕ್ಯಾಡ್ಮಿಯಂ, ಕೋರಿಯಂ, ಕೋಬಾಲ್ಟ್, ಸೀಸ, ಮ್ಯಾಂಗನೀಸ್, ಪಾದರಸ, ಮಾಲಿಬ್ಡಿನಂ, ಸೆಲೆನಿಯಂ, ಸ್ಟ್ರೋಂಟಿಯಂ, ಥಾಲಿಯಂ, ವಾನಾಡಿಯಂ ಇತ್ಯಾದಿ ಲೋಹಾಂಶಗಳು, ವಿಷಕಾರಿ ರಾಸಾಯನಿಕಗಳೂ ಇರಬಹುದು.
ಸಿಲಿಕಾ ಚರ್ಮಕ್ಕೆ ತಾಗಿದಾಗ ಚರ್ಮದ ಕಿರಿಕಿರಿ, ಶ್ವಸಕೋಶದ ತೊಂದರೆಗಳು, ಸಿಲಿಕೋಸಿಸ್ ಎಂಬ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಜೊತೆಗೆ ಹರಳು ಸಿಲಿಕಾ ಕ್ಯಾನ್ಸರ್ ಕಾರಕ ಎಂದು ಅಮೆರಿಕದ ತಜ್ನರು ಕಂಡುಕೊಂಡಿದ್ದಾರೆ.
ಡಿಯರ್ ಸಿಲಿಕಣ್ಣ, ನೀನು ಗಲ್ಫಿನಿಂದ ಬಂದದ್ದೇ ಹೌದಾದರೆ ನಿನ್ನ ಇಮಿಗ್ರೇಷನ್ ದಾಖಲೆಗಳನ್ನೂ ಪಾಸ್ ಪೋರ್ಟನ್ನೂ ತೋರಿಸಿಬಿಡು, ಜನ ನಿನ್ನನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲ. ಇಲ್ಲದಿದ್ದರೆ ಜನ ಏನೆಂದುಕೊಳ್ಳುತ್ತಾರೆ ಗೊತ್ತಾ?
ಹಾರುಬೂದಿ ಮಳೆ ಬಂದಾಗ ಉಡುಪಿಯ ಮೇಲೆ ಉದುರಿತು. ಅದರಲ್ಲಿದ್ದ ಬೇರೆ ರಾಸಾಯನಿಕಾಂಶಗಳು ಒಂದೋ ಮಳೆ ನೀರಿನಲ್ಲಿ ತೊಳೆದುಹೋದವು, ಇಲ್ಲವೇ ಕರಗಿಹೋದವು, ಕಡೆಗೆ ಪರಿಸರ ಮಾಲಿನ್ಯದವರು ಬಂದು ಮಾದರಿ ಸಂಗ್ರಹಿಸುವಾಗ ಕೇವಲ “ ಸಿಲಿಕಾ” ಅಂಶ (ನಾವಿಲ್ಲಿ ಅದನ್ನು ಸೂಕ್ಷ್ಮ ಮರಳು ಧೂಳಿನ ಕಣಗಳು ಎಂದೂ ಕರೆಯುತ್ತೇವೆ!) ಮಾತ್ರ ಉಳಿಯಿತು ಅಂತ!
ಸುಮ್ಮನೇ ಉಡುಪಿಗೂ ನಿನಗೂ ಗೊಂದಲ, ಮನಸ್ಥಾಪ ಬೇಡ. ಹಾಗಾಗಿ ದಯಮಾಡಿ ನೀನು ಯಾರೆಂಬುದನ್ನು ಬಹಿರಂಗವಾಗಿ ಹೇಳಿಬಿಡು.
ಅಂದಹಾಗೆ ಮುಂದಿನ ಬಾರಿ ನಿನ್ನ ಉಡುಪಿ ಭೇಟಿ ಯಾವಾಗ?
ಬರುವಾಗ ದುಬಾಯಿ ಚಾಕಲೇಟು ಮರೆಯದೇ ತೆಗೆದುಕೊಂಡು ಬಾ. ಆಯ್ತಾ ಸಿಲಿಕಣ್ಣ!!
ನಿನ್ನ ಪ್ರೀತಿಯ
ಉಡುಪಿಯ 'ಜುಜುಬಿ' ನಾಗರಿಕ.
#ಹಾರುಬೂದಿ #ಉಡುಪಿ_ಪಾಡು #ಸಿಲಿಕಾ
P V Bhandary Shrinivas Karkala Suresha Kanjarpane Nikhil KolpeRamakrishna Herle Dinesh Holla M.G. Hegde

No comments:

Post a Comment